ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಘದ ಸಿ. ಹೆನ್ನಿಸ್ ಅವರ ನಡುವೆ 1974 ರ ಮೇ 31ರಂದು ಜಿನೀವಾದಲ್ಲಿ ಮುಂದುವರಿದ ಸಂವಾದ.

ಶ್ರೀಲ ಪ್ರಭುಪಾದ : ಸಾಮಾಜಿಕ ಶರೀರದಲ್ಲಿ ಮಿದುಳಿನಂತೆ ಕಾರ್ಯ ನಿರ್ವಹಿಸುವ ಮತ್ತು ಎಲ್ಲರಿಗೂ ಮಾರ್ಗದರ್ಶನ ನೀಡುವ ಸಮರ್ಥ ವ್ಯಕ್ತಿಗಳ ವರ್ಗ ಇರಬೇಕು. ಇದರಿಂದ ಎಲ್ಲರೂ ಸುಖವಾಗಿರಬಹುದು. ನಮ್ಮ ಆಂದೋಲನದ ಉದ್ದೇಶವೇ ಅದು.
ಹೆನ್ನಿಸ್ : ಅದು ಸೂಕ್ತವಾದ ಅಂಶ. ಏಕೆಂದರೆ, ಪ್ರತಿಯೊಂದು ಸಮಾಜದಲ್ಲಿಯೂ ಪುರೋಹಿತ/ಪಾದ್ರಿ ವರ್ಗ ಅಥವಾ ತತ್ತ್ವಜ್ಞಾನ ನಾಯಕರ ಅಗತ್ಯವಿದೆ ಎಂಬುವುದನ್ನು ಯಾವಾಗಲೂ ಒಪ್ಪಿಕೊಳ್ಳಲಾಗಿದೆ.
ಶ್ರೀಲ ಪ್ರಭುಪಾದ : ಆದರೆ ಅದೇ ಪಾದ್ರಿ ವರ್ಗವು ತನ್ನ ಮನಸೋ ಇಚ್ಛೆ ಬೈಬಲ್ ಆದೇಶಗಳಿಗೆ ತಿದ್ದುಪಡಿ ಮಾಡುತ್ತಿದೆ. ಉದಾಹರಣೆಗೆ, “ನೀವು ಕೊಲ್ಲಬಾರದು” ಎಂದು ಬೈಬಲ್ ಹೇಳುತ್ತದೆ. ಆದರೆ ಪಾದ್ರಿ ವರ್ಗವು ಇತರ ವರ್ಗಗಳಂತೆ – ಕಸಾಯಿಖಾನೆಗೆ ಮಂಜೂರು ನೀಡುತ್ತದೆ. ಆದುದರಿಂದ ಅವರು ಹೇಗೆ ಮಾರ್ಗದರ್ಶನ ನೀಡಬಲ್ಲರು?
ಹೆನ್ನಿಸ್ : ಆದರೆ ಪ್ರಾಣಿ ಜಗತ್ತು ಒಂದನ್ನೊಂದು ಭಕ್ಷಿಸುವ ಜೀವಿಗಳಿಂದ ಕೂಡಿದೆ. ಕಸಾಯಿಖಾನೆಗೆ ಜನರು ಈ ರೀತಿ ಸಮರ್ಥಿಸಿಕೊಳ್ಳಬಹುದು – ಸಿಂಹವೊಂದು ಬೇರೆ ಪ್ರಾಣಿ ಮೇಲೆ ಎರಗಿ ಸಾಯಿಸುವುದಕ್ಕಿಂತ ಅದು ಹೆಚ್ಚು ಸ್ವಚ್ಛವಾಗಿರುತ್ತದೆ.
ಶ್ರೀಲ ಪ್ರಭುಪಾದ : ಆದರೆ ಮಾನವ ಜೀವಿಗಳಾಗಿ ನಿಮಗೆ ವ್ಯತ್ಯಾಸ ಗುರುತಿಸುವ ಶಕ್ತಿ ಇರಬೇಕು. ನಿಮಗೆ ನಿಮ್ಮ ಮಿದುಳು ಮಾರ್ಗದರ್ಶನ ನೀಡಬೇಕು ಮತ್ತು ಸಮಾಜಕ್ಕೆ ಪಾದ್ರಿಗಳ, ಚಿಂತನಶೀಲ `ಬುದ್ಧಿ ವರ್ಗ’ವು ಮಾರ್ಗದರ್ಶನ ಕೊಡಬೇಕು. ಪ್ರಕೃತಿಯು ಹಣ್ಣು, ತರಕಾರಿ, ಧಾನ್ಯ, ಹಾಲು ಎಲ್ಲವನ್ನು ಮಾನವರಿಗೆ ಸಮೃದ್ಧವಾಗಿ ನೀಡಿದೆ. ಇವುಗಳೆಲ್ಲ ಪೌಷ್ಟಿಕಾಂಶ ಹೊಂದಿದ್ದು ಈ ಪರಿಪೂರ್ಣ ಆಹಾರದಿಂದ ಮಾನವನು ಸಂತೃಪ್ತನಾಗಬೇಕು. ಅವರೇಕೆ ಕಸಾಯಿಖಾನೆಯನ್ನು ಇಟ್ಟುಕೊಳ್ಳಬೇಕು? ದೈವಾಜ್ಞೆಯನ್ನು ಪಾಲಿಸದೆ ಪಾಪಿಗಳಾಗಿರುವುದರಿಂದ ತಾವು ಸುಖವಾಗಿಬಹುದೆಂದು ಅವರು ಅದ್ಹೇಗೆ ಯೋಚಿಸುವರು? ಇದರರ್ಥ ಸಮಾಜಕ್ಕೆ ಮಿದುಳಿಲ್ಲ.
ಹೆನ್ನಿಸ್ : ಜನರಿಗೆ ಮಿದುಳು ಕೊಡುವ ವಿಷಯವು ನಮ್ಮ ಸಂಸ್ಥೆಗೆ ನೇರವಾಗಿ ಸಂಬಂಧಿಸಿದ್ದಲ್ಲ.
ಶ್ರೀಲ ಪ್ರಭುಪಾದ : ನಿಮ್ಮ ಸಂಸ್ಥೆಗೆ ನೇರವಾಗಿ ಸಂಬಂಧಿಸಿಲ್ಲದಿರಬಹುದು. ಆದರೆ ಮಾನವ ಸಮಾಜಕ್ಕೆ ಮಿದುಳಿಲ್ಲವಾದರೆ, ನೀವು ಸಂಘಟಿಸಲು ಎಷ್ಟೇ ಪ್ರಯತ್ನಿಸಿದರೂ ಸಮಾಜವು ಎಂದೂ ಸುಖವಾಗಿರುವುದು ಸಾಧ್ಯವಿಲ್ಲ. ಅದು ನನ್ನ ಮಾತು.
ಹೆನ್ನಿಸ್ : ಸರಿಯಾದ ಮಿದುಳು ಹೊಂದಲು ಜನರಿಗೆ ಆಗುತ್ತಿರುವ ಅಡ್ಡಿಯನ್ನು ಸರಿಪಡಿಸುವುದೇ ನಮ್ಮ ಸಂಸ್ಥೆಯ ಕಾಳಜಿಯಾಗಿದೆ. ಅಂತಹ ಅಡಚಣೆಗಳಲ್ಲಿ ಬಡತನವೂ ಒಂದು.
ಶ್ರೀಲ ಪ್ರಭುಪಾದ : ಅಲ್ಲ. ಮುಖ್ಯವಾದುದು ಬೇರೆ. ಸಮಾಜವು ಮೊದಲು ಪುಣ್ಯ ಮತ್ತು ಪಾಪ ಕಾರ್ಯಗಳ ನಡುವಣ ವ್ಯತ್ಯಾಸವನ್ನು ಅರಿಯಬೇಕು. ಜನರು ಪಾಪ ಕಾರ್ಯಗಳಲ್ಲಿ ಅಲ್ಲ, ಪುಣ್ಯ ಕೆಲಸಗಳಲ್ಲಿ ತೊಡಗಬೇಕು. ಇಲ್ಲವಾದರೆ, ಅವರಿಗೆ ಮಿದುಳೇ ಇಲ್ಲ. ಅವರು ಪ್ರಾಣಿಗಳಿಗಿಂತ ಉತ್ತಮರೇನಲ್ಲ. ನೈತಿಕತೆಯ ದೃಷ್ಟಿಯಲ್ಲಿ ಹೇಳುವುದಾದರೆ, ನಿಮ್ಮ ತಾಯಿಯನ್ನು ಕಸಾಯಿಖಾನೆಗೆ ಕಳುಹಿಸಲು ನೀವು ಇಷ್ಟಪಡುವಿರಾ? ನೀವು ಹಸುವಿನ ಹಾಲನ್ನು ಕುಡಿಯುವಿರಿ, ಆದುದರಿಂದ ಅದು ತಾಯಿಯಂತೆ. ಹಾಲು ಕುಡಿದ ಮೇಲೆ ನೀವು ಅದನ್ನು ಕಸಾಯಿಖಾನೆಗೆ ಅಟ್ಟುವಿರಿ. ಅದಕ್ಕೇ ನಾವು ಕೇಳುತ್ತೇವೆ. ಸಮಾಜದ ಬುದ್ಧಿ ಎಲ್ಲಿದೆ?
ಹೆನ್ನಿಸ್ : ನಿಸ್ಸಂದೇಹವಾಗಿ, ಪುಣ್ಯ ಮತ್ತು ಪಾಪ ಕರ್ಮಗಳ ಮಧ್ಯೆ ಇರುವ ವ್ಯತ್ಯಾಸಗಳ ಬಗೆಗೆ ನೀವು ಮಾತನಾಡುವಾಗ –
ಶ್ರೀಲ ಪ್ರಭುಪಾದ : ವಾಸ್ತವವಾಗಿ ಈಗ ಯಾರೂ ಈ ವ್ಯತ್ಯಾಸವನ್ನು ಮಾಡುತ್ತಿಲ್ಲ. ನಾವು ಮಾಡುತ್ತಿದ್ದೇವೆ. ನಾವು ಕೃಷಿ ಸಮುದಾಯಗಳನ್ನು ಸ್ಥಾಪಿಸಿ, ಹಸುಗಳನ್ನು ರಕ್ಷಿಸಿ ನಮ್ಮ ಈ ಆಲೋಚನೆಗಳನ್ನು ಪರಿಚಯಿಸಿದ್ದೇವೆ. ನಮ್ಮ ಹಸುಗಳು ಅಧಿಕ ಪ್ರಮಾಣದಲ್ಲಿ ಹಾಲು ನೀಡಿ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿವೆ. ಅವು ತುಂಬ ಖುಷಿಯಲ್ಲಿವೆ. “ಇವರು ನಮ್ಮನ್ನು ಕೊಲ್ಲುವುದಿಲ್ಲ” ಎಂದು ಅವುಗಳಿಗೆ ಗೊತ್ತು. ಆದುದರಿಂದ ಅವು ಸಂತೋಷದಿಂದಿವೆ. ನಾವು ಅವುಗಳ ಕರುವನ್ನೂ ಕೊಲ್ಲುವುದಿಲ್ಲ. ಇತರ ಕೃಷಿ ಕೇಂದ್ರಗಳಲ್ಲಿ, ಹಸು ಕರುವಿಗೆ ಜನ್ಮ ನೀಡಿದ ಕೂಡಲೇ ಅವರು ಅದನ್ನು ತಾಯಿಯಿಂದ ಬೇರ್ಪಡಿಸಿ ಕೊಲ್ಲಲು ಕಳುಹಿಸುತ್ತಾರೆ. ನೋಡಿದಿರಾ, ಸಮಾಜಕ್ಕೆ ಬುದ್ಧಿ ಇಲ್ಲ. ನೀವು ನೂರಾರು ಸಂಸ್ಥೆಗಳನ್ನು ಕಟ್ಟಬಹುದು, ಆದರೆ ಸಮಾಜವು ಎಂದಿಗೂ ಸುಖವಾಗಿರದು. ಅದೇ ತೀರ್ಪು.
ಹೆನ್ನಿಸ್ : ನಾವು ಮಾಡುತ್ತಿರುವುದು ಪಾಪ ಕರ್ಮವೆಂದೇ ನಾವು ಯೋಚಿಸದಿರುವಾಗ ಪಾಪ ಕರ್ಮದಲ್ಲಿ ತೊಡಗಿದ್ದೇವೆ ಎಂದು ಆರೋಪಿಸುವುದು ಸಲ್ಲ.
ಶ್ರೀಲ ಪ್ರಭುಪಾದ (ನಗುತ್ತಾ) : ಓ! ದೇಶದ ಕಾನೂನು ಏನೆಂದು ಗೊತ್ತಿಲ್ಲದ ಕಾರಣ ನಿಮ್ಮ ಮೇಲೆ ಕಾನೂನು ಉಲ್ಲಂಘಿಸಿದ ಆರೋಪ ಮಾಡಬಾರದೆಂದು ಯೋಚಿಸುವಿರಾ? ವಿಷಯವೇನೆಂದರೆ, ಪಾಪ ಕರ್ಮ ಏನೆಂಬುವುದು ಗೊತ್ತಿಲ್ಲದ ನಿಮ್ಮ ಪಾದ್ರಿ ವರ್ಗ “ಪಾಪ ಕೃತ್ಯಗಳೇನನ್ನೂ ಮಾಡಬೇಡಿ” ಎಂದು ಬೋಧಿಸಬಹುದು. ಅದರಿಂದೇನು ಪ್ರಯೋಜನ? ಪಾಪ ಏನೆಂದು ತಿಳಿದಿರುವ ಪಾದ್ರಿ ವರ್ಗ ನಿಮ್ಮಲ್ಲಿರಬೇಕು. ಆಗ ಅವರು ಬೋಧಿಸಬಹುದು. ಆಗ ನೀವು ನಿಮ್ಮ ಪಾಪ ಕರ್ಮಗಳನ್ನು ಬಿಡಬಹುದು. ಈ ಯುವ ಜನರು ನನ್ನ ಬಳಿಗೆ ಬಂದಾಗ ನಾನು ಅವರಿಗೆ ಹೇಳಿದೆ, “ಮಾಂಸ ಸೇವನೆ, ಅನೈತಿಕ ಲೈಂಗಿಕ ಕ್ರಿಯೆ, ಜೂಜು ಮತ್ತು ಮದ್ಯ ಇವು ಪಾಪಗಳು. ನೀವು ಅವುಗಳನ್ನು ಬಿಡಬೇಕು.” ನಾವು ಈ ಪಾಪ ಕೃತ್ಯಗಳನ್ನು ಬಿಡದಿದ್ದರೆ, ಪ್ರಕೃತಿಯು ನಮಗೆ ಶಿಕ್ಷೆ ನೀಡುತ್ತದೆ. ಆದುದರಿಂದ ನಾವು ಪ್ರಕೃತಿಯ ಕಾನೂನುಗಳನ್ನು ಅರಿತಿರಬೇಕು, ಪ್ರಕೃತಿಗೆ ಏನು ಬೇಕೆಂಬುದನ್ನು ನಾವು ತಿಳಿದಿರಬೇಕು. ಕೊನೆ ಪಕ್ಷ ನಮ್ಮ ಪಾಪದ ಚಟುವಟಿಕೆಗಳನ್ನು ಬಿಡಬೇಕೆಂದು ಪ್ರಕೃತಿಯು ನಮ್ಮಿಂದ ನಿರೀಕ್ಷಿಸುತ್ತದೆ. ನಾವು ಮಾಡದಿದ್ದರೆ, ನಮಗೆ ಶಿಕ್ಷೆ ಕೊಡಲೇಬೇಕು.
ಹೆನ್ನಿಸ್ : ಸೂಕ್ತವಾದ ವೇತನ, ಒಳ್ಳೆಯ ಮನೆ, ಆರಾಮವಾಗಿರಲು ಉತ್ತಮ ಅವಕಾಶಗಳು ಇಂತಹ ಲೌಕಿಕವಾದವುಗಳನ್ನು ಜನರಿಗೆ ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ.
ಶ್ರೀಲ ಪ್ರಭುಪಾದ : ಅದು ಸರಿ. ಆದರೆ ಯಾವುದು ಪುಣ್ಯ, ಯಾವುದು ಪಾಪ ಎನ್ನುವುದು ಜನರಿಗೆ ತಿಳಿದಿರಬೇಕು.
ಹೆನ್ನಿಸ್ : ಹೌದು. ಆದರೆ ಉಪದೇಶಗಳನ್ನು ಜನರಲ್ಲಿ ತುರುಕುವುದನ್ನು ನೀವು ನೀರೀಕ್ಷಿಸುವುದಿಲ್ಲವೆಂದು ಭಾವಿಸುವೆ. ಅದರಲ್ಲಿಯೂ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಜನರಿಗೆ ಬೋಧಿಸುವುದನ್ನು ನೀವು ನಿರೀಕ್ಷಿಸಲಾಗದು.
ಶ್ರೀಲ ಪ್ರಭುಪಾದ : ಶಾಂತಿ ಮತ್ತು ಒಳ್ಳೆಯ ಜೀವನಕ್ಕಾಗಿನ ಅಂತಾರಾಷ್ಟ್ರೀಯ ಸಂಸ್ಥೆ ವಿಶ್ವ ಸಂಸ್ಥೆಯು ಸಮಾಜದ ಮಿದುಳಾಗಿ ನಿರ್ವಹಿಸುವ ವ್ಯಕ್ತಿಗಳ ವರ್ಗವನ್ನು ಹೊಂದಬೇಕು ಮತ್ತು ಅವರನ್ನು ಪೋಷಿಸಬೇಕು. ಯಾವುದೇ ನಿರ್ದೇಶನವಿಲ್ಲದೆ, ಮಿದುಳಿಲ್ಲದೆ ಸುಮ್ಮನೆ ಕಾಲು ಮತ್ತು ಕೈಗಳು ಕೆಲಸ ಮಾಡುತ್ತಿದ್ದರೆ ಅದು ಒಳ್ಳೆಯದಲ್ಲ. ಮಾನವ ಸಮಾಜದ ಒಟ್ಟಾರೆ ಪ್ರಯೋಜನಕ್ಕಾಗಿ ವಿಶ್ವ ಸಂಸ್ಥೆಯನ್ನು ಸಂಘಟಿಸಲಾಯಿತು. ಆದರೆ ಮಿದುಳಿನ ಸಂಸ್ಥೆ ಎನಿಸಿಕೊಳ್ಳುವ ವಿಭಾಗ ಅದರಲ್ಲಿ ಇಲ್ಲ.
ಹೆನ್ನಿಸ್ : ಅದು ನಿಜ. ಅದು ನಿಜ. ಅವರು ಸದಸ್ಯರ ಸೇವಕರು, ವಿಶ್ವದ ಅನೇಕ ರಾಷ್ಟ್ರಗಳ ಸೇವಕರು. ನಾವು ಈ ಜನರ ಸೇವಕರಷ್ಟೆ. ನಾವೇನು ಮಾಡಲು ಪ್ರಯತ್ನಿಸುತ್ತೇವೆ ಎಂದರೆ ಅವರನ್ನು ಒಗ್ಗೂಡಿಸಿ ಅವರ ಸಮಸ್ಯೆಯನ್ನು ಅವರು ಅರ್ಥ ಮಾಡಿಕೊಳ್ಳಲು ನೆರವಾಗುತ್ತೇವೆ.
ಶ್ರೀಲ ಪ್ರಭುಪಾದ : ಹೌದು, ಅವರಿಗೆ ಅರ್ಥವಾಗಲು ಸಹಾಯ ಮಾಡಿ. ಅವರೇನು ಮಾಡಬೇಕು, ಅವರೇನು ಮಾಡಬಾರದು ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ನೆರವಾಗಿ. ಕೊನೆ ಪಕ್ಷ ಅಷ್ಟನ್ನಾದರೂ ಮಾಡಿ.
ಹೆನ್ನಿಸ್ : ಒಂದು ತತ್ತ್ವವನ್ನು ರೂಪಿಸಲು ನಾವು ಸಾಧ್ಯವಾದಷ್ಟೂ ಪ್ರಯತ್ನಿಸುತ್ತೇವೆ. ಆದರೆ, ನಾವು ಸಂಪೂರ್ಣವಾಗಿ ಮೂಲಭೂತ ಮಾರ್ಗವನ್ನು ಅಳವಡಿಸಿಕೊಳ್ಳುವುದು ಸಾಧ್ಯವಿಲ್ಲ. ನಾವು ಒಳ್ಳೆಯ ಸೇವಕರಾಗಿ ಮತ್ತು ಒಳ್ಳೆಯ ವ್ಯವಸ್ಥಾಪಕರಾಗಿ ನಾವೇನು ಮಾಡುವುದು ಸಾಧ್ಯವೋ ಅದನ್ನು ಮಾಡುತ್ತೇವೆ. ನಾಯಕರು ಸರಿಯಾದ ದಾರಿಯಲ್ಲಿ ಮತ್ತು ಮಾರ್ಗದರ್ಶನದಲ್ಲಿ ಇರುತ್ತಾರೆ ಎಂದು ಆಶಿಸುತ್ತೇವೆ.
ಶ್ರೀಲ ಪ್ರಭುಪಾದ : ಯಾವುದು ಪಾಪ ಮತ್ತು ಯಾವುದು ಪುಣ್ಯ ಎನ್ನುವುದು ಸಮಾಜಕ್ಕೆ ಗೊತ್ತಿಲ್ಲದಿದ್ದರೆ ಅದೆಲ್ಲ ನಿಷ್ಪ್ರಯೋಜಕ. ನಿಮ್ಮ ದೇಹಕ್ಕೆ ಮಿದುಳಿಲ್ಲದಿದ್ದರೆ ನಿಮ್ಮ ದೇಹ ಸತ್ತಂತೆ ಮತ್ತು ಸಾಮಾಜಿಕ ಸಂಸ್ಥೆಗೆ ಮಿದುಳು ಇಲ್ಲದಿದ್ದರೆ ಅದೂ ಸತ್ತಂತೆ.






Leave a Reply