ದೊರೆಯ ಸಂಕಟ

ಹದಿನಾರನೆಯ ಶತಮಾನದಲ್ಲಿ ಬಂಗಾಳದ ಮುಸ್ಲಿಂ ದೊರೆ ನವಾಬ್‌ ಹುಸೇನ್‌ ಶಾಗೆ ತನ್ನ ಮಂತ್ರಿ ಮಂಡಲದ ಇಬ್ಬರು ಪ್ರತಿಭಾವಂತರು ತಮ್ಮ ಸ್ಥಾನ ತೊರೆದಾಗ ಆಘಾತ ಉಂಟಾಯಿತು. ಅವರಿಬ್ಬರೂ ಆಗಷ್ಟೇ ಪ್ರಾರಂಭವಾದ ಹರೇ ಕೃಷ್ಣ ಆಂದೋಲನದಲ್ಲಿ ಸಕ್ರಿಯರಾದರು.

ಬಂಗಾಳವನ್ನು ಕ್ರಿಸ್ತ ಶಕ 1509 ರಿಂದ 1532ವರೆಗೆ ಆಳಿದ ನವಾಬ್‌ ಹುಸೇನ್‌ ಶಾನ ಮಂತ್ರಿ ಮಂಡಲದಲ್ಲಿ ಇಬ್ಬರು ತಜ್ಞ ಮತ್ತು ವಿಶ್ವಸನೀಯ ಸದಸ್ಯರಿದ್ದರು. ಅವರು ದಬೀರ್‌ ಕಾಸ್‌ ಮತ್ತು ಸಾಕರ್‌ ಮಲ್ಲಿಕ್‌ ಎಂಬ ಸೋದರರು. ಕುಲೀನ ಕರ್ನಾಟಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಈ ಸೋದರರನ್ನು ನವಾಬನು ತನ್ನ ಮಂತ್ರಿ ಮಂಡಲಕ್ಕೆ ನೇಮಕ ಮಾಡಿಕೊಂಡು ಅವರಿಗೆ ಮುಸ್ಲಿಂ ಹೆಸರನ್ನು ನೀಡಿದನು. ಅವರು ಹಿಂದೂ ರೀತಿ ರಿವಾಜುಗಳನ್ನು ಬಿಟ್ಟು ಮುಸ್ಲಿಮರ ಉಡುಗೆ ಮತ್ತು ಪದ್ಧತಿಗಳನ್ನು ಅಳವಡಿಸಿಕೊಳ್ಳುವುದನ್ನು ನೋಡಿ ತೃಪ್ತನಾದನು.

ಸಚಿವಾಲಯದ ಜವಾಬ್ದಾರಿಯನ್ನು ಹೊತ್ತುಕೊಂಡು ಆಡಳಿತದ ಕರ್ತವ್ಯಗಳಿಂದ ನವಾಬನನ್ನು ಮುಕ್ತಗೊಳಿಸಿದ ಈ ಸೋದರರು ಅವನ ವಿಶ್ವಾಸಕ್ಕೆ ಪಾತ್ರರಾದರು. ಅತಿ ಶೀಘ್ರದಲ್ಲಿ ಅವರು ಬಂಗಾಳದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳಾದರು. ಬಂಗಾಳದ ಹಿಂದೂ ಸಮುದಾಯವು ಸೋದರರ ಯಶಸ್ಸನ್ನು ಕಡೆಗಣಿಸಿತ್ತು. ಮುಸ್ಲಿಮರು ಕೆಳ ಜಾತಿ ಅಥವಾ ಜಾತಿಭ್ರಷ್ಟರಷ್ಟೇ ಅಲ್ಲ, ಮಾಂಸ ಭಕ್ಷಕರು ಮತ್ತು ಗೋಹಂತಕರು ಎಂದು ಹಿಂದೂ ಮುಖಂಡರು ಸಾರಿದರು. ಅವರೊಂದಿಗೆ ಆಕಸ್ಮಿಕವಾಗಿ ಕೂಡ ಬೆರೆಯುವುದು ಖಂಡನಾರ್ಹ ಮತ್ತು ಬಹಿಷ್ಕಾರಕ್ಕೆ ಕಾರಣವಾಗುವಂತಹುದು. ದಬೀರ್‌ ಕಾಸ್‌ ಮತ್ತು ಸಾಕರ್‌ ಮಲ್ಲಿಕ್‌ ಎಂದು ಕರೆಸಿಕೊಳ್ಳುವ ಈ ಸೋದರರು ನವಾಬನಲ್ಲಿ ಉದ್ಯೋಗವನ್ನು ಸ್ವೀಕರಿಸಿದ್ದರಿಂದ ಸ್ವತಃ ತಮ್ಮ ಬಹಿಷ್ಕಾರಕ್ಕೆ ಆಗ್ರಹಪಡಿಸಿದರು. ಅವರ ಅಪರಾಧಕ್ಕೆ ಇನ್ನಾವ ಶಿಕ್ಷೆಯೂ ಅರ್ಹವಾಗದು.

ತಮ್ಮ ಟೀಕಾಕಾರರನ್ನು ಸಮಾಧಾನಪಡಿಸುವ ಮಾರ್ಗ ತಿಳಿಯದೆ ಮತ್ತು ಗೌರವಾನ್ವಿತ ಹಿಂದೂಗಳಾಗಿ ತಮ್ಮ ಸ್ಥಾನಮಾನವನ್ನು ಮರಳಿ ಪಡೆಯಲು ಸೋದರರು ಅತ್ಯಂತ ದೈನ್ಯದಿಂದ ಮತ್ತು ವೇದನೆಯಿಂದ ಜಗನ್ನಾಥ ಪುರಿಯಲ್ಲಿದ್ದ ಶ್ರೀ ಚೈತನ್ಯ ಮಹಾಪ್ರಭುಗಳಿಗೆ ಮಾರ್ಗದರ್ಶನ ಕೋರಿ ಅನೇಕ ರಹಸ್ಯ ಪತ್ರಗಳನ್ನು ಬರೆದರು. ಅವರ ಆಧ್ಯಾತ್ಮಿಕ ಸಂಕಷ್ಟಗಳನ್ನು ಪರಿಹರಿಸಲು ತಾವು ಬರುವುದಾಗಿ ಶ್ರೀ ಚೈತನ್ಯರು ಭರವಸೆ ನೀಡಿದರು. ಅದರಂತೆ ಅವರು 1513ರಲ್ಲಿ, ವೃಂದಾವನಕ್ಕೆ ಹೋಗುವ ಮಾರ್ಗದಲ್ಲಿ ರಾಮಕೇಲಿಗೆ ಬಂದರು. ಇದು ಬಂಗಾಳದ ಗಡಿಯಲ್ಲಿ, ಗಂಗಾ ನದಿಯ ತೀರದಲ್ಲಿರುವ ಈ ಸೋದರರ ಸುಂದರ ಗ್ರಾಮ.

ಅಸಂಖ್ಯ ಜನರು ರಾಮಕೇಲಿಯ ರಸ್ತೆಗಳಲ್ಲಿ ಹರೇ ಕೃಷ್ಣ ಮಂತ್ರವನ್ನು ಜಪಿಸುತ್ತ ಮತ್ತು ನರ್ತಿಸುತ್ತ ಶ್ರೀ ಚೈತನ್ಯ ಮಹಾಪ್ರಭುಗಳೊಂದಿಗೆ ಸೇರಿಕೊಂಡರು. ಇದು ಹಿಂದೂ ಮತ್ತು ಮುಸ್ಲಿಂ ನಾಯಕರಿಗೆ ಆತಂಕ ಉಂಟುಮಾಡಿತು. ಮಹಾಪ್ರಭುವಿನ ಈ ಭೇಟಿಗೆ ಏನು ಸಂದರ್ಭವೆಂದು ಅವರು ಯೋಚಿಸತೊಡಗಿದರು. ಶ್ರೀ ಚೈತನ್ಯ ಮಹಾಪ್ರಭುಗಳನ್ನು ಹಿಂದೂ ಪ್ರವಾದಿ ಎಂದು ಶ್ಲಾಘಿಸಿದ ನವಾಬನು, ಅವರನ್ನು ಅವರಪಾಡಿಗೆ ಬಿಡಬೇಕೆಂದು ತನ್ನ ಅಧಿಕಾರಿಗಳಿಗೆ ಆದೇಶಿಸಿದನು. ಆದರೆ ಅವನು ಸ್ವಲ್ಪ ಮುಂಗೋಪಿಯಾಗಿದ್ದನು. ಅನೇಕ ಹಿಂದೂ ನಾಯಕರಿಗೆ ಶ್ರೀ ಚೈತನ್ಯರು ಬ್ರಾಹ್ಮಣರ ಜಾತಿ ಪದ್ಧತಿ ವಿರುದ್ಧದ ಕ್ರಾಂತಿಯನ್ನು ಉತ್ತೇಜಿಸಿದ ಪ್ರವಾದಿ ಎಂಬ ಭಾವನೆಯಷ್ಟೇ ಇತ್ತು. ಶ್ರೀ ಚೈತನ್ಯರೊಂದಿಗಿನ ಗುಂಪಿನಲ್ಲಿ ಜಪಿಸುತ್ತ ಮತ್ತು ನರ್ತಿಸುತ್ತಿದ್ದವರಲ್ಲಿ ಮುಸ್ಲಿಮರು ಮತ್ತು ಅಸ್ಪೃಶ್ಯರೂ ಇದ್ದರು. ಗೋಹತ್ಯೆಗೈಯುವ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ ಹರಿದಾಸ ಠಾಕೂರರು ಮಹಾಪ್ರಭುಗಳ ಹರೇ ಕೃಷ್ಣ ಆಂದೋಲನದ ಆಂತರಿಕ ವಲಯದ ಸದಸ್ಯರಾಗಿದ್ದರು.

ರಾಮಕೇಲಿಯಲ್ಲಿದ್ದ ಮಹಾಪ್ರಭುಗಳ ಭಕ್ತರು ಮತ್ತು ಮಿತ್ರರು ಅಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಗ್ರಹಿಸಿ ಮಹಾಪ್ರಭುಗಳ ಭದ್ರತೆ ಬಗೆಗೆ ಆತಂಕಗೊಂಡರು. ಅವರ ಪ್ರೀತಿಯ ಕೋರಿಕೆಯನ್ನು ಗೌರವಿಸಿ ಮತ್ತು ತಮ್ಮ ಪ್ರತಿಯೊಂದು ಹೆಜ್ಜೆಯನ್ನೂ ಹಿಂಬಾಲಿಸುತ್ತಿದ್ದ ಜನರ ಗುಂಪಿನಿಂದಾಗುತ್ತಿದ್ದ ಅನನುಕೂಲವನ್ನು ಗಮನಿಸಿ ಶ್ರೀ ಚೈತನ್ಯರು ತಮ್ಮ ವೃಂದಾವನ ಯಾತ್ರೆಯನ್ನು ಮುಂದೂಡಿ ಪುರಿಗೆ ಹಿಂದಿರುಗಿದರು. ಜನ ಜೀವನವು ಮಾಮೂಲು ಸ್ಥಿತಿಗೆ ಮರಳಿದ್ದರಿಂದ ನವಾಬನು ಮತ್ತು ಹಿಂದೂ ಮುಖಂಡರು ನೆಮ್ಮದಿಯ ನಿಟ್ಟುಸಿರುಬಿಟ್ಟರು.

ಸೋದರರ ರಾಜೀನಾಮೆ

ಕೆಲವೇ ತಿಂಗಳುಗಳ ಅನಂತರ ನವಾಬರ ಶಕ್ತಿಯಾಗಿದ್ದ ದಬೀರ್‌ ಕಾಸ್‌ ಮತ್ತು ಸಾಕರ್‌ ಮಲ್ಲಿಕ್‌ ಅವರು ಮಾಯವಾದರೆಂಬ ವಾರ್ತೆಯು ಬಂಗಾಳವನ್ನು ನಡುಗಿಸಿತು. ದಬೀರ್‌ ಕಾಸ್‌ ಹಠಾತ್ತನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸಂಗ್ರಹವಾಗಿದ್ದ ತಮ್ಮ ವರಮಾನದ ಚಿನ್ನದ ನಾಣ್ಯಗಳನ್ನು ಎರಡು ದೊಡ್ಡ ದೋಣಿಗಳಲ್ಲಿ ತುಂಬಿ ಹೊರಟ ಅವರು ಹೆಚ್ಚೂ ಕಮ್ಮಿ ಅದೆಲ್ಲವನ್ನೂ ತಮ್ಮ ಬಂಧುಗಳು ಮತ್ತು ಧಾರ್ಮಿಕ ದತ್ತಿ ಸಂಸ್ಥೆಗಳಿಗೆ ಹಂಚಿಬಿಟ್ಟರು.

ಸಾಕರ್‌ ಮಲ್ಲಿಕ್‌ ಕೂಡ ರಾಜೀನಾಮೆ ಸಲ್ಲಿಸಲು ಕೋರಿದರು. ಆದರೆ ನವಾಬನು ಅದನ್ನು ನಿರಾಕರಿಸಿದಾಗ ಅವರು ಅನಾರೋಗ್ಯ ದಾಖಲೆಗಳನ್ನು ನೀಡಿ ಮನೆಯಲ್ಲಿಯೇ ಉಳಿದರು. ನೆರೆ ರಾಜ್ಯವಾದ ಒರಿಸ್ಸಾದ ಮೇಲೆ ದಾಳಿ ನಡೆಸಲು ಯೋಜಿಸಿದ್ದ ನವಾಬನಿಗೆ ತನ್ನ ರಾಜ್ಯವನ್ನು ನಿರ್ಲಕ್ಷಿಸಲು ಸಾಕರ್‌ ಮಲ್ಲಿಕ್‌ಗೆ ಅವಕಾಶ ನೀಡುವ ಮನಸ್ಥಿತಿ ಇರಲಿಲ್ಲ. ಅನಾರೋಗ್ಯ ದಾಖಲೆಗಳ ಬಗೆಗೆ ಶಂಕಿತನಾದ ನವಾಬನು ಸಾಕರ್‌ ಮಲ್ಲಿಕ್‌ ಮನೆಗೆ ಭೇಟಿ ನೀಡಿದನು. ಅಲ್ಲಿ ಅವನು ಮಲ್ಲಿಕ್‌ ಆರೋಗ್ಯದಿಂದ ಇರುವುದಲ್ಲದೆ ಆನಂದದಿಂದ ಶ್ರೀಮದ್‌ ಭಾಗವತವನ್ನು ಓದುತ್ತಿರುವುದನ್ನು ಕಂಡನು. ಇದು ಹಿಂದೂ ಪ್ರವಾದಿ ಶ್ರೀ ಚೈತನ್ಯರ ಪ್ರಭಾವದಿಂದ ಎಂಬುವುದು ನವಾಬನಿಗೆ ಅರಿವಾಯಿತು.

ಮುಂಗೋಪಿಯಾದ ನವಾಬನು ಮೊದಲು ಮೃದು ಮಾತಿನಿಂದಲೇ ಕೆಲಸಕ್ಕೆ ಹಿಂದಿರುಗುವಂತೆ ಮಲ್ಲಿಕ್‌ ಅವರನ್ನು ಓಲೈಸಲು ಪ್ರಯತ್ನಿಸಿದನು. ಅದು ವಿಫಲವಾದಾಗ ಅವನು ಅವರನ್ನು ಸೆರೆಮನೆಗೆ ತಳ್ಳಿದನು. ಅನಂತರ ಒರಿಸ್ಸಾವನ್ನು ಜಯಿಸಲು ತೆರಳಿದನು. ನವಾಬನ ಗೈರುಹಾಜರಿಯಲ್ಲಿ ಮಲ್ಲಿಕ್‌ ಜೈಲಿನಿಂದ ಪರಾರಿಯಾದರು. ಜೈಲರನ ಪ್ರಕಾರ ಅವರು ಗಂಗಾ ನದಿಯಲ್ಲಿ ಮುಳುಗಿದರು.

ಆದರೆ ಮುಳುಗುವುದು ಒಂದು ತಂತ್ರವಾಗಿತ್ತು. ಸಾಕರ್‌ ಅವರು ಜೈಲರನಿಗೆ ಹತ್ತು ಸಾವಿರ ಚಿನ್ನದ ನಾಣ್ಯದ ಲಂಚ ನೀಡಿದ್ದರು. ದಬೀರ್‌ ಕಾಸ್‌ ತುರ್ತು ಕಾಲಕ್ಕೆಂದು ಈ ನಾಣ್ಯಗಳನ್ನು ಇಟ್ಟಿದ್ದರು. ಸೋದರರು ಶ್ರೀ ಚೈತನ್ಯರನ್ನು ಸೇರಿಕೊಳ್ಳಲು ಯಾರಿಗೂ ತಿಳಿಯದಂತೆ ಅಲ್ಲಿಂದ ಹೊರಟು ಹೋದರು. ಮಹಾಪ್ರಭುಗಳು ಅವರಿಬ್ಬರನ್ನೂ ವೃಂದಾವನಕ್ಕೆ ಕಳುಹಿಸಿದರು. ರಾಮಕೇಲಿಗೆ ಶ್ರೀ ಚೈತನ್ಯರು ಭೇಟಿ ನೀಡಿದ್ದಾಗ ಸೋದರರು ನವಾಬನ ಕಣ್ಣಿಗೆ ಬೀಳದಂತೆ ಮಾರುವೇಷದಲ್ಲಿ, ಮಧ್ಯರಾತ್ರಿಯಲ್ಲಿ ನಗರವನ್ನು ದಾಟಿ ಮಹಾಪ್ರಭುಗಳನ್ನು ಕಂಡಿದ್ದರು. ಆಗ ಮಹಾಪ್ರಭುಗಳು ಹೇಳಿದರು, “ಎಲ್ಲರೂ ನಾನು ರಾಮಕೇಲಿ ಗ್ರಾಮಕ್ಕೆ ಏಕೆ ಬಂದಿರುವೆನೆಂದು ಕೇಳುತ್ತಾರೆ. ನಿಮ್ಮಿಬ್ಬರನ್ನು ನೋಡಲೆಂದೇ ನಾನು ಬಂದೆ.”

ವೃಂದಾವನದಲ್ಲಿ …

ಶ್ರೀ ಚೈತನ್ಯರು ಅವರಿಬ್ಬರಿಗೂ ದೀಕ್ಷೆ ನೀಡಿ ತಮ್ಮ ಹರೇ ಕೃಷ್ಣ ಆಂದೋಲನದಲ್ಲಿ ಬರಮಾಡಿಕೊಂಡರು. ಅವರಿಗೆ ಈಗ ರೂಪ ಮತ್ತು ಸನಾತನ ಎಂದು ನಾಮಕರಣ ಮಾಡಿದರು. ಹೀಗೆ ದಬೀರ್‌ ಕಾಸ್‌ ರೂಪ ಗೋಸ್ವಾಮಿಯಾದರು ಮತ್ತು ಸಾಕರ್‌ ಮಲ್ಲಿಕ್‌ ಸನಾತನ ಗೋಸ್ವಾಮಿಯಾದರು. ಅವರಿಬ್ಬರೂ ತಮ್ಮ ತೌರೂರಿನಲ್ಲಿ ಸಂಪತ್ತು, ಕುಟುಂಬ, ಮಿತ್ರರು ಮತ್ತು ಅಸೀಮಿತ ಪ್ರಭಾವವನ್ನು ಬಿಟ್ಟು ಬಂದಿದ್ದರು. ಅಲ್ಲದೆ, ಮಾಮೂಲು ಹಿಂದೂ ಸಮಾಜಕ್ಕೆ ಮರಳುವ ಯಾವುದೇ ಚಿಂತನೆಯನ್ನು ಅವರು ಶಾಶ್ವತವಾಗಿ ಬದಿಗೊತ್ತಿದರು. ಇವೆಲ್ಲವೂ ಪವಿತ್ರ ಸ್ಥಳದಲ್ಲಿ ಶ್ರೀ ಚೈತನ್ಯರ ಸೇವೆ ಸಲ್ಲಿಸಲೆಂದು.

ವೃಂದಾವನದಿಂದ ವರದಿಗಳು ಬರುತ್ತಿದ್ದವು. ಸೋದರರು ಕೇಶ ಮುಂಡನ ಮಾಡಿಸಿಕೊಂಡು ಹಣೆಯಲ್ಲಿ ತಿಲಕ ಧಾರಣೆ ಮಾಡಿಕೊಂಡರು, ತಮ್ಮ ಸರಕಾರಿ ದಿನಗಳ ಉತ್ತಮ ರೇಷ್ಮೆ ವಸ್ತ್ರಗಳನ್ನು ತ್ಯಜಿಸಿ ಹರಿದ ವಸ್ತ್ರಗಳನ್ನು ಧರಿಸುತ್ತಿದ್ದರು. ತಂಗಲು ನಿಖರ ನೆಲೆ ಇಲ್ಲದೆ ಮರಗಳ ಕೆಳಗೆ ಮಲಗುತ್ತಿದ್ದರು. ಪ್ರತಿ ರಾತ್ರಿ ಒಂದೊಂದು ಮರದ ಆಶ್ರಯದಲ್ಲಿ ಇರುತ್ತಿದ್ದರು. ಅವರು ಅಲ್ಪ ಆಹಾರವನ್ನು ಬೇಡುತ್ತಿದ್ದರು ಮತ್ತು ಒಣ ರೊಟ್ಟಿ ಹಾಗೂ ಕಡಲೆಯನ್ನು ಮಾತ್ರ ತಿನ್ನುತ್ತಿದ್ದರು. ಅವರು ಮಲಗುವುದೇ ಅಪರೂಪವಾಗಿತ್ತು. ಸ್ವಇಚ್ಛೆಯಿಂದ ಸ್ವೀಕರಿಸಿದ ಈ ಕಠಿಣ ಜೀವನ ಕ್ರಮದಲ್ಲಿ ಅವರು ಅತ್ಯಂತ ಸಂತೋಷದಿಂದ ವೃಂದಾವನದಾದ್ಯಂತ ಕೃಷ್ಣನ ಪವಿತ್ರನಾಮಗಳನ್ನು ಜಪಿಸುತ್ತ ನರ್ತಿಸುತ್ತ ಭಾವಪರವಶರಾಗುತ್ತಿದ್ದರು. ಅಪೌರುಷೇಯ ಧರ್ಮ ಗ್ರಂಥಗಳನ್ನು ಪರಿಶೀಲಿಸಲು ಹೊಂದಿದ್ದ ಪಾಂಡಿತ್ಯವನ್ನು ಬಳಸಿಕೊಂಡು ಅವರು (ಅವರು ಪರ್ಷನ್‌, ಅರೇಬಿಕ್‌ ಮತ್ತು ಸಂಸ್ಕೃತದಲ್ಲಿ ಪರಿಣತರಾಗಿದ್ದರು) ಶಾಶ್ವತ, ಸರ್ವವ್ಯಾಪಿ ಧಾರ್ಮಿಕ ತತ್ತ್ವವನ್ನು ಸ್ಥಾಪಿಸಲು ಗ್ರಂಥಗಳನ್ನು ರಚಿಸುತ್ತಿದ್ದರು.

ಈ ಸೋದರರು ಅದು ಹೇಗೆ ಧರ್ಮದ ಬಗೆಗೆ ಮಾತನಾಡುತ್ತಾರೆ ಎಂದು ಇತ್ತ ಬಂಗಾಳದಲ್ಲಿ ಮುಸ್ಲಿಂ ಮತ್ತು ಹಿಂದೂ ಬಾಂಧವರಿಬ್ಬರಿಗೂ ಅಚ್ಚರಿ ಉಂಟಾಯಿತು. ದಬೀರ್‌ ಕಾಸ್‌ ಮತ್ತು ಸಾಕರ್‌ ಮಲ್ಲಿಕ್‌ ಮೊದಲು ಹಿಂದೂಗಳಾಗಿ ತಮ್ಮ ಸ್ಥಾನವನ್ನು ಕಳೆದುಕೊಂಡರು, ಅನಂತರ ನವಾಬನಿಗೂ ಕೂಡ ಸಿಟ್ಟು ಉಂಟುಮಾಡಿದರು. ಧಾರ್ಮಿಕ ವ್ಯಕ್ತಿಗಳಾರೂ ಕೂಡ ಅವರನ್ನು ಗಂಭೀರವಾಗಿ ಪರಗಣಿಸುವುದಿಲ್ಲ ಎಂಬುವುದು ಅವರಿಗೆ ತಿಳಿಯದೇ? ಶ್ರೀಮಂತ ವೈಭವದ ಮತ್ತು ಪ್ರತಿಷ್ಠಿತ ಜೀವನ ನಡೆಸಿದ್ದ ಇವರು ಎಷ್ಟು ಕಾಲ ಸರಳ ಬೈರಾಗಿಗಳಾಗಿ ಬದುಕುವರು? ಶ್ರೀ ಚೈತನ್ಯ ಮಹಾಪ್ರಭುಗಳ ಪಂಥವು ಯೌವನ ಅಥವಾ ಮಧ್ಯಮ ವಯಸ್ಸಿನ ಸಮಸ್ಯೆಗಳಿಂದ ಸ್ಥೈರ್ಯ ಕುಂದಿದವರಿಗೆ ತಾತ್ಕಾಲಿಕವಾಗಿ ಆಕರ್ಷಿತವಾಗಬಹುದು. ತಮ್ಮ ಹಿಂದೂ ಜನ್ಮಹಕ್ಕನ್ನು ಕಳೆದುಕೊಂಡು ಈ ಸೋದರರಿಗೆ ಆಘಾತವಾಗಿದೆ, ನಿಜ. ಆದರೆ ಎಲ್ಲರ ಜೀವನವೂ ಕೇಂದ್ರೀಕೃತವಾಗಿರುವ ಪರಂಪಾನುಗತವಾದ ಮನೆ, ಕುಟುಂಬ, ದೇಶ ಮತ್ತು ವೃತ್ತಿಯ ಗುರುತಿಸುವಿಕೆಯ ಸ್ಥಾನವನ್ನು ಅಂತಿಮವಾಗಿ ಯಾವುದೂ ಬದಲಿಸುವುದು ಸಾಧ್ಯವಿಲ್ಲ. ಕಾಲ ಕ್ರಮೇಣ, ದಬೀರ್‌ ಕಾಸ್‌ ಮತ್ತು ಸಾಕರ್‌ ಮಲ್ಲಿಕ್‌ ಅವರೂ ಅನಿವಾರ್ಯವಾಗಿ ಸ್ಥಿರವಾದ ಮತ್ತು ಏರುಮುಖದ ವೃತ್ತಿಗೆ ಹಿಂದಿರುಗುವರು ಎಂದುಕೊಂಡರು.

ಆದರೂ ವರ್ಷಗಳು ಉರುಳಿದಂತೆ ದಬೀರ್‌ ಕಾಸ್‌ ಮತ್ತು ಸಾಕರ್‌ ಮಲ್ಲಿಕ್‌ ವೃಂದಾವನದಲ್ಲಿಯೇ ಆನಂದದಿಂದ ಬರೆಯುತ್ತ ಮತ್ತು ಶ್ರೀ ಚೈತನ್ಯರ ಬೋಧನೆಯನ್ನು ಬೋಧಿಸುತ್ತ ಇದ್ದರು. ಇತ್ತ, ಸೋದರರು ರಾಜೀನಾಮೆ ನೀಡಿದ್ದ ಸ್ಥಾನಗಳಿಗೆ ಸ್ಪರ್ಧೆ ನಡೆದಿತ್ತು. ಸಾಕರ್‌ ಮಲ್ಲಿಕ್‌ ಅವರಿದ್ದ ಸಚಿವಾಲಯದ ಮುಖ್ಯಸ್ಥನ ಹುದ್ದೆಯು ಅಂತಿಮವಾಗಿ ಅಧೀನ ಕಾರ್ಯದರ್ಶಿ ಪುರಂಧರ ಖಾನ್‌ ಅವರ ಪಾಲಾಯಿತು. ಸೋದರರ ಗೈರುಹಾಜರಿಯನ್ನು ನೆನಪು ಮಾಡಿಕೊಳ್ಳುವಂತೆ ಶ್ರೀ ಚೈತನ್ಯರ ಅಸಂಖ್ಯ ಅನುಯಾಯಿಗಳು ಬಂಗಾಳ ಮತ್ತು ಭಾರತದಾದ್ಯಂತ ಹಳ್ಳಿ ಮತ್ತು ಪಟ್ಟಣಗಳಲ್ಲಿ ಪ್ರತ್ಯಕ್ಷರಾಗತೊಡಗಿದರು. ಮಹಾಪ್ರಭುಗಳು ಸಂಚರಿಸಿದೆಡೆಗಳಲ್ಲೆಲ್ಲಾ ಅವರ ಭಕ್ತರು ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ ಸೇರಿ ಗಟ್ಟಿಯಾಗಿ ಹರೇ ಕೃಷ್ಣ ಮಂತ್ರವನ್ನು ಜಪಿಸುತ್ತಿದ್ದರು. ಅಷ್ಟೇ ಅಲ್ಲ, ಪ್ರಯಾಣಿಕರಿಗೆ ಶುಭಾಶಯಗಳನ್ನು ಹೇಳುತ್ತ ಕೃಷ್ಣನ ಪವಿತ್ರ ನಾಮಗಳನ್ನು ಹೇಳುವಂತೆ ಕೋರುತ್ತಿದ್ದರು.

ರೂಪ ಮತ್ತು ಸನಾತನರು ಹೇಗಿದ್ದಾರೆಂದು ಈ ಭಕ್ತರನ್ನು ಕೇಳಿ. ಅವರು ವೃಂದಾವನದಲ್ಲಿ ಸೋದರರ ಇತ್ತೀಚಿನ ಚಟುವಟಿಕೆಗಳ ಮಾಹಿತಿ ನೀಡುತ್ತಾರೆ. “ರೂಪ ಮತ್ತು ಸನಾತನ ಗೋಸ್ವಾಮಿಗಳು ಶ್ರೀ ಚೈತನ್ಯ ಮಹಾಪ್ರಭುಗಳ ಅವ್ಯಾಜ ಕೃಪೆಯನ್ನು ಪಡೆದಿದ್ದಾರೆ. ಪ್ರಭುವಿನ ಅಲೌಕಿಕ ಗುಣಗಳಿಂದ ಆಕರ್ಷಿತರಾದ ಈ ಸೋದರರು ಶ್ರೀ ಚೈತನ್ಯರ ಪ್ರತಿರೂಪದಂತಿದ್ದಾರೆ ಮತ್ತು ಅವರಿಗೆ ಅತ್ಯಂತ ಪ್ರೀತಿಪಾತ್ರರು. ಕೃಷ್ಣನ ಲೀಲೆಗಳ ಅಲೌಕಿಕ ವಾರ್ತೆಯನ್ನು ಹರಡಲು ಮಹಾಪ್ರಭುಗಳು ಅವರಿಗೆ ಅಧಿಕಾರ ನೀಡಿದ್ದಾರೆ. ಸದಾ ಶ್ರೀ ಚೈತನ್ಯರು ಮತ್ತು ಅವರ ಧ್ಯೇಯದ ಬಗೆಗೆ ಚಿಂತಿಸುತ್ತ ರೂಪ ಮತ್ತು ಸನಾತನರು ಅತ್ಯಂತ ಎಚ್ಚರಿಕೆಯಿಂದ ಮಹಾಪ್ರಭುಗಳು ರೂಪಿಸಿರುವ ತತ್ತ್ವಗಳನ್ನು ಅನುಸರಿಸುತ್ತಾರೆ. ರೂಪ ಗೋಸ್ವಾಮಿ, ಸನಾತನ ಗೋಸ್ವಾಮಿ, ಅವರ ಸೋದರ ಸಂಬಂಧಿ ಜೀವ ಗೋಸ್ವಾಮಿ ಅವರುಗಳಲ್ಲದೆ ಹೆಚ್ಚೂಕಮ್ಮಿ ಅವರ ಕುಟುಂಬದವರೆಲ್ಲರೂ ವೃಂದಾವನದಲ್ಲಿ ವಾಸಿಸುತ್ತಿದ್ದು ಕೃಷ್ಣನಿಗೆ ಭಕ್ತಿಸೇವೆಯನ್ನು ಕುರಿತಂತೆ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಭಗವಂತನ ಕೃಪೆ ಲಭ್ಯವಾದವರಿಗೆ ಏನು ತಾನೆ ಮಾಡುವುದು ಅಸಾಧ್ಯ?” ಒಂದಾನೊಂದು ಕಾಲದಲ್ಲಿ ನವಾಬನ ಸಂಪುಟದ ಹೆಮ್ಮೆಯಾಗಿದ್ದ, ಮುಸ್ಲಿಂ ನೌಕರರ ಅಸೂಯೆಯಾಗಿದ್ದ ಮತ್ತು ಜಾತಿ ಪ್ರಜ್ಞೆಯ ಹಿಂದೂಗಳಿಗೆ ಕಡೆಗಣಿಕೆಯ ವಸ್ತುಗಳಾಗಿದ್ದ ರೂಪ ಮತ್ತು ಸನಾತನರು ಈಗ ಹರೇ ಕೃಷ್ಣ ಆಂದೋಲನದಲ್ಲಿ ನಾಯಕರು. ಪ್ರಾಮಾಣಿಕವಾದ ಆಧ್ಯಾತ್ಮಿಕ ಜೀವನವು ಅಸೂಯೆರಹಿತವಾಗಿದ್ದು, ಅವರ ನಾಯಕತ್ವದಿಂದ ಅವರು ಶ್ರೀ ಚೈತನ್ಯರ ಶ್ರೇಷ್ಠ ಭಕ್ತರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾದರು.

ನವಾಬನಿಗೆ ಅರಿವು

ತನ್ನ ಇಬ್ಬರು ಪ್ರತಿಭಾವಂತ ಸಚಿವರನ್ನು ಕಳೆದುಕೊಂಡಾಗ ನವಾಬನು ಇದು ಅನಿವಾರ್ಯವೆಂದು ಸುಮ್ಮನಾದನು. ತನ್ನ ಆಡಳಿತದ ಎಲ್ಲ ಕಡೆಯೂ ಹರೇ ಕೃಷ್ಣ ಆಂದೋಲನವು ಹರಡುತ್ತಿರುವುದನ್ನು ಅಚ್ಚರಿ ಮತ್ತು ಆತಂಕದಿಂದ ಗಮನಿಸುತ್ತಿದ್ದ ಅವನು, ರೂಪ ಮತ್ತು ಸನಾತನರೊಂದಿಗೆ ಕಳೆದಿದ್ದ ದಿನಗಳನ್ನು ನೆನಪುಮಾಡಿಕೊಳ್ಳುತ್ತಿದ್ದನು. ಶ್ರೀ ಚೈತನ್ಯ ಮಹಾಪ್ರಭುಗಳ ಭೇಟಿ ಸಂದರ್ಭದಲ್ಲಿ, ರಾಮಕೇಲಿಯಲ್ಲಿ, ನವಾಬನು ಮುಂದೆ ರೂಪ ಗೋಸ್ವಾಮಿಯಾದ ದಬೀರ್‌ ಕಾಸ್‌ ಬಳಿ ಖಾಸಗಿಯಾಗಿ ಪ್ರಭುವಿನ ಬಗೆಗೆ ಕೇಳಿದ್ದನು. ದಬೀರ್‌ ಕಾಸ್‌ ಉತ್ತರಿಸಿದ್ದರು, “ನಿನಗೆ ಈ ಸಾಮ್ರಾಜ್ಯವನ್ನು ನೀಡಿದ ಮತ್ತು ನೀನು ಪ್ರವಾದಿ ಎಂದು ಸ್ವೀಕರಿಸುವ ದೇವೋತ್ತಮ ಪರಮ ಪುರುಷನು ನಿನ್ನ ದೇಶದಲ್ಲಿ ಜನ್ಮತಳೆದಿದ್ದಾನೆ. ಅವನ ಕೃಪೆಯಿಂದ ನೀನು ಎಲ್ಲ ಕಡೆ ಜಯಶಾಲಿಯಾಗುವೆ.”

ಅವರು ಮುಂದುವರಿದು, “ನೀನು ನನ್ನನ್ನು ಏಕೆ ಪ್ರಶ್ನಿಸುತ್ತಿರುವೆ? ರಾಜನಾಗಿ ನೀನು ದೇವರ ಪ್ರತಿನಿಧಿ. ಶ್ರೀ ಚೈತನ್ಯರ ಬಗೆಗೆ ನಿನ್ನ ಹೃದಯ ಏನು ಹೇಳುತ್ತದೆ?”

ನವಾಬನು ಉತ್ತರಿಸಿದನು, “ಶ್ರೀ ಚೈತನ್ಯ ಮಹಾಪ್ರಭುಗಳನ್ನು ದೇವೋತ್ತಮ ಪರಮ ಪುರುಷನೆಂದು ಪರಿಗಣಿಸುವೆ. ಇದರಲ್ಲಿ ಸಂದೇಹವೇ ಇಲ್ಲ.”

ಆದರೆ ನವಾಬನಿಗೆ ಮಿಶ್ರ ಭಾವನೆಗಳಿದ್ದವು. ಅವನು ಶ್ರೀ ಚೈತನ್ಯರನ್ನು ದೇವೋತ್ತಮ ಎಂದೂ ಮತ್ತು ತೊಂದರೆ ಕೊಡುವ ಪುಣ್ಯ ವ್ಯಕ್ತಿ ಎಂದೂ ಸ್ವೀಕರಿಸಿದ್ದನು. ಹೇಳಿ ಕೇಳಿ ನವಾಬನು ಒಬ್ಬ ರಾಜ ಮತ್ತು ರಾಜಕಾರಣಿ. ಶ್ರೀ ಚೈತನ್ಯರು ದೇವೋತ್ತಮ ಪರಮ ಪುರಷರೋ ಅಲ್ಲವೋ ಅವರು ಈ ರಾಜ್ಯದಲ್ಲಿ ಮಹತ್ತ್ವಪೂರ್ಣ ಕ್ರಾಂತಿ ಮಾಡಿದ್ದರು. ಇಬ್ಬರು ಪ್ರತಿಭಾವಂತ ಸಚಿವರು ತಮ್ಮ ಲಾಭದಾಯಕ ಹುದ್ದೆಗಳನ್ನು ತೊರೆದು ಹರೇ ಕೃಷ್ಣ ಆಂದೋಲನವನ್ನು ಸೇರುವಂತೆ ಮಾಡಲು ಶ್ರೀ ಚೈತನ್ಯರು ಅವರಿಗೆ ಏನು ಹೇಳಿದ್ದರು? ಅಸಂಖ್ಯ ಜನರು ಕೃಷ್ಣನ ಪವಿತ್ರ ನಾಮಗಳನ್ನು ರಸ್ತೆಗಳಲ್ಲಿ ಜಪಿಸುತ್ತ ಮತ್ತು ನರ್ತಿಸುತ್ತ ಈ ಸೋದರರ ಉದಾಹರಣೆಯನ್ನು ಅನುಸರಿಸುವಂತೆ ಮಾಡಲು ಕಾರಣವೇನು? ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ರೂಪ ಮತ್ತು ಸನಾತನರಿಗೆ ಶ್ರೀ ಚೈತನ್ಯರ ಬೋಧನೆ ಏನು?

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi