ಸಂಕೀರ್ತನ ಯಶೋಗಾಥೆಗಳು
ಕಲಿಯುಗದಲ್ಲಿ ಭಗವಂತನನ್ನು ಹೊಂದಲು ಅತಿ ಸುಲಭ ಮಾರ್ಗ ಸಂಕೀರ್ತನೆ. ನಾಮಜಪಕ್ಕಿಂತಲೂ ಇಂದಿನ ಕಾಲದಲ್ಲಿ ಪುಸ್ತಕ ಸಂಕೀರ್ತನೆ ಹೆಚ್ಚು ಫಲ ನೀಡುತ್ತದೆ. ಆದ್ದರಿಂದ ಪುಸ್ತಕಗಳನ್ನು ಹಂಚುವುದು ಅತ್ಯಂತ ಪವಿತ್ರಕಾರ್ಯ. ನಾಮಜಪ ಮಾಡುವವರು ಸುತ್ತಮುತ್ತಲಿನ ಜನರ ಮೇಲೆ ಆ ಕ್ಷಣದ ಪರಿಣಾಮ ಉಂಟುಮಾಡಿದರೆ ಪುಸ್ತಕಗಳು ಜನರನ್ನು ಚಿಂತನೆಗೆ ಹಚ್ಚಿ ಅವರ ಭಾವವನ್ನು ಉದ್ದೀಪನೆಗೊಳಿಸುತ್ತವೆ. ಇದು ಶ್ರೀಲ ಪ್ರಭುಪಾದರ ಅಭಿಮತ.

ಪ್ರಭುಪಾದರಿಂದ ಪ್ರೇರಿತರಾದ ಇಟಲಿಯ ಭಕ್ತರು 1973-74ರಲ್ಲಿ ಮೊದಲಬಾರಿಗೆ ಸಂಕೀರ್ತನ ಕಾರ್ಯಕ್ರಮ ಆಯೋಜಿಸಿದ್ದರು. ಮುಂದೆ 1977ರ ಅವರ ಪುಸ್ತಕ ಸಂಕೀರ್ತನೆ ಹೊಸ ದಾಖಲೆಯನ್ನೇ ಬರೆಯಿತು. ಭಕ್ತರು ದಿನವೊಂದಕ್ಕೆ 80 ರಿಂದ 100 ದೊಡ್ಡ ಪುಸ್ತಕಗಳನ್ನು ಮಾರಲು ತೊಡಗಿದ್ದರು. ಅಂದು ಆರಂಭವಾದ ಅವರ ಓಟ ಇಂದಿಗೂ ಅದೇ ಓಟದಲ್ಲಿ ಸಾಗಿದೆ.
ಇಟಲಿಯ ಪುಸ್ತಕ ಸಂಕೀರ್ತನ ಕುರಿತು ಲೀಲಾವತಾರ ದಾಸರು ಹೀಗೆ ಹೇಳುತ್ತಾರೆ.
1977ರ ಭಾರೀ ಓಟದ ಅನಂತರ ನಾವು ಹೆಚ್ಚು ಹೆಚ್ಚು ಪುಸ್ತಕಗಳನ್ನು ವಿತರಿಸಲು ಸಾಧ್ಯವಾಯಿತು. ಬಹಳಷ್ಟು ವೇಳೆ ನಾವು ಬೇಸಿಗೆಯಲ್ಲಿ 2 ತಿಂಗಳು ಮತ್ತು ಚಳಿಗಾಲದಲ್ಲಿ 4 ತಿಂಗಳು ಕಾಲ ಸಂಕೀರ್ತನೆಯನ್ನು ಆಯೋಜಿಸುತ್ತಿದ್ದೆವು. ಪುಸ್ತಕ ವಿತರಣೆಯಿಂದಲೇ ಇಟಲಿಯಲ್ಲಿ ನಮ್ಮ ಹರೇ ಕೃಷ್ಣ ಆಂದೋಲನವನ್ನು ವ್ಯಾಪಕಗೊಳಿಸಲು ಸಾಧ್ಯವಾಗಿದ್ದು.
ಅದರಿಂದ ಭಕ್ತರ ಸಂಖ್ಯೆಯೂ ಹೆಚ್ಚಿತು ಮತ್ತು ಸಾರ್ವಜನಿಕರಲ್ಲಿ ಸದಭಿಪ್ರಾಯ ಮೂಡಲು ಕಾರಣವಾಯ್ತು. ಈ ಪವಿತ್ರ ಉಪದೇಶಾತ್ಮಕ ಪುಸ್ತಕಗಳನ್ನು ಜನರು ಓದಿ ಅರ್ಥೈಸಿಕೊಳ್ಳಲಾರಂಭಿಸಿದರು. ಧಾರ್ಮಿಕ ಮತ್ತು ರಾಜಕೀಯ ಮುಖಂಡರು ನಮ್ಮ ಪುಸ್ತಕಗಳ ಬಗ್ಗೆ ಅಲ್ಲಲ್ಲಿ ಪ್ರಸ್ತಾಪಿಸಿದರು.
ಶ್ರೀಲ ಪ್ರಭುಪಾದರ ವ್ಯಕ್ತಿತ್ವ ಇಟಲಿಯ ಪಂಡಿತವರ್ಗವನ್ನು ಸೆಳೆಯಿತು. ಇವೆಲ್ಲದರ ಪರಿಣಾಮವಾಗಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯ ಜನರು ನಮ್ಮ ಪುಸ್ತಕಗಳನ್ನು ಓದಲಾರಂಭಿಸಿದರು. ಕೆಲವರಂತು ಒಮ್ಮೆಯೂ ದೇವಾಲಯಕ್ಕೆ ಭೇಟಿ ನೀಡಿದೆ ನಾಮಜಪ ಮಾಡತೊಡಗಿದರು!

ಈಗ ನಮ್ಮ ಪುಸ್ತಕಗಳನ್ನು ಶಾಲೆಗಳಲ್ಲಿ ಪಠ್ಯ ಪುಸ್ತಕವಾಗಿ ಬಳಸುತ್ತಾರೆ. ಕೆಲವು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳಿಗೆ ನಮ್ಮ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಶ್ರೀಲ ಪ್ರಭುಪಾದರ ಪುಸ್ತಕಗಳು ಬೀರಿರುವ ಪರಿಣಾಮವನ್ನಂತೂ ವರ್ಣಿಸಲೇ ಆಗದು. ಸಂಕೀರ್ತನೆಯೂ ವಿಶ್ವಾದ್ಯಂತ ಜನರನ್ನು ಪರಿವರ್ತಿಸುವಲ್ಲಿ ಸಫಲವಾಗಿದೆ.
ಎಲ್ಲ ಜನಾಂಗಗಳ ನಡುವೆ ಶಾಂತಿ- ಸೌಹಾರ್ದಗಳು ನೆಲೆಸುವಂತಾಗುವ ಸುವರ್ಣಯುಗ, ಈ ಕಲಿಯುಗದಲ್ಲೂ ಮೂಡಿ ಬರಲು ಇದರಿಂದ ಸಾಧ್ಯವಾಗುತ್ತದೆ.
ವ್ಯಕ್ತಿಗತವಾದ ಸಂಕೀರ್ತನ, ಸಾಧನೆಗಳು ಹೇಗೆ ವಿಶ್ವವ್ಯಾಪಿ ಪರಿಣಾಮ ಬೀರಬಲ್ಲದು ಎನ್ನುವುದಕ್ಕೆ ಅತ್ಯುತ್ತಮ ನಿದರ್ಶನವಲ್ಲವೇ ಇದು?
ಕಲಿಯ ಅಟ್ಟಹಾಸ ಅಡಗಿಸಲು ಉತ್ತಮ ಆಯುಧವೆಂದರೆ ಅದು ಪುಸ್ತಕ ವಿತರಣೆಯೊಂದೇ. ಹೆಚ್ಚು ಹೆಚ್ಚು ಜ್ಞಾನವನ್ನು ಹಂಚಬೇಕು. ಹೆಚ್ಚು ಹೆಚ್ಚು ಭಕ್ತಿಯನ್ನು ಬಿತ್ತಬೇಕು. ಜಗತ್ತಿಗೀಗ ಕೃಷ್ಣಾಂದೋಲನದ ಮಹತ್ತು ಅರ್ಥವಾಗುತ್ತಿದೆ.
– ಶ್ರೀಲ ಪ್ರಭುಪಾದರು, 23 ನವೆಂಬರ್ 1976ರಲ್ಲಿ ಬಲವಂತದಾಸರಿಗೆ ಬರೆದ ಪತ್ರ.






Leave a Reply