– ಆಂಗ್ಲಮೂಲ: ಶ್ರೀ ಯದುರಾಜ ದಾಸ, ಅನುವಾದ: ಸುರೇಶ್ ಮೂನ
ಅಕ್ರೂರ ಮತ್ತು ಬಲರಾಮರೊಂದಿಗೆ ಪ್ರಭುವು ಯಮುನಾ ತೀರದತ್ತ ವೇಗವಾಗಿ ರಥದಲ್ಲಿ ಹೋದನು. ಕೃಷ್ಣ ಬಲರಾಮರು ನದಿಯಲ್ಲಿ ಸ್ನಾನ ಮಾಡಿದರು. ಅದರ ತಿಳಿನೀರನ್ನು ಕುಡಿದು ದೊಡ್ಡ ಮರದ ನೆರಳಿನಲ್ಲಿ ನಿಂತ ರಥವನ್ನೇರಿ ಕುಳಿತರು. ಅನಂತರ ಅವರ ಅನುಮತಿಯನ್ನು ಪಡೆದು ಅಕ್ರೂರನೂ ನದಿಯಲ್ಲಿ ಸ್ನಾನ ಮಾಡಲು ಹೊರಟನು.

ವೈದಿಕ ಧಾರ್ಮಿಕ ವಿಧಿಯಂತೆ ನದಿಯಲ್ಲಿ ಸ್ನಾನಮಾಡಿದ ಅನಂತರ ಕೊನೆಯ ಪಕ್ಷ ಅರ್ಧಭಾಗ ನೀರಿನಲ್ಲಿರುವಂತೆ ನಿಂತು ಗಾಯತ್ರೀ ಮಂತ್ರವನ್ನು ಜಪಿಸಬೇಕು. ಹೀಗೆ ಅಕ್ರೂರನು ನೀರಿನಲ್ಲಿ ನಿಂತಿದ್ದಾಗ ಇದ್ದಕ್ಕಿದ್ದಂತೆ ಅವನಿಗೆ ಕೃಷ್ಣ ಬಲರಾಮರು ನೀರಿನಲ್ಲಿ ಕಂಡು ಬಂದರು.
ಅವರು ರಥದಲ್ಲಿ ಕುಳಿತಿದ್ದಾರೆ ಎಂದು ಅವನಿಗೆ ಖಂಡಿತವಾಗಿ ತಿಳಿದಿದ್ದರಿಂದ ಅತ್ಯಾಶ್ಚರ್ಯವಾಯಿತು. ಗೊಂದಲದಿಂದ ಅವನು ನೀರಿನಿಂದ ಹೊರಕ್ಕೆ ಬಂದು ಹುಡುಗರಿದ್ದ ಸ್ಥಳಕ್ಕೆ ನೋಡಲು ಹೋದನು. ಅವರು ಮೊದಲಿನಂತೆಯೇ ರಥದಲ್ಲಿ ಕುಳಿತಿದ್ದರು. ಇದರಿಂದ ಅವನಿಗೆ ಗೊಂದಲವಾಯಿತು.
“ಕಂಸನ ಆಜ್ಞೆಯಂತೆ ಅಕ್ರೂರನು ಕೃಷ್ಣ ಬಲರಾಮರನ್ನು ಕರೆದೊಯ್ಯಲು ಗೋಕುಲಕ್ಕೆ ಬಂದನು. ಗೋಪ ಗೋಪಿಯರೆಲ್ಲರೂ ರಥರೂಢರಾಗಿದ್ದ ಸಹೋದರರನ್ನು ಕಂಡು ತಮ್ಮ ಆತ್ಮವೇ ತೊರೆದು ಹೋಗುತ್ತಿರುವಂತೆ ದುಃಖಿಸಿದರು. ಆದರೆ ಕೃಷ್ಣನಿಗೆ ಲೋಕ ಕಲ್ಯಾಣದ ಕಾರ್ಯವೊಂದು ಕಾಯುತ್ತಿತ್ತು… (ಮುಂದೆ ಓದಿ)”
ಮತ್ತೆ ಅವನು ನದಿಗೆ ಹೋದನು. ಈ ಬಾರಿ ಕೃಷ್ಣ ಬಲರಾಮರಷ್ಟೇ ಅಲ್ಲದೆ ಹಲವಾರು ದೇವತೆಗಳು, ಸಿದ್ಧರು, ಚಾರಣರು ಹಾಗೂ ಗಂಧರ್ವರನ್ನು ನೀರಿನಲ್ಲಿ ಕಂಡನು. ಪ್ರಭುವು ಮಲಗಿದ್ದನು. ಅವರೆಲ್ಲರೂ ಸುತ್ತಲೂ ನಿಂತಿದ್ದರು.
ಇವರೊಂದಿಗೆ ಸಹಸ್ರ ಹೆಡೆಗಳ ಶೇಷನಾಗನನ್ನು ಅಕ್ರೂರನು ಕ೦ಡನು. ಶೇಷನಾಗನ ಸುರುಳಿಯಾಕಾರದ ತೊಡೆಯ ಮೇಲೆ ಕೃಷ್ಣನು ಮಹಾ ವಿಷ್ಣುವಿನ ರೂಪದಲ್ಲಿ ಕುಳಿತಿದ್ದನು. ಅಪ್ರತಿಮ ಸೌಂದರ್ಯವುಳ್ಳವನಾಗಿದ್ದ ಅವನ ಕೈಗಳು ಕಮಲ ಪುಷ್ಪದಂತಿದ್ದವು. ಬಲರಾಮನೇ ಶೇಷನಾಗಿ ಪರಿವರ್ತಿತನಾಗಿದ್ದನು.
ವಿಷ್ಣುವಿನ ಸುತ್ತಲೂ ನಾಲ್ವರು ಕುಮಾರರಾದ ಸನಕ, ಸನಾತನ, ಸನಂದ ಮತ್ತು ಸನತ್ಕುಮಾರರೂ, ಸುನಂದ ಮತ್ತು ನಂದನಂತಹ ಸಂಗಾತಿಗಳೂ ಬ್ರಹ್ಮ ಮತ್ತು ಶಿವನಂತಹ ದೇವತೆಗಳೂ ನಿಂತಿದ್ದರು. ಅವರೊಂದಿಗೆ ಒಂಬತ್ತು ಮಂದಿ ಮಹರ್ಷಿಗಳೂ ಇದ್ದರು. ಪ್ರಹ್ಲಾದ ನಾರದರಂತಹ ಭಕ್ತರೂ ಅಷ್ಟವಸುಗಳೂ ಇದ್ದರು.
ಅವರೆಲ್ಲರೂ ನಿರ್ಮಲ ಹೃದಯಗಳಿಂದ ನಿರ್ಮಲ ಮಾತುಗಳಲ್ಲಿ ಪ್ರಭುವಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅಲೌಕಿಕನಾದ ದೇವೋತ್ತಮ ಪರಮ ಪುರುಷನನ್ನು ಕಂಡ ಅಕ್ರೂರನಿಗೆ ಭಕ್ತಿಯು ಉಕ್ಕಿತು. ಅವನ ದೇಹದಲ್ಲೆಲ್ಲಾ ದಿವ್ಯ ರೋಮಾಂಚನವಾಯಿತು. ಆ ಕ್ಷಣದಲ್ಲಿ ಅವನು ದಿಗ್ಭ್ರಾಂತನಾದರೂ ಅವನ ಪ್ರಜ್ಞೆ ತಿಳಿಯಾಗಿತ್ತು. ಅವನು ಪ್ರಭುವಿನ ಮುಂದೆ ತಲೆ ಬಾಗಿದನು. ಕೈಗಳನ್ನು ಮುಗಿದು ನಡುಗುವ ಧ್ವನಿಯಲ್ಲಿ ಅವನು ಪ್ರಭುವಿಗೆ ಪ್ರಾರ್ಥನೆ ಸಲ್ಲಿಸಲು ಆರಂಭಿಸಿದನು.
ಅಕ್ರೂರನು ದೇವೋತ್ತಮ ಪರಮ ಪುರುಷನಿಗೆ ಪ್ರಾರ್ಥನೆ ಸಲ್ಲಿಸುತ್ತಿರುವಾಗಲೇ ಪ್ರಭುವು ನೀರಿನಿಂದ ಮಾಯವಾದನು. ಮತ್ತೆ ಆಶ್ಚರ್ಯಗೊಂಡ ಅಕ್ರೂರನು ರಥದ ಬಳಿಗೆ ಬಂದನು. ಅವನನ್ನು ಕುರಿತು ಕೃಷ್ಣನು ನೀರಿನಲ್ಲಾಗಲೀ, ಆಕಾಶದಲ್ಲಾಗಲಿ ಅಕ್ರೂರನು ಏನಾದರೂ ಆಶ್ಚರ್ಯಕರವಾದುದನ್ನು ಕಂಡನೇ ಎಂದು ಕೇಳಿದನು.
ಅಕ್ರೂರನು ”ಪ್ರಿಯ ಪ್ರಭುವೇ! ನಾನು ನಿನ್ನನ್ನು ನೋಡಿದ ಮೇಲೆ ಎಂಥ ಬೆರಗುಗೊಳಿಸುವ ಸಂಗತಿಗಳನ್ನು ಕಂಡಿಲ್ಲ!” ಎಂದನು. ಅನಂತರ ಅಕ್ರೂರನು ರಥವನ್ನು ಮುಂದೆ ಓಡಿಸಿದನು. ದಿನ ಮುಗಿಯುವ ಹೊತ್ತಿಗೆ ಅವರು ಮಥುರೆಯ ಹೊರ ಪ್ರದೇಶವನ್ನು ತಲಪಿದ್ದರು. ಕೃಷ್ಣ ಮತ್ತು ಬಲರಾಮರು ವೃಂದಾವನದಿಂದ ಮಥುರೆಗೆ ಪ್ರಯಾಣ ಮಾಡುತ್ತಿದ್ದಾಗ ಅವರನ್ನು ಕಂಡವರೆಲ್ಲ ಮತ್ತೆ ಮತ್ತೆ ಅವರನ್ನು ನೋಡದಿರಲು ಸಾಧ್ಯವಿರಲಿಲ್ಲ.
ಈ ಮಧ್ಯೆ, ನಂದ ಮತ್ತು ಉಪನಂದರ ನಾಯಕತ್ವದಲ್ಲಿ ಹೊರಟ ಇತರ ನಿವಾಸಿಗಳು ಕಾಡು ನದಿಗಳನ್ನು ದಾಟಿ ಆಗಲೇ ಮಥುರೆಯನ್ನು ತಲಪಿದ್ದರು. ಅವರು ಕೃಷ್ಣ ಮತ್ತು ಬಲರಾಮರಿಗಾಗಿ ಕಾಯುತ್ತಿದ್ದರು. ಮಥುರೆಯ ಬಾಗಿಲನ್ನು ತಲಪಿದಾಗ ಕೃಷ್ಣ ಮತ್ತು ಬಲರಾಮರು ರಥದಿಂದ ಇಳಿದು ಅಕ್ರೂರನ ಕೈಗಳನ್ನು ಕುಲುಕಿದರು.

“ನೀನು ಈಗ ಮನೆಗೆ ಹೋಗಬಹುದು. ಏಕೆಂದರೆ ನಾವು ನಮ್ಮ ಸಂಗಾತಿಗಳೊಂದಿಗೆ ಮಥುರೆಯನ್ನು ಪ್ರವೇಶಿಸುತ್ತೇವೆ” ಎಂದು ಕೃಷ್ಣನು ಅಕ್ರೂರನಿಗೆ ಹೇಳಿದನು. ಆಗ ಅಕ್ರೂರನು, “ನನ್ನ ಪ್ರೀತಿಯ ಪ್ರಭುವೇ, ನಾನು ಮಥುರೆಗೆ ನಿಮ್ಮನ್ನು ಬಿಟ್ಟು ಹೋಗಲಾರೆ. ನಾನು ನಿಮಗೆ ಶರಣಾಗತನಾದ ಸೇವಕ. ದಯವಿಟ್ಟು ನನ್ನ ಮನೆಗೆ ಬಂದು ಪಾವನಗೊಳಿಸು ಪ್ರಭುವೆ” ಎಂದನು.
ಆಗ ದೇವೋತ್ತಮ ಪರಮ ಪುರುಷನು, ಅಕ್ರೂರ, ನಾನು ನನ್ನ ಅಣ್ಣ ಬಲರಾಮನೊಂದಿಗೆ ನಿಶ್ಚಯವಾಗಿಯೂ ನಿನ್ನ ಮನೆಗೆ ಬರುತ್ತೇನೆ. ಆದರೆ ಅದು ಯದುಕುಲವನ್ನು ಕಂಡು ಅಸೂಯೆ ಪಡುವ ಎಲ್ಲ ಅಸುರರನ್ನು ಕೊಂದ ಆನಂತರ. ಹೀಗೆ ಮಾಡಿ ನಾನು ನನ್ನ ಬಂಧುಗಳಿಗೆ ಸಂತೋಷ ಉಂಟುಮಾಡುತ್ತೇನೆ ಎಂದನು.
ಪ್ರಭುವಿನ ಈ ಮಾತುಗಳಿಂದ ಅಕ್ರೂರನಿಗೆ ಸ್ವಲ್ಪ ನಿರಾಸೆಯಾದರೂ ಕೃಷ್ಣನ ಮಾತನ್ನೂ ಅವನು ಮೀರುವಂತಿರಲಿಲ್ಲ. ಆದುದರಿಂದ ಅವನು ಮಥುರೆಯನ್ನು ಪ್ರವೇಶಿಸಿ ಕಂಸನಿಗೆ ಕೃಷ್ಣನ ಆಗಮನದ ವಿಷಯ ತಿಳಿಸಿ ಅನಂತರ ತನ್ನ ಮನೆಗೆ ತೆರಳಿದನು.
ಅಕ್ರೂರನು ತೆರಳಿದ ಅನಂತರ ಕೃಷ್ಣ ಬಲರಾಮರು ಗೋಪಬಾಲರೊಂದಿಗೆ ಮಥುರಾನಗರವನ್ನು ನೋಡಲು ಹೊರಟರು. ಮಥುರೆಯ ಪ್ರವೇಶದ್ವಾರವನ್ನು ಸೊಗಸಾದ ಅಮೃತಶಿಲೆಯಿಂದ ಸುಂದರವಾಗಿ ನಿರ್ಮಿಸಿದ್ದರು. ಬಾಗಿಲುಗಳನ್ನು ಅಪ್ಪಟ ಚಿನ್ನದಿಂದ ಮಾಡಿದ್ದರು. ಸುತ್ತಲೂ ಜಾಜ್ವಲ್ಯಮಾನವಾದ ಉದ್ಯಾನಗಳಿದ್ದವು.
ಯಾವ ಶತ್ರುವೂ ಸುಲಭವಾಗಿ ಪ್ರವೇಶಿಸದಂತೆ ನಗರದ ಸುತ್ತಲೂ ಕಂದಕಗಳಿದ್ದವು. ರಸ್ತೆಗಳು ಸಂಧಿಸಿದ ಕಡೆಗಳಲ್ಲೆಲ್ಲ ಬಂಗಾರದಿಂದ ಅಲಂಕಾರ ಮಾಡಲಾಗಿತ್ತು. ಉಗ್ರಾಣಗಳನ್ನು ತಾಮ್ರ ಮತ್ತು ಹಿತ್ತಾಳೆಯಿಂದ ನಿರ್ಮಿಸಿದ್ದರು. ಅಲ್ಲಿ ಹಲವಾರು ಶ್ರೀಮಂತರ ಮನೆಗಳಿದ್ದವು. ಎಲ್ಲವೂ ಒಬ್ಬನೇ ಶಿಲ್ಪಿಯ ಯೋಜನೆಯೆಂಬಂತೆ ಒಂದೇ ವಿನ್ಯಾಸವನ್ನು ಹೊಂದಿದ್ದವು.
ಮನೆಗಳನ್ನು ಬೆಲೆ ಬಾಳುವ ಆಭರಣಗಳಿಂದ ಅಲಂಕರಿಸಿದ್ದರು. ಪ್ರತಿಯೊಂದು ಮನೆಗೂ ಮರಗಳು ಹಣ್ಣುಗಳು ಮತ್ತು ಹೂವುಗಳಿದ್ದ ಹೊರ ಆವರಣಗಳಿದ್ದವು. ಮೊಗಸಾಲೆಗಳನ್ನು, ವರಾಂಡಗಳನ್ನು ರೇಷ್ಮೆ, ಬಟ್ಟೆ, ಆಭರಣಗಳು ಮತ್ತು ಕಸೂತಿ ಕೆಲಸದಿಂದ ಅಲಂಕಾರ ಮಾಡಿದ್ದರು. ಉಪ್ಪರಿಗೆಗಳ ಹಾಗೂ ಕಿಟಕಿಗಳ ಮುಂದೆ ಮೆಲುವಾಗಿ ಧ್ವನಿ ಮಾಡುತ್ತಿದ್ದ ಪಾರಿವಾಳಗಳು ಮತ್ತು ನವಿಲುಗಳು ಓಡಾಡುತ್ತಿದ್ದವು. ಎಲ್ಲ ಮನೆಯ ಬಾಗಿಲುಗಳಿಗೆ ಎಳೆಯ ಮಾವಿನ ಎಲೆಗಳನ್ನೂ ರೇಷ್ಮೆಯ ತೋರಣಗಳನ್ನೂ ಕಟ್ಟಿದ್ದರು.
ಕೃಷ್ಣ ಮತ್ತು ಬಲರಾಮರು ಮಥುರೆಯನ್ನು ಪ್ರವೇಶಿಸಿದರು ಎಂಬ ಸುದ್ದಿ ಹಬ್ಬುತ್ತಲೇ ನಿವಾಸಿಗಳೆಲ್ಲ ಗುಂಪು ಸೇರಿದರು. ಮಹಿಳೆಯರು ಮತ್ತು ಯುವತಿಯರು ಅವರನ್ನು ನೋಡಲೆಂದು ಅವರ ಮನೆಯ ಮಹಡಿಗಳ ಮೇಲೆ ಹೋದರು. ಅವರೆಲ್ಲರೂ ಕೃಷ್ಣ ಮತ್ತು ಬಲರಾಮರ ಆಗಮನವನ್ನು ಬಹಳ ಕಾತರದಿಂದ ನಿರೀಕ್ಷಿಸುತ್ತಿದ್ದರು.
ಅವರು ಬಂದರೆಂಬ ಸುದ್ದಿ ತಿಳಿದ ಕೂಡಲೇ ಹೇಗಿದ್ದರೋ ಹಾಗೇ ಅವರನ್ನು ನೋಡಲು ಬಂದು ಬಿಟ್ಟರು. ಕೆಲವರಂತೂ ಸರಿಯಾಗಿ ಉಡುಪನ್ನೂ ಧರಿಸಿರಲಿಲ್ಲ. ಅವರು ಮಾಡುತ್ತಿದ್ದ ಕೆಲಸಗಳನ್ನು ಅರ್ಧಕ್ಕೇ ಬಿಟ್ಟು ಹಾಗೇ ಬಂದಿದ್ದರು. ಹಾಗೆ ಬಂದು ತಮ್ಮ ಮಹಡಿಯ ಮೇಲೆ ನಿಂತು ಅವರಿಬ್ಬರ ದರ್ಶನವಾದ ಕೂಡಲೆ ಅವರ ಹೃದಯವೆಲ್ಲಾ ನಿಂತು ಕೃಷ್ಣ ಬಲರಾಮರಿಂದ ತುಂಬಿಹೋಯಿತು.
ಅವ್ಯಕ್ತವಾದ ಆನ೦ದವನ್ನು ಅನುಭವಿಸಿ, ಅವರು ರೋಮಾಂಚನಗೊಂಡರು. ಕೃಷ್ಣನ ಲೀಲೆಗಳ ಬಗ್ಗೆ ಅವರು ಬಹಳವಾಗಿ ಕೇಳಿದ್ದರು. ಆದರೆ ಅವರನ್ನು ನೋಡಿರಲಿಲ್ಲ. ಇಂದೇ ಅವರನ್ನು ನೋಡಬೇಕೆಂಬ ಬಹುಕಾಲದ ಆಸೆ ಈಡೇರಿತ್ತು. ಹೀಗೆ ಅತೀವ ಆನಂದದಿಂದ ಪುಳಕಿತರಾದ ಮಥುರಾ ಮಹಿಳೆಯರು ಕೃಷ್ಣ ಬಲರಾಮರ ಮೇಲೆ ಪುಷ್ಪವೃಷ್ಟಿ ಮಾಡಿದರು.
ಹೀಗೆ ಈ ದಿವ್ಯ ಸಹೋದರರು ನಗರದ ಮುಖ್ಯ ಬೀದಿಗಳಲ್ಲಿ ಬರುತ್ತಿದ್ದಾಗ ನೆರೆಹೊರೆಯ ಬ್ರಾಹ್ಮಣರು ಶ್ರೀಗಂಧ ಮತ್ತು ಹೂಗಳನ್ನು ತೆಗೆದುಕೊಂಡು ಹೋಗಿ ಅವರನ್ನು ಗೌರವದಿಂದ ಸ್ವಾಗತಿಸಿದರು. ಮಥುರೆಯ ನಿವಾಸಿಗಳೆಲ್ಲಾ ವೃಂದಾವನದ ಜನರ ಉದಾತ್ತ ಮತ್ತು ಪುಣ್ಯ ಕಾರ್ಯಗಳನ್ನು ಕುರಿತು ಮಾತನಾಡತೊಡಗಿದರು.

ಕೃಷ್ಣ ಮತ್ತು ಬಲರಾಮರು ಹೀಗೆ ಹೋಗುತ್ತಿದ್ದಾಗ ಒಬ್ಬ ಮನುಷ್ಯನನ್ನು ನೋಡಿದರು. ಅವನು ಅಗಸ ಮತ್ತು ಬಟ್ಟೆಗಳಿಗೆ ಬಣ್ಣ ಹಾಕುವವನು. ಕೃಷ್ಣನು ಅವನನ್ನು ತನಗೆ ಕೆಲವು ಸೊಗಸಾದ ಬಟ್ಟೆಗಳನ್ನು ಕೊಡಬೇಕೆಂದು ಕೇಳಿಕೊಂಡನು. ಅತ್ಯಂತ ಸೊಗಸಾಗಿ ಬಣ್ಣ ಹಾಕಿದ ಬಟ್ಟೆಗಳನ್ನು ತನಗೆ ಕೊಟ್ಟರೆ ಅಗಸ ಸುಖವಾಗಿರುತ್ತಾನೆ ಮತ್ತು ಭಾಗ್ಯಶಾಲಿಯಾಗುತ್ತಾನೆ ಎಂದು ಆಶ್ವಾಸನೆ ನೀಡಿದನು.
ಕೃಷ್ಣನು ಭಿಕ್ಷುಕನೂ ಅಲ್ಲ. ಅವನಿಗೆ ಹೊಸ ಬಟ್ಟೆಗಳ ಅಗತ್ಯವೂ ಇಲ್ಲ. ಆದರೆ ಅಗಸನನ್ನು ಹೀಗೆ ಕೇಳುವುದರ ಮೂಲಕ ಕೃಷ್ಣನು ಬಯಸಿದುದನ್ನು ಕೊಡಲು ಪ್ರತಿಯೊಬ್ಬರೂ ಸಿದ್ಧವಿರಬೇಕು ಎಂದು ತೋರಿಸಿಕೊಟ್ಟನು. ಇದೇ ಕೃಷ್ಣಪ್ರಜ್ಞೆಯ ಮೂಲತತ್ತ್ವ.
ದುರದೃಷ್ಟವಶಾತ್ ಆ ಅಗಸನು ಕಂಸನ ಸೇವಕ. ಆದ್ದರಿಂದ ದೇವೋತ್ತಮ ಪರಮ ಪುರುಷ ಕೃಷ್ಣನು ಕೇಳಿದುದರ ಮಹತ್ವ ಅವನಿಗೆ ಅರ್ಥವಾಗಲಿಲ್ಲ. ಕೆಟ್ಟ ಸಹವಾಸದ ಫಲವಿದು. ಆ ಮೂರ್ಖ ಅಗಸನು ಕೂಡಲೆ ಕೋಪಿಸಿಕೊಂಡು ಪ್ರಭುವಿಗೆ ಬಟ್ಟೆಗಳನ್ನು ಕೊಡಲು ನಿರಾಕರಿಸಿದನು.
ರಾಜನಿಗಾಗಿ ಸಿದ್ಧಪಡಿಸಿದ ಉಡುಪನ್ನು ನೀನು ಹೇಗೆ ಕೇಳುತ್ತೀಯ? ಇನ್ನು ಮುಂದೆ ರಾಜನಿಗೆ ಸೇರಿದ ವಸ್ತುಗಳು ಬೇಕೆಂದು ಕೇಳುವಷ್ಟು ತಲೆಹರಟೆ ಮಾಡಬೇಡಿ. ಅಂಥವರಿಗೆ ಇಲ್ಲಿ ಕಠಿಣ ಶಿಕ್ಷೆಯಾಗುತ್ತದೆ” ಎಂದು ಎಚ್ಚರಿಸಿದನು.
ಈ ಮಾತನ್ನು ಕೇಳಿದ ಕೃಷ್ಣನಿಗೆ ಅಗಸನ ವಿಷಯದಲ್ಲಿ ಸಿಟ್ಟು ಬಂದಿತು. ಅವನು ತನ್ನ ಮುಂಗೈಯಿಂದ ಒಂದು ಪೆಟ್ಟುಕೊಟ್ಟು ಅವನ ರುಂಡದಿಂದ ದೇಹವನ್ನು ಬೇರ್ಪಡಿಸಿದ. ಸತ್ತ ಅಗಸನ ದೇಹ ನೆಲದ ಮೇಲೆ ಬಿದ್ದಿತು. ಈ ಘೋರ ಘಟನೆಯನ್ನು ಕಂಡ ಅಗಸನ ನೌಕರರು ಬಟ್ಟೆಗಳನ್ನು ಅಲ್ಲೇ ಬಿಟ್ಟು ಓಡಿ ಹೋದರು.
ಕೃಷ್ಣ ಬಲರಾಮರು ಅವುಗಳನ್ನು ತೆಗೆದುಕೊಂಡು ತಮಗೆ ಬೇಕಾದಂತೆ ಅವುಗಳನ್ನು ಧರಿಸಿದರು. ಉಳಿದ ಬಟ್ಟೆಗಳನ್ನು ಗೋಪಬಾಲರಿಗೆ ಕೊಟ್ಟರು. ಅವರೂ ತಮಗೆ ಬೇಕಾದ ಉಡುಪನ್ನು ಧರಿಸಿ ಮಿಕ್ಕಿದ್ದನ್ನು ಅಲ್ಲಿಯೇ ಬಿಟ್ಟರು. ಹೀಗೆ ಉಡುಪುಗಳನ್ನು ಧರಿಸಿದ ಅವರು ಮುಂದೆ ಸಾಗಿದರು.
ಈ ಮಧ್ಯೆ ಕೃಷ್ಣನ ಭಕ್ತನಾದ ದರ್ಜಿಯೊಬ್ಬನು ಸೇವೆಗೆ ಈ ಅವಕಾಶವನ್ನು ಬಳಸಿಕೊಂಡು ಕೆಲವು ಸೊಗಸಾದ ಬಟ್ಟೆಗಳನ್ನು ತೆಗೆದುಕೊಂಡು ಕೃಷ್ಣ ಮತ್ತು ಬಲರಾಮರಿಗೆ ಒಳ್ಳೆಯ ಉಡುಪುಗಳನ್ನು ಸಿದ್ಧಪಡಿಸಿದ. ಇದರಿಂದ ಸಂತೋಷಗೊಂಡ ಕೃಷ್ಣನು ಆ ದರ್ಜಿಗೆ ಸಾರೂಪ್ಯ ಮುಕ್ತಿಯನ್ನು ಅನುಗ್ರಹಿಸಿದನು.
ಹೀಗೆಂದರೆ ದೇಹವನ್ನು ಬಿಟ್ಟನಂತರ ದರ್ಜೆಗೆ ಮುಕ್ತಿ ದೊರೆತು ವೈಕುಂಠ ಲೋಕಗಳಲ್ಲಿ ಚತುರ್ಭುಜನಾಗಿ ನಾರಾಯಣನ ದೇಹದಂತಹ ದೇಹವನ್ನು ಪಡೆಯುವನು ಎಂದರ್ಥ. ಹಾಗೆಯೇ ಕೃಷ್ಣನು ದರ್ಜಿಯು ಇಂದ್ರಿಯ ತೃಪ್ತಿ ಪಡೆಯಲು ಅಗತ್ಯವಾದಷ್ಟು ಶ್ರೀಮಂತಿಕೆಯನ್ನೂ ಕೊಟ್ಟನು. ಈ ಪ್ರಕರಣದಿಂದ ಕೃಷ್ಣ ಪ್ರಜ್ಞೆ ಇರುವವರಿಗೆ ಭೌತಿಕ ಸುಖವಾಗಲಿ, ಆಧ್ಯಾತ್ಮಿಕ ಸುಖವಾಗಲಿ ಸಿಗದೆ ಹೋಗುವುದಿಲ್ಲ ಎಂದು ತಿಳಿದು ಬರುತ್ತದೆ.
ಹೀಗೆ ಸುಂದರ ವೇಷ ಧರಿಸಿದವರಾಗಿ ಕೃಷ್ಣ ಬಲರಾಮರು ಸುದಾಮ ಎನ್ನುವ ಹೂವಾಡಿಗನ ಬಳಿಗೆ ಹೋದರು. ಅವರಿನ್ನೂ ಅವನ ಮನೆಯ ಬಳಿ ಬರುತ್ತಿದ್ದಂತೆ ಹೂವಾಡಿಗನು ಬಹು ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರ ಮಾಡಿ ತನ್ನ ಭಕ್ತಿ ಪೂರ್ವಕ ಪ್ರಣಾಮಗಳನ್ನು ಸಲ್ಲಿಸಿದನು. ಕೃಷ್ಣ ಮತ್ತು ಬಲರಾಮರಿಗೆ ಒಳ್ಳೆಯ ಪೀಠಗಳನ್ನು ಕೊಟ್ಟು ಚಂದನವನ್ನು ಲೇಪಿಸಿದ ಹೂವುಗಳನ್ನು, ಎಲೆ ಅಡಿಕೆಯನ್ನೂ ತರುವಂತೆ ತನ್ನ ಸಹಾಯಕರಿಗೆ ಅಪ್ಪಣೆ ಮಾಡಿದನು.
ಅನಂತರ ಅವನು ಕೃಷ್ಣನಿಗೆ ವಿಧವಿಧವಾದ ಉಡುಗೊರೆಗಳನ್ನು ನೀಡಿ ಭಕ್ತಿಯಿಂದ ಎಲ್ಲರಿಗೂ ಒಳ್ಳೆಯದನ್ನು ಮಾಡುವಂತೆ ಪ್ರಾರ್ಥಿಸಿದನು. ಹೂವಾಡಿಗನ ವಿಷಯದಲ್ಲಿ ಸಂತೋಷಗೊಂಡ ಪ್ರಭುವು ಅವನು ಬಯಸಿದುದನ್ನೆಲ್ಲಾ ನೀಡಿದ್ದು ಮಾತ್ರವಲ್ಲದೆ ಪ್ರಾಪಂಚಿಕ ಶ್ರೀಮಂತಿಕೆ, ಸಂಸಾರ ಅಭ್ಯುದಯ, ದೀರ್ಘಾಯುಸ್ಸು ಹಾಗೂ ಭೌತಿಕ ಜಗತ್ತಿನಲ್ಲಿ ಅವನು ಬಯಸಿದುದನ್ನೆಲ್ಲಾ ನೀಡಿದನು.

ಇದರಿಂದ ಭಕ್ತನಾದವನು ಕೇವಲ ತನ್ನ ಒಳಿತಿನ ಬಗ್ಗೆ ಮಾತ್ರ ಚಿಂತಿಸದೆ ಇತರರ ಯೋಗಕ್ಷೇಮವನ್ನು ಬಯಸಬೇಕು. ಇದರಿಂದ ಪ್ರಭುವು ಸಂತಸಗೊಳ್ಳುತ್ತಾನೆ ಎಂದು ತಿಳಿದು ಬರುತ್ತದೆ.
ಹೂವಾಡಿಗನ ಮನೆಯನ್ನು ಬಿಟ್ಟು ಹೊರಟನಂತರ ತೇಯ್ದ ಶ್ರೀಗಂಧದ ತಟ್ಟೆಯನ್ನು ಬೀದಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಗೂನು ಬೆನ್ನಿನ ತರುಣಿಯನ್ನು ಕೃಷ್ಣ ಮತ್ತು ಬಲರಾಮರು ನೋಡಿದರು. ಕೃಷ್ಣನು ಎಲ್ಲ ಸಂತೋಷಗಳ ಆಗರವಾದ್ದರಿಂದ ಗೂನುಬೆನ್ನಿನ ಹೆಂಗಸನ್ನು ತಮಾಷೆಮಾಡಿ ತನ್ನ ಗೆಳೆಯರನ್ನೂ ಖುಷಿ ಪಡಿಸಬೇಕೆಂದು ಬಯಸಿದನು.
ಅವಳನ್ನು ಕುರಿತು ಕೃಷ್ಣನು ಹೀಗೆಂದನು : ಎತ್ತರವಾಗಿರುವ ಸ್ತ್ರೀಯೇ, ನೀನು ಯಾರು? ನೀನು ಈ ಶ್ರೀಗಂಧವನ್ನು ಯಾರಿಗೋಸ್ಕರ ತೆಗೆದುಕೊಂಡು ಹೋಗುತ್ತಿರುವೆ ಹೇಳು? ನೀನು ಈ ಶ್ರೀಗಂಧವನ್ನು ನನಗೆ ಕೊಡಬೇಕೆಂದೆನಿಸುತ್ತದೆ. ಹಾಗೆ ಮಾಡಿದಲ್ಲಿ ನೀನು ಅದೃಷ್ಟವಂತಳಾಗುವೆ” ಎಂದನು.
ಕೃಷ್ಣನು ದೇವೋತ್ತಮ ಪರಮ ಪುರುಷ ಅವನಿಗೆ ಗೂನು ಬೆನ್ನಿನವಳ ವಿಷಯ ತಿಳಿದಿತ್ತು. ರಾಕ್ಷಸ ಸೇವೆ ಮಾಡಿ ಫಲವಿಲ್ಲ. ಕೃಷ್ಣ ಮತ್ತು ಬಲರಾಮರ ಸೇವೆ ಮಾಡಿ ಪಾಪಕರ್ಮಗಳನ್ನು ಕಳೆದುಕೊಳ್ಳುವುದು ಉತ್ತಮ ಎಂದು ಕೃಷ್ಣನು ತನ್ನ ಪ್ರಶ್ನೆಯ ಮೂಲಕ ಸೂಚಿಸಿದ್ದನು.
ಆಗ ಸ್ತ್ರೀಯು ಕೃಷ್ಣನಿಗೆ ಹೀಗೆ ನುಡಿದಳು : “ಪ್ರಿಯ ಶ್ಯಾಮಸುಂದರ ನಾನು ಕಂಸನ ಸೇವಕಿ ಎಂದು ನೀನು ತಿಳಿದಿರಬಹುದು. ನಾನು ಪ್ರತಿನಿತ್ಯವೂ ಅವನಿಗೆ ಶ್ರೀಗಂಧವನ್ನು ತೆಗೆದುಕೊಂಡು ಹೋಗಿ ಕೊಡುತ್ತೇನೆ. ಇದರಿಂದ ಆ ರಾಜನಿಗೇನೋ ಸಂತೋಷವಾಗುತ್ತಿದೆ. ಆದರೆ ಈಗ ಈ ಶ್ರೀಗಂಧವನ್ನು ಸ್ವೀಕರಿಸಲು ನೀವು ಅಣ್ಣ ತಮ್ಮಂದಿರಿಗಿಂತ ಬೇರೆ ಯಾರೂ ಯೋಗ್ಯರಾದವರು ಇಲ್ಲ ಎಂದು ನನಗೆ ಅರ್ಥವಾಗುತ್ತಿದೆ.
ಕೃಷ್ಣ ಮತ್ತು ಬಲರಾಮರ ಸ್ಪುರದ್ರೂಪಕ್ಕೆ ಮನಸೋತ ಆ ಗೂನು ಬೆನ್ನಿನ ಯುವತಿ ಸಂತೋಷ ಮತ್ತು ಭಕ್ತಿಯಿಂದ ಅವರ ಶರೀರಗಳಿಗೆ ಶ್ರೀಗಂಧವನ್ನು ಲೇಪಿಸಿದಳು. ಆಗಲೇ ಅವರು ಕಂಸನ ಬೆಲೆಬಾಳುವ ವರ್ಣರಂಜಿತ ಉಡುಪುಗಳನ್ನು ಪಡೆದಿದ್ದರು. ಈಗ ಅವನಿಗೆ ಸೇರಬೇಕಾದ ಅತ್ಯುತ್ತಮ ಶ್ರೀಗಂಧವನ್ನು ತಾವೇ ತೆಗೆದುಕೊಂಡರು.
ಅವಳ ಈ ನಿಷ್ಕಲ್ಮಷ ಸೇವೆಯಿಂದ ಸುಪ್ರೀತನಾದ ಕೃಷ್ಣ ಅವಳಿಗೆ ಕೊಡಬಹುದಾದ ಶ್ರೇಷ್ಠ ಕೊಡುಗೆಯೇನು ಎಂದು ಯೋಚಿಸತೊಡಗಿದನು. ಅವನು ಗೂನುಬೆನ್ನಿನ ಯುವತಿಯ ಪಾದವನ್ನು ತನ್ನ ಕಾಲ್ಪೆರಳುಗಳಿಂದ ಒತ್ತಿದನು. ಅವಳ ಕೆನ್ನೆಗಳನ್ನು ತನ್ನ ಬೆರಳುಗಳಿಂದ ಹಿಡಿದು ತಟ್ಟನೆ ಎಳೆದನು.
ಇದರಿಂದ ಅವಳ ಗೂನು ಬೆನ್ನು ಸರಿಹೋಯಿತಲ್ಲದೆ ಪ್ರಭುವಿನ ಸ್ಪರ್ಶದಿಂದಾಗಿ ಅವಳು ಬಹಳ ಸುಂದರ ಯುವತಿಯಾದಳು. ಕೃಷ್ಣನನ್ನು ಸೇವಿಸುವುದರಿಂದ ಭಕ್ತನು ಕೂಡಲೇ ಅತ್ಯುನ್ನತ ಸ್ಥಾನಕ್ಕೆ ಏರುತ್ತಾನೆ ಎನ್ನುವುದನ್ನು ಈ ಪ್ರಸಂಗವು ತೋರಿಸುತ್ತದೆ. ಗೂನು ಬೆನ್ನಿನ ಯುವತಿಯಿಂದ ಕೃಷ್ಣನು ಆಕರ್ಷಿತನಾದುದಕ್ಕೆ ಕಾರಣ ಅವಳ ಸೌಂದರ್ಯವಲ್ಲ. ಅವಳ ಸೇವೆ. ಅವಳು ಕೃಷ್ಣನ ಸೇವೆ ಸಲ್ಲಿಸುತ್ತಲೇ ಅತ್ಯಂತ ಲಾವಣ್ಯವತಿಯಾದಳು.
ಕೃಷ್ಣನ ಕೃಪೆಯಿಂದ ಹೆಂಗಸು ಅತ್ಯಂತ ಸುಂದರ ತರುಣಿಯಾದಾಗ ಸಹಜವಾಗಿ ಅವಳಿಗೆ ಕೃಷ್ಣನಲ್ಲಿ ಕೃತಜ್ಞತೆಯುಂಟಾಯಿತು. ಅವನ ಸೌಂದರ್ಯವು ಅವಳನ್ನಾಕರ್ಷಿಸಿತು. ಅವಳು ಬಿಚ್ಚು ಮನಸ್ಸಿನಿಂದ ಕೃಷ್ಣನಿಗೆ ಹೀಗೆಂದಳು, ”ನನ್ನ ಪ್ರಿಯ ವೀರ, ನೀನು ನನ್ನ ಮನೆಗೆ ಬರಬೇಕು. ನೀನು ಪುರುಷ ಶ್ರೇಷ್ಠನು.
ನಿನ್ನನ್ನು ನಾನು ಸರಿಯಾದ ರೀತಿಯಲ್ಲಿ ಸತ್ಕರಿಸಬೇಕು”. ತನ್ನ ಅಣ್ಣ ಬಲರಾಮನೂ ಜೊತೆಗಿದ್ದುದರಿಂದ ಅವಳ ಮಾತುಗಳಿಂದ ಶ್ರೀಕೃಷ್ಣನು ಸಂಕೋಚಗೊಂಡನು. ಅವನು ಮುಗುಳ್ಳಗುತ್ತಾ” ಪ್ರಿಯ ಸುಂದರ ತರುಣಿ, ನಿನ್ನ ಆಹ್ವಾನದಿಂದ ನನಗೆ ಬಹಳ ಸಂತೋಷವಾಗಿದೆ. ಇಲ್ಲಿ ನಾನು ಇನ್ನೊಂದು ಕೆಲಸವನ್ನು ಮುಗಿಸಿಕೊಂಡು ನಿನ್ನ ಮನೆಗೆ ಬರಬೇಕು” ಎಂದು ತನ್ನ ಮಧುರ ಮಾತುಗಳಿಂದ ಆ ತರುಣಿಯನ್ನು ಸಮಾಧಾನಗೊಳಿಸಿದನು.
ಅಲ್ಲಿಂದ ಅವರು ಹೊರಟು ಪೇಟೆಯ ಕಡೆಗೆ ಹೋದರು. ಅಲ್ಲಿ ಹಲವಾರು ಪುರಜನರು ಬಗೆ ಬಗೆಯ ಉಡುಗೊರೆಗಳನ್ನು ಮುಖ್ಯವಾಗಿ ತಾಂಬೂಲ, ಹೂವುಗಳು, ಹಾಗೂ ಶ್ರೀಗಂಧವನ್ನಿಟ್ಟುಕೊಂಡು ಅವರನ್ನು ಸ್ವಾಗತಿಸಲು ಸಿದ್ಧವಾಗಿದ್ದರು.
ಕಂಸನು ಧನುರ್ಯಜ್ಞ ಎಂಬ ಒಂದು ದೊಡ್ಡ ಯಜ್ಞವನ್ನು ಏರ್ಪಡಿಸಿದ್ದನು. ಅದರ ಸ್ಥಳವನ್ನು ಸೂಚಿಸಲು ಬಲಿಪೀಠದ ಬಳಿ ಒಂದು ದೊಡ್ಡ ಬಿಲ್ಲನ್ನು ಇರಿಸಿದ್ದನು. ಅದು ಬಹಳ ದೊಡ್ಡದಾಗಿಯೂ ಅದ್ಭುತವಾಗಿಯೂ ಇತ್ತಲ್ಲದೆ ಕಾಮನಬಿಲ್ಲನ್ನು ಹೋಲುತ್ತಿತ್ತು. ಯಜ್ಞ ಶಾಲೆಯಲ್ಲಿ ಕಂಸನು ನೇಮಿಸಿದ್ದ ಅನೇಕ ರಕ್ಷಕರು ಬಿಲ್ಲನ್ನು ರಕ್ಷಿಸಿದ್ದರು.

ಕೃಷ್ಣ ಬಲರಾಮರು ಆ ಬಿಲ್ಲಿನ ಬಳಿಗೆ ಹೋದಾಗ ಕಂಸನ ರಕ್ಷಕರು ಅದರ ಬಳಿಗೆ ಹೋಗಬೇಡಿರೆಂದು ಎಚ್ಚರಿಕೆ ಕೊಟ್ಟರು. ಆದರೆ ಕೃಷ್ಣನು ಅವರನ್ನು ಅಲಕ್ಷಿಸಿದನು. ಅವನು ಬಲಾತ್ಕಾರದಿಂದ ಮುಂದೆ ಹೋಗಿ ಬಿಲ್ಲನ್ನು ಎಡಗೈಯಲ್ಲಿ ತೆಗೆದುಕೊಂಡನು. ಜನರೆಲ್ಲರೂ ಇದನ್ನು ಅಚ್ಚರಿಯಿಂದ ನೋಡುತ್ತಿದ್ದಂತೆ ಅವನು ಬಿಲ್ಲಿಗೆ ಹೆದೆಯೇರಿಸಿ ಆನೆಯು ಕಬ್ಬಿನ ಜಲ್ಲೆಯನ್ನು ಮುರಿಯುವಷ್ಟೇ ಸುಲಭವಾಗಿ ಬಿಲ್ಲನ್ನು ಮಧ್ಯಭಾಗದಲ್ಲಿ ಎರಡು ಭಾಗವಾಗಿ ಮುರಿದನು.
ಅಲ್ಲಿದ್ದವರೆಲ್ಲ ಕೃಷ್ಣನ ಶಕ್ತಿಯನ್ನು ಮೆಚ್ಚಿಕೊಂಡರು. ಬಿಲ್ಲನ್ನು ಮುರಿದ ಶಬ್ದವು ಭೂಮಿ ಆಕಾಶವನ್ನು ತುಂಬಿತ್ತು. ಅದು ಕಂಸನಿಗೂ ಕೇಳಿಸಿತು. ನಡೆದ ಸಂಗತಿಯನ್ನು ಕೇಳಿದಾಗ ಅವನಿಗೆ ಪ್ರಾಣಭಯವಾಯಿತು. ಅಲ್ಲಿಯೇ ನಿಂತು ಇದನ್ನು ನೋಡುತ್ತಿದ್ದ ಬಿಲ್ಲು ರಕ್ಷಕನಿಗೂ ಕೃಷ್ಣನು ಬಿಲ್ಲನ್ನು ಮುರಿದಿದ್ದರಿಂದ ಕೋಪ ಬಂದಿತ್ತು.
“ಅವನನ್ನು ಬಂಧಿಸಿ ಅವನನ್ನು ಕೊಲ್ಲಿ ಅವನನ್ನು ಕೊಲ್ಲಿ!’ ಎಂದು ಕೂಗುತ್ತಾ ರಕ್ಷಕರು ಅವನ ಕಡೆಗೆ ಓಡಿದರು. ಅವರೆಲ್ಲರೂ ತಮ್ಮನ್ನು ಸುತ್ತುವರಿದುದನ್ನು ಕಂಡ ಕೃಷ್ಣ ಬಲರಾಮರಿಗೂ ಕೋಪ ಬಂದಿತು.
ಮುರಿದ ಬಿಲ್ಲಿನ ಎರಡು ಭಾಗಗಳನ್ನು ತೆಗೆದುಕೊಂಡು ರಕ್ಷಕನ ಕಡೆಯವರನ್ನು ಹೊಡೆದೋಡಿಸಲು ಅವರು ಪ್ರಾರಂಭಿಸಿದರು. ಈ ಗದ್ದಲವು ಆರಂಭವಾಗಲು ರಕ್ಷಕರ ನೆರವಿಗೆ ಕಂಸನು ಕೆಲವು ಸೈನಿಕರನ್ನು ಕಳುಹಿಸಿಕೊಟ್ಟನು. ಆದರೆ ಕೃಷ್ಣ ಬಲರಾಮರು ಅವರೊಡನೆಯೂ ಹೋರಾಡಿ ಕೊಂದು ಹಾಕಿದರು.
ಇದಾದ ಅನಂತರ ಕೃಷ್ಣ ಬಲರಾಮರು ಮುಖ್ಯ ದ್ವಾರದ ಮೂಲಕ ಹೊರಬಂದು ತಮ್ಮ ವಿಶ್ರಾಂತಿ ಶಿಬಿರದೆಡೆಗೆ ಹೊರಟರು. ಹಾಗೆ ಹೋಗುವಾಗಲೂ ಮಥುರೆಯ ಹಲವಾರು ಸುಂದರ ಸ್ಥಳಗಳನ್ನು ಕಂಡು ಸಂತೋಷಪಟ್ಟರು. ಕೃಷ್ಣ ಮತ್ತು ಬಲರಾಮರ ಸಾಹಸಗಳು ಆಗಲೇ ನಗರದಲ್ಲೆಲ್ಲಾ ಹರಡಿ ಅಲ್ಲಿನ ಇಡೀ ಜನತೆ ಇವರು ಅಸಾಮಾನ್ಯ ದೇವತೆಗಳೆಂದು ತಿಳಿದರು.
ಇಬ್ಬರು ಸಹೋದರರು ಕಂಸನು ಶಿಸ್ತಿಗಾಗಿ ಮಾಡಿದ ವ್ಯವಸ್ಥೆಯನ್ನೆಲ್ಲಾ ನಿರ್ಲಕ್ಷಿಸಿ ಸ್ವಚ್ಛೆಯಿಂದ ಮಥುರೆಯಲ್ಲಿ ತಿರುಗಾಡಿದರು. ಸೂರ್ಯಾಸ್ತವಾಗುವ ವೇಳೆಗೆ ಕೃಷ್ಣ ಬಲರಾಮರು ಹಾಗೂ ಗೋಪಬಾಲರು ಊರ ಹೊರಗೆ ತಮ್ಮ ಎತ್ತಿನ ಗಾಡಿಗಳನ್ನು ನಿಲ್ಲಿಸಿದ ಸ್ಥಳಕ್ಕೆ ಹೊರಟರು. ನಿಶ್ಚಯವಾಗಿಯೂ ಅವರು ಮಾರನೆಯ ದಿನ ಯಜ್ಞದಲ್ಲಿ ಕಂಸನು ಎದುರಿಸಬೇಕಾದ ಅಪಾಯದ ಮುನ್ಸೂಚನೆ ನೀಡಿದ್ದರು.
ಇತ್ತ ಕಂಸನಿಗೆ ಕೃಷ್ಣನು ಅದ್ಭುತವಾದ ಧನುಸ್ಸನ್ನು ಮುರಿದು ರಕ್ಷಕರನ್ನೂ ಕೊಂದ ಸಂಗತಿಯು ತಿಳಿದಾಗ ದೇವೋತ್ತಮ ಪರಮ ಪುರುಷನ ಶಕ್ತಿಯು ಸ್ವಲ್ಪ ಮಟ್ಟಿಗೆ ಅರ್ಥವಾಯಿತು. ದೇವಕಿಯ ಎಂಟನೇ ಮಗನು ಕಾಣಸಿಕೊಂಡಿದ್ದಾನೆ, ತನ್ನ ಅಂತ್ಯಕಾಲವು ಬಂದಿದೆ ಎಂಬುದೂ ಅವನಿಗೆ ತಿಳಿಯಿತು.
ಸಮೀಪಿಸುತ್ತಿದ್ದ ತನ್ನ ಸಾವನ್ನು ಕುರಿತು ಯೋಚಿಸುತ್ತಾ ಅವನಿಗೆ ಇಡೀ ರಾತ್ರಿ ನಿದ್ದೆ ಬರಲಿಲ್ಲ. ಅವನಿಗೆ ಅನೇಕ ದುಃಸ್ವಪ್ನಗಳಾದವು. ದುಶಕುನಗಳಾದವು. ಕನ್ನಡಿಯಲ್ಲಿ ನೋಡಿಕೊಂಡರೆ ತಲೆಯಿದ್ದರೂ ಅವನಿಗೆ ತನ್ನ ತಲೆಯೇ ಕಾಣಲಿಲ್ಲ. ಆಕಾಶದ ನಕ್ಷತ್ರಗಳು ಎಲ್ಲ ಎರಡೆರಡಾಗಿ ತೋರಿದವು.
ತನ್ನ ನೆರಳಿನಲ್ಲಿ ರಂಧ್ರಗಳನ್ನು ಕಂಡ. ಕಿವಿಯಲ್ಲಿ ಝೇಂಕರಿಸುವ ಶಬ್ದವು ಕೇಳಿಸುತ್ತಿತ್ತು. ಅವನ ಮುಂದಿದ್ದ ಮರಗಳು ಬಂಗಾರದ ಮರಗಳಾಗಿ ಕಂಡವು. ಮಣ್ಣಿನಲ್ಲಾಗಲಿ ಕೆಮ್ಮಣ್ಣಿನಲ್ಲಾಗಲಿ ಅವನ ಹೆಜ್ಜೆಯ ಗುರುತುಗಳು ಕಾಣಿಸಲಿಲ್ಲ.
ಕನಸಿನಲ್ಲಿ ಹಲವು ಬಗೆಯ ಪ್ರೇತಗಳಿದ್ದ ರಥವನ್ನು ಕತ್ತೆಗಳು ಎಳೆಯುತ್ತಿದ್ದುದನ್ನು ಕಂಡನು. ಯಾರೋ ತನಗೆ ವಿಷವನ್ನು ಕೊಟ್ಟಂತೆಯೂ ತಾನು ಅದನ್ನು ಕುಡಿದಂತೆಯೂ ಭಾಸವಾಯಿತು. ಕೊರಳಲ್ಲಿ ಪುಷ್ಪ ಮಾಲೆಯನ್ನು ಧರಿಸಿ ಬೆತ್ತಲೆಯಾಗಿ ತಾನು ಹೋಗುತ್ತಿದ್ದಂತೆಯೂ, ತನ್ನ ದೇಹಕ್ಕೆ ಎಣ್ಣೆ ಲೇಪಿಸಿಕೊಳ್ಳುತ್ತಿದ್ದಂತೆಯೂ ಅವನಿಗೆ ಕನಸಾಯಿತು.
ಇದು ಶವಕ್ಕೆ ನಡೆಸುವ ಅಂತ್ಯ ಸಂಸ್ಕಾರ. ಇಂತಹ ಈ ಎಲ್ಲ ಚಿಹ್ನೆಗಳೂ ಕಂಸನಿಗೆ ತನ್ನ ಸಾವು ಖಚಿತ ಎಂಬುದನ್ನು ಸೂಚಿಸಿದ್ದವು. ಬೆಳಗಾಗುತ್ತಲೆ ಅವನು ಬಹಳ ಆತಂಕದಿಂದ ಆತುರಾತುರವಾಗಿ ಮಲ್ಲಯುದ್ಧಕ್ಕೆ ಏರ್ಪಾಡು ಮಾಡಿದ.






Leave a Reply