ಕೃಷ್ಣ ಮತ್ತು ಬ್ರಹ್ಮನ ಭೇಟಿ

ಒಮ್ಮೆ ಬ್ರಹ್ಮನು ಶ್ರೀ ಕೃಷ್ಣನ ಭೇಟಿಗಾಗಿ ದ್ವಾರಕೆಗೆ ಹೊರಟನು. ಬ್ರಹ್ಮನು ದ್ವಾರಕೆಯನ್ನು ತಲಪಿ ಕೃಷ್ಣನ ಅರಮನೆಯ ಬಳಿ ಬಂದಾಗ ದ್ವಾರಪಾಲಕನು ಬ್ರಹ್ಮನ ಆಗಮನದ ವಿಚಾರವನ್ನು ಕೃಷ್ಣನಿಗೆ ತಿಳಿಸಿದ. ಪರಮಾತ್ಮನಾಗಿ ಎಲ್ಲರಲ್ಲೂ ಹೃದಯಸ್ಥನಾಗಿರುವ ಶ್ರೀಕೃಷ್ಣನಿಗೆ ಬ್ರಹ್ಮನ ಭೇಟಿಯ ಉದ್ದೇಶ ಮೊದಲೇ ತಿಳಿದಿತ್ತು. ಬ್ರಹ್ಮನ ಆಗಮನದ ವಿಷಯವನ್ನು ತಿಳಿಸಿದ ದ್ವಾರಪಾಲಕನಿಗೆ ಶ್ರೀ ಕೃಷ್ಣನು “ನನ್ನನ್ನು ನೋಡಲು ಬಂದಿರುವಾತ ಯಾವ ಬ್ರಹ್ಮ?” ಎಂದು ಪ್ರಶ್ನಿಸಿದ. ದ್ವಾರಪಾಲಕನು ಬಾಗಿಲ ಬಳಿ ನಿಂತಿದ್ದ ಬ್ರಹ್ಮನ ಬಳಿಗೆ ಬಂದು, “ಬಂದಿರುವುದು ಯಾವ ಬ್ರಹ್ಮ? ಎಂದು ಪ್ರಭುಕೃಷ್ಣನು ಕೇಳುತ್ತಿದ್ದಾನೆ, ಏನು ಹೇಳಲಿ?” ಎಂದನು. ಈ ಪ್ರಶ್ನೆಯಿಂದ ದಿಙ್ಮೂಢನಾದ ಬ್ರಹ್ಮನು ಸಾವರಿಸಿಕೊಂಡು, “ನಾಲ್ವರು ಕುಮಾರರ ತಂದೆಯಾದ ಚತುರ್ಮುಖ ಬ್ರಹ್ಮ ಬಂದಿದ್ದಾನೆಂದು ಕೃಷ್ಣನಿಗೆ ತಿಳಿಸು” ಎಂದು ದ್ವಾರಪಾಲಕನಿಗೆ ಹೇಳಿದನು.

ದ್ವಾರಪಾಲಕನು ಇದನ್ನು ಕೃಷ್ಣನಿಗೆ ತಿಳಿಸಿದ್ದೂ, ಬ್ರಹ್ಮನನ್ನು ಅರಮನೆಯ ಒಳಕ್ಕೆ ಬಿಟ್ಟಿದ್ದೂ ಆಯಿತು. ಬ್ರಹ್ಮನು ಕೃಷ್ಣನ ಪಾದಾರವಿಂದಗಳಿಗೆ ನಮಿಸಿದ. ಬ್ರಹ್ಮನನ್ನು ಸಕಲ ಮರ್ಯಾದೆಗಳೊಂದಿಗೆ ಬರಮಾಡಿಕೊಂಡ ಶ್ರೀಕೃಷ್ಣ , “ಯಾವ ಕಾರ್ಯಾರ್ಥವಾಗಿ ಈ ಭೇಟಿ?” ಎಂಬುದಾಗಿ ಅವನನ್ನು ಪ್ರಶ್ನಿಸಿದ. ಇದನ್ನು ಕೇಳಿದ ಬ್ರಹ್ಮ “ನಾನು ಇಲ್ಲಿಗೆ ಬಂದಿರುವ ಉದ್ದೇಶವನ್ನು  ಅನಂತರ ತಿಳಿಸುವೆ. ಈಗ ನನ್ನನ್ನು ಒಂದು ಸಂಶಯ ಕಾಡುತ್ತಿದೆ. ನೀನು ದಯವಿಟ್ಟು ಆ ಸಂಶಯವನ್ನು ನಿವಾರಿಸಬೇಕು. `ನನ್ನನ್ನು ನೋಡಲು ಬಂದಿರುವುದು ಯಾವ ಬ್ರಹ್ಮ’ ಎಂದು ನೀನು ನಿನ್ನ ದ್ವಾರಪಾಲಕನನ್ನು ಕೇಳಿದೆಯಂತೆ. ನಾನೊಬ್ಬನಲ್ಲದೆ ಬೇರೆ ಬ್ರಹ್ಮರೂ ಇದ್ದಾರೆಯೇ ಹೇಗೆ?’ ಎಂದು ಬಿನ್ನವಿಸಿದನು.

ಬ್ರಹ್ಮನ ಈ ಮಾತನ್ನು ಕೇಳಿದ ಕೃಷ್ಣನು ನಸುನಕ್ಕು, ಬ್ರಹ್ಮನನ್ನು ತನ್ನ ಸಭಾಮಂಟಪಕ್ಕೆ ಕರೆದೊಯ್ದು ಉಚಿತವಾದ ಆಸನದಲ್ಲಿ ಕುಳ್ಳಿರಿಸಿ, ಸ್ವಲ್ಪ ಸಮಯ ಅಲ್ಲಿ ನಡೆಯುವ ವಿದ್ಯಮಾನಗಳನ್ನು ವೀಕ್ಷಿಸುವಂತೆ ತಿಳಿಸಿದ. ವಿವಿಧ ಬ್ರಹ್ಮಾಂಡಗಳ ಬೇರೆ ಬೇರೆ ಬ್ರಹ್ಮರನ್ನೆಲ್ಲಾ ತಾನಿದ್ದಲ್ಲಿಗೆ ಬರಮಾಡಿಕೊಂಡ. ಚತುರ್ಮುಖ ಬ್ರಹ್ಮ ನೋಡು ನೋಡುತ್ತಿದ್ದಂತೆಯೇ ಅನೇಕ ಬ್ರಹ್ಮರು ಬಂದು ಶ್ರೀ ಕೃಷ್ಣನಿಗೆ ಪಾದಾಭಿವಂದನೆ ಮಾಡಲು ಪ್ರಾರಂಭಿಸಿದರು. ಹಾಗೆ ಬಂದ ಬ್ರಹ್ಮರಲ್ಲಿ ಕೆಲವರು ಹತ್ತು ಮುಖಗಳನ್ನು ಹೊಂದಿದ್ದರೆ ಕೆಲವರಿಗೆ ಇಪ್ಪತ್ತು ಕೆಲವರಿಗೆ ಶತಮುಖಗಳು ಮತ್ತೆ ಕೆಲವರಿಗೆ ದಶಲಕ್ಷ ಮುಖಗಳು ಕೂಡಾ ಇದ್ದವು. ವಾಸ್ತವವಾಗಿ ಇದು ಎಲ್ಲಿಗೆ ಮುಟ್ಟಿತೆಂದರೆ,  ಕೃಷ್ಣನಿಗೆ ನಮಸ್ಕರಿಸುತ್ತಿದ್ದ ಬ್ರಹ್ಮರ ಸಂಖ್ಯೆಯನ್ನು ಎಣಿಸುವುದು ಕೂಡಾ ಚತುರ್ಮುಖ ಬ್ರಹ್ಮನಿಗೆ ಸಾಧ್ಯವಾಗದೆ ಹೋಯಿತು. ಬಳಿಕ ಬೇರೆ ಬೇರೆ ಬ್ರಹ್ಮಾಂಡಗಳ ದೇವತೆಗಳೆಲ್ಲಾ ಅಲ್ಲಿಗೆ ಬಂದು ಶ್ರೀಕೃಷ್ಣನಿಗೆ ಭಕ್ತಿಯಿಂದ ನಮಿಸಿದರು.

ಅಲ್ಲಿ ಸೇರಿದ ಅಗಣಿತವಾದ ಬ್ರಹ್ಮರು ಮತ್ತು ವಿವಿಧ ದೇವತೆಗಳ ಕಿರೀಟಗಳೆಲ್ಲವೂ ಆ ಮಹಾಸಭೆಯಲ್ಲಿ ಬೆಳಗುತ್ತಿದ್ದವು. ದೇವತೆಗಳ ಪ್ರಾರ್ಥನಾ ಘೋಷ ಆ ಸಭಾಭವನದಲ್ಲಿ ಭಾರಿ ನಿನಾದವನ್ನು ಮೂಡಿಸಿತು.

ಈ ಅದ್ಭುತ ಪ್ರದರ್ಶನವನ್ನು ನೋಡಿದ ಚತುರ್ಮುಖ ಬ್ರಹ್ಮನು `ತಾನು ಮದಗಜಗಳ ಸಮೂಹದಲ್ಲಿರುವ ಒಂದು ಸೊಳ್ಳೆ ಮಾತ್ರ’ ಎಂದು ಭಾವಿಸಿದ. ಶ್ರೀಕೃಷ್ಣನ ಅಮಿತ ಶಕ್ತಿಯನ್ನು ಲೆಕ್ಕಿಸುವುದು ಸಾಧ್ಯವೇ ಇಲ್ಲವೆಂದು ಅರಿತ ಚತುರ್ಮುಖ ಬ್ರಹ್ಮನು ಆ ಮಹಾಸಭೆಯ ಅನಂತರದ ವಿದ್ಯಮಾನಗಳನ್ನು ವೀಕ್ಷಿಸಿದ.

ದೇವತೆಗಳು, “ಪ್ರಿಯ ಪ್ರಭುವೇ, ನಿನ್ನ ಅಪಾರವಾದ ಕರುಣೆಯು ನಮ್ಮನ್ನಿಲ್ಲಿಗೆ ಬರಮಾಡಿಕೊಂಡಿದೆ. ನಮ್ಮಿಂದ ಆಗಬೇಕಾದ ಕಾರ್ಯವೇನಾದರೂ ಇದೆಯೇ? ಅಪ್ಪಣೆಯಾದಲ್ಲಿ ಅದನ್ನು ಈಗಲೇ ಮಾಡಿ ಮುಗಿಸುತ್ತೇವೆ”, ಎಂದು ಬಿನ್ನವಿಸಿಕೊಂಡರು. ಇದನ್ನು ಕೇಳಿದ ಶ್ರೀಕೃಷ್ಣ, “ಸದ್ಯದಲ್ಲಿ ನಿಮ್ಮಿಂದ ಆಗಬೇಕಾದ ಕಾರ್ಯ ಯಾವುದೂ ಇಲ್ಲ. ನಿಮ್ಮನ್ನೆಲ್ಲಾ ಒಂದು ಸಾರಿ ಒಟ್ಟಿಗೆ ನೋಡಬೇಕೆನ್ನಿಸಿತು. ನಿಮಗೆಲ್ಲಾ ಶುಭ ಕಾಮನೆಗಳು.  ಹೋಗಿ ಬನ್ನಿ. ಅಸುರರಿಗೆ ಅಂಜಬೇಡಿ” ಎಂದನು. “ನಿನ್ನ ಅನುಗ್ರಹದಿಂದಾಗಿ ಎಲ್ಲವೂ ಸುಗಮವಾಗಿಯೇ ಇವೆ. ಸದ್ಯದಲ್ಲಿ ಎಲ್ಲಿಯೂ ಗದ್ದಲ ಗಲಭೆಗಳಿಲ್ಲ. ನಿನ್ನ ಅವತಾರದಿಂದಾಗಿ ಅಮಂಗಳಕರವಾದವುಗಳು ಎಲ್ಲವೂ ಇಲ್ಲವಾಗಿವೆ”, ಎಂದು ಮತ್ತೆ ಬಿನ್ನವಿಸಿಕೊಂಡರು.

ಈ ಪ್ರಸಂಗದ ತರುವಾಯ ಬಂದಿದ್ದ ಬ್ರಹ್ಮರೆಲ್ಲರಿಗೂ ವಿದಾಯ ಹೇಳಿದ ಶ್ರೀಕೃಷ್ಣ ಎಲ್ಲರಿಗೂ ತಮ್ಮ ತಮ್ಮ ಬ್ರಹ್ಮಾಂಡಗಳಿಗೆ ತೆರಳಲು ಸೂಚಿಸಿದ. ಎಲ್ಲರ ನಿರ್ಗಮನದ ಅನಂತರ ಚತುರ್ಮುಖ ಬ್ರಹ್ಮನು ಶ್ರೀಕೃಷ್ಣನ ಪಾದಗಳಿಗೆರಗಿ, “ನಿನ್ನನ್ನು ಬಹು ಸಮರ್ಪಕವಾಗಿ ನಾನು ಬಲ್ಲೆನೆಂದು ಜನ ಹೇಳಿಕೊಳ್ಳುವುದೇನೋ ಸರಿ. ಆದರೆ, ನನ್ನ ಮಾತನ್ನು ಹೇಳುವುದಾದರೆ, ನೀನೆಷ್ಟು ಮಹಿಮಾವಂತನೆಂದು ಗ್ರಹಿಸಲು ಪ್ರಾರಂಭಿಸಲಿಕ್ಕೂ ನನ್ನಿಂದ ಸಾಧ್ಯವಾಗುತ್ತಿಲ್ಲ. ನನ್ನ ಗ್ರಹಿಕೆಗಳೂ ಹಾಗೂ ಅರ್ಥವಂತಿಕೆಯನ್ನು ಮೀರಿದವನು ನೀನಾಗಿರುವೆ. ನಿನ್ನ ವಿಷಯದಲ್ಲಿ ಮೊದಲು ನಾನೇನು ಆಲೋಚಿಸಿದ್ದೆನೋ ಅವೆಲ್ಲಾ ಹುಚ್ಚು ಯೋಚನೆಗಳು ಮಾತ್ರ” ಎಂದು ಭಕ್ತಿಯಿಂದ ಬಿನ್ನವಿಸಿಕೊಂಡನು.

ಇದನ್ನು ಆಲಿಸಿದ ಶ್ರೀ ಕೃಷ್ಣನು, ಚತುರ್ಮುಖ ಬ್ರಹ್ಮನನ್ನು ಕುರಿತು, “ನಿನಗೆ ವಹಿಸಿರುವ ಬ್ರಹ್ಮಾಂಡದ ವಿಸ್ತಾರ ಕೇವಲ ನಾಲ್ಕು ಸಾವಿರ ದಶಲಕ್ಷ ಮೈಲಿಗಳು ಮಾತ್ರ. ಐಹಿಕ ಜಗತ್ತಿನಲ್ಲಿ ಇದಕ್ಕಿಂತ ದಶಲಕ್ಷ ಪಟ್ಟು ಹಾಗೂ ಶತಲಕ್ಷ ಪಟ್ಟು ವಿಸ್ತಾರವಾದ ಅನೇಕ ಬ್ರಹ್ಮಾಂಡಗಳಿವೆ. ಅವುಗಳಲ್ಲಿ ಕೆಲವು ಲಕ್ಷ ಲಕ್ಷ ಕೋಟಿ ಮೈಲಿಗಳಷ್ಟು ವಿಸ್ತೀರ್ಣದಿಂದ ಕೂಡಿದೆ. ಚತುರ್ಮುಖ ಬ್ರಹ್ಮರು ಆ ಬ್ರಹ್ಮಾಂಡಗಳನ್ನು ನೋಡಿಕೊಳ್ಳಲು ಹೇಗಾದರೂ ಸಾಧ್ಯವಾದೀತು? ಆದ್ದರಿಂದ ಅಂತಹ ಬ್ರಹ್ಮಾಂಡಗಳ ಅಗತ್ಯಕ್ಕೆ ನನ್ನಂತಹ ಶಕ್ತಿವಂತರಾದ ಬ್ರಹ್ಮರನ್ನು ನೇಮಿಸಿದ್ದೇನೆ. ನೀನೀಗ ವೀಕ್ಷಿಸಿದ್ದು ನನ್ನ ಸೃಷ್ಟಿ ಶಕ್ತಿಯ ನಾಲ್ಕನೇ ಒಂದು ಭಾಗವಾದ ಐಹಿಕ ಸೃಷ್ಟಿಯ ತುಣುಕೊಂದನ್ನು ಮಾತ್ರ. ನನ್ನ ಆಧ್ಯಾತ್ಮಿಕ ಚಕ್ರಾಧಿಪತ್ಯ ನನ್ನ ಸೃಷ್ಟಿಯ ಕಾಲುಭಾಗವಿರುವ ಐಹಿಕ ಜಗತ್ತಿನ ಮೂರುಪಟ್ಟು ವಿಸ್ತಾರವಾಗಿದೆ.” ಎಂದು ಹೇಳಿದನು.

ಶ್ರೀ ಕೃಷ್ಣನಿಗೆ ಭಕ್ತಿಯಿಂದ ನಮಸ್ಕಾರಗಳನ್ನು ಸಮರ್ಪಿಸಿ ಅವನಿಂದ ಬೀಳ್ಕೊಂಡ ಚತುರ್ಮುಖ ಬ್ರಹ್ಮನಿಗೆ ಭಗವಂತನ “ಮುಕ್ಕಾಲು ಪಾಲು ಶಕ್ತಿ”ಯ ಮಾತಿನ ಅರ್ಥ ಚೆನ್ನಾಗಿಯೇ ಆಗಿತ್ತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi