ಮಂತ್ರಧ್ಯಾನ

(ಭಾಗ -1)

– ಆಂಗ್ಲಮೂಲ : ಪವನೇಶನ ದಾಸ, ಅನುವಾದ: ಚಿರಂಜೀವಿ

ಸಂಸ್ಕೃತ ಪದ ‘ಮಂತ್ರ’ದ ಅರ್ಥ, ಭ್ರಮೆಗಳಿಂದ ಮನಸ್ಸನ್ನು ಮುಕ್ತಗೊಳಿಸುವುದು; ಆತ್ಮವನ್ನು ಸರೋವರವೊಂದರ ತಳದಲ್ಲಿ ಬಿದ್ದಿರುವ ಒಂದು ಆಭರಣಕ್ಕೆ ಹೋಲಿಸಬಹುದು. ಚಿತ್ತಭ್ರಮೆಯಿಂದ ಮನಸ್ಸಿನ ಅಲೆಗಳು ಕ್ಷೋಭೆಗೊಂಡರೆ, ನೀರಿನಲ್ಲಿ ಮಣ್ಣು ಹರಡಿಕೊಳ್ಳುತ್ತದೆ, ಆಭರಣವನ್ನು ನೋಡಲಾಗುವುದಿಲ್ಲ.

ಆದರೆ, ನೀರಿನ ಮೇಲು ಪದರ ಶಾಂತವಾಗಿದ್ದಲ್ಲಿ, ಆಭರಣವನ್ನು ಸ್ಪಷ್ಟವಾಗಿ ತಳದಲ್ಲಿ ನೋಡಬಹುದು. ಹಾಗೆಯೇ, ಮನಸ್ಸು ಭ್ರಾಂತಿಯ ಮತ್ತು ಅಜ್ಞಾನದ ಅಲೆಗಳಿಂದ ತಪ್ಪಿಸಿಕೊಂಡರೆ, ಮನದಾಳದಲ್ಲಿ ಪರಿಶುದ್ಧ ಪ್ರತಿಫಲಿಸುವುದು, ಶಾಂತ ಸರೋವರದಲ್ಲಿ ಕಂಡ ಆಭರಣದ ಹಾಗೆ.

ಮಂತ್ರ-ಧ್ಯಾನ ಮನಸ್ಸನ್ನು ಭ್ರಾಂತಿಗಳಿಂದ ಮುಕ್ತಗೊಳಿಸಬಲ್ಲದು, ಏಕೆಂದರೆ, ಎಂದಿನ ಸಾಮಾನ್ಯ ಪ್ರಾಪಂಚಿಕ ಶಬ್ದಗಳಂತಿಲ್ಲದೆ, ಮಂತ್ರವೆನ್ನುವುದು ಒಂದು ಆಧ್ಯಾತ್ಮಿಕ ಶಬ್ದ. ಉದಾಹರಣೆಗೆ, ನೀರು ಎನ್ನುವ ಪದ ಒಂದು ವಸ್ತುವನ್ನು ಹೇಳುತ್ತದೆ, ಆದರೆ, ನೀರು ಎನ್ನುವ ಪದ, ನಿಜವಾದ ವಸ್ತು ನೀರಿನಂತೆ ತದ್ರೂಪವಾಗಿಲ್ಲ.

ನಿಮಗೆ ಬಾಯಾರಿಕೆಯಾದರೆ ನೀರು, ನೀರು ಎಂದು ನೀವು ಇಷ್ಟ ಬಂದಷ್ಟು ಸಲ ಹೇಳಬಹುದು, ಆದರೆ, ಅದು ನಿಮ್ಮ ಬಾಯಾರಿಕೆಯನ್ನು ತಣಿಸುವುದಿಲ್ಲ. ನೀವು ನಿಜವಾದ ನೀರನ್ನು ಪಡೆದುಕೊಳ್ಳಬೇಕು ಮತ್ತು ಕುಡಿಯಬೇಕು. ನೀರು ಎನ್ನುವ ಪದಕ್ಕೆ ನೀರಡಿಕೆಯನ್ನು ತಣಿಸುವ ಯಾವ ಸಾಮರ್ಥ್ಯವೂ ಇರುವುದಿಲ್ಲ.

ಮಂತ್ರ ಅಥವಾ ಭಗವನ್ನಾಮಕ್ಕೆ ಮಾತ್ರ ಅಂತರ್ಗತವಾದ ಒಂದು ಶಕ್ತಿ ಇದೆ. ಅದು ಬೇರೊಂದು ವಸ್ತುಪದವನ್ನು ವಿವರಿಸುವುದಲ್ಲ; ಸ್ವತಃ ಮಂತ್ರವೇ ಫಲಗಳನ್ನು ಉತ್ಪತ್ತಿಮಾಡುತ್ತದೆ.

ಅನೇಕ ಬಗೆಯ ಮಂತ್ರಗಳಿವೆ. ಹಿಂದಿನ ಕಾಲದಲ್ಲಿ ಬೇರೆ ಬೇರೆ ಮಂತ್ರಗಳನ್ನು ಯಾಗ ಹೋಮಾದಿಗಳಿಂದ ಪಡೆಯಲು ವಿಧವಿಧ ಮಂತ್ರಗಳನ್ನು ಹೇಳಲಾಗುತ್ತಿತ್ತು. ಇಂದು, ಮಂತ್ರಗಳನ್ನು ಜಾಹೀರಾತುಗಳಲ್ಲಿ ಬಳಸಿ, ಮಾರಲಾಗುತ್ತಿದೆ, “ದೇವರಾಗಲು” ಎನ್ನುವುದರಿಂದ ಹಿಡಿದು, “ನಿಮ್ಮ ಹಣ ಮಾಡುವ ಜಾಣತನವನ್ನು ವೃದ್ಧಿಪಡಿಸಿಕೊಳ್ಳುವುದು ಹೇಗೆ?” ಎನ್ನುವವರೆವಿಗೂ ಇದು ಬಳಕೆಯಾಗುತ್ತಿದೆ.

ವೈದಿಕ ಸಾಹಿತ್ಯದಲ್ಲಿ ಮಂತ್ರದ ಕುರಿತು ನಾವು ವಿಷಯ-ವಿವರಗಳ ಭಂಡಾರವನ್ನೇ ಕಾಣುತ್ತೇವೆ. ಆಧ್ಯಾತ್ಮಿಕ ಜೀವನದ ಸಾರದ ಕುರಿತು ಹೇಳುವ, ಶ್ರೀಮದ್ಭಾಗವತ, ಪ್ರಾಪಂಚಿಕವಾಗಿ ಪ್ರೇರೇಪಣೆ ನೀಡುವ ಧರ್ಮವನ್ನು ತಿರಸ್ಕರಿಸುತ್ತದೆ. ಆದ್ದರಿಂದಲೇ, ಅದು ಆಧ್ಯಾತ್ಮಿಕ ಉತ್ಥಾನವೊಂದನ್ನು ಬಿಟ್ಟು ಬೇರೆ ಉದ್ದೇಶಗಳಿಗೆ ಮಂತ್ರಪಠಿಸುವುದನ್ನು ತಿರಸ್ಕರಿಸುತ್ತದೆ.

ಬೃಹನ್ ನಾರದೀಯ ಪುರಾಣದಲ್ಲಿ ಅತ್ಯುತ್ತಮ ಮಂತ್ರವನ್ನು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಒಂದು ಸ್ಪಷ್ಟವಾದ ಕಟ್ಟಳೆಯನ್ನು ನಾವು ಕಾಣುತ್ತೇವೆ: ”ಈ ಕಲಿಯುಗದಲ್ಲಿ ಆತ್ಮಸಾಕ್ಷಾತ್ಕಾರಕ್ಕಾಗಿ, ಶ್ರೀಕೃಷ್ಣನ ಪವಿತ್ರ ನಾಮಸ್ಮರಣೆ, ಮಾಡುವುದನ್ನು ಬಿಟ್ಟು ಯಾವ ದಾರಿಯೂ ಇಲ್ಲ. ಬೇರೆ ಯಾವ ದಾರಿಯೂ ಇಲ್ಲ, ಬೇರೆ ಯಾವ ದಾರಿಯೂ ಇಲ್ಲ.’

ಕವಿ ಸ೦ತರನ ಉಪನಿಷತ್‌ನಲ್ಲಿ ಹರೇಕೃಷ್ಣ ಮಂತ್ರವನ್ನು ಬಹಳ ವಿಶೇಷವಾಗಿ ಪ್ರಸ್ತಾಪಿಸಲಾಗಿದೆ: ”ಎಲ್ಲ ವೈದಿಕ ಸಾಹಿತ್ಯಗಳನ್ನೂ ಪರಿಶೀಲಿಸಿದ ಮೇಲೆ, ಹರೇಕೃಷ್ಣ ಹರೇಕೃಷ್ಣ ಕೃಷ್ಣ ಕೃಷ್ಣ ಹರೇಹರೇ, ಹರೇರಾಮ ಹರೇರಾಮ ರಾಮರಾಮ ಹರೇಹರೇ ಮಂತ್ರ ಪಠನೆಗಿಂತಲೂ ಪರಮೋದಾತ್ತವಾದ ಬೇರೊಂದು ಧಾರ್ಮಿಕ ರೀತಿಯನ್ನು ಈ ಕಾಲದಲ್ಲಿ ಕಾಣುವುದು ಸಾಧ್ಯವಿಲ್ಲ”

ಚೈತನ್ಯ ಚರಿತಾಮೃತ ( ಅಂತ್ಯ ಲೀಲಾ 7.11) ಹೀಗೆನ್ನುತ್ತದೆ; “ಕಲಿಯುಗದಲ್ಲಿ ಒಂದು ಮೂಲಭೂತ ಧಾರ್ಮಿಕ ವ್ಯವಸ್ಥೆ ಎಂದರೆ, ಶ್ರೀಕೃಷ್ಣನ ಪವಿತ್ರ ನಾಮವನ್ನು ಪಠಿಸುವುದು.”

ಯಾರಾದರೊಬ್ಬರು ಕೇಳಬಹುದು: ”ಇತರ ಮಂತ್ರಗಳಲ್ಲಿ ಬೇರೇನಾದರೂ ಕುಂದಿದೆಯೇ?”

ಪ್ರಾಚೀನ ಮಂತ್ರಗಳನ್ನು ಅಲ್ಲಲ್ಲಿ ಆಯ್ದು ಒಂದು ಮಂತ್ರ ಮಾಡುವುದು ಅಥವಾ ಹೊಸದೊಂದು ಮಂತ್ರವನ್ನು ಸೃಷ್ಟಿಸುವುದು, ಖಂಡಿತ ಯಾವ ಪರಿಣಾಮವನ್ನು ಬೀರಲಾರದು, ಯಾರಾದರೂ ಸ್ವಂತ ಲಾಭಕ್ಕಾಗಿ ಇದನ್ನು ಮಾರಿದರೆ ಅಥವಾ ಐಹಿಕ ಆಲೋಚನೆಗಳಿಂದ ಪ್ರೇರಿತರಾದ ಯಾರಾದರೂ ಇದನ್ನು ಪಡೆದುಕೊಂಡರೆ, ಇಲ್ಲೂ ಸಹ ಇದು ಪರಿಣಾಮಕಾರಿಯಾಗುವುದಿಲ್ಲ.

ಒಂದಿಷ್ಟು ವಿಶ್ರಾಂತಿ ಮತ್ತು ಒತ್ತಡ ತಗ್ಗುವಿಕೆ ಸಾಧ್ಯವಾಗಬಹುದಾದರೂ, ಐಹಿಕ ಬಂಧನಗಳಿಂದ ಮುಕ್ತಗೊಂಡಂತಹ ಯಾವ ಅತಿಶಯವಾದ ಪರಿಣಾಮಗಳೂ ಆಗುವುದಿಲ್ಲ. ಉಳಿದಂತೆ, ಕನಿಷ್ಠ ಒಂದು ತಾತ್ಕಾಲಿಕ ಪರಿಣಾಮ ಆಗಬಹುದೇ ಹೊರತು, ಶಾಶ್ವತವಾದ ಯಾವ ಆಧ್ಯಾತ್ಮಿಕ ಪರಿಣಾಮಗಳೂ, ಐಹಿಕ ಶರೀರ ಮತ್ತು ಮನಸ್ಸಿನ ಮೇಲೆ ಆಗಲಾರದು.

ಆಧ್ಯಾತ್ಮಿಕ ಬೆಳವಣಿಗೆ ಸುಲಭವಾಗಿ ಕೈಗೆಟುಕುವಂತಹದಲ್ಲ. “ಎಲ್ಲರಿಗೂ ಅವರವರದೇ ಆದಂತಹ ಒಂದು ರೀತಿ ಇದೆ.” ”ಎಲ್ಲ ಹಾದಿಗಳೂ ರೋಮ್ ನತ್ತ ಕರೆದೊಯ್ಯುತ್ತವೆ. ಇವೆಲ್ಲವೂ ನನ್ನದೇ ಅಂತರ್ ದೃಷ್ಟಿ”, ‘ನಾವೆಲ್ಲರೂ ದೇವರು’, “ಯಾವ ಮಂತ್ರವಾದರೂ ಮತ್ತೊಂದರಷ್ಟೇ ಒಳ್ಳೆಯದು” – ಎಂದೆಲ್ಲ ಘೋಷಣೆಗಳು ರೋಮ್’ಗೆ ಸೇರುವ ನೇರದಾರಿಯ ಬಗೆಗಿನ ಬರೀ ಅಜ್ಞಾನದ ಸೂಚನೆಗಳು, ಯಾರಿಗಾದರೂ ‘ರೋಮ್’ಗೆ ಹೋಗಬೇಕೆಂದಿದ್ದರೆ ಅವರು ರೋಮ್ ಗೊಂದು ಟಿಕೆಟ್ ಕೊಳ್ಳಬೇಕು.

ವೈದಿಕ ಧರ್ಮಗ್ರಂಥಗಳು, ಆತ್ಮಸಾಕ್ಷಾತ್ಕಾರ ಅಥವಾ ದೈವಪ್ರಜ್ಞೆಗಳಿಗೆ ಅತಿ ಶೀಘ್ರವಾದ ಮತ್ತು ಅತ್ಯಂತ ಪರಿಣಾಮಕಾರಿಯಾದ ಮಾರ್ಗದರ್ಶನವನ್ನು ನೀಡುತ್ತವೆ. ಅಧಿಕೃತ ಧರ್ಮಗ್ರಂಥಗಳನ್ನು ಸಮಾಜದ ಒಂದು ಅನಗತ್ಯ ಗೊಂದಲ ಎಂದು ಅಗೌರವ ತೋರುವ ಸ್ವ-ಘೋಷಿತ ಆಧ್ಯಾತ್ಮಿಕ ಚಟುವಟಿಕೆಗಳನ್ನು ವೇದಗಳು ವಿವರಿಸಿವೆ.

ಮತ್ತೆ ಪದ್ಮಪುರಾಣದಲ್ಲಿ ಹೀಗೆ ಹೇಳಿದೆ: ಯಾರಾದರೊಬ್ಬರು ಗೌರವಾನ್ವಿತ ಆಧ್ಯಾತ್ಮಿಕ ಆಧಾರಪೂರ್ವಕ ಮೂಲಗಳಿಂದ ಸರಿಯಾಗಿ ಉಪದೇಶವನ್ನು ಹೊಂದಿಲ್ಲದಿದ್ದರೆ, ಅವರು ಪಡೆದುಕೊ೦ಡಿರುವ ಮಂತ್ರ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ.

ಹರೇಕೃಷ್ಣ ಮಂತ್ರವನ್ನಲ್ಲದೆ, ಶ್ರೀಕೃಷ್ಣ ಭಕ್ತರು ಉಪಯೋಗಿಸುವ ಇತರ ಅನೇಕ ವಿಶ್ವಾಸಯೋಗ್ಯ ಮಂತ್ರಗಳೂ ಇವೆ. ಆದರೆ, ಬರೀ ಹರೇಕೃಷ್ಣ ಮಂತ್ರವನ್ನು ಪಠಿಸುವುದರಿಂದಲೇ ಬೇರೆಲ್ಲ ಮಂತ್ರಗಳ ಫಲಗಳೂ ದೊರಕುತ್ತವೆ ಎಂದು ವೈದಿಕ ಧರ್ಮಗ್ರಂಥಗಳು ಹೇಳಿವೆ. ಆದ್ದರಿಂದ, ಹರೇಕೃಷ್ಣ ಮಂತ್ರವನ್ನು ಪಠಿಸುವುದೇ ಅತಿ ಮುಖ್ಯವಾದ ಆಧ್ಯಾತ್ಮಿಕ ಚಟುವಟಿಕೆ ಎಂದೆನಿಸುತ್ತದೆ.

ಮಂತ್ರ-ಧ್ಯಾನವನ್ನುಳಿದು ಬೇರೆ ರೀತಿಯ ಆಧ್ಯಾತ್ಮಿಕ ಅಭ್ಯಾಸಗಳ ಬಗ್ಗೆ ವೇದಗಳ ಪ್ರಕಾರ, ನಿರಂತರವಾದ ನಾಲ್ಕು ಯುಗಗಳ ಚಕ್ರವೊಂದಿದೆ. ಪ್ರತಿಯೊಂದು ಯುಗವೂ ತನ್ನದೇ ಆದ ಐಹಿಕ ಮತ್ತು ಆಧ್ಯಾತ್ಮಿಕ ಗುಣಗಳನ್ನು ಹೊಂದಿರುತ್ತದೆ. ಒಂದೊಂದು ಯುಗದಲ್ಲೂ ಒಂದೊಂದು ರೀತಿಯ ಆತ್ಮ ಸಾಕ್ಷಾತ್ಕಾರದ ಪ್ರಕ್ರಿಯೆಯನ್ನು ಶಿಫಾರಸ್ಸು ಮಾಡಲಾಗಿದೆ.

ಸತ್ಯಯುಗದಲ್ಲಿ ಜನರೆಲ್ಲರೂ ಆಧ್ಯಾತ್ಮಿಕವಾಗಿ ಒಲವಿರುವವರಾಗಿಯೂ ಮತ್ತು ದೀರ್ಘ ಕಾಲ ಬಾಳುವವರಾಗಿಯೂ ಇರುವಾಗ, ಆತ್ಮಸಾಕ್ಷಾತ್ಕಾರ ಹೊಂದಲು ಶಿಫಾರಸ್ಸು ಮಾಡಿರುವ ರೀತಿಯೆಂದರೆ ಧ್ಯಾನ. ತ್ರೇತಾಯುಗದಲ್ಲಿ ಜನರ ಆಧ್ಯಾತ್ಮಿಕ ಗುಣವೆನ್ನುವುದು ಕಾಲುಭಾಗದಷ್ಟು ಕರಗಿಹೋಗುತ್ತದೆ.

ಆತ್ಮ ಸಾಕ್ಷಾತ್ಕಾರದ ಪ್ರಕ್ರಿಯೆಯಲ್ಲಿ ಅತಿ ಪ್ರಮುಖವಾಗಿರುವುದು, ವಿಸ್ತಾರವಾದ ಹೋಮ ಯಾಗಾದಿಗಳು. ದ್ವಾಪರಯುಗದಲ್ಲಿ, ಅರ್ಧದೇವ ಮತ್ತು ಅರ್ಧದಾನವ ಗುಣಾವಗುಣಗಳು ತುಂಬಿರುವಾಗ, ಆತ್ಮಸಾಕ್ಷಾತ್ಕಾರವನ್ನು ದೇವಾಲಯಗಳಲ್ಲಿ ವಿಗ್ರಹಾರಾಧನೆಗಳ ಮೂಲಕ ಸಾಧಿಸುವಂತಾಗುತ್ತದೆ.

ಮತ್ತೆ ಇನ್ನು ಕಲಿಯುಗದಲ್ಲಿ, ಅಂದರೆ ಈಗಿನ ಕಾಲಘಟ್ಟದಲ್ಲಿ, ದೈವಗುಣಗಳೆನ್ನುವುದು ಹ೦ತಹ೦ತವಾಗಿ ಅಧೋಗತಿಗಿಳಿಯುತ್ತ, ಪ್ರಾಪಂಚಿಕೆ ಮತ್ತು ರಾಕ್ಷಸೀ ಪ್ರವೃತ್ತಿಯ ನಾಗರಿಕತೆಗೆ ದಾರಿಮಾಡಿಕೊಡುತ್ತಿದೆ. ಈ ಸಂದರ್ಭದಲ್ಲಿ ಆತ್ಮಸಾಕ್ಷಾತ್ಕಾರಕ್ಕೆ ಏಕಮಾತ್ರ ಪರಿಣಾಮಕಾರಿ ರೀತಿಯೆಂದರೆ, ಹರೇಕೃಷ್ಣ ಮಂತ್ರಪಠನೆ.

ಇದನ್ನು ಶ್ರೀಮದ್ಭಾಗವತ ಖಚಿತಗೊಳಿಸಿದೆ (12.3.52): “ಸತ್ಯಯುಗದಲ್ಲಿ ವಿಷ್ಣುವಿನ ಕುರಿತು ಧ್ಯಾನ; ತ್ರೇತಾಯುಗದಲ್ಲಿ ಯಜ್ಞಯಾಗಾದಿಗಳ ಆಚರಣೆ, ಮತ್ತು ದ್ವಾಪರಯುಗದಲ್ಲಿ ಭಗವಂತನ ಪಾದಪದ್ಮಗಳ ಸೇವೆ – ಇವುಗಳಿಂದ ಪಡೆಯುವಂತಹದೇ ಫಲಗಳನ್ನು ಕಲಿಯುಗದಲ್ಲಿ ಬರೀ, ಹರೇಕೃಷ್ಣ ಮಹಾಮಂತ್ರವನ್ನು ಪಠಿಸುವುದರಿಂದಲೇ ಪಡೆಯಬಹುದು.”

ಈಗಿನ ಕಾಲದಲ್ಲಿ ಅನೇಕರು, ಮೌನಧ್ಯಾನವನ್ನೇ ಸಮರ್ಪಿಸುತ್ತಾರೆ. ಇಂತಹ ಅಭ್ಯಾಸಕ್ಕೆ, ಎಲ್ಲ ವಸ್ತುಗಳ ಮೇಲಿನ ಇಂದ್ರಿಯಾಸಕ್ತಿ, ಸಂಪೂರ್ಣ ಚಿತ್ತೈಕಾಗ್ರತೆ, ಮತ್ತು ಎಲ್ಲ ಶಾರೀರಕ ಮತ್ತು ಮಾನಸಿಕ ಗೊಂದಲಗಳಿಂದ ಮುಕ್ತತೆ ಬೇಕಾಗುತ್ತದೆ. ಭಗವದ್ಗೀತೆ (6.13-14), ಮೌನಧ್ಯಾನ, ಮಾಡಬಯಸುವವರು, ಲೈಂಗಿಕ ಬಯಕೆಗಳಿಂದಲೂ ಮುಕ್ತರಾಗಿರಬೇಕಾದ ಅಗತ್ಯವನ್ನು ಪ್ರಮುಖವಾಗಿ ಹೇಳುತ್ತದೆ.

ಈ ಕಟ್ಟು ಪಾಡುಗಳನ್ನೆಲ್ಲ ಸತ್ಯಯುಗದಲ್ಲಿ ಸುಲಭವಾಗಿ ಪೂರೈಸುತ್ತಿದ್ದರು. ಬಂಗಾರದ ಯುಗ ಎಂದು ಕರೆಸಿಕೊಂಡ ಈ ಯುಗಕ್ಕಾಗಿಯೇ ಇವುಗಳನ್ನು ಶಿಫಾರಸ್ಸು ಮಾಡಿದ್ದರು. ಸ್ವಾಭಾವಿಕವಾಗಿಯೇ ಜನ ಆಧ್ಯಾತ್ಮಿಕ ಒಲವಿನವರು, ಕಾರ್ಖಾನೆಗಳಿರಲಿಲ್ಲ. ಪರಿಸರಹಾನಿ ಮಲಿನತೆ ಇರಲಿಲ್ಲ, ಒತ್ತಡಗಳಿರಲಿಲ್ಲ.

ಮತ್ತು ರೋಗಗಳೆನ್ನುವುದೇ ಅಪರೂಪವಾಗಿತ್ತು. ಹವಾಗುಣ ಅನೂನವಾಗಿತ್ತು. ಪ್ರಕೃತಿ ಧಾರಾಳವಾಗಿ ಹಣ್ಣುಗಳನ್ನು ದವಸಧಾನ್ಯಗಳನ್ನೂ, ತರಕಾರಿಗಳನ್ನೂ ನೀಡುತ್ತಿತ್ತು. ವಾತಾವರಣ ಶಾಂತವಾಗಿತ್ತು ಜನ ಬಹುಕಾಲ ಬದುಕುತ್ತಿದ್ದರು.

ಇದನ್ನೇ ನಾವು ಈಗಿನ ಕಾಲಕ್ಕೆ ಹೋಲಿಸುವುದಾದರೆ, ಕಲಿಯುಗದಲ್ಲಿ ಧ್ಯಾನಕ್ಕೆ ಅನುಗುಣವಲ್ಲದ ಎಲ್ಲ ರೀತಿಯ ಪರಿಸರವೂ ಇದೆ. ಶ್ರೀಮದ್ಭಾಗವತ (1.1.10) ಈ ಯುಗದ ಒಂದು ಖಚಿತವಾದ ವಿವರಣೆಯನ್ನು ನೀಡುತ್ತದೆ: “ಈ ತುಕ್ಕಿನಂತಹ ಕಲಿಯುಗದಲ್ಲಿ ಜನರಿಗೆ ಪೂರ್ಣಾಯಸ್ಸು ಇರುವುದಿಲ್ಲ. ಅವರು ಜಗಳಗಂಟರೂ, ಸೋಮಾರಿಗಳೂ, ದಾರಿತಪ್ಪಿದವರೂ, ದುರದೃಷ್ಟವ೦ತರೂ ಮತ್ತು ಹೆಚ್ಚಾಗಿ ಯಾವಾಗಲೂ ಕ್ಷೋಭೆಗೊಳಗಾದವರಂತಿರುತ್ತಾರೆ.”

ಬಾಹ್ಯ ವಸ್ತುಗಳೆಲ್ಲದರಿಂದಲೂ ತನ್ನ ಇಂದ್ರಿಯಗಳನ್ನು ಹಿಂತೆಗೆದುಕೊಂಡಿರುವ ಯಾರಾದರೊಬ್ಬರು ಧ್ಯಾನದಲ್ಲಿ ತೊಡಗಲು ಪ್ರಯತ್ನಿಸುವುದನ್ನು ಕಲ್ಪಿಸಿಕೊಳ್ಳೋಣ. ಇಡೀ ದಿನ ಅವನ ಇಂದ್ರಿಯಗಳ ಮೇಲೆ ಹೊಡೆತ ನೀಡುವಂತೆ ಜಾಹೀರಾತುಗಳ ಭರಾಟೆ ವಿಜೃಂಭಿಸುತ್ತಿರುತ್ತದೆ. ಎಲ್ಲೆಲ್ಲೂ ಮೋಟಾರುಕಾರುಗಳ, ರೇಡಿಯೋಗಳ, ಹಾರ್ನ್‌ಗಳ ಮತ್ತು ವಿಮಾನಗಳ ಕರ್ಕಶ ಸದ್ದುಗಳು. ಅವನ ಇಡೀ ವಿದ್ಯಾಭ್ಯಾಸ ಇಂದ್ರಿಯ ಸಂತೃಪ್ತಿಯ ಆಧಾರದ ಮೇಲೆಯೇ ರೂಪಿಸಲಾಗಿದೆ – ಹಣ ಮಾಡು, ಬೇಕಾದಷ್ಟು ಸುಖಪಡಬಹುದು!

ಆಧುನಿಕ ಮನುಷ್ಯ ಹಾಯಾಗಿ ಒಂದೆಡೆ ಕುಳಿತು ತನ್ನ ಶರೀರವನ್ನು ಮರೆತು ಧ್ಯಾನದಲ್ಲಿ ತೊಡಗಿದ್ದಾಗ, ಇಡೀ ಜೀವಿತಕಾಲದ ತನ್ನ ಐಹಿಕ ಆಶಾಪಾಶಗಳ ತಲ್ಲಣಗೊಳಿಸುವ ನೆನಪುಗಳು ಅವನನ್ನು ಕಾಡುತ್ತವೆ: ವ್ಯಾಯಾಮವಿಲ್ಲದ ನೋವುಗಳು ಮತ್ತು ವೇದನೆಗಳು, ಹೊಟ್ಟೆಗೆ ತುರುಕಿದ ಅಪಾರವಾದ ರಾಸಾಯನಿಕಗಳು, ಜೊತೆಗೆ ತಪ್ಪು ತಪ್ಪಾದ ಆಹಾರ ಸೇವನೆ ಅಭ್ಯಾಸಗಳು ಮೊದಲಾದವು ಅವನ ಧ್ಯಾನವನ್ನು ಕದಡುತ್ತವೆ.

ಇವೆಲ್ಲ ಅಡೆತಡೆಗಳನ್ನು ಅವನು ಗೆದ್ದಮೇಲೆ, ಅವನ ಮನಸ್ಸು ಬೇರೆ ಲಕ್ಷಾಂತರ ವಿಷಯಗಳ ಬಗ್ಗೆ ಉತ್ಸಾಹದಿಂದ ವೇಗಗೊಂಡು, ಅವನ ಚಿತ್ತೈಕಾಗ್ರತೆಯನ್ನು ಕದಡುತ್ತದೆ. ಇವೆಲ್ಲ ಅಡ್ಡಗೋಡೆಗಳನ್ನು ಒಡೆದುಹಾಕಿ ಮುನ್ನುಗ್ಗಬೇಕು ಅಂದುಕೊಳ್ಳುವ ವೇಳೆಗೆ ಧಾರಾಳವಾದ ನಿದ್ರಾವಸ್ಥೆಯ ಅಪಾಯವನ್ನವನ್ನು ಎದುರಿಸಬೇಕಾಗುತ್ತದೆ.

ಈ ಕಾಲದಲ್ಲಿ ಮೌನಧ್ಯಾನದಲ್ಲಿ ತೊಡಗಲು ವೇದಗಳು ನಮಗೆ ಒತ್ತಾಯಿಸುವುದಿಲ್ಲ. ಏಕೆಂದರೆ ಇದನ್ನು ಯಶಸ್ವಿಯಾಗಿ ಜಾರಿಗೆ ತರುವುದು ಸಾಧ್ಯವೇ ಇಲ್ಲ. ಆದರೆ, ಹರೇಕೃಷ್ಣ ಮಂತ್ರ ಪಠನೆ ಮಾತ್ರ ಬೇರೆಯೇ ಮೂಲ ತತ್ತ್ವದ ಮೇಲೆ ಕೆಲಸ ಮಾಡುತ್ತದೆ. ಎಲ್ಲ ವಸ್ತುಗಳಿಂದ ಇಂದ್ರಿಯಗಳನ್ನು ಹಿಂತೆಗೆದುಕೊಳ್ಳುವುದರ ಬದಲು, ಅವನ್ನು ನಾವು ಆಧ್ಯಾತ್ಮಿಕ ಹಾದಿಗಳಲ್ಲಿ ತೊಡಗಿಸುತ್ತೇವೆ. ಇದು ತುಂಬ ಸುಲಭ ಮತ್ತು ಕಾರ್ಯಸಾಧ್ಯವಾದದ್ದು.

ಏನನ್ನೂ ಕೇಳದೇ ಇರುವುದರ ಬದಲು, ನಾವು ಶ್ರೀಕೃಷ್ಣನ ದಿವ್ಯನಾಮಸ್ಮರಣೆಯನ್ನು ಕೇಳುತ್ತೇವೆ. ಏನನ್ನೂ ಸ್ಪರ್ಶಿಸದಿರುವ ಬದಲು ನಾವು ಧ್ಯಾನಮಣಿಗಳನ್ನು ಸ್ಪರ್ಶಿಸುತ್ತೇವೆ. ಏನನ್ನೂ ಕಾಣದಿರುವ ಬದಲು, ನಾವು ಶ್ರೀಕೃಷ್ಣನ ಭಾವಚಿತ್ರವನ್ನು ಕಾಣುತ್ತೇವೆ. ಏನನ್ನೂ ಹೇಳದಿರುವ ಬದಲು, ನಾವು ಶ್ರೀಕೃಷ್ಣನ ಪವಿತ್ರ ನಾಮಸ್ಮರಣೆಯ ಸ್ವರಕಂಪನ ಮಾಡುವುದರಲ್ಲಿ ನಮ್ಮ ನಾಲಗೆಯನ್ನು ತೊಡಗಿಸಿಕೊಳ್ಳುತ್ತೇವೆ. ಈ ರೀತಿಯಾಗಿ ನಮ್ಮೆಲ್ಲ ಇಂದ್ರಿಯಗಳೂ ಆಧ್ಯಾತ್ಮಿಕವಾಗಿ ಆವರಿಸಿಕೊಂಡಂತಾಗುತ್ತದೆ.

ಮೌನಧ್ಯಾನ ಮಾಡಲು ಒಂದು ವಿಶೇಷ ಮೌನ ಪರಿಸರ ಬೇಕಾಗುತ್ತದೆ. ಆದರೆ, ಹರೇಕೃಷ್ಣ ಮಂತ್ರವನ್ನು ನಾವು, ಮನೆಯಲ್ಲಿ ಉದ್ಯಾನದಲ್ಲಿ, ಮತ್ತೆ ವಿಮಾನದಲ್ಲೂ ಸಹ, ಎಲ್ಲೆಂದರಲ್ಲಿ ಪಠಿಸಬಹುದು. ಈ ಪಠನೆಗೆ ಯಾವ ರೀತಿಯ ಕ್ಲಿಷ್ಟ ನಿಯಮಾವಳಿಗಳಿಲ್ಲ. ಸದ್ದುಗದ್ದಲಗಳು ಮತ್ತು ಇತರ ಇಂದ್ರಿಯಾಕರ್ಷಣೆಗಳು ಒಬ್ಬ ಶ್ರದ್ಧಾವಂತ ಪಠನಕಾರನನ್ನು ಸುಲಭವಾಗಿ ಬೇರೆಡೆ ಮನಸೆಳೆಯಲಾರದು, ಏಕೆಂದರೆ, ಅವನ ಇಂದ್ರಿಯಗಳೆಲ್ಲ ಆಗಲೇ ಮಂತ್ರದೊಂದಿಗೆ ಸಂಪೂರ್ಣವಾಗಿ ಸೇರಿಹೋಗಿರುತ್ತವೆ.

ಕಲಿಯುಗವೆನ್ನುವುದು ಬರೀ ತಪ್ಪುಗಳಿಂದಲೇ ತುಂಬಿಕೊಂಡಿದ್ದರೂ, ಈ ಯುಗದಲ್ಲಿ ಒಂದು ಒಳ್ಳೆಯ ಗುಣ ಇನ್ನೂ ಉಳಿದುಕೊಂಡಿದೆ. ಅದೇನೆಂದರೆ, ಬರೀ ಹರೇಕೃಷ್ಣ ಮಂತ್ರವನ್ನು ಪಠಿಸುವುದರಿಂದಲೇ, ಒಬ್ಬರು ಪ್ರಾಪಂಚಿಕ ಬಂಧನಗಳಿಂದ ಮುಕ್ತರಾಗಬಹುದು ಮತ್ತು ಪರಮಧಾಮಕ್ಕೆ ಸೇರ್ಪಡೆಯಾಗಬಹುದು – ಶ್ರೀಮದ್ಭಾಗವತ 12.3.51

ಹರೇಕೃಷ್ಣ ಮಂತ್ರ ಪಠಿಸುವ ವಿಧಾನ

ಎರಡು ವಿಧವಾದ ಪಠನಗಳಿವೆ. ಒಂದನ್ನು ಜಪ ಎನ್ನುತ್ತೇವೆ – ಇನ್ನೊಂದು ಕೀರ್ತನ. ಕೀರ್ತನವೆನ್ನುವುದು ಸಮೂಹ ಪಠನೆ – ಇದರೊಂದಿಗೆ ಸಾಂಪ್ರದಾಯಿಕ ಸಂಗೀತ ವಾದ್ಯಗಳೂ ಜೊತೆಗಿರುತ್ತವೆ ಮತ್ತು ಜಪ ಎನ್ನುವುದು ಏಕವ್ಯಕ್ತಿ ಪಠನೆ.

ಯಾರು ಬೇಕಾದರೂ ಹರೇಕೃಷ್ಣ ಮಂತ್ರ ಪಠಿಸಬಹುದು – ವಿದ್ಯೆ, ವಯಸ್ಸು ಅಥವಾ ಹಣಕಾಸಿನ ಪರಿಸ್ಥಿತಿಗಳು ಯಾವುದೂ ಮುಖ್ಯವಲ್ಲ. ಅದು ಮುಕ್ತವಾದ, ಹಣಕೊಡಬೇಕಾಗಿಲ್ಲದ ಪಠನೆ, ಮತ್ತು ಯಶಸ್ವಿಯಾಗಿ ಮಕ್ಕಳು ಹಿರಿಯರು ಮತ್ತು ವೃದ್ಧರು ತೊಡಗಬಹುದು.

ಜಪ ಮಾಡಲು ಸೂಕ್ತವಾದ ಸಮಯ ಬೆಳಗಿನ ಜಾವ. ಆಗ ವಾತಾವರಣ ಇನ್ನೂ ಶಾಂತವಾಗಿರುತ್ತದೆ. ಮನಸ್ಸು ಬುದ್ಧಿ ಇನ್ನೂ ದೈನಂದಿನ ಚಟುವಟಿಕೆಗಳ ಕುರಿತು ಚಿಂತಿಸಲಾರಂಭಿಸುವುದಿಲ್ಲ. ಇದು ಸಾಧ್ಯವಾಗದೆ ಹೋದರೆ, ಯಾವ ಸಮಯವಾದರೂ ಸರಿಯೇ, ನೆಮ್ಮದಿಯಿಂದ ಮಂತ್ರವನ್ನು ಮತ್ತೆ ಮತ್ತೆ ಜಪಿಸಿ – ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇ ಹರೇ ಹರೇರಾಮ ಹರೇರಾಮ ರಾಮರಾಮ ಹರೇಹರೇ – ಮೃದುವಾಗಿ ಆದರೆ, ಸ್ಪಷ್ಟವಾಗಿ ಜಪಿಸಬೇಕು. ನಿಮ್ಮ ಕಿವಿಗೆ ಸ್ಪಷ್ಟವಾಗಿ ಕೇಳಿಸುವಂತೆ ನೀವು ಈ ಮಂತ್ರವನ್ನು ಹೇಳಿಕೊಳ್ಳಬೇಕು.

ಭಕ್ತರು ಜಪಮಾಲೆಯನ್ನಿಟ್ಟು ಕೊಂಡು ಪಠಿಸುತ್ತಾರೆ – ಎಣಿಕೆಗೂ ಮತ್ತು ಚಿತ್ತೈಕಾಗ್ರತೆಗೂ ಅನುಕೂಲವಾಗಲೆಂದು ಜಪಮಾಲೆಯನ್ನು ನಿಮ್ಮ ಬಲಗೈಯಲ್ಲಿ ಹಿಡಿದಿಟ್ಟುಕೊಳ್ಳಿ – ಹೆಬ್ಬೆಟ್ಟು ಮತ್ತು ಮಧ್ಯಬೆರಳಿನ ನಡುವೆ ದೊಡ್ಡ ಮಧ್ಯ ಮಣಿಯಿಂದ ಪ್ರಾರಂಭಿಸಿ. ಒಂದೊಂದು ಮಣಿಗೂ ಒಂದೊಂದು ಸಲ ಮಂತ್ರವನ್ನು ಪಠಿಸಿ.

ಮತ್ತೆ ನೀವು ದೊಡ್ಡ ಮಣಿಗೆ ಮರಳುವುದರಲ್ಲಿ 108 ಸಲ ಹರೇಕೃಷ್ಣ ಮಂತ್ರವನ್ನು ಜಪಿಸಿರುತ್ತೀರಿ. ಇದನ್ನು ಒಂದು “ಸುತ್ತು” ಎನ್ನುತ್ತಾರೆ. ಹೀಗೆಯೇ ಎರಡನೇ ಸುತ್ತಿಗೆ ಮುಂದುವರಿಯಿರಿ. ( ಮಧ್ಯದ ಮಣಿಗೆ ಹೋಗಬೇಡಿ – ಅದನ್ನು ‘ಕೃಷ್ಣಮಣಿ’ ಎನ್ನುತ್ತಾರೆ). ಪ್ರಾರಂಭದಲ್ಲಿ ಒಂದು “ಸುತ್ತು” ಮುಗಿಸಲು ನಿಮಗೆ ಸುಮಾರು ಹದಿನೈದು ನಿಮಿಷಗಳು ಬೇಕಾಗಬಹುದು. ಇದು ನಿಮಗೆ ಅಭ್ಯಾಸವಾದಮೇಲೆ, ಆನಂತರ, ಒಂದು ಸುತ್ತು ಪಠನೆಗೆ ಸುಮಾರು ಆರು- ಎಂಟು ನಿಮಿಷ ತೆಗೆದುಕೊಳ್ಳಬಹುದು.

ಪ್ರತಿದಿನ ಒಂದು “ಸುತ್ತಿ”ನಿಂದ ಪ್ರಾರಂಭಿಸಿ ಅನಂತರ ಹೆಚ್ಚಿಸುತ್ತ ಬನ್ನಿರಿ. ಹರೇಕೃಷ್ಣ ಆಂದೋಲನದಲ್ಲಿ ಸೇರ್ಪಡೆಯಾದ ಭಕ್ತರು ದಿನಕ್ಕೆ ಕನಿಷ್ಠ ಪಕ್ಷ ಹದಿನಾರು ಸುತ್ತು ಪಠಿಸುತ್ತಾರೆ. ಇದು ಸುಮಾರು ಎರಡು ಘಂಟೆಗಳ ಕಾಲ ಹಿಡಿಯುತ್ತದೆ.

ಒಮ್ಮೆ ನೀವು ಒಂದು ಸಂಖ್ಯೆಯಷ್ಟು ‘ಸುತ್ತು’ ಅಭ್ಯಾಸ ಮಾಡಿಕೊಂಡಮೇಲೆ, ಅದಕ್ಕಿಂತಲೂ ಕಡಮೆ ಸುತ್ತು ಇಳಿಯಬೇಡಿ. ನೀವು ಪ್ರತಿದಿವಸ ಎರಡು ‘ಸುತ್ತು’ ಪಠಿಸಿದರೂ ಪರವಾಗಿಲ್ಲ. ಆದರೆ ಒಂದು ದಿನ ಎಂಟು ‘ಸುತ್ತು’ ಮಾಡಿ, ಮರುದಿವಸ ಒಂದು ಸುತ್ತೂ ಇಲ್ಲದಂತೆ ಮಾಡಿಕೊಂಡುಬಿಡಬೇಡಿ. ಆಧ್ಯಾತ್ಮಿಕ ಬೆಳವಣಿಗೆ ಸಾಧಿಸುವುದಕ್ಕೆ ಒಂದು ಕಟ್ಟುಪಾಡು ಇರಲೇಬೇಕು.

ಮಂತ್ರ ಪಠನೆಯ ಬಹುಮುಖ್ಯ ಅಂಶವೆಂದರೆ, ಮಂತ್ರದ ಶಬ್ದಗಳನ್ನು ಅತಿ ಲಕ್ಷ್ಯವಿಟ್ಟು ಕೇಳಬೇಕು. ನಾಲಗೆಯಿಂದ ಹೊರಹೊಮ್ಮಿದ ಮಂತ್ರ ಕೂಡಲೇ ಕಿವಿ ತಲಪಬೇಕು. ಏನಾದರೂ ಭಂಗಪಡಿಸುವ ಆಲೋಚನೆಗಳು ಬಂದಲ್ಲಿ ನಿಮ್ಮ ಪೂರ್ತಿ ಲಕ್ಷ್ಯವನ್ನು ಹರೇಕೃಷ್ಣ ಮಂತ್ರದ ಶಬ್ದಗಳ ಮೇಲೆ ಕೇಂದ್ರಿಕರಿಸಿ, ಆ ಆಲೋಚನೆಗಳು ಕೂಡಲೇ ಹೊರಟು ಹೋಗುತ್ತವೆ. ಸುಮ್ಮನೆ ಮಂತ್ರವನ್ನು ಕೇಳುವ ಮನಸ್ಸು ಮಾಡಿ, ಬಹುಬೇಗ ಪರಿಶುದ್ಧತೆಯ ಪ್ರಕ್ರಿಯೆ ಪ್ರಾರಂಭವಾಗಿಬಿಡುತ್ತದೆ.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi