ಆತ್ಮೀಯ ಗೆಳೆಯ

ಸಾಂದೀಪನಿ ಮುನಿಗಳ ಆಶ್ರಮದಲ್ಲಿ ಹಲವಾರು ಶಿಷ್ಯರಿದ್ದರು. ಇವರಲ್ಲಿ ಕೃಷ್ಣ, ಬಲರಾಮ ಮತ್ತು ಸುದಾಮಾ ಪ್ರಮುಖ ಶಿಷ್ಯರಾಗಿದ್ದರು. ಗುರುಕುಲದ ವಾಸವು ಮುಗಿದ ಅನಂತರ ಎಲ್ಲ ಶಿಷ್ಯರು ಅವರವರ ಊರುಗಳಿಗೆ ಹಿಂದಿರುಗಿದರು. ಸುದಾಮಾ ಬ್ರಾಹ್ಮಣಿಕೆಯನ್ನು ಮಾಡುತ್ತಾ ಹೆಂಡತಿ ಮಕ್ಕಳೊಂದಿಗೆ ಇದ್ದನು. ಆದರೆ ಬಡತನ ಅವನನ್ನು ತುಂಬ ಕಾಡುತ್ತಿತ್ತು. ಬರುವ ಆದಾಯ ಅವನಿಗೆ ಸಾಕಾಗುತ್ತಿರಲಿಲ್ಲ. ಆದರೆ ಅವನು ಕೃಷ್ಣನ ಪರಮ ಭಕ್ತನಾಗಿದ್ದನು. ಹಗಲೂ ರಾತ್ರಿ ಪತ್ನಿ ಮಕ್ಕಳೊಂದಿಗೆ ಕೃಷ್ಣನನ್ನು ಧ್ಯಾನಿಸುತ್ತಿದ್ದನು.

ಕೃಷ್ಣನು ರಾಜನಾಗಿ ರಾಜ್ಯಭಾರವನ್ನು ನಡೆಸುತ್ತಿದ್ದನು. ಹೀಗಿರಲು ಸುದಾಮಾನ ಪತ್ನಿಯು, ಕೃಷ್ಣನ ಬಗ್ಗೆ ವಿವರಿಸುತ್ತಾ, “ಸ್ವಾಮಿ ನಿಮ್ಮ ಆಪ್ತ ಮಿತ್ರನಾದ ಕೃಷ್ಣನು ತುಂಬ ಶ್ರೀಮಂತನಾಗಿದ್ದಾನೆ! ನೀವು ಸಹಾಯ ಬೇಡಿದರೆ ಖಂಡಿತವಾಗಿಯೂ ಅವನು ಸಹಾಯ ಮಾಡುತ್ತಾನೆ. ಆದ್ದರಿಂದ ನೀವು ಅವನ ಬಳಿಗೆ ಹೋಗಿ ಬನ್ನಿ” ಎಂದಳು. ಆಗ ಸುದಾಮಾ ಬರಿಗೈಯಲ್ಲಿ ಆತನನ್ನು ನೋಡಲು ಹೋಗಲಾರೆನೆಂದನು. ಕೊನೆಗೆ ಅವಳು ಅಕ್ಕಪಕ್ಕದವರನ್ನು ಯಾಚಿಸಿ ಸ್ವಲ್ಪ ಅವಲಕ್ಕಿಯನ್ನು ತಂದು ಒಂದು ಬಟ್ಟೆಯಲ್ಲಿ ಕಟ್ಟಿ ಕಳುಹಿಸಿದಳು. ಅವನು ಬುತ್ತಿಯನ್ನು ತೆಗೆದುಕೊಂಡು ದ್ವಾರಕಾ ನಗರಕ್ಕೆ ಹೊರಟನು.

ದ್ವಾರಕಾ ನಗರದಲ್ಲಿ ಕೃಷ್ಣನು ಅವನನ್ನು ಸಿಂಹಾಸನದಲ್ಲಿ ಕೂರಿಸಿ ಪಾದಗಳನ್ನು ತೊಳೆದು ಪತ್ನಿಯರ ಸಮ್ಮುಖದಲ್ಲಿ ಎಲ್ಲ ತರಹದ ಉಪಚಾರ ಮಾಡಿದನು. ಕೊನೆಯಲ್ಲಿ ನನಗಾಗಿ ಏನು ತಂದೆಯೆಂದು ಕೇಳಿದಾಗ ಅವನು ಸಂಕೋಚದಿಂದ ಅವಲಕ್ಕಿಯನ್ನು ಬಚ್ಚಿಟ್ಟುಕೊಳ್ಳಲು ಹವಣಿಸಿದನು. ಆದರೆ ಕೃಷ್ಣನು ಅದನ್ನು ಬಲವಂತವಾಗಿ ಕಿತ್ತುಕೊಂಡು ಒಂದು ಹಿಡಿ ತಿಂದನು.

ಸುದಾಮಾನಿಗೆ ತಿಳಿಯದಂತೆ ಅವನಿಗೆ ಅರಮನೆಯನ್ನು ಕರುಣಿಸಿದನು, ಅವನ ಪತ್ನಿ ಮಕ್ಕಳಿಗೆ ವಸ್ತ್ರ ಒಡವೆಗಳು ಮತ್ತು ಐಶ್ವರ್ಯ ಪ್ರಾಪ್ತವಾಯಿತು. ಮೂರನೆ ಹಿಡಿಯನ್ನು ತಿನ್ನಲು ಹೋದಾಗ ರುಕ್ಮಿಣಿಯು ತಡೆದಳು. ತನ್ನ ಪತ್ನಿಯು ಹೇಳಿದ ಹಾಗೆ ಕೃಷ್ಣನ ಬಳಿ ತನ್ನ ಹಣದ ಅಭಾವದ ತೊಂದರೆಯನ್ನು ಹೇಳಿಕೊಳ್ಳಲು ಸುದಾಮಾನಿಗೆ ಬಹಳ ಸಂಕೋಚವಾಯಿತು. ಹಣವನ್ನು ಅವನು ಕೇಳಲೇ ಇಲ್ಲ. ಕೃಷ್ಣನೊಡನೆ ಸ್ವಲ್ಪ ಸಮಯ ಕಳೆದು ಅವನೊಡನೆ ಚರ್ಚೆಗಳಲ್ಲಿ ತೊಡಗಿ ಆನಂದಿಸಿದನು. ಆನಂದದಲ್ಲಿ ತೇಲುತ್ತ ಮನೆಗೆ ಹಿಂದಿರುಗಿದನು. ಆದರೆ ತನ್ನ ಮನೆ ತಲಪಿದಾಗ ಅವನಿಗೆ ಆಶ್ಚರ್ಯ ಕಾದಿತ್ತು. ಕೃಷ್ಣನನ್ನು ಕೇಳದಿದ್ದರೂ ಎಲ್ಲವನ್ನೂ ಕೊಟ್ಟಿದ್ದನು. ಇದರಿಂದ ಅವನ ಪತ್ನಿ ಮಕ್ಕಳು ಸಂತೋಷಿಸಿ ಕೃಷ್ಣನನ್ನು ಅನವರತ ಧ್ಯಾನ ಮಾಡುತ್ತಾ ಸುಖದಿಂದ ಇದ್ದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi