ನಾಲ್ಕು ಅವಕಾಶಗಳು

ಒಬ್ಬ ಚತುರ ಮನುಷ್ಯನಿದ್ದನು, ಅವನಿಗೆ ಮರಣವೆಂದರೆ ತುಂಬಾ ಭಯವಿತ್ತು. ಆದ್ದರಿಂದ ಅವನು ಹೇಗೋ ಮೃತ್ಯುವಿನ (ಯಮನ) ಜೊತೆ ಸ್ನೇಹ ಬೆಳೆಸಿದನು. ಅವರ ಸ್ನೇಹವು ತುಂಬಾ ಗಾಢವಾಯಿತು.

ಒಮ್ಮೆ ಅವನು ಮೃತ್ಯುವನ್ನು ಕೇಳಿದನು – “ಮಿತ್ರನೇ! ಮರಣವು ಎಲ್ಲರಿಗೂ ನಿಶ್ಚಿತವಾದುದು. ಮರಣದ ನಂತರವೂ ಸುಖವಾಗಿ ಜೀವಿಸಬೇಕೆಂದರೆ ಏನು ಮಾಡಬೇಕು?”

“ಪರಲೋಕದಲ್ಲಿ ಪುಣ್ಯವೇ ಧನವಾಗಿರುತ್ತದೆ. ಆದ್ದರಿಂದ ಭಗವಂತನ ಧ್ಯಾನ, ಪರೋಪಕಾರ, ಪುಣ್ಯ ಸಂಪಾದನೆ ಮುಂತಾದವುಗಳನ್ನು ಮಾಡಬೇಕು” ಎಂದು ಮೃತ್ಯು ಹೇಳಿದನು.

“ಸರಿ, ಅದನ್ನೆಲ್ಲ ಮುಂದೆ ಮಾಡುತ್ತೇನೆ. ಮೊದಲು ನಾನು ಸುಖಭೋಗಗಳನ್ನು ಅನುಭವಿಸಬೇಕು. ನಂತರ ಪುಣ್ಯ ಸಂಪಾದನೆಯ ಬಗ್ಗೆ ಯೋಚಿಸುತ್ತೇನೆ. ಇದಕ್ಕಾಗಿ ನಿನಗೊಂದು ಸಣ್ಣ ವಿನಂತಿ ಇದೆ…”

“ಏನದು ವಿನಂತಿ? ನಿಸ್ಸಂಕೋಚವಾಗಿ ಹೇಳು.”

“ಪ್ರಾಣವನ್ನು ಹರಣ ಮಾಡುವವನು ನೀನೇ. ಪ್ರಾಣ ಹರಣ ಮಾಡುವುದು ನಿನ್ನ ಕರ್ತವ್ಯ. ಆದ್ದರಿಂದ ‘ನನ್ನ ಪ್ರಾಣವನ್ನು ಹರಣ ಮಾಡಬೇಡ’ ಎಂದು ನಿನಗೆ ಹೇಳಲು ನಾನು ಅರ್ಹನಲ್ಲ. ಆದರೆ ಸ್ನೇಹದ ಕಾರಣದಿಂದ ನನಗೊಂದು ವಿನಂತಿ ಏನೆಂದರೆ, ಪ್ರಾಣ ಹರಣ ಮಾಡುವ ಮೊದಲು ಒಮ್ಮೆ ನನಗೆ ನೆನಪಿಸಬೇಕು (ಸೂಚನೆ ನೀಡಬೇಕು).

ನಿನ್ನ ಸೂಚನೆ ಸಿಕ್ಕ ಕೂಡಲೇ ನಾನು ಪುಣ್ಯ ಸಂಪಾದನೆಯ ವಿಷಯಗಳತ್ತ ಗಮನ ಕೊಡುತ್ತೇನೆ. ಇದರಿಂದ ಜೀವನದಲ್ಲಿ ಸುಖಭೋಗಗಳೂ ಆಗುತ್ತವೆ ಮತ್ತು ಪುಣ್ಯ ಸಂಪಾದನೆಯೂ ಕಷ್ಟವಿಲ್ಲದೆ ನಡೆಯುತ್ತದೆ.”

“ಸರಿ ಹಾಗೆಯೇ ಆಗಲಿ. ಒಂದು ಬಾರಿ ನೆನಪಿಸುವುದರಿಂದ ಏನು? ನಾನು ನಿನಗೆ ಮೂರು-ನಾಲ್ಕು ಬಾರಿ ನೆನಪಿಸುತ್ತೇನೆ. ಸೂಚನೆ ಸಿಕ್ಕಾಗ ಸುಖಭೋಗಗಳನ್ನು ಗೌಣವಾಗಿಟ್ಟು (ಬಿಟ್ಟು) ಪುಣ್ಯ ಸಂಪಾದನೆಯ ಬಗ್ಗೆ ಯೋಚಿಸು. ಇಲ್ಲದಿದ್ದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ” ಎಂದು ಮೃತ್ಯು ಹೇಳಿದನು.

ಇದರಿಂದ ಆ ಮನುಷ್ಯನು ತುಂಬಾ ಸಂತುಷ್ಟನಾದನು. ಅವನು ಸ್ವಚ್ಛಂದವಾಗಿ ವ್ಯವಹರಿಸುತ್ತಾ ಭೋಗಜೀವನದಲ್ಲಿ ಆಸಕ್ತನಾದನು.

ವರ್ಷಗಳು ಕಳೆದವು. ಒಮ್ಮೆ ಮೃತ್ಯುವು ಅವನ ಪ್ರಾಣವನ್ನು ಅಪಹರಿಸಲು ಅವನ ಮುಂದೆ ಬಂದು ನಿಂತನು. ಅದನ್ನು ನೋಡಿ ಆಶ್ಚರ್ಯಪಟ್ಟ ಆ ಮನುಷ್ಯನು ಹೀಗೆ ಹೇಳಿದನು – “ಓ ಮಿತ್ರನೇ, ನೀನು ಸ್ನೇಹಧರ್ಮವನ್ನೇ ಮರೆತಂತಿದೆ! ನೀನು ನನಗೆ ನೆನಪಿಸಿ ಬರಬೇಕಿತ್ತಲ್ಲವೇ? ಹೀಗೆ ಹಠಾತ್ತಾಗಿ ಬಂದು ನಿಂತಿರುವುದು ನಿನಗೆ ಶೋಭಿಸುವುದೇ?”

ಆಗ ಮೃತ್ಯುವು ಹೇಳಿದನು – “ನಾನು ನಿನಗೆ ಅನೇಕ ಬಾರಿ ಸೂಚನೆಯ ಸಂದೇಶಗಳನ್ನು ಕಳುಹಿಸಿದ್ದೆ. ಆದರೆ ನೀನು ಅವುಗಳ ಉದ್ದೇಶವನ್ನು ಅರ್ಥಮಾಡಿಕೊಳ್ಳಲೇ ಇಲ್ಲ!…”

“ಅನೇಕ ಬಾರಿ ಸಂದೇಶ ಕಳುಹಿಸಿದ್ದೀಯಾ? ಇದು ನಂಬಲು ಅಸಾಧ್ಯ!”

“ನನ್ನ ಸಂದೇಶ ಸಿಕ್ಕರೂ ಅದರ ಆಂತರ್ಯವನ್ನು ಅರ್ಥಮಾಡಿಕೊಳ್ಳದೆ ನೀನು ಉಪೇಕ್ಷೆ ತೋರಿದ್ದೀಯಾ. ನಾನು ಇನ್ನೇನು ಮಾಡಲು ಸಾಧ್ಯ? ನಾನು ಮೊದಲನೇ ಬಾರಿ ನಿನ್ನ ಕೂದಲುಗಳನ್ನು ಬಿಳಿಯಾಗಿಸುವ ಮೂಲಕ ನನ್ನ ಆಗಮನ ಸಮೀಪಿಸಿದೆ ಎಂದು ನೆನಪಿಸಿದೆ. ಆದರೆ ನೀನು ಅದನ್ನು ನಿರ್ಲಕ್ಷಿಸಿ, ಕೂದಲಿಗೆ ಬಣ್ಣ ಹಚ್ಚಿ ಯೌವನವನ್ನು ಪಡೆಯುವ ಕನಸು ಕಾಣುತ್ತಿದ್ದೆ…”

“ನಿನ್ನ ಎರಡನೇ ಸಂದೇಶ ಎಂತಹದ್ದಾಗಿತ್ತು?” ಎಂದು ಆ ಮನುಷ್ಯ ಕೇಳಿದನು.

“ನಂತರದ ಕಾಲದಲ್ಲಿ ನಾನು ನಿನ್ನ ಹಲ್ಲುಗಳನ್ನು ಬೀಳಿಸಿದೆ. ಆ ಸಂದರ್ಭದಲ್ಲೂ ನೀನು ಕೃತಕ ಹಲ್ಲುಗಳನ್ನು ಹಾಕಿಸಿಕೊಂಡು ನಾಲಿಗೆಯ ರುಚಿಯನ್ನು ತಣಿಸಲು ಪ್ರಯತ್ನಿಸಿದೆ.”

ಲಜ್ಜೆಯನ್ನು (ನಾಚಿಕೆ) ಅನುಭವಿಸುತ್ತಾ ಆ ಮನುಷ್ಯ ಮತ್ತೆ ಕೇಳಿದನು – “ಮೂರನೇ ಸಂದೇಶವನ್ನು ಯಾವ ರೂಪದಲ್ಲಿ ಕಳುಹಿಸಿದೆ?”

“ನಾನು ನಿನ್ನ ನೇತ್ರಶಕ್ತಿಯನ್ನು (ದೃಷ್ಟಿ) ಕಡಿಮೆ ಮಾಡಿದೆ. ಆಗಲೂ ನೀನು ಕನ್ನಡಕದ ಮೂಲಕ ಜಗತ್ತನ್ನು ನೋಡಲು ಪ್ರಯತ್ನಿಸಿದೆ… ನಂತರ ನಾನು ನಾಲ್ಕನೇ ಸಂದೇಶವನ್ನೂ ಕಳುಹಿಸಿದೆ…”

“ನಾಲ್ಕನೇ ಬಾರಿಯೂ ಸಂದೇಶ ಕಳುಹಿಸಿದ್ದೀಯಾ? ಅದು ಎಂತಹದ್ದಾಗಿತ್ತು?”

“ವೃದ್ಧಾಪ್ಯದಿಂದ ಬರುವ ವಿವಿಧ ರೋಗಗಳನ್ನು ನಾನು ನಾಲ್ಕನೇ ಸಂದೇಶವಾಗಿ ಕಳುಹಿಸಿದೆ. ಆಗಲೂ ಔಷಧಗಳನ್ನು ಸೇವಿಸುತ್ತಾ ನೀನು ಭೋಗಜೀವನವನ್ನೇ ಮುಂದುವರಿಸಿದೆ.   ಮಾಡಬೇಕಾಗಿದ್ದ ಭಗವಂತನ ಧ್ಯಾನ ಮತ್ತು ಪುಣ್ಯ ಸಂಪಾದನೆಗಳನ್ನು  ನೀನು ಮಾಡಲೇ ಇಲ್ಲ!…”

ಇದನ್ನು ಕೇಳಿ ಆ ಮನುಷ್ಯನು ಲಜ್ಜೆಯಿಂದ ತಲೆತಗ್ಗಿಸಿ ನಿಂತು – “ದಯವಿಟ್ಟು ಇನ್ನೊಂದು ಅವಕಾಶ ಕೊಡು. ನಾನು ಪುಣ್ಯ ಸಂಪಾದನೆ ಮಾಡಲು ಇಚ್ಛಿಸುತ್ತೇನೆ” ಎಂದು ಪ್ರಾರ್ಥಿಸಿದನು.

“ಹೇ ಮಿತ್ರನೇ, ನಾಲ್ಕು ಬಾರಿ ಸಂದೇಶ ಕಳುಹಿಸಿದರೂ ಜಾಗರೂಕನಾಗದ ನಿನಗೆ ಮತ್ತೆ ಇನ್ನೊಂದು ಅವಕಾಶವನ್ನು ಹೇಗೆ ತಾನೇ ಕೊಡಲು ಸಾಧ್ಯ? ಇದು ಸಾಧ್ಯವಿಲ್ಲ. ಎಲ್ಲರ ಜೀವಿತಕಾಲವು ಸುನಿಶ್ಚಿತವಾದುದು. ಅದನ್ನು ದೀರ್ಘಗೊಳಿಸಲು ಅಥವಾ ಮುಂದೆ ತಳ್ಳಲು ಸಾಧ್ಯವಿಲ್ಲ.

ಜೀವನದ ಅಂತ್ಯದ ಮುಂಚೆಯೇ ಯಾರು ಪುಣ್ಯ ಸಂಪಾದನೆಯ ಬಗ್ಗೆ ಯೋಚಿಸುತ್ತಾರೋ ಅವರು ಪರಲೋಕದಲ್ಲಿ ಸುಖವಾಗಿರುತ್ತಾರೆ. ನೀನು ಅಂತಹ ಜೀವನವನ್ನೇ ನಡೆಸಲಿಲ್ಲ, ಆದ್ದರಿಂದ ಈಗ ಪಶ್ಚಾತ್ತಾಪ ಪಡುವುದರಿಂದ ಯಾವುದೇ ಪ್ರಯೋಜನವಿಲ್ಲ” ಎಂದು ಹೇಳಿ ಮೃತ್ಯುವು ಅವನ ಪ್ರಾಣವನ್ನು ಅಪಹರಿಸಿಕೊಂಡು ಹೋದನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi