ಶ್ರೀಕೃಷ್ಣ-ಸುದಾಮ ಸಮಾಗಮ

ಸ್ನೇಹಿತರೆಂದರೆ ಹೀಗಿರಬೇಕು; ಶ್ರೀ ಕೃಷ್ಣ-ಸುಧಾಮರ ಹಾಗೆ. ಶ್ರೀಕೃಷ್ಣ ಜಗತ್ತಿನ ಒಡೆಯ. ಆತ ಶ್ರೀಮಂತನೆನ್ನುವುದಕ್ಕಿಂತ ಜಗತ್ತಿನ ಸಕಲ ಚರಾಚರಗಳ ಮಾಲೀಕ ಮತ್ತು ಸೃಷ್ಟಿಕರ್ತ. ಅದೇ ಆತನ ಗೆಳಯ ಸುಧಾಮ ಕಡುಬಡವ. ಒಂದು ಹೊತ್ತು ಕಳೆದರೆ ಇನ್ನೊಂದು ಹೊತ್ತಿಗೆ ಏನು ಎಂಬ ಚಿಂತೆ ಆತನದು. ಸುಧಾಮನಿಗೆ ಬಡತನವಿದ್ದರೂ ಆತ ಶ್ರೀಮಂತ! ಏಕೆಂದರೆ ಶ್ರೀಕೃಷ್ಣನ ಸ್ನೇಹವನ್ನು ಆತ ಸಂಪಾದಿಸಿದ್ದಾನೆ. ಇದಕ್ಕಿಂತ ಇನ್ನೇನು ಬೇಕು. ಬೆಳೆದು ದೊಡ್ಡವರಾದಂತೆ ಇಬ್ಬರ ನಡುವಿನ ಸ್ನೇಹದ ಝರಿ ಬತ್ತಿಹೋಗದಿದ್ದರೂ, ಕಾರಣಾಂತರಗಳಿಂದಾಗಿ ಇಬ್ಬರೂ ದೂರಾಗಬೇಕಾಯಿತು. ಸುಧಾಮ ಅದೇ ಕಿತ್ತು ತಿನ್ನುವ ಬಡತನದೊಂದಿಗೆ ಬದುಕುತ್ತಿದ್ದರೆ, ಶ್ರೀಕೃಷ್ಣ ದ್ವಾರಕೆಯ ರಾಜನಾಗಿ ಅಭಿಷಿಕ್ತನಾಗಿದ್ದಾನೆ. ಇಂತಹ ಸಂದರ್ಭದಲ್ಲಿ ಸುಧಾಮ ತನ್ನ ಜೀವನದ ಗೆಳೆಯನನ್ನು ನೋಡಲು ಹಿಡಿ ಅವಲಕ್ಕಿಯೊಂದಿಗೆ, ಸಂಕೋಚದ ಮುದ್ದೆಯಾಗಿ ಹೋಗುತ್ತಾನೆ. ಈ ಅಪರೂಪದ ಗಳಿಗೆಯ ಕಥಾರೂಪವನ್ನು ಓದುಗರಿಗೆ ಇಲ್ಲಿ ನೀಡಿದ್ದೇವೆ.

ಸೂರ್ಯ ಮತ್ತೆ ಹುಟ್ಟುತ್ತಿದ್ದಾನೆ. ಹಕ್ಕಿಗಳ ಕಲರವ, ಬೆಳಿಗ್ಗೆಗಳಾಗುವುದು ಬೆಳಕಾಗುವುದು, ಸೃಷ್ಟಿ ನಿಯಮ. ಎಲ್ಲರಿಗೂ ಬೆಳಕಿನ ಆಸೆ. ಗಿಡ-ಮರ, ಪಶು-ಪಕ್ಷಿಗಳಿಗೆ, ಬೆಳಗು… ನವ ಚೈತನ್ಯ ನೀಡುತ್ತದೆ. ಆದರೆ, ನನ್ನ ಪತಿದೇವನ, ಕೃಷ್ಣನ ಪರಮ ಭಕ್ತನ, ಸಂಪೂರ್ಣ ಶಾಂತ ಬ್ರಾಹ್ಮಣನ ಸೇವೆ ಮಾಡುವ ಆಸೆ. ನಮಗಿರುವುದು ಕಡು ಬಡತನ. ಎಲ್ಲವೂ ಕೃಷ್ಣನ ಅನುಗ್ರಹವೆ.

ಸಮುದ್ರದ ನಂಟು, ಉಪ್ಪಿಗೇ ಬಡತನ ಎಂಬಂತಾಗಿದೆ ನಮ್ಮ ಮನೆ! ಇವರಿಗೆ, ಶುದ್ಧ ವೈರಾಗ್ಯ ಬಂದೊದಗಿದೆ. ದ್ವಾರಕೆಗೆ ಅರಸ, ಜಗದೊಡೆಯ ಪರಮ ಪ್ರಭುವಿನ ಬಾಲ್ಯದ ಗೆಳೆಯರಿವರು. ಅದೆಷ್ಟು ಬಾರಿ, ಸಾಂದೀಪನಿಯ ಅವರ ಒಡನಾಟದ ಕತೆ ಹೇಳಿದ್ದಾರೆ. ಶ್ರೀ ಕೃಷ್ಣನಿಗೆ ಗರ್ವವೆಂಬುದೇ ಇಲ್ಲವಂತೆ. ರಾಜಪುತ್ರನಾಗಿದ್ದರೂ, ತನ್ನ ಗೆಳೆಯರ ಕೂಡ ಗರ್ವವೇ ಇಲ್ಲದಂತೆ, ಒಂದಾಗಿ ಬೆರೆಯುತ್ತಿದ್ದನಂತೆ! ಮಹಾ ಬುದ್ಧಿವಂತನಂತೆ! ಏಕ ಸಂಧಿಗ್ರಾಹಿ ಎಂಬುದು ಅತೀ ಸಣ್ಣ ಶಬ್ದವಂತೆ!!

ಮಗ್ಗಲು ಬದಲಿಸಿ, ಏಳಹೊರಟೆ. ಇವರ ಮುಖ ನೋಡಿದೆ. ಚಿಂತೆಯ ಗೆರೆಗಳೇ ಇಲ್ಲದೆ, ಮಲಗಿದ್ದಾರೆ. ಕೃಷ್ಣನ ಧ್ಯಾನ, ಧಾರಣೆಗೆ, ಧರ್ಮದ ಅನುಷ್ಠಾನಕ್ಕೆ ಜೀವನ ಮುಡಿಪಿಟ್ಟಿರುವುದರಿಂದ ಅವರಿಗೆ, ವೈರಾಗ್ಯ ಬಂದಿದೆ. ವೈರಾಗ್ಯದಿಂದ ಇರುವುದಾದರೆ ಸಂಸಾರದ ನಿರ್ವಹಣೆ ಹೇಗೆ?

ದೇಹವು ಸೊರಗಿ ಹೋಗಿದೆ. ಅಂಗವಸ್ತ್ರದಲ್ಲಿ ಬರೀ ತೂತುಗಳು! ಅಭ್ಯಂಜನವನ್ನೇ ಮಾಡದೆ ಕೆಂಪಾಗಿ ಜಡೆಗಟ್ಟಿರುವ ಶಿಖೆ; ಜರ್ಜಿರಿತವಾದ ದೇಹ. ಹಾಗಿದ್ದರೂ, ದಟ್ಟವಾದ ನಿದ್ರೆಯನ್ನು ಅನುಭವಿಸುತ್ತಿದ್ದಾರೆ. ಶಾಂತವಾಗಿ ಕಾಣುತ್ತಿದ್ದಾರೆ. ನನಗೆ ಇವರ ಬಗ್ಗೆ ಒಮ್ಮೊಮ್ಮೆ ವಿಪರೀತ ಗೌರವ ಉಂಟಾಗುತ್ತದೆ. ಇರಲಿ… ಇಂದು ಏನಾದರೂ ಮಾಡಲೇಬೇಕು. ಇವರು, ಪೂಜೆ ಮುಗಿಸಿದ ತಕ್ಷಣ ಇವರಿಗೆ ಇಂದು ಹೇಳಲೇಬೇಕು. ಶ್ರೀ ಕೃಷ್ಣನ ಬಳಿಗೆ ಹೋಗಿ, ಅವನನ್ನು ಕಂಡು ಮಾತಾಡಿ ಬನ್ನಿ. ನಮ್ಮ ಪರಿಸ್ಥಿತಿ ಅರಿತು ಖಂಡಿತ ಅವನೇನಾದರು ನಮಗೆ ಉಪಕರಿಸುತ್ತಾನೆ ಎಂದು! ಬಹು ಸಂಕೋಚ ಇವರಿಗೆ. ಬ್ರಾಹ್ಮಣನಾದವನು, ಎಂದಿಗೂ ಕೈಚಾಚಬಾರದೆಂದು ಪರಿತಪಿಸುತ್ತಾರೆ. ಕೃಷ್ಣನಲ್ಲಿಗೆ ಹೋಗಿ, ಬರಲು ಇಂದು ಇವರನ್ನು ಒಪ್ಪಿಸಲೇ ಬೇಕು.

ಚಳಿಗೆ ಮೈ ಮುದುರುತ್ತಿದೆ. ಯಾರಿಗೂ ಬೆಚ್ಚನೆಯ ವಸ್ತ್ರಗಳಿಲ್ಲ. ಮುದುಡಿ ಮಲಗಿದ ಮಕ್ಕಳಿಗೆ, ಹರಿದ ಅರಿವೆಗಳನ್ನು ಹೊದಿಸಿ, ನಾನು ಮೇಲೆದ್ದೆ!

*  *  *

ಹೇಮಂತ ಋತು! ಮರದ ಎಲೆಗಳೆಲ್ಲ ಉದುರಿವೆ. ನಮ್ಮ ಸ್ಥಿತಿಯಂತೆ, ಪ್ರಕೃತಿಯೂ ಕಾಣಿಸುತ್ತಿದೆ. ತೊಡೆಯ ಮೇಲೆ, ಕೊನೆಯ ಮಗ ಕುಳಿತಿದ್ದಾನೆ. ದೇವರ ಪೂಜೆಯ ಬಗ್ಗೆ ಅವನಿಗೆ ಹೇಳುತ್ತಿದ್ದೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ, ಫಲಗಳ `ಪಂಚಾಮೃತ’ ಅಭಿಷೇಕವನ್ನು ದೇವರಿಗೆ ಮಾಡುವುದನ್ನು ವಿವರಿಸಿದೆ. ಆಗ ಮಧ್ಯದಲ್ಲಿ ಒಂದು ವಾರದಿಂದ ಇವಳು ಕೃಷ್ಣನ ಬಳಿಗೆ ಹೋಗಲು ಹೇಳುತ್ತಿದ್ದುದು ಜ್ಞಾಪಕಕ್ಕೆ ಬಂತು.

`ಧರ್ಮದ ವ್ಯಕ್ತ ರೂಪ ಶ್ರೀಕೃಷ್ಣ’ ಮೇಲಾಗಿ ನಮ್ಮ ಅರಸ. ಪ್ರಜೆಗಳು ಅರಸನಿಗೆ ಮಕ್ಕಳ ಸಮಾನ. ಅವನ ಬಾಲ್ಯದ ಆಪ್ತ ಗೆಳೆಯರು ನೀವು. ನಿಮಗೆ ಖಂಡಿತ ಒಳಿತಾಗುತ್ತೆ – ಕೃಷ್ಣ ದರ್ಶನಕ್ಕೆ ಹೋಗಿ ಬನ್ನಿ’ ಎನ್ನುತ್ತಿದ್ದಾಳೆ. ಕೃಷ್ಣನ ಬಳಿಗೆ ಹೋಗಲೆ? ಬೇಡವೆ? ಹೋಗಲೆ? ಬೇಡವೆ? ನನ್ನ ಮನಸ್ಸಿನ ತೊಳಲಾಟದಲ್ಲಿ ಮಗ ನನ್ನ ತೊಡೆಯಿಂದೆದ್ದು ಹೋಗಿದ್ದು, ಹೆಂಡತಿ, ಪಕ್ಕಕ್ಕೆ ಬಂದದ್ದು ನೋಡಲೇ ಇಲ್ಲ. ಎಲೆಗಳ ಮೇಲಿನ ಪರಪರ ಶಬ್ಧವನ್ನೂ ಗಮನಿಸಲಿಲ್ಲ. ಅವಳತ್ತ ನೋಡಿದೆ. ನನ್ನೊಡನೆ ಮಾತಾಡಲು ಅವಳು ಬಂದಿದ್ದಳು. “ನನಗೆ ಗೊತ್ತು. ಕೃಷ್ಣನನ್ನು ಕಾಣಲು ಹೋಗಿ ಎಂದು ತಿಳಿಸಿ ಹೇಳಲು ಬಂದಿದ್ದೀಯಷ್ಟೆ. ಹೇಗೆ, ಹೇಗೆ ಹೋಗಲಿ! ಸರ್ವರ ಅಂತರ್ಯ್ಮಿಯಾದ ಭಗವಂತನಿಗೆ ಏನಾದರೂ ಕೊಡಲೇಬೇಕಲ್ಲವೇ?” ಎಂದು ನಾನು ಹೇಳಿದೆ.

ತಲೆ ಎತ್ತಿ ನನ್ನಡೆಗೇ ನೋಡುತ್ತಾ “ನಿಜವಾದ ಭಕ್ತನ ಪಾದಧೂಳಿಯನ್ನು ನಾನು ತಲೆಯಲ್ಲಿ ಧರಿಸುತ್ತೇನೆ” ಎಂದಿಲ್ಲವೆ – ಶ್ರೀಕೃಷ್ಣ. ಅವನು ಸಿರಿದೇವಿಯ ರಮಣ. ಭಕ್ತಾನುಕಂಪಧಾರನಾದ ಅವನು ಭಕ್ತರನ್ನು ಉದ್ಧರಿಸಲು ಯಾವಾಗಲೂ ಕಾತರಿಸುತ್ತಿರುತ್ತಾನೆ. ತನ್ನ ಸೇವಿಸಿದವರಿಗೆ, ಅವನಿಂದ ಎಂದಿಗೂ ಅಭಯವೇ!” ಅವಳೆಂದಳು.

ಹೇಗೂ ಅವನನ್ನು ಕಂಡು ವರ್ಷಗಳೇ ಉರುಳಿ ಹೋಗಿವೆ. ಮನೆಯವರೆಲ್ಲೆರ ಬಲವಂತ ಒಂದು ನೆಪವಾಗಿ, ನನಗೆ ಕೃಷ್ಣ ದರ್ಶನದ ಯೋಗ ಉಂಟಾಗಿದೆ. ಹೋಗಿ ಬರೋಣ. ಕೃಷ್ಣನಲ್ಲಿ ಏನನ್ನೂ ಯಾಚಿಸದಿದ್ದರಾಯಿತು! ಎಂದು ನಾನು ನಿಶ್ಚಯಿಸಿದೆ.

“ಅದು ಸರಿ. ರಾಜನನ್ನು, ಗುರುಗಳನ್ನು, ಮಕ್ಕಳನ್ನು, ಕಾಣಲೆಂದು ಹೊರಟಾಗ, ಬರಿಕೈಲಿ ಹೋಗಬಾರದು. ಕೃಷ್ಣನಿಗೆ ಏನನ್ನಾದರೂ ಕೊಡಲಾದೀತೆ” ನಾನು ಹೆಂಡತಿಗೆ ಕೇಳುತ್ತಾ, ಪ್ರಯಾಣದ ಸಿದ್ಧತೆಗೆಂದು ಎದ್ದೆ.

*  *  *

ಸಿದ್ಧತೆ ಮಾಡಲೇನಿದೆ? ಪಕ್ಕದ ತೊರೆಯಲ್ಲಿ ಇನ್ನೊಂದು ಸ್ನಾನ ಮಾಡಿ, ತುಳಸಿ ಪತ್ರೆಗಳನ್ನು ಹಿಡಿದು, ಸಾಲಿಗ್ರಾಮಕ್ಕೆ ಅರ್ಪಿಸಿದೆ. ಇದ್ದುದರಲ್ಲಿ ಉತ್ತಮವಾದ ಬಟ್ಟೆ ಧರಿಸಿದೆ. ಅಂಗವಸ್ತ್ರ, ಆಹ್ನಿಕದ ಪಾತ್ರೆ, ಜಪಮಣಿ ಬಿಟ್ಟರೆ ಬೇರೇನೂ ಇರಲಿಲ್ಲ. ಮನೆಯ ಮಂದಿಗೆಲ್ಲ ರಾಜನಾದ, ತನ್ನ ಸ್ನೇಹಿತನನ್ನು ಕಾಣಲು ಅಪ್ಪ ಹೋಗುತ್ತಿರುವ ಸಂಭ್ರಮ. ಸುತ್ತುವರಿದು, ಮತ್ತೆ ಮತ್ತೆ ನನ್ನ ಕೃಷ್ಣನ ಬಾಲ್ಯದ ಗೆಳೆತನದ ಬಗ್ಗೆ, ಪದೇ ಪದೇ ಕೇಳುತ್ತಿದ್ದರು. ನಾನು ತುಂಬಾ ಸಂಭ್ರಮದಿಂದಲೇ ಹೇಳಿದೆ. ಕೃಷ್ಣನ ಲೀಲಾಶ್ರವಣದಿಂದ ಪಾಪ ನಾಶವಾಗುವುದರಲ್ಲಿ ಸಂಶಯವಿಲ್ಲ.

ಇವಳು “ಒಂದು ಕ್ಷಣ ಬಂದೆ”, ಎನ್ನುತ್ತಾ ಒಳಗೋಡಿದಳು. ಎಲೆಯೊಂದರಲ್ಲಿ ನೆನ್ನೆಯಷ್ಟೇ ತಯಾರಿಸಿದ, ಅವಲಕ್ಕಿ 3-4 ಹಿಡಿ, ಇದ್ದಿರಬಹುದು, ಲಗು ಬಗೆಯಿಂದ ತಂದಳು. ನನ್ನ ಹರಿದ ಅಂಗವಸ್ತ್ರದ ತುದಿಗೆ ಗಂಟು ಕಟ್ಟಿದಳು. ನನಗೆ ಸಂಕೋಚವಾದರೂ, ಕೃಷ್ಣ ಅದನ್ನು ಪ್ರೀತಿಯಿಂದ ಸ್ವೀಕರಿಸುತ್ತಾನೆ ಎಂದು ಭರವಸೆಯಿದ್ದುದರಿಂದ, ಜೋಪಾನವಾಗಿಟ್ಟುಕೊಂಡೆ.

*  *  *

ದ್ವಾರಕೆ! ಇಂದ್ರನ ಅಮರಾವತಿಯನ್ನು ಮೀರಿಸಿದ ವೈಭೋಗ. ಶ್ರೀಕೃಷ್ಣನ ಹದಿನಾರು ಸಾವಿರ ರಮಣಿಯರ ಉಪ್ಪರಿಗೆಯ ಅರಮನೆಗಳು! ಮಧ್ಯದಲ್ಲಿ ಮಕುಟಮಣಿಯಂತೆ ಕಂಗೊಳಿಸುತ್ತಿದ್ದ, ತೇಜಸ್ಸಿನಿಂದ ರಾರಾಜಿಸುತ್ತಿದ್ದ, ಅರಮನೆಯೊಂದಿತ್ತು. ನನಗರಿವಿಲ್ಲದೆ ಆ ಕಡೆಗೆ ಹೆಜ್ಜೆ ಹಾಕಿದೆ.

ಶ್ರೀಕೃಷ್ಣನು ಯದುಕುಲದ ಅರಸ. ಸಿರಿಸಂಪತ್ತಿನೊಡೆಯ. ನನ್ನನ್ನು ಹೇಗೆ ಗುರ್ತಿಸಬಹುದು? ಬಾಯಲ್ಲಿ ಕೃಷ್ಣನ ಹೆಸರು ಪಠಿಸುತ್ತಾ, ನಿಧಾನಕ್ಕೆ ಹೆಜ್ಜೆ ಹಾಕಿದೆ. ಎಲ್ಲೆಡೆ ಪ್ರಹರಿಗಳಿದ್ದರು! ಆದರೆ ಅದೇನಾಶ್ಚರ್ಯ! ಬ್ರಾಹ್ಮಣರು, ಯಾವ ಮುಜುಗರವೂ ಇಲ್ಲದೆ, ಸ್ವಚ್ಛಂದವಾಗಿ ಓಡಾಡುತ್ತಿದ್ದಾರೆ. ಪ್ರಹರಿಯೊಬ್ಬ, ನನ್ನ ಕಡೆಗೇ ಬರುತ್ತಿದ್ದಾನೆ. ನನಗೆ ಕಸಿವಿಸಿ. “ಸ್ವಾಮಿ, ತಾವು ಎಲ್ಲಿಂದ ಬಂದಿದ್ದೀರ? ಶ್ರೀಕೃಷ್ಣ ದರ್ಶನಾಕಾಂಕ್ಷಿಗಳೆ? ನಮಗೆ ಪರಮ ಪ್ರಭುವಿನ ಕಟ್ಟಪ್ಪಣೆಯಿದೆ. ಯಾರೇ ಬ್ರಾಹ್ಮಣ ಬಂದರೂ ಅವರಿಗೆ ಕೃಷ್ಣದರ್ಶನದ ಏರ್ಪಾಡು ಮಾಡಲು ನಮಗೆ ಆಜ್ಞೆಯಿದೆ. ತಾವು, ಎಲ್ಲಿಂದ ಬರುತ್ತಿದ್ದೀರ! ಮಾರ್ಗಾಯಾಸ ಪರಿಹಾರಕ್ಕೆ ವ್ಯವಸ್ಥೆ ಮಾಡಲೆ? ಬಿಡಾರ ದೊರಕಿಸಲೆ? ನಾನು ಅಚ್ಚರಿಯಿಂದ ಪ್ರಹರಿ ಮುಖ ನೋಡಿದೆ. ಇಷ್ಟು ದೊಡ್ಡ ದೊರೆಯು ಬ್ರಾಹ್ಮಣನಾದವನೊಬ್ಬನಿಗೆ, ದರ್ಶನ ನೀಡಲು ಈ ಪರಿಯ ವ್ಯವಸ್ಥೆ ಮಾಡಿಟ್ಟಿದ್ದಾನೆಯೇ ಎಂದು ನನಗಚ್ಚರಿಯಾಯಿತು.

“ಮಾನ್ಯರೇ, ನಾನು ಶ್ರೀಕೃಷ್ಣನ ಬಾಲ್ಯದ ಗೆಳೆಯ. ಇಬ್ಬರೂ ಸಹಪಾಠಿಗಳಾಗಿ, ಸಾಂದೀಪನಿ ಆಶ್ರಮದಲ್ಲಿದ್ದೆವು. ವರ್ಷಗಳಿಂದ ನಾನವನ ಭೇಟಿ ಮಾಡಿಲ್ಲ. ನನಗೆ ಕೃಷ್ಣ ದರ್ಶನವೇ ಮೊದಲಾಗಲಿ. ಅವನ ದರ್ಶನ ಮಾತ್ರದಿಂದ ನನ್ನ ಆಯಾಸ ಹೋಗುತ್ತದೆ.”  ನಾನುತ್ತರಿಸಿದೆ.

ಪ್ರಹರಿ, ನನ್ನನ್ನು ಕರೆದೊಯ್ದ. ರಾಜ ಬೀದಿಯನ್ನು, ಸೈನಿಕರ ಗುಡಾರಗಳನ್ನು, ಅಧಿಕಾರಿಗಳನ್ನು ಹಾಯ್ದು, ನಾವು ಅರಮನೆಯ ಒಳಾಂಗಣ ತಲುಪಿದೆವು. ವಿಶಾಲವಾದ ಹಜಾರಗಳು! ರತ್ನ ಖಚಿತ ಆಸನಗಳು, ನೀರಿನ ಅಲಂಕಾರಿಕ ಚಿಲುಮೆಗಳು, ಸುಂದರ ಬಟ್ಟೆ ತೊಟ್ಟ ದಾಸ-ದಾಸಿಯರು, ಇಂದ್ರ ವೈಭೋಗ ನನ್ನ ಕಣ್ಣ ಮುಂದೆ ಕಾಣಿಸುತ್ತಿತ್ತು. ಎರಡು ಮೂರು ಕ್ಷಣದಲ್ಲಿ ನಾವೊಂದು ದೊಡ್ಡದಾದ ಹಜಾರ ಪ್ರವೇಶಿಸಿದೆವು. ದೂರದಲ್ಲಿ ಶ್ರೀಕೃಷ್ಣ ರುಕ್ಮಿಣಿಯೊಡನೆ, ತೂಗುಮಂಚದ ಮೇಲೆ, ಕುಳಿತು ವಿರಮಿಸುತ್ತಿದ್ದಾನೆ. ಅವನ ದರ್ಶನವಾಗುತ್ತಲೇ, ನನ್ನ ಕಣ್ಣು ತುಂಬುತ್ತಿದೆ, ಕಾಲುಗಳು ಆನಂದಾತಿರೇಕದಿಂದ ನಡುಗುತ್ತಿವೆ. ಹೆಜ್ಜೆ ಮುಂದಿಡಲಾಗದೆ, ಸ್ಥಂಭೀಭೂತನಾದೆ.

ಆದರೆ, ಇದೇನಿದು, ಕೃಷ್ಣ ನನ್ನ ಕಡೆ ತಿರುಗುತ್ತಿದ್ದಾನೆ. ಹಾಂ! ಹಾಂ! ಅವನಿಗೆ ನನ್ನ ಗುರುತು ಹತ್ತಿತು! ಪರಮ ಪ್ರಭು ನನ್ನನ್ನು ಗುರ್ತಿಸಿದ!! ರುಕ್ಮಿಣಿಗೆ ಏನೋ ಹೇಳಿದ. ಆಕೆ ದಾಸಿಯರನ್ನು ಕರೆಯುತ್ತಿದ್ದಾಳೆ. ಪ್ರಹರಿಯು ಪ್ರಭುವಿನ ಬಳಿ ಧಾವಿಸುತ್ತಿದ್ದಾನೆ. ಕೃಷ್ಣ ಮಂಚದಿಂದಿಳಿದು, ಪ್ರಹರಿಗೆ ಏನೋ ಆಜ್ಞಾಪಿಸುತ್ತಿದ್ದಾನೆ. ಕೃಷ್ಣ ನನ್ನಡೆಗೆ ಧಾವಿಸಿ ಬರುತ್ತಿದ್ದಾನೆ! ಇದೇನು ಭ್ರಮೆಯೋ, ವಾಸ್ತವಿಕವೋ!!  ಪ್ರಭು ನನ್ನ ಬಳಿಗೇ ಬಂದಾಯಿತು. ಆತ ಓಡುತ್ತಾ ಬಂದಿದ್ದ. ಏರುಸಿರು ಬಿಡುತ್ತಾ ನನ್ನ ಬಾಹುಗಳಿಂದ ನನ್ನ ಬಳಸುತ್ತಿದ್ದಾನೆ. ಆಹಾ! ಇದೇನಿದು… ಸಕಲ ಸಂಕಷ್ಟ ಹರನಾದ, ಪರಮ ಮಂಗಳಕರನಾದ ಭಗವಂತನಾದ, ಶ್ರೀಕೃಷ್ಣನ ದಿವ್ಯಾನಂದದ ಭಂಡಾರದ ತೋಳತೆಕ್ಕೆಯಲ್ಲಿ ಬಡ ಬ್ರಾಹ್ಮಣ! ನಾನು ಮೂಕವಿಸ್ಮಿತನಾದೆ. ಮಾತು ಬರುತ್ತಿಲ್ಲ.!

*  *  *

ಅಲ್ಲೆ ನಿಂತಿದ್ದ ಪ್ರಹರಿಯಾದ ನನಗೆ ಇದನ್ನು ಕಂಡು ಪರಮಾಶ್ಚರ್ಯ! ಪ್ರಭುವಿನ ಹಿಂದೆ ಹಿಂದೆಯೇ, ದಾಸಿಯರ ಗುಂಪೊಂದು ಬಂದು ನಿಂತಿದೆ. ಸಾಕ್ಷಾತ್‌ ರುಕ್ಮಿಣೀದೇವಿ ನಿಂತಿರುವುದು ಕಾಣುತ್ತಿದೆ. ದೇವೋತ್ತಮ ಮಂಡಿಯೂರಿ ಕುಳಿತ. ಏನಾಗುತ್ತಿದೆ ಎಂಬುದು ಅರಿವಾಗುವುದರೊಳಗೆ ಬ್ರಾಹ್ಮಣನ ಕಾಲನ್ನು ಪ್ರಭು ಮುಟ್ಟಿದ್ದಾನೆ. ಆ ಬ್ರಾಹ್ಮಣನಿಗೆ ಏನೂ ತೋರದ ದಿವ್ಯಾನಂದ. ಆದರೂ, ಈ ಕ್ರಿಯೆಗಳೆಲ್ಲ ಗೊತ್ತಾಗುತ್ತಿದೆ. ರುಕ್ಮಿಣಿ ಪನ್ನೀರು ಹಾಕುತ್ತಿದ್ದರೆ, ಸಾಕ್ಷಾತ್‌ ಕೃಷ್ಣನೇ ಕಾಲು ತೊಳೆಯುತ್ತಿದ್ದಾನೆ. ಭಕ್ತ ಪರಾಧೀನ ನಮ್ಮ ಪ್ರಭು, ನಾನು ಸಾಮಾನ್ಯ ಪ್ರಹರಿಯಾದರೂ, ಈ ರೀತಿ ಮಿತ್ರರ ಸಮಾಗಮ ನೋಡುವ ಭಾಗ್ಯವೊದಗಿದ್ದು ನನ್ನ ಪೂರ್ವಜನ್ಮದ ಪುಣ್ಯವೇ ಸರಿ. `ಸುದಾಮ’ ಎಂದು ಬ್ರಾಹ್ಮಣನು ತನ್ನ ಹೆಸರು ಹೇಳಿಕೊಂಡ. ತುಂಬಾ ದೂರದ ಪ್ರಯಾಣ ಮಾಡಿ ಬಂದಿರುವುದು ಅವನ ನೋಡಿದರೇ ವ್ಯಕ್ತ. ಅಬ್ಬ! ಕೃಷ್ಣನ ಮೇಲೆ ಅದೇನು ಶ್ರದ್ಧೆ! ಅದೇನು ಭಕ್ತಿ! ಅದೇನು ಪ್ರೀತಿ! ತನಗದ್ಯಾವ ಉಪಚಾರವೂ ಬೇಡ, ಮೊದಲಿಗೆ ಕೃಷ್ಣದರ್ಶನ ಎಂದು ಪರಿತಪಿಸಿ ಬಂದನಲ್ಲವೆ?

ಯಾರ ಚರಣಾರವಿಂದಗಳನ್ನು ನಾರದಾದಿ ಯೋಗಿವೃಂದ ಸದಾ ಭಜಿಸಿ, ಕೊಂಡಾಡುತ್ತಾರೋ ಆ ಪರಮ ಪ್ರಭು ಈ ಬ್ರಾಹ್ಮಣನ ಕಾಲನ್ನು ತೊಳೆದು, ತಲೆಗೆ ತೀರ್ಥ ಹಾಕಿಕೊಳ್ಳುತ್ತಾನೆಂದರೆ, ಸೇವಕನಾಗಿರುವ ನನ್ನ ಜನ್ಮನೇ ಧನ್ಯ! ನಾನು ಹಿಂದೆ ಸರಿದು ನಿಂತು, ಈ ದಿವ್ಯ ಮಂಗಳ ದೃಶ್ಯವನ್ನು ವೀಕ್ಷಿಸಬೇಕು.

ಸುದಾಮನನ್ನು ಸ್ವತಃ ಪ್ರಭುವೇ, ಕೈ ಹಿಡಿದು, ತಾನು ರುಕ್ಮಿಣಿ ಕುಳಿತಿದ್ದ ಉನ್ನತಾಸನದ ಬಳಿಗೆ ಕರೆತರುತ್ತಿದ್ದಾನೆ. ತೂಗು ಮಂಚದ ಮೇಲೆ, ಸುದಾಮ! ಗಾಳಿ ಹಾಕಲು ಸಾಕ್ಷಾತ್‌ ರುಕ್ಮಿಣಿ. ಪಕ್ಕದಲ್ಲಿ ಕುಳಿತು ಶ್ರೀಕೃಷ್ಣ ಕೇಳುತ್ತಿದ್ದಾನೆ. “ಮಿತ್ರಾ, ನಿನಗೆ ಈಗ ನನ್ನ ನೆನಪಾಯಿತೆ? ಕಡೆಗೂ ಬಂದೆಯಲ್ಲ! ಅದೇ ನನ್ನ ಸೌಭಾಗ್ಯ. ಮನೆಯಲ್ಲಿ ಪತ್ನಿ ಪುತ್ರರು ಕ್ಷೇಮವೇ? ಮಳೆ-ಬೆಳೆ-ಚೆನ್ನಾಗಿದೆಯೆ? ನಿನ್ನ ಅಧ್ಯಯನ, ಅಧ್ಯಾಪನ, ಜಪ-ತಪ ನಿತ್ಯಾನುಷ್ಠಾನ ಸಾಧನೆಗಳು ತೃಪ್ತಿಕರವಾಗಿವೆಯೇ?” ಎಲ್ಲವನ್ನೂ ಬಲ್ಲ ಸ್ವಾಮಿ, ಏನೂ ತಿಳಿಯದವನಂತೆ ಪ್ರಶ್ನಿಸುತ್ತಿದ್ದಾನೆ.

ಸುದಾಮನ ಉಡುಪು ನೋಡಿದರೆ, ಬಹು ಬಡತನದಲ್ಲಿರುವುದು ಸ್ವಯಂ ವೇದ್ಯ. ದೇಹವೂ ಅನ್ನಾಹಾರವಿಲ್ಲದೆ ಸೊರಗಿ ಹೋಗಿದೆ. ದಾಸಿಯರೀಗ, ಬಗೆಬಗೆಯ ಖಾದ್ಯಗಳನ್ನು ತಂದಿದ್ದಾರೆ. ಅಗಲಕ್ಕೆ ಎಲೆ ಹಾಸಿ, ಸುದಾಮನನ್ನು ಭೋಜನಕ್ಕೆ ಎಬ್ಬಿಸಿದ್ದಾರೆ. ಸ್ವತಃ ಜಗನ್ಮಾತೆ, ಮಹಾತಾಯಿ, ನಮ್ಮ ರಾಣಿ ರುಕ್ಮಿಣೀದೇವಿಯವರೇ, ಬಡಿಸುತ್ತಿದ್ದಾರೆ. ನನ್ನಂತೆಯೇ, ಇಡೀ ಅರಮನೆಯ ಊಳಿಗದವರೆಲ್ಲ ಅಚ್ಚರಿಯಿಂದ ಕಣ್ಣರಳಿಸಿ, ನಿಂತಿದ್ದಾರೆ. ಇದನ್ನು ಕಂಡು ಧನ್ಯನಾದ ನಾನು ನನ್ನ ಸ್ಥಾನಕ್ಕೆ ಹಿಂತಿರುಗಿದೆ.

*  *  *

ಸ್ವತಃ ನನ್ನ ಮುಂದೆ ಪರಮ ಪ್ರಭು, ರುಕ್ಮಿಣಿ ಮಾತಾಜಿ, ನಾನೇನು ಮಾತಾಡಲಿ! ಅವನ ದಿವ್ಯ ಮಂಗಳ ರೂಪ ನೋಡುತ್ತಾ, ಕಣ್ಣೀರುಡುತ್ತಿದ್ದೇನೆ. ಪಕ್ಕಕ್ಕೆ ಬಂದ ಪರಮ ಪ್ರಭು ನನ್ನನ್ನೇ ಉದ್ದೇಶಿಸಿ ಹೇಳತೊಡಗಿದ – “ಮಿತ್ರಾ, ನೀನು ಬಹಳ ಪ್ರಾಜ್ಞ. ಧಾರ್ಮಿಕ ಜೀವನದ ತತ್ತ್ವಗಳನ್ನು ಚೆನ್ನಾಗಿ ಬಲ್ಲವ. ವಿದ್ಯಾಭ್ಯಾಸ ಮುಗಿಸಿ ಸಕಲ ಶಾಸ್ತ್ರಗಳಲ್ಲಿ ಪಾರಂಗತನಾಗಿದ್ದರೂ ನಿನಗೆ ಪ್ರಾಪಂಚಿಕ ಮೋಹವಿಲ್ಲ. ಭೌತಿಕ ಸಂಪತ್ತಿನ ಗಳಿಕೆಗೆ ನೀನು ಎಣಿಸಲಿಲ್ಲ. ಸಂಪತ್ತನ್ನು ಮನಸ್ಸಿನಲ್ಲೂ ಅಪೇಕ್ಷಿಸಲಿಲ್ಲ. ಆದ್ದರಿಂದ ಬಡತನ ನಿನ್ನನ್ನು, ಕಿತ್ತು ತಿನ್ನುತ್ತಿದೆ. ಹಣದ ಅಗತ್ಯ ನಿನಗಿರುವುದು ನನಗೆ ಗೊತ್ತಿದೆ. ಈ ಜಗತ್ತನಲ್ಲಿ ಪ್ರಾಪಂಚಿಕ ಸಂಪತ್ತಿಗೆ ಮೋಹಪಡದವರು ಅತಿ ವಿರಳ. ಅಂತಹ ಮೋಹರಹಿತರಿಗೆ ಹಣ ಸಂಗ್ರಹಿಸುವುದರಲ್ಲಿ  ಅಥವಾ ಕೂಡಿಟ್ಟ ಸಂಪತ್ತಿನಿಂದ ಇಂದ್ರಿಯ ಸುಖ ಪಡುವುದರಲ್ಲಿ ಯಾವುದೇ ಆಸಕ್ತಿಯಿರುವುದಿಲ್ಲ. ಆದರೂ, ಆದರ್ಶ ಗೃಹಸ್ಥ ಹೇಗಿರಬೇಕು ಎಂಬುದನ್ನು ಪ್ರಪಂಚಕ್ಕೆ ತೋರಿಸಿಕೊಡುವ ಸಲುವಾಗಿ ಸಂಪತ್ತನ್ನು ಗಳಿಸುವುದನ್ನು ಕಾಣುತ್ತೇವೆ. ಗಳಿಸಿದ  ಸಂಪತ್ತನ್ನು  ಸಮರ್ಪಕ ವಿತರಣೆ ಹೇಗೋ ಹಾಗೆಯೇ ಅಷ್ಟೈಶ್ವರ್ಯಗಳಿದ್ದರೂ ಹೇಗೆ ಶ್ರೇಷ್ಠ ಭಕ್ತನೂ ಆಗಿರಬಹುದು ಎಂಬುದನ್ನು ಅವರು ಸನ್ನಡತೆ ಮೂಲಕ ತೋರಿಸಿಕೊಡುತ್ತಾರೆ. ಇಂತಹ ಆದರ್ಶ ಗೃಹಸ್ಥರು ನಾನು ತೋರಿದ ಮಾರ್ಗದಲ್ಲಿ ನಡೆಯುತ್ತಾರೆ. ಮಿತ್ರಾ, ನೀನು-ನಾನು ಗುರುಗಳ ಆಶ್ರಮದಲ್ಲಿ ಒಟ್ಟಿಗೆ ಕಳೆದ ದಿನಗಳು ನಿನಗೆ ನೆನಪಿರಬಹುದು. ನಾವಿಂದು ಈ ಸ್ಥಿತಿಗೆ ಬರಲು ಗುರುದೇವರು ನಿಸ್ವಾರ್ಥದಿಂದ ಧಾರೆಯೆರೆದ ವಿದ್ಯೆಯೇ ಕಾರಣ.

ಮನುಷ್ಯನಿಗೆ ತನ್ನ ವಿದ್ಯಾಭ್ಯಾಸ ದಿನಗಳಲ್ಲಿ ಯೋಗ್ಯ ಗುರುಗಳಿಂದ ಸಾಕಷ್ಟು ಶಿಕ್ಷಣ ದೊರೆತರೆ ಅವನ ಭವಿಷ್ಯವು ಶುಭಕರವಾಗಿರುತ್ತದೆ. ಆ ಜ್ಞಾನವೆಂಬ ನೌಕೆ ಆಶ್ರಯದಿಂದ ಅಜ್ಞಾನದ ಸಾಗರವನ್ನು ದಾಟಬಹುದು. ಅವನು ಮಾಯೆಗೆ ವಶನಾಗುವುದಿಲ್ಲ. ತಂದೆ-ತಾಯಿ ಕೃಪೆಯಿಂದ ಮನುಷ್ಯನಿಗೆ ದೇಹವು ಲಭಿಸುತ್ತದೆ. ಆದ್ದರಿಂದ ಮಾತಾಪಿತರು ಮೊದಲ ಗುರುಗಳೆಂದು ವ್ಯಕ್ತಿ ಭಾವಿಸಬೇಕು. ಇವರು ಸಹಜ ಗುರುಗಳು. ಆಲೌಕಿಕ ವಿದ್ಯೆಯ ಜಗತ್ತಿಗೆ ಪ್ರವೇಶ ಮಾಡಿಸುವವರು ಮುಂದಿನ ಗುರುಗಳು. ಅವರು ದೇವತುಲ್ಯರು. ಶಿಷ್ಯನಿಗೆ ಆಧ್ಯಾತ್ಮಿಕ ವಿಷಯಗಳಲ್ಲಿ ಶಿಕ್ಷಣ ಕೊಡುವಾತ ಶಿಕ್ಷಾ ಗುರು. ಶಿಷ್ಯನಿಗೆ ದೀಕ್ಷೆ ಕೊಡುವವನು ದೀಕ್ಷಾ ಗುರು. ಇವರೆಲ್ಲರೂ ನನ್ನ ಪ್ರತಿನಿಧಿಗಳು. ನನ್ನನ್ನು ಪೂಜಿಸುವಂತೆಯೇ ಇವರಿಬ್ಬರನ್ನು ಪೂಜಿಸಬೇಕು.

ಒಬ್ಬನಿಗೆ ಅನೇಕ ಗುರುಗಳಿರಬಹುದು. ಆದರೆ, ದೀಕ್ಷಾ ಗುರುವೊಬ್ಬನೆ. ಈ ಗುರುವಿನಿಂದ ಒಳ್ಳೆಯ ವಿದ್ಯೆ ಪಡೆದ ಮನುಷ್ಯ ಭೌತಿಕ ಅಸ್ತಿತ್ವದ ಜಗತ್ತನ್ನು ದಾಟುತ್ತಾನೆ. ಅಂತಹವನ ಜೀವನ ಸಾರ್ಥಕ. ಮನುಷ್ಯ ಜನ್ಮದಲ್ಲಿ ಸಾಧಿಸಬೇಕಾದ ಕಟ್ಟಕಡೆ ಗುರಿಯೆಂದರೆ ಆಧ್ಯಾತ್ಮಿಕ ಪರಿಪೂರ್ಣತೆ ಸಾಧಿಸಿ ಭಗವದ್ಧಾಮಕ್ಕೆ ಹಿಂತಿರುಗುವುದು.

ಗೆಳೆಯ, ಪ್ರತಿಯೊಬ್ಬರ ಹೃದಯದಲ್ಲಿ ಅಂತರ್ಯಾಮಿಯಾಗಿ ವಾಸಿಸುವವನೂ ನಾನೆ. ಮನುಷ್ಯ ಸಮಾಜ ವರ್ಣಾಶ್ರಮ ತತ್ವ ಅನುಸರಿಸಬೇಕೆಂಬುದು ನನ್ನದೇ ಅಪ್ಪಣೆ. ಸದಾ ಹೃದಯವಾಸಿಯಾಗಿದ್ದುಕೊಂಡು ನಾನು ಪ್ರತಿಯೊಬ್ಬರ ಪ್ರತಿಯೊಂದು ಕಾರ್ಯದ ಸರಿ-ತಪ್ಪು ವಿಮರ್ಷೆ ನಡೆಸುತ್ತೇನೆ.

ಯೋಗ್ಯತೆ ಮತ್ತು ಕರ್ತವ್ಯಕ್ಕೆ ಅನುಸಾರವಾಗಿ ಮನುಷ್ಯ ಜೀವನವನ್ನು ನಾಲ್ಕು ಆಶ್ರಮಗಳಾಗಿ ವಿಂಗಡಿಸಲಾಗಿದೆ. ಮೊದಲ ಘಟ್ಟದಲ್ಲಿ ವ್ಯಕ್ತಿ ಸುಶಿಕ್ಷಿತನಾಗಬೇಕು. ಬ್ರಹ್ಮಚರ್ಯ ವ್ರತವನ್ನು ಕಟ್ಟುನಿಟ್ಟಿನಿಂದ ಪಾಲಿಸುತ್ತಾ ವಿದ್ಯೆ ಪಡೆಯಬೇಕು. ಈ ಹಂತದಲ್ಲಿ ಸ್ವಸುಖವನ್ನು ಕಡೆಗಣಿಸಿ ಬದುಕನ್ನು ಗುರುಸೇವೆಗೆ ಮುಡುಪಿಡಬೇಕು. ವಿದ್ಯೆ ಮುಗಿದ ಬಳಿಕ ಗೃಹಸ್ಥ ಜೀವನ ಪ್ರವೇಶಿಸಬೇಕು. ಯೋಗ್ಯಳಾದ ಕನ್ಯೆಯನ್ನು ವಿವಾಹವಾಗಿ ಧರ್ಮಮಾರ್ಗದಲ್ಲಿ ಸಾಂಸಾರಿಕ ಜೀವನ ನಡೆಸಬೇಕು. ಈ ಘಟ್ಟದಲ್ಲಿ ನ್ಯಾಯಯುತ ಮಾರ್ಗದಲ್ಲಿ ಅರ್ಥ (ಸಂಪತ್ತು) ಗಳಿಸುವುದು ತಪ್ಪೇನಲ್ಲ. ಗಳಿಸಿದ ಸಂಪತ್ತನ್ನು ಯೋಗ್ಯರಿಗೆ ದಾನ ಮಾಡುವ ಮೂಲಕ ಸಮಾಜದಲ್ಲಿ ಇನ್ನುಳಿದ ಮೂರು ಆಶ್ರಮಗಳ ಜನರಿಗೆ ನೆರವಾಗಬೇಕು. ಇತರ ಮೂರು ಆಶ್ರಮಗಳಿಗೆ ಗೃಹಸ್ಥಾಶ್ರಮವೇ ಬುನಾದಿ. ಗೃಹಸ್ಥಾಶ್ರಮದಲ್ಲಿ ಯೋಗ್ಯ ಸಂತಾನ ಪಡೆದು ಸಮಾಜಕ್ಕೆ ನೀಡಿದ ನಂತರ ವಾನಪ್ರಸ್ಥ ಆಶ್ರಮ ಪ್ರವೇಶಿಸಬೇಕು. ಈ ಹಂತದಲ್ಲಿ ವಾನಪ್ರಸ್ಥಾಶ್ರಮಕ್ಕೆ ಕಟ್ಟುಬೀಳಬೇಕು. ಕ್ರಮೇಣ ಸಾಂಸಾರಿಕ ಬಂಧನಗಳನ್ನು ಕಡಿದುಕೊಂಡು ಸಂನ್ಯಾಸ ಸ್ವೀಕರಿಸಬೇಕು. ಈ ಘಟ್ಟದಲ್ಲಿ ವ್ಯಕ್ತಿ ತನ್ನನ್ನು ಪೂರ್ಣವಾಗಿ ಭಗವಂತನಿಗೆ ಅರ್ಪಿಸಿಕೊಳ್ಳಬೇಕು.

ಪ್ರತಿ ಜೀವಿಯ ಹೃದಯ ನಿವಾಸಿಯಾದ ನಾನು ಪ್ರತಿ ಆಶ್ರಮದ ಪ್ರತಿ ಹಂತದಲ್ಲಿಯೂ ಪ್ರತಿಯೊಬ್ಬರ ಕೆಲಸ ಕಾರ್ಯ ಗಮನಿಸುತ್ತೇನೆ. ಮನುಷ್ಯನು ಯಾವುದೇ ಘಟ್ಟದಲ್ಲಿರಲಿ ತನ್ನ ಗುರು ಭೋದಿಸಿದ ಕರ್ತವ್ಯಗಳನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದಲ್ಲಿ ಆತ ನನಗೆ ಬಹು ಆತ್ಮೀಯನಾಗುತ್ತಾನೆ. ಬ್ರಹ್ಮಚರ್ಯ, ಆಶ್ರಮವನ್ನು ಪಾಲಿಸುವವನು ಲೈಂಗಿಕ ತೃಷೆಗೆ ತುತ್ತಾಗಬಾರದು. ಗುರುವಿನ ಮಾರ್ಗದರ್ಶನದಲ್ಲಿ ಬ್ರಹ್ಮಚಾರಿಯು ಬದುಕನ್ನು ಸಾಗಿಸಿದರೆ ಒಳ್ಳೆಯದು. ಒಂದೊಮ್ಮೆ ಈ ಹಂತದಲ್ಲಿ ಕಾಮ ಪ್ರವೃತ್ತಿಗಳು ಕಾಡಿದರೆ ಗುರುದಕ್ಷಿಣೆ ಸಲ್ಲಿಸಿ ಗುರುವಿನ ಅಪ್ಪಣೆ ಪಡೆದು ಗೃಹಸ್ಥಾಶ್ರಮ ಸ್ವೀಕರಿಸುವುದು ಉಚಿತ.

ಒಂಟಿಯಾಗಿ ಇರುವ ಗಂಡಸಾಗಲೀ, ಹೆಂಗಸಾಗಲೀ ಕಾಮಜೀವನ ನಡೆಸುವುದು ನೈತಿಕ ಮಾನವ ಸಮಾಜದಲ್ಲಿ ಎಂದಿಗೂ ಒಪ್ಪತಕ್ಕದ್ದಲ್ಲ. ಅನೈತಿಕ ಕಾಮದ ಒಂಟಿ ಜೀವನವು ಪಶುಜೀವನಕ್ಕೆ ಸಮ. ಸಮಾಜ ಜೀವನದ ಯಶಸ್ಸು ಎಂದುಕೊಳ್ಳುವುದು ಒಂದು ಭ್ರಮೆ. ಈ ಸತ್ಯ ಮರಣಶಯ್ಯೆಯಲ್ಲಿ ಗೊತ್ತಾಗುತ್ತದೆ. ಅಷ್ಟರಲ್ಲಿ ಕಾಲ ಮಿಂಚಿರುತ್ತದೆ. ಮನುಷ್ಯ ಜೀವನದ ಮಹತ್ಕಾರ್ಯವೆಂದರೆ ಭಗವದ್ಧಾಮಕ್ಕೆ ಹಿಂದಿರುಗುವುದು. ಆ ದಿಸೆಯಲ್ಲಿ ಕಾರ್ಯಪ್ರವೃತ್ತನಾಗುವುದು. ಇದೆಲ್ಲವೂ ನಿನಗೆ ತಿಳಿಯದ್ದೇನಲ್ಲ. ಆದರೂ, ಸ್ನೇಹಿತನಾದ ನಿನ್ನಲ್ಲಿ ಇದೆಲ್ಲವನ್ನೂ ಪ್ರಸ್ತಾಪಿಸಿದೆ.” ನಾನು ಸುಮ್ಮನೆ ತಲೆಯಾಡಿಸಿದೆ.

ಗುರುವಿನ ಆಶ್ರಮದಲ್ಲಿ ಕಳೆದ ವಿದ್ಯಾಭ್ಯಾಸದ ದಿನಗಳನ್ನು ನೆನಪಿಸಿಕೊಳ್ಳುತ್ತಾ – “ಮಿತ್ರಾ, ಅದೊಂದು ದಿನ ನಾವು ಕಗ್ಗಾಡಿನಲ್ಲಿ ದಾರಿ ತಪ್ಪಿ ಅಲೆದಾಡಿದ್ದು ನೆನಪಿದೆಯೇ? ಗುರುಪತ್ನಿಯ ಅಪೇಕ್ಷೆಯಂತೆ ಕಾಡಿನಲ್ಲಿ ಸೌದೆ ಸಂಗ್ರಹಿಸಿ ಇನ್ನೇನು ಆಶ್ರಮಕ್ಕೆ ಹಿಂತಿರುಗಬೇಕೆನ್ನುವಾಗ ಅನಿರೀಕ್ಷಿತವಾಗಿ ಸುಂಟರಗಾಳಿ ಬೀಸಿ ಆಗಸವನ್ನೆಲ್ಲಾ ದಟ್ಟಧೂಳಿನಿಂದ ತುಂಬಿತು. ಅದೆಲ್ಲಿಂದಲೋ ಆಗಮಿಸಿದ ಮೇಘ ಮಾರುತ ಸಿಡಿಲು-ಮಿಂಚುಗಳಿಂದ ಕೂಡಿದ ಕುಂಭದ್ರೋಣ ಮಳೆಯನ್ನು ಸುರಿಸಿತು. ಎಲ್ಲೆಲ್ಲೂ ಜಲಧಾರೆ. ಮಳೆಚಳಿಯಿಂದ  ಕಂಗಾಲಾದ ನಮಗೆ ದಾರಿಯೂ ತಪ್ಪಿತಲ್ಲ. ಸಾಲದ್ದಕ್ಕೆ ಕತ್ತಲೂ ಆವರಿಸಿತು. ಎತ್ತ ತಿರುಗಿದರೂ ಕತ್ತಲು-ಕಗ್ಗತ್ತಲು. ದಾರಿ ಕಾಣುತ್ತಿಲ್ಲ.  ಹಸಿವು-ನಿದ್ರೆ-ಭೀತಿಗಳಿಂದ ಇಡೀ ರಾತ್ರಿ ಕಾಡೆಲ್ಲಾ ಅಲೆದಾಡಿದೆವು. ಅರುಣೋದಯವಾದಾಗ ನಾವು ಆಶ್ರಮಕ್ಕೆ ಮರಳದಿರುವುದು ಗುರುಗಳ ಗಮನಕ್ಕೆ ಬಂತು. ಅವರು ತಮ್ಮ ಶಿಷ್ಯವರ್ಗದೊಂದಿಗೆ ನಮಗಾಗಿ ಕಾಡೆಲ್ಲ ಹುಡುಕಾಡಿ ಕೊನೆಗೂ ಪತ್ತೆ ಮಾಡಿದರು. ಮಾತೃವಾತ್ಸಲ್ಯ ತೋರಿ ನಮ್ಮ ದಣಿವು-ಆಯಾಸಗಳನ್ನು ನಿವಾರಿಸಿದರು.” ನನ್ನ ಉತ್ತರೀಯದ ಮೇಲಿನ ಧೂಳನ್ನು ಕೈಯಿಂದ ಕೃಷ್ಣನು ಕೆಡವಿದ. ನಾನು ಸಂಕೋಚದಿಂದ ಮುಖ ತಗ್ಗಿಸಿದೆ.

“ಆಯಾಸ ಪರಿಹಾರಗೊಂಡ ನಮ್ಮಿಬ್ಬರನ್ನು ಉದ್ದೇಶಿಸಿ ಗುರುದೇವರು ಹೇಳಿದ ಮಾತುಗಳು ನಿನಗೆ ನೆನಪಿದೆಯಾ? “ಮಕ್ಕಳೇ ನಿಮ್ಮ ಗುರುನಿಷ್ಠೆ ನನಗೆ ತೃಪ್ತಿ ತಂದಿದೆ. ಸ್ವಕ್ಷೇಮಕ್ಕೆ ಗಮನ ಕೊಡದೆ ಗುರುಸೇವೆಗಾಗಿ ಎಷ್ಟೊಂದು ಕಷ್ಟ ಪಟ್ಟಿರಿ. ಇದು ನಿಜವಾದ ವಿದ್ಯಾರ್ಥಿಯ ಲಕ್ಷಣ. ಗುರುಋಣ ತೀರಿಸುವುದೆಂದರೆ ಇದೆ. ಗುರುಸೇವೆಗೆ ಜೀವನ ಮುಡಿಪಾಗಿಡುವುದು ಶಿಷ್ಯನ ಕರ್ತವ್ಯ. ನಿಮ್ಮನ್ನು ಕಂಡು ನನಗೆ ಸಂತೋಷವಾಯಿತು. ಮನಃಪೂರ್ವಕವಾಗಿ ಹರಸುತ್ತಿದ್ದೇನೆ, ನಿಮ್ಮ ವಿದ್ಯೆ ಸಾರ್ಥಕವಾಗಲಿ. ಶ್ರೇಯಸ್ಸು ಲಭಿಸಲಿ, ನಿಮ್ಮ ಬಯಕೆ-ಆಕಾಂಕ್ಷೆಗಳೆಲ್ಲವೂ ಕೈಗೂಡಲಿ” ಎಂದು ಗುರು ಸಾಂದೀಪನಿ ಹರಸಲಿಲ್ಲವೇ? ಆ ಗುರುಕೃಪೆಯಿಂದಲ್ಲವೇ ನಾವಿಂದು ಈ ಮಟ್ಟಕ್ಕೇರಿರುವುದು!  “ಹೇಳು ಮಿತ್ರ ಮಾತನಾಡಲೊಲ್ಲೆಯೇಕೆ? ಈ ಮಿತ್ರನ ಕುರಿತು ಮುನಿಸೇ? ಏನಾದರೂ ಹೇಳು” ಕೃಷ್ಣ ಕೇಳುತ್ತಿದ್ದಾನೆ. ನಾನು ಏನು ಹೇಳಲಿ! ಕೇಳುವ ಪುಣ್ಯಕ್ಕೆ ನಾನು ಕರಗಿದ್ದೇನೆ.

“ಕೃಷ್ಣಾ, ನೀನು ಲೋಕೋದ್ಧಾರಕ, ಜಗದ್ಗುರು, ಗುರುಮನೆಯಲ್ಲಿ ಸರ್ವಾಂತರ್ಯಾಮಿಯಾದ ನಿನ್ನೊಡನೆ ಸ್ವಲ್ಪ ಕಾಲ ಕಳೆದಿರುವೆನಾದ್ದರಿಂದ “ಪರಶುಮಣಿಯ ಸ್ಪರ್ಷ ಮಾತ್ರದಿಂದ ಕಬ್ಬಿಣದ ತುಂಡು ಚಿನ್ನವಾಗುವಂತೆ” ನನ್ನ ಜನ್ಮ ಪುನೀತವಾಗಿದೆ. ಆದ್ದರಿಂದ ವೇದೋಕ್ತ ಕರ್ತವ್ಯಗಳ ಗೊಡವೆಗಳೊಂದೂ ನನಗಿಲ್ಲ ಎಂದು ಭಾವನೆ. ತಂದೆಯೇ, ಆರ್ಥಿಕ ಸಮೃದ್ಧಿ, ಇಂದ್ರಿಯ ತೃಪ್ತಿ, ಮುಕ್ತಿಯೂ ಸೇರಿದಂತೆ ಮನುಷ್ಯ ಜೀವನದ ಪರಿಪೂರ್ಣತೆಗೆ ಅಗತ್ಯವಾದ ವೇದಗಳ ಪ್ರಾರ್ಥನೆಗಳು ವಿಧ್ಯುಕ್ತ ಉತ್ಸವಗಳು ಧಾರ್ಮಿಕ ವಿಧಿಗಳು ಎಲ್ಲವೂ ಎಲ್ಲದರ ಉದ್ದೇಶವೂ ಒಂದೇ! ನಿನ್ನನ್ನು ಹೊಂದುವುದು! ನಿನ್ನನ್ನು ಅರ್ಥಮಾಡಿಕೊಳ್ಳುವುದು! ನೀನು ಪರಿಪೂರ್ಣ, ಅಪರಿಪೂರ್ಣರು ನಾವು. ಆದರೆ, ಪ್ರಭು, ಬಯಸಿಯೋ ಬಯಸದೆಯೋ ನಿನ್ನ ಸಾನ್ನಿಧ್ಯ ಸುಖವಂತೂ ನನಗೆ ಸಿಕ್ಕಿದೆ. ಅನೇಕ ಮಹಾನ್‌ ತಪಸ್ವಿಗಳು, ಋಷಿಮುನಿಗಳು, ದೇವಗಂಧರ್ವರಿಗೂ ದುರ್ಲಭನಾದ ನೀನು ಬಡಬ್ರಾಹ್ಮಣನೂ, ಅಲ್ಪಮತಿಯೂ ಆದ ನನ್ನನ್ನು ಒಲಿದಿದ್ದಿಯೆ. ಪ್ರಭು, ನನ್ನ ಹುಟ್ಟೇ ಸಾರ್ಥಕವಾಯಿತು. ಧನ್ಯ ಪ್ರಭು ಧನ್ಯ, ನನಗಿನ್ನೇನೂ ಬೇಡ. ನನ್ನ ಮೌನದ ಮಾತುಗಳನ್ನು ಪ್ರಭುವಿಗೆ ಸಲ್ಲಿಸಿದೆ!

ಶ್ರೀಕೃಷ್ಣ ಹುಸಿನಗುತ್ತಾ ಪ್ರಶ್ನಿಸುತ್ತಿದ್ದಾನೆ. “ಆತ್ಮೀಯನೆ, ನೀನು ನನಗಾಗಿ ಏನೂ ತಂದಿಲ್ಲವೇ? ಅತ್ತಿಗೆಯವರು ನನಗಾಗಿ ರುಚಿಯಾದ ತಿಂಡಿ ಕಳುಹಿಸಿರಬೇಕಲ್ಲವೇ? ನನ್ನ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿರಬಹುದಾದ ಆಕೆ ಏನಾದರೂ ಕಳುಹಿಸಿರುವುದಂತೂ ಖಂಡಿತ.”

ತಾನು ತಂದಿರುವ ಈ ಯಕಃಶಿತ್‌ ಅವಲಕ್ಕಿಯನ್ನು ಶ್ರೀರಮಣನಾದ ಸ್ವಾಮಿಗೆ ಹೇಗೆ ಕೊಡುವುದು? ನನ್ನ ಹಿಂಜರಿಕೆಯ ವಿಷಯ ಸರ್ವರ ಅಂತರಂಗದ ಸ್ವಾಮಿಯಾದ ಕೃಷ್ಣನಿಗೆ ತಿಳಿಯುತ್ತಿಲ್ಲವೆ. ಆದರೆ, ಭಕ್ತರು ಪ್ರೀತಿಯಿಂದ ಕೊಡುವ ಎಲ್ಲವನ್ನೇ ಮಹತ್ತಾಗಿ ತೋರಿಸುವ ಸ್ವಾಮಿಗೆ ನನ್ನಲ್ಲಿರುವುದನ್ನು ನೀಡುತ್ತೇನೆ.

“ಪ್ರೀತಿ ಹಾಗೂ ಭಕ್ತಿಯಿಂದ ನೀಡುವ ವಸ್ತುವಿನಷ್ಟು ರುಚಿಕರವಾದದ್ದು ಈ ಲೋಕದಲ್ಲೆ ಮತ್ತೇನಿದೆ? ಭಕ್ತಿಯಿಂದ ನಿರ್ಮಲ ಮನಸ್ಸಿನಿಂದ ಭಕ್ತನು ನೀಡವ ಒಂದು ಹೂವು, ಒಂದು ಎಲೆಯ ತುಂಡು ಹೆಚ್ಚೇಕೆ ಒಂದು ಹನಿ ನೀರು ಪ್ರೀತಿಪಾತ್ರ! ಭಕ್ತಿ ಮತ್ತು ಪ್ರೀತಿಗಿಂತ ಮಿಗಿಲಾದದ್ದೇನೂ ಇಲ್ಲ. ಹಸಿದು ಆಯಾಸದಿಂದ ಬಂದ ನನ್ನನ್ನು ತೃಪ್ತಿಪಡಿಸಿದ್ದು ಯಾವುದು? ಇಲ್ಲಿನ ಶ್ರೀಮಂತಿಕೆಯೇ? ಅಥವಾ ನಾನು ತೋರಿದ ಪ್ರೀತಿಯೇ? ಆದ್ದರಿಂದ ಮಿತ್ರಾ ಮನಸ್ಸಿನ ಹಿಂಜರಿಕೆ ಬಿಡು ಏನು ತಂದಿದ್ದರೂ ಚಿಂತಿಲ್ಲ ನನಗೆ ನೀಡು” ಕೃಷ್ಣನೇ ಒತ್ತಾಸೆ ನೀಡುತ್ತಿದ್ದಾನೆ. ನನ್ನ ಉತ್ತರೀಯದ ಗಂಟನ್ನು ಮೆತ್ತಗೆ ಮುಂದೊಡ್ಡಿದೆ.

ನನ್ನನ್ನು ಅನುಗ್ರಹಿಸುವ ಸಲುವಾಗಿಯೇ ಸ್ವಾಮಿ ಹಿಡಿ ಅವಲಕ್ಕಿಗೆ ಪ್ರಾರ್ಥಿಸುತ್ತಿದ್ದಾನೆ ಎಂಬ ಅರಿವಾದರೂ ಹಿಡಿ ಅವಲಕ್ಕಿಯನ್ನು ಸರ್ವರ ಸ್ವಾಮಿಯಾದ ಕೃಷ್ಣನಿಗೆ ಹೇಗೆ ನೀಡುವುದು ಎಂಬ ನನ್ನ ಅಂತರಂಗದ ತುಮಲ ದೂರಾಗಲಿಲ್ಲ. ನನ್ನ ಮನಸ್ಸಿನಲ್ಲಾಗುವ ಹಿಂಜರಿಕೆಯನ್ನು ಅರಿತ ಸ್ವಾಮಿ, ಹೆಗಲಲ್ಲಿದ್ದ ಜೋಳಿಗೆಯನ್ನು ಸೆಳೆದುಕೊಳ್ಳುತ್ತಿದ್ದಾನೆ. ಜೋಳಿಗೆ ಮೂಲೆಯಲ್ಲಿ ಕಟ್ಟಿದ್ದ ಅವಲಕ್ಕಿಯನ್ನು ಕಂಡು ಪರಮಾನಂದಗೊಂಡು, `ಇಷ್ಟೊಂದು ಸೊಗಸಾದ ರುಚಿಕರವಾದ ತಿಂಡಿಯನ್ನು ತಂದೂ ಬಚ್ಚಿಟ್ಟುಕೊಂಡಿದ್ದೆಯಾ ಮಿತ್ರಾ? ನನಗೆ ನೀಡದೇ ಎಲ್ಲಾ ನೀನೆ ತಿಂದು ಮುಗಿಸುವ ಹುನ್ನಾರವೋ?’ ಎಂದು ಹುಸಿಕೋಪ ಪ್ರಕಟಿಸುತ್ತಾ ಅವಲಕ್ಕಿಯನ್ನು ಪ್ರೀತಿಯಿಂದ ಸೇವಿಸುತ್ತಿದ್ದಾನೆ. ಆಹಾ! ನಾನೇ ಧನ್ಯ. ಪ್ರಭುವಿನ ಪ್ರೀತಿಗೆ ಪಾತ್ರರಾದ ನನ್ನ ಕುಟುಂಬ ಧನ್ಯ!!

ತಾನು ಸೇವಿಸುವುದರೊಂದಿಗೆ ಪತ್ನಿ ರುಕ್ಮಿಣಿಯನ್ನು ಕರೆದು ಆಕೆಗೂ ನೀಡುತ್ತಿದ್ದಾನೆ. “ಮಿತ್ರ, ಅಲ್ಪವೆಂದು ಅಂಜಿಕೆಯೇಕೆ? ಇಷ್ಟು ಅವಲಕ್ಕಿ ನನ್ನನ್ನು ಮಾತ್ರವಲ್ಲ ಇಡೀ ಸೃಷ್ಟಿಯನ್ನು ತೃಪ್ತಿಪಡಿಸುತ್ತದೆ” ಎಂದು ಧೈರ್ಯ ಬೇರೆ ಹೇಳುತ್ತಿದ್ದಾನೆ!! ಆಹಾ ನಾನೇ ಧನ್ಯ!

*  *  *

ಕೃಷ್ಣನಲ್ಲಿ ಹೇಗೆ ನನ್ನ ಬಡತನವ ಬಿನ್ನವಿಸಿಕೊಳ್ಳಲಿ! ಬಿನ್ನಹಕೆ ಬಾಯಿಲ್ಲವಯ್ಯ! ಕೃಷ್ಣ… ಬಿನ್ನಹಕೆ ಬಾಯಿಲ್ಲವಯ್ಯ! ನನ್ನಲ್ಲೇ ನಾನು ಹೇಳಿಕೊಳ್ಳುತ್ತಿದ್ದೆ.

*  *  *

ಸುದಾಮ, ನನ್ನ ನಿಜವಾದ ಭಕ್ತ! ತನ್ನಲ್ಲಿರುವುದನ್ನೆಲ್ಲಾ ನಿರ್ವಂಚನೆಯಿಂದ ನನ್ನಲ್ಲಿ ಅರ್ಪಿಸಿ, ಶರಣಾಗತನಾಗಿದ್ದಾನೆ. ಭಕ್ತನ ಮನೋಭಿಷ್ಟವನ್ನು ನಾನು ಪೂರೈಸುತ್ತೇನೆ ಎಂದು ಅಭಯವನ್ನು ಜಗತ್ತಿಗೆ ಅದೆಂದೋ ನೀಡಿದ್ದಾಗಿದೆ. ಸುದಾಮ… ನಿನ್ನ ಮನಸ್ಸಿನ ಭಾವನೆಗಳು ಅದ್ಭುತವಾಗಿವೆ. ನನ್ನಲ್ಲಿ ನೀನೇನೂ ಬೇಡುತ್ತಿಲ್ಲ! “ಬೇಡುವುದೇಕೆ? ಎಲ್ಲ ಬಲ್ಲವನು ನೀನು. ಕೊಟ್ಟೇ ಕೊಡುತ್ತೀಯ ಎಂದುಕೊಂಡಿದ್ದೀಯಲ್ಲವೆ!” ನಿನ್ನ ಅಭೀಷ್ಟವನ್ನು ನಾನು ಖಂಡಿತಾ ನೆರವೇರಿಸುತ್ತೇನೆ. ನನ್ನನ್ನು ಜಗನ್ನಾಥ, ಜಗದೋದ್ಧಾರಕ ಕೃಷ್ಣ ಎನ್ನುತ್ತಿರುವಾಗ ನಾನು ಇಷ್ಟೂ ಮಾಡದಿದ್ದರೆ ಹೇಗೆ?

*  *  *

ಆಯಿತು! ಎರಡು ದಿನ ಮುಗಿದಿದೆ, ಭಗವಂತನ ದಿವ್ಯ ಸಾನ್ನಿಧ್ಯದಲ್ಲಿ ಸಮಯ ಸರಿದದ್ದೇ ಗೊತ್ತಾಗಲಿಲ್ಲ! ತನ್ನ ಎಲ್ಲಾ ರಾಜಕಾರ್ಯ ಬದಿಗೊತ್ತಿ, ಲೋಕ ಪ್ರಭು ನನ್ನೊಡನೆ ದಿನ ಕಳೆದಿದ್ದಾನೆ. ಅವನ ದೊಡ್ಡತನ! ನಾನಿಲ್ಲಿ ಇನ್ನು ಉಳಿದರೆ, ಅವನ ರಾಜಕಾರ್ಯದ ಗತಿ ಏನು? ಮೇಲಾಗಿ, ನನ್ನ ಕುಟುಂಬದವರಿಗೆಲ್ಲಾ, ಕೃಷ್ಣನ ದರ್ಶನ, ಆ ಆನಂದ, ಅವನ ಉಪಚಾರದ ವೈಭವ, ಅವನ ಸನ್ನಡತೆ, ಎಲ್ಲಾ ವಿವರಿಸುವ ಕಾತರ ನನಗೆ. ಇಂದೇ ಕೃಷ್ಣನಿಗೆ ತಿಳಿಸಿ, ಹೊರಡುತ್ತಿದ್ದೇನೆ. ಸುದಾಮನೆಂಬ ಬಡ ಬ್ರಾಹ್ಮಣನನ್ನು ದ್ವಾರಕಾಧೀಶ ಪ್ರಭು ಕೃಷ್ಣ ಆದರಿಸಿದ ರೀತಿ, ಜಗತ್ತಿಡೀ ಕೊಂಡಾಡಲಿದೆ. ನಾನೇನೂ ಗಣನೀಯವಾದ್ದನ್ನು ಕೃಷ್ಣನಿಗೆ ನೀಡಿಲ್ಲ! ಉಪಕಾರಕ್ಕೆ ಪ್ರತ್ಯುಪಕಾರ ಲೋಕದ ತರ್ಕ. ನನ್ನ ಅಲ್ಪ ಕಾಣಿಕೆಗೆ ಅಷ್ಟೈಶ್ವರ್ಯ ಯಾಚಿಸುವುದು ಬ್ರಾಹ್ಮಣನಾದ ನನ್ನ ಧರ್ಮಕ್ಕೆ ಅಪಚಾರವೇ ಸರಿ. ಅಗೋ, ಅಲ್ಲಿ ರುಕ್ಮಿಣಿ, ಸತ್ಯಭಾಮಾ ಸಮೇತ ಪ್ರಭು ಕಾಣಿಸುತ್ತಿದ್ದಾನೆ. “ಪ್ರಭು, ನಾನು ಇಂದೇ ಊರಿಗೆ ಹೊರಡಲು ಅಪ್ಪಣೆಯಾಗಲಿ” ಕೃಷ್ಣನು ಕಣ್ಣಂಚಿನಿಂದಲೇ ನಗುತ್ತಾ, ಅನುಗ್ರಹಿಸಿ, ಬೀಳ್ಕೊಡುತ್ತಿದ್ದಾನೆ.

ಲಗುಬಗೆಯಿಂದ ಧಾವಿಸುತ್ತಾ ನಡೆಯುತ್ತಿದ್ದೇನೆ. ಕೃಷ್ಣನ ಬಗ್ಗೆ ಮನೆಯವರಿಗೆ ತಿಳಿಸುವ ಆಸೆ ಅದಮ್ಯವಾಗುತ್ತಿವೆ. ಆದರೂ, ಹೆಂಡತಿ ತಿಳಿಸಿದಂತೆ, ನಾನು ಏನೂ ಯಾಚಿಸಲಿಲ್ಲವಲ್ಲ! ಅತಿ ಬಡವನಾದ ನನಗೆ ಶ್ರೀಮಂತಿಕೆಯನ್ನು ಅನುಗ್ರಹಿಸಿದರೆ ವಿಚಲತೆಯುಂಟಾಗಿ, ಭಕ್ತಿಯಲ್ಲಿ ಲೋಪವಾಗಬಹುದೆಂದು ಪರಿಗಣಿಸಿ ಭಗವಂತ, ನನಗೇನನ್ನೂ ಕೊಡುವ ಬಗ್ಗೆ ಮಾತಾಡಲಿಲ್ಲವೇನೋ! ಆದರೂ ಆತನ ಆದರಾತಿಥ್ಯವು, ಆತನು ನನಗೆ ಪೂರ್ಣಾನುಗ್ರಹ ಮಾಡಿದ್ದಾನೆ ಎಂಬುದಕ್ಕೆ ಉದಾಹರಣೆಯಲ್ಲವೆ!… ನಾನು ಬಲು ದೂರ ಬಂದಿದ್ದಾಯಿತು. ಆದರೆ ನನ್ನ ಮನೆಯೇ ಸಿಗಲಿಲ್ಲವಲ್ಲ! ದೂರದಲ್ಲಿ ಕಾಣುತ್ತಿರುವ ಬಂಗಲೆ ಯಾವುದು? ಅದೇನು ವೈಭವೋಪೇತವಾಗಿದೆ! ಆಳುಕಾಳುಗಳು ಓಡಾಡುತ್ತಿದ್ದಾರೆ. ಆನೆ ಕುದುರೆಗಳು, ರಥಗಳು ನಿಂತಿವೆ! ನಾನು ದಾರಿತಪ್ಪಿದೆನೆ? ಅಗೋ ಅಲ್ಲಿರುವ ಮಹಾಲಕ್ಷ್ಮಿಯಂತೆ ಕಂಗೊಳಿಸುತ್ತಿರುವ ಆಕೆಯನ್ನು ಕೇಳೋಣ! ಆದರೆ! ಆಕೆ ನನ್ನಡೆಗೆ ಧಾವಿಸುತ್ತಿದ್ದಾಳೆ! ಅವಳ ಜೊತೆಯಲ್ಲಿರುವ ಮಕ್ಕಳು ಕೈ ಬೀಸುತ್ತಿದ್ದಾರೆ! ಕೃಷ್ಣಾ! ಇವರು ನನ್ನ ಮಕ್ಕಳು, ಆಕೆ ನನ್ನ ಹೆಂಡತಿ!

*  *  *

ಅರೆ ಇದೇನಿದು! ಇದರ ಮೈಮೇಲೆ ಅತೀ ಹಳತಾದ ಬಟ್ಟೆಗಳಿವೆ! ಇವರಿಗೆ ಗೊತ್ತೇ ಆಗಿಲ್ಲ! ಕೃಷ್ಣನ ಅನುಗ್ರಹ ನಮಗಾಗಿದೆ ಎಂದು ಇವರಿಗೇಕೆ ತಿಳಿದಿಲ್ಲ. “ಸ್ವಾಮಿ! ಪರಮಾಶ್ಚರ್ಯ – ನಾಲ್ಕು ದಿನದ ಹಿಂದೆ, ಮಾಯಾ ಲೋಕವೇನೋ ಎಂಬಂತೆ, ಇದೆಲ್ಲ ಘಟಿಸಿದೆ. ದ್ವಾರಕೆಯ ಅರಸನಾದ ಶ್ರೀ ವಾಸುದೇವ ಕೃಷ್ಣನ ಆಜ್ಞೆಯಂತೆ, ನಾವಿದನ್ನು ಸಜ್ಜುಗೊಳಿಸುತ್ತಿದ್ದೇವೆಯೆಂದು, ದ್ವಾರಕೆಯಿಂದ ಬಂದ ಅಧಿಕಾರಿಗಳು ತಿಳಿಸಿದರು. ದೇವ ದೇವನ ಕೃಪೆಯ ಭಾರದಿಂದ, ನಾನು ಬಾಗಿದ್ದೇನೆ. ಆತನ ಪ್ರತ್ಯಕ್ಷ ದರ್ಶನ ಪಡೆದ ನೀವೇ ಭಾಗ್ಯಶಾಲಿಗಳು!” ಅರೆ ನನ್ನ ಮಾತು ಕೇಳುತ್ತಾ, ಕೃಷ್ಣನ ಗುಣಗಾನ ಆಲಿಸುತ್ತಾ ಇವರ ಕಣ್ಣಲ್ಲಿ ನೀರಾಡುತ್ತಿದೆ!

*  *  *

ನನ್ನ ಪತ್ನಿಗೆ ಹೇಳಬೇಕು. ಪರಮ ಪ್ರಭುವಿನ ಉಪದೇಶವಾಗಿದೆ. ಭೌತಿಕ ಸಂಪತ್ತಿನಿಂದ ನಾವು ಹಾಳಾಗಬಾರದು. ಈ ಸಂಪತ್ತು ಇಂದ್ರಿಯ ತೃಪ್ತಿಗೆ ಬಳಸದೇ, ಪರಮ ಪ್ರಭುವಿನ ಸೇವೆಗೆ ಬಳಸೋಣ. ಆಕೆಯೂ ಧರ್ಮಿಷ್ಟೆ. ನನ್ನ ಇಚ್ಛೆಗೆ ಅನುಗುಣವಾಗಿ, ವರ್ತಿಸುತ್ತಿದ್ದಾಳೆ. ನಾನು ಭಾಗವತ್ತೋತ್ತಮನಾಗಿ ನಿಜ ವೈಷ್ಣವನಾಗಿ, ಪ್ರಭುವಿನ ಸೇವೆ ಮಾಡುತ್ತೇನೆ. ಹೂವ ತರುವವರ ಮನೆಗೆ ಹುಲ್ಲ ತರುವ! ಭಗವಂತನ ಕಾರುಣ್ಯದ ಅನುಗ್ರಹದ ರೀತಿಗೆ ನಾನೇ ಸಾಕ್ಷಿ! ಲೋಕ ಇರುವವರಿಗೆ, ಸುದಾಮ-ಕೃಷ್ಣ ಆತಿಥ್ಯದ ಐತಿಹ್ಯ ಉಳಿದಿರುತ್ತದೆ ಎಂದು ನನಗನ್ನಿಸುತ್ತದೆ. ಜಯ ಶ್ರೀ ಕೃಷ್ಣ!  ಜಯ  ಜಯ  ಶ್ರೀ ಕೃಷ್ಣ!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi