– ಆಕರ : ಜದುರಾಣಿದೇವಿ ದಾಸಿ ಮತ್ತು ಹರಿಕೇಶದಾಸರ ಸಂದರ್ಶನ ಟಿಪ್ಪಣಿಗಳು
(ಆಂಗ್ಲಮೂಲ : ಪ್ರಭುಪಾದ ನೆಕ್ಟರ್, ಸತ್ ಸ್ವರೂಪದಾಸ)
ಪ್ರಭುಪಾದರ ಅನುಯಾಯಿಗಳಲ್ಲಿ ಒಬ್ಬ ಮಹಿಳೆಗೆ ಏನೋ ಕಾಯಿಲೆಯಾಗಿತ್ತು. ಆಕೆಯನ್ನು ಪರೀಕ್ಷಿಸಿದ ವೈದ್ಯರಿಗೆ ಅದೇನೆಂದು ಪತ್ತೆ ಹಚ್ಚಲು ನಿಜಕ್ಕೂ ಸಾಧ್ಯವಾಗಲಿಲ್ಲವಾದರೂ, “ಆ ರೋಗ ಗುಣಪಡಿಸಲಾರದು’ ಎಂದು ತೀರ್ಪು ನೀಡಿ ಬಿಟ್ಟಿದ್ದರು! ತಮ್ಮ ಅಭಿಪ್ರಾಯ ಹೇಳಿ ಇತರರನ್ನು ನಂಬಿಸುವ ಇಂತಹ ವೈದ್ಯರ ವಂಚನೆಗೆ ಸಾಮತಿಯಾಗಿ, ಪ್ರಭುಪಾದರು ಭಾಗವತನೆಂಬ ವ್ಯಕ್ತಿಯು ಸ್ನೇಹಿತರಿಂದ ಮೋಸ ಹೋದ ಕಥೆಯನ್ನು ಹೇಳಿದರು :
ಭಾಗವತನ ಹತ್ತು ಮಂದಿ ಸ್ನೇಹಿತರು ಒಟ್ಟಾಗಿ ಹೇಗೆ ಆತನನ್ನು ‘ಭೂತ’ ನಾಗಿಸುತ್ತಾರೆ ಎನ್ನುವ ಕಥೆಯಿದು.
ಒಮ್ಮೆ ಭಾಗವತನ ಸ್ನೇಹಿತರು ಒಟ್ಟಾಗಿ, ಆತನೊಂದಿಗೆ ಮೋಸದಾಟವಾಡಲು ನಿಶ್ಚಯಿಸಿಕೊಂಡರು. ಅದಕ್ಕಾಗಿ ತಮ್ಮ ತಮ್ಮಲ್ಲೇ ಮಾತಾಡಿಕೊಂಡು ಸಿದ್ಧವಾದರು. ಭಾಗವತನು ತನ್ನ ಸ್ನೇಹಿತರಲ್ಲಿ ಒಬ್ಬನ ಮನೆಗೆ ಎಂದಿನಂತೆ ಭೇಟಿ ಕೊಟ್ಟ. ಆ ಗೆಳೆಯ, ಮೊದಲೇ ಯೋಚಿಸಿಕೊಂಡಿದ್ದಂತೆ ಭಯ ನಟಿಸುತ್ತಾ, “ಓಹ್ ! ನೀನು ಭೂತನಾಗಿ ಬಿಟ್ಟಿರುವೆ!” ಎಂದು ಕಿರುಚಿಕೊಂಡ.

ಭಾಗವತನಿಗೆ ಅಚ್ಚರಿಯಾಯ್ತು, ಅಪನಂಬಿಕೆಯಿಂದ ಆತ “ಇಲ್ಲ, ನಿನಗೇನೋ ಆಗಿರಬೇಕು. ನಾನು ಮೊದಲಿನಂತೇ ಇದ್ದೇನೆ” ಎಂದು ಉತ್ತರಿಸಿದ. ಆದರೆ ಅವನ ಸ್ನೇಹಿತ ಭೀತಿ ತುಂಬಿದ ದನಿಯಿಂದ, “ನೀನು ಭೂತವಾಗಿಬಿಟ್ಟಿರುವೆ” ಎಂದ. ಅದನ್ನು ಭಾಗವತ ಗಂಭೀರವಾಗಿ ಪರಿಗಣಿಸಲಿಲ್ಲ.
ಮತ್ತೊಂದು ದಿನ ಎರಡನೆ ಸ್ನೇಹಿತನ ಮನೆಗೆ ಆತ ಹೋದಾಗಲೂ ಇದೇ ಪರಿಸ್ಥಿತಿ ಎದುರಾಯ್ತು. ಹತ್ತೂ ಮಂದಿ ಸ್ನೇಹಿತರೂ ಹೀಗೆ ನಡೆದುಕೊಂಡಾಗ ಭಾಗವತನಿಗೆ ಅವರ ಮಾತಿನಲ್ಲಿ ನಂಬಿಕೆ ಹುಟ್ಟಿ ಬಿಟ್ಟಿತು. “ಹೌದು ! ನಾನು ಭೂತವಾಗಿ ಬಿಟ್ಟಿರುವೆ!” ಎಂದು ತನ್ನಲ್ಲೇ ಚಿಂತಿಸಿ ಬೆದರಿಹೋದ.
ನೀತಿ : ಮಾಯೆಯ ಪ್ರಭಾವ ಮತ್ತು ಪರಿಸರದ ಒತ್ತಡದಿಂದ ನಾವು ಇರುವುದಕ್ಕಿಂತ ಭಿನ್ನರೆಂದು (ಕೀಳೆಂದು) ಭಾವಿಸಿ ಬಿಡುತ್ತೇವೆ.






Leave a Reply