ಕರಿಘಟ್ಟ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ

ಶ್ರೀನಿವಾಸ ನೆಲೆಸಿರುವ ಪುರಾಣ ಪ್ರಸಿದ್ಧವಾದ ಈ ಕರಿಘಟ್ಟವು ಸೇವೆ ಮಾಡುವ ಭಕ್ತರ ಸರ್ವ ಸಂಕಷ್ಟಗಳನ್ನು ನಾಶಮಾಡಿ ಅಭೀಷ್ಟಗಳನ್ನು ಕೊಡುವ ಒಂದು ಅತ್ಯಂತ ಪವಿತ್ರವಾದ ಸ್ಥಳವಾಗಿದೆ.

ಲಂಕಾಪಟ್ಟಣಕ್ಕೆ ಹೋಗಿ ರಾವಣನನ್ನು ಸಂಹರಿಸಿ ಸೀತಾಮಾತೆಯನ್ನು ಕರೆತರಲು ದಕ್ಷಿಣ ಸಮುದ್ರಕ್ಕೆ ಸೇತುವೆ ಕಟ್ಟುವ ಸಂದರ್ಭ. ಸುಗ್ರೀವನು ದೊಡ್ಡ ಬೆಟ್ಟವನ್ನೇ ಸೇತುವೆ ಕಟ್ಟಲು ತರಬೇಕೆಂದು ಶೇಷಾಚಲ (ತಿರುಮಲೆ)ಕ್ಕೆ ಅಂಟಿಕೊಂಡಿದ್ದ ಕರಿಘಟ್ಟವನ್ನೇ ಕಿತ್ತು ತರುತ್ತಿದ್ದಾಗ, ವಿಷ್ಣುಭಕ್ತರು ಅವನನ್ನು ತಡೆದು `ಈ ಬೆಟ್ಟವು ನೀಲಾಚಲ, ಇದನ್ನು ಸೇತುವೆಗೆ ಉಪಯೋಗಿಸುವುದು ತರವಲ್ಲ’ ಎಂದು ಹೇಳಿದಾಗ, ಸುಗ್ರೀವ ಈ ಮಾತನ್ನು ಕೇಳಿ ಭಯಗ್ರಸ್ತನಾಗಿ ತಾನು ಹೊತ್ತು ತಂದಿದ್ದ ನೀಲಾಚಲ ಬೆಟ್ಟವನ್ನು ಅಲ್ಲಿಯೇ ಬಿಟ್ಟು ಹೊರಟು ಹೋದ.

ಭೃಗು ಮಹರ್ಷಿಗಳ ಪತ್ನಿ `ಖ್ಯಾತಿ’ಯು ಮಗನ ಮೇಲಿನ ವ್ಯಾಮೋಹದಿಂದ, ರಾಕ್ಷಸರಲ್ಲಿ ಅತ್ಯಂತ ಪ್ರೀತಿ ತೋರಿಸುತ್ತಿದ್ದುದ್ದರಿಂದ ಶ್ರೀ ಹರಿಯು ಸುದರ್ಶನ ಚಕ್ರದಿಂದ ಆಕೆಯ ತಲೆಯನ್ನು ಕತ್ತರಿಸಿದನು. ಪತ್ನಿಯ ವಿಯೋಗವನ್ನು ತಾಳಲಾರದೆ ಭೃಗುಋಷಿಗಳು ಶ್ರೀಹರಿಗೆ ಭೂಮಿಯಲ್ಲಿ ಹುಟ್ಟಿ ಪತ್ನಿ ವಿಯೋಗದಿಂದ ದುಃಖ ಹೊಂದುವ ಶಾಪವಿತ್ತರು. ಈ ಶಾಪ ಕೊಟ್ಟಿದ್ದಕ್ಕಾಗಿ ವ್ಯಥೆಹೊಂದಿ, ಪಶ್ಚಾತ್ತಾಪದಿಂದ ಈ ನೀಲಾಚಲದಲ್ಲಿ ಅಶ್ವತ್ಥ ವೃಕ್ಷ ಒಂದರ ಕೆಳಗೆ ನೆಲೆಸಿ ಘೋರವಾದ ತಪಸ್ಸನ್ನಾಚರಿಸಿ ಶ್ರೀ ಲಕ್ಷ್ಮೀ ನರಸಿಂಹನನ್ನು ಪ್ರತ್ಯಕ್ಷ ಮಾಡಿಕೊಂಡರು.

ಸಿಂಹವಕ್ತ್ರನ ಆದೇಶದಂತೆ ಭೃಗುಋಷಿಗಳು ತಪಸ್ಸು ಮಾಡಿ ಶ್ರೀ ಶ್ರೀನಿವಾಸನನ್ನು ಪ್ರಸನ್ನೀಕರಿಸಿಕೊಂಡು ಪಾಪ ಪರಿಹಾರ ಹೊಂದಿದ್ದಲ್ಲದೆ ಭಕ್ತರಿಗೆ ದರ್ಶನ ಕೊಡಲು ಈ ಶಿಖರದಲ್ಲಿ ನೆಲಸುವಂತೆ ಪ್ರಾರ್ಥಿಸಿದರು. ಈ ಬೇಡಿಕೆಯನ್ನು ಮನ್ನಿಸಿ ಇಂದಿಗೂ ಶ್ರೀ ಶ್ರೀನಿವಾಸನು ಭಕ್ತರ ಸೇವೆಗೆ ಒಲಿದು ಸರ್ವಾಭೀಷ್ಟಗಳನ್ನು ಕೊಡುತ್ತಾ ವೈಭವೋಪೇತವಾಗಿ ಮೆರೆಯುತ್ತಿದ್ದಾನೆ.

ಅತ್ರಿ ಪುತ್ರನಾದ `ಚಂದ್ರ’ನು ಬೃಹಸ್ಪತಿಯ ಪತ್ನಿ ತಾರೆಯನ್ನು ಮೋಹಿಸಿ, ಆ ಪಾಪದ ಹೊರೆಯನ್ನು ಕಳೆದುಕೊಳ್ಳಲು ಪಶ್ಚಿಮವಾಹಿನಿಯಲ್ಲಿ ನಿಂತು ಘೋರ ತಪಸ್ಸನ್ನು ಮಾಡಿ, ನೀಲಾಚಲವನ್ನು ಪ್ರತಿನಿತ್ಯವೂ ದರ್ಶನ ಮಾಡುತ್ತಿದ್ದುದರಿಂದ, ಈ ನೀಲಾಚಲವು ಪಾಪ ಪರಿಹಾರಕ್ಕೆ ಕಾರಣವಾಯಿತೆಂದು ಪದ್ಮ ಪುರಾಣವು ಹೇಳುತ್ತದೆ.

ಬೋಧಾಯನ ಋಷಿಗಳು ಇಲ್ಲಿ ದೊಡ್ಡ ತಪಸ್ಸನ್ನು ಮಾಡಿ ಬೋಧಾಯನ ಧರ್ಮಸೂತ್ರಗಳನ್ನು ರಚಿಸಲು ಸಾಮರ್ಥ್ಯವನ್ನು ಪಡೆದರು. ವೈಖಾನಸ ಮಹಾಮುನಿಗಳು 24ನೇ ತ್ರೇತಾಯುಗದಲ್ಲಿ ಶ್ರೀನಿವಾಸನಿಗೆ ಪ್ರಪ್ರಥಮವಾಗಿ ರಥಾರೋಹಣ ಮಾಡಿಸಿ ವೈಭವವಾಗಿ ಉತ್ಸವ ಮಾಡಿಸಿದರು. ಅಂದಿನಿಂದ ಈ ರಥೋತ್ಸವವು ನಡೆದುಕೊಂಡು ಬರುತ್ತಿದೆ.

ಕರಿಘಟ್ಟ ವೆಂಕಟರಮಣ ದೇವಸ್ಥಾನವು ಶ್ರೀರಂಗಪಟ್ಟಣದಿಂದ ಸುಮಾರು 7 ಕಿ.ಮೀ. ದೂರದಲ್ಲಿದೆ. ಶ್ರೀರಂಗಪಟ್ಟಣ-ಬೆಂಗಳೂರು ರಸ್ತೆಯಲ್ಲಿ ಸುಮಾರು 4 ಕಿ.ಮೀ. ಪ್ರಯಾಣಿಸಿ, ಬಾಬುರಾಯನ ಕೊಪ್ಪಲಿನ ಬಳಿಕ ವೆಲ್ಲೆಸ್ಲಿ ಸೇತುವೆ ದಾಟಿ ಬಲಕ್ಕೆ ತಿರುಗಿ ಸುಮಾರು 3 ಕಿ.ಮೀ. ಸಾಗಿದರೆ ಕರಿಘಟ್ಟ ಸಿಗುತ್ತದೆ. ಬೆಟ್ಟದ ತಪ್ಪಲಿನಲ್ಲಿ ಎಡಭಾಗಕ್ಕೆ ಏರುರಸ್ತೆಯಲ್ಲಿ ಸುಮಾರು ಎರಡು ಕೀ.ಮಿ. ಏರುತ್ತಾ ಸಾಗಬೇಕಷ್ಟೇ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi