ಸಂವಾದ
ಸ್ಥಳ: ನವವೃಂದಾವನ, ವೆಸ್ಟ್ ವರ್ಜೀನಿಯಾ, ದಿನಾಂಕ: 20ನೇ ಜೂನ್, 1976
ಶ್ರೀಲ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರುಗಳೊಂದಿಗೆ ನಡೆದ ಸಂವಾದದ ಮುಂದುವರಿಕೆ
– ಅನುವಾದ: ಡಾ.ಕೆ.ವೈ.ಬಾಲರಾಜ್
ಶಿಷ್ಯ: ಶ್ರೀಲ ಪ್ರಭುಪಾದರೇ, ಈಗ ತಾನೇ ನೀವು ಓದಿರುವ ಗೀತೆಯ ಶ್ಲೋಕವು ಮನಸ್ಸಿಗೆ ಮುಟ್ಟುವಂತಿತ್ತು. ಕೃಷ್ಣನು ಹೇಳುತ್ತಾನೆ: ರಾಕ್ಷಸೀ ಸ್ವಭಾವದವರು ”ತಮ್ಮ ಲೌಕಿಕ ನಿರ್ಣಯಗಳನ್ನು ಅನುಸರಿಸುವ ನಷ್ಟಾತ್ಮರು. ಅವರಿಗೆ ಬುದ್ಧಿಯಿಲ್ಲ. ಅವರು ಜಗತ್ತಿನ ನಾಶಕ್ಕೆ ಕಾರಣವಾಗುವ ಪ್ರಯೋಜನವಿಲ್ಲದ ಉಗ್ರ ಕರ್ಮದಲ್ಲಿ ತೊಡಗುತ್ತಾರೆ.”

ಶ್ರೀಲ ಪ್ರಭುಪಾದ: ಹೌದು, ಕೃಷ್ಣ ಹೇಳುತ್ತಾನೆ. ಉಗ್ರಕರ್ಮಣಃ ಈ ಜನರು ಘೋರವಾದ ಕೆಲಸವನ್ನು ಮಾಡುತ್ತಾರೆ. ಇದು ಉಗ್ರಕರ್ಮದ ಕಾರ್ಖಾನೆಯಾಗಿದೆ. ನಿಜವಾಗಿಯೂ ಕೇವಲ ಅಲ್ಪಕರ್ಮ. ಸ್ವಲ್ಪ ಕೆಲಸದ ಆವಶ್ಯಕತೆ ಇದೆ. ಉದಾಹರಣೆಗೆ ಗೋಧಿ ಬೆಳೆಯುತ್ತಿರುವುದನ್ನು ನೋಡಿ, ಕೇವಲ ಸ್ವಲ್ಪ ಬೇಸಾಯ ಆದರೆ ಸಾಕು.
ದೊಡ್ಡ ಕಾರ್ಖಾನೆಯನ್ನು ಸ್ಥಾಪಿಸುವುದರಿಂದ ಉಪಯೋಗವೇನು? ಅದು ಉಗ್ರಕರ್ಮ. ಅದರಿಂದ ಏನು ಉಪಯೋಗ? ಜೀವನೋಪಾಯಕ್ಕಾಗಿ ಜನರಿಗೆ ಕಾರ್ಖಾನೆಯಲ್ಲಿರುವುದರಿಂದ ಏನು ಉಪಯೋಗ?
ಕೇವಲ ಸ್ವಲ್ಪ ಕಾರ್ಯದಿಂದ ಜನರ ಆವಶ್ಯಕತೆಯು ಪೂರೈಕೆಯಾಗುತ್ತದೆ. ಪ್ರಕೃತಿ ನಮಗೆ ಎಷ್ಟೊಂದು ಸೌಲಭ್ಯವನ್ನು ಒದಗಿಸಿದೆ. ನೀವು ಎಲ್ಲಿ ಬೇಕಾದರೂ ಸ್ವಲ್ಪ ಆಹಾರವನ್ನು ಬೆಳೆಯಬಹುದು. ಹಸುಗಳು ಹುಲ್ಲುಗಾವಲು ಮೈದಾನದಲ್ಲಿ ಹುಲ್ಲು ಮೇಯುತ್ತವೆ. ಅದರ ಹಾಲನ್ನು ಪಡೆದುಕೊಂಡು ಶಾಂತಿಯಿಂದ ಇರಿ. ಏಕೆ ಕಾರ್ಖಾನೆಗಳನ್ನು ತೆರೆಯುತ್ತೀರಿ? ಅದರಿಂದ ಏನು ಉಪಯೋಗ? ನೀವು ಸುಮ್ಮನೆ ನಿಮ್ಮನ್ನು ನೀವು ನರಕದ ಸ್ಥಿತಿಯಲ್ಲಿ ಇಡುತ್ತಿದ್ದೀರಿ.
ಈ ವಿವರಣೆಯನ್ನು ಭಗವದ್ಗೀತೆಯಲ್ಲಿ ಕೃಷ್ಣನು ಕೊಟ್ಟಿದ್ದಾನೆ. ಈಗ ಇವುಗಳನ್ನು ಚರ್ಚೆ ಮಾಡಿ.
ಶಿಷ್ಯ: ಶ್ರೀಲ ಪ್ರಭುಪಾದರೆ, ಕೃಷ್ಣನು ಹೇಳುತ್ತಾನೆ; ಆಸುರೀ ನಾಗರಿಕರು ಜಗತ್ತನ್ನು ನಾಶಪಡಿಸಲು ಪ್ರಯೋಜನವಿಲ್ಲದ ಘೋರ ಕೆಲಸಗಳಲ್ಲಿ ತೊಡಗುತ್ತಿದ್ದಾರೆ. ನೀವು ಹೇಳುತ್ತೀರಿ, ಈ ವಾಕ್ಯ ಅಣು ಅಸ್ತ್ರಗಳನ್ನು ಸೂಚಿಸುತ್ತದೆ ಎಂದು. ಕೃಷ್ಣನ ಮಾತುಗಳು ಎಷ್ಟು ಸತ್ಯವಾದದ್ದು.

ಶ್ರೀಲ ಪ್ರಭುಪಾದ: ಹೌದು, ಭಗವಂತ ಮಾತನಾಡುತ್ತಿದ್ದಾನೆ, ಕೃಷ್ಣ ಮಾತನಾಡುತ್ತಿದ್ದಾನೆ?
ಶಿಷ್ಯ: ಕಾಲೇಜಿನಲ್ಲಿ ನಾನು ಅಣುಶಕ್ತಿಯನ್ನು ಕುರಿತು ಅಧ್ಯಯನ ಮಾಡುತ್ತಿದ್ದ ಮತ್ತು ಅದು ನಮ್ಮ ಜಗತ್ತನ್ನು ರಕ್ಷಿಸುತ್ತದೆ ಎಂದು ತಿಳಿದಿದ್ದೆ. ಅಣುಶಕ್ತಿಯಿಂದ ನಾಯಕರು ನಮಗೆ ದೊಡ್ಡ ಪ್ರಮಾಣದ ಧಾನ್ಯಗಳು, ದೊಡ್ಡ ಪ್ರಮಾಣದ ಟೊಮೆಟೊಗಳು ಮತ್ತು ..
ಶ್ರೀಲ ಪ್ರಭುಪಾದ: ದೊಡ್ಡ ಪ್ರಮಾಣದಲ್ಲಿ ಸಾವುಗಳು. ಈ ಮೂಢರ ಕೆಲಸದ ಅಂತಿಮ ಪರಿಣಾಮ ದೊಡ್ಡ ಪ್ರಮಾಣದ ಸಾವುಗಳು. ಎಲ್ಲವೂ ದೊಡ್ಡದಾಗಿರಬೇಕು. ಮೊದಲು ಯಾವುದಾದರೂ ಗಲಭೆಯಲ್ಲಿ ಕೆಲವು ಜನ ಸಾಯುತ್ತಿದ್ದರು. ಈಗ ನೂರಾರು, ಸಾವಿರಗಟ್ಟಲೇ ಜನರು ಸಾಯುತ್ತಿದ್ದಾರೆ. ದೊಡ್ಡ ಪ್ರಮಾಣದ ಸಾವುಗಳು, ನಿಮ್ಮ ನಿಮ್ಮ ಕಾಲೇಜಿನ ದಿನಗಳಲ್ಲಿ ಈ ದೊಡ್ಡ ದೊಡ್ಡ ನಾಯಕರು ದೊಡ್ಡ ಸಾವುಗಳನ್ನು ತರುತ್ತಿದ್ದರೆಂದು ನೀವು ತಿಳಿದಿರಲಿಲ್ಲ ಅಲ್ಲವೇ?
ಶಿಷ್ಯ: ಶ್ರೀಲ ಪ್ರಭುಪಾದರೆ ಇದು ನಿಷ್ಟ್ರಯೋಜಕವಾದದ್ದು. ಏಕೆಂದರೆ ಈ ಜನರು ಏನಾದರೂ ಒಳ್ಳೆಯದನ್ನು ಮಾಡಲು ಹೋದರೆ ಅದರಿಂದ ಕೆಟ್ಟದ್ದೇ ಬರುತ್ತಿತ್ತು.
ಶ್ರೀಲ ಪ್ರಭುಪಾದ: ಕರ್ಮಜಗತ್, ಈ ಐಹಿಕ ಜಗತ್ತನ್ನು ನಿರ್ವಹಿಸುವ ಕರ್ಮದ ನಿಯಮದ ಪ್ರಕಾರ ನೀವು ಮನೆಯನ್ನು ಕಟ್ಟಬೇಕಾದರೆ ಎಲ್ಲಿಯದಾದರೂ ಮರಗಳನ್ನು ಕಡಿಯಲೇಬೇಕು. ಎಲ್ಲಿಯಾದರು ನಾಶ ಮಾಡಿದರಷ್ಟೇ ನೀವು ಮನೆಯನ್ನು ಕಟ್ಟಬಹುದು.

ಈ ರೀತಿಯಾಗಿ “ವ್ಯವಸ್ಥೆ” ಮಾಡಿಕೊಳ್ಳಬೇಕು. ವಾಸ್ತವವಾಗಿ ನೀವು ಏನನ್ನೂ ಸೃಷ್ಟಿಸಲಾಗುವುದಿಲ್ಲ. ನೀವು ನಿಮ್ಮ ಮನೆಯನ್ನು ಎಲ್ಲಿಯಾದರೂ ನಾಶಪಡಿಸಿಯೇ ಕಟ್ಟಬಹುದು. ಹೌದಲ್ವ? ಹಾಗಾದರೆ ನಿಮ್ಮ ಸೃಷ್ಟಿ ಎಲ್ಲಿದೆ? ನಿಜವಾದ ಸೃಷ್ಟಿಯು ಭಗವಂತನ ಸೃಷ್ಟಿಯಾಗಿದೆ. ಯಾವುದನ್ನೂ ನಾಶಪಡಿಸದೆ ಆತನು ಎಲ್ಲವನ್ನು ಸೃಷ್ಟಿಸಿದ್ದಾನೆ. ಆದರೆ ನೀವೇನಾದರೂ ಸೃಷ್ಟಿಸಬೇಕಾದರೆ ನೀವು ಬೇರೆ ಎಲ್ಲಿಯಾದರೂ ನಾಶಪಡಿಸಲೇಬೇಕು. ಇದು ಕರ್ಮದ ನಿಯಮ.
ಶಿಷ್ಯ: ಶ್ರೀಲ ಪ್ರಭುಪಾದರೇ, ನಿಮಗೆ ಗೊತ್ತಿರುವ ಹಾಗೆ ಗೀತೆಯ 7ನೇ ಅಧ್ಯಾಯದಲ್ಲಿ ಕೃಷ್ಣನು ಈ ಮೂಢರನ್ನು ದುಷ್ಕೃತಿನಃ ಎಂಬ ಪದದಿಂದ ವಿವರಿಸಿದ್ದಾನೆ. ನೀವು ನಿಮ್ಮ ಭಾವಾರ್ಥದಲ್ಲಿ ದುಷ್ಕೃತಿನಃ ಎಂದರೆ ಉತ್ಕೃಷ್ಟ ಮತ್ತು ಬುದ್ಧಿ ಶಕ್ತಿ ಎಂದು ವಿವರಿಸಿದ್ದೀರಿ. ಸಹಜವಾಗಿಯೇ ಅದು ತಪ್ಪು ಬಳಕೆಯಾದರೂ ಕೂಡ ಅದು ತುಂಬಾ ಉತ್ಕೃಷ್ಟ (ಉನ್ನತಶ್ರೇಣಿ) ಬುದ್ಧಿ ಶಕ್ತಿಯಾಗಿದೆ.
ಶ್ರೀಲ ಪ್ರಭುಪಾದ: ಹೌದು, ಬುದ್ಧಿಶಕ್ತಿ, ಉದಾಹರಣೆಗೆ ಮರವನ್ನು ನಾಶ ಪಡಿಸಿದ ಮೇಲೆ ಮನೆಯನ್ನು ಕಟ್ಟಿಸುತ್ತೀರಿ. ಆದ್ದರಿಂದ ನೀವು ನಿಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸಿ ನಿಸ್ಸಂದೇಹವಾಗಿ ನಿಮಗೆ ಬುದ್ಧಿಶಕ್ತಿ ಇದೆ. ಮಾನವ ಜೀವಿಗೆ ಬುದ್ಧಿಶಕ್ತಿಯಿರಬೇಕು.
ಆ ಬುದ್ಧಿಶಕ್ತಿಯು ಅವನಿಗೆ ಜನನ, ಮರಣ, ವೃದ್ಧಾಪ್ಯ ಮತ್ತು ರೋಗಗಳ ಬಿಗಿಮುಷ್ಟಿಯಿಂದ ಬಿಡುಗಡೆ ಹೊಂದಲು ಕೊಡಲಾಗಿದೆ. ದುರಾದೃಷ್ಟವಶಾತ್ ಈ ಆಧುನಿಕ ಜನರು ತನ್ನ ಬುದ್ಧಿಶಕ್ತಿಯನ್ನು ಆ ಕಾರಣಕ್ಕೆ ಉಪಯೋಗಿಸುತ್ತಿಲ್ಲ. ಆದ್ದರಿಂದ ಅವನು ದುಷ್ಕೃತಿನ ಮೂಢ.
ಅವನಿಗೆ ಬುದ್ಧಿಶಕ್ತಿಯಿದೆ. ಆಧುನಿಕ ಮನುಷ್ಯನಿಗೆ ಬುದ್ಧಿಶಕ್ತಿಯಿಲ್ಲ. ಅವನು ಮೂರ್ಖನೆಂದು ನಾವು ಹೇಳುತ್ತಿಲ್ಲ. ಇಲ್ಲ. ಅವನಿಗೆ ಬುದ್ಧಿಶಕ್ತಿಯಿದೆ. ಆದರೆ ಅವನು ಆ ಬುದ್ಧಿಶಕ್ತಿಯನ್ನು ದುಷ್ಕಾರ್ಯ, ಯಾವ ಕೆಲಸ ಮಾಡಬಾರದೋ ಆ ಕೆಲಸಕ್ಕೆ ಉಪಯೋಗಿಸುತ್ತಿದ್ದಾನೆ.

ಕಾರ್ಯ ಮತ್ತು ದುಷ್ಕಾರ್ಯ, ಒಳ್ಳೆಯ ಕೆಲಸ ಮತ್ತು ಕೆಟ್ಟ ಕೆಲಸವೆಂದು ಇವೆ. ಮನುಷ್ಯನ ಬುದ್ಧಿಶಕ್ತಿಯನ್ನು ಜನನ, ಮರಣ, ವೃದ್ಧಾಪ್ಯ ಮತ್ತು ರೋಗದಿಂದ ಬಿಡುಗಡೆ ಹೊಂದಲು ಕೊಡಲಾಗಿದೆ. ಆದರೆ ಆ ಬುದ್ಧಿಶಕ್ತಿಯನ್ನು ಅವನು ಉಪಯೋಗಿಸುತ್ತಿಲ್ಲ. ಅವನು ಕಾರ್ಖಾನೆಯನ್ನು ತೆರೆಯುತ್ತಿದ್ದಾನೆ ಮತ್ತು ಪರಿಪೂರ್ಣವಾಗಿ ಬೇರೆ ವಾತಾವರಣ ಅಂದರೆ ಕೆಟ್ಟ ವಾತಾವರಣವನ್ನು ಸೃಷ್ಟಿಸುತ್ತಿದ್ದಾನೆ.
ಆದ್ದರಿಂದ ಅವನು ಮೂಢ. ಕಾರ್ಖಾನೆಯನ್ನು ತೆರೆಯಲು ಬುದ್ಧಿಶಕ್ತಿಯ ಆವಶ್ಯಕತೆಯಿದೆ. ಎಲ್ಲ ರೀತಿಯ ಸಂಕೀರ್ಣವಾದ ಯಂತ್ರಗಳನ್ನು ಜೋಡಿಸಬೇಕಾಗುತ್ತದೆ. ಆದ್ದರಿಂದ ಅಲ್ಲಿ ಬುದ್ಧಿಮತ್ತೆಯಿದೆ. ಆದರೆ ಆ ಬುದ್ಧಿಶಕ್ತಿ ಹೇಗೆ ಉಪಯೋಗಿಸಲ್ಪಡುತ್ತಿದೆ? ಜನರನ್ನು ನರಕಸದೃಶವಾದ ಜೀವನದ ಸ್ಥಿತಿಯಲ್ಲಿ ಇಡಲು ಉಪಯೋಗಿಸಲ್ಪಡುತ್ತಿದೆ. ಆದ್ದರಿಂದ ಮನುಷ್ಯನು ದುಷ್ಕೃತಿನ. ಒಬ್ಬ ಬುದ್ಧಿವಂತ ಮೂಢ.
ಶಿಷ್ಯ: ಶ್ರೀಲ ಪ್ರಭುಪಾದರೆ, ಇದು ಆಶ್ಚರ್ಯವಾದುದು. ಜನರು ದೂರದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಉದಾಹರಣೆಗೆ ಅವರು ಕಾರ್ಖಾನೆಯನ್ನು ಆರ್ಥಿಕ ಅಭಿವೃದ್ಧಿಗಾಗಿ ತೆರೆಯುತ್ತಿದ್ದಾರೆ. ಆದರೆ ಅವರು ಅದರ ದುಷ್ಪರಿಣಾಮಗಳಾದ ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯ, ಒತ್ತಡಗಳು, ಕುಟುಂಬಗಳ ವಿಘಟನೆಗಳು, ಕರ್ತವ್ಯಲೋಪ, ನಶೆಯ ವಸ್ತುಗಳು, ಅಪರಾಧ ಮುಂತಾದವುಗಳ ಬಗ್ಗೆ ಯೋಚಿಸುತ್ತಿಲ್ಲ.
ಶ್ರೀಲ ಪ್ರಭುಪಾದ: ಆದ್ದರಿಂದ ಅವರನ್ನು ಕೃಷ್ಣ ದುಷ್ಕೃತಿನರು ಎಂದು, ಮತ್ತು ಮೂಢರು ಹಾಗು ಕತ್ತೆಗಳು ಎಂದು ಕರೆಯುತ್ತಾನೆ. ಶಿಷ್ಯ: ಶ್ರೀಲ ಪ್ರಭುಪಾದರೆ, ಅದೇ ಸಮಯದಲ್ಲಿ ಕೃಷ್ಣನು ಮತ್ತಃ ಸ್ಮೃತಿರ್ ಜ್ಞಾನಮ್ ”ಪ್ರತಿಯೊಬ್ಬರ ಬುದ್ಧಿಶಕ್ತಿ ನನ್ನಿಂದಲೇ ಬರುತ್ತದೆ” ಎಂದು ಹೇಳಿದ್ದಾನೆ. ಆದ್ದರಿಂದ ಕೃಷ್ಣನೇ ಜನರನ್ನು ದಾರಿತಪ್ಪಿಸುತ್ತಿದ್ದಾನೆ, ಅವರಿಗೆ ತಪ್ಪು ಬುದ್ಧಿಶಕ್ತಿಯನ್ನು ಕೊಡುತ್ತಿದ್ದಾನೆ ಎಂದು ಕೆಲವರು ಟೀಕಿಸಬಹುದು.
ಶ್ರೀಲ ಪ್ರಭುಪಾದ: ನೀವು ಏನೋ ಮಾಡಬೇಕು ಅಂತ ಇರುತ್ತೀರಿ. ಅದಕ್ಕೆ ತಕ್ಕಂತೆ ಕೃಷ್ಣ ನೀವೇನು ಮಾಡಬೇಕೆಂತಿದ್ದೀರೋ ಅದನ್ನು ಮಾಡಲು ಬುದ್ಧಿಶಕ್ತಿಯನ್ನು ಕೊಡುತ್ತಾನೆ. ಒಂದು ವೇಳೆ ನೀನು ಸಂಕೀರ್ಣವಾದ ಯಂತ್ರವನ್ನು ತಯಾರಿಸಬೇಕೆಂದಿದ್ದರೆ ಕೃಷ್ಣನು ನಿನಗೆ ಆ ಬುದ್ಧಿಶಕ್ತಿಯನ್ನು ಕೊಡುತ್ತಾನೆ: “ಸರಿ, ಹೀಗೆ ಮಾಡು, ಇದನ್ನು ಈ ರೀತಿಯಾಗಿ ತಯಾರಿಸಬೇಕು.”
ಆದರೆ ಸರ್ವಧರ್ಮಾನ್ ಪರಿತ್ಯಜ್ಯ ”ಮೂಢರೇ ಇದೆಲ್ಲ ಬಿಟ್ಟು ನನ್ನಲ್ಲಿ ಶರಣಾಗು ಎಂದು ಕೃಷ್ಣ ಹೇಳಿದ್ದನ್ನು ನೀವು ಕೇಳುವುದೇ ಇಲ್ಲ. ಅದೇ ನಿಜವಾದ ಬುದ್ಧಿಶಕ್ತಿ. ಆದರೆ ಅದನ್ನು ನೀವು ಮಾಡುವುದಿಲ್ಲ.
(ಮುಂದುವರಿಯುವುದು)






Leave a Reply