ನಾರದ ಮುನಿಯ ಕಥೆ

“ನಾರಾಯಣ… ನಾರಾಯಣ!!” ಎಂದ ಕೂಡಲೆ ಯಾರ ನೆನಪಾಗುತ್ತದೆ ಹೇಳಿ? ನಾರದ ಮುನಿಗಳು ತಾನೆ?

ಹೌದು, ಸದಾ ತಂಬೂರಿ ಮೀಟುತ್ತ ನಾರಾಯಣ ಸ್ಮರಣೆ ಮಾಡುತ್ತ ತ್ರಿಲೋಕ ಸಂಚಾರಿಯಾಗಿರುವ ಶ್ರೀ ನಾರದ ಮುನಿಗಳು ನಮಗೆಲ್ಲರಿಗೂ ಗೊತ್ತು. ಆದರೆ ಅವರ ಬಗ್ಗೆ ನಮಗೆ ಗೊತ್ತಿರುವುದೆಷ್ಟು?

ನಾರದ ಮುನಿಗಳ ಪೂರ್ವ ವೃತ್ತಾಂತ ಹೀಗಿದೆ ನೋಡಿ:

ತಮ್ಮ ಮೊದಲ ಜನ್ಮದಲ್ಲಿ ನಾರದರು ಉಪಬರ್ಹಣ ಎಂಬ ಗಂಧರ್ವ ಪುರುಷರಾಗಿದ್ದರು. ಬಹಳ ಸುಂದರ ರೂಪದ ತರುಣರಾಗಿದ್ದರು. ಒಮ್ಮೆ ಸುರಲೋಕದಲ್ಲಿ ಒಂದು ಯಜ್ಞ ನಡೆಯಿತು. ಎಲ್ಲ ದೇವತೆಗಳೂ ಅಲ್ಲಿ ಸೇರಿದ್ದರು. ಉಪಬರ್ಹಣನೂ ಅಲ್ಲಿಗೆ ಹೋದ. ಎಲ್ಲರೂ ಭಕ್ತಿಭಾವದಿಂದ ಭಗವಂತನ ಸ್ಮರಣೆ ಮಾಡುತ್ತಿದ್ದರು. ಆದರೆ ಈತ ಸುಂದರಿಯರಾದ ಗಂಧರ್ವ ಕನ್ಯೆಯರೊಡನೆ ಸೇರಿ ಬೇರೆ ಹಾಡುಗಳನ್ನು ಹೇಳುತ್ತ ಮೋಜಿಗೆ ತೊಡಗಿದ.

ಉಪಬರ್ಹಣನ ದುರ್ವತ್ರನೆಯಿಂದ ಕೋಪಗೊಂಡ ದೇವತೆಗಳು ಅವನಿಗೆ ಭೂಮಿಯಲ್ಲಿ ದಾಸಿಯ ಮಗನಾಗಿ ಜನಿಸೆಂದು ಶಪಿಸಿದರು.

ದೇವತೆಗಳ ಶಾಪದಂತೆ ಉಪಬರ್ಹಣ ದಾಸಿಯೊಬ್ಬಳ ಮಗನಾಗಿ ಜನಿಸಿದ. ಆಕೆ ವೇದಜ್ಞಾನಿಗಳಾದ ಬ್ರಾಹ್ಮಣನ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಳು. ತಾಯಿ-ಮಗ ಇಬ್ಬರೂ ಬ್ರಾಹ್ಮಣರ ನಡೆ-ನುಡಿಗಳಿಂದ  ಪ್ರಭಾವಿತರಾಗಿದ್ದರು. ಈ ಬಾಲಕ ಸಾಕಷ್ಟು ಗಂಭೀರವಾಗಿಯೂ ತೇಜಸ್ವಿಯಾಗಿಯೂ ಕಂಗೊಳಿಸುತ್ತಿದ್ದ.

ಬ್ರಾಹ್ಮಣ ಮನೆಯಲ್ಲಿ ಚಾತುರ್ಮಾಸ್ಯ ವ್ರತಕ್ಕಾಗಿ ಹಲವಾರು ಮಹಾತ್ಮರು ತಂಗಿದ್ದರು. ಇವರ ಸೇವೆಯಲ್ಲಿ ಬಾಲಕ ತೊಡಗಿದ್ದ. ಚಿಕ್ಕ ಬಾಲಕನಾಗಿದ್ದರೂ ದಾಸಿ ಪುತ್ರನು ಹಿತ ಮಿತವಾಗಿ ಮಾತನಾಡುತ್ತಿದ್ದ. ಬಾಲಸಹಜವಾದ ಯಾವ ತಪ್ಪನ್ನೂ ಆತ ಮಾಡುತ್ತಿರಲಿಲ್ಲ. ತಪಸ್ವಿಗಳೆಲ್ಲರ ಊಟ ಮುಗಿದ ಮೇಲೆ ಪಾತ್ರೆಯಲ್ಲಿ ಉಳಿದ ಮಹಾಪ್ರಸಾದವನ್ನು ಮಾತ್ರ ಸೇವಿಸುತ್ತಿದ್ದ. ಹೀಗೆ ಅಪರೋಕ್ಷವಾಗಿ ಅವನೂ ಭಗವತ್ಸೇವೆಯಲ್ಲಿ ಪಾಲ್ಗೊಂಡ.

ಆಗ ಅವನಿಗೆ ಕೇವಲ ಐದು ವರ್ಷ ವಯಸ್ಸು. ಸ್ವಲ್ಪ ದಿನಗಳಲ್ಲೇ ತಾಯಿಯೂ ತೀರಿಕೊಂಡಳು. ಇದಾದ ಅನಂತರ ಬಾಲಕ ಅಡವಿಗೆ ಹೋಗಿ ತಪಸ್ವಿಗಳ ಒಡನಾಟದಿಂದ ಲಭಿಸಿದ್ದ ಸಂಸ್ಕಾರದ ಪ್ರೇರಣೆಯಿಂದ ತಪಸ್ಸಿಗೆ ತೊಡಗಿದ.

ಹೀಗೆ ಧ್ಯಾನದಲ್ಲಿರುವಾಗ ಭವ್ಯವಾದ ಭಗವಂತನ ಸ್ವರೂಪ ಅವನಿಗೆ ಗೋಚರಿಸಿತು. ಆದರೆ ಈ ದಿವ್ಯಾನುಭವ ಅವನು ಸವಿದದ್ದು ಒಂದು ಕ್ಷಣ ಮಾತ್ರ. ಬಾಲಕ ಮತ್ತೆ ಮತ್ತೆ ಆ ಅದ್ಭುತ ಭಗವತ್ ಸೌಂದರ್ಯವನ್ನು ಸವಿಯಬೇಕೆಂದು ಮನಸ್ಸನ್ನು ಏಕಾಗ್ರಗೊಳಿಸಲು ಯತ್ನಿಸಿದ. ಆದರೆ, ಸಫಲವಾಗಲಿಲ್ಲ.

ಆ ಹೊತ್ತಿಗೆ ಅಶರೀರ ವಾಣಿಯೊಂದು, “ನೀನು ಶರೀರ ತ್ಯಾಗ ಮಾಡಿದ ಅನಂತರ  ನನ್ನನ್ನು ಸೇರುವೆ.” ಎಂದು ಹೇಳಿತು. ಅದರಂತೆ ಅನಂತರ ಅವನ ದೇಹ ಬಿದ್ದು ಹೋಯಿತು. ಆಗ ಮಹಾ ಜಲ ಪ್ರಳಯವುಂಟಾಯಿತು.

ಮುಂದೇನಾಯಿತು ಗೊತ್ತೇ?

ಪ್ರಳಯದ ಅನಂತರ ಪುನಃ ಲೋಕದ ಸೃಷ್ಟಿ ಆರಂಭವಾಯಿತು. ಶ್ರೀಹರಿಯ ನಾಭಿ (ಹೊಕ್ಕಳು)ಯಿಂದ ಹೊರಟ ಕಮಲದ ಹೂವಿನಲ್ಲಿ ಬ್ರಹ್ಮದೇವ ಆವಿರ್ಭವಿಸಿದ, ಬ್ರಹ್ಮ ದೇವೋತ್ತಮ ಪರಮಪುರುಷನಿಂದ ಸೃಷ್ಟಿಕಾರ್ಯಕ್ಕೆ ನಿಯೋಜಿಸಲ್ಪಟ್ಟ.

ಬ್ರಹ್ಮದೇವನು ತನ್ನ ಕಾರ್ಯ ಆರಂಭಿಸಿದಾಗ ಆತನ ಮಂಗಳ ಶರೀರದ ಬೇರೆ ಬೇರೆ ಭಾಗಗಳಿಂದ ಮಹರ್ಷಿಗಳು ಜನಿಸಿದರು. ಇವರಲ್ಲಿ ಬ್ರಹ್ಮನ ತೊಡೆಯಿಂದ ಜನಿಸಿದವರೇ ಶ್ರೀ ನಾರದ ಮುನಿಗಳು!

ಗಂಧರ್ವನಾಗಿದ್ದು ಶಾಪದಿಂದ ದಾಸಿಯ ಮಗನಾಗಿ ಜನಿಸಿ, ಮತ್ತೆ ತಪಸ್ಸಿನಿಂದ ಭಗವಂತನನ್ನು ಸೇರಿ ಮಹಾಭಕ್ತನಾಗಿ ಹುಟ್ಟಿ ಬಂದ ನಾರದರ ಕಥೆ ಇದು. ಎಷ್ಟೋ ಜನರಿಗೆ ಗೊತ್ತಿಲ್ಲದ ಕಥೆ ಇಂದು ನಿಮಗೆ ಗೊತ್ತಾಯಿತಲ್ಲವೇ?

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi