ಕಳ್ಳರಲ್ಲಿ ನೈತಿಕತೆ!

ಇಲ್ಲಿ ಕಳ್ಳರ ತಂಡದ ಕತೆ ಇದೆ. ಈ ಕಳ್ಳರು ಅನೇಕ ಮನೆಗಳಲ್ಲಿ ವಸ್ತುಗಳನ್ನು ಕಳವು ಮಾಡಿದರು. ಅದನ್ನು ಹಂಚಿಕೊಳ್ಳಲು ಊರಿನ ಆಚೆಗೆ ಹೋದರು. ಆಗ ಒಬ್ಬ ಕಳ್ಳ, “ಯಾರಿಗೂ ಮೋಸವಾಗದಂತೆ ನೈತಿಕವಾಗಿ ಇದನ್ನು ಹಂಚಬೇಕು” ಎಂದ.

ಅದು ಕದ್ದ ಆಸ್ತಿ. ಇದರಲ್ಲಿ ನೈತಿಕತೆ ಎಲ್ಲಿ ಬಂತು? ಆದರೆ ಹಂಚಿಕೊಳ್ಳುವಾಗ ಮಾತ್ರ ಅವರು ನೈತಿಕತೆ ಕುರಿತು ಯೋಚಿಸುತ್ತಿದ್ದಾರೆ. ಮೂಲ ತತ್ತ್ವವೇ ಅನೈತಿಕತೆ. ನೈತಿಕತೆಯನ್ನು ಕಾಣುವುದೆಲ್ಲಿ?

ಅದೇ ರೀತಿ, ವೈದಿಕ ಆದೇಶದ ಈಶಾವಾಸ್ಯಂ ಇದಂ ಸರ್ವಂ-ಎಲ್ಲವೂ ದೇವೋತ್ತಮ ಪರಮ ಪುರುಷನಿಗೆ ಸೇರಿದ್ದು. ಇದು ಅವನ ಆಸ್ತಿ. ಆದರೆ ಅದು ನಮ್ಮದೇ ಎಂದು ನಾವು ಹಕ್ಕು ಸ್ಥಾಪಿಸಿದರೆ ನೈತಿಕತೆ ಎಲ್ಲಿರುತ್ತದೆ? ಈ ಐಹಿಕ ಜಗತ್ತಿನಲ್ಲಿ ಅಂತಹ ನೈತಿಕತೆ, ಪ್ರಾಮಾಣಿಕತೆ ನಡೆದೇ ಇದೆ. ಆದರೆ ನಮ್ಮ ನೈತಿಕತೆ ಎಂದರೆ, ಕೃಷ್ಣನಿಗೆ ತೃಪ್ತಿಯಾದರೆ ಅದು ಪ್ರಾಮಾಣಿಕತೆ, ನೈತಿಕತೆ ಎಲ್ಲವೂ.

ಇದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು. ಪ್ರಹ್ಲಾದ ಮಹಾರಾಜ ನಿಂತಿದ್ದಾನೆ, ಅವನ ತಂದೆ ಹಿರಣ್ಯ ಕಶಿಪುವನ್ನು ಶ್ರೀ ನೃಸಿಂಹದೇವ ಸಂಹರಿಸುತ್ತಿದ್ದಾನೆ. ಮಗನ ಮುಂದೆಯೇ ತಂದೆಯನ್ನು ಕೊಲ್ಲುವುದು ಮತ್ತು ಆ ಮಗನು “ತಂದೆಯ ಹತ್ಯೆಯಾದ ಕೂಡಲೇ ನರಸಿಂಹ ದೇವನಿಗೆ ಹಾರ ಅರ್ಪಿಸುವೆ” ಎಂದು ಹಾರವನ್ನು ಕೈಯಲ್ಲಿ ಹಿಡಿದು ನೋಡುತ್ತಿರುವುದು ನೈತಿಕತೆಯೇ? ಐಹಿಕ ದೃಷ್ಟಿಕೋನದಿಂದ? ಆದರೆ, ಪ್ರಹ್ಲಾದ ಮಹಾರಾಜನು ಭಕ್ತಿ ಸೇವೆಯಲ್ಲಿ ಶ್ರೇಷ್ಠವಾದ ಮಹಾರಾಜನಾದನು.

ಗೋಪಿಯರು ಯುವತಿಯರು. ಅವರು ಯಾರದೋ ಪತ್ನಿ, ಮಗಳು, ಸೋದರಿ. ಆದರೆ ಸರಿ ರಾತ್ರಿಯಲ್ಲಿ ಕೃಷ್ಣ ಕೊಳಲು ನುಡಿಸುತ್ತಿದ್ದಾಗ ಅವರು ತಮ್ಮೆಲ್ಲ ಕಾರ್ಯಗಳನ್ನು ಬಿಟ್ಟು “ಕೃಷ್ಣ ಎಲ್ಲಿ” ಎಂದು ಓಡೋಡಿ ಬರುತ್ತಿದ್ದರು. ವೈದಿಕ ಗುಣಮಟ್ಟದ ದೃಷ್ಟಿಯಿಂದ ಇದು ಅನೈತಿಕ. ಅವರು ತಮ್ಮ ಕುಟುಂಬ ಬಿಟ್ಟು ಮತ್ತೋರ್ವ ಯುವಕನ ಬಳಿಗೆ ಹೋಗುತ್ತಿದ್ದರು. ಆದುದರಿಂದ ಲೌಕಿಕ ದೃಷ್ಟಿಯಿಂದ ಅನೈತಿಕವಾದುದು ಆದರೆ ಕೃಷ್ಣನ ಬಾಂಧವ್ಯದ ದೃಷ್ಟಿಯಿಂದ ಅದು ಶ್ರೇಷ್ಠವಾದ ನೈತಿಕತೆ ಎಂಬುದನ್ನು ಇಲ್ಲಿ ನೋಡಬಹುದು.

ಅದೇ ರೀತಿ, ಯುಧಿಷ್ಠಿರ ಮಹಾರಾಜನು ನೀತಿವಂತ ಎನಿಸಿಕೊಂಡ. ಕೃಷ್ಣ ಅವನಿಗೆ ಉಪದೇಶಿಸಿದ, “ದ್ರೋಣಾಚಾರ್ಯನಿಗೆ ಅವನ ಮಗ ಸತ್ತನೆಂದು ತಿಳಿಸು” ದ್ರೋಣನ ಮಗ ಸತ್ತಿಲ್ಲದಿದ್ದರೂ. ಮಗನ ಸಾವಿನ ಕುರಿತು ಕೇಳದಿದ್ದರೆ ದ್ರೋಣ ಸಾಯುವುದು ಸಾಧ್ಯವಿರಲಿಲ್ಲ.

ಆದರೆ ಸತ್ಯವಂತ, ನೀತಿವಂತನಾದ ಯುಧಿಷ್ಠಿರನನ್ನು ಬಿಟ್ಟು ಅವನು ಯಾರನ್ನೂ ನಂಬುತ್ತಿರಲಿಲ್ಲ. ಆದುದರಿಂದ ಕೃಷ್ಣನು ಯುಧಿಷ್ಠಿರನಿಗೆ ದ್ರೋಣನ ಬಳಿಗೆ ಹೋಗಲು ತಿಳಿಸಿದ. “ಹೇಗೆ ಸುಳ್ಳು ಹೇಳಲಿ” ಎಂದು ಯುಧಿಷ್ಠಿರ ಹಿಂಜರಿದ. ಇದಕ್ಕಾಗಿ ಅವನು ನರಕವನ್ನು ನೋಡಬೇಕಾಯಿತು. ಅವನು ಅನೀತಿವಂತನಾಗುವಂತಾಯಿತು. ಮನ್ನಿಮಿತ್ತೇ ಕೃತಂ ಪಾಪಂ ಪುಣ್ಯಾಯ ಏವ ಕಲ್ಪತೇ.

ಆದುದರಿಂದ ಕೃಷ್ಣನ ತೃಪ್ತಿಯ ಮೇಲೆ ನಮ್ಮ ನೈತಿಕತೆ ಮತ್ತು ಅನೈತಿಕತೆ ಅವಲಂಬಿಸಿದೆ. ಕೃಷ್ಣನು ತೃಪ್ತನಾದರೆ ಅದು ನೈತಿಕತೆ, ಇಲ್ಲವಾದರೆ ಅದು ಅನೈತಿಕತೆ. ಆದುದರಿಂದ ಯಸ್ಯ ಪ್ರಸಾದಾದ್‌ ಭಗವತ್‌-ಪ್ರಸಾದೋ ಯಸ್ಯಾಪ್ರಸಾದಾನ್‌ ನ ಗತಿಃಕುರ್ತೋಪಿ. ನಮ್ಮ ನೀತಿ ಏನೆಂದರೆ ಕೃಷ್ಣ ಅಥವಾ ಅವನ ಪ್ರತಿನಿಧಿ, ಗುರುವನ್ನು ತೃಪ್ತಿಪಡಿಸುವುದು. ಅವನು ತೃಪ್ತನಾದರೆ ಅದು ನೈತಿಕತೆ, ಅವನು ತೃಪ್ತನಾಗದಿದ್ದರೆ ಅದು ಅನೈತಿಕತೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi