ಆಧುನಿಕ ಸಮಾಜಕ್ಕೆ ಮಿದುಳೇ ಇಲ್ಲ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಸಿ. ಹೆನ್ನಿಸ್‌ ಅವರ ನಡುವೆ 1974 ರಲ್ಲಿ ಜಿನೀವಾದಲ್ಲಿ ನಡೆದ ಸಂವಾದ.

ಹೆನ್ನಿಸ್‌ : ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಸಾಮಾಜಿಕ ನ್ಯಾಯವನ್ನು ಪ್ರೋತ್ಸಾಹಿಸಲು ಮತ್ತು ಕಾರ್ಮಿಕರ ರಕ್ಷಣೆಯಲ್ಲಿ ಆಸಕ್ತಿ ಹೊಂದಿದೆ.

ಶ್ರೀಲ ಪ್ರಭುಪಾದ : ಪ್ರಕೃತಿಯ ವ್ಯವಸ್ಥೆಯಂತೆ ಸಾಮಾಜಿಕ ದೇಹದಲ್ಲಿ ನಾಲ್ಕು ಭಾಗಗಳಿವೆ : ಮಾರ್ಗದರ್ಶನಕ್ಕೆ ಮಿದುಳು, ರಕ್ಷಣೆಗೆ ಬಾಹುಗಳು, ಪೋಷಣೆಗೆ ಉದರ ಮತ್ತು ಸಹಾಯಕ್ಕಾಗಿ ಕಾಲುಗಳು. ಅವುಗಳಲ್ಲಿ ಪ್ರತಿಯೊಂದೂ ಸಾಮಾಜಿಕ ದೇಹದ ನಿರ್ವಹಣೆಗೆಂದು ಇರುವುದು ಮತ್ತು ಇಡೀ ದೇಹ ಇರುವುದು ಅವುಗಳಲ್ಲಿ ಪ್ರತಿಯೊಂದನ್ನೂ ನಿರ್ವಹಿಸಲು. ಆದರೆ ನೀವು ಇದರ ಬಗೆಗೆ ವಸ್ತು ನಿಷ್ಠವಾಗಿ ಯೋಚಿಸಿದರೆ, ಮಿದುಳು ಮೊದಲನೆಯ ಭಾಗ, ಬಾಹುಗಳು ಎರಡನೆಯದು, ಉದರ ಮೂರನೆಯದು ಮತ್ತು ಕಾಲುಗಳು ನಾಲ್ಕನೆಯದು.

ನೀವು ನಿಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು, ಈ ಎಲ್ಲ ಭಾಗಗಳ ಕಾಳಜಿ ವಹಿಸುವಿರಿ. ಆದರೆ ನೀವು ಮಿದುಳಲ್ಲ, ಬರೀ ಕಾಲಿನ ಬಗೆಗೆ ನಿಗಾ ವಹಿಸಿದರೆ ಆರೋಗ್ಯವಂತ ದೇಹ ನಿಮ್ಮದಾಗಿರುವುದಿಲ್ಲ. ವಿಶ್ವ ಸಂಸ್ಥೆಯು ಸಮಾಜದ ನಾಲ್ಕನೆಯ ವರ್ಗ, ಕಾರ್ಮಿಕರ ಕಾಳಜಿ ವಹಿಸುತ್ತಿದೆ. ಮೊದಲನೆಯ ವರ್ಗದ ಬಗೆಗೆ ಅದು ಲಕ್ಷ್ಯ ವಹಿಸಿದೆಯೇ? ಅದು ನನ್ನ ಪ್ರಶ್ನೆ. ಸಮಾಜದಲ್ಲಿ, ಪ್ರಸ್ತುತದಲ್ಲಿ ಚಿಂತನಶೀಲರಾದ ಮೊದಲನೆಯ ವರ್ಗದವರ ಬಗೆಗೆ ಅತ್ಯಲ್ಪ ಕಾಳಜಿ ವಹಿಸಲಾಗುತ್ತಿದೆ.

ಹೆನ್ನಿಸ್‌ : ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮುಖ್ಯ ಧ್ಯೇಯಗಳಲ್ಲಿ ಸಾಮಾಜಿಕ ನ್ಯಾಯ ಕೂಡ ಒಂದು. ಪ್ರತಿಯೊಂದು ವರ್ಗದ ಶ್ರಮಿಕನಿಗೂ ಸಮಾಜದಲ್ಲಿ ಸೂಕ್ತ ಸ್ಥಾನ, ಸಂಪೂರ್ಣ ಘನತೆ, ಗೌರವ ಇರಬೇಕೆಂಬುದು ಅದರ ಆರ್ಥ… ಸಾಮಾಜಿಕ ನ್ಯಾಯ, ಕಾರ್ಮಿಕರೊಂದಿಗೆ ವ್ಯವಹರಿಸುವಾಗ, ಕಾರ್ಮಿಕರ ರಕ್ಷಣೆ ಮತ್ತು ಭದ್ರತೆ, ಔದ್ಯಮಿಕ ಸುರಕ್ಷತೆ ಮತ್ತು ಆರೋಗ್ಯ ಹಾಗೂ ವಾಸ್ತುಶಿಲ್ಪಿ, ನರ್ಸ್‌, ವೈದ್ಯರು, ಪಶು ವೈದ್ಯರು ಮುಂತಾದ ವೃತ್ತಿಪರರಿಗೆ ಪಾವತಿ ವಿಷಯಗಳಲ್ಲಿ ಏಕರೂಪತೆಯನ್ನು ಖಚಿತಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ.

ಶ್ರೀಲ ಪ್ರಭುಪಾದ : ಸಮಾಜವನ್ನು ಕುರಿತ ವೈದಿಕ ಕಲ್ಪನೆಯಂತೆ ಮೂರು ಉನ್ನತ ವರ್ಗಗಳಾದ ಬುದ್ಧಿವಂತರು, ಸಂರಕ್ಷಿತರು ಮತ್ತು ಉತ್ಪಾದಕ ವರ್ಗಗಳು ಎಂದಿಗೂ ಸಂಬಳಕ್ಕಾಗಿ ಮಾಲಿಕರ ಬಳಿ ದುಡಿಯುವುದಿಲ್ಲ. ನಾಲ್ಕನೆಯ ವರ್ಗವಾದ ಕಾರ್ಮಿಕ ವರ್ಗದವರು ಮಾತ್ರ ಉದ್ಯೋಗಿಗಳಾಗಿರುತ್ತಾರೆ.

ನಾನು ಹೇಳುವುದೇನೆಂದರೆ, ಇಡೀ ಮಾನವ ಸಮಾಜವು ಹೇಗೆ ಶಾಂತಿಯಿಂದ ಬದುಕಬಹುದೆಂಬುದರ ಬಗೆಗೆ ವಿಶ್ವ ಸಂಸ್ಥೆಯು ಈಗ ಯೋಚಿಸಬೇಕು. ಎಂತಹ ಜೀವನ? ಮನಸೋಇಚ್ಛೆಯಲ್ಲ, ನಿಜವಾದ ಉದ್ದೇಶ ಉಳ್ಳ ಜೀವನ. ನಾನು ಹೋದಕಡೆಗಳಲ್ಲೆಲ್ಲ ಯಾವ ಕುಲೀನರನ್ನೂ “ಬದುಕಿನ ಉದ್ದೇಶ ಏನು?” ಎಂದು ಕೇಳಿದಾಗ, ಅವರಿಗೆ ಉತ್ತರಿಸಲಾಗುವುದಿಲ್ಲ. ನಿಜವಾದ ಬುದ್ಧಿವಂತ ವರ್ಗ ಇಲ್ಲ ಎಂದೇ ಅದರ ಅರ್ಥ. ಯಾರಿಗೂ ಕೂಡ ಬದುಕಿನ ನಿಜವಾದ ಆಧ್ಯಾತ್ಮಿಕ ಉದ್ದೇಶ, ಆತ್ಮ ಸಾಕ್ಷಾತ್ಕಾರ ಮತ್ತು ಭಗವಂತನ ಸಾಕ್ಷಾತ್ಕಾರ ಗೊತ್ತೇ ಇಲ್ಲ.

ಹೆನ್ನಿಸ್‌ : ವಿವಿಧ ವರ್ಗಗಳ ಜನರಿಗೆ ಬದುಕಿನ ಒಳ್ಳೆಯದರಲ್ಲಿ ಉತ್ತಮ ಪಾಲು ಲಭ್ಯವಾಗುವಂತೆ ಮಾಡಲು ಅವರ ನಡುವಿನ ಅಸಮತೋಲನವನ್ನು ಕಡಮೆಗೊಳಿಸುವ ನಿಷ್ಠೆಯನ್ನು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಹೊಂದಿದೆ. ಅದರಿಂದ ಅವರು ಸ್ವತಃ ಅರ್ಥಮಾಡಿಕೊಂಡಂತೆ ಸುಖದ ಉನ್ನತ ಮಟ್ಟವನ್ನು ತಲಪಲಾರಂಭಿಸಬಹುದು. ಅವರು ಅದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲಾರರೇನೋ.

ಶ್ರೀಲ ಪ್ರಭುಪಾದ : ಹೌದು. ಉದಾಹರಣೆಗೆ, ಅಮೆರಿಕದಲ್ಲಿ ಕಾರ್ಮಿಕ ವರ್ಗಕ್ಕೆ ಉತ್ತಮ ವೇತನವಿದೆ. ಆದರೆ ಆಧ್ಯಾತ್ಮಿಕ ಮಾರ್ಗದರ್ಶನ ಇಲ್ಲದಿರುವುದರಿಂದ, ಬುದ್ಧಿವಂತ ವರ್ಗವಿಲ್ಲದ ಕಾರಣ ಕಾರ್ಮಿಕ ವರ್ಗವು “ಈಗ ನನ್ನ ಬಳಿ ಸ್ವಲ್ಪ ಹಣವಿದೆ. ಅದನ್ನು ಹೇಗೆ ಉಪಯೋಗಿಸಲಿ?” ಎಂದು ಕೇಳುತ್ತದೆ. ಅನೇಕ ಬಾರಿ ಅವರು ತಮ್ಮ ಹಣವನ್ನು ಕುಡಿತಕ್ಕಾಗಿ ದುಂದುವೆಚ್ಚ ಮಾಡುತ್ತಾರೆ.

ಕಾರ್ಮಿಕ ವರ್ಗಕ್ಕೆ ಉತ್ತಮ ಜೀವನದ ಭರವಸೆ ನೀಡುತ್ತಿರುವುದಾಗಿ ನೀವು ಭಾವಿಸಬಹುದು. ಆದರೆ ಅವರಿಗೆ ಮಾರ್ಗದರ್ಶನ ನೀಡಲು ಬುದ್ಧಿವಂತ ವರ್ಗ, ಸಾಮಾಜಿಕ ದೇಹದಲ್ಲಿ ಮಿದುಳು ಇಲ್ಲದಿರುವುದರಿಂದ ಅವರು ದುಂದು ವೆಚ್ಚ ಮಾಡುವರು ಮತ್ತು ಕ್ಷೋಭೆ ಉಂಟುಮಾಡುವರು.

ಹೆನ್ನಿಸ್‌ : ಸರಿ, ನಾವು ಅದನ್ನು ಪರೋಕ್ಷ ರೀತಿಯಲ್ಲಿ ನೋಡುತ್ತೇವೆ. ನಾನು ಹೇಳಿದಂತೆ, ನಾವು ಜನರಿಗೆ ಅವರು ಅವರ ಹಣವನ್ನು ಹೇಗೆ ಖರ್ಚು ಮಾಡಬೇಕೆಂದು ಹೇಳುವುದಿಲ್ಲ. ಅವರ ವಿರಾಮ ಕಾಲದಲ್ಲಿ ಏನು ಮಾಡಬೇಕೆಂದು ನಾವು ಅವರಿಗೆ ಹೇಳುವುದಿಲ್ಲ. ವಿರಾಮ ಸಮಯಕ್ಕೆ ಅಗತ್ಯವಾದ ಸೌಲಭ್ಯಗಳು ಇರುವಂತೆ ನೋಡಿಕೊಳ್ಳುತ್ತೇವೆ. ಇದು ನಮ್ಮ ಆದ್ಯ ಕಾಳಜಿಯಲ್ಲದಿದ್ದರೂ ನಾವು ಅವರಿಗೆ ಸೂಕ್ತ ಅವಕಾಶಗಳು, ಕ್ರೀಡಾ ಮೈದಾನ, ಈಜುಕೊಳ ಮುಂತಾದವು ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ. ಆದರೆ ನಾವು ಮಾಡಲು ಪ್ರಯತ್ನಿಸುತ್ತಿರುವುದು ಏನೆಂದರೆ, ನಿಮಗೆ ಇದು ಆಸಕ್ತಿ ಉಂಟುಮಾಡಬಹುದು, ಕಾರ್ಮಿಕರ ಶಿಕ್ಷಣ ಕುರಿತಂತೆ ನಮ್ಮ ಬಳಿ ದೊಡ್ಡ ಕಾರ್ಯಕ್ರಮವಿದೆ. ಆಧುನಿಕ ಉದ್ದಿಮೆಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು, ಆಡಳಿತವರ್ಗದ ಸಮಸ್ಯೆಗಳನ್ನು ಗ್ರಹಿಸುವುದು, ಚೌಕಾಸಿ ಮಾಡುವಾಗ ಮೇಜಿನ ಮತ್ತೊಂದು ಬದಿಯಲ್ಲಿನ ಜನರಿಗೆ ಅರಿವು ಮೂಡಿಸುವುದು, ಆಯವ್ಯಯ ಪಟ್ಟಿಯನ್ನು ಓದಿ ಅರ್ಥ ಮಾಡಿಕೊಳ್ಳುವುದು, ಅರ್ಥಶಾಸ್ತ್ರ ಮತ್ತು ಹಣಕಾಸಿನ ಮೂಲ ತತ್ತ್ವಗಳನ್ನು ಅರ್ಥಮಾಡಿಕೊಳ್ಳುವುದು ಇವೇ ಮುಂತಾದವುಗಳನ್ನು ಗ್ರಹಿಸಿಕೊಳ್ಳಲು ಅಗತ್ಯವಾದ ಶಿಕ್ಷಣ ಕಾರ್ಯಕ್ರಮವನ್ನು ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ.

ಈಗ ಸ್ಪಷ್ಟವಾಗಿ ಹೇಳಬೇಕೆಂದರೆ, ವ್ಯಕ್ತಿಗೆ ಮದ್ಯಪಾನ ಮಾಡಬೇಕೆನಿಸಿದರೆ, ಅವನು ಮಾಡುತ್ತಾನೆ. ಆದರೆ ನಮಗೆ ಏನೆನಿಸುತ್ತದೆಯೆಂದರೆ ಕೆಲಸದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡದಿದ್ದರೆ, ನಿರ್ದಿಷ್ಟವಾಗಿ ನಮಗೆ ಮದ್ಯಪಾನದ ವಿಷಯದಲ್ಲಿ ಆಸಕ್ತಿ ಇಲ್ಲ.

ಶ್ರೀಲ ಪ್ರಭುಪಾದ : ಇಲ್ಲ, ಅದಲ್ಲ ವಿಷಯ. ಆದರೆ ವಿಷಯ ಏನೆಂದರೆ ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಬುದ್ಧಿವಂತ ವರ್ಗ, ಮಿದುಳಿನ ಮಾರ್ಗದರ್ಶನ ಬೇಕು. ಆದುದರಿಂದ ಮಿದುಳನ್ನು ಸರಿಯಾಗಿ ಪೋಷಿಸಿಕೊಳ್ಳಬೇಕು. ಅದು ನಾವು ಹೇಳುವ ಅಂಶ.

ಹೆನ್ನಿಸ್‌ : ಒಳ್ಳೆಯದು, ಇವೆಲ್ಲವೂ ಉದ್ಯೋಗದಲ್ಲಿನ ಸ್ಥಾನ, ಕೆಲಸದಲ್ಲಿನ ಕೌಶಲ್ಯ, ಕಾರ್ಮಿಕ ಸಂಘಟನೆಗಳಲ್ಲಿ ತನ್ನ ಸಹೋದ್ಯೋಗಿಗಳನ್ನು ಪ್ರತಿನಿಧಿಸುವ ಸಾಮರ್ಥ್ಯ ಅಂತಹವುಗಳ ಸುಧಾರಣೆಗಳ ಮೇಲೆ ಪ್ರಭಾವಿತವಾಗಿವೆ. ಇದರ ಬಗೆಗೆ ನಮಗೆ ಆಸ್ಥೆ. ಅವನ ಸಾಮಾನ್ಯ ಸಂಸ್ಕೃತಿ, ಅವನ ಸಾಮಾನ್ಯ ಶಿಕ್ಷಣದ ಸುಧಾರಣೆಯಲ್ಲಿ ಮತ್ತು ವಿಶೇಷವಾಗಿ ಉದ್ದಿಮೆ ಮತ್ತು ಕಾರ್ಮಿಕ ಸಂಘಟನೆಗೆ ಸಂಬಂಧಿಸಿದಂತೆ ಕಾರ್ಮಿಕನಾಗಿ ಅವನ ಶಿಕ್ಷಣದ ಬಗೆಗೆ ನಾವು ಕಾಳಜಿ ಹೊಂದಿದ್ದೇವೆ. ಇದರಿಂದ ವ್ಯಕ್ತಿಯ ಸ್ಥಾನ ಸುಧಾರಿಸುವುದೆಂದು ನಾವು ಆಶಿಸುತ್ತೇವೆ. ಅವನ ಸ್ಥಾನದ ಸುಧಾರಣೆಯಿಂದ, ಕುಡಿತದ ಬದಲಾಗಿ ಅವನಿಗೆ ಚಿಂತಿಸಲು ಇತರ ಅನೇಕ ವಿಷಯಗಳಿರುತ್ತವೆ.

ಶ್ರೀಲ ಪ್ರಭುಪಾದ : ಕಾರ್ಮಿಕರು ಬದುಕಿನ ನಿಜವಾದ ಉದ್ದೇಶಕ್ಕಾಗಿ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕೆಂಬುದು ನಮ್ಮ ಅಪೇಕ್ಷೆ. ಬದುಕಿನ ನಿಜವಾದ ಉದ್ದೇಶವು ಭಗವಂತನನ್ನು ಪ್ರಸನ್ನಗೊಳಿಸುವುದು ಮತ್ತು ಭಗವಂತನ ಸಾಕ್ಷಾತ್ಕಾರ. ಕಾರ್ಮಿಕರು ಬುದ್ಧಿವಂತಿಕೆ ಇಲ್ಲದೆ, ಬದುಕಿನಲ್ಲಿ ಯಾವುದೇ ಉದ್ದೇಶವಿಲ್ಲದೆ ಕತ್ತೆಗಳಂತೆ ಸುಮ್ಮನೆ ಶ್ರಮ ಜೀವಿಗಳಾಗಿರಬಾರದು. ಎಲ್ಲ ಪ್ರಾಣಿಗಳಲ್ಲಿ, ಕತ್ತೆಯೇ ಅತಿ ಹೆಚ್ಚು ಶ್ರಮ ಜೀವಿ. ಆದರೆ ಅದು ಒಂದು ಪ್ರಾಣಿಯಷ್ಟೆ. ಏಕೆಂದರೆ ಅದಕ್ಕೆ ತಾನು ಏಕೆ ದುಡಿಯುತ್ತಿರುವೆನೆಂಬುದೇ ತಿಳಿಯದು. ನೋಡಿದಿರಾ, ಬುದ್ಧಿ ಇಲ್ಲ. ನಮಗೆ ಅದು ಬೇಡ. ನಮಗೆ ಮಾರ್ಗದರ್ಶನ ನೀಡಬಲ್ಲ ಬುದ್ಧಿವಂತ ವರ್ಗ ಬೇಕು. ಅದರಿಂದ ಕಾರ್ಮಿಕರು ಬುದ್ಧಿವಂತರಾಗಿ ಕೆಲಸ ಮಾಡುತ್ತ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು. ನಮಗೂ ನಿಮಗೂ ಇರುವ ವ್ಯತ್ಯಾಸ ಇದೇ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi