ಅಂಧಶ್ರದ್ಧೆ

ನಾನು ಮತ್ತು ನನ್ನ ದೈವ ಸಹೋದರ ಆಸ್ಪತ್ರೆಯೊಳಗೆ ಅಡಿಯಿರಿಸುತ್ತಿದ್ದಂತೆಯೇ ಕಟ್ಟಡದ ಒಳಕ್ಕೂ ಹೊರಕ್ಕೂ ಜನರು ಗಡಿಬಿಡಿಯಿಂದ ನುಗ್ಗುತ್ತಿದ್ದರು. ಕೆಲವರು ತಮ್ಮ ಪ್ರೀತಿಪಾತ್ರರ ಜೀವವನ್ನು ಉಳಿಸಬಲ್ಲವು ಎಂದು ನಂಬಿದ್ದ ಅಮೂಲ್ಯ ಔಷಧಗಳನ್ನು ಪೊಟ್ಟಣಗಳಲ್ಲಿರಿಸಿಕೊಂಡು ಅವಚಿಕೊಂಡಿದ್ದರು. ಉಳಿದವರು ಕಂತೆ ಕಂತೆ ಕಾಗದಗಳನ್ನು ಹಿಡಿದುಕೊಂಡಿದ್ದರು. ಬಹುತೇಕ ಅವು ವೈದ್ಯಕೀಯ ವರದಿಗಳಾಗಿರಬೇಕು. ಅವುಗಳಲ್ಲೇನಿದೆ ಎಂದು ಅವರಿಗೆ ಸ್ವಲ್ಪವೂ ತಿಳಿಯದು. ಆದರೂ ಅವರ ಪಾಲಿಗೆ ಅವು ಅಮೂಲ್ಯವಾಗಿದ್ದವು. ಮಕ್ಕಳಿಂದ ಮುದುಕರವರೆಗೆ ಎಲ್ಲ ವಯೋಮಾನದ ಜನರೂ ಅಲ್ಲಿದ್ದರು. ಅವರೆಲ್ಲರ ವಿಷಯದಲ್ಲೂ ಒಂದು ಸಂಗತಿ ಸಾಮಾನ್ಯವಾಗಿತ್ತು – ಅದು ಅವರ ಮುಖಭಾವದಲ್ಲಿ ಎದ್ದು ಕಾಣುತ್ತಿತ್ತು. ಅವರೆಲ್ಲ ಏನೋ ಕಳೆದುಕೊಂಡವರಂತೆ, ದಿಕ್ಕು ತೋಚದವರಂತೆ ನನಗೆ ಕಾಣುತ್ತಿದ್ದರು. ಇಷ್ಟಾಗಿಯೂ ಅವರ ಮುಖದಲ್ಲಿ ಏನೋ ಒಂದು ಭರವಸೆ ಢಾಳಾಗಿ ಬೆಳಗುತ್ತಿತ್ತು. ವೈದ್ಯಕೀಯ ತಂತ್ರಜ್ಞಾನ ಮತ್ತು ವೈದ್ಯರಲ್ಲಿ ಅವರಿಗಿದ್ದ ಶ್ರದ್ಧೆ ಮತ್ತು ನಂಬಿಕೆ ತುಯ್ತಕ್ಕೊಳಗಾಗಿದ್ದವು.

ನಾವು ಮತ್ತಷ್ಟು ಯೋಚನೆ ಮಾಡುತ್ತಾ ನಿಲ್ಲದೆ ಬೇಗ ಬೇಗ ಮೆಟ್ಟಿಲು ಹತ್ತಿಕೊಂಡು ಮೊದಲನೆಯ ಮಹಡಿಗೆ ಹೋದೆವು. ನಮಗಾಗಿ ಕಾಯುತ್ತಿದ್ದವರ ಮುಖಗಳು ನಮ್ಮನ್ನು ಕಾಣುತ್ತಿದ್ದಂತೆಯೇ ಮಿನುಗಿದವು. ಆದರೂ ಅವರ ಮುಖದಿಂದ ಮುಗುಳುನಗೆಯನ್ನು ಯಾರೋ ಕಿತ್ತುಕೊಂಡಂತೆ ತೋರುತ್ತಿತ್ತು. ಎಲ್ಲ ಹತಾಶೆಯ ನಡುವೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿದ್ದ ನೆಮ್ಮದಿಯನ್ನು ನಾವು ನಮ್ಮೊಡನೆ ತಂದಂತೆ ತೋರುತ್ತಿತ್ತು. ಹತಾಶೆಯು ಮುಂಜಾನೆಯ ಕಾವಳ ಅಲ್ಲಿ ದಟ್ಟವಾಗಿ ಕವಿದಿರುವ ಹಾಗೆ ಕಾಣುತ್ತಿತ್ತು. ನಮ್ಮನ್ನು ಕೂಡಲೇ ರೋಗಿಯ ಬಳಿಗೆ ಕರೆದುಕೊಂಡು ಹೋದರು. ಅವಳು ನನ್ನ ದೈವ ಸಹೋದರನ ನಿಕಟ ಸಂಬಂಧಿ. ಕೋಣೆಯ ಹೊರಭಾಗದಲ್ಲಿ “ಐಸಿಯು” ಎಂಬ ಕೆಂಪು ಅಕ್ಷರಗಳು ಎದ್ದು ಕಾಣುತ್ತಿದ್ದವು. ನಾವು ಸ್ವಲ್ಪವೂ ಶಬ್ದವಾಗದಂತೆ ಬಹು ಎಚ್ಚರಿಕೆಯಿಂದ ಒಳಗೆ ಅಡಿಯಿಟ್ಟೆವು. ಇದು ಸಂದರ್ಶಕರು ಭೇಟಿಗೆ ಬರುವ ಸಮಯವಾಗಿರಲಿಲ್ಲ. ಆದರೆ ದಾದಿಯು (ನರ್ಸ್‌) ನಮ್ಮ ಭಕ್ತರ ಉಡುಪನ್ನು ನೋಡಿ ಏನೂ ಮಾತನಾಡದೆ ಒಳಗೆ ಬಿಟ್ಟಳು. ನಾವು ಅವಳಿಗೆ ವಂದನೆ ಸಲ್ಲಿಸಿ ರೋಗಿಯ ಬಳಿಗೆ ಹೋದೆವು.

ನಾವು ರೋಗಿಯನ್ನು ನೋಡಿದಾಗ ಅಥವಾ ಅಳಿದುಳಿದ ಅವಳ ಕೃಶವಾದ ದೇಹವನ್ನು ನೋಡಿದಾಗ – ನನ್ನ ದೈವ ಸಹೋದರನಿಗೆ ಆಘಾತವಾಯಿತು. ಅವನು ಅವಳ ಕಡೆ ನೋಡಿ ತಲೆಯನ್ನು ಮೆಲ್ಲನೆ ಅಲುಗಿಸಿ ನಿಟ್ಟುಸಿರಿಟ್ಟ. ರೋಗಿಯ ಉಡುಪುಗಳನ್ನು ಧರಿಸಿದ್ದ, ನಲವತ್ತಕ್ಕಿಂತ ಕಡಮೆ ವಯಸ್ಸಿನ ಅವಳು ಅಲ್ಲಿ ಮಲಗಿದ್ದಳು. ಅವಳ ಮೂಗು, ಬಾಯಿ ಮತ್ತು ಮಣಿಕಟ್ಟಿನಲ್ಲಿ ನಳಿಕೆಗಳು ಇದ್ದವು. ಅವಳ ಪಕ್ಕದಲ್ಲಿ ಕೃತಕ ಉಸಿರಾಟದ ಉಪಕರಣವನ್ನು ಇರಿಸಲಾಗಿತ್ತು. ಅದು ಅವಳ ಶ್ವಾಸಕೋಶಕ್ಕೆ ಗಾಳಿಯನ್ನು ತಳ್ಳುತ್ತಿತ್ತು ಮತ್ತು ಹೊರಗೆಳೆದುಕೊಳ್ಳುತ್ತಿತ್ತು. ಅವಳ ದೇಹದ ಯಾವುದೋ ಭಾಗಕ್ಕೆ ಲಗತ್ತಿಸಲಾಗಿದ್ದ ಒಂದು ಅಂಕಿಮಾಪಕ (ಡಿಜಿಟಲ್‌ ಮೀಟರ್‌) ಒಂದು ನಕ್ಷೆಯನ್ನು ತೋರಿಸುತ್ತಿತ್ತು. ಅದು ಆಗಾಗ ಚಕ್ಕನೆ ಏರಿಳಿಯುತ್ತಿತ್ತು. ಅವಳ ಕಣ್ಣುಗಳು ಮುಚ್ಚಿಕೊಂಡಿದ್ದವು. ದೇಹ ನಿಷ್ಕ್ರಿಯವಾಗಿತ್ತು. ಉಸಿರಾಟದ ಯಂತ್ರದಿಂದಾಗಿ ಅವಳ ಎದೆ ಏರಿಳಿಯುತ್ತಿತ್ತು ಅಷ್ಟೆ.

ನಾವು ಮೊಗಸಾಲೆಗೆ ಹಿಂತಿರುಗುತ್ತಿದ್ದಂತೆಯೇ ಬಂಧುಗಳು ನಮ್ಮನ್ನು ಮುತ್ತಿಕೊಂಡರು. ಅದು ಆಕಸ್ಮಿಕ ಅಪಘಾತವೂ ಆಗಿರಲಿಲ್ಲ ಅಥವಾ ಉಲ್ಬಣಗೊಂಡ ಯಾವುದೋ ಮಾರಣಾಂತಿಕ ಕಾಯಿಲೆಯೂ ಆಗಿರಲಿಲ್ಲ. ಅವಳಿಗೆ ಪದೇ ಪದೇ ಹೊಟ್ಟೆ ನೋವು ಬರುತ್ತಿತ್ತು. ಅವಳ ಗರ್ಭಕೋಶವನ್ನು ತೆಗೆಯಬೇಕು ಎಂದು ವೈದ್ಯರು ಸಲಹೆ ಮಾಡಿದ್ದರು. ಅದೊಂದು ಮಾಮೂಲಿ ಶಸ್ತ್ರ ಚಿಕಿತ್ಸೆ ಎಂದು ವೈದ್ಯರು ಭರವಸೆ ನೀಡಿದ್ದರು. ಕೆಲವೇ ಗಂಟೆಗಳಲ್ಲಿ ಅದು ಮುಗಿದುಹೋಗುತ್ತದೆ, ಕೆಲವೇ ದಿನಗಳಲ್ಲಿ ಅವಳು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಹೋಗಿ ತನ್ನ ದೈನಂದಿನ ಜೀವನವನ್ನು ನಡೆಸಬಹುದು. ಅವಳ ಪತಿ ಕರ್ತವ್ಯ ಪ್ರಜ್ಞೆಯಿಂದ ಅವಳನ್ನು ಆಸ್ಪತ್ರೆಗೆ ಸೇರಿಸಿದ್ದ. ಸಂಬಂಧಪಟ್ಟ ಅರ್ಜಿ ನಮೂನೆಗಳನ್ನು ತುಂಬಿ ಸಹಿಮಾಡಿದ್ದ. ಜೀವಕ್ಕೆ ಹಾನಿಯಾದರೆ ವೈದ್ಯರು ಜವಾಬ್ದಾರರಲ್ಲ ಎಂದು ಅರ್ಜಿ ನಮೂನೆಗಳು ಸೂಚಿಸಿದ್ದವು. ಅದು ಕೇವಲ ಒಂದು ಸಾಂಪ್ರದಾಯಿಕ ನಿಯಮ, ಅವರು ಚಿಂತೆ ಮಾಡಬೇಕಾದ ಕಾರಣವಿಲ್ಲ ಎಂದು ವೈದ್ಯರು ಅವರಿಗೆ ಮತ್ತೆ ಭರವಸೆ ನೀಡಿದ್ದರು. ಕೆಲವೇ ಗಂಟೆಗಳಲ್ಲಿ ತನ್ನ ನೋವಿನ ಕಾರಣದಿಂದ ತನಗೆ ಬಿಡುಗಡೆ ದೊರೆಯುತ್ತದೆ ಎಂಬ ಭರವಸೆಯೊಡನೆ ಶಾಂತವಾಗಿ ಅವಳು ಶಸ್ತ್ರ ಚಿಕಿತ್ಸೆಯ ಕೋಣೆಯೊಳಗೆ ಹೋಗಿದ್ದಳು.

ಆದರೆ ಒಳಗೆ ಏನೋ ತಪ್ಪಾಯಿತು – ಭಯಂಕರವಾದ ತಪ್ಪಾಯಿತು. ಕೆಲವು ಗಂಟೆಗಳ ಅನಂತರ ಹೊರಗೆ ಬಂದ ವೈದ್ಯರು ಶಸ್ತ್ರಚಿಕಿತ್ಸೆಯು ಮುಗಿಯಿತೆಂದೂ ಆದರೆ ರೋಗಿಯು ಕೋಮಾಕ್ಕೆ (ಅಸಹಜ ಗಾಢ ನಿದ್ರೆಗೆ) ಹೋಗಿರುವಳೆಂದೂ ಘೋಷಿಸಿದರು. ಪತಿಗೆ ಆಘಾತವಾಯಿತು. ಮಕ್ಕಳು ಅದನ್ನು ಅರ್ಥಮಾಡಿಕೊಳ್ಳಲಾರದಷ್ಟು ಚಿಕ್ಕವರು. ಕೆಲವು ಸಲ ಹೀಗಾಗಬಹುದು ಎಂದು ವೈದ್ಯರು ಹೇಳಿದರು. ಅವಳನ್ನು ಐಸಿಯು (ತೀವ್ರ ಶುಶ್ರೂಷಾ ಘಟಕ) ದಲ್ಲಿಟ್ಟು ಗಮನವಿಟ್ಟು ನೋಡುವುದಾಗಿ ತಿಳಿಸಿದರು. ಒಂದೆರಡು ದಿನಗಳಲ್ಲಿ ಅವಳು ಕಣ್ಣು  ತೆರೆಯುತ್ತಾಳೆ. ಅನಂತರ ಅವಳನ್ನು ಸಾಮಾನ್ಯ ರೋಗಿಗಳ ಕೋಣೆಗೆ ವರ್ಗಾಯಿಸಲಾಗುವುದು. ಚಲಿಸುವ ಮಂಚವು (ಸ್ಟ್ರೆಚರ್‌) ಅವಳನ್ನು ಐಸಿಯು ಒಳಗೆ ಒಯ್ಯುತ್ತಿರುವಾಗ ಕುಟುಂಬದವರು ಅಸಹಾಯಕರಾಗಿ ನೋಡುತ್ತಿದ್ದರು.

ದಿನಗಳು ಉರುಳಿದವು. ಆಸ್ಪತ್ರೆಯ ಮತ್ತು ಔಷಧಗಳ ವೆಚ್ಚಗಳು ಏರುತ್ತಾ ಹೋದವು. ತೀರ ಮಧ್ಯಮ ವರ್ಗಕ್ಕೆ ಸೇರಿದ್ದ ಪತಿಯು ತಳಮಳಿಸುತ್ತಿದ್ದ. ವೆಚ್ಚಗಳನ್ನು ಭರಿಸಲು ತನ್ನೆಲ್ಲ ಆಕರಗಳನ್ನೂ ಬರಿದು ಮಾಡುತ್ತಿದ್ದ. ಶಸ್ತ್ರ ಚಿಕಿತ್ಸೆ ನಡೆದ ಅನಂತರ ಆಗಲೇ ಹತ್ತು ದಿನಗಳು ಉರುಳಿದ್ದವು. ಆದರೆ ರೋಗಿ ಚೇತರಿಸಿಕೊಳ್ಳುವ ಯಾವ ಲಕ್ಷಣಗಳೂ ಕಾಣುತ್ತಿರಲಿಲ್ಲ. ಈಗ ವೈದ್ಯರ ಭರವಸೆಗಳೂ ನಿಂತಿದ್ದವು. ಕುಟುಂಬದವರ ಶ್ರದ್ಧೆ ನುಚ್ಚು ನೂರಾಗಿತ್ತು. ದೈವ ಬಂಧುಗಳಾದ ನಾವು ಪ್ರಾಯಃ ಅವರ ಕೊನೆಯ ಆಶಾಕಿರಣವಾಗಿದ್ದೆವು.

ನಾವು ನಮ್ಮೊಡನೆ ತೆಗೆದುಕೊಂಡು ಹೋಗಿದ್ದ ಚರಣಾಮೃತವನ್ನು ಅವರಿಗೆ ಕೊಟ್ಟೆವು. ಅವಳಿಗೆ ಕೊಡುತ್ತಿದ್ದ ಚುಚ್ಚುಮದ್ದಿನೊಡನೆ ಅದನ್ನೂ ಸೇರಿಸಿ ಕೊಡಲು ತಿಳಿಸಿದೆವು. ಹರೇಕೃಷ್ಣ ನಾಮ ಸಂಕಿರ್ತನೆ ಮಾಡುವಂತೆ ಅವರಲ್ಲಿ ಪ್ರಾರ್ಥಿಸಿಕೊಂಡೆವು. ನಮಗೆ ಸಾಧ್ಯವಾದ ಮಟ್ಟಿಗೂ ಅವರಿಗೆ ಭರವಸೆ ಕೊಡಲು ಪ್ರಯತ್ನಿಸಿದ ಅನಂತರ ನಾವು ಅಲ್ಲಿಂದ ಹೊರಟೆವು.

ನಾವು ಹೋಗುತ್ತಿರುವಾಗ ತನ್ನ ದೈವ ಬಂಧುವು, ಆಕೆ ಎಂತಹ ಲವಲವಿಕೆಯ ವಾತ್ಸಲ್ಯಮಯಿಯಾಗಿದ್ದಳು ಎಂದು ನೆನೆದುಕೊಂಡ. ಜನರಿಗೆ ಉಣಬಡಿಸುವುದು ಸದಾಕಾಲ ಅವಳ ಪ್ರೀತಿಯ ಹವ್ಯಾಸವಾಗಿತ್ತು. ಅವಳ ಮನೆಗೆ ಯಾವಾಗ ಯಾರೇ ಬಂದರೂ ಹಬ್ಬದಡಿಗೆ ಮಾಡುತ್ತಿದ್ದಳು. ಅವರಿಗೆ ಪುಷ್ಕಳವಾಗಿ ಔತಣವನ್ನು ಮಾಡದೆ ಹೊರಗೆ ಕಳುಹಿಸುತ್ತಿರಲಿಲ್ಲ. ನನ್ನ ದೈವಬಂಧುವಿನ ವಿಚಾರವಾಗಿ ಅವಳು ವಿಶೇಷವಾದ ಮಾತೃವಾತ್ಸಲ್ಯವನ್ನು ತೋರುತ್ತಿದ್ದಳು. “ಆ ಲವಲವಿಕೆಯೆಲ್ಲ ಈಗ  ಎಲ್ಲಿ ಹೋಯಿತು? ದೇಹವು ಅಲ್ಲಿರಬಹುದು. ಆದರೆ ಆತ್ಮಕ್ಕೆ ಏನಾಯಿತು? ಕೃಷ್ಣನೊಬ್ಬನಿಗೆ ಮಾತ್ರ ಗೊತ್ತು.” ಎಂದು  ತಾತ್ತ್ವಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳುತ್ತಾ ಅವನು ನುಡಿದ.

ಎರಡು ದಿನಗಳ ಅನಂತರ ಅನಿವಾರ್ಯವಾದ ಸುದ್ದಿ ಬಂತು ಅವಳು ಮೃತಳಾಗಿದ್ದಾಳೆಂದು ವೈದ್ಯರು ಘೋಷಿಸಿದ್ದರು. ಈ ಸುದ್ದಿಯನ್ನು ಕೇಳಿದಾಗ ನಾನು ನನ್ನಲ್ಲೇ ಆಲೋಚಿಸಿದೆ – ಆ ಕುಟುಂಬ ಎಂತಹ ಮನಃಸ್ಥಿತಿಯಲ್ಲಿ ಈಗ ಇರಬಹುದು? ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತಮ್ಮ ಅಂಧಶ್ರದ್ಧೆಯನ್ನು ಅವರು ಮುಂದುವರಿಸಿಕೊಂಡು ಹೋಗುತ್ತಾರೆಯೆ? ವರ್ಷದಿಂದ ವರ್ಷಕ್ಕೆ, ದಿನದಿಂದ ದಿನಕ್ಕೆ, ಕ್ಷಣದಿಂದ ಕ್ಷಣಕ್ಕೆ ಪ್ರತಿಯೊಬ್ಬರ ಮೇಲೂ ನಿಷ್ಕರುಣೆಯಿಂದ ತೂಗುತ್ತಿರುವ ಅನಿವಾರ್ಯ ಮೃತ್ಯುವನ್ನು ವೈದ್ಯರು ಮತ್ತು ವಿಜ್ಞಾನಿಗಳು ನಿವಾರಿಸುತ್ತಾರೆ ಎಂಬ ತಮ್ಮ ಮೂಢನಂಬಿಕೆಯಿಂದ ಅವರು ಎಚ್ಚೆತ್ತುಕೊಳ್ಳುತ್ತಾರೆಯೆ? ನಾನು ಆಸ್ಪತ್ರೆಗೆ ಭೇಟಿ ಕೊಟ್ಟದಿನ ಆಸ್ಪತ್ರೆಯ ಒಳಕ್ಕೂ ಹೊರಕ್ಕೂ ಗಡಿಬಿಡಿಯಿಂದ ನುಗ್ಗುತ್ತಿದ್ದ, ನಾನು ನೋಡಿದ್ದ ಜನರನ್ನೆಲ್ಲ ಕಲ್ಪಿಸಿಕೊಂಡೆ. ಆಧುನಿಕ ವಿಜ್ಞಾನ, ತಂತ್ರಜ್ಞಾನ ಮತ್ತು ಈ ಎಲ್ಲ ಪೋಷಾಕುಗಳು ವೃದ್ಧಾಪ್ಯ, ವ್ಯಾಧಿ ಮತ್ತು ಮೃತ್ಯುವಿಗೆ ಉತ್ತರವಲ್ಲ ಎಂದು ಅವರೆಲ್ಲರ ಆಳದಲ್ಲೆಲ್ಲೋ ಅರಿವಾಗಿರಬೇಕು. ಆದರೆ ಯಾವುದೂ ಪರ್ಯಾಯವಿಲ್ಲದೆ ಅವರು ದಿಕ್ಕುತಪ್ಪಿದವರಂತೆ ಮತ್ತು ಹತಾಶೆಗೊಂಡವರಂತೆ ತೋರುತ್ತಿದ್ದರು. ಮುಳುಗುತ್ತಿರುವ ಮನುಷ್ಯನು ತೇಲಲು ಹೆಣಗಾಡುತ್ತಾ ಒಂದು ಹುಲ್ಲು ಕಡ್ಡಿಯನ್ನು ಹಿಡಿದುಕೊಳ್ಳುವಂತೆ ಅವರು ವೈದ್ಯರು ಮತ್ತು ಔಷಧಗಳನ್ನು ಹುಚ್ಚು ಸಾಹಸದಿಂದ ಹಿಡಿದುಕೊಂಡಿದ್ದರು. ಇದು ನಿಜವಾದ ಅಂಧಶ್ರದ್ಧೆ.

ವೈದಿಕ ಸಾಹಿತ್ಯವು ಹೇಳುತ್ತದೆ –

ಅಹನಿ ಅಹನಿ ಗಚ್ಛಂತಿ ಭೂತಾನಿ ಇಹ ಯಮಾಲಯಂ ।

ಶೇಷಃ ಸ್ಥಾವರಂ ಇಚ್ಛಂತಿ ಕಿಮ್‌ ಆಶ್ಚರ್ಯಂ ಅತಃ ಪರಮ್‌ ॥

ಹಗಲೂ ರಾತ್ರಿ ಜೀವಿಗಳನ್ನು ಮೃತ್ಯುದೇವತೆಯಾದ ಯಮನ ಆಲಯಕ್ಕೆ ಕಳುಹಿಸಲಾಗುತ್ತಿದೆ. ಆದರೂ ಉಳಿದಿರುವವರು ತಾವೆಂದೂ ಸಾಯುವುದಿಲ್ಲವೆಂದು ಯೋಚಿಸುತ್ತಾರೆ. ಈ ಐಹಿಕ ಪ್ರಪಂಚದಲ್ಲಿ ಇದೊಂದು ಅತ್ಯಂತ ಆಶ್ಚರ್ಯಕರ ಸಂಗತಿಯಾಗಿದೆ.

ಇದಕ್ಕಿಂತ ಹೆಚ್ಚು ಪರಿಪೂರ್ಣವಾಗಿ ಮತ್ತು ಕರಾರುವಾಕ್ಕಾಗಿ ವಾಸ್ತವತೆಯನ್ನು ವರ್ಣಿಸಲಾಗುವುದಿಲ್ಲ. ಜನನ, ಮರಣ, ವೃದ್ಧಾಪ್ಯ ಮತ್ತು ವ್ಯಾಧಿಗಳು ಜೀವನದ ನಿಜವಾದ ಸಮಸ್ಯೆಗಳೆಂದು ನಾವು ಅರ್ಥಮಾಡಿಕೊಳ್ಳಬೇಕು. ಜೀವನದ ಸೌಕರ್ಯಗಳನ್ನು ಎಷ್ಟೇ ಹೆಚ್ಚು ಮಾಡಿಕೊಂಡರೂ ಈ ಸಮಸ್ಯೆಗಳನ್ನು ಪರಿಹರಿಸಲಾಗುವುದಿಲ್ಲ. ಜೀವನದ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಾವು ಪ್ರಯತ್ನಿಸಬೇಕು ಎಂದು ಸಾಮಾನ್ಯ ಜ್ಞಾನವು ನಿರ್ದೇಶಿಸುತ್ತದೆ. ಇಲ್ಲದಿದ್ದರೆ ನಮ್ಮ ಇತರ ಎಲ್ಲ ಸಾಧನೆಗಳು ಮತ್ತು ಪ್ರಯತ್ನಗಳು
ನಿಷ್ಫಲವಾಗುತ್ತವೆ. ಅಪಾರವಾದ ಪರಿಶ್ರಮದಿಂದ ನಾವು ಗಳಿಸಿದ್ದನ್ನು ಕೊನೆಗೆ ಬಿಟ್ಟುಕೊಡಬೇಕು ಎಂದರೆ ಅದರಿಂದ ಏನು ಪ್ರಯೋಜನ? ಮೃತ್ಯುವು ನಮಗೆ ಪ್ರಿಯವಾದ ಎಲ್ಲದರಿಂದಲೂ ಬಲಾತ್ಕಾರವಾಗಿ ನಮ್ಮನ್ನು ಕಿತ್ತುಕೊಂಡು ಹೋಗುತ್ತದೆ. ಎಂದ ಮೇಲೆ ಆ ಎಲ್ಲ ವಸ್ತುಗಳ ಮೇಲೆ ನಮ್ಮ ಪ್ರೀತಿ, ಶ್ರದ್ಧೆ ಮತ್ತು ಗಮನವನ್ನು ಇರಿಸಿಕೊಳ್ಳುವುದರಿಂದ ಏನು ಪ್ರಯೋಜನ? ಪ್ರತಿಯೊಂದೂ ಅಂಧಕಾರಮಯವಾಗಿಯೂ ಮತ್ತು ನಿರಾಶಾದಾಯಕವಾಗಿಯೂ ಕಾಣುತ್ತದೆ. ತೀರ ಕಳೆಗುಂದಿದ ಚಿತ್ರವಾಗಿ ಅದು ತೋರುತ್ತದೆಯಲ್ಲವೇ? ಅಥವಾ ಅದು ಹಾಗಿದೆಯೇ?

ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ –

ಜನ್ಮ ಕರ್ಮ ಚ ಮೇ ದಿವ್ಯಮ್‌ ಏವಂ ಯೋ ವೇತ್ತಿ ತತ್ತ್ವತಃ ।

ತ್ಯಕ್ತ್ವಾ ದೇಹಂ ಪುನರ್‌ ಜನ್ಮ ನೈತಿ ಮಾಮ್‌ ಏತಿ ಸೋಽರ್ಜುನ ॥

ಯಾರು ನನ್ನ ಅವತಾರ ಮತ್ತು ಚಟುವಟಿಕೆಗಳ ಲೋಕೋತ್ತರವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳುತ್ತಾನೋ ಅವನು ತನ್ನ ದೇಹವನ್ನು ತ್ಯಜಿಸಿದ ಅನಂತರ ಈ ಐಹಿಕ ಜಗತ್ತಿನಲ್ಲಿ ಮರುಜನ್ಮವೆತ್ತುವುದಿಲ್ಲ, ನನ್ನ ಪರಮಧಾಮವನ್ನು ಸೇರುತ್ತಾನೆ, ಓ ಅರ್ಜುನ.

ಜನನ ಮತ್ತು ಮರಣದ ಚಕ್ರದಿಂದ ವಿಮೋಚನೆಯನ್ನು ಪಡೆಯುವ ಪ್ರಕ್ರಿಯೆಯು ಸಂಕೀರ್ಣವಾದುದಲ್ಲ. ಕೃಷ್ಣನ ಸರ್ವೋಚ್ಚತೆಯನ್ನು ಒಪ್ಪಿಕೊಳ್ಳುವ ಮೂಲಕ ಮತ್ತು ಅವನನ್ನು ನಮ್ಮ ಮಟ್ಟಕ್ಕೆ ಕೆಳಗೆ ಎಳೆದುಕೊಳ್ಳಲು ಪ್ರಯತ್ನ ಮಾಡದೇ ಇರುವ ಮೂಲಕ, ಈ ವಿಷಮ ಚಕ್ರದಿಂದ ವಿಮೋಚನೆಯನ್ನು ಪಡೆಯಲು ನಾವು ಅರ್ಹರಾಗುತ್ತೇವೆ. ಈ ಪ್ರಕ್ರಿಯೆಯು ಸರಳವಾಗಿದೆ. ಕೃಷ್ಣನು ಭಗವದ್ಗೀತೆಯಲ್ಲಿ ನೀಡಿರುವ ಉಪದೇಶಗಳನ್ನು ಶ್ರದ್ಧೆಯಿಂದ ಮತ್ತು ಏಕಾಗ್ರತೆಯಿಂದ ವಿನೀತರಾಗಿ ಕೇಳಬೇಕು ಅಷ್ಟೆ. ಜನನ ಮರಣ ಚಕ್ರದಲ್ಲಿ ಮತ್ತೆ ಮತ್ತೆ ಸುತ್ತುವುದರಿಂದ ಅವನು ನಮ್ಮನ್ನು ರಕ್ಷಿಸುವುದಾಗಿ ನಮಗೆ ಭರವಸೆ ಕೊಡುತ್ತಾನೆ. ಇದು ಅಂಧಶ್ರದ್ಧೆಯ ವಿಷಯವಲ್ಲ, ಕಾರ್ಯಸಾಧುವಾದ ಅನ್ವಯಕ್ರಮ. ಈ ಪ್ರಕ್ರಿಯೆಯ ಪೂರ್ವೋಕ್ತ ಫಲಿತಾಂಶಗಳು ಸ್ಪರ್ಶಗ್ರಾಹ್ಯವಾಗಿವೆ ಮತ್ತು ತಮ್ಮನ್ನು ತಾವೇ ಸ್ಪಷ್ಟಪಡಿಸಿಕೊಳ್ಳುತ್ತವೆ. ಒಂದೇ ಒಂದು ಅಗತ್ಯವೆಂದರೆ ನಾವು ಪೂರ್ವಗ್ರಹರಹಿತ ಮನಸ್ಸಿನಿಂದ ಈ ವಿಷಯವನ್ನು ಸಮೀಪಿಸಬೇಕು. ಅನೇಕ ಮಹಾಪುರುಷರು ಹಿಂದೆ ಈ ಪ್ರಕ್ರಿಯೆಯನ್ನು ಅಳವಡಿಸಿಕೊಂಡು ಮೃತ್ಯುವನ್ನು ಗೆದ್ದಿದ್ದಾರೆ. ಅದೇ ಪ್ರಕ್ರಿಯೆಯು ಇಂದೂ ಕೂಡ ನಮಗೆ ಲಭ್ಯವಾಗಿದೆ.

ಆಯ್ಕೆ ನಮ್ಮದು. ತಲೆಯ ಮೇಲೆ ತೂಗುತ್ತಿರುವ ಮೃತ್ಯುವಿನಿಂದ ನಮ್ಮನ್ನು ಪಾರು ಮಾಡಲು ನಮ್ಮ ಶ್ರದ್ಧೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇರಿಸುವುದನ್ನು ನಾವು ಮುಂದುವರಿಸಬಹುದು; ಅದು ನಿಷ್ಫಲವಾಗುವುದು ನಿಶ್ಚಿತ. ಅಥವಾ ಮನ್ನಣೆಯನ್ನು ಪಡೆದ ಪ್ರಮಾಣಗಳಿರುವ ಕಾಲಮಾನಿತ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಬಹುದು. ನಾವು ಕೃಷ್ಣನ ಪವಿತ್ರ ನಾಮಗಳನ್ನು – ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ, ಹರೇರಾಮ ಹರೇರಾಮ ರಾಮರಾಮ ಹರೇಹರೇ – ಕೇವಲ ಜಪ ಮಾಡಬೇಕು ಮತ್ತು ಕೃಷ್ಣನ ದಿವ್ಯ ಲೀಲೆಗಳು ಮತ್ತು ಬೋಧನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಹೀಗೆ ಮೃತ್ಯುವಿನ ಒಡೆಯಲಾಗದ ಬಿಗಿಮುಷ್ಟಿಯಿಂದ ನಮ್ಮನ್ನು ಮುಕ್ತರನ್ನಾಗಿಸಿಕೊಳ್ಳಬೇಕು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi