ಜಪದಿಂದ ಮುಕ್ತಿ

ಶಬ್ದ ಬ್ರಹ್ಮಾತ್ಮನಸ್‌ ತಸ್ಯ ವ್ಯಕ್ತಾವ್ಯಕ್ತಾತ್ಮನಃ ಪರಃ ।
ಬ್ರಹ್ಮಾವಭಾತಿ ವಿತತೋ ನಾನಾಶಕ್ತಿ ಉಪಬೃಂಹಿತಃ ॥  

ಬ್ರಹ್ಮನು ದಿವ್ಯಧ್ವನಿಯ ಮೂಲದಂತೆ ದೇವೋತ್ತಮ ಪರಮ ಪುರುಷನ ವ್ಯಕ್ತಿಗತ ಪ್ರತಿನಿಧಿಯಾಗಿದ್ದಾನೆ. ಆದ್ದರಿಂದ ಅವನು ವ್ಯಕ್ತ ಅವ್ಯಕ್ತ ಕಲ್ಪನೆಗಳಿಗೆ ಅತೀತನಾಗಿದ್ದಾನೆ. ಬ್ರಹ್ಮನು ಪರಮಸತ್ಯದ ಪೂರ್ಣರೂಪನಾಗಿದ್ದಾನೆ. ಮತ್ತು ವಿವಿಧ ಶಕ್ತಿಗಳಿಂದ ಕೂಡಿದ್ದಾನೆ.

(ಭಾಗವತ 3.12.48)

ಪರಮ ಯೋಜನೆ ವ್ಯವಸ್ಥೆಯಂತೆ ಈ ಭೌತಿಕ ಲೋಕವು ಶಬ್ದದಿಂದ ಸೃಷ್ಟಿಯಾಗಿದೆ. ಭಗವಂತನು ಬ್ರಹ್ಮನ ಹೃದಯದೊಳಗೆ ಶಬ್ದವನ್ನು ತುಂಬಿ ಅವನನ್ನು ಸಬಲಗೊಳಿಸಿದ್ದಾನೆ. ಆ ಶಬ್ದದಿಂದಲೇ ಈ ಎಲ್ಲ ಭೌತಿಕ ಶಕ್ತಿಯು ಬರುತ್ತಿದೆ. ಲೌಕಿಕವಾಗಿ ಇದನ್ನು ಅರ್ಥಮಾಡಿಕೊಳ್ಳುವುದು ನಮಗೆ ಸಾಧ್ಯವಿಲ್ಲ. ಹೇಗೆ ಎಲ್ಲವೂ ಒಂದು ಕಲ್ಪನೆಯಿಂದ ಆರಂಭವಾಗುತ್ತದೆ, ಅನಂತರ ಬಹು ಮಹಡಿ ಕಟ್ಟಡ ನಿರ್ಮಿಸಲು ಎಷ್ಟು ಶಬ್ದ ಉತ್ಪತ್ತಿಯಾಗುತ್ತದೆ ಎಂದು ಹೇಳುವ ಮೂಲಕ ಶ್ರೀಲ ಪ್ರಭುಪಾದರು ನಮಗೆ ಒಂದು ಆಲೋಚನಾ ವಿಧಾನವನ್ನು ನೀಡುತ್ತಾರೆ. ಯೋಚಿಸಿದರೆ ನಿಮಗೆ ತಿಳಿಯುತ್ತದೆ. ಹೌದು, ತುಂಬ ಶಬ್ದ ಉಂಟಾಗುತ್ತದೆ. ನೀವು ಕಟ್ಟಡಕ್ಕಾಗಿ ಸಿಮೆಂಟ್‌ ಮತ್ತು ಉಕ್ಕಿಗೆ ಬೇಡಿಕೆ ಸಲ್ಲಿಸಬೇಕು, ಆರಂಭದ ಅಂಶವೇ ಶಬ್ದ ಮತ್ತು ಅಲ್ಲಿಂದ ಅದು ಸಾಗುತ್ತ ಹೋಗುತ್ತದೆ.

ನಮ್ಮ ಸಣ್ಣ ಸೃಷ್ಟಿಯಲ್ಲಿಯೂ ಕೂಡ ಸೃಷ್ಟಿಯ ಮೂಲವಾಗಿ ಶಬ್ದದ ಪಾತ್ರವನ್ನು ನಾವು ನೋಡಬಹುದು. ಪ್ರಣವ ಓಂ ಎಲ್ಲ ಶಬ್ದಗಳ ಮೂಲ. ಅಂದರೆ ಎಲ್ಲ ಚಿಂತನೆಗಳಿಗೆ ಪ್ರಣವವೇ ಮೂಲ. ಅವು ಏನನ್ನು ಪ್ರತಿನಿಧಿಸುವುವೋ ಅವೇ ಈ ಶಬ್ದಗಳಲ್ಲಿ ಇರುತ್ತವೆ, ಅಂದರೆ ಯಾವುದು ಸೂಕ್ಷ್ಮ ಮತ್ತು ಸಮಗ್ರ ಲೌಕಿಕ ಶಕ್ತಿಯಾಗಿ ವ್ಯಕ್ತವಾಗಿರುತ್ತದೆಯೋ ಅದು. ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ, ಮನಸ್‌, ಬುದ್ಧಿ, ಅಹಂಕಾರ – ಈ ಎಲ್ಲ ವಸ್ತು, ಅಂಶಗಳನ್ನು ಹೊಂದಿರುವ ಶಬ್ದ ಎಲ್ಲಕ್ಕಿಂತ ಉತ್ತಮ. ಕೃಷ್ಣನು ಬ್ರಹ್ಮನ ಹೃದಯದಲ್ಲಿ ಶಬ್ದವನ್ನು ತುಂಬಿದನು ಮತ್ತು ಭಗವಂತನ ಆಶಯದಂತೆ ಈ ಭೌತಿಕ ಲೋಕವನ್ನು ಹೊರತರಲು ಅಗತ್ಯವಾದ ವಿವಿಧ ಶಕ್ತಿಗಳು ಆ ಶಬ್ದದಲ್ಲಿತ್ತು. ಪರಮ ಆಧ್ಯಾತ್ಮಿಕ ಶಬ್ದವೆಂದರೆ ಆಧ್ಯಾತ್ಮಿಕ ಲೋಕವನ್ನು, ಅಂದರೆ ಬ್ರಹ್ಮನ್‌, ಪರ ಬ್ರಹ್ಮನ್‌ ಪ್ರಕಟವಾಗುವುದು. ಲೌಕಿಕ ಪದ ಓಂ ಕೂಡ ಭಗವಂತನ ನಿರಾಕಾರದ ನಿರೂಪಣೆ, ಚಿತ್ರಣ.

ಶಕ್ತಿಯ ಅಗತ್ಯ

ಅದೇ ರೀತಿ ಅಲೌಕಿಕ ಶಬ್ದ, ನಾಮ್ನಾಂ ಅಕಾರಿ ಬಹುದಾ ನಿಜ ಸರ್ವ ಶಕ್ತಿ. ಅಗತ್ಯವಾದ ಎಲ್ಲ ಶಕ್ತಿಯು ಭಗವಂತನ ಹೆಸರಿನಲ್ಲಿಯೆ ಇದೆ. ಮುಖ್ಯವಾಗಿ, ಈ ಲೌಕಿಕ ಬಂಧನದಿಂದ ಜೀವಿಯನ್ನು ಮುಕ್ತಗೊಳಿಸುವ ಶಕ್ತಿ. ನಮ್ಮ ಮೇಲೆ ಮತ್ತೊಂದು ಶಕ್ತಿಯು ಕಾರ್ಯಾಚರಣೆ ನಡೆಸುತ್ತಿರುವುದರಿಂದ ಲೌಕಿಕ ಬಂಧನ. ಯಾರಾದರೂ ನನ್ನನ್ನು ಬಿಗಿಯಾಗಿ ಹಿಡಿದುಕೊಂಡರೆ ಮತ್ತು ನಾನು ಅದರಿಂದ ಮುಕ್ತವಾಗಬೇಕಾದರೆ, ನನಗೆ ಅಗತ್ಯ ಶಕ್ತಿಬೇಕು. ಅದೇ ಮುಕ್ತವಾಗುವುದರ ಅರ್ಥ. ಕೃಷ್ಣನಿಗೆ ಶರಣಾಗುವುದರಿಂದ ಲೌಕಿಕ ಪ್ರಕೃತಿಯ ಮೂರು ಗುಣಗಳ ಹಗ್ಗದಿಂದ ನಾವು ಮುಕ್ತರಾಗುತ್ತೇವೆ. ಲೌಕಿಕ ಲೋಕದಿಂದ ಮುಕ್ತವಾಗಲು ಆತ್ಮಕ್ಕೆ ಆ ಶಕ್ತಿ ದೊರೆಯಬೇಕು. ಅಜ್ಞಾನದ ಹಗ್ಗದಿಂದ ಬಂಧನ. ಅಲೌಕಿಕ ಜ್ಞಾನವು ಈ ಹಗ್ಗವನ್ನು ಕಡಿದು ಹಾಕುತ್ತದೆ ಮತ್ತು ಇದು ಪವಿತ್ರ ನಾಮದಿಂದ ಸಾಗುತ್ತದೆ, ಕೃಷ್ಣ ನಾಮವು ಪರ ಬ್ರಹ್ಮನ್‌ ಮತ್ತು ಅದು ಎಲ್ಲ ಜ್ಞಾನಕ್ಕೆ ಮೂಲ. ನಮ್ಮ ಮುಂದಿರುವ ಅದ್ಭುತ ಅವಕಾಶವನ್ನು ಗಮನಿಸಿ. ಪರ ಬ್ರಹ್ಮನ್‌ನ್ನೊಂದಿಗೆ ಸಂಪರ್ಕಕ್ಕೆ ಬರುವುದು ಮತ್ತು ಮುಕ್ತಿ ಹೊಂದಿ ಭಕ್ತಿಸೇವೆಯಲ್ಲಿ ತೊಡಗುವುದು, ಯಾರಿಗೆ ಸ್ವತಂತ್ರವಾಗಿ ಸುಖಿಸಬೇಕೆಂಬ ಇಚ್ಛೆ ಇದೆಯೋ ಅವರಿಗಾಗಿ ಭೌತಿಕ ಲೋಕವನ್ನು ಭಗವಂತನು ಸೃಷ್ಟಿಸಿದ್ದಾನೆ ಎಂಬುವುದನ್ನು ನೀವು ಅರ್ಥಮಾಡಿಕೊಂಡಾಗ ನೀವು ಸ್ವತಂತ್ರವಾಗಿ ಆನಂದಿಸುವುದಿಲ್ಲ ಎಂಬ ನಿರ್ಣಯವನ್ನು ತೆಗೆದುಕೊಳ್ಳುತ್ತೀರಿ. ಆಗ ಈ ಭೌತಿಕ ಲೋಕವು ಅಲೌಕಿಕ ಲೋಕದಷ್ಟೆ ಚೆನ್ನಾಗಿರುತ್ತದೆ. ಆದುದರಿಂದ ಶುದ್ಧ ಭಕ್ತಿಸೇವೆಯನ್ನು ಮುಕ್ತಿಯ ವೇದಿಕೆಯಿಂದ ಕಾರ್ಯಗತಗೊಳಿಸಲಾಗುತ್ತದೆ.

ಈಗ ನಮ್ಮ ಆತ್ಮವು ಸಿಕ್ಕಿಕೊಂಡಿದೆ, ದೇಹವು ಸ್ವಯಂ ಅಜ್ಞಾನ. ಲೌಕಿಕ ಬುದ್ಧಿ ಇರುವುದರಿಂದ ಸೂಕ್ಷ್ಮ ದೇಹದಲ್ಲಿ ಹೆಚ್ಚು ಅಜ್ಞಾನವಿದೆ. ಹುಸಿ ಅಹಂ ಎನ್ನುವುದಿದೆ – ನಾನು ಈ ದೇಹ ಎನ್ನುವುದು ಒಂದು ಕಲ್ಪನೆ ಮತ್ತು ಕಲ್ಪನೆಯು ಒಂದು ಶಬ್ದ. ಮನಸ್ಸು ಚಿಂತೆಗಳಿಂದ ತುಂಬಿದೆ. ನೀವು ಒಂದು ವಿಷಯದ ಬಗೆಗೆ ಯೋಚಿಸುವುದನ್ನು ನಿಲ್ಲಿಸಿ, ಮತ್ತೊಂದು ವಿಷಯವನ್ನು ಕುರಿತು ಯೋಚಿಸಿ. ಅದು ಭೌತಿಕ ಶಬ್ದ. ನೀವು ಲೌಕಿಕ ಶಬ್ದದಲ್ಲಿ ಸಿಕ್ಕಿಕೊಂಡಿರುವಿರಿ ಎಂದರೆ ನೀವು ಲೌಕಿಕ ಲೋಕದಲ್ಲಿ ಕಟ್ಟಲ್ಪಟ್ಟಿದ್ದೀರಿ. ಇದರ ಮಧ್ಯೆ ಅಲ್ಲೊಂದು ಅನುಗ್ರಹವಿದೆ, ಪವಿತ್ರ ನಾಮದ ಅವತಾರವಿದೆ, ಅದು ಪರ ಬ್ರಹ್ಮನ್‌.

ನಮ್ಮ ಪ್ರಜ್ಞೆಯು ಸುಮ್ಮನೆ ಹರೇ ಕೃಷ್ಣ ಮಹಾ ಮಂತ್ರ ಶಬ್ದವನ್ನು ಕೇಳಿದರೆ, ಯಾವುದೇ ಚಿಂತೆ ಇಲ್ಲದೆ ನೀವು ಬ್ರಹ್ಮನ್‌ನಲ್ಲಿರುತ್ತೀರಿ. ನೀವು ಕುಸಿಯುವುದಿಲ್ಲ, ಕೊನೆಪಕ್ಷ ಆ ಕ್ಷಣದಲ್ಲಿಯಾದರೂ. ಆದುದರಿಂದ ಜಪಿಸುವ ಸಮಯದಲ್ಲಿ ಯೋಚಿಸಬೇಡಿ, ಕೇಳಿ ಎಂದು ಪ್ರಭುಪಾದರು ಹೇಳುತ್ತಾರೆ. ನೀವು ಈ ಲೋಕದಿಂದ ಬ್ರಹ್ಮನ್‌ ಲೋಕಕ್ಕೆ ಸಾಗಿಸಲ್ಪಡುವಿರಿ. ಮನಸ್ಸಿನಿಂದ ಸ್ವತಂತ್ರವಾಗಿಲ್ಲದಿದ್ದರೆ ಆಧ್ಯಾತ್ಮಿಕ ಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಆದುದರಿಂದ ಪ್ರಭುಪಾದರು ನಮಗೆ ಈ ಕಾರ್ಯಕ್ರಮವನ್ನು ನೀಡಿದ್ದಾರೆ. ಬೆಳ್ಳಂ ಬೆಳಗ್ಗೆ ನಿಮ್ಮನ್ನು ಪರ ಬ್ರಹ್ಮನ್‌ನಲ್ಲಿ ನೆಲೆಗೊಳಿಸಿ. ಹರೇ ಕೃಷ್ಣ ಮಂತ್ರವನ್ನು ಮಾತ್ರ ಜಪಿಸುತ್ತ ನಿಮ್ಮ ಆತ್ಮಕ್ಕೆ ಶಕ್ತಿ ತುಂಬಿ. ಈ ಲೌಕಿಕ ಲೋಕದಿಂದ ಹೊರಬರಲು ಮತ್ತು ಅಲೌಕಿಕತೆಯನ್ನು ಅನುಭವಿಸಲು ಕೃತಜ್ಞತೆಯಿಂದ ನೀವು ಪವಿತ್ರ ನಾಮದತ್ತ ಸಾಗುತ್ತಿರುವಿರಿ. ಪವಿತ್ರ ನಾಮವು ಕರುಣೆಯಿಂದ ಕೆಳಗಿಳಿದು ಬಂದಿದೆ ಎಂಬ ನಂಬಿಕೆಯಿಂದ ಪವಿತ್ರ ನಾಮವನ್ನು ಸ್ಪರ್ಶಿಸುವುದು ನಮ್ಮ ಉದ್ದೇಶವಾಗಬೇಕು. ಈ ಯುಗದಲ್ಲಿ ತಾನು ಪವಿತ್ರ ನಾಮವಾಗಿ ಅವತರಿಸುವೆ ಎಂದು ಭಗವಂತನು ಹೇಳಿದ್ದಾನೆ. ಯಾರಾದರೂ ಅಪ್ರಜ್ಞಾಪೂರ್ವಕವಾಗಿಯೂ ಕೃಷ್ಣ ಅಥವಾ ರಾಮನ ಹೆಸರನ್ನು ಉಚ್ಚರಿಸಿದರೆ, ಅವರಿಗೆ ಲಾಭದಾಯಕ. ಏಕೆ? ನೀನು ನಿನ್ನ ನಾಲಗೆಯಲ್ಲಿ ಹರೇ ಕೃಷ್ಣ ಹರೇ ರಾಮ ಎಂದು ಪ್ರತಿಧ್ವನಿಸುವ ಈ ಲೌಕಿಕ ಕಂಪನದಲ್ಲಿ ನಾನು ಬರುವೆ ಎಂದು ಮಾತುಕೊಟ್ಟಿದ್ದೆ. ನಮ್ಮ ಗ್ರಹಿಕೆ ಏನೆಂದರೆ, ಈ ಹೆಸರು ಲೌಕಿಕ ಶಬ್ದ, ಆದರೆ ಅದು ಸದಾ ಪರಮ. ಶುದ್ಧ ಭಕ್ತ ಮಾತ್ರ ಅದರ ಮೂಲತತ್ತ್ವವನ್ನು ಕಾಣುತ್ತಾನೆ ಮತ್ತು ಅದರ ಸಹವಾಸದಿಂದ ಫಲ ಪಡೆಯುತ್ತಾನೆ. ಪ್ರಭುಪಾದರು ನಾಮ-ಪ್ರಭು ಪದವನ್ನು ಬಳಸುತ್ತಾರೆ ಮತ್ತು ಅದು ಶಕ್ತಿ ಆವೇಶ ಅವತಾರ. ಇದು ಪ್ರಭುವಿನ ಅವತಾರ ಮತ್ತು ಪ್ರತಿ ಅವತಾರದಲ್ಲಿಯೂ ಲೀಲೆಗಳಿವೆ. ನಾಮ ಚಿಂತಾಮಣಿ ರಸ ವಿಗ್ರಹ ಕೃಷ್ಣ ಚೈತನ್ಯ. ಅವನ ನಾಮವು ರಸ ವಿಗ್ರಹ, ಅಂದರೆ ನಾಮಕ್ಕೆ ಜೀವದೊಂದಿಗೆ ರಸವಿರಬೇಕು. ಯಾವುದು ಆ ರಸ? ಅವನ ರಸವೆಂದರೆ, ಅವನಿಗೆ ನಮ್ಮನ್ನು ಈ ಲೌಕಿಕ ಲೋಕದಿಂದ ಮುಕ್ತಗೊಳಿಸಬೇಕಾಗಿದೆ. ರಸ ಎಂದರೆ ಕೊಡುವುದು ಮತ್ತು ಪಡೆಯುವುದು. ಅವನು ನಮಗೆ ಮೊದಲು ಅಲೌಕಿಕ ಜ್ಞಾನವನ್ನು ನೀಡುತ್ತಾನೆ. ಆ ಜ್ಞಾನಕ್ಕೆ ಲೌಕಿಕ ಪ್ರಕೃತಿಯ ಮೂರು ಗುಣಗಳನ್ನು ಬಿಡಿಸುವ ಶಕ್ತಿ ಇದ್ದಾಗ, ಆಗ ಅದು ಸಾಕ್ಷಾತ್ಕಾರಗೊಂಡ ಜ್ಞಾನ ಮತ್ತು ಹರೇ ಕೃಷ್ಣ ಜಪದಿಂದ ಬರುತ್ತದೆ.

ಶ್ರವಣಂ

ನೀವು ಪ್ರಭುಪಾದರ ಗ್ರಂಥಗಳನ್ನು ಓದಬಹುದು. ಆದರೆ ನೀವು ಶಬ್ದ ಬ್ರಹ್ಮನ್‌ ಅನ್ನು ಸ್ಪರ್ಶಿಸದಿದ್ದರೆ, ಈ ಭೌತಿಕ ಲೋಕದಿಂದ ಮುಕ್ತವಾಗುವ ಶಕ್ತಿ ನಿಮಗೆ ಲಭಿಸುವುದಿಲ್ಲ. ಇದು ಲೌಕಿಕ ಬುದ್ಧಿಯಿಂದ ಆಧ್ಯಾತ್ಮಿಕ ಬುದ್ಧಿಗೆ ಚಲಿಸುತ್ತದೆ. ಈ ಶ್ರವಣಂ ಮತ್ತು ಕೀರ್ತನಂ ಅನ್ನು ಶ್ರೇಷ್ಠವಾದ ಮುಕ್ತ ವೇದಿಕೆಯಲ್ಲಿ ಕಾರ್ಯಗತಗೊಳಿಸಲಾಗುವುದು. ನಿತ್ಯಂ ಭಾಗವತ ಸೇವಯ, ಕೇಳುವುದರಿಂದ ತಮೋ ಗುಣ, ರಜೋ ಗುಣ ಮತ್ತು ಸತ್ತ್ವ ಗುಣಗಳಿಂದ ಮುಕ್ತವಾಗಬಹುದು. ಅನಂತರ ಅಲೌಕಿಕ ಸತ್ತ್ವ. ಕೇಳುವುದು ಪ್ರಜ್ಞಾಪೂರ್ವಕ ಚಟುವಟಿಕೆ. ವಸ್ತುಗಳು ಕೇಳಲಾರವು, ಆತ್ಮವು ಕೇಳಬೇಕು. ಕೇಳುವುದರಿಂದ ಅದು ಶಕ್ತಿ ಪಡೆದುಕೊಳ್ಳುತ್ತದೆ. ಕಡುಬಿನ ಸ್ವಾದ ತಿಂದಾಗಲೇ ಗೊತ್ತಾಗುವುದು. ನಿಮ್ಮನ್ನು ಕುಸಿಯುವಂತೆ ಮಾಡಲು ಮನಸ್ಸಿಗೆ ಅವಕಾಶ ನೀಡಬೇಡಿ, ಜಪಿಸುವುದು ಮತ್ತು ಕೇಳುವುದನ್ನು ಮುಂದುವರಿಸಿ. ಜ್ಞಾನವು ತುಂಬ ಮುಖ್ಯವಲ್ಲ. ಶಕ್ತಿಯು ಮೊದಲು ನಿಮ್ಮನ್ನು ಮೇಲಕ್ಕೆತ್ತುತ್ತದೆ. ನಿಮಗೆ ನಾಲ್ಕನೆಯ ಮಹಡಿಗೆ ಹೋಗಬೇಕೆನಿಸಿದರೆ, ಅಲ್ಲಿ ಜ್ಞಾನವಿದೆ, ಎಡಕ್ಕೆ ಹೋಗಿ, ಬಲಕ್ಕೆ ಹೋಗಿ, ಇವೆಲ್ಲ ಇರುತ್ತವೆ. ಆದರೆ ಯಾರೋ ನಿಮಗೆ ಶಕ್ತಿ ನೀಡಿ ಹೇಳುತ್ತಾರೆ, ಅವೆಲ್ಲ ಬೇಡ, ನಾನು ನಿಮ್ಮನ್ನು ನೇರವಾಗಿ ಮೆಲಕ್ಕೆತ್ತುವೆ. ನಾವು ಸಹವಾಸವನ್ನು ಪಡೆದರೆ, ನಾವು ದೋಷರಹಿತವಾಗಿ ಜಪಿಸಲು ಕಲಿತರೆ ನಮ್ಮನ್ನು ಮುಕ್ತಗೊಳಿಸಲು ಭಗವಂತನೂ ಕಾತರನಾಗಿರುತ್ತಾನೆ. ಸರಿಯಾಗಿ ಕೇಳುತ್ತ ನೀವು ಜಪಿಸತೊಡಗಿದರೆ, ಮುಕ್ತಿಯು ದೊಡ್ಡ ವಿಷಯವೇ ಅಲ್ಲ. ಇವೆಲ್ಲವೂ ಶ್ರೀಲ ಪ್ರಭುಪಾದರ ಬೋಧನೆ. ನೀವು ಹೇಗೆ ಮುಕ್ತರಾಗುವಿರಿ ಎಂಬುವುದನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಒಂದು ಕ್ಷಣ ನೀವು ಮುಕ್ತರಾಗಿರುವಿರಿ, ಮರು ಕ್ಷಣ ಮನಸ್ಸು ನಿಮ್ಮನ್ನು ಲೌಕಿಕ ಲೋಕಕ್ಕೆ ಕರೆದೊಯ್ಯುತ್ತದೆ. ಅದು ಕ್ಷಣಿಕವಾಗಿರುವುದರಿಂದ ನಮಗೆ ಅದನ್ನು ಅನುಭವಿಸುವುದು ಸಾಧ್ಯವಾಗುವುದಿಲ್ಲ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi