ಶ್ರೀ ಮಧ್ವಾಚಾರ್ಯ

ಶ್ರೀ ಕೃಷ್ಣಭಕ್ತರ ಪರಮ ಪವಿತ್ರ ಕ್ಷೇತ್ರ ಉಡುಪಿ. ಉಡುಪಿ ಎಂದ ತಕ್ಷಣ ನೆನಪಿಗೆ ಬರುವುದು ಸಮುದ್ರ, ಶ್ರೀ ಕೃಷ್ಣನೆಂಬ ಕರುಣಾ ಸಾಗರ! ಇಲ್ಲಿಯ ಶ್ರೀಕೃಷ್ಣ ದೇಗುಲ, ಕನಕನ ಕಿಂಡಿ, ರಥ ಬೀದಿ, ಅಷ್ಟ ಮಠಗಳು ಎಲ್ಲವನ್ನೂ ನೋಡುವುದೇ ಕಣ್ಣಿಗೆ ಹಬ್ಬ. ಇವೆಲ್ಲದರ ಹಿಂದಿನ ಪ್ರೇರಕ ಶಕ್ತಿ ಶ್ರೀ ಮಧ್ವಾಚಾರ್ಯರು.

ಸುಮಾರು 750 ವರ್ಷಗಳ ಹಿ೦ದೆ ದೇಶಾದ್ಯಂತ ಮಿಂಚಿನಂತೆ ಸಂಚರಿಸಿದ ಮಧ್ವರು ದ್ವೈತ ಸಿದ್ಧಾಂತದ ಪ್ರತಿಪಾದಕರು. ಶ್ರೀ ಕೃಷ್ಣನನ್ನು ಉಡುಪಿಯಲ್ಲಿ ನೆಲೆಗೊಳಿಸಿದವರೂ ಇವರೇ.

ಕಡಲ ತಡಿಯ ಉಡುಪಿ ಜಿಲ್ಲೆಯ ಪಾಜಕ ಕ್ಷೇತ್ರದಲ್ಲಿ 1118 (ಕೆಲವು ಮೂಲಗಳ ಪ್ರಕಾರ 1238) ರಲ್ಲಿ ಶ್ರೀಪಾದ ಮಧ್ವಾಚಾರ್ಯರ ಜನನವಾಯಿತು. ತಂದೆ ಮಧ್ಯೆಗೇಹ ಭಟ್ಟ ತಾಯಿ ವೇದಾವತಿ. ಇವರದು ಶಿವಳ್ಳಿ ಬ್ರಾಹ್ಮಣ ಕುಟುಂಬ.

ಮಧ್ವರ ಮೂಲ ಹೆಸರು ವಾಸುದೇವ. ಇವರ ಬಾಲ್ಯಕ್ಕೆ ಸಂಬಂಧಿಸಿದಂತೆ ಕೆಲವು ರೋಚಕ ಕಥೆಗಳಿವೆ.

ಒಮ್ಮೆ ಇವರ ತ೦ದೆ ತೀರಿಸಲಾಗದಷ್ಟು ಸಾಲದ ಹೊರೆಯಿಂದ ತತ್ತರಿಸುತ್ತಿದ್ದರಂತೆ. ಆಗ ಬಾಲಕ ವಾಸುದೇವ ಮನೆಯಲ್ಲಿದ್ದ ಹುಣಸೆ ಬೀಜಗಳನ್ನು ನಾಣ್ಯಗಳಾಗಿ ಪರಿವರ್ತಿಸಿದನಂತೆ! ಮಧ್ಯೆಗೇಹ ಭಟ್ಟರು ಈ ಹಣದಿಂದ ಅಷ್ಟೂ ಸಾಲ ತೀರಿಸಿದರಂತೆ.

ವಾಸುದೇವ 5 ವರ್ಷದ ಬಾಲಕನಾಗಿದ್ದಾಗ ಮಣಿಮಾನ್ ಎಂಬ ರಾಕ್ಷಸ ಸರ್ಪ ರೂಪದಲ್ಲಿ ಇವರ ಹಳ್ಳಿಗೆ ಬಂದು ಬಹಳ ಕಿರುಕುಳ ಕೊಡುತ್ತಿದ್ದನಂತೆ.

ಬಾಲಕ ವಾಸುದೇವ ತನ್ನ ಎಡಗಾಲಿನ ಹೆಬ್ಬೆರಳಿನಿಂದ ಆ ಸರ್ಪವನ್ನು ತುಳಿದು, ಹೊಸಕಿಹಾಕಿದನಂತೆ! ಇನ್ನು ತಾಯಿ ವೇದಾವತಿ ಯಾವುದೇ ಕ್ಷಣದಲ್ಲಿ ಕೂಗಲಿ, ಬಾಲಕ ವಾಸುದೇವ ಎಷ್ಟೇ ದೂರದಲ್ಲಿ ಇದ್ದರೂ ಒಂದೇ ನೆಗೆತಕ್ಕೆ ಆಕೆ ಎದುರು ಹಾಜರಾಗುತ್ತಿದ್ದನಂತೆ. ಇಂಥ ಅಗಾಧ ದೈಹಿಕ ಶಕ್ತಿಯ ಜತೆಗೆ ವಯಸ್ಸಿಗೆ ಮೀರಿದ ಆಧ್ಯಾತ್ಮಿಕ ಜ್ಞಾನವೂ ಬಾಲಕನಿಗಿತ್ತಂತೆ. ಬಾಲಕ ವಾಸುದೇವನ ಅಸಾಧಾರಣ ದೈಹಿಕ ಮತ್ತು ದೈವಿಕ ಶಕ್ತಿಯನ್ನು ಸಾರುವ ಅನೇಕ ಕಥೆಗಳಿವೆ.

ಹೀಗೆ ಬಾಲ್ಯದಲ್ಲೇ ಅದ್ಭುತ, ಭೌತಿಕ ಮತ್ತು ಭೌದ್ಧಿಕ ಸಾಮರ್ಥ್ಯ ಪ್ರದರ್ಶಿಸಿದ ವಾಸುದೇವ ತನ್ನ 12ನೇ ವಯಸ್ಸಿನಲ್ಲಿ ತಂದೆಯ ಇಚ್ಛೆಗೆ ವಿರುದ್ಧವಾಗಿ ಸಂನ್ಯಾಸ ಸ್ವೀಕರಿಸಿದ. ಗುರು ಅಚ್ಯುತ ಪ್ರೇಕ್ಷ ಎಂಬುವರಿಂದ ಸಂನ್ಯಾಸ ತೀರ್ಥ” ಎಂದು ಬದಲಾಯಿತು. ದೀಕ್ಷೆ ಪಡೆದ ಬಳಿಕ ವಾಸುದೇವನ ಹೆಸರು ‘ಪೂರ್ಣ ಪ್ರಜ್ಞ ತೀರ್ಥ” ಎಂದು ಬದಲಾಯಿತು.

ದೀಕ್ಷೆ ಪಡೆದ ನಂತರ ಪೂರ್ಣಪ್ರಜ್ಞ ತೀರ್ಥರು ಮಾಡಿದ ಮೊದಲ ಕೆಲಸವೆಂದರೆ ದೇಶ ಪರ್ಯಟನೆ. ಭಾರತಾದ್ಯಂತ ಸಂಚರಿಸಿದ ಪೂರ್ಣಪ್ರಜ್ಞರು ಶೃಂಗೇರಿ ಮಠದ ಮುಖ್ಯಸ್ಥರಾಗಿದ್ದ ವಿದ್ಯಾಶಂಕರರ ಜತೆ ಪುರಾಣ ವೇದ ಕುರಿತು ಚರ್ಚಿಸಿದರು. ನಂತರ ಸತ್ಯತೀರ್ಥರ ಜತೆಗೂಡಿದ ಪೂರ್ಣಪ್ರಜ್ಞರು ಬದರಿಕಾಶ್ರಮಕ್ಕೆ ತೆರಳಿದರು. ಅಲ್ಲಿ ಇವರಿಗೆ ವ್ಯಾಸ ದೇವರ ಜತೆ ಮುಖಾಮುಖಿಯಾಯಿತು. ಪೂರ್ಣಪ್ರಜ್ಞರು, ವ್ಯಾಸದೇವರಿಗೆ ಭಗವದ್ಗೀತೆ ಕುರಿತು ತಾವು ರಚಿಸಿದ ವ್ಯಾಖ್ಯಾನವನ್ನು ವಿವರಿಸಿದರು.

ಪೂರ್ಣಪ್ರಜ್ಞರ ವಿದ್ವತ್ತು ಮತ್ತು ಜ್ಞಾನದಾಹಕ್ಕೆ ಮೆಚ್ಚಿಕೊಂಡ ವ್ಯಾಸದೇವರು ಅವರಿಗೆ ತಮ್ಮ ಅನುಭವವನ್ನು ಧಾರೆ ಎರೆದರು. ವ್ಯಾಸದೇವರ ಸಾ೦ಗತ್ಯದಲ್ಲಿ ಅಪಾರ ಜ್ಞಾನ ಸಂಪಾದಿಸಿದ ಪೂರ್ಣಪ್ರಜ್ಞರು ಮಹಾನ್ ವಿದ್ವಾಂಸರಾಗಿ ಹೊರಹೊಮ್ಮಿದರು.

ಅವರು ಆನಂದ ಮಠಕ್ಕೆ ಬರುವ ವೇಳೆಗಾಗಲೇ ಭಗವದ್ಗೀತೆ ಮೇಲೆ ವ್ಯಾಖ್ಯಾನವನ್ನು ಸಂಪೂರ್ಣ ಮುಗಿಸಿದ್ದರು. ಪೂರ್ಣಪ್ರಜ್ಞರ ವ್ಯಾಖ್ಯಾನಕ್ಕೆ ಅವರ ಅನುಯಾಯಿ ಸತ್ಯತೀರ್ಥರು ಅಕ್ಷರ ರೂಪ ನೀಡಿದರು.

ನಂತರ ಮಧ್ವಾಚಾರ್ಯರು (ಪೂರ್ಣ ಪ್ರಜ್ಞರು) ಗೋದಾವರೀ ತಟದಲ್ಲಿರುವ ಗಂಜಾಮ್‌ಗೆ ತೆರಳಿದರು. ಅಲ್ಲಿ ಅವರಿಗೆ ಶೋಭನ ಭಟ್ಟ ಮತ್ತು ಸ್ವಾಮಿ ಶಾಸ್ತ್ರಿ ಎಂಬ ವಿದ್ವಾ೦ಸರ ಪರಿಚಯವಾಯಿತು. ನಂತರ ಇವರಿಬ್ಬರೂ ಮಧ್ವಾಚಾರ್ಯರ ಶಿಷ್ಯ ಪರಂಪರೆಯಲ್ಲಿ ಪದ್ಮನಾಭ ತೀರ್ಥ ಮತ್ತು ನರಹರಿ ತೀರ್ಥ ಎಂದೇ ಖ್ಯಾತರಾದರು. ಮಧ್ವಾಚಾರ್ಯರು ಗಂಜಾಮ್‌ನಿಂದ ಉಡುಪಿಗೆ ಮರಳಿದರು.

ಉಡುಪಿಯಲ್ಲಿದ್ದಾಗ ಮಧ್ವಾಚಾರ್ಯರಿಗೆ ಆಗಾಗ ಸಮುದ್ರದಲ್ಲಿ ಸ್ನಾನ ಮಾಡುವ ಅಭ್ಯಾಸವಿತ್ತು. ಹಾಗೆ ಸಮುದ್ರದಲ್ಲಿ ಸ್ನಾನ ಮಾಡುತ್ತಲೇ ಅವರು ಐದು ಅಧ್ಯಾಯಗಳ ಕೃಷ್ಣ ಸುತ್ತಿಯನ್ನು ರಚಿಸಿದರು. ಒಮ್ಮೆ ಮಧ್ವಾಚಾರ್ಯರು ಕಡಲಿನಲ್ಲಿ ಮಿಂದು ಮರಳ ಹಾಸಿನ ಮೇಲೆ ಶ್ರೀ ಕೃಷ್ಣನನ್ನು ಧ್ಯಾನಿಸುತ್ತಾ ಕುಳಿತಿದ್ದರು. ಆಗ ಸಮುದ್ರ ಮಾರ್ಗವಾಗಿ ದ್ವಾರಕೆಯಿಂದ ಸರಕುಗಳನ್ನು ತುಂಬಿಕೊಂಡು ಬರುತ್ತಿದ್ದ ಒ೦ದು ಹಡಗು ಇದ್ದಕ್ಕಿದ್ದಂತೆ ಮುಳುಗಲಾರಂಭಿಸಿತು. ಇದನ್ನು ಕಂಡ ಮಧ್ವಾಚಾರ್ಯರು ತಮ್ಮ ಜಾಣ್ಮೆಯ ಮಾರ್ಗದರ್ಶನದ ಮೂಲಕ ಹಡಗನ್ನು ಮೇಲಕ್ಕೆತ್ತಿದರು. ಹಡಗು ತೀರ ತಲುಪಿತು. ಮಧ್ವಾಚಾರ್ಯರ ಸಾಮರ್ಥ್ಯಕ್ಕೆ ತಲೆದೂಗಿದ ಹಡಗಿನ ಮಾಲೀಕರು ಅವರಿಗೆ ಉಡುಗೊರೆಗಳನ್ನು ನೀಡಲು ಮು೦ದಾದರು. ಬೇರೇನನ್ನೂ ಪಡೆಯದ ಮಧ್ವಾಚಾರ್ಯರು ಹಡಗಿನಲ್ಲಿದ್ದ ಒಂದು ಬೃಹತ್ ಗೋಪಿ- ಚ೦ದನದ ಮುದ್ದೆ(ಗಡ್ಡೆ) ಯನ್ನು ಸ್ವೀಕರಿಸಿದರು.

ಅಲ್ಲೊಂದು ಅಚ್ಚರಿ ಕಾದಿತ್ತು! ಇಡೀ ಜಗತ್ತಿನ ಮೇಲೆ ಪ್ರಭಾವ ಬೀರುವ ಮಹೋನ್ನತ ಶಕ್ತಿಯೊಂದು ಆ ಮುದ್ದೆಯೊಳಗಿತ್ತು!! ಮಧ್ವರ ಕೈಗೆ ಬರುತ್ತಿದ್ದಂತೆ ಗೋಪಿ ಚಂದನದ ಮುದ್ದೆ ಒಡೆದು ಹೋಳಾಯಿತು. ಪರಮಾಶ್ಚರ್ಯ! ಶ್ರೀ ಕೃಷ್ಣನ ಸು೦ದರ ಮೂರ್ತಿಯೊ೦ದು ಆದರೊಳಗಿತ್ತು!!

ಕೃಷ್ಣಮೂರ್ತಿ ಕೈಗೆ ಸಿಗುತ್ತಿದ್ದಂತೆ ಮಧ್ವಾಚಾರ್ಯರು ಆ ಸ್ಥಳದಲ್ಲೇ ಒಂದು ಸ್ತೋತ್ರ ಹೊಸೆದರು. ಇದು ಅವರ ಅಗಾಧ ಭೌದ್ಧಿಕ ಶಕ್ತಿಗೆ ಸಾಕ್ಷಿಯಾಗಿತ್ತು. ಆ ವಿಗ್ರಹ ಎಷ್ಟೊಂದು ಭಾರವಾಗಿತ್ತೆಂದರೆ 30 ಜನ ಸೇರಿದರೂ ಅದನ್ನು ಎತ್ತುವುದು ಅಸಾಧ್ಯವಾಗಿತ್ತು. ಆದರೆ ಮಧ್ವಾಚಾರ್ಯರು ಅದನ್ನು ಸುಲಭವಾಗಿ ಹೊತ್ತುಕೊಂಡು ಉಡುಪಿಗೆ ತಂದರು. ಇದು ಮಧ್ವಾಚಾರ್ಯರ ಭೌತಿಕ ಶಕ್ತಿಗೆ ನಿದರ್ಶನವಾಗಿತ್ತು.

ಕೃಷ್ಣಮೂರ್ತಿಯನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ಮಧ್ವಾಚಾರ್ಯರು, ಅಲ್ಲಿಯೇ ಅಷ್ಟಮಠಗಳನ್ನು ಸ್ಥಾಪಿಸಿದರು. ಸಂನ್ಯಾಸ ದೀಕ್ಷೆ ಪಡೆದಿದ್ದ ಮಧ್ವಾಚಾರ್ಯರ ಎಂಟು ಮಂದಿ ಶಿಷ್ಯಂದಿರು ಈ ಮಠಗಳ ಮುಖ್ಯಸ್ಥರಾದರು. ಹೀಗೆ ಅಂದು ಉಡುಪಿಯಲ್ಲಿ ಮಧ್ವಾಚಾರ್ಯರು ಆರಂಭಿಸಿದ ಶ್ರೀಕೃಷ್ಣ ಮೂರ್ತಿ ಆರಾಧನೆ ಇಂದಿಗೂ ಅಷ್ಟೇ ಶ್ರದ್ಧೆ-ಭಕ್ತಿಯಿಂದ ಮುಂದುವರಿದಿದೆ.

ಉಡುಪಿಯಲ್ಲಿ ಕೃಷ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಬಳಿಕ ಮಧ್ವರು ಮತ್ತೆ ಬದರಿಕಾಶ್ರಮಕ್ಕೆ ತೆರಳಿದರು. ಆ ಕಾಲದಲ್ಲಿ ಗಂಗಾ ತೀರ ಪ್ರದೇಶ ಹಿಂದೂ ಮುಸ್ಲಿಮರ ಸಮರ ಭೂಮಿಯಾಗಿತ್ತು. ನದಿಯ ಒಂದೊಂದು ತೀರ ಒಂದೊಂದು ಧರ್ಮದವರ ಹಿಡಿತದಲ್ಲಿತ್ತು. ಕೋಮು ವೈಷಮ್ಯದಿ೦ದಾಗಿ ನದಿ ದಾಟುವುದು ಅಸಾಧ್ಯವಾಗಿತ್ತು. ಗಂಗೆಯನ್ನು ದಾಟಿ ಹೋಗುವ ಹಿಂದೂಗಳ ದೋಣಿಗಳನ್ನು ಮುಸ್ಲಿಮ್ ಸೈನಿಕರು ಅಡ್ಡಗಟ್ಟಿ ಕಿರುಕುಳ ನೀಡುತ್ತಿದ್ದರು. ಆದರೆ ಮುಸ್ಲಿಮ್ ಸೈನಿಕರಿಗೆ ಬೆದರದ ಮಧ್ವಾಚಾರ್ಯರು ನದಿ ದಾಟಿಯೇ ಬಿಟ್ಟರು. ಅಲ್ಲಿ ಇವರನ್ನು ಬಂಧಿಸಿದ ಮುಸ್ಲಿಮ್ ಸೈನಿಕರು ರಾಜನ ಮುಂದೆ ಹಾಜರು ಪಡಿಸಿದರು. ಮಧ್ವಾಚಾರ್ಯರ ವ್ಯಕ್ತಿತ್ವ, ಮಾತುಕತೆ, ಆಂಗಿಕ ಪರಿಭಾಷೆ ಕಂಡು ದಿಗ್ಮೂಢನಾದ ಮುಸ್ಲಿಂ ದೊರೆ, ಅವರನ್ನು ಶಿಕ್ಷಿಸುವ ಬದಲು ಅವರ ಭಕ್ತನಾದ! ಅವರಿಗೆ ಒಂದು ಚಿಕ್ಕ ಪ್ರಾಂತ್ಯ ಮತ್ತು ಅಪಾರ ಧನ ಸಂಪತ್ತು ನೀಡಿ ಗೌರವಿಸಲು ಮು೦ದಾದ. ಆದರೆ ಮಧ್ವಾಚಾರ್ಯರು ಅದನ್ನು ತಿರಸ್ಕರಿಸಿದರು.

ಇನ್ನೊಮ್ಮೆ ಮಧ್ವಾಚಾರ್ಯರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಡಕಾಯಿತರು ಅವರ ಮೇಲೆ ದಾಳಿ ಮಾಡಿದರು. ಡಕಾಯಿತರಿಗೆ ತಮ್ಮ ತಾಕತ್ತಿನ ರುಚಿ ತೋರಿಸಿದ ಮಧ್ವಾಚಾರ್ಯರು ಅವರೆಲ್ಲರನ್ನೂ ಕೊಂದು ಹಾಕಿದರು. ಇನ್ನೊಂದು ಸಂದರ್ಭದಲ್ಲಿ ಅವರ ಶಿಷ್ಯ ಸತ್ಯ ತೀರ್ಥರ ಮೇಲೆ ಹುಲಿ ಆಕ್ರಮಣ ಮಾಡಿತು. ಆಗಲೂ ಮಧ್ವಾಚಾರ್ಯರು ತಮ್ಮ ಅಸಾಧಾರಣ ಶಕ್ತಿಯಿಂದ ಶಿಷ್ಯನ ಪ್ರಾಣ ರಕ್ಷಿಸಿದರು. ಈ ಮಧ್ಯೆ ಗುರು ವ್ಯಾಸದೇವರಿಂದ ಮಧ್ವಾಚಾರ್ಯರಿಗೆ “ಅಷ್ಟಮೂರ್ತಿ” ಎಂಬ ‘ಶಾಲಗ್ರಾಮ ಶಿಲಾ’ ಪ್ರಾಪ್ತಿಯಾಯಿತು. ನಂತರ ಅವರು ಮಹಾಭಾರತದ ಸಂಕ್ಷಿಪ್ತ ರೂಪವನ್ನು ರಚಿಸಿದರು.

ಮಧ್ವಾಚಾರ್ಯರ ಕೃಷ್ಣ ಭಕ್ತಿ ಮತ್ತು ಅಗಾಧ ಬುದ್ಧಿಮತ್ತೆ ಭಾರತಾದ್ಯಂತ ಖ್ಯಾತಿ ಪಡೆಯಿತು. ಆ ಕಾಲದಲ್ಲಿ ಅದ್ವೈತ ಸಿದ್ಧಾಂತದ ಅನುಯಾಯಿಗಳು ಸೇರಿದಂತೆ ಅನೇಕ ವಿದ್ವಾಂಸರು ಮಧ್ವಾಚಾರ್ಯರ ಪಾಂಡಿತ್ಯಕ್ಕೆ ಸವಾಲೆಸೆದರು. ಆದರೆ ಮಧ್ವರು ಅವರನ್ನೆಲ್ಲಾ ವಾದದಲ್ಲಿ ಮಣಿಸಿದರು. ಮಧ್ವಾಚಾರ್ಯರ ವಿಧ್ವತ್ತಿಗೆ ಮರುಳಾದ ನೂರಾರು ದಾರ್ಶನಿಕರು, ಪಂಡಿತರು, ವಿದ್ವಾಂಸರು ಅವರ ಶಿಷ್ಯರಾದರು. ಅವರಲ್ಲಿ ವಿಷ್ಣುಮಂಗಳದ ತ್ರಿವಿಕ್ರಮಾಚಾರ್ಯ ಎಂಬ ವಿದ್ವಾಂಸರೂ ಒಬ್ಬರು.

ಇವರ ಪುತ್ರರೂ ಮುಂದೆ ಮಧ್ವಾಚಾರ್ಯರ ಶಿಷ್ಯರಾದರಾಗಿ ನಾರಾಯಣಾಚಾರ್ಯ ಎಂದೇ ಖ್ಯಾತರಾದರು. ಇವರು ‘ಸುಮಧ್ವ-ವಿಜಯ’ ಎಂಬ ಉತ್ಕೃಷ್ಟ ಕೃತಿಯನ್ನು ರಚಿಸಿದರು. ತ್ರಿವಿಕ್ರಮಾಚಾರ್ಯರ ನಿಧನಾನಂತರ ನಾರಾಯಣಾಚಾರ್ಯರ ಕಿರಿಯ ಸೋದರರೂ ಸಂನ್ಯಾಸ ಸ್ವೀಕರಿಸಿದರು.

ವಿಷ್ಣುತೀರ್ಥರೆ೦ಬ ಹೆಸರಿನಿಂದ ಖ್ಯಾತರಾದರು. ಈಗಾಗಲೇ ತಿಳಿಸಿದಂತೆ ಮಧ್ವಾಚಾರ್ಯರ ದೈಹಿಕ ಶಕ್ತಿ ಅದ್ಭುತವಾಗಿತ್ತು. ಆ ಕಾಲದಲ್ಲಿ ಕಡಂಜರಿ ಎಂಬ ‘ದೈತ್ಯ ಮಾನವ’ ಒಬ್ಬನಿದ್ದ. 30 ಮಂದಿಯ ತಾಕತ್ತನ್ನು ತನ್ನಲ್ಲಿ ಹೊಂದಿದ್ದ ಗಂಡುಗಲಿ ಈತ. ಆದರೆ ಮಧ್ವಾಚಾರ್ಯರ ಮುಂದೆ ಈತನ ಆಟ ನಡೆಯಲಿಲ್ಲ. ತಮ್ಮ ಎಡಗಾಲಿನ ಹೆಬ್ಬೆರಳನ್ನು ನೆಲದ ಮೇಲೆ ಬಲವಾಗಿ ಊರಿದ ಮಧ್ವಾಚಾರ್ಯರು, ತಾಕತ್ತಿದ್ದರೆ ಅದನ್ನು ನೆಲದಿ೦ದ ಬೇರ್ಪಡಿಸುವಂತೆ ಕಡ೦ಜರಿಗೆ ಸವಾಲು ಹಾಕಿದರು. ಎಷ್ಟೇ ತಿಣುಕಾಡಿದರೂ ಕಡ೦ಜರಿಗೆ ಅದು ಸಾಧ್ಯವಾಗಲಿಲ್ಲ. ಬೇರೆ ದಾರಿ ಕಾಣದೇ ಆತ ಸೋಲೊಪ್ಪಿಕೊಂಡ.

ಹೀಗೆ 80 ವರ್ಷಗಳ ತುಂಬು ಜೀವನ ನಡೆಸಿದ ಮಧ್ವಾಚಾರ್ಯರು ‘ಐತರೇಯ ಉಪನಿಷತ್’ ಮೇಲೆ ವ್ಯಾಖ್ಯಾನ ಬರೆಯುತ್ತಿರುವಾಗಲೇ ಕೃಷ್ಣಪಾದ ಸೇರಿದರು. ಮಧ್ವಾಚಾರ್ಯರು ಉಡುಪಿಯಲ್ಲಿ ಸ್ಥಾಪಿಸಿದ ಮಧ್ವ ಸಂಪ್ರದಾಯ ಮತ್ತು ಮಠಗಳು “ ಉತ್ತರಾದಿ ಮಠ’ ಎಂದೇ ಪ್ರಸಿದ್ಧಿ ಪಡೆದಿವೆ. ಉಡುಪಿಯಲ್ಲಿ ಮಧ್ವ ಸಂಪ್ರದಾಯದ ಶಿಷ್ಯ ಪರಂಪರೆ ಇಂದಿಗೂ ಮುಂದುವರಿದಿದೆ.

ಮಧ್ವಾಚಾರ್ಯರು ಸಂಸ್ಕೃತದಲ್ಲಿ 37 ಕೃತಿಗಳನ್ನು ರಚಿಸಿದ್ದಾರೆ. ಇವೆಲ್ಲವನ್ನೂ ಒಟ್ಟಾಗಿ ‘ಸರ್ವ ಮೂಲ ಗ್ರಂಥಗಳು’ ಎನ್ನುತ್ತಾರೆ. ಇದರ ಸ್ತೂಲ ವರ್ಗಿಕರಣ ಇಲ್ಲಿದೆ.

1. ಬ್ರಹ್ಮ ಸೂತ್ರ ಭಾಷ್ಯ

2. ಸರ್ವಶಾಸ್ತ್ರ ಸಂಗ್ರಹ (ಅಣು ಭಾಷ್ಯ)

3. ಬ್ರಹ್ಮ ಸೂತ್ರ- ಅಣು ವ್ಯಾಖ್ಯಾನ

4. ಬ್ರಹ್ಮ ಸೂತ್ರ-ಅಣುವ್ಯಾಖ್ಯಾನ- ವಿವರಣ

5. ಭಗವದ್ಗೀತೆ-ಭಾಷ್ಯ

6. ಭಗವದ್ಗೀತ-ತಾತ್ಪರ್ಯ- ನಿರ್ಣಯ

7. ಮಹಾ ಐತರೇಯ ಉಪನಿಷತ್ ಭಾಷ್ಯ

8. ಬೃಹದರಣ್ಯಕ ಉಪನಿಷತ್ ಭಾಷ್ಯ

9. ಚಾಂಡೋಗ್ಯ ಉಪನಿಷತ್‌ ಭಾಷ್ಯ

10. ತೈತ್ತಿರೀಯೋಪನಿಷತ್ ಭಾಷ್ಯ

11. ತಾಳವಾಕರೋಪನಿಷತ್‌ ಭಾಷ್ಯ

12. ಕಥಾ ಉಪನಿಷತ್ ಭಾಷ್ಯ

13. ಅಥರ್ವಣೋಪನಿಷತ್ ಭಾಷ್ಯ (ಮುಂಡಕೋಪನಿಷತ್ ಭಾಷ್ಯ)

14. ಸತ್ ಪ್ರಶ್ನೋಪನಿಷತ್ ಭಾಷ್ಯ

15. ಯಜ್ಞ ಮಂತ್ರೋಪನಿಷತ್ ಭಾಷ್ಯ (ಈಶಾವಾಸ್ಯೋಪನಿಷತ್ ಭಾಷ್ಯ)

16. ಮಾಂಡೂಕ್ಯ ಉಪನಿಷತ್ ಭಾಷ್ಯ

17. ಋಗ್ ಭಾಷ್ಯ

18. ಖಂಡಾರ್ಥ ನಿರ್ಣಯ (ಕರ್ಮ ನಿರ್ಣಯ )

19. ಮಹಾಭಾರತ ತಾತ್ಪರ್ಯ ನಿರ್ಣಯ

20. ಯಮಕ ಭಾರತ

21. ಭಾಗವತ ತಾತ್ಪರ್ಯ ನಿರ್ಣಯ

22. ವಿಷ್ಣು ತತ್ತ್ವ ನಿರ್ಣಯ

23. ವಾದ (ತತ್ವೋದಯ)

24, ಮಾಯಾವಾದ ದೂಷಣ (ಮಾಯಾವಾದ ಖಂಡನ)

25, ಉಪಾಧಿ ದೂಷಣ (ತತ್ತ್ವ ಪ್ರಕಾಶಿತ)

26. ಮಿಥ್ಯಾತ್ವ ನಿಮಾನಾ ದೂಷಣ

27. ತತ್ವ ಸಂಖ್ಯಾನ

28. ತತ್ವ್ತ ವಿವೇಕ

29. ಪ್ರಮಾಣ ಲಕ್ಷಣ

30. ಕಥಾ ಲಕ್ಷಣ

31. ಕೃಷ್ಣಾಮೃತ ಮಹಾರ್ಣವ

32. ತಂತ್ರ ಸಾರ ಸಂಗ್ರಹ

33. ಸದಾಚಾರ ಸ್ಮೃತಿ

34. ಜಯಂತಿ ನಿರ್ಣಯ

35. ಯತಿ ಪ್ರಣವಕಲ್ಪ

36. ನರಸಿಂಹ ನಾಕಸ್ತುತಿ

37. ದ್ವಾದಶ ಸ್ತೋತ್ರ

ಇದಲ್ಲದೆ ಮಧ್ವಾಚಾರ್ಯರು ಬಾಲ್ಯದಲ್ಲಿ ಚೆಂಡಿನೊಂದಿಗೆ ಆಟವಾಡುವಾಗ “ಕಂಡುಕ ಸುತ್ತಿ” ಎಂಬ ಕೃತಿ ರಚಿಸಿದ್ದಾರೆಂದು ಹೇಳಲಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi