ಸ್ಥಳ: ಜಿನೇವ, ಸ್ವಿಡರ್‌ಲ್ಯಾಂಡ್, ದಿನಾಂಕ 2ನೇ ಜೂನ್, 1974
ಶ್ರೀಲ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರುಗಳೊಂದಿಗೆ ನಡೆದ ಸಂವಾದ ರೂಪ
– ಅನುವಾದ: ಡಾ.ಕೆ.ವೈ.ಬಾಲರಾಜ್
ಶ್ರೀಲ ಪ್ರಭುಪಾದ: ಜನರು ಕೆಟ್ಟವರಿರುವುದಿಲ್ಲ, ಅವರ ಒಳ್ಳೆಯವರಾಗಿರುತ್ತಾರೆ. ಆದರೆ ಈ ಸರ್ಕಾರ ಮೂಢರಿಂದ ತುಂಬಿದೆ. ಸರ್ಕಾರವನ್ನು ನಿಯಂತ್ರಿಸುವ ಜನರು ಠಕ್ಕರು ಮತ್ತು ಕಳ್ಳರಾಗಿದ್ದಾರೆ. ಪ್ರತಿಯೊಂದು ಕಡೆ ಸಾಮಾನ್ಯ ಜನರು ನಿಷ್ಕಪಟಿಗಳಾಗಿರುತ್ತಾರೆ. ಆದರೆ ಈ ಮೂಢರು ಅವರನ್ನು ತಪ್ಪುದಾರಿಗೆ ಎಳೆಯುತ್ತಾರೆ.

ಭಾರತ ಮತ್ತು ರಷ್ಯಾದಲ್ಲಿ ನಾನು ನೋಡಿದ್ದೇನೆ, ಅಲ್ಲಿನ ಜನರು ತುಂಬಾ ಒಳ್ಳೆಯವರಾಗಿದ್ದಾರೆ. ಅಂಧಾ ಯಥಾಂಧೈರ್ ಉಪನೀಯಮಾನ: ಈ ಕುರುಡು ನಾಯಕರು ಈ ಅಂಧಜನತೆಯನ್ನು ಹಳ್ಳಕ್ಕೆ ದಾರಿ ತೋರಿಸುತ್ತಾರೆ. ಸಾಮಾನ್ಯ ಜನರು ನಿಷ್ಕಪಟಿಗಳಾಗಿದ್ದಾರೆ.
ಉದಾ: ಭಾರತ ಪಾಕಿಸ್ತಾನ ಯುದ್ಧ, ಇ೦ತಹ ರಾಜಕಾರಣಿಗಳಿಂದ ನಡೆದಿದೆ. ಹಿಂದೂಗಳು ಮತ್ತು ಮುಸ್ಲಿಮರು ನಿಷ್ಕಪಟಿಗಳಾಗಿದ್ದಾರೆ. ಆದರೆ ಈ ರಾಜಕಾರಣಿಗಳು ಅವರನ್ನು ಅವರ ಮುಗ್ಧತೆಯನ್ನು ತಮ್ಮ ರಾಜಕೀಯ ಗುರಿಗಳಿಗಾಗಿ ಯುದ್ಧದಲ್ಲಿ ತೊಡಗಿಸುತ್ತಾರೆ. ಇತ್ತೀಚಿನ ಯುದ್ಧ ಘೋಷಣೆಗಳೂ ಕೂಡ ಈ ಮೂಢ ರಾಜಕಾರಣಿಗಳಿಂದ ಆಗುತ್ತಿವೆ. ಜನರಿಗೆ ಇದು ಬೇಕಾಗಿಲ್ಲ.
ಶಿಷ್ಯ: ಶ್ರೀಲ ಪ್ರಭುಪಾದರೇ, ರಾಜಕಾರಣಿಗಳು ಕೆಲವು ಕಡೆಗಳಲ್ಲಿ ಕೃತಕ ಅಭಾವವನ್ನು ಸೃಷ್ಟಿಸುತ್ತಿರುವ ಹಾಗಿದೆ. ಬೆಳೆಗಳು ಜಗತ್ತಿನಾದ್ಯಂತ ಎಲ್ಲಿ ಬೇಕಾದರಲ್ಲಿ ಬೆಳೆಯಬಹುದಲ್ಲವೇ?
ಶ್ರೀಲ ಪ್ರಭುಪಾದ: ಹೌದು, ಒಂದು ವೇಳೆ ಜಗತ್ತಿನಾದ್ಯಾಂತ ಬೆಳೆಗಳನ್ನು ಬೆಳೆಸಲಾಗದಿದ್ದರೆ ಪ್ರಾಕೃತಿಕ ವ್ಯವಸ್ಥೆಯ ಮೌಲ್ಯವಾದರೂ ಏನು?
ಶಿಷ್ಯ: ಭಾರತದ ಕೆಲವು ಭಾಗಗಳಲ್ಲಿ ವ್ಯವಸಾಯ ಮಾಡಲು ಆಗದಿರುವಷ್ಟು ಒಣ ಭೂಮಿ ಇದೆ.
ಶ್ರೀಲ ಪ್ರಭುಪಾದ: ‘ಒಣ’ ಎಂದರೆ ಅಲ್ಲಿ ನೀರಿಲ್ಲ. ಪ್ರಕೃತಿಯು ಬಯಸಿದರೆ ಅಲ್ಲಿ ಬಹಳಷ್ಟು ಮಳೆಯಾಗಬಹುದು. ಅದು ಪ್ರಕೃತಿಯ ವ್ಯವಸ್ಥೆ ಇದನ್ನು ಭಗವದ್ಗೀತೆಯಲ್ಲಿ ಉಲ್ಲೇಖಿಸಲಾಗಿದೆ. ಪರ್ಜನ್ಯಾತ್ ಅನ್ನ-ಸಂಭವಃ ಪರ್ಜನ್ಯಾತ್ ನಿಮಗೆ ಸಾಕಷ್ಟು ಮಳೆಯಾಗುವುದು ಎಂದು.
ಸಾಕಷ್ಟು ಮಳೆ ಪಡೆಯಲು ನೀವು ಯಜ್ಞವನ್ನು ಆಚರಿಸಬೇಕು. ಯಜ್ಞಾದ್ ಭವತಿ ಪರ್ಜನ್ಯಃ ಈಗಿನ ನಾಯಕರು ಮೂಢರಾಗುತ್ತಿದ್ದಾರೆ. ಅವರು ಯಜ್ಞವನ್ನು ಆಚರಿಸದೆ ದೊಡ್ಡ ದೊಡ್ಡ ಕಸಾಯಿಖಾನೆಗಳನ್ನು ತೆರೆಯುತ್ತಿದ್ದಾರೆ. ಹಾಗಾದರೆ ಮಳೆ ಎಲ್ಲಿಂದ ಬರಬೇಕು?

ಶಿಷ್ಯ: ಶ್ರೀಲ ಪ್ರಭುಪಾದರೇ, ಜಗತ್ತಿನಲ್ಲಿ ಬಹಳಷ್ಟು ಭಾಗಗಳಲ್ಲಿ ಮರಳುಭೂಮಿ ಹೆಚ್ಚಾಗುತ್ತಿದೆ.
ಶ್ರೀಲ ಪ್ರಭುಪಾದ: ಹೌದು ಮರಳುಭೂಮಿ ಜಾಸ್ತಿಯಾಗುತ್ತಿದೆ.
ಶಿಷ್ಯ: ಸದ್ಯದ ಪರಿಸ್ಥಿತಿಯಲ್ಲಿ ಜಗತ್ತಿನ ಎಲ್ಲ ಭಾಗದಲ್ಲೂ ಆಹಾರ ಬೆಳೆಯಲು ಸಾಧ್ಯವಿಲ್ಲ ಅಲ್ಲವೇ? ಕೆಲವು ಕಾಲದ ಮಟ್ಟಿಗಾದರೂ ಇದು ಸಾಧ್ಯವಾಗದಿರಬಹುದು. ಆಗ ಮಾತ್ರ ಆಹಾರ ಸಾಗಣೆಯ ಅವಶ್ಯಕತೆ ಇರುತ್ತದೆ.
ಶ್ರೀಲ ಪ್ರಭುಪಾದ: ಆಹಾರದ ಉತ್ಪಾದನೆಯೇ ಕಡಮೆಯಾದರೆ ಅದರ ಸಾಗಣೆಯ ಉಪಯೋಗವಾದರೂ ಏನು?
ಶಿಷ್ಯ: ಕೆಲವು ಸ್ಥಳಗಳಲ್ಲಿ ಉತ್ಪಾದನೆಯ ಭರವಸೆ ಈಗಲೂ ಇದೆ.
ಶ್ರೀಲ ಪ್ರಭುಪಾದ: ಒಂದು ವೇಳೆ ಎಲ್ಲೋ ಬೆಳೆಗಳು ಬೆಳೆಸಲಾಗುತ್ತಿದೆಯೆಂದರೆ ಇನ್ನೊಂದು ಸ್ಥಳದಲ್ಲಿಯೂ ಅದನ್ನು ಉತ್ಪಾದಿಸಲಾಗುತ್ತದೆ. ನೀವು ಸಂಕೀರ್ತನ ಯಜ್ಞ, ಭಗವಂತನ ಪವಿತ್ರ ನಾಮಗಳ ಜಪವನ್ನು ಮಾಡಬೇಕು. ಆಗ ನಿಮಗೆ ಸಾಕಷ್ಟು ಆಹಾರ ಸಿಗುತ್ತದೆ. ಯಜ್ಞಾದ್ ಭವತಿ ಪರ್ಜನ್ಯಃ ಪರ್ಜನ್ಯಾತ್ ಅನ್ನ ಸಂಭವಃ ಅನ್ನಾದ್ ಭವತಿ ಭೂತಾನಿ.
ಅದಕ್ಕೆ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಅನೇಕ ಕಸಾಯಿಖಾನೆಗಳಿವೆ ಅಲ್ಲವೇ?

ಶಿಷ್ಯ: ಶ್ರೀಲ ಪ್ರಭುಪಾದರೇ, ಕೆಲವು ದಿವಸಗಳ ಹಿಂದೆ ಹಾಲು ಮತ್ತು ಬೆಣ್ಣೆಯ ಉತ್ಪಾದನೆ ಅತಿ ಹೆಚ್ಚಾಗಿ ಇರುವುದರಿಂದ ಸರ್ಕಾರ ಹಸುಗಳನ್ನು ಕೊಲ್ಲಲು ಸೂಚಿಸಿದೆ ಎಂದು ನಾನು ಪತ್ರಿಕೆಗಳಲ್ಲಿ ಓದಿದೆ.
ಶ್ರೀಲ ಪ್ರಭುಪಾದ: “ಪ್ರಾಣಿಗಳನ್ನು ಕೊಲ್ಲಿ” ಓ ನೋಡಿ, ಹೀಗಾದರೆ ಅವರಿಗೆ ಹಾಲು ಮತ್ತು ಬೆಣ್ಣೆ ಸಿಗುವುದಿಲ್ಲ.
ಶಿಷ್ಯ: ಹಾಲು ತುಂಬಾ ಉತ್ಪಾದನೆಯಾಗುತ್ತಿರುವುದರಿಂದ ಹೆಚ್ಚಿಗೆ ಹಣ ಸಿಕ್ತಾ ಇಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.
ಶ್ರೀಲ ಪ್ರಭುಪಾದ: ಅವರಿಗೆ ಮುಖ್ಯವಾದದ್ದು ದುಡ್ಡು. ಅವರಿಗೆ ಮದ್ಯ ಖರೀದಿಸಲು ದುಡ್ಡು ಬೇಕು. ತಿನ್ನುವುದರಿಂದ ಅವರಿಗೆ ತೃಪ್ತಿ ಸಿಗುವುದಿಲ್ಲ. ಅವರಿಗೆ ಸ್ತ್ರೀ ಮತ್ತು ಮದ್ಯಕ್ಕಾಗಿ ದುಡ್ಡು ಬೇಕು. ಇದು ಅವರ ಸಿದ್ಧಾಂತ.
ಶಿಷ್ಯ: ಶ್ರೀಲ ಪ್ರಭುಪಾದರೇ, ಯು.ಎಸ್.ಎ ಯಲ್ಲೂ ಇದೇ ಸಮಸ್ಯೆ ಇತ್ತು. ಅಲ್ಲಿನ ರೈತರು ತಮಗೆ ಜಾಸ್ತಿ ದುಡ್ಡು ಸಿಗುತ್ತಾ ಇಲ್ಲ ಎಂದು ಹೇಳುತ್ತಿದ್ದರು.
ಶ್ರೀಲ ಪ್ರಭುಪಾದ: ಅವರಿಗೆ ಬುದ್ಧಿ ಇರುತ್ತಿದ್ದರೆ ಅವರು ಈ ಹಾಲು, ಬೆಣ್ಣೆ ಮತ್ತು ಕಾಳುಗಳು ಎಲ್ಲಿ ಅವಶ್ಯಕತೆಯಿದೆಯೋ ಅಲ್ಲಿ ರಫ್ತು ಮಾಡುತ್ತಿದ್ದರು. ಆಗ ಜಗತ್ತು ಸಂತೋಷದಿಂದ ಇರುತ್ತಿತ್ತು.
ಶಿಷ್ಯ: ಅದೇ ನನ್ನ ಪ್ರಶ್ನೆಯೂ ಆಗಿದೆ. ಒಂದು ವೇಳೆ ರಫ್ತು ಅವಶ್ಯಕತೆ ಇದೆಯೆಂದರೆ ಹಡಗು, ವಿಮಾನಗಳು ಮತ್ತು ಜಲ ವಿದ್ಯುತ್ ಜನಕ ಯಂತ್ರದ (electrical dynamos) ಅವಶ್ಯಕತೆ ಇದೆಯೇ?

ಶ್ರೀಲ ಪ್ರಭುಪಾದ: ಇಲ್ಲ ನನ್ನ ವಿಚಾರವೇನೆಂದರೆ, ಒಂದು ವೇಳೆ ಒಂದು ಜಾಗದಲ್ಲಿ ಕಾಳುಗಳು, ಬೆಣ್ಣೆ ಮತ್ತು ಹಾಲನ್ನು ತಯಾರಿಸಬಹುದಾದರೆ, ಏಕೆ ಇದೇ ವಸ್ತುಗಳು ಬೇರೆ ಸ್ಥಳಗಳಲ್ಲಿ ತಯಾರಿಸಲು ಸಾಧ್ಯವಿಲ್ಲ. ಭೂಮಿ ಎಲ್ಲ ಕಡೆಗೂ ಇದೆ.
ಇಲ್ಲಿ ಯುರೋಪ್ ಮತ್ತು ಅಮೆರಿಕದಲ್ಲಿ ಸಾಕಷ್ಟು ಉತ್ಪಾದನೆ ಇದೆ. ಏಕೆಂದರೆ ಜನಸಂಖ್ಯೆ ಕಡಿಮೆ ಇದೆ. ಅಮೆರಿಕ ಭಾರತದೇಶಕ್ಕಿಂತ ದೊಡ್ಡದಿದೆ. ಆದರೆ ಅಲ್ಲಿನ ಜನಸಂಖ್ಯೆ ಕಡಮೆ ಇರುವುದರಿಂದ ಅಲ್ಲಿ ಉತ್ಪಾದನೆ ಜಾಸ್ತಿ ಇದೆ. ಆದರೆ ಭಾರತ ತನ್ನ ಎಲ್ಲ ಭೂಮಿಯನ್ನು ಉಪಯೋಗಿಸುತ್ತಿಲ್ಲ.
ಶಿಷ್ಯ: ಶ್ರೀಲ ಪ್ರಭುಪಾದರೇ, ಪಶ್ಚಿಮ ದೇಶದ ಜನರು ಇಷ್ಟೊಂದು ಪಾಪಿಗಳಾಗಿದ್ದರೂ ಅವರಿಗೆ ಏಕಿಷ್ಟು ಸೌಲಭ್ಯ ಮತ್ತು ಸೌಖ್ಯ? ಇವೆಲ್ಲವೂ ಬಹಳ ಬೇಗನೆ ಹೊರಟು ಹೋಗುತ್ತವೆ ಎಂದು ಸ್ಪಷ್ಟವಾಗುತ್ತದೆ.
ಶ್ರೀಲ ಪ್ರಭುಪಾದ: ಹೌದು, ಜನರು ಹೇಗೆ ತಮ್ಮ ಪಾಪಕ್ರಿಯೆಗಳನ್ನು ಹೆಚ್ಚಿಗೆ ಮಾಡುತ್ತಾರೋ ಅವರ ಸುಖ, ಸೌಲಭ್ಯಗಳು ಹಾಗೆಯೇ ಅವರಿಂದ ಹೊರಟು ಹೋಗುತ್ತವೆ.
ಆದ್ದರಿಂದ ನಾವು ಹೇಳುತ್ತೇವೆ, “ಎಲ್ಲವೂ ಕೃಷ್ಣನಿಗೆ ಸೇರಿದ್ದು. ಕೃಷ್ಣಪ್ರಜ್ಞೆಯಲ್ಲಿ ಸಹಕರಿಸಿ. ಆಗ ಇಡೀ ಜಗತ್ತೇ ಸಂತೋಷದಿಂದ ಇರುತ್ತದೆ. ಏಕೆ ನೀವು ಇದು ಅಮೆರಿಕನ್, ಇದು ಭಾರತೀಯ, ಇದು ಸ್ವಿಸ್ ಎಂದು ಯೋಚಿಸುತ್ತೀರಿ. ಎಲ್ಲವೂ ಕೃಷ್ಣನಿಗೆ ಸೇರಿದ್ದು. ನಾವು ಕೃಷ್ಣನಿಗೆ ವಿಧೇಯರಾಗಿರೋಣ, ನಾವು ಕೃಷ್ಣನ ಮಕ್ಕಳಾಗಿರುವುದರಿಂದ ಅವನ ಸಂಪತ್ತನ್ನು ಆನಂದಿಸೋಣ. ಕೂಡಲೇ ನಿಮಗೆ ಸಂತೋಷ ಸಿಗುತ್ತದೆ.”
ಬಹಳ ಸಲ ನಾನು ಹೇಳಿದ್ದೇನೆ. ಜಗತ್ತಿನಾದ್ಯಂತ ಜನರು ಈಗಿನ ಜನಸಂಖ್ಯೆಗಿಂತ ಹತ್ತರಷ್ಟು ಹೆಚ್ಚು ಆಹಾರ ಉತ್ಪಾದಿಸುತ್ತಿದ್ದಾರೆ. ಆಫ್ರಿಕಾ, ಆಸ್ಟ್ರೇಲಿಯ ಮತ್ತು ಅಮೆರಿಕದಲ್ಲಿ ಹೆಚ್ಚಿನ ಆಹಾರ ಉತ್ಪಾದಿಸುವ ನಿರೀಕ್ಷೆ ಇದೆ.
ಆದರೆ ಅವರು ಸಹಕರಿಸುವುದಿಲ್ಲ. ಅವರು ಪ್ರಾಣಿಗಳನ್ನು ಕೊಲ್ಲುತ್ತಲೇ ಹೋಗುತ್ತಾರೆ. ಅವರು ಧಾನ್ಯಗಳನ್ನು ಸಮುದ್ರದಲ್ಲಿ ಹಾಕಿ, ”ಇದು ನಮ್ಮ ಭೂಮಿ, ಈ ಧಾನ್ಯಗಳು ನಮ್ಮ ಆಸ್ತಿ. ನಾವು ಇದನ್ನು ಹೇಗೆ ಬೇಕೋ ಹಾಗೆ ಎಸೆಯುತ್ತೇವೆ” ಎಂದು ವಾದಿಸುತ್ತಾರೆ. ಮೂಢ ನಾಗರಿಕತೆ.
(ಮುಂದುವರಿಯುವುದು)






Leave a Reply