ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅವರ ಶಿಷ್ಯರ ನಡುವೆ ಪ್ಯಾರಿಸ್ನಲ್ಲಿ, 1974ರ ಜೂನ್ನಲ್ಲಿ ನಡೆದ ಸಂವಾದ.
ಭಕ್ತ: ಕೆಲವು ದಿನಗಳ ಹಿಂದೆ ಒಬ್ಬನು ದೇವಸ್ಥಾನಕ್ಕೆ ಬಂದಿದ್ದ. ಅವನು ಸಾವಿನ ಅನಂತರದ ಬದುಕಿನ ಬಗೆಗೆ ವಾದ ಮಾಡುತ್ತಿದ್ದ. ಅವನ ಅಭಿಪ್ರಾಯವೆಂದರೆ, ಸಾವಿನ ಅನಂತರ ಬದುಕಿದೆ ಎಂದು ನಾವು ಖಚಿತವಾಗಿ ಹೇಳಲಾರೆವು. ಆದುದರಿಂದ ಅದರ ಬಗೆಗೆ ಚಿಂತೆ ಯಾಕೆ? ಅದನ್ನು ಯೋಚಿಸುವುದಕ್ಕಿಂತ ಸಮೃದ್ಧ ಸಮಾಜ ನಿರ್ಮಾಣ ಒಳ್ಳೆಯದಲ್ಲವೇ? ಅವನ ಮಾತಿನ ಲಹರಿ ಹಾಗಿತ್ತು.

ಶ್ರೀಲ ಪ್ರಭುಪಾದ: ಸಾವಿನ ಅನಂತರ ಆತ್ಮವು ಮತ್ತೊಂದು ದೇಹವನ್ನು ಪಡೆದುಕೊಳ್ಳುತ್ತದೆ ಎಂಬುವುದನ್ನು ಅವನು ಅರ್ಥ ಮಾಡಿಕೊಳ್ಳಲಾರ. ಅವನ ಪ್ರಸ್ತುತ ದೇಹದಿಂದ ಅವನನ್ನು ಒದ್ದೋಡಿಸಲಾಗುತ್ತದೆ ಎಂಬುದನ್ನಾದರೂ ಅವನು ಅರ್ಥಮಾಡಿಕೊಳ್ಳಬಹುದು. ಅವನು ಇದನ್ನೂ ಅರ್ಥ ಮಾಡಿಕೊಂಡಿಲ್ಲವೇ?
ಭಕ್ತ: ಆರ್ಥಿಕ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳವುದು ಹೆಚ್ಚು ಮುಖ್ಯ ಎಂಬ ಆಲೋಚನೆ ಅವನದು.
ಶ್ರೀಲ ಪ್ರಭುಪಾದ: ಆದುದರಿಂದ ಅವನೊಬ್ಬ ಮೂರ್ಖ. ಈ ರೀತಿ ನೋಡಿ, ನಾನು ಇಲ್ಲಿ ಪ್ಯಾರಿಸ್ಗೆ ಭೇಟಿ ನೀಡುತ್ತಿರುವೆ. ನೀವು ಹೇಳುವಿರಿ, `ನಿಮ್ಮ ವಿಸಾ ಅವಧಿ ಮುಗಿದ ಕೂಡಲೇ ನಿಮ್ಮನ್ನು ಇಲ್ಲಿಂದ ಓಡಿಸಲಾಗುತ್ತದೆ.’ ಹಾಗಿದ್ದಾಗ ಏನಾದರೂ ದೊಡ್ಡದಾಗಿ ರೂಪಿಸುವ ಆಸಕ್ತಿ ನನಗೆ ಇರುತ್ತದೆಯೇ? ಎರಡು ತಿಂಗಳ ಅನಂತರ ನನ್ನನ್ನು ಓಡಿಸಲಾಗುತ್ತದೆ, ನಾನು ಯಾಕೆ ದೊಡ್ಡ ಕಟ್ಟಡ ನಿರ್ಮಿಸಲಿ? ಮೂರ್ಖರಷ್ಟೇ ಅದನ್ನು ಮಾಡುವರು. ಈ ಮೂರ್ಖನಿಗೆ ತನ್ನನ್ನು ಒದ್ದೋಡಿಸುತ್ತಾರೆಂದು ಗೊತ್ತಿದ್ದರೂ ಅವನು ರಾತ್ರಿ ಹಗಲೂ ದುಡಿದು ಇಟ್ಟಿಗೆ, ಕಲ್ಲು ಸಂಗ್ರಹಿಸುತ್ತಾನೆ ಮತ್ತು `ದೊಡ್ಡ ವ್ಯಕ್ತಿ’ಯಾಗುತ್ತಾನೆ. ಮೂರ್ಖನನ್ನು ದೊಡ್ಡ ಮನುಷ್ಯನೆಂದು ಪರಿಗಣಿಸಲಾಗುತ್ತಿದೆ. ಆದುದರಿಂದ ಶ್ರೀಮದ್ ಭಾಗವತದಲ್ಲಿ ಹೇಳಲಾಗಿದೆ, (2.3.19) ಶ್ವ ವಿಡ್ ವರಾಹೋಶ್ಬ್ರ ಖರೈಃ ಸಂಸ್ತುತಃ ಪುರುಷಃ ಪಶುಃ `ನಾಯಿ, ಹಂದಿ, ಒಂಟೆ ಮತ್ತು ಕತ್ತೆಗಳಂತಿರುವವರು ಮಾತ್ರ ಆ ಮೂರ್ಖರನ್ನು, ಭಕ್ತರಲ್ಲದವರನ್ನು ಹಾಡಿ ಹೊಗಳುತ್ತಾರೆ.’
ಭಕ್ತ: ಭಗವಂತನು ನಮಗೆ ಇಂದ್ರಿಯಗಳನ್ನು ನೀಡಿದ್ದಾನೆ, ನಾವು ಅವುಗಳಿಂದ ಆನಂದಿಸಬೇಕು ಎಂದು ಕೆಲವರು ಕೆಲವು ಸಂದರ್ಭಗಳಲ್ಲಿ ವಾದಿಸುತ್ತಾರೆ.
ಶ್ರೀಲ ಪ್ರಭುಪಾದ: ನಾಯಿಗಳೂ ಇಂದ್ರಿಯ ಸುಖ ಅನುಭವಿಸುತ್ತವೆ. ನಾಯಿ ಅನುಭವಿಸದ ಯಾವ ಸುಖವನ್ನು ನೀವು ಅನುಭವಿಸುತ್ತಿರುವಿರಿ ಎಂದು ನಾನು ಅಂತಹ ಜನರನ್ನು ಕೇಳಬಯಸುತ್ತೇನೆ. ನೀವು ಮಲಗುವಿರಿ, ನಾಯಿಗಳೂ ಮಲಗುತ್ತವೆ; ನೀವು ಉಣ್ಣುವಿರಿ, ನಾಯಿಗಳೂ ಉಣ್ಣುತ್ತವೆ; ನೀವು ಲೈಂಗಿಕ ಸುಖ ಅನುಭವಿಸುವಿರಿ, ನಾಯಿಗಳೂ ಅನುಭವಿಸುತ್ತವೆ; ನಿಮಗೆ ಶತ್ರುಗಳೆಂದರೆ ಭಯ, ನಾಯಿಗಳಿಗೂ ಶತ್ರುಗಳೆಂದರೆ ಭಯ. ಆದುದರಿಂದ ನಾಯಿ ಮತ್ತು ನಿಮ್ಮ ಮನಃಸ್ಥಿತಿಯಲ್ಲಿನ ವ್ಯತ್ಯಾಸವಾದರೂ ಏನು?
ನೀವು ಏನೂ ಅಲ್ಲ ಮತ್ತು ದೇವರೇ ಎಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವ ಬುದ್ಧಿ ಶಕ್ತಿಯನ್ನು ಭಗವಂತ ನಿಮಗೆ ನೀಡಿದ್ದಾನೆ. ಅದನ್ನು ಗ್ರಹಿಸಿಕೊಳ್ಳಿ – ಅದೇ ಬುದ್ಧಿವಂತಿಕೆ. `ದೇವರು ದೊಡ್ಡವನು, ನಾನು ಅವನ ಸೇವಕ’, ಎಂಬುವುದನ್ನು ನೀವು ಅರ್ಥಮಾಡಿಕೊಂಡರೆ ಅದು ನಿಜವಾದ ಜಾಣ್ಮೆ. ಇಲ್ಲವಾದರೆ ನೀವು ಪಕ್ಕಾ ನಾಯಿಯಂತೆಯೇ.
ಭಕ್ತ: ದೇವರು ಸತ್ತಿದ್ದಾನೆ ಎಂಬುದಕ್ಕೆ ಜನರ ಬಳಿ ಕಾರಣಗಳಿವೆ.
ಶ್ರೀಲ ಪ್ರಭುಪಾದ: ಅಂತಹವರಿಗೆ ನನ್ನ ಉತ್ತರ, ದೇವರಲ್ಲ, ನಿಮ್ಮ ಬುದ್ಧಿ ಸತ್ತಿದೆ. ನಿಮ್ಮ ಬಳಿ ಮೃತ ದೇಹವಿದೆ ಮತ್ತು ನೀವು ಅದಕ್ಕೆ ಹೆಮ್ಮೆಪಟ್ಟುಕೊಳ್ಳುವಿರಿ. ದೇಹವು ಒಂದು ಮೋಟಾರ್ ಕಾರಿನಂತೆ. ಕಾರು ಸತ್ತಿದೆ, ಚಾಲಕ ಇಲ್ಲದಿದ್ದರೆ ಅದು ಓಡುವುದೇ ಇಲ್ಲ ಅರ್ಥಾತ್ ಕೆಲಸ ಮಾಡುವುದಿಲ್ಲ. ಅದೇ ರೀತಿ, ದೇಹ ಸತ್ತಿದೆ. ನೀವು ಅಂದರೆ ಆತ್ಮ, ದೇಹದಿಂದ ಹೊರಗೆ ಬಂದ ಕೂಡಲೇ ದೇಹ ಕೆಲಸ ಮಾಡುವುದಿಲ್ಲ. ಅಂದರೆ ನೀವು ಮೃತ ದೇಹದಲ್ಲಿ ನೆಲೆಸಿದ್ದೀರಿ. ನೀವು ಅಲ್ಲಿ ಇರುವವರೆಗೆ ಅದು ಕೆಲಸ ಮಾಡುತ್ತಿರುತ್ತದೆ. ಆದರೆ, ವಾಸ್ತವವಾಗಿ ದೇಹ ಸತ್ತಿರುತ್ತದೆ. ನೀವು ಮೃತ ದೇಹವನ್ನು ಅಲಂಕರಿಸುತ್ತಿರುವಿರಿ. ನಿಮ್ಮೆಲ್ಲ ಸೊತ್ತು, ಸ್ವಾಧೀನಗಳು ಸುಮ್ಮನೆ ಮೃತದೇಹದ ಅಲಂಕಾರಗಳು ಅಷ್ಟೇ. ಅಪ್ರಾಣಸ್ಯ ಹಿ ದೇಹಸ್ಯ ಮಂಡನಂ ಲೋಕ ರಂಜನಂ. ಕೆಲವು ಮೂರ್ಖರು ಹೇಳಬಹುದು, “ಓ! ನೀವೆಷ್ಟು ಬುದ್ಧಿವಂತರು, ನೀವು ಎಷ್ಟು ಚೆನ್ನಾಗಿ ದೇಹವನ್ನು ಅಲಂಕರಿಸಿಕೊಂಡಿದ್ದೀರಿ.” ಆದರೆ ಒಬ್ಬ ಬುದ್ಧಿವಂತನ ಉದ್ಗಾರವೇ ಬೇರೆ. `ಅವನು ಮೃತ ದೇಹವನ್ನು ಅಲಂಕರಿಸುತ್ತಿದ್ದಾನೆ, ಎಂತಹ ಮೂರ್ಖ!’ ಎಂದು ಅವರು ಹೇಳಬಹುದು.

ಭಕ್ತ: ಮಂದಿರದಲ್ಲಿ ನಾವು ಯಾಕೆ ವಿಗ್ರಹಗಳನ್ನು ಅಲಂಕರಿಸುತ್ತೇವೆ ಎಂದು ಕೆಲವರು ಕೇಳಬಹುದು.
ಶ್ರೀಲ ಪ್ರಭುಪಾದ: ಏಕೆಂದರೆ ಅದು ಸತ್ತಿಲ್ಲ. ಅದು ಜೀವಂತವಿದೆ. ನಾವು ಜೀವಂತ ದೇಹವನ್ನು ಅಲಂಕರಿಸುತ್ತಿದ್ದೇವೆ ಎಂಬುವುದು ಅಂತಹ ವಾದ ಮಾಡುವವರಿಗೆ ಗೊತ್ತಿಲ್ಲ.
ಭಕ್ತ: ಭಗವಂತನ ವಿಗ್ರಹವು ಜೀವಂತ ದೇಹ ಎಂದು ನೀವು ಹೇಳುತ್ತಿರುವಿರಿ. ಆದರೆ ಅದು ಕಲ್ಲಿನಂತೆ ಕಾಣುತ್ತದೆ. ದೇವರ ಮೂರ್ತಿಯಲ್ಲಿ ಜೀವ ಇರುವ ಲಕ್ಷಣಗಳಿಲ್ಲ.
ಶ್ರೀಲ ಪ್ರಭುಪಾದ: ಅಲ್ಲಿ ಜೀವವಿದೆ, ಪರಮ ಜೀವವದು. ಆದರೆ ಅದನ್ನು ನೋಡುವ ಕಣ್ಣುಗಳು ನಿಮಗಿಲ್ಲ. ಪ್ರೇಮಾಂಜನ ಛುರಿತ ಭಕ್ತಿ ವಿಲೋಚನೇನ. ವಿಗ್ರಹ ಜೀವಂತ ಎಂಬುವುದನ್ನು ಒಬ್ಬ ಭಕ್ತ ನೋಡಬಲ್ಲ. ಮೃತ ದೇಹವನ್ನು ಪೂಜಿಸಲು ನಾವೇನು ಮೂರ್ಖರೇ? ಅಷ್ಟೆಲ್ಲ ಧರ್ಮ ಗ್ರಂಥಗಳನ್ನು ಓದಿದ ಮೇಲೂ ನಾವು ಕಲ್ಲನ್ನು ಪೂಜಿಸುತ್ತಿದ್ದೇವೆಂದು ನೀವು ಭಾವಿಸುವಿರಾ? ಸತ್ಯವನ್ನು ನೋಡುವ ಕಣ್ಣುಗಳು ನಿಮಗಿಲ್ಲ. ವಿಗ್ರಹಗಳಲ್ಲಿ ಕೃಷ್ಣನು ಇದ್ದಾನೆ ಎಂಬುವುದನ್ನು ನೋಡಲು ನೀವು ನಿಮ್ಮ ದೃಷ್ಟಿಯನ್ನು ಶುದ್ಧಗೊಳಿಸಿಕೊಳ್ಳಬೇಕು.

ಭಕ್ತ: ಎಷ್ಟೋ ಜನರಿಗೆ ಆತ್ಮದ ಅಸ್ತಿತ್ವವನ್ನೇ ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗಿಲ್ಲ. ಹೀಗಾಗಿ ಅವರು ವಿಗ್ರಹವನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ?
ಶ್ರೀಲ ಪ್ರಭುಪಾದ: ಆದುದರಿಂದಲೇ ಈ ವಿಜ್ಞಾನವನ್ನು ಅರಿಯಲು ಅವರು ನಮ್ಮ ವಿದ್ಯಾರ್ಥಿಗಳಾಗಬೇಕು, ಶಿಷ್ಯರಾಗಬೇಕು. ಆಗ ಅವರಿಗೆ ಕಲ್ಲು ವಿಗ್ರಹವೂ ಕೃಷ್ಣ ಎನ್ನುವುದು ಗೊತ್ತಾಗುತ್ತದೆ.
ಭಕ್ತ: ಹಾಗಾದರೆ, ವಿಗ್ರಹದಂತೆ ಮಣ್ಣಿನಿಂದ ಮಾಡಿರುವ ನನ್ನ ದೇಹವೂ ಕೃಷ್ಣನೇ?
ಶ್ರೀಲ ಪ್ರಭುಪಾದ: ಇಲ್ಲ. ಆದರೆ ಅದು ಕೃಷ್ಣನ ಶಕ್ತಿ. ಆದುದರಿಂದ ಕೃಷ್ಣ ಸೇವೆಯಲ್ಲಿ ದೇಹವನ್ನು ತೊಡಗಿಸಿಕೊಳ್ಳಬೇಕು. ಅದೇ ಕೃಷ್ಣ ಪ್ರಜ್ಞೆ. ದೇಹವು ಕೃಷ್ಣನ ಶಕ್ತಿ ಎಂಬುವುದು ನಿಮಗೆ ಅರ್ಥವಾದ ಕೂಡಲೇ ನೀವು ಅದನ್ನು ಕೃಷ್ಣ ಸೇವೆ ಬಿಟ್ಟು ಬೇರೆ ಇನ್ಯಾವುದಕ್ಕೂ ತೊಡಗಿಸಿಕೊಳ್ಳುವುದಿಲ್ಲ. ಆದರೆ ಜನರಿಗೆ ಈ ಅರಿವಿಲ್ಲ. ಈ ದೇಹ ತಮ್ಮದು ಅಥವಾ ತಾವೇ ದೇಹ ಎಂದು ಅವರು ಯೋಚಿಸುತ್ತಾರೆ. ಅದು ಭ್ರಮೆ.

ಭಕ್ತ: ಶ್ರೀ ಕೃಷ್ಣನು ಎಲ್ಲರ ಹೃದಯದಲ್ಲಿ ಇದ್ದಾನೆ (ಭಗವದ್ಗೀತೆ 18.61) ಎಂಬ ವಾಕ್ಯವನ್ನು ಓದಿ ನಿರಾಕಾರವಾದಿ ತತ್ತ್ವಜ್ಞಾನಿಗಳು, ಕೃಷ್ಣನು ಎಲ್ಲ ಜೀವಿಗಳ ಹೃದಯದಲ್ಲಿ ಇರುವುದರಿಂದ, ಪ್ರತಿಯೊಬ್ಬ ಜೀವಿಯೂ ಕೃಷ್ಣನೇ ಎಂದು ಹೇಳುತ್ತಾರೆ.
ಶ್ರೀಲ ಪ್ರಭುಪಾದ: ಯಾಕೆ? ನಾನು ಒಂದು ಕೋಣೆಯಲ್ಲಿರುತ್ತೇನೆ ಎಂದುಕೊಳ್ಳಿ. ಹಾಗೆಂದರೆ ನಾನು ಕೋಣೆಯಾಗಿಬಿಟ್ಟೇನೆಯೆ? ಈ ವಾದ ಹೇಗೆನ್ನಿಸುತ್ತದೆ? ಕೃಷ್ಣ ನನ್ನ ದೇಹದಲ್ಲಿದ್ದಾನೆ ಮತ್ತು ನಾನೂ ನನ್ನ ದೇಹದಲ್ಲಿದ್ದೇನೆ. ಹಾಗೆಂದು ನಾನೇ ದೇಹ ಎಂದು ಅರ್ಥವೇ? ಅಥವಾ ಕೃಷ್ಣನೇ ದೇಹವೆಂದು ಅರ್ಥವೇ? ಕೃಷ್ಣ ಎಲ್ಲವೂ ಹೌದು, ಆದರೂ ಕೃಷ್ಣ ಎಲ್ಲದಕ್ಕಿಂತ ಬೇರೆ.
ಕೃಷ್ಣ ಹೇಳುತ್ತಾನೆ (ಭಗವದ್ಗೀತೆ 9.4)
ಮಯಾ ತತಂಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ ।
ಮತ್ಸ್ಥಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ ॥
ನನ್ನ ಅವ್ಯಕ್ತ ಸ್ವರೂಪದಲ್ಲಿ ನಾನು ಇಡೀ ವಿಶ್ವವನ್ನು ವ್ಯಾಪಿಸಿದ್ದೇನೆ. ಎಲ್ಲ ಜೀವಿಗಳೂ ನನ್ನಲ್ಲಿದ್ದಾರೆ. ನಾನು ಅವರಲ್ಲಿ ಇಲ್ಲ.
ಇದು ಏಕ ಕಾಲದಲ್ಲಿ ಒಂದಾಗಿರುವುದು ಮತ್ತು ಭಿನ್ನವಾಗಿರುವುದು. (ಅಚಿಂತ್ಯ-ಭೇದಾಭೇದ-ತತ್ತ್ವ)
ಭಕ್ತ: ಇತರೆ ಧರ್ಮಗಳು ಮಾಹಿತಿ ನೀಡುವುದಿಲ್ಲ …
ಶ್ರೀಲ ಪ್ರಭುಪಾದ: ನಾವು ಧರ್ಮದ ಬಗೆಗೆ ಮಾತನಾಡುತ್ತಿಲ್ಲ. ನಾವು ವಿಜ್ಞಾನದ ಬಗ್ಗೆ ಮಾತನಾಡುತ್ತಿದ್ದೇವೆ. ಇಲ್ಲಿ `ಧರ್ಮ’ವನ್ನು ತರಬೇಡಿ. ಅನೇಕ ಧರ್ಮಗಳಿವೆ, ಅಲ್ಲಿ ಜನರು ಅಂಧರಂತೆ ನಿರ್ವಹಿಸುತ್ತಾರೆ. ಅಂತಹ `ಧರ್ಮ’ ನಮಗೆ ಸಂಬಂಧಿಸಿದ್ದಲ್ಲ. ನಾವು ವಿಜ್ಞಾನದ ಬಗೆಗೆ ಮಾತನಾಡುತ್ತಿದ್ದೇವೆ.
ಭಕ್ತ: ಭಗವಂತನ ಶಕ್ತಿ ಹೇಗೆ ಕೆಲಸ ಮಾಡುತ್ತಿದೆ ಎಂಬ ವಿಜ್ಞಾನವೇ?
ಶ್ರೀಲ ಪ್ರಭುಪಾದ: ಹೌದು. ಉದಾಹರಣೆಗೆ, ಶಾಖವು ಬೆಂಕಿಯ ಶಕ್ತಿ. ಆದ್ದರಿಂದ ಶಾಖವು ಬೆಂಕಿಯೆಂದು ಹೇಳಬಹುದು. ಆದರೆ ಅದೇ ಸಮಯದಲ್ಲಿ ಅದು ಬೆಂಕಿಯಲ್ಲ. ಅದು ಏಕಕಾಲಕ್ಕೆ ಬೆಂಕಿಯಿಂದ ಒಂದು ಮತ್ತು ಭಿನ್ನ.
ಭಕ್ತ: `ಶಿಲೆಯೂ ಕೃಷ್ಣನಾದರೆ, ನೀವು ಯಾಕೆ ಎಲ್ಲ ಕಲ್ಲನ್ನೂ ಪೂಜಿಸುತ್ತಿಲ್ಲ?’ ಎಂದು ಯಾರಾದರೂ ಹೇಳಿದರೆ …
ಶ್ರೀಲ ಪ್ರಭುಪಾದ: ಕಲ್ಲಿನಲ್ಲಿ ಕೃಷ್ಣನ ರೂಪ ಮಾಡಿದಾಗ ನಾವು ಶಿಲೆಯನ್ನು ಪೂಜಿಸುತ್ತೇವೆ. ನಾವು ಎಲ್ಲ ಕಲ್ಲನ್ನೂ ಪೂಜಿಸುತ್ತೇವೆ ಎಂದಲ್ಲ. ತನ್ನ ಶಕ್ತಿಯ ವಿಸ್ತರಣೆಯಿಂದ ಕೃಷ್ಣ ಎಲ್ಲವೂ ಹೌದು ಎಂದಾಕ್ಷಣ ನಾವು ಎಲ್ಲವನ್ನೂ ಪೂಜಿಸಲಾಗದು. ಅದರರ್ಥ ನಾವು ನಾಯಿಯನ್ನೂ ಪೂಜಿಸಬೇಕೆಂದಲ್ಲ. ನಮ್ಮದೇನಿದ್ದರೂ ಕೃಷ್ಣನ ರೂಪವನ್ನು ಪೂಜಿಸುವುದು.






Leave a Reply