ಕೃಷ್ಣಪ್ರಜ್ಞೆಗೇರಿದ ಕುತೂಹಲ

ಸಂಕೀರ್ತನೆಯ ಯಶೋಗಾಥೆಗಳು

ಆಂಗ್ಲ ಮೂಲ : ದಿ ನೆಕ್ಟರ್ ಆಫ್ ಬುಕ್ ಡಿಸ್ಟ್ರಿಬ್ಯುಷನ್

ಹರಿನಾಮಾನಂದ ದಾಸರು 1983ರಿಂದ ಸಂಕೀರ್ತನ ಕಾರ್ಯದಲ್ಲಿ ತೊಡಗಿರುವವರು. ಪುಸ್ತಕ ವಿತರಣೆಯಲ್ಲಿ 1983ರಿಂದ 1990ರವರೆಗೆ ವಿಶ್ವಚಾಂಪಿಯನ್ ಆಗಿ ಹೆಸರಾದವರು. 1986ರಿಂದ ಸ್ವಿಡ್ಜರ್ ಲೆಂಡಿನ ಸಂಕೀರ್ತನ ಕಾರ್ಯಕ್ರಮಗಳ ನೇತಾರರಾಗಿ ಕಾರ್ಯನಿರ್ವಹಿಸಿದರು. ಸಂಕೀರ್ತನ ಯಶೋಗಾಥೆಯಲ್ಲಿ ಅವರ ಪಾತ್ರ ಗಣನೀಯವಾದುದು.

ವಜ್ರ, ಮಣ್ಣಿನಲ್ಲಿ ಹುದುಗಿರುತ್ತದೆ, ಅದನ್ನು ತೆಗೆದು ಪರಿಷ್ಕರಿಸಿದಾಗಲೇ ಅದು ವಜ್ರವೆಂದು ತಿಳಿಯುವುದು. ಅದು ಸಂಸ್ಕಾರಕ್ಕೊಳಪಟ್ಟಾಗಲೇ ಹೊಳಪು ಬೀರುವುದು ಸಂಕೀರ್ತನೆಯ ಮೂಲಕ ಒಬ್ಬ ಯೋಗ್ಯ ಭಕ್ತನನ್ನು ಅರಸಿ ತೆಗೆದ ಯಶೋಗಾಥೆ ಹರಿನಾಮಾನಂದ ದಾಸರದು.

ಈ ಕುರಿತಂತೆ ನಡೆದ ಘಟನೆ, ಅವರ ಮಾತುಗಳಲ್ಲಿ “ಅದೊಂದು ದಿನ, ನಾನು ಎಂದಿನಂತೆ ಪುಸ್ತಕ ವಿತರಣೆಯಲ್ಲಿ ತೊಡಗಿದ್ದೆ ನಾನು ಮಾರಾಟ ಮಾಡುತ್ತಿದ್ದ ಪುಸ್ತಕಗಳನ್ನೇ ತದೇಕಚಿತ್ತದಿಂದ ಗಮನಿಸುತ್ತ ಒಬ್ಬ ಯುವಕ ನಿಂತಿದ್ದ. ಅವನ ಕುತೂಹಲವನ್ನು ಗಮನಿಸಿ ನಾನು ಆತನ ಬಳಿ ಹೋದೆ. ಆ ಯುವಕ ನಾನು ಹಂಚುತ್ತಿದ್ದ ಪುಸ್ತಕಗಳ ಬಗ್ಗೆ ಆಸಕ್ತನಾಗಿದ್ದ.

“ನನ್ನ ಬಳಿ ಈ ಪುಸ್ತಕಗಳು ಇವೆ. ಈವರೆಗೂ ನನಗೆ ಇವು ಎಲ್ಲಿಂದ ಬಂದವೆಂದು ಅಚ್ಚರಿಯಿತ್ತು! ಅವನ ಮಾತುಗಳು ನನಗೂ ಆಶ್ಚರ್ಯವುಂಟುಮಾಡಿತು. ನಮ್ಮ ಮಾತು ಮುಂದುವರಿಯಿತು.

ಆ ಯುವಕನೊಬ್ಬ ಮುನ್ಸಿಪಾಲ್ಟಿ ಕೆಲಸಗಾರ. ತ್ಯಾಜ್ಯ ಸಂಗ್ರಹಿಸುತ್ತಿದ್ದ ಆತನ ಸಹೋದ್ಯೋಗಿಯೊಬ್ಬನಿಗೆ ನಮ್ಮ ಪುಸ್ತಕಗಳು ಕಸದ ತೊಟ್ಟಿಯಲ್ಲಿ ದೊರಕಿದ್ದವು. ಆತ ಅವುಗಳನ್ನು ತಂದು ಮುನ್ಸಿಪಾಲ್ಟಿ ನೌಕರರ ಕೋಣೆಯಲ್ಲಿ ಇರಿಸಿದ್ದ. ಈ ನಮ್ಮ ಯುವಕನನ್ನು ಆ ಪುಸ್ತಕಗಳು ಸೆಳೆದವು.

ಕುತೂಹಲಕ್ಕಾಗಿ ಮನೆಗೆ ಕೊಂಡೊಯ್ದ ಮೊದಲು ಪುಸ್ತಕಗಳಲ್ಲಿನ ಚಿತ್ರಗಳನ್ನೂ, ಅವುಗಳ ಅಡಿಬರಹಗಳನ್ನೂ ಓದಿದ. ಕ್ರಮೇಣ ಆಸಕ್ತಿ ಬೆಳೆದು, ಆತ ಇಡಿಯ ಪುಸ್ತಕವನ್ನೇ ಓದಿ ಮುಗಿಸಿದ!

ನಮ್ಮ ಪುಸ್ತಕಗಳನ್ನು ಓದಲು ತೊಡಗಿದಾಗಿನಿಂದ ಆತನಿಗೆ ನಮ್ಮ ಆಂದೋಲನದ ಬಗ್ಗೆ ತಿಳಿಯುವ ಆಸೆ ಹುಟ್ಟಿಕೊಂಡಿತ್ತು. ಹೀಗಾಗಿಯೇ, ಅ೦ದು ಆತ ಸಾಗುವ ದಾರಿಯಲ್ಲಿ ಪುಸ್ತಕ ವಿತರಿಸುತ್ತಿದ್ದ ನಾನು ಅಕಸ್ಮಾತ್ತಾಗಿ ಕಣ್ಣಿಗೆ ಬಿದ್ದಾಗ ಆತ ಅಲ್ಲಿಯೇ ನಿಂತುಬಿಟ್ಟಿದ್ದ.

ಇವೆಲ್ಲವೂ ಅವನೇ ಹೇಳಿಕೊಂಡಿದ್ದು. ಅವನ ಆಸಕ್ತಿ ನನಗೆ ಮೆಚ್ಚುಗೆಯಾಯ್ತು. ಹದಿನೇಳು ವರ್ಷ ವಯಸ್ಸಿನ ಆತ, ಸ್ಥಳದಲ್ಲೇ ಹತ್ತು ಪುಸ್ತಕಗಳನ್ನು ಕೊಂಡುಕೊಂಡ. ನನ್ನ ಭೇಟಿ ಅವನಿಗೆ ಸಂತಸ ತಂದಿತ್ತು. ಆತನಿಗೆ ನಮ್ಮ ದೇವಾಲಯಕ್ಕೊಮ್ಮೆ ಬರುವಂತೆ ಹೇಳಿ, ಕೈಕುಲುಕಿ ಬೀಳ್ಕೊಟ್ಟು, ನಾನೂ ಅಲ್ಲಿಂದ ಹೊರಟೆ.

ನಾನೇನೋ ಅಲ್ಲಿಂದ ಉಳಿದ ಪುಸ್ತಕಗಳನ್ನು ಎತ್ತಿಕೊಂಡು ಹೊರಟುಬಿಟ್ಟೆ. ಆದರೆ ಮನಸಿಗೇಕೋ ಅಸಮಾಧಾನ ಕಾಡತೊಡಗಿತು. ಆ ಯುವಕನ ಹುಮ್ಮಸ್ಸಿಗೆ ನಾನು ತೋರಿದ ಪ್ರತಿಕ್ರಿಯೆ ಅತ್ಯಲ್ಪ ಎನಿಸಿತು. “ಅವನೊಬ್ಬ ಒಳ್ಳೆಯ ಪುಸ್ತಕ ವಿತರಕನಾಗಬಲ್ಲ!’ ಇದ್ದಕ್ಕಿದ್ದ ಹಾಗೆ ಮನಸಿಗೆ ಹೊಳೆಯಿತು. ತತ್‌ಕ್ಷಣ ನಾನು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಹಿಂದಿರುಗಿದೆ. ಅಲ್ಲಿ ಆ ಯುವಕ ಇರಲಿಲ್ಲ. ಕೊಂಚ, ಅತ್ತಿತ್ತ ತಿರುಗಾಡುತ್ತಿದ್ದನಂತರ ಆತ ಸಿಕ್ಕ.

“ನೀನು ಇಂದು ರಾತ್ರಿ ಬಿಡುವಾಗಿದ್ದೀಯೇನು? ಈ ದಿನ ಶನಿವಾರವಾದುದರಿಂದ ನಾನು ರಾತ್ರಿಯ ವೇಳೆಗೆ ನಮ್ಮ ದೇವಸ್ಥಾನಕ್ಕೆ ಹೋಗುವವನಿದ್ದೇನೆ.” ನನ್ನ ಆಹ್ವಾನ ಅವನಿಗೆ ಹಿಡಿಸಿತು. ಕೊನೆಗೆ, ಅಂದು ಸಂಜೆ ನಾವು ಅದೇ ಸ್ಥಳದಲ್ಲಿ ಭೇಟಿಯಾಗುವುದೆಂದು ನಿರ್ಧಾರವಾಯಿತು.

ಸಂಜೆ ನಾನು ತಲಪುವ ಹೊತ್ತಿಗಾಗಲೇ ಯುವಕ ನನಗಾಗಿ ಕಾದು ನಿಂತಿದ್ದ. ವಾರಾಂತ್ಯವನ್ನು ದೇವಾಲಯದಲ್ಲಿ ಕಳೆಯಲು ತನ್ನ ಚೀಲದೊಂದಿಗೆ ಸಜ್ಜಾಗಿದ್ದ. ಅಂದಿನಿಂದ ಆತನ ನಿರಂತರ ಭೇಟಿ ಆರಂಭವಾಯ್ತು. ಆತನೊಬ್ಬ ಅತ್ಯುತ್ತಮ ಪುಸ್ತಕವಿತರಕನಾಗಿ ಹೊರಹೊಮ್ಮಿದ.

ಈಗ ಆ ಯುವಕನ ಹೆಸರು ಜಗದ್ವಸು, ಸಂಕೀರ್ತನಾ ವಾಹನಗಳನ್ನು ಅಲಂಕರಿಸುವುದು, ಅವುಗಳಲ್ಲಿ ಪುಸ್ತಕಗಳನ್ನು ಜೋಡಿಸುವುದು, ನನ್ನೊ೦ದಿಗೆ ಸಂಕೀರ್ತನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವನ ಕೆಲಸಗಳು. ಅವನೀಗ ಪುಸ್ತಕ ವಿತರಣೆಯಲ್ಲಿ ಸಾಕಷ್ಟು ಪ್ರಗತಿಸಾಧಿಸಿ, ಕೃಷ್ಣಪ್ರಜ್ಞೆಯ ಸಂವಹನಕ್ಕೆ ತನ್ನ ಮಹತ್ವದ ಕೊಡುಗೆ ನೀಡುತ್ತಿದ್ದಾನೆ.”

ಇದು ಒಬ್ಬಹರಿನಾಮಾನಂದ ದಾಸರ ಅನುಭವ, ಪುಸ್ತಕ ವಿತರಣೆ ಮಾಡುವ ಮೂಲಕ ಇಂಥ ಅದೆಷ್ಟು ಜನರು ಕೃಷ್ಣನ ಸೇವೆಯಲ್ಲಿ ನೇರವಾಗಿ ತೊಡಗಿಕೊಂಡಿದ್ದಾರೋ! ಎಲ್ಲವೂ ಸಂಕೀರ್ತನೆಯ ಮಹಿಮೆ!

“ನನ್ನ ಎಲ್ಲ ಪುಸ್ತಕಗಳೂ ಪ್ರಕಟವಾಗಬೇಕು ಮತ್ತು ವಿಶ್ವಾದ್ಯಂತ ವಿತರಣೆಯಾಗಬೇಕು. ಇದಕ್ಕೆ ನನ್ನ ಆದ್ಯತೆ. ಪ್ರಾಯೋಗಿಕವಾಗಿ, ಪುಸ್ತಕಗಳೇ ನಮ್ಮ ಆಂದೋಲನದ ತಳಹದಿಯಾಗಿವೆ. ಪುಸ್ತಕಗಳಿಲ್ಲದೆ ಕೇವಲ ನಮ್ಮ ಬೋಧನೆಗಳಿಂದ ಯಾವ ಪ್ರಯೋಜನವೂ ಆಗದು.”

ಶ್ರೀಲ ಪ್ರಭುಪಾದ

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi