ಸುಮ್ಮನೆ ಕೃಷ್ಣನನ್ನು ಪ್ರೀತಿಸಿ

ಶ್ರೇಷ್ಠ ವಿದ್ವಾಂಸರಿಂದಲೂ ಸುಲಭವಾಗಿ ಮುಟ್ಟಲು ಸಾಧ್ಯವಾಗದ, ಅಜೇಯ ದೇವೋತ್ತಮನು ತನ್ನ ಭಕ್ತರ ಅಸೀಮ ಪ್ರೀತಿಯಿಂದ ನಿಯಂತ್ರಿಸಲ್ಪಟ್ಟಿದ್ದಾನೆ.

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರು ಆದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಉಪನ್ಯಾಸ.

ಗೋಪ್ಯಾದದೇ ತ್ವಯಿ ಕೃತಾಗಸಿ ದಾಮ ತಾವದ್‌

ಯಾ ತೇ ದಶಾಶ್ರುಕಲಿಲಾಂಜನಸಂಭ್ರಮಾಕ್ಷಮ್‌ ।

ವಕ್ತ್ರಂ ನಿನೀಯ ಭಯಭಾವನಯಾ ಸ್ಥಿತಸ್ಯ

ಸಾ ಮಾಂ ವಿಮೋಹಯತಿ ಭೀರಪಿ ಯದ್‌ಬಿಭೇತಿ ॥

ರಾಣಿ ಕುಂತಿ ಪ್ರಾರ್ಥಿಸುತ್ತಾಳೆ: `ನನ್ನ ಪ್ರೀತಿಯ ಕೃಷ್ಣ , ನೀನು ತಪ್ಪು ಮಾಡಿದಾಗ ಯಶೋದ ನಿನ್ನನ್ನು ಹಗ್ಗದಿಂದ ಕಟ್ಟಿಹಾಕಿದಳು. ಆಗ ನಿನ್ನ ವ್ಯಾಕುಲಗೊಂಡ ನೇತ್ರಗಳಿಂದ ಕಣ್ಣೀರಿನ ಪ್ರವಾಹ ಹರಿಯಿತು. ಈ ಜಲಧಾರೆಯಲ್ಲಿ ನಿನ್ನ ಕಣ್ಣಿಗೆ ಹಚ್ಚಿದ್ದ ಕಾಡಿಗೆ ತೊಳೆದು ಹೋಯಿತು. ನಿನ್ನನ್ನು ಕಂಡು ಭಯವು ಅಂಜಿದರೂ ನೀನು ಭೀತಿಗೊಳಗಾದಂತೆ ಕಂಡುಬಂದೆ. ಈ ದೃಶ್ಯ ನನ್ನನ್ನು ದಿಗ್ಭ್ರಾಂತಗೊಳಿಸಿತು.’ (ಶ್ರೀಮದ್‌ ಭಾಗವತ 1.8.31)

ದೇವೋತ್ತಮ ಪರಮ ಪುರುಷನ ಲೀಲೆಗಳು ಸೃಷ್ಟಿಸುವ ತಬ್ಬಿಬ್ಬುಗೊಳಿಸುವ ವಾತಾವರಣ ಕುರಿತಂತೆ ಇಲ್ಲೊಂದು ವಿವರಣೆ. ಎಲ್ಲ ಸಮಯ ಸಂದರ್ಭದಲ್ಲಿಯೂ ದೇವೋತ್ತಮ ಪರಮಪುರುಷನು ಸರ್ವೋತ್ತಮನೇ. ಭಗವಾನ್‌ ದೇವ ಸರ್ವೋತ್ತಮನಾಗಿರುವಾಗಲೇ ತನ್ನ ಪರಿಶುದ್ಧ ಭಕ್ತರ ಮುಂದೆ ಒಂದು ಆಟದ ವಸ್ತುವಿನಂತೆಯೂ ಆಗಿಬಿಡುತ್ತಾನೆ. ಭಕ್ತರ ಮೇಲಿನ ಪ್ರೀತಿಗೆ ಇದೊಂದು ಉದಾಹರಣೆ.

ಭಗವಂತನ ಪರಿಶುದ್ಧ ಭಕ್ತನು ಅಪ್ಪಟ ಪ್ರೀತಿಯಿಂದಲೇ ಸೇವೆ ಸಲ್ಲಿಸುತ್ತಾನೆ. ಹಾಗೆ ಪರಿಶುದ್ಧ ಭಕ್ತಿಯಿಂದ ಸೇವೆ ಸಲ್ಲಿಸುವಾಗ ಅವನು ದೇವ ಸರ್ವೋತ್ತಮನ ಸ್ಥಾನವನ್ನು ಮರೆತುಬಿಡುತ್ತಾನೆ. ಯಾವುದೇ ಗೌರವದ ಮೆಚ್ಚುಗೆ ಇಲ್ಲದೆ ಸ್ವಪ್ರೇರಿತರಾಗಿ ಪರಿಶುದ್ಧ ಪ್ರೀತಿ ವಾತ್ಸಲ್ಯಗಳಿಂದ ಸೇವೆ ಸಲ್ಲಿಸಿದರೆ ದೇವ ಸರ್ವೋತ್ತಮನು ಭಕ್ತರ ಪ್ರೀತಿಯ ಸೇವೆಯನ್ನು ಹೆಚ್ಚು ಆಸ್ವಾದಿಸುತ್ತಾ ಸ್ವೀಕರಿಸುತ್ತಾನೆ.

ಸಾಮಾನ್ಯವಾಗಿ ಜನರು ಗೌರವ ಭಾವದಿಂದ ಪೂಜಿಸುತ್ತಾರೆ. ಆದರೆ ಭಕ್ತರು ತಮ್ಮ ಅಪರಿಮಿತ ಪ್ರೀತಿಯಿಂದ ದೇವನನ್ನು ಕಡಮೆ ಪ್ರಮುಖನೆಂದು ಸೇವೆಗೈದರೆ ಭಗವಾನ್‌ ಖಚಿತವಾಗಿಯೂ ಸಂಪ್ರೀತನಾಗುತ್ತಾನೆ. ಈ ಸ್ಫೂರ್ತಿಯ ಹಿನ್ನೆಲೆಯಲ್ಲಿಯೇ ದೇವೋತ್ತಮನ ಮೂಲ ಸ್ಥಳ ಗೋಲೋಕ ವೃಂದಾವನದಲ್ಲಿ ಕೃಷ್ಣ ಲೀಲೆಯನ್ನು ವಿಶ್ಲೇಷಿಸಬಹುದು. ಕೃಷ್ಣನ ಮಿತ್ರರು ಅವನನ್ನು ತಮ್ಮೊಳಗೊಬ್ಬನೆಂದೇ ಭಾವಿಸುತ್ತಾರೆ. ಭಕ್ತಿಭಯ, ಪೂಜ್ಯಭಾವದಿಂದ ನೋಡುವುದೇ ಇಲ್ಲ. ದೇವನ ಮಾತಾ ಪಿತೃಗಳೂ ಅವನನ್ನು ಮಗು ಎಂದೇ ಪರಿಗಣಿಸುತ್ತಾರೆ. ಭಗವಾನ್‌ ಕೂಡ ತನ್ನ ತಾಯಿಯ ದಂಡನೆಯನ್ನು ವೇದ ಸ್ತುತಿಗಿಂತಲೂ ಹೆಚ್ಚು ಖುಷಿಯಿಂದ ಸ್ವೀಕರಿಸುತ್ತಾನೆ. ಅದೇ ರೀತಿ ತನ್ನ ಪ್ರಿಯತಮೆಯರ ನಿಂದನೆ, ದೂಷಣೆಯನ್ನು ವೇದ ಸ್ತುತಿಗಿಂತ ಹೆಚ್ಚು ಹಿತವೆಂದು ಭಾವಿಸುತ್ತಾನೆ. ಸಾಮಾನ್ಯ ಜನರನ್ನು ಆಕರ್ಷಿಸುವ ಕೇಂದ್ರ ಬಿಂದುವಾಗಿ, ತನ್ನ ಅಲೌಕಿಕ ಪ್ರಪಂಚ ಗೋಲೋಕ ವೃಂದಾವನದ ನಿತ್ಯ ಲೀಲೆಯನ್ನು ವಿಶದಪಡಿಸಲು ಈ ಲೋಕದಲ್ಲಿ ಅವತರಿಸಿದ ಭಗವಾನ್‌ ತನ್ನ ಸಾಕು ತಾಯಿ ಯಶೋದೆಯ ಮುಂದೆ ಅಪರೂಪ ಅಧೀನತೆಯನ್ನು ಪ್ರದರ್ಶಿಸುತ್ತಾನೆ. ಯಶೋದೆ ಸಂಗ್ರಹಿಸಿಟ್ಟಿದ್ದ ಬೆಣ್ಣೆಯನ್ನು ಕದ್ದು ತನ್ನ ಮಿತ್ರರಿಗೆ ಹಂಚಿ ಸ್ವಾಭಾವಿಕ ಮಕ್ಕಳಾಟ ಪ್ರದರ್ಶಿಸುತ್ತಾನೆ. ವೃಂದಾವನದ ಪ್ರಸಿದ್ಧ ಮಂಗಗಳಿಗೂ ಬೆಣ್ಣೆ ನೀಡಿ ಯಶೋದೆಯ ಕೋಪ ಹೆಚ್ಚುವಂತೆ ಮಾಡುತ್ತಾನೆ. ಇದನ್ನೆಲ್ಲ ನೋಡಿದ ಯಶೋದೆ ಪ್ರೀತಿ ತೋರುತ್ತಲೇ ಕೃಷ್ಣನನ್ನು ಶಿಕ್ಷಿಸಲು ಮುಂದಾಗುತ್ತಾಳೆ. ಹಗ್ಗ ಹಿಡಿದು ಈ ಅಲೌಕಿಕ ಶಿಶುವಿಗೆ ಕಟ್ಟಿಹಾಕುವ ಬೆದರಿಕೆ ಹಾಕುತ್ತಾಳೆ. ತಾಯಿಯ ಕೈಯಲ್ಲಿ ಹಗ್ಗ ಕಂಡು ತಲೆತಗ್ಗಿಸಿದ ದೇವೋತ್ತಮನ ಕಣ್ಣಿನಿಂದ ಅಶ್ರುಧಾರೆ… ಎಲ್ಲ ಮಕ್ಕಳಂತೆ ಅಳತೊಡಗುವ ಕೃಷ್ಣನ ಕಣ್ಣಿನಿಂದ ನೀರು ಸುರಿಯುತ್ತದೆ. ಅವನ ಸುಂದರ ನೇತ್ರಗಳಿಗೆ ಸವರಿದ್ದ ಕಾಡಿಗೆ ತೊಳೆದುಹೋಗುತ್ತದೆ.

ದೇವನ ಈ ಅಸದೃಶ ಚಿತ್ರವನ್ನು ಕುಂತಿ ದೇವಿ ಬಹಳ ಇಷ್ಟಪಡುತ್ತಾಳೆ. ಕೃಷ್ಣನನ್ನು ಕಂಡರೆ ಭಯಕ್ಕೇ ಅಂಜಿಕೆ ಇರುವಾಗ ಅವನು ಸಾಮಾನ್ಯರಂತೆ ತನ್ನನ್ನು ಶಿಕ್ಷಿಸಲು ಮುಂದಾಗುವ ತಾಯಿಗೆ ಹೆದರುವುದು ಕುಂತಿಯನ್ನು ಮೂಕವಿಸ್ಮಿತಗೊಳಿಸುತ್ತದೆ.

ಕೃಷ್ಣ ದೇವೋತ್ತಮ ಪರಮ ಪುರುಷನೆಂದು ಕುಂತಿಗೆ ಅರಿವಿತ್ತು. ಯಶೋದೆಗೆ ಗೊತ್ತಿರಲಿಲ್ಲ. ಯಶೋದೆಗೆ ದೇವನೇ ಮಗುವಾಗಿ ದೊರೆತಿದ್ದ. ಆದರೆ ಅವಳ ಮಗು ದೇವ ಸರ್ವೋತ್ತಮನೆಂಬುದನ್ನು ಮರೆಯುವಂತೆ ಮಾಡಿದ್ದ ಕೃಷ್ಣ ತನ್ನ ತುಂಟಾಟಗಳ ಮೂಲಕ. ಕೃಷ್ಣನ ಉನ್ನತ ಸ್ಥಾನದ ಅರಿವಿದ್ದಿದ್ದರೆ ಯಶೋದೆ ಅವನನ್ನು ಶಿಕ್ಷಿಸಲು ಹಿಂಜರಿಯುತ್ತಿದ್ದಳು. ಈ ಪರಿಸ್ಥಿತಿಯನ್ನು ಅವಳು ಮರೆವಂತೆ ಮಾಡಿದ್ದ ಕೃಷ್ಣ. ಏಕೆಂದರೆ ವಾತ್ಸಲ್ಯಮಯಿ ಯಶೋದೆಯ ಮುಂದೆ ಅವನು ಮಗುವಾಗಿರಲು ಬಯಸಿದ್ದ. ತಾಯಿ ಮಗನ ನಡುವೆ ಈ ಪ್ರೀತಿ ವಾತ್ಸಲ್ಯ ವಿನಿಮಯ ಅತ್ಯಂತ ಸ್ವಾಭಾವಿಕವಾಗಿ ನಡೆದಿದೆ. ಈ ದೃಶ್ಯವನ್ನು ನೆನಪಿಸಿಕೊಳ್ಳುತ್ತ ಕುಂತಿ ಚಕಿತಗೊಳ್ಳುತ್ತಾಳೆ. ಈ ಅಲೌಕಿಕ ಬಾಂಧವ್ಯವನ್ನು ಕೊಂಡಾಡದೆ ಅವಳಿಗೆ ಇನ್ನೇನು ಮಾಡುವುದೂ ಸಾಧ್ಯವಿರಲಿಲ್ಲ. ಸರ್ವ ಶಕ್ತಿಯುತ ಭಗವಂತನನ್ನೇ ಮಗನನ್ನಾಗಿ ಪಡೆದು ಅವನನ್ನು ನಿಯಂತ್ರಿಸಲು ಸಾಧ್ಯವಾದ ಯಶೋದೆಯ ಸ್ಥಾನವನ್ನು ಪರೋಕ್ಷವಾಗಿ ಶ್ಲಾಘಿಸಲಾಗಿದೆ.

ಕೃಷ್ಣಲೀಲೆಯು ಅವನ ವೈಭವವನ್ನು ತೋರಿಸುತ್ತದೆ – ಅವನ ಸೌಂದರ್ಯ ಶ್ರೀಮಂತಿಕೆ. ಕೃಷ್ಣನಲ್ಲಿ ಆರು ಐಶ್ವರ್ಯಗಳಿವೆ – ಸರ್ವ ಸಂಪತ್ತು, ಶಕ್ತಿ, ಪ್ರಭಾವ, ಜ್ಞಾನ, ತ್ಯಾಗ ಮತ್ತು ಸೌಂದರ್ಯ. ಕೃಷ್ಣನ ಸ್ವಭಾವವೆಂದರೆ ಅವನು ಶ್ರೇಷ್ಠರಲ್ಲಿ ಶ್ರೇಷ್ಠ, ಕನಿಷ್ಠರಲ್ಲಿ ಕನಿಷ್ಠ. (ಅಣೋರಣಿಯಾನ್‌ ಮಹತೋ ಮಹೀಯಾನ್‌). ನಾವು ಕೃಷ್ಣನಿಗೆ ಗೌರವ ಮತ್ತು ಪೂಜ್ಯ ಭಾವನೆಯಿಂದ ನಮಸ್ಕಾರ ಸಲ್ಲಿಸುತ್ತೇವೆ, ಆದರೆ ಕೃಷ್ಣನಲ್ಲಿಗೆ ಹಗ್ಗ ಹಿಡಿದು ಬಂದು `ಕೃಷ್ಣ ನೀನು ತಪ್ಪು ಮಾಡಿದ್ದೀಯ, ಈಗ ಕಟ್ಟಿಹಾಕುವೆ’ ಎಂದು ಯಾರೂ ಹೇಳುವುದಿಲ್ಲ. ಆದರೂ ಇದು ಪರಿಪೂರ್ಣ ಭಕ್ತನ ವಿಶೇಷ ಹಕ್ಕು ಹಾಗೂ ಆ ರೀತಿ  ತನ್ನನ್ನು ಸಮೀಪಿಸುವುದನ್ನು ಕೃಷ್ಣ ಅಪೇಕ್ಷಿಸುತ್ತಾನೆ.

ಕೃಷ್ಣನ ಐಶ್ವರ್ಯಗಳನ್ನು ಯೋಚಿಸಿ ಕುಂತಿದೇವಿಯು ಯಶೋದೆಯ ಪಾತ್ರ ವಹಿಸಲು ಹಿಂಜರಿದಳು. ಕುಂತಿಯು ಕೃಷ್ಣನ ಅತ್ತೆಯಾದರೂ ಯಶೋದೆಯಂತೆ ಅವನನ್ನು ಸಮೀಪಿಸುವ ಸುಯೋಗ ಹೊಂದಿರಲಿಲ್ಲ. ಯಶೋದಮಾಯಿಯದು ಎಂತಹ ಉನ್ನತ ಭಕ್ತಿಯೆಂದರೆ ದೇವೋತ್ತಮ ಪರಮ ಪುರುಷನನ್ನೇ ದಂಡಿಸುವ ಹಕ್ಕು ಹೊಂದಿದ್ದಳು. ಅದು ಯಶೋದೆಯ ಸುಯೋಗ. ಅವಳ ಅದೃಷ್ಟದ ಬಗೆಗೇ ಕುಂತಿ ಯೋಚಿಸುತ್ತಾಳೆ. ಕೃಷ್ಣನನ್ನು ಕಂಡರೆ ಯಾರಿಗೆ ಭಯವಿಲ್ಲ? ಯಾರಿಗೂ ಇಲ್ಲ. ಆದರೆ ಕೃಷ್ಣನಿಗೆ ಯಶೋದಳನ್ನು ಕಂಡರೆ ಭಯ. ಇದೇ ಕೃಷ್ಣನ ವೈಶಿಷ್ಟ್ಯ.

ಕೃಷ್ಣನ ವೈಭವಕ್ಕೆ ಮತ್ತೊಂದು ಉದಾಹರಣೆ, ಕೃಷ್ಣನು ಮದನಮೋಹನನೆಂದು ಜನಪ್ರಿಯ, ಮದನ ಎಂದರೆ ಮನ್ಮಥ. ಮನ್ಮಥ ಎಲ್ಲರನ್ನೂ ಮೋಹದ ಬಲೆಗೆ ಬೀಳಿಸಿದರೆ ಮದನಮೋಹನನಾದ ಕೃಷ್ಣನು ಎಷ್ಟು ಸುಂದರನೆಂದರೆ ಮನ್ಮಥನನ್ನೇ ತನ್ನ ಮೋಡಿಗೆ ಸಿಲುಕಿಸುತ್ತಾನೆ. ಅದಿರಲಿ, ಕೃಷ್ಣನೇ ಶ್ರೀಮತಿ ರಾಧಾರಾಣಿಯ ಮೋಡಿಗೆ ಒಳಗಾಗುತ್ತಾನೆ. ಹೀಗಾಗಿ ಶ್ರೀಮತಿ ರಾಧಾ ರಾಣಿಯು ಮದನಮೋಹನ ಮೋಹಿನಿ ಎಂದು ಪ್ರಸಿದ್ಧಿ. ಅವಳು ಮನ್ಮಥನ ಮಾಂತ್ರಿಕನ ಮೋಡಿಗಾರಳು. ಕೃಷ್ಣನು ಮನ್ಮಥನ ಮಾಂತ್ರಿಕ. ರಾಧಾ ರಾಣಿಯು ಆ ಮಾಂತ್ರಿಕನ ಮಾಂತ್ರಿಕಳು.

ಇವೆಲ್ಲಾ ಕೃಷ್ಣಪ್ರಜ್ಞೆಯಲ್ಲಿನ ಶ್ರೇಷ್ಠ ಆಧ್ಯಾತ್ಮಿಕ ಗ್ರಹಿಕೆಗಳು. ಅವು, ಕಥೆ, ಕಲ್ಪನೆ, ಕಟ್ಟುಕಥೆಗಳಲ್ಲ. ಇವು ವಾಸ್ತವಾಂಶಗಳು. ಅರ್ಥ ಮಾಡಿಕೊಳ್ಳುವ ಹಕ್ಕು ಎಲ್ಲ ಭಕ್ತರಿಗೂ ಇದೆ. ಅವನು ನಿಜವಾಗಿಯೂ ಪ್ರಗತಿ ಹೊಂದಿದರೆ ಕೃಷ್ಣ ಲೀಲೆಯಲ್ಲಿ ಭಾಗಿಯಾಗಬಹುದು. ಯಶೋದೆಗಿರುವ ಸುಯೋಗವನ್ನು ಎಲ್ಲರೂ ಹೊಂದುವ ಹಕ್ಕು ಪಡೆಯಬಹುದು ಎಂದಲ್ಲ. ತಮ್ಮದೇ ಮಗುವಿನಂತೆ ಕೃಷ್ಣನ ಮೇಲೆ ಪ್ರೀತಿ ತೋರಿದರೆ ಅಂತಹವರಿಗೆ ಆ ಸುಯೋಗ ಲಭ್ಯ. ಏಕೆಂದರೆ ಮಗುವಿಗೆ ತಾಯಿಯ ಪ್ರೀತಿ ಅಪರಿಮಿತ. ಲೌಕಿಕ ಜಗತ್ತಿನಲ್ಲಿ ಕೂಡ ತಾಯಿಯ ಪ್ರೀತಿಗೆ ಹೋಲಿಕೆಯೇ ಇಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೆ ತಾಯಿ ತನ್ನ ಮಗುವನ್ನು ಪ್ರೀತಿಸುತ್ತಾಳೆ. ಅದು ಸಾಮಾನ್ಯವಾಗಿ ನಿಜವಾದರೂ ಈ ಲೌಕಿಕ ಪ್ರಪಂಚ ಎಷ್ಟು ಕಲುಷಿತವಾಗಿಬಿಟ್ಟಿದೆಯೆಂದರೆ, ಒಬ್ಬ ತಾಯಿ ಕೆಲ ಬಾರಿ `ನನ್ನ ಮಗು ಬೆಳೆದು ದೊಡ್ಡವನಾಗುತ್ತಾನೆ. ಅವನು ಸಂಪಾದಿಸತೊಡಗಿದ ಮೇಲೆ ನನಗೆ ಅದು ಸಿಗುತ್ತದೆ’ ಎಂದು ಯೋಚಿಸುವುದೂ ಉಂಟು. ಅಂದರೆ ಪ್ರೀತಿಗೆ ಪ್ರತಿಯಾಗಿ ಏನೋ ನಿರೀಕ್ಷೆ ಇರುತ್ತದೆ, ಕೆಲ ಬಾರಿ. ಆದರೆ ಕೃಷ್ಣನನ್ನು ಪ್ರೀತಿಸುವಾಗ ಅಂತಹ ಯಾವುದೇ ಸ್ವಾರ್ಥ ಭಾವನೆಗಳಿರುವುದಿಲ್ಲ. ಏಕೆಂದರೆ ಅದು ಶುದ್ಧ ಭಕ್ತಿ. ಲೌಕಿಕ ಲಾಭದಿಂದ ಮುಕ್ತ.

ಲೌಕಿಕ ಲಾಭಕ್ಕಾಗಿ ನಾವು ಕೃಷ್ಣನನ್ನು ಪ್ರೀತಿಸಬಾರದು. `ಕೃಷ್ಣ ನಮಗೆ ದಿನ ನಿತ್ಯದ ಆಹಾರ ಕೊಡು, ನಿನ್ನನ್ನು ಪ್ರೀತಿಸುತ್ತೇವೆ. ಕೃಷ್ಣ ನಮಗೆ ಅದು ಕೊಡು, ಇದು ಕೊಡು ನಿನ್ನನ್ನು ಪ್ರೀತಿಸುತ್ತೇವೆ.’ ಎಂದು ನಾವು ಹೇಳುವಂತಹುದಲ್ಲ. ಅಂತಹ ಲೌಕಿಕ ವಿನಿಮಯದ ಪ್ರಶ್ನೆಯೇ ಇಲ್ಲ. ಫಲಾಪೇಕ್ಷೆ ಇಲ್ಲದ ಪರಿಶುದ್ಧ ಪ್ರೀತಿ ಕೃಷ್ಣನಿಗೆ ಬೇಕು.

ತನ್ನನ್ನು ಕಟ್ಟಿಹಾಕಲು ಮಾತೆ ಯಶೋದೆ ಬರುತ್ತಿರುವುದನ್ನು ಕಂಡು ಕೃಷ್ಣನಿಗೆ ವಿಪರೀತ ಭಯವಾಯ್ತು. `ಓ! ಅಮ್ಮ ನನ್ನನ್ನು ಕಟ್ಟಿಹಾಕಿಬಿಡುತ್ತಾಳೆ ‘  ಕಣ್ಣೀರ ಕೋಡಿ ಹರಿಯಿತು. ಕಣ್ಣಿಗೆ ಹಚ್ಚಿದ್ದ ಕಾಡಿಗೆ ತೊಳೆದು ಹೋಯಿತು. ಆದರೂ ಗೌರವದಿಂದ ತಾಯಿಯತ್ತ ದೃಷ್ಟಿ ಹರಿಸಿ ಭಾವೋದ್ರೇಕದಿಂದ ಹೇಳುತ್ತಾನೆ : `ಹೌದು, ಅಮ್ಮ ನಾನು ನಿನ್ನ ಮನನೋಯಿಸಿದ್ದೇನೆ. ದಯೆಯಿಟ್ಟು ಕ್ಷಮಿಸು’. ತಾಯಿಯ ಮುಂದೆ ತಲೆ ಬಾಗಿ ನಿಂತ. ಇದು ಕೃಷ್ಣನ ಪರಿಪೂರ್ಣತೆಗೆ ಮತ್ತೊಂದು ನಿದರ್ಶನ. ಕುಂತಿ ಈ ದೃಶ್ಯವನ್ನು ಮನಸಾರೆ ಮೆಚ್ಚಿಕೊಂಡು ಆನಂದಿಸಿದಳು. ಅವನು ದೇವೋತ್ತಮ ಪರಮ ಪುರುಷನಾದರೂ ತನ್ನನ್ನು ಯಶೋದೆಯ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುತ್ತಾನೆ. ಭಗವದ್ಗೀತೆಯಲ್ಲಿ (7.7) ಭಗವಾನ್‌ ಹೇಳುತ್ತಾನೆ : ಮತ್ತ ಪರತರಮ್‌ ನಾನ್ಯತ್‌ ಕಿಂಚಿತ್‌ ಅಸ್ತಿ ಧನಂಜಯ. (ಅರ್ಜುನ, ನನಗಿಂತ ಉತ್ತಮರು ಯಾರೂ ಇಲ್ಲ)’. ಆದರೂ ಅವನಿಗಿಂತ ಪರಮೋತ್ತರರಿಲ್ಲದ ಆ ದೇವನು ತಾಯಿ ಯಶೋದೆಗೆ ತಲೆ ಬಾಗುತ್ತಾನೆ. `ಪ್ರೀತಿಯ ಅಮ್ಮ, ಹೌದು, ನಾನು ಅಪರಾಧಿ’ ಎಂದು ಒಪ್ಪಿಕೊಳ್ಳುತ್ತಾನೆ.

ಕೃಷ್ಣ ಹೆದರಿದ್ದನ್ನು ಕಂಡು ಯಶೋದೆಗೆ ಗಲಿಬಿಲಿ, ಮುಜುಗರ. ತನ್ನ ಶಿಕ್ಷೆಯಿಂದ ಕೃಷ್ಣನಿಗೆ ನೋವಾಗಬೇಕೆಂದು ಅವಳು ಬಯಸಿರಲಿಲ್ಲ. ಅದು ಅವಳ ಉದ್ದೇಶ ಅಲ್ಲವಲ್ಲ. ಮಗು ತುಂಬಾ ತುಂಟಾಟ ಮಾಡಿದರೆ ಅದನ್ನು ಕಟ್ಟಿಹಾಕುವ ಪದ್ಧತಿ ಭಾರತದಲ್ಲಿ ಈಗಲೂ ಇದೆ. ಮಾತೆ ಯಶೋದೆ ಅದನ್ನು ಅನುಸರಿಸಿದಳಷ್ಟೆ.

ಪರಿಪೂರ್ಣ ಮಗುವಂತಾಡಿದ ಸರ್ವೋತ್ತಮನ ಶ್ರೇಷ್ಠತೆ ಮೆರೆದ ಈ ದೃಶ್ಯವನ್ನು ಶುದ್ಧ ಭಕ್ತರೆಲ್ಲರೂ ಕೊಂಡಾಡಿದ್ದಾರೆ. ಕೃಷ್ಣ ಮಗುವಿನ ಪಾತ್ರ ವಹಿಸಿದಷ್ಟೇ ಪರಿಪೂರ್ಣನಾಗಿ ಹದಿನಾರು ಸಾವಿರ ಪತ್ನಿಯರ ಪತಿಯಾಗಿಯೂ ನಿರ್ವಹಿಸಿದ್ದಾನೆ. ಅಷ್ಟೇ ಅಲ್ಲ, ಗೋಪಿಯರ ಪ್ರಿಯತಮನಾಗಿ, ಗೋಪಾಲಕರ ಮಿತ್ರನಾಗಿಯೂ ಅಷ್ಟೇ ಪರಿಪೂರ್ಣನಾಗಿ ನಿರ್ವಹಿಸಿದ್ದಾನೆ.

ಗೋಪಾಲ ಬಾಲಕರು ಸದಾ ಕೃಷ್ಣನ ಮೇಲೆ ಅವಲಂಬಿತರು. ಒಮ್ಮೆ ಅವರಿಗೆ ತಾಳೆ ಮರಗಳಿಂದ ಆವೃತವಾಗಿದ್ದ ಕಾಡಿನಲ್ಲಿದ್ದ ಹಣ್ಣುಗಳು ಬೇಕಾಗಿದ್ದವು. ಗರ್ದಭಾಸುರನೆಂಬ ರಾಕ್ಷಸ ಕಾಡಿನೊಳಗೆ ಯಾರನ್ನೂ ಬಿಟ್ಟುಕೊಳ್ಳುತ್ತಿರಲಿಲ್ಲ. `ಕೃಷ್ಣ ನಮಗೆ ಹಣ್ಣಿನ ರುಚಿ ನೋಡಬೇಕು. ವ್ಯವಸ್ಥೆ ಮಾಡು’ ಎಂದು ಮಿತ್ರರು ಹೇಳಿದ ಕೂಡಲೇ ಕೃಷ್ಣ ಒಪ್ಪಿದ. ಅಣ್ಣ ಬಲರಾಮನೊಂದಿಗೆ ಅವನು ಕಾಡು ಹೊಕ್ಕಿದ. ಈ ಅಸುರ ಇತರೆ ರಾಕ್ಷಸರೊಂದಿಗೆ ಕತ್ತೆ ರೂಪದಲ್ಲಿ ಕಾಡಿನಲ್ಲಿ ವಾಸಿಸುತ್ತಿದ್ದ. ಕೃಷ್ಣ ಬಲರಾಮರನ್ನು ಒದೆಯಲು ರಾಕ್ಷಸರು ಮುಂದಾದಾಗ ಬಲರಾಮ ಅವುಗಳಲ್ಲಿ ಒಂದನ್ನು ಎತ್ತಿ ಮರದ ಮೇಲಕ್ಕೆ ಅಪ್ಪಳಿಸಿದ. ಹೀಗೆ ಎಲ್ಲ ರಾಕ್ಷಸರ ನಿರ್ನಾಮವಾಯಿತು. ಗೋಪಾಲ ಬಾಲಕರು ಸಂಪ್ರೀತರಾದರು.

ಮತ್ತೊಂದು ಸಂದರ್ಭದಲ್ಲಿ ಗೋಪ ಬಾಲಕರ ಸುತ್ತ ಬೆಂಕಿ ಉಂಟಾಯಿತು. ಕೃಷ್ಣನನ್ನು ಬಿಟ್ಟರೆ ಅವರಿಗೆ ಇನ್ಯಾರಿದ್ದಾರೆ? ಅವರು ತತ್‌ಕ್ಷಣ ಕೃಷ್ಣನನ್ನು ಕರೆದರು. ಅದೇ ಕ್ಷಣದಲ್ಲಿ  ಕೃಷ್ಣ  ಹಾಜರು. ಬೆಂಕಿಯನ್ನು ನುಂಗಿಬಿಟ್ಟ. ಈ ಹುಡುಗರನ್ನು ಅನೇಕ ರಾಕ್ಷಸರು ಕಾಡುತ್ತಿದ್ದರು. ಕೃಷ್ಣ ರಕ್ಷಿಸುತ್ತಿದ್ದ. ಪ್ರತಿದಿನವೂ ಈ ಹುಡುಗರು ಮನೆಗೆ ಬಂದು `ಅಮ್ಮಾ ಕೃಷ್ಣ ಅದ್ಭುತ’ ಎಂದು ಆ ದಿನದ ಘಟನೆ ವರ್ಣಿಸುತ್ತಿದ್ದರು. ಆ ತಾಯಂದಿರೂ ಕೂಡ `ಕೃಷ್ಣ ಅದ್ಭುತ ‘ ಎಂದು ಉದ್ಗರಿಸುತ್ತಿದ್ದರು. ಅವರಿಗೆ ಕೃಷ್ಣ ದೇವರು, ಸರ್ವೋತ್ತಮ ಎಂಬುದೆಲ್ಲ ತಿಳಿಯದು. ಕೃಷ್ಣ ಅದ್ಭುತ ಎಂಬುದಷ್ಟೇ ಅವರ ಅರಿವಿಗೆ ಬಂದದ್ದು. ಕೃಷ್ಣನ ಅತಿಶಯ ಲೀಲೆಗಳನ್ನು ಅನುಭವಿಸಿದಷ್ಟೂ ಅವರಿಗೆ ಅವನ ಮೇಲಿನ ಪ್ರೀತಿ ಹೆಚ್ಚಾಗುತ್ತಿತ್ತು. ಕೃಷ್ಣನ ತಂದೆ ನಂದ ಮಹಾರಾಜನು ತನ್ನ ಮಿತ್ರರೊಂದಿಗೆ ಮಾತನಾಡುವಾಗ ಅವರೆಲ್ಲಾ  `ನಂದ, ನಿನ್ನ ಮಗ ಕೃಷ್ಣ ಅದ್ಭುತ’ ಎಂದು ಉದ್ಗರಿಸುತ್ತಿದ್ದರು. ನಂದ ಕೂಡ `ಹೌದು, ನಾನೂ ನೋಡುತ್ತಿರುವೆ. ಅವನು ದೇವತೆ ಇರಬಹುದು.’ ಎಂದು ಉತ್ತರಿಸುತ್ತಿದ್ದ .

ಹೀಗಾಗಿ, ವೃಂದಾವನ ವಾಸಿಗಳಿಗೆ ದೇವರು ಯಾರು, ಯಾರಲ್ಲ ಎಂಬುದರತ್ತ ಲಕ್ಷ್ಯವೇ ಇರಲಿಲ್ಲ. ಅವರು ಕೃಷ್ಣನನ್ನು ಪ್ರೀತಿಸುತ್ತಾರೆ ಅಷ್ಟೇ. ಕೃಷ್ಣ ದೇವರೇ ಎಂಬ ಬಗ್ಗೆ ವಿಶ್ಲೇಷಿಸುವವರು ಮೊದಲ ವರ್ಗದ ಭಕ್ತರಲ್ಲ. ಕೃಷ್ಣನ ಕುರಿತು ಸ್ವಪ್ರೇರಿತರಾಗಿ ಪ್ರೀತಿ ಉಳ್ಳವರೇ ಮೊದಲ ವರ್ಗದ ಭಕ್ತರು. ನಾವು ಕೃಷ್ಣನನ್ನು ಹೇಗೆ ವಿಶ್ಲೇಷಿಸುವುದು? ಅವನು ಅಪರಿಮಿತ. ಹೀಗಾಗಿ ಇದು ಅಸಾಧ್ಯ. ನಮ್ಮದು ಸೀಮಿತ ಗ್ರಹಿಕೆ, ಜ್ಞಾನ, ಅರಿವು. ನಮ್ಮ ಇಂದ್ರಿಯಗಳಿಗೂ ಸೀಮಿತ ಶಕ್ತಿ. ಇದರಿಂದಾಗಿ ನಾವು ಕೃಷ್ಣನನ್ನು ಹೇಗೆ ಅಧ್ಯಯನ ಮಾಡಲು ಸಾಧ್ಯ?  ಅದು ಸಾಧ್ಯವೇ ಇಲ್ಲ. ಕೃಷ್ಣನೇ ಒಂದಷ್ಟು ಹೊರಗೆಡಹಿದ್ದಾನೆ. ನಮಗೆ ಅಷ್ಟೇ ಸಾಕು.

ಊಹಾಪೋಹಗಳಿಂದ ದೇವರನ್ನು ಕಂಡುಹಿಡಿಯಲು ಪ್ರಯತ್ನಿಸುವ ಮಾಯಾವಾದಿ ತತ್ತ್ವಜ್ಞಾನಿಗಳಂತೆ ನಾವಾಗಬಾರದು. `ನೇತಿ ನೇತಿ’ ಎಂದವರು ಉಸುರುತ್ತಾರೆ. `ದೇವರು ಇದಲ್ಲ, ಅದಲ್ಲ’ ಎನ್ನುತ್ತಾರೆ. ಆದರೆ ದೇವರು ಏನೆಂಬುದು ಅವರಿಗೆ ಗೊತ್ತಿಲ್ಲ. ಲೌಕಿಕ ವಿಜ್ಞಾನಿಗಳು ಅಂತಿಮ ಕಾರಣ ಪತ್ತೆ ಹಚ್ಚುವ ಪ್ರಯತ್ನ ಮಾಡಿದರೂ ಅವರ ವಿಧಾನವೂ ಹಾಗೇ. ಅದೇ ಮಾತು ಪ್ರತಿಧ್ವನಿಸುತ್ತದೆ : `ಇದಲ್ಲ, ಅದಲ್ಲ’. ಪ್ರಗತಿ ಸಾಧಿಸುತ್ತ ಹೋದಂತೆ ಅವರು `ಇದಲ್ಲ, ಅದಲ್ಲ’ ಎಂದೇ ಪತ್ತೆ ಹಚ್ಚುತ್ತಾರೆ. ಅಂತಿಮ ಕಾರಣ ಅವರೆಂದೂ ಕಂಡುಹಿಡಿಯುವುದಿಲ್ಲ. ಅದು ಸಾಧ್ಯವಿಲ್ಲ.

ಕೃಷ್ಣನನ್ನು ಕಂಡುಕೊಳ್ಳುವ ವಿಷಯದಲ್ಲಿ ಲೌಕಿಕ ವಿಜ್ಞಾನಿಗಳನ್ನು ಕುರಿತು ಏನು ಹೇಳುವುದು? ಅವರು ಲೌಕಿಕ ವಸ್ತುಗಳನ್ನೇ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಚಂದ್ರನಲ್ಲಿಗೆ ಹೋಗುವ ಪ್ರಯತ್ನ ಮಾಡುತ್ತಾರೆ. ಅದೇನೆಂದು ವಾಸ್ತವವಾಗಿ ಅವರಿಗೆ ಗೊತ್ತಿಲ್ಲ. ಚಂದ್ರನೇನೆಂದು ಅವರಿಗೆ ಅರ್ಥವಾಗಿದ್ದರೆ ಅವರ್ಯ್ಕೆ ಹಾಗೆ ವಾಪಸು ಬರುತ್ತಾರೆ? ಚಂದ್ರನನ್ನು ಕುರಿತು ಪೂರ್ಣವಾಗಿ ತಿಳಿದುಕೊಂಡಿದ್ದರೆ ಈ ವೇಳೆಗೆ ಅವರಲ್ಲೇ ವಾಸಿಸುತ್ತಿದ್ದರು. ಕಳೆದ 20ವರ್ಷಗಳಿಂದ ಅಲ್ಲಿ ವಾಸಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಸುಮ್ಮನೆ ಹೇಳುತ್ತಾರೆ `ಇದಲ್ಲ, ಅದಲ್ಲ. ಅಲ್ಲಿ ಜೀವಿಗಳಿಲ್ಲ. ನಾವು ವಾಸಿಸುವ ಸಾಧ್ಯತೆಗಳಿಲ್ಲ’ ಎನ್ನುತ್ತಾರೆ. ಅಂದರೆ ಚಂದ್ರನಲ್ಲಿ ಏನಿಲ್ಲವೆಂದು ವರದಿ ಮಾಡಲು ಅವರಿಗೆ ಸಾಧ್ಯ, ಅಲ್ಲೇನಿದೆ ಎಂದು ಅವರಿಗೆ ಗೊತ್ತೆ? ಇಲ್ಲ, ಅವರಿಗೆ ತಿಳಿಯದು. ಇದು ಒಂದು ಗ್ರಹ ಅಥವಾ ನಕ್ಷತ್ರದ ಕಥೆ.

ವೇದಗಳ ಪ್ರಕಾರ ಚಂದ್ರನನ್ನು ನಕ್ಷತ್ರವೆಂದು ಪರಿಗಣಿಸಲಾಗುತ್ತದೆ. ನಕ್ಷತ್ರಗಳೆಲ್ಲ ಸೂರ್ಯ ಎಂಬುವುದು ವಿಜ್ಞಾನಿಗಳ ವಾದ. ಆದರೆ ಭಗವದ್ಗೀತೆ ಪ್ರಕಾರ, ನಕ್ಷತ್ರಗಳಿಗೆ ಚಂದ್ರನ ಲಕ್ಷಣಗಳಿವೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ : (10.21) ನಕ್ಷತ್ರಾಣಾಂ ಅಹಂ ಶಶಿ ಅಂದರೆ `ನಕ್ಷತ್ರಗಳಲ್ಲಿ ನಾನು ಚಂದ್ರ.’ ಹೀಗಾಗಿ ಚಂದ್ರನು ಅನೇಕ ನಕ್ಷತ್ರಗಳಂತೆ. ಚಂದ್ರನ ಸ್ವರೂಪ ಏನು? ಸೂರ್ಯನ ಬೆಳಕನ್ನು ಅದು ಪ್ರತಿಬಿಂಬಿಸುವುದರಿಂದ ಅದು ಪ್ರಕಾಶಮಾನವಾಗಿರುತ್ತದೆ. ಆದುದರಿಂದ ನಕ್ಷತ್ರಗಳು ಸೂರ್ಯ ಎಂದು ವಿಜ್ಞಾನಿಗಳು ಹೇಳಿದರೂ ನಾವು ಒಪ್ಪುವುದಿಲ್ಲ. ವೇದ ಲೆಕ್ಕಾಚಾರದ ಪ್ರಕಾರ ಅಸಂಖ್ಯ ಸೂರ್ಯ ಉಂಟು. ಆದರೆ ಒಂದು ವಿಶ್ವದಲ್ಲಿ ಒಂದು ಮಾತ್ರ.

ನಾವು ವಿಶ್ವದಲ್ಲಿ ಏನನ್ನು ನೋಡುತ್ತಿದ್ದೆವೆಯೋ ಅದು ಪರಿಪೂರ್ಣವಾಗಿ ಇಲ್ಲ. ನಮ್ಮ ಜ್ಞಾನವೂ ಪರಿಪೂರ್ಣವಾಗಿಲ್ಲ. ಎಷ್ಟು ನಕ್ಷತ್ರ, ಗ್ರಹಗಳಿವೆ ಎಂದು ಎಣಿಕೆ ಮಾಡಲಿ ನಮಗೆ ಸಾಧ್ಯವಿಲ್ಲ. ನಮ್ಮ ಸುತ್ತಲಿನ ಲೌಕಿಕ ವಸ್ತುಗಳನ್ನು ನಾವು ಪೂರ್ತಿ ಅರ್ಥಮಾಡಿಕೊಂಡಿಲ್ಲ. ಇನ್ನು ವಿಶ್ವ ಸೃಷ್ಟಿಕರ್ತ ದೇವೋತ್ತಮನನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳುವುದು ಸಾಧ್ಯ? ಅದು ಸಾಧ್ಯವಿಲ್ಲ. ಆದುದರಿಂದ ಬ್ರಹ್ಮ ಸಂಹಿತೆಯಲ್ಲಿ ಹೀಗೆ ಹೇಳಲಾಗಿದೆ  :

ಪಂಥಾಸ್ತು ಕೋಟಿ ಶತ ವತ್ಸರ ಸಂಪ್ರಗಮ್ಯೋ

ವಾಯೋರಥಾಪಿ ಮನಸೋ ಮುನಿ ಪುಂಗವಾನಾಮ್‌ ।

ಸೋಽಪ್ಯಸ್ತಿ ಯತ್‌ ಪ್ರಪದ ಸೀಮ್ನಿ ಅವಿಚಿಂತ್ಯ ತತ್ತ್ವೇ

ಗೋವಿಂದಮ್‌ ಆದಿಪುರುಷಂ ತಮಹಂ ಭಜಾಮಿ ॥

ಬಾಹ್ಯಾಕಾಶವು ಅಸೀಮ. ಮತ್ತು ಬ್ರಹ್ಮ ಸಂಹಿತೆ ಸೂಚಿಸುತ್ತದೆ : ಬಾಹ್ಯಾಕಾಶ ವಾಹನದಲ್ಲಿ ಗಾಳಿಯ ವೇಗದಲ್ಲಿ ಅಥವಾ ಮನಸ್ಸಿನ ವೇಗದಲ್ಲಿ ಲಕ್ಷಾಂತರ ವರ್ಷ ಯಾರಾದರೂ ಪ್ರಯಾಣಿಸಿದರೆ? ಮನಸ್ಸು ಅತ್ಯಂತ ಕ್ಷಿಪ್ರ ವೇಗದಲ್ಲಿ ಚಲಿಸುತ್ತದೆ ಎಂದು ಎಲ್ಲರಿಗೂ ಗೊತ್ತು. ಒಂದು ಕ್ಷಣದಲ್ಲಿ ಅದು ನಮ್ಮನ್ನು ಲಕ್ಷಾಂತರ ಮೈಲಿಗಳಾಚೆಗೆ ಒಯ್ಯಬಲ್ಲುದು. ಲಕ್ಷಾಂತರ ಮೈಲಿಗಳಾಚೆ ನಾವೇನಾದರೂ ನೋಡಿದರೆ ಮನಸ್ಸು ತತ್‌ಕ್ಷಣ ಅಲ್ಲಿಗೆ ಹೋಗಬಲ್ಲುದು. ಮುನಿಪುಂಗವರು, ಶ್ರೇಷ್ಠ ವಿಜ್ಞಾನಿಗಳು, ವಿದ್ವಾಂಸರು ರೂಪಿಸಿದ ವಾಹನಗಳಲ್ಲಿ, ಅದೇ ವೇಗದಲ್ಲಿ ನಾವು ಪ್ರಯಾಣಿಸಿದರೂ ಅದು ಪರಿಪೂರ್ಣವಾಗದು. ಬ್ರಹ್ಮ ಸಂಹಿತೆ ಹೇಳುತ್ತದೆ : ಸೋಽಪ್ಯಸ್ತಿ ಯತ್‌ ಪ್ರಪದ ಸೀಮ್ನಿ ಅವಿಚಿಂತ್ಯ ತತ್ತ್ವೇ. ನಮ್ಮ ಗ್ರಹಿಕೆಗೆ, ಕಲ್ಪನೆಗೆ ಈ ವಿಶ್ವ ಇನ್ನೂ ನಿಲುಕುವುದಿಲ್ಲ.  ಇವೆಲ್ಲವೂ ಕೃಷ್ಣನ ಸೃಷ್ಟಿ. ಆದುದರಿಂದ ನಾವು ಕೃಷ್ಣನನ್ನು ಅಧ್ಯಯನ ಮಾಡುವುದು ಹೇಗೆ ಸಾಧ್ಯ? ಕೃಷ್ಣ ಸೃಷ್ಟಿಯ ವಸ್ತುಗಳನ್ನೇ ಅರ್ಥಮಾಡಿಕೊಳ್ಳಲಾಗದಿದ್ದರೆ ನಾವು ಹೇಗೆ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಸಾಧ್ಯ? ಅದು ಸಾಧ್ಯವೇ ಇಲ್ಲ.

ಆದುದರಿಂದ ವೃಂದಾವನದ ಮನೋಧರ್ಮವು ಭಕ್ತರಿಗೆ ಪರಿಪೂರ್ಣ ಮನಸ್ಥಿತಿಯಂತಿದೆ. ವೃಂದಾವನದ ವಾಸಿಗಳಿಗೆ ಕೃಷ್ಣನನ್ನು ಅರ್ಥಮಾಡಿಕೊಳ್ಳುವತ್ತ ಲಕ್ಷ್ಯವಿಲ್ಲ. ಪ್ರತಿಯಾಗಿ ಕೃಷ್ಣನನ್ನು ಬೇಷರತ್ತಾಗಿ ಪ್ರೀತಿಸುವುದೇ ಅವರಿಗೆ ಬೇಕಾಗಿರುವುದು. `ಕೃಷ್ಣನು ದೇವರು, ಹಾಗಾಗಿ ಅವನನ್ನು ಪ್ರೀತಿಸುತ್ತೇನೆ’ ಎಂದೇನು ಅವರು ಯೋಚಿಸುವುದಿಲ್ಲ. ವೃಂದಾವನದಲ್ಲಿ ಕೃಷ್ಣನು ದೇವರಂತೇನೂ ಇರುವುದಿಲ್ಲ. ಅವನದು ಸಾಮಾನ್ಯ ಗೋಪ ಬಾಲಕನ ಬದುಕು. ಆದರೂ ಅನೇಕ ಬಾರಿ ಅವನು ದೇವ ಸರ್ವೋತ್ತಮನೆಂದು ಸಾಬೀತು ಪಡಿಸಿದ್ದರೂ ಭಕ್ತರಿಗೆ ಅದೆಲ್ಲಾ ಲಕ್ಷ್ಯವಿಲ್ಲ.

ಕುಂತಿದೇವಿಯು ವೃಂದಾವನ ವಾಸಿಯಲ್ಲ. ಹೊರಗಿನ ಹಸ್ತಿನಾಪುರ ವಾಸಿ. ವೃಂದಾವನ ವಾಸಿಗಳೆಷ್ಟು ಶ್ರೇಷ್ಠರೆಂದು ಅರಿಯಲು ಅಧ್ಯಯನಕ್ಕಾಗಿ ಈ ಹೊರಗಿನವರು ಮುಂದಾಗುತ್ತಾರೆ. ಆದರೆ ಕೃಷ್ಣನೆಷ್ಟು ಶ್ರೇಷ್ಠ ಎಂಬುದರತ್ತ ವೃಂದಾವನ ವಾಸಿಗಳಿಗೆ ಲಕ್ಷ್ಯವಿಲ್ಲ. ಇದೇ ಅವರಿಬ್ಬರ ನಡುವಣ ವ್ಯತ್ಯಾಸ. ಹೀಗಾಗಿ ನಮ್ಮ ದೃಷ್ಟಿ ಸುಮ್ಮನೆ ಕೃಷ್ಣನನ್ನು ಪ್ರೀತಿಸುವುದು. ನಾವು ಕೃಷ್ಣನನ್ನು ಹೆಚ್ಚು ಪ್ರೀತಿಸುತ್ತಾ ಹೋದರೆ ನಾವು ಹೆಚ್ಚು ಪರಿಪೂರ್ಣರಾಗುತ್ತೇವೆ. ಕೃಷ್ಣನನ್ನು ಅರ್ಥ ಮಾಡಿಕೊಳ್ಳುವುದು ಅಥವಾ ಅವನು ಹೇಗೆ ಸೃಷ್ಟಿಸುತ್ತಾನೆ ಎಂಬುದರ ಅಗತ್ಯವಿಲ್ಲ. ಭಗವದ್ಗೀತೆಯಲ್ಲಿ ಕೃಷ್ಣನೇ ವಿವರಿಸಲೆತ್ನಿಸಿದ್ದಾನೆ. ಅದಕ್ಕಿಂತ ಹೆಚ್ಚಾಗಿ ಏನೂ ಬೇಕಾಗಿಲ್ಲ. ಕೃಷ್ಣನನ್ನು ಅರ್ಥಮಾಡಿಕೊಳ್ಳಲು ನಾವು ಪರಿತಪಿಸಬೇಕಾಗಿಲ್ಲ. ಅದು ಸಾಧ್ಯವೂ ಇಲ್ಲ. ನಾವು ನಮ್ಮ ಪ್ರತಿಫಲಾಪೇಕ್ಷೆ ಇಲ್ಲದ ಕೃಷ್ಣನನ್ನು ಕುರಿತ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬೇಕು. ಅದೇ ಬದುಕಿನ ಪರಿಪೂರ್ಣತೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi