ಭುವಿಗೆ ಬೆಳಕು ನೀಡಿದ ಕೃಷ್ಣನ ಎರಡು ಲೀಲೆಗಳು
-ಡಾ|| ಕೆ.ವೈ.ಬಾಲರಾಜ್
ಕಾರ್ತಿಕ ಮಾಸ ವೆಂದರೆ ಶ್ರೀಕೃಷ್ಣನು ಬಾಲ ಲೀಲೆಗಳಿಗೆ ಸಾಕ್ಷಿಯಾದ, ವೃಂದಾವನದ ಪವಿತ್ರ ಭೂಮಿಯ ಮೇಲೆ ಬಹು ಸಂಭ್ರಮದ ಕಾಲ. 64 ಚದರ ಮೈಲಿ ವಿಸ್ತೀರ್ಣ ಹೊಂದಿರುವ ವೃಂದಾವನದ ಈ ಪವಿತ್ರ ಭೂಮಿಯ ಮೇಲೆ ಸುಮಾರು 5,000 ದೇವಾಲಯಗಳಿವೆ.

ಈ ದೇವಾಲಯಗಳಲ್ಲಿ ಕಾರ್ತಿಕ ಮಾಸದಲ್ಲಿ ಹಬ್ಬದ ಸಡಗರ. ಆಗ ಸಾವಿರಾರು ವೈವಿಧ್ಯಮಯ ಭಕ್ತರು ಇಲ್ಲಿ ಸೇರುತ್ತಾರೆ. ಕಾರ್ತಿಕ ಮಾಸದ ಪ್ರತಿ ದಿನ ಸಾಯಂಕಾಲದಲ್ಲಿ ಎಲ್ಲ ದೇವಾಲಯಗಳಲ್ಲೂ ನೂರಾರು ದೀಪಗಳನ್ನು ಬೆಳಗಿಸಿ ಅಲಂಕರಿಸುತ್ತಾರೆ. ಈ ದೀಪಗಳ ಬೆಳಕು ವೃಂದಾವನದ ಭೂಮಿಯಷ್ಟೇ ಅಲ್ಲ ಇಡೀ ವೃಂದಾವನ ನಿವಾಸಿಗಳ ಮನೆ, ಮನಗಳನ್ನೂ ಬೆಳಗುತ್ತದೆ.
ಈ ಕಾರ್ತಿಕ ಮಾಸದ ದೀಪೋತ್ಸವ ಚಳಿಗಾಲದ ಹುಣ್ಣಿಮೆಯ ದಿನದಿಂದ ಪ್ರಾರಂಭವಾಗುತ್ತದೆ. ಈ ಆಚರಣೆಯು ಶ್ರೀಕೃಷ್ಣನ ಪ್ರಮುಖವಾದ ಎರಡು ಬಾಲ ಲೀಲೆಗಳನ್ನು ಒಳಗೊಂಡಿದೆ. ಮೊದಲನೆಯದು ತಾಯಿ ಯಶೋದೆಯು ಬಾಲಕೃಷ್ಣನನ್ನು ಮರದ ಕಂಬಕ್ಕೆ (ಒನಕೆ) ಕಟ್ಟಿಹಾಕಿದ್ದು. ಒಂದು ಸಲ ತಾಯಿ ಯಶೋಧೆಯು ಕೃಷ್ಣನನ್ನು ಉಪೇಕ್ಷೆ ಮಾಡಿರುತ್ತಾಳೆ.
ಈ ಸಿಟ್ಟಿನಿಂದ ಬಾಲಕ ಹೋಗಿ ಒಂದು ಮೊಸರು ಗಡಿಗೆಯನ್ನು ಒಡೆದು ಹಾಕುತ್ತಾನೆ. ಇದರಿಂದ ಕೋಪಗೊಂಡ ತಾಯಿ ಯಶೋದೆ ಕೃಷ್ಣನನ್ನು ಮರದ ಕಂಬಕ್ಕೆ ಕಟ್ಟಿ ಹಾಕಲು ನಿಶ್ಚಯಿಸುತ್ತಾಳೆ. ಅವಳಿಗೆ ಎರಡು ಬೆರಳಿನಷ್ಟು ಅಳತೆಯ ಹಗ್ಗ ಕಡಿಮೆ ಬೀಳುತ್ತದೆ. ಆಕೆ ಒಳಗೆ ಹೋಗಿ ಹಗ್ಗವನ್ನು ತರುತ್ತಾಳೆ. ಪುನಃ ಸ್ವಲ್ಪ ಹಗ್ಗ ಕಡಿಮೆ ಬೀಳುತ್ತದೆ. ಹೀಗೆ ಪುನಃ ಪುನಃ ಹಗ್ಗ ತರುವುದು, ಅದು ಕಡಿಮೆಯಾಗುವುದು ಆಗುತ್ತಲೇ ಇರುತ್ತದೆ. ತಾಯಿ ಯಶೋಧೆ ಓಡಾಡಿ ಬಹಳ ದಣಿಯುತ್ತಾಳೆ.
ಕೃಷ್ಣನಿಗೆ ತಾಯಿಯ ಬಗ್ಗೆ ಕರುಣೆ ಉಕ್ಕಿ ಬಂದು ತಾನು ಕಂಬಕ್ಕೆ ಹಗ್ಗದಿಂದ ಕಟ್ಟಿಸಿಕೊಳ್ಳಲು ಸಿದ್ಧನಾಗುತ್ತಾನೆ. ಇಲ್ಲಿ ಹಗ್ಗದ ಅಳತೆಯು ಸರಿ ಹೋಗಿ ಯಶೋಧೆಯು ಕೃಷ್ಣನನ್ನು ಕಂಬಕ್ಕೆ ಬಿಗಿಯುತ್ತಾಳೆ. ದೇವೋತ್ತಮ ಪರಮ ಪುರುಷನಾದ ಕೃಷ್ಣನ ಮನ ಸೆಳೆಯುವ ಈ ಬಾಲ ಲೀಲೆಯಿಂದಾಗಿ ಅವನಿಗೆ ದಾಮೋದರ ಎಂಬ ಹೆಸರು ಬಂದಿದೆ. ದಾಮೋದರ ಎಂದರೆ ಹೊಟ್ಟೆಯನ್ನು (ಮೈಯನ್ನು) ಹಗ್ಗದಿಂದ ಬಿಸಿಸಿಕೊಂಡವನು ಎಂದರ್ಥ.
ಕುರುವಂಶದ ಪಿತಾಮಹನಾದ ಭೀಷ್ಮನು ಕುರುಕ್ಷೇತ್ರ ಯುದ್ಧದ ಕೊನೆಯ ಹಂತದಲ್ಲಿ ಬಾಣಗಳ ಹಾಸಿಗೆ (ಶರಶಯ್ಯೆ) ಮೇಲೆ ಮಲಗಿದ ಸಮಯದಲ್ಲಿ ಶ್ರೀಕೃಷ್ಣನ ಬಾಲ ಲೀಲೆಗಳನ್ನು ಸ್ಮರಿಸಿಕೊಂಡು ತನ್ನ ಬಳಿಯಿದ್ದವರಿಗೂ ಈ ಅದ್ಭುತವಾದ ಕೃಷ್ಣ ಲೀಲೆಯನ್ನು ವಿವರಿಸುತ್ತಾನೆ. ಕೃಷ್ಣನ ಭಯದ ಕಣ್ಣುಗಳು, ಕೃಷ್ಣನು ಯಶೋಧೆಗೆ ಹೆದರಿಕೊಂಡು ಭಯದಿಂದ ನಿಂತಿದ್ದು, ತಾಯಿ ಯಶೋಧೆ ಅವನನ್ನು ಹಗ್ಗದಿಂದ ಮರದ ಕಂಬಕ್ಕೆ ಕಟ್ಟಿದ್ದು ಈ ಎಲ್ಲ ದೃಶ್ಯಗಳು ಭೀಷ್ಮನ ಕಣ್ಮುಂದೆ ಹಾದು ಹೋಗುತ್ತವೆ.
ಈ ಒಂದು ಕೃಷ್ಣ ಬಾಲ ಲೀಲೆಯ ಕಥನವು ಎಲ್ಲರಿಗೂ ಪ್ರೀತಿ ಪಾತ್ರವಾಗಿದೆ. ಇಡೀ ವೃಂದಾನವದ ನಿವಾಸಿಗಳು ಕೃಷ್ಣನ ಬಾಲ ಲೀಲೆಯನ್ನು ಸ್ಮರಿಸಿಕೊಂಡು ಪೂರ್ಣ ಕಾರ್ತಿಕ ಮಾಸದ ಸಂಜೆಯ ಸಮಯದಲ್ಲಿ ದೇವಾಲಯಗಳಲ್ಲಿ ಸಾವಿರಾರು ದೀಪಗಳನ್ನು ಬೆಳಗಿಸುವುದರ ಮೂಲಕ ಸಂಭ್ರಮಿಸುತ್ತಾರೆ.

ವೃಂದಾವನ ನಿವಾಸಿಗಳಿಗೆ ಶಕ್ತಿ ತುಂಬಿದ ಕೃಷ್ಣನ ಮತ್ತೊಂದು ಬಾಲ ಲೀಲೆ ಇದೆ. ಅದೆಂದರೆ ಶ್ರೀ ಕೃಷ್ಣನು ಇಂದ್ರನ ಕ್ರೋಧದಿಂದ ವೃಂದಾನವದ ನಿವಾಸಿಗಳನ್ನು ಸಂರಕ್ಷಿಸಲು ಗೋವರ್ಧನ ಗಿರಿಯನ್ನು ತನ್ನ ಕಿರು ಬೆರಳಿನಲ್ಲಿ ಎತ್ತಿದ್ದು. ಆ ಕಾಲದಲ್ಲಿ ವೃಂದಾವನ ನಿವಾಸಿಗಳು ಪ್ರತಿ ವರ್ಷವೂ ಇಂದ್ರನನ್ನು ಸಂತೃಪ್ತಿಪಡಿಸಲು ಯಾಗ-ಯಜ್ಞಾದಿಗಳನ್ನು ಆಚರಿಸುತ್ತಿದ್ದರು. ಒಮ್ಮೆ ಕೃಷ್ಣನು ಈ ಆಚರಣೆಯನ್ನು ನಿಲ್ಲಿಸಿದನು. ಇದರಿಂದ ಕ್ರೋಧಕೊಂಡ ಇಂದ್ರನು ಇಡೀ ವೃಂದಾವನವೇ ಕೊಚ್ಚಿ ಹೋಗುವಂತೆ ಪ್ರಳಯದಂತಹ ಮಳೆಯನ್ನು ಸುರಿಸಿದನು.
ಕೃಷ್ಣನು ತನ್ನು ಕಿರು ಬೆರಳಿನಲ್ಲಿ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಸತತವಾಗಿ ಏಳು ದಿನಗಳವರೆಗೆ ವೃಂದಾವನದ ಎಲ್ಲ ವಾಸಿಗಳನ್ನು, ಪಶು ಪ್ರಾಣಿಗಳಿಗೆಲ್ಲಾ ಆಶ್ರಯ ನೀಡಿ ಇಂದ್ರನ ಅಟ್ಟಹಾಸವನ್ನು ತಡೆದನು. ನಿರಂತರವಾಗಿ ಏಳು ದಿನಗಳು ಕೃಷ್ಣನು ಈ ರೀತಿ ನಿಂತಿದ್ದನ್ನು ನೋಡಿ ಇಂದ್ರನಿಗೆ ಕೃಷ್ಣನೇ ದೇವೋತ್ತಮ ಪರಮ ಪುರುಷ ಮತ್ತು ಎಲ್ಲ ಜೀವಿಗಳ ಸಂರಕ್ಷಕ ಎಂಬ ನಿಜಾಂಶವು ತಿಳಿಯಿತು.
ಶ್ರೀಕೃಷ್ಣನು ಎಲ್ಲ ಜೀವನಗಳ ಪರಮ ಸಂರಕ್ಷಕನಾಗಿದ್ದಾನೆ. ಪ್ರತಿಯೊಬ್ಬರಿಗೂ ಅವನೊಬ್ಬನೇ ಆಶ್ರಯ. ಅವನನ್ನು ಅಜಿತನೆಂದು ಕೂಡ ಕರೆಯುತ್ತಾರೆ. ಅಂದರೆ ಯಾರೂ ಅವನನ್ನು ಜಯಿಸಲು ಸಾಧ್ಯವಿಲ್ಲ ಎಂದರ್ಥ. ಆದರೂ ಕೃಷ್ಣನನ್ನು ಅವನ ಭಕ್ತನು ಪರಮ ಪ್ರೀತಿಯಿಂದ ಮಾತ್ರ ಗೆಲ್ಲಬಹುದು. ಕೃಷ್ಣನು ತನ್ನ ಕಿರುಬೆರಳಿನಿಂದ ಗೋವರ್ಧನ ಗಿರಿಯನ್ನು ಎತ್ತಲು ಶಕ್ತನಾಗಿದ್ದನು ಮತ್ತು ತಾಯಿ ಯಶೋಧೆ ತನ್ನನ್ನು ಕಂಬಕ್ಕೆ ಕಟ್ಟಿ ಹಾಕಿದ್ದರೂ ಸುಮ್ಮನಿದ್ದನು.
ಕೃಷ್ಣನ ಪ್ರೀತಿಯ ಮತ್ತು ಆತ್ಮೀಯ ಪಿತೃರೂಪದ ವ್ಯಕ್ತಿತ್ವವನ್ನು ಈ ಸುಂದರ ಲೀಲೆಗಳು ಸಾಬೀತುಪಡಿಸುತ್ತವೆ. ‘ದೇವರು ದೊಡ್ಡವನು’, ‘ಸ್ವರ್ಗದಲ್ಲಿ ದೇವರು ಪ್ರೀತಿಸುವ ತಂದೆಯಾಗಿದ್ದಾನೆ’ ಎಂಬ ಹೇಳಿಕೆಗಳು ಇವೆ. ಕೃಷ್ಣನು ಎಷ್ಟು ದೊಡ್ಡವನು, ಭಕ್ತರನ್ನು ಎಷ್ಟು ಪ್ರೀತಿಸುತ್ತಾನೆ ಎಂಬುದನ್ನು ಅವನ ಲೀಲೆಗಳ ಮೂಲಕ ಇಲ್ಲೇ ಅರ್ಥಮಾಡಿಕೊಳ್ಳಬಹುದು.
ಕೃಷ್ಣನು ಇಲ್ಲಿ ನಿರಾಕಾರ ಶಕ್ತಿಯೂ ಅಲ್ಲ, ಅಥವಾ ನಿರಾಕಾರ ಶಕ್ತಿಯನ್ನು ಪ್ರತಿನಿಧಿಸುವ ವ್ಯಕ್ತಿಯೂ ಅಲ್ಲ. ಕೃಷ್ಣನು ಕೂಡ ಅತ್ಯಂತ ಸಹಜ ಭಾವನೆಯುಳ್ಳ ಒಬ್ಬ ನಿಜವಾದ ವ್ಯಕ್ತಿ ಸ್ವರೂಪ (ಸಾಕಾರ)ದವನು. ಇನ್ನು ಕೃಷ್ಣನ ವ್ಯಕ್ತಿತ್ವವನ್ನೇ ಪಕ್ಕಕ್ಕಿಟ್ಟು ಭಗವದ್ಗೀತಾ ಸಾರವನ್ನು ವಿವರಿಸಲು ಹೋದರೆ ಅದೊಂದು ಮೌಢ್ಯವೆನ್ನದೇ ವಿಧಿಯಿಲ್ಲ.
ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ತಂದೆ, ತಾಯಿ, ಮಕ್ಕಳು, ಸ್ನೇಹಿತ ಗಂಡ, ಹೆಂಡತಿ ಎಂಬ ಸಂಬಂಧಗಳ ಆಕರ್ಷಣೆಯಿದೆ. ಪ್ರತಿದಿನವೂ ಪ್ರತಿಯೊಬ್ಬರ ಸಂಬಂಧಗಳಲ್ಲಿಯೂ ರಸವತ್ತಾದ ಆನಂದದ ಅನುಭವವನ್ನು ಪಡೆಯುತ್ತೇವೆ. ಈ ಎಲ್ಲದರ ಮೂಲ ಪರಮ ಅಂತಿಮ ಸತ್ಯವಾಗಿರುವುದರಿಂದ ತಾರ್ಕಿಕವಾಗಿ ಈ ಭಾವನೆಗಳು ಪರಮ ಸತ್ಯದಲ್ಲಿವೆ.

ಈ ತರಹದ ಭಾವನೆಗಳು ಪರಮ ಸತ್ಯದಲ್ಲಿರುವುದರಿಂದ ಈ ಪರಮ ಸತ್ಯ ಸಾಕಾರ ರೂಪ ಅಂದರೆ ವ್ಯಕ್ತಿ ಸ್ವರೂಪವಾಗಿರಲೇಬೇಕು. ಏಕೆ೦ದರೆ ಮನುಷ್ಯನಿಗೆ ಭಾವನೆಗಳಿವೆ ಮತ್ತು ಸಂಬಂಧಗಳ ಆಕರ್ಷಣೆಗಳೂ ಇವೆ. ವೇದ ಶಾಸ್ತ್ರಗಳ ಪ್ರಕಾರ ಅಂತಿಮ ಪರಮ ಸತ್ಯದಿಂದ ಎಲ್ಲವೂ ಉಗಮವಾಗುತ್ತವೆ. ಅದು ಕೃಷ್ಣನಲ್ಲದೆ ಬೇರೇ ಏನೂ ಅಲ್ಲ. ಇದನ್ನು ಶ್ರೀಕೃಷ್ಣನು ತನ್ನ ಎರಡೂ ಲೀಲೆಗಳಲ್ಲಿ ಸ್ಪಷ್ಟವಾಗಿ ತೋರಿಸಿದ್ದಾನೆ.
ದೇವೋತ್ತಮ ಪರಮ ಸತ್ಯ ಕೃಷ್ಣನೊಂದಿಗೆ ನಮ್ಮ ಸಂಬಂಧಗಳನ್ನು ಹರಿಸಿ ಅದನ್ನು ನಾವು ಪೂರ್ಣ ಪ್ರಮಾಣದಲ್ಲಿ ಅನುಭವಿಸಬಹುದು. ಆದರೆ ಈ ಐಹಿಕ ಜಗತ್ತಿನ ಸಂಬಂಧದಲ್ಲಿ ನಾವು ಒಂದು ರೀತಿ ವಿಫಲತೆ ಅಥವಾ ನಿರಾಶೆ ಪಡೆಯುತ್ತೇವೆ. ಶ್ರೀಕೃಷ್ಣನು ಶ್ರೇಷ್ಠವಾದ ಅಪರಿಮಿತವಾದ ಗುಣಗಳ ಒಂದು ಜಲಾಶಯ.
ಅವನ ಸಂಬಂಧದಲ್ಲಿ ನಮ್ಮ ನಿರೀಕ್ಷೆಗಳು ಬಯಕೆಗಳೆಲ್ಲವೂ ಸಂತೃಪ್ತಗೊಳ್ಳುತ್ತವೆ. ಈ ಐಹಿಕ ಜಗತ್ತಿನಲ್ಲಿ ಯಾವುದೇ ಸಂಬಂಧವು ಒಂದು ಬಹುದೊಡ್ಡ ನಿರೀಕ್ಷೆಯಿಂದ ಆರಂಭವಾಗುತ್ತದೆ. ಆ ಸಂಬಂಧಗಳ ಹತ್ತಿರ ಹತ್ತಿರ ಹೋಗುತ್ತಿದ್ದಂತೆ ವ್ಯಕ್ತಿಗಳಲ್ಲಿರುವ ದೋಷಗಳೆಲ್ಲವೂ ಗೋಚರವಾಗಿ ನಮ್ಮ ಸಂಬಂಧಗಳೆಲ್ಲವೂ ತಮ್ಮ ಸತ್ವವನ್ನೇ ಕಳೆದುಕೊಳ್ಳುತ್ತವೆ.
ಇವೆಲ್ಲವೂ ಬದುಕಿನ ಆಶಾಭಂಗಗಳಾಗುತ್ತವೆ. ಆದರೆ ಈ ಸಂಬಂಧಗಳ ಅನ್ವೇಷಣೆ ಮಾತ್ರ ಸಾಯುವುದಿಲ್ಲ. ಆದ್ದರಿಂದಲೇ ನಾವು ಜನ್ಮ ಜನ್ಮದಲ್ಲೂ ಅಲೆದಾಡುತ್ತಾ ಹೊಸ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುತ್ತಾ ನಮ್ಮ ನಿರೀಕ್ಷೆಗಳನ್ನು ಪೂರ್ಣಗೊಳಿಸಿಕೊಳ್ಳಲು ಹೋರಾಡುತ್ತೇವೆ. ಕೃಷ್ಣನೊಂದಿಗೆ ನಾವು ಕಳೆದುಕೊಂಡಿರುವ ಈ ಸಂಬಂಧಗಳನ್ನು ಕಂಡುಕೊಳ್ಳುವುದರಿಂದ ಮಾತ್ರ ನಮ್ಮ ಅನ್ವೇಷಣೆ ಪೂರ್ಣಗೊಳ್ಳುತ್ತದೆ.
ಈ ಮೇಲಿನ ಈ ಎರಡು ಲೀಲೆಗಳಿಂದ ನಮಗೆ ತಿಳಿದು ಬರುವುದೇನೆಂದರೆ ವೃಂದಾವನದ ನಿವಾಸಿಗಳು ತಮ್ಮ ರಕ್ಷಣೆಗಾಗಿ ಕೃಷ್ಣನ ಬಳಿಗೆ ಬಂದಾಗ ಕೃಷ್ಣ ಅವರ ಕೈ ಬಿಡಲಿಲ್ಲ ಮತ್ತು ಯಶೋಧೆ ಜೊತೆಗಿರುವ ತನ್ನ ಮಾತೃ ವಾತ್ಸಲ್ಯ ಸಂಬಂಧದಲ್ಲಿಯೂ ಕೂಡ ಆಕೆಯನ್ನು ಕೈ ಬಿಡಲಿಲ್ಲ. ಆದ್ದರಿಂದ ಈ ಐಹಿಕ ಜಗತ್ತಿನಲ್ಲಿ ನಮ್ಮ ಆಸೆಯನ್ನು ತೃಪ್ತಿಗೊಳಿಸುವ ಬದಲು ಕೃಷ್ಣನಲ್ಲಿ ನಮ್ಮ ಸಂಬಂಧವನ್ನು ಪುನರ್ ಸ್ಥಾಪಿಸಿ ಅಪರಿಮಿತವಾದ ಆನಂದವನ್ನು ಪಡೆಯುವುದು ಒಳ್ಳೆಯದು.






Leave a Reply