ಆಪತ್ಬಾಂಧವ ಶ್ರೀಕೃಷ್ಣ-7
– ಡಾ. ಬಿ. ಆರ್. ಸುಹಾಸ್
ದ್ರೋಣಾಚಾರ್ಯರು ಹತರಾಗಲು ಕೌರವದಲ್ಲಿ ಮುಂದಿನ ಸೇನಾಧಿಪತಿ ಯಾರೆಂದು ಚರ್ಚೆಯಾಯಿತು. ಅಶ್ವತ್ಥಾಮನು ಕರ್ಣನ ಹೆಸರನ್ನು ಸೂಚಿಸಲು ದುರ್ಯೋಧನನು ಸಂತೋಷದಿಂದ ಕರ್ಣನಿಗೆ ಸೇನಾಧಿಪತಿ ಪಟ್ಟಗಟ್ಟಿ ಹೇಳಿದ, “ ಮಿತ್ರ! ನಿನ್ನ ಅದ್ಭುತಪರಾಕ್ರಮವನ್ನೂ ನಿನ್ನ ಸ್ನೇಹವನ್ನೂ ತೋರಿಸುವ ಕಾಲ ಬಂದಿದೆ.

ಭೀಷ್ಮದ್ರೋಣರು ಮಹಾಪರಾಕ್ರಮಿಗಳಾಗಿದ್ದರೂ ಅವರು ವೃದ್ಧರಾಗಿದ್ದರು ಮತ್ತು ಅರ್ಜುನನಲ್ಲಿ ಅವರಿಗೆ ಪಕ್ಷಪಾತವಿತ್ತು. ಆದರೆ ನೀನು ಹಾಗಲ್ಲ! ಅತುಳ ಪರಾಕ್ರಮಿಯಾದ ನೀನು ಖಂಡಿತವಾಗಿಯೂ ಪಾಂಡವರನ್ನು ಜಯಿಸುವೆಯೆಂಬ ನಂಬಿಕೆ ನನಗಿದೆ!”
ಅಂದಿನ ಯುದ್ಧದಲ್ಲಿ ಕರ್ಣನು ತನ್ನ ಸೈನ್ಯವನ್ನು ಮಕರವ್ಯೂಹದಲ್ಲೂ ಅರ್ಜುನನು ತನ್ನ ಸೈನ್ಯವನ್ನು ಅರ್ಧಚಂದ್ರವ್ಯೂಹದಲ್ಲೂ ನಿಲ್ಲಿಸಿದರು. ಯುದ್ಧವು ಘೋರವಾಗಿ ನಡೆದು ಕಡೆಗೆ ಪಾಂಡವರಿಗೆ ಜಯವಾಯಿತು. ಕರ್ಣನು ಅಂದು ನಕುಲನನ್ನು ಸೋಲಿಸಿದರೂ, ತಾಯಿ ಕುಂತಿಗೆ ಕೊಟ್ಟ ಮಾತಿನಂತೆ ಅವನನ್ನು ಕೊಲ್ಲಲಿಲ್ಲ.
ಮರುದಿನ ಪ್ರಾತಃಕಾಲ, ಕರ್ಣನು ದುರ್ಯೋಧನನಿಗೆ ಹೇಳಿದ, ”ಮಿತ್ರ! ಇಂದು ನಾನು ಅರ್ಜುನನನ್ನು ಕೊಲ್ಲುತ್ತೇನೆ, ಇಲ್ಲವೇ ಅವನಿಂದಾದರೂ ಕೊಲ್ಲಲ್ಪಡುತ್ತೇನೆ! ಅರ್ಜುನನಿಗಿಂತಲೂ ನಾನೇನೂ ಕಡಿಮೆಯಿಲ್ಲ! ಇಂದ್ರನು ದೈತ್ಯರನ್ನು ಯಾವ ಧನುಸ್ಸಿನಿಂದ ಕೊಂದನೋ ಆ ವಿಜಯವೆಂಬ ಮಹಾಧನುಸ್ಸು ಅವನಿ೦ದ ಪರುಶುರಾಮರಿಗೂ ಪರಶುರಾಮರಿಂದ ನನಗೂ ಪ್ರಾಪ್ತವಾಗಿದೆ.
ಅದು ಗಾಂಡೀವಕ್ಕಿಂತಲೂ ಮಿಗಿಲಾದುದು! ಆದರೆ ಅರ್ಜುನನ ಬಳಿ ಅಗ್ನಿದತ್ತ ದಿವ್ಯರಥವೂ ಮನೋವೇಗದಿಂದ ಸಂಚರಿಸುವ ಅಶ್ವಗಳೂ, ಅಕ್ಷಯ ಬತ್ತಳಿಕೆಗಳೂ, ಹನುಮಧ್ವಜವೂ ಇವೆ. ಮತ್ತು ಇವೆಲ್ಲಕ್ಕಿಂತ ಹೆಚ್ಚಾಗಿ ಅವನಿಗೆ ಕಾಲಕಾಲಕ್ಕೆ ಸರಿಯಾಗಿ ಸೂಚನೆ ನೀಡುವ, ಅಶ್ವಹೃದಯಬಲ್ಲ ಶ್ರೀ ಕೃಷ್ಣನೂ ಸಾರಥಿಯಾಗಿರುವನು! ನನಗೂ ಅಶ್ವಹೃದಯ ಬಲ್ಲ ಮದ್ರರಾಜ ಶಲ್ಯನು ಸಾರಥಿಯಾಗಿದ್ದರೆ ವಿಜಯವು ನನ್ನದೇ!”
ಈ ಮಾತನ್ನು ಕೇಳಿ ದುರ್ಯೋಧನನು ಶಲ್ಯರಾಜನನ್ನು ಕರ್ಣನಿಗೆ ಸಾರಥಿಯಾಗುವಂತೆ ಪರಿಪರಿಯಾಗಿ ಬೇಡಿಕೊಂಡನು. ಶಲ್ಯನು ತನಗೆ ಇದೊಂದು ದೊಡ್ಡ ಅವಮಾನವೆಂದು ಭಾವಿಸಿ ತನ್ನ ದೇಶಕ್ಕೆ ಹಿಂದಿರುಗುವೆನೆಂದನು! ಆಗ ದುರ್ಯೋಧನನು, “ಶಲ್ಯ! ಕರ್ಣನೂ ಅರ್ಜುನನಿಗಿಂತ ಅಧಿಕನಾಗಿರುವಂತೆ ನೀನು ಶ್ರೀಕೃಷ್ಣನಿಗಿಂತಲೂ ಅಧಿಕನಾಗಿರುವೆ! ಹಿಂದೆ ಶಿವನು ತ್ರಿಪುರಾಸುರರನ್ನು ಕೊಲ್ಲಬೇಕಾದಾಗ ಬ್ರಹ್ಮನೇ ಅವನಿಗೆ ಸಾರಥಿಯಾಗಿರಲಿಲ್ಲವೇ? ಆದ್ದರಿಂದ ಇದನ್ನು ಅವಮಾನವೆಂದು ಭಾವಿಸದಿರು!’ ಎಂದನು.
ದುರ್ಯೋಧನನು ಎಲ್ಲಾ ರಾಜರ ಮುಂದೆ ಶಲ್ಯನನ್ನು ಕೃಷ್ಣನಿಗಿಂತಲೂ ಅಧಿಕನೆಂದು ಹೊಗಳಿದಾಗ ಶಲ್ಯನು ಕರ್ಣನ ಸಾರಥಿಯಾಗಲು ಒಪ್ಪಿದನು; ಆದರೆ ತಾನು ಮನಬಂದಂತೆ ಮಾತನಾಡಬಹುದೆಂಬ ನಿಬಂಧನೆ ಹಾಕಿದನು. ಕರ್ಣನು ಇದಕ್ಕೆ ಒಪ್ಪಿದನು.
ಶಲ್ಯನು ಮಾದ್ರಿಯ ಅಣ್ಣನೂ ನಕುಲಸಹದೇವರ ಮಾವನೂ ಆಗಿದ್ದು ವಾಸ್ತವವಾಗಿ ಪಾಂಡವರ ಸಂಬಂಧಿಯಾಗಿದ್ದನು. ಅವನು ಯುಧಿಷ್ಠಿರನ ಪಕ್ಷಕ್ಕೇ ಸೇರಬೇಕೆಂದು ಬರುತ್ತಿದ್ದಾಗ ದಾರಿಯಲ್ಲಿ ದುರ್ಯೋಧನನು ಅವನಿಗೆ ಚೆನ್ನಾಗಿ ಉಪಚರಿಸಿದನು. ಅದು ಯುಧಿಷ್ಠಿರನ ಉಪಚಾರವೆಂದು ತಪ್ಪು ತಿಳಿದ ಅವನು, ಉಪಚಾರ ಮಾಡಿದವರಿಗೆ ಕೇಳಿದ ವರವಿಯುತ್ತೇನೆಂದು ಹೇಳಲು, ಈ ಏರ್ಪಾಡು ಮಾಡಿದ್ದ ದುರ್ಯೋಧನನು ಕಾಣಿಸಿಕೊಂಡು ತನ್ನ ಪಕ್ಷಕ್ಕೆ ಸೇರಿಸಿಕೊಂಡನು.
ಆದರೂ ಶಲ್ಯನು ಯುಧಿಷ್ಠಿರನಿಗೆ ಏನಾದರೂ ಸಹಾಯ ಮಾಡಬೇಕೆಂದು ಅವನ ಬಳಿ ಹೋದಾಗ, ಅವನು, ಶಲ್ಯನು ಕರ್ಣನಿಗೆ ಸಾರಥಿಯಾದರೆ, ಕರ್ಣನ ಉತ್ಸಾಹ ಕುಂದಿಸುವ ಮಾತುಗಳನ್ನಾಡಬೇಕೆಂದು ಕೇಳಿಕೊಂಡನು. ಅದರಂತೆ ಈಗ ವಾಕ್ ಸ್ವಾತಂತ್ರ್ಯ ಪಡೆದಿದ್ದ ಅವನು ಕರ್ಣನ ಶೌರ್ಯವನ್ನು ನಿಂದಿಸುತ್ತಲೂ ಅರ್ಜುನನ ಶೌರ್ಯವನ್ನು ಹೊಗಳುತ್ತಲೂ ಮುಂದೆ ಸಾಗಿದನು.

ಇದರಿಂದ ಕುಪಿತನಾದ ಕರ್ಣನು ಮದ್ರದೇಶದ ಜನರನ್ನೇ ನಿಂದಿಸತೊಡಗಿದನು! ಹೀಗೆ ಅವರು ವಾಗ್ವಾದ ಮಾಡಹತ್ತಿದರು! ಬೇಸತ್ತ ದುರ್ಯೋಧನನು ಅದನ್ನು ನಿಲ್ಲಿಸುವಂತೆ ಅವರನ್ನು ಬೇಡಿಕೊಂಡನು.
ಕರ್ಣನು, ಅರ್ಜುನನು ಎಲ್ಲಿರುವನೆಂದು ತೋರಿಸಿದವರಿಗೆ ಬಹುಮಾನ ಕೊಡುವೆನೆಂದು ಘೋಷಿಸುತ್ತಾ ಪಾಂಡವ ಸೈನ್ಯದ ಮೇಲೆ ದಾಳಿ ಮಾಡುತ್ತಾ ಮುನ್ನಡೆದನು. ಆಗ ಅವನಿಗೆ ಎದುರಾದ ಯುಧಿಷ್ಠಿರನು, “ಎಲೈ ಕರ್ಣ! ಸದಾ ಅರ್ಜುನನೊಂದಿಗೆ ಯುದ್ಧ ಮಾಡಲು ಆಸಕ್ತಿ ಹೊಂದಿರುವ ನೀನು ನಿನ್ನ ಶೌರ್ಯ, ಸಾಹಸಗಳನ್ನು ನನ್ನ ಮುಂದೆ ಪ್ರದರ್ಶಿಸು, ನೋಡೋಣ!” ಎಂದನು.
ಆಗ ಕರ್ಣನಿಗೂ ಅವನಿಗೂ ಭಯಂಕರ ಯುದ್ಧ ನಡೆಯಲು, ಮೊದಲು ಕರ್ಣ ಮೂರ್ಛೆ ಹೋದರೂ ಬೇಗನೆ ಚೇತರಿಸಿಕೊಂಡು ಯುಧಿಷ್ಠಿರನ ಧನಸ್ಸು, ಧ್ವಜ, ಕುದುರೆಗಳು, ಸಾರಥಿ ಮತ್ತು ಶಕ್ತ್ಯಾಯುಧಸಮೇತವಾಗಿ ಸಕಲಾಯುಧಗಳನ್ನೂ ಧ್ವಂಸ ಮಾಡಿ ರಥವನ್ನು ನುಚ್ಚುನೂರು ಮಾಡಿದನಲ್ಲದೇ ಅವನ ಕವಚವನ್ನು ಹರಿದು ಹಾಕಿದನು!
ಯುಧಿಷ್ಠಿರನು ರಣರಂಗದಿಂದಲೇ ಹೊರಡಲು, ಕರ್ಣನು ಅವನನ್ನು ಅಟ್ಟಿಸಿಕೊಂಡು ಹೋಗಿ ಅವನ ಹೆಗಲ ಮೇಲೆ ಕೈ ಹಾಕಿ, “ಯುದ್ಧದಲ್ಲಿ ಸೋತು ಪಲಾಯನ ಮಾಡುತ್ತಿರುವೆಯಲ್ಲಾ..? ನೀನು ಕ್ಷಾತ್ರಧರ್ಮನಿಷ್ಠನೇ?! ಯಜ್ಞ, ಅಧ್ಯಯನ ಮೊದಲಾಗಿ ಬ್ರಾಹ್ಮಣ ಕಾರ್ಯಗಳಲ್ಲಿ ಆಸಕ್ತನಾಗಿರುವ ನೀನು ಈ ಯುದ್ಧಕ್ಕೆ ಯೋಗ್ಯನಲ್ಲ!
ಇನ್ನು ಮುಂದೆ ಯುದ್ಧಕ್ಕೆ ಬರಬೇಡ, ಅಥವಾ ನನ್ನಂಥವರೊಂದಿಗೆ ಅಂಥ ಅಪ್ರಿಯಮಾತುಗಳನ್ನಾಡಬೇಡ!” ಎಂದು ಹೀಯಾಳಿಸಿ, ಕುಂತಿಗೆ ಕೊಟ್ಟ ಮಾತನ್ನು ನೆನೆದು ಅವನನ್ನು ಬಿಟ್ಟು ಬಿಟ್ಟನು.
ಯುಧಿಷ್ಠಿರನು ಬಹಳ ನಾಚಿ ರಣರಂಗದಿಂದ ಹೊರಟುಹೋದನು. ಇದನ್ನು ಕಂಡ ಕ್ರುದ್ಧನಾದ ಭೀಮಸೇನನು ಕರ್ಣನನ್ನು ಆಕ್ರಮಿಸಿ ಅವನೊಂದಿಗೆ ಭಯಂಕರವಾಗಿ ಯುದ್ಧ ಮಾಡಿ ಅವನನ್ನು ಮೂರ್ಛೆಗೊಳಿಸಿದನು! ಆಗ ಶಲ್ಯನು ಅವನನ್ನು ರಣರಂಗದಿಂದಾಚೆಗೆ ಕರೆದೊಯ್ದನು. ಇದನ್ನು ಕಂಡು ದುರ್ಯೋಧನನು ತನ್ನ ಆರು ಸಹೋದರರನ್ನು ಭೀಮನಿಗೆದುರಾಗಿ ಕಳಿಸಲು, ಭೀಮನು ಅವರಲ್ಲಿರನ್ನೂ ಯಮನ ಸದನಕ್ಕಟ್ಟಿದನು!
ಅಷ್ಟರಲ್ಲಿ, ಸಂಶಪ್ತಕರನ್ನೆದುರಿಸಲು ಹೋಗಿದ್ದ ಅರ್ಜುನನು ಹತ್ತುಸಾವಿರ ಸಂಶಪ್ತಕರನ್ನು ಸಂಹರಿಸಿ ಹಿಂದಿರುಗುತ್ತಾ ಭೀಮನ ಬಳಿ ಯುಧಿಷ್ಠಿರನ ಕ್ಷೇಮವನ್ನು ವಿಚಾರಿಸಲು ಭೀಮನು ನಡೆದ ಸಮಾಚಾರವನ್ನರುಹಿ, ಅಣ್ಣನು ವಿಶ್ರಾಂತಿ ಪಡೆಯಲು ಶಿಬಿರಕ್ಕೆ ಹೋಗಿರುವನೆಂದನು.
ಯುಧಿಷ್ಠಿರನನ್ನು ಕಂಡು ಅನಂತರ ಕರ್ಣನನ್ನೆದಿರಿಸುವುದಾಗಿ ನಿರ್ಧರಿಸಿ ಭೀಮನಿಗೆ ಸೈನ್ಯವನ್ನೊಪ್ಪಿಸಿ ಅರ್ಜುನನು ಕೃಷ್ಣನೊಂದಿಗೆ ಶಿಬಿರಕ್ಕೆ ಹೋದನು.

ಕೃಷ್ಣಾರ್ಜುನರಿಬ್ಬರೂ ಮಲಗಿದ್ದ ಯುಧಿಷ್ಠಿರನ ಪಾದ ಮುಟ್ಟಿ ನಮಸ್ಕರಿಸಲು, ಕರ್ಣನು ಹತನಾದನೆಂದೇ ಭಾವಿಸಿದ ಯುಧಿಷ್ಠಿರನು ಹಠಾತ್ತನೆ ಎದ್ದು “ಅಂತೂ ಕಡೆಗೆ ಕರ್ಣನನ್ನು ಕೊಂದೆಯಾ?! ಅವನನ್ನು ಕೊಲ್ಲಲು ಯಾವ ಅಸ್ತ್ರ ಬಳಸಿದೆ ಹೇಳು! ಎಚ್ಚರವಾಗಿರಲಿ, ನಿದ್ರಿಸಿರಲಿ, ನನಗೆ ಸದಾ ಅವನದೇ ಚಿಂತೆಯಾಗಿತ್ತು! ಅಂತೂ ಅವನು ಸತ್ತನೇ?!” ಎಂದು ಸಂಭ್ರಮದಿಂದ ಕೇಳಿದನು!
‘ಅಣ್ಣಾ!” ಅರ್ಜುನನು ಉತ್ತರಿಸಿದನ್ನು. “ನಾನು ಸಂಶಪ್ತಕರೊಂದಿಗೆ ಯುದ್ಧದಲ್ಲಿ ತೊಡಗಿದ್ದೆನು! ಆಗಲೇ ಆ ಅಶ್ವತ್ಥಾಮನೂ ಭಯಂಕರವಾಗಿ ನನ್ನೊಂದಿಗೆ ಯುದ್ಧ ಮಾಡತೊಡಗಿದನು! ಇವರನ್ನು ಸೋಲಿಸಿ ಇಲ್ಲಿಗೆ ಬಂದೆನು! ಇನ್ನೂ ನಾನು ಕರ್ಣನನ್ನು ಎದುರಿಸಿಲ್ಲ.”
ಈ ಮಾತು ಕೇಳಿ ವಿಪರೀತ ಕ್ರುದ್ಧನಾದ ಯುಧಿಷ್ಠಿರನು, ”ಛಿ! ಕರ್ಣನನ್ನು ಇನ್ನೂ ಎದುರಿಸಲಾಗದೇ ಅಲ್ಲಿ ಭೀಮನೊಬ್ಬನನ್ನೇ ಬಿಟ್ಟು ಬಂದಿರುವೆಯಾ? ಹೀಗೆ ಭಯಗೊಂಡು ಬರಲು ನಾಚಿಕೆಯಾಗದೇ? ಅಭಿಮನ್ಯು, ಘಟೋತ್ಕಚರಾದರೂ ಬದುಕಿದ್ದಿದ್ದರೆ ಚೆನ್ನಿತ್ತು! ನಿನ್ನ ಪ್ರತಿಜ್ಞೆಯೆಲ್ಲಾ ಹುಸಿಯಾಯಿತು!
ಈಗ ನೀನು ನಿನ್ನ ಗಾಂಡೀವವನ್ನು ನಿನಗಿಂತ ಅಧಿಕನಾದ ಕೃಷ್ಣನಿಗೆ ಕೊಟ್ಟು ಅವನ ಸಾರಥಿಯಾಗು! ಅವನೇ ಕರ್ಣನನ್ನು ಸಂಹರಿಸಲಿ! ನಿನಗೆ ಕರ್ಣನನ್ನು ಸಂಹರಿಸಲಾಗಿದಿದ್ದರೆ ಅವನಿಗೆ ಕೊಟ್ಟುಬಿಡು ನಿನ್ನ ಗಾಂಡೀವವನ್ನು!” ಎಂದು ಚೆನ್ನಾಗಿ ನಿಂದಿಸಿದನು!
ಇದರಿಂದ ಅರ್ಜುನನು ಕರಳಿ ಯುಧಿಷ್ಠಿರನನ್ನೇ ಕೊಲ್ಲಲು ಒರೆಯಿಂದ ಕತ್ತಿಯನ್ನು ಸೆಳೆದನು! ಆಗ ಕೂಡಲೇ ಕೃಷ್ಣನು ತಡೆಯಲು ಅರ್ಜುನನು, “ಕೃಷ್ಣ! ಗಾಂಡೀವವನ್ನು ನಿನಗಿಂತ ಅಧಿಕರಾದವರಿಗೆ ಕೊಟ್ಟು ಬಿಡು ಎಂದು ಹೇಳುವವರನ್ನು ಸಂಹರಿಸುವೆನೆಂಬುದು ನನ್ನ ಉಪಾಂಶುವ್ರತವಾಗಿತ್ತು (ರಹಸ್ಯದಲ್ಲಿ ಮಾಡಿಕೊಂಡ ಪ್ರತಿಜ್ಞೆ) ಇದನ್ನು ಅಣ್ಣನು ಬಲ್ಲವನಾಗಿದ್ದರೂ ನನ್ನನ್ನು ಹೀಗೆ ನಿಂದಿಸಿದ್ದಾನೆ,” ಎಂದನು.
“ಅರ್ಜುನ! ಧರ್ಮವು ಬಹು ಸೂಕ್ಷ್ಮವಾದುದು. ಸತ್ಯವನ್ನೇ ಹೇಳುವುದು ಸರಿಯಾದರೂ ಕೆಲವು ಸಂದರ್ಭಗಳಲ್ಲಿ ಸತ್ಯದಿಂದ ಅನಾಹುತವಾಗುವಂತಿದ್ದರೆ ಸುಳ್ಳು ಹೇಳಬೇಕಾಗುತ್ತದೆ! ಉದಾಹರಣೆಗೆ, ಒಬ್ಬನ ಐಶ್ವರ್ಯವನ್ನು ಯಾರಾದರೂ ದೋಚಲು ಬಂದರೆ, ಆಗ ಐಶ್ವರ್ಯವನ್ನು ತೋರಿಸದೇ ನಿರಾತಂಕವಾಗಿ ಸುಳ್ಳು ಹೇಳಬೇಕು!
ನೀನಾದರೂ ಚಿಕ್ಕ ಮಕ್ಕಳಂತೆ ಇಂಥ ಪ್ರತಿಜ್ಞೆಯನ್ನು ಮಾಡಿರುವೆಯಲ್ಲದೇ, ಈಗ ಅದನ್ನು ನಡೆಸಲೆಂದು ನಿನ್ನ ಅಣ್ಣನನ್ನೇ ಕೊಂದರೆ ಎಂಥ ಪಾಪ ಸಂಘಟಿಸುವುದೆಂದು ಬಲ್ಲೆಯಾ?” ಕೃಷ್ಣ ಹೇಳಿದ.
ಅರ್ಜುನನಿಗೆ ತನ್ನ ತಪ್ಪಿನ ಅರಿವಾಯಿತು. ಆದರೂ ಅವನು ಹೇಳಿದ, “ನಾನು ಪ್ರತಿಜ್ಞೆಯನ್ನು ಬಿಡಲೊಲ್ಲೆ. ನಾನು ಅಸತ್ಯವಂತನೆಂದು ಆಗಬಾರದು. ಅದಕ್ಕೇನಾದರೂ ಉಪಾಯ ಸೂಚಿಸು!”

ಕೃಷ್ಣನು, “ಅರ್ಜುನ, ಹಿರಿಯರನ್ನು ನಿಂದಿಸಿದರೆ ಅವರನ್ನು ಕೊಂದಂತೆಯೇ ಆಗುತ್ತದೆ!” ಎಂದ.
ಅರ್ಜುನನು ಈಗ ಯುಧಿಷ್ಠಿರನನ್ನು ನಿಂದಿಸಿದ, “ಮಹಾರಾಜ! ಹೆಚ್ಚು ಮಾತನಾಡದೇ ಸುಮ್ಮನಿರು!
ಯುದ್ಧವೆಂದರೆ ಹೆದರುವ ನೀನು ನನ್ನನ್ನು ಹಾಗೆ ನಿಂದಿಸುವ ಅಧಿಕಾರವನ್ನೂ ಪಡೆದಿಲ್ಲ! ಭೀಮನೊಬ್ಬನಿಗೆ ಆ ಅಧಿಕಾರವಿದೆ! ಭೀಮನು ಮಾಡುವ ಅದ್ಭುತಕಾರ್ಯಗಳನ್ನು ನೋಡುವ ಶಕ್ತಿಯಾದರೂ ನಿನಗಿರುವುದೇ?! ನಾನೆಂಥ ಪರಾಕ್ರಮಿಯೆಂದು ತಿಳಿದೂ ಹೀಗೆ ಮಾತನಾಡುವ ನಿನಗೆ ಮಾತಿನಲ್ಲಿ ಬಲವಷ್ಟೆ! ಯುದ್ಧದಲ್ಲಿ ಅಲ್ಲ! ನಿನ್ನ ದ್ಯೂತದ ದೆಸೆಯಿಂದ ನಮಗೆ ಒಂದಿಷ್ಟೂ ಸುಖ ದೊರೆಯಲಿಲ್ಲ!”
ಹೀಗೆ ನಿಷ್ಠುರವಾಕ್ಯಗಳಿಂದ ಅಣ್ಣನನ್ನು ನಿ೦ದಿಸಿದ ಅರ್ಜುನನು ಈಗ ತನ್ನನ್ನೇ ಕೊಂದುಕೊಳ್ಳಲು ಪುನಃ ಕತ್ತಿಯನ್ನು ಹೊರಸೆಳೆದ! ಕೃಷ್ಣನು ಅವನನ್ನು ಮತ್ತೆ ತಡೆಯಲು, ಅರ್ಜುನನು, “ಅಣ್ಣನನ್ನು ಹಾಗೆ ನಿಂದಿಸಿ ನನಗೆ ಬದುಕಿರಲು ಇಷ್ಟವಿಲ್ಲ” ಎಂದ. ಅದಕ್ಕೆ ಕೃಷ್ಣನು, ”ಅಣ್ಣನನ್ನು ನಿಂದಿಸಿದ ಮಾತ್ರಕ್ಕೇ ನಿನಗೆ ಇಷ್ಟು ದುಃಖವಾದರೆ, ಇನ್ನು ಅವನನ್ನು ನಿಜವಾಗಿ ಕೊಂದಿದ್ದರೆ ನೀನೇನಾಗುತ್ತಿದ್ದೆ…?
ಅದಕ್ಕೆ ಯೋಚಿಸಿ ಕಾರ್ಯಮಾಡಬೇಕು! ಯುಧಿಷ್ಠಿರನು ಬಹಳ ಬಳಲಿ, ಅವಮಾನಿತನಾಗಿದ್ದ ಕಾರಣ ನಿನ್ನನ್ನು ನಿಂದಿಸಿದ, ಅಷ್ಟೆ! ಇರಲಿ… ಈಗ ಭ್ರಾತೃಹತ್ಯೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಪಾಪವು ನಿನ್ನನ್ನು ನೀನೇ ಕೊಂದುಕೊಂಡರೆ ಪ್ರಾಪ್ತವಾಗುತ್ತದೆ. ಆದರೆ ನೀನು ಸಾಯಬಾರದು! ನಿನ್ನನ್ನೇ ನೀನು ಹೊಗಳಿಕೊಂಡರೆ ನಿನ್ನನ್ನೇ ನೀನು ಕೊಂದುಕೊಂಡಂತಾಗುತ್ತದೆ!” ಎಂದು ಹೇಳಿದನು.
ಆಗ ಅರ್ಜುನನು ತನ್ನನ್ನೇ ತಾನು ಚೆನ್ನಾಗಿ ಶ್ಲಾಘಿಸಿಕೊಂಡನು! ಕೃಷ್ಣನ ಉಪಾಯದಿಂದ ಎಲ್ಲವೂ ಸರಿಹೋಯಿತು! ಅನಂತರ, ಕೃಷ್ಣಾರ್ಜುನರಿಬ್ಬರೂ ಯುಧಿಷ್ಠಿರನ ಪಾದಮುಟ್ಟಿ ನಮಸ್ಕರಿಸಿ ಅವನನ್ನು ಸಮಾಧಾನಪಡಿಸಿದರು. ಕಣ್ಣೀರು ಸುರಿಸುತ್ತಾ ಗಳಗಳನೆ ಅಳುತ್ತಿದ್ದ ಅರ್ಜುನನನ್ನು ಯುಧಿಷ್ಠಿರನು ಆಲಿಂಗಿಸಿ ಆಶೀರ್ವದಿಸಿ ಕಳಿಸಿಕೊಟ್ಟನು.
ಪಾಂಡವರಲ್ಲೇ ಒಳಜಗಳವಾಗುವುದನ್ನು ಎರಡನೆಯ ಬಾರಿ ತಡೆದು ಶ್ರೀಕೃಷ್ಣನು ಅವರ ಪಾಲಿಗೆ ನಿಜಕ್ಕೂ ಆಪತ್ಬಾಂಧವನಾಗಿದ್ದನು.
(ಮುಂದುವರಿಯುವುದು)






Leave a Reply