ಗೌಡೀಯ ವೈಷ್ಣವ ಪರಂಪರೆಯಲ್ಲಿ ಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಪಸರಿಸಲು, ಕೃಷ್ಣ ಪ್ರಜ್ಞೆ ಹಾಗೂ ಭಕ್ತಿ ಆಂದೋಲನದ ಮಾರ್ಗದರ್ಶನ ಮಾಡಿದ ಹಿರಿಯರ ಗುರುಪರಂಪರೆಯನ್ನು ಪರಿಚಯಿಸುವ ಉದ್ದೇಶ ಈ ಅಂಕಣದ್ದು.
– ದಶಂ
“ನೀನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ” ಎಂದು ಹಾಡಿ ಭಗವಂತನ ನಾಮಸ್ಮರಣೆಯ ಬಲವನ್ನು ದಾಸರು ಸಾರಿ ಹೇಳಿದ್ದಾರೆ. ಭಗವಂತನ ನಾಮೋಚ್ಛಾರದ ಪ್ರಭಾವವನ್ನು ಅದರಿಂದಾಗುವ ಆನಂದವನ್ನು ಅನವರತ ಅನುಭವಿಸಿ, ಜಗತ್ತಿನ ಎಲ್ಲೆಡೆ ಪ್ರಸಾರ ಮಾಡುವ ಮಹಾ ಮಹಿಮರೇ ಶ್ರೀ ನಾರದ ಮಹಾಮುನಿಗಳು, ನಾರದರನ್ನು ಗುರುಪರಂಪರೆಯಲ್ಲಿಟ್ಟು ಎಲ್ಲ ಪಂಥದ ಪ್ರಾಜ್ಞರೂ ಗೌರವಿಸಿದ್ದಾರೆ. ಸದಾ ಸರ್ವದಾ ಕೃಷ್ಣ ಸ್ಮರಣೆಯಲ್ಲಿರುತ್ತ ಜಗತ್ಕಲ್ಯಾಣಕ್ಕಾಗಿ ದುಡಿಯುವ ನಾರದರು ತ್ರಿಲೋಕ ಸಂಚಾರಿಗಳು.

ಮನ್ವಂತರ ಮನ್ವಂತರಗಳಿಂದ ಇರುವ ಚಿರ೦ಜೀವಿಗಳು. ಭಾಗವತ ಸಂಪ್ರದಾಯದ ಮೂಲ ಪುರುಷರು. ಸಾಕ್ಷಾತ್ ಬ್ರಹ್ಮನಿಂದಲೇ ಬ್ರಹ್ಮಜ್ಞಾನ (ವೇದದ ಅಂತರಾರ್ಥ, ದೈವಪ್ರಜ್ಞೆಯ ರಹಸ್ಯ) ಅರಿತ ಶ್ರೇಷ್ಠರು. ಇವರ ಪ್ರಸ್ತಾಪವು ಭಾಗವತ ಪುರಾಣದಲ್ಲಿದೆ. ಶಿವ ಪುರಾಣ, ದೇವಿ ಪುರಾಣ, ಗರುಡ ಪುರಾಣ, ಲಿಂಗ ಪುರಾಣ ಮುಂತಾದ ಎಲ್ಲ 18 ಪುರಾಣಗಳಲ್ಲೂ ರಾಮಾಯಣ, ಮಹಾಭಾರತ, ಹರಿವಂಶ ಮುಂತಾದ ಗ್ರಂಥಗಳಲ್ಲೂ ಪ್ರಸ್ತಾಪಿತವಾಗಿದೆ. ನಾರದರು ತಮ್ಮ ಪೂರ್ವ ಜನ್ಮದಲ್ಲಿ ದಾಸಿಯೊಬ್ಬಳ ಮಗನಾಗಿದ್ದರು. ಆದರೆ ಸಜ್ಜನ ಸಹವಾಸದಿಂದಾಗಿ ಅವರಿಗೆ ಭಗವತ್ ಕೃಪೆ ಒದಗಿ ಬಂತು. ದೇವರ ಸೇವೆಯ ಸಂಬಂಧದ ದಿವ್ಯ ಜ್ಞಾನ ಪ್ರಾಪ್ತಿಯಾಯಿತು. ಮುಂದಿನ ಜನ್ಮದಲ್ಲಿ ಬೇರಾರಿಗೂ ಹೋಲಿಸಲಸಾಧ್ಯವಾದ ವ್ಯಕ್ತಿಯಾಗಿ ಅವರು ಮೂಡಿಬಂದರು. ಈ ವಿಚಾರವನ್ನು ವ್ಯಾಸರಿಗೆ ಸ್ವತಃ ನಾರದರೇ ನಿರೂಪಿಸಿರುವುದನ್ನು ಭಾಗವತದಲ್ಲಿ ಕಾಣಬಹುದು.
ನಾರ ಎಂದರೆ ಪರಮ ಪುರುಷ, ದ ಎಂದರೆ ನೀಡಬಲ್ಲವರು. ಅವರು ಎಲ್ಲರಿಗೂ ಪರಮ ಪುರುಷನನ್ನು ನೀಡಲು ಶಕ್ತರು. ನಾರದರು ಒ೦ದೂ ನರೆಗೂದಲಿಲ್ಲದ ಶುಭ್ರವಾದ ಮುಡಿ ಹೊಂದಿದ್ದಾರೆ. ಇಂದ್ರನು ಕೊಟ್ಟದೈವ ನಿರ್ಮಿತವಾದ ತೆಳುವಾದ ಎರಡು ದಕೂಲಗಳನ್ನು ಧರಿಸಿದ್ದಾರೆ. ಕೈಯಲ್ಲಿ ತಂಬೂರಿ ಶೃತಿ ಹಿಡಿದು ಹರಿನಾಮ ಸ್ಮರಣೆ ಮಾಡುತ್ತ ತ್ರಿಲೋಕ ಸಂಚಾರಿಯಾಗಿರುತ್ತಾರೆ. ಬ್ರಹ್ಮನ ಹತ್ತು ಮಾನಸ ಪುತ್ರರಲ್ಲಿ ನಾರದರು ಕೊನೆಯವರು. ಅವರ ಅಣ್ಣಂದಿರಾದ ಮರೀಚಿ, ಅಂಗೀರಸ, ಹತ್ರಿ, ಪುಲಸ್ತ್ಯ ಪುಲಹ, ಕೃತು, ವಶಿಷ್ಠ, ಭೃಗು ಹಾಗೂ ದಕ್ಷ ಇವರೂ ಸಹ ಸಾಧಕರಾಗಿ ಹೆಸರು ಮಾಡಿದ್ದಾರೆ.
ನಾರದರು ಧರ್ಮದ ಅಂತರಾರ್ಥವನ್ನೂ, ವೇದಗಳ ನಿಜವಾದ ಗಮ್ಯವನ್ನೂ ಅರಿತ ಜ್ಞಾನಿಗಳಾಗಿದ್ದಾರೆ. ದಕ್ಷನ ಇಬ್ಬರು ಪುತ್ರರಿಗೆ ಅವಿವಾಹಿತರಾಗಿ ಉಳಿದು ಸಾಧನಾಪಥದಲ್ಲಿ ಮುಂದುವರಿಯಲು ಅನುಕೂಲವಾಗುವಂತೆ ವೈರಾಗ್ಯ ತತ್ವ ಬೋಧನೆಯನ್ನು ನಾರದರು ಮಾಡಿದರು. ತಂದೆ ತಾಯಿಗಳಿಂದ ಮಕ್ಕಳು ದೂರವಾಗಿ ತಪಸ್ಸಿಗೆ ಕುಳಿತರು. ಇದರಿ೦ದ ಕುಪಿತನಾದ ದಕ್ಷನ ಸರ್ವದಾ ಅಲೆಮಾರಿಯಾಗಿದ್ದರು ಎಂದು ನಾರದರಿಗೆ ಶಾಪವಿತ್ತನು.
ನಾರದರು ಈ ಶಾಪವನ್ನು ಜಗತ್ ಕಲ್ಯಾಣಕ್ಕಾಗಿ ಉಪಯೋಗಿಸಿ ಕೊ೦ಡರು. ದುಷ್ಟ ರಾಕ್ಷಸರಿಂದ ಭೂಮಿಯನ್ನು ಪಾರು ಮಾಡಿದರು. ಧರ್ಮವನ್ನು ಉದ್ಧರಿಸಿದರು. ಸಂಕಲ್ಪಸಿದ ನಾರದರಿಗೆ ಈ ಶಾಪ ಲೋಕ ಕಲ್ಯಾಣ ಮಾಡುವ ವರವೇ ಆಯಿತು. ರಾಕ್ಷಸರಿಗೂ ಹರಿಗೂ ಕಲಹ ಗಂಟಿಕ್ಕಿ ಭೂಬಾರಹರಣಕ್ಕೆ ಕಾರಣ ಪುರುಷರಾದರು.
ನಾರದರು ಶ್ರೀಮನ್ನಾರಾಯಣನ ಅನನ್ಯ ಭಕ್ತರಾಗಿದ್ದು ಅನವರತ ಭಗವನ್ ನಾಮಸ್ಮರಣೆಯಲ್ಲಿದ್ದುದರಿಂದ ಅವರಿಗೆ ಭಗವಂತನ ಎಲ್ಲಾ ಲೀಲಾ ವಿನೋದಗಳು ನೇರವಾಗಿ ಬ್ರಹ್ಮದೇವನಿಂದಲೇ ಉಪದೇಶಿಸಲ್ಪಟ್ಟವು. ಭಾಗವತ ಪುರಾಣವನ್ನು ವ್ಯಾಸರಿಗೆ ಉಪದೇಶಿಸಿ ಅವರಿಂದ ಭಾಗವತವನ್ನು ಬರೆಯಿಸಿದ್ದು ನಾರದರೆ! ವಾಲ್ಮೀಕಿಗಳಿಗೆ ರಾಮಾಯಣವನ್ನು ಬರೆಯಲು ಪ್ರೇರೆಪಿಸಿದ್ದೂ ನಾರದರೇ! ಮಹಾಭಾರತವನ್ನು ದೇವಲೋಕದಲ್ಲಿ ಮೊದಲಿಗೆ ಹಾಡಿ ಪ್ರಚುರಪಡಿಸಿದ್ದೂ ನಾರದರೇ!
ಜಗತ್ತು ಇಂದು ನಾರದರನ್ನು ಈ ಮೇಲಿನ ಕಾರಣಗಳಿಗಲ್ಲದೆ ಅವರು ರಚಿಸಿದ ನಾರದ ಭಕ್ತಿಸೂತ್ರಗಳಿಗಾಗಿ ಜ್ಞಾಪಿಸಿಕೊಳ್ಳುತ್ತದೆ. ಭಕ್ತಿಸಿದ್ಧಾಂತದ ಮೂಲ ಗ್ರ೦ಥವೆಂದೇ ನಾರದರ ಭಕ್ತಿಸೂತ್ರಗಳು ಮಾನ್ಯವಾಗಿವೆ. ಸೂತ್ರ ಎ೦ದರೆ ಸುಲಭವಾದ ವ್ಯವಸ್ಥಿತವಾದ ಮಾರ್ಗೋಪಾಯ ಎಂದರ್ಥ. ಇಂಗ್ಲಿಷ್ನಲ್ಲಿ ಇದನ್ನು Formula ಎನ್ನುತ್ತಾರೆ. ಗೋಜಲು ಗೋಜಲಾದ ಕ್ಲಿಷ್ಟಕರವಾದ ಗಣಿತದ ಸಮಸ್ಯೆಗಳನ್ನು ಬಿಡಿಸಲು ಗಣಿತಶಾಸ್ತ್ರದಲ್ಲಿ ಸೂತ್ರಗಳನ್ನು ನೀಡಲಾಗಿದೆ. ಈ ಸೂತ್ರಗಳಿಲ್ಲದೆ ಸಮಸ್ಯೆಗಳನ್ನು ಬಿಡಿಸುವುದು ಮಹಾ ಕಷ್ಟ. ಅಂತೆಯೇ ಪ್ರಾಪಂಚಿಕ ಗಜಾಗೊಂಜಲಗಳಿಂದ ಬಿಡುಗಡೆ ಹೊಂದಲು ಭಗವಂತನಿಗೆ ಶರಣಾಗುವುದೊಂದೇ ಮಾರ್ಗ. ಈ ಶರಣಾಗತಿಯ ಮಾರ್ಗದರ್ಶಿ ಸೂತ್ರಗಳೇ ನಾರದ ಭಕ್ತಿಸೂತ್ರಗಳು.

ನಾರದರು ವೇದಗಮ್ಯಗಳನ್ನು ಅರಿತ ಜ್ಞಾನಿಯಾಗಿದ್ದಂತೆಯೇ ಧರ್ಮಸೂತ್ರಗಳನ್ನು ಬಲ್ಲ ಅನುಭಾವಿಕರೂ ಸಹ. ದ್ರೌಪತಿಯನ್ನು ಪಾಂಡವರು ಒ೦ದೊ೦ದು ವರ್ಷ ಉಪಭೋಗಿಸಬೇಕೆ೦ದು ತಪ್ಪಿದವರು ತೀರ್ಥಯಾತ್ರೆ ಮಾಡಬೇಕೆಂದು ವಿಧಿಸಿದವರು ನಾರದರು. ಅಕಾಲ ಮರಣಕ್ಕೊಳಗಾಗಿ ತನ್ನ ಅರಮನೆಯ ಮುಂದೆ ಗೋಳಾಡುತ್ತಿದ್ದ ಬ್ರಾಹ್ಮಣ ಪುತ್ರನ ತ೦ದೆ ತಾಯಿಗಳ ಕುರಿತು ಚಿಂತಿಸುತ್ತಿದ್ದ ಶ್ರೀರಾಮನಿಗೆ ಯುಗಧರ್ಮವನ್ನು ಬೋಧಿಸಿ ವಿವರಿಸಿದವರು ನಾರದರು. ಪ್ರಹ್ಲಾದನು ತನ್ನ ತಾಯಿಯ ಗರ್ಭದಲ್ಲಿದ್ದಾಗಲೇ ಅವನಿಗೆ ತತ್ತ್ವಬೋಧನೆ ಮಾಡಿ ಹಿರಣ್ಯಕಶಿಪುವಿನ ಸಂಹಾರಕ್ಕೂ ನರಸಿಂಹನ ಅವತಾರಕ್ಕೂ ಕಾರಣರಾದವರು ನಾರದರು.
ಬಾಲಕ ಧ್ರುವನಿಗೆ ವಿಷ್ಣುವನ್ನು ಕುರಿತು ತಪಸ್ಸನ್ನು ಮಾಡಲು ಉಪದೇಶಿಸಿ ಶಾಶ್ವತ ನಕ್ಷತ್ರ ಸ್ಥಾನವನ್ನು ಹೊಂದಲು ಪ್ರೇರೇಪಿಸಿದ್ದು ನಾರದರು. ಪಾರಿಜಾತ ವೃಕ್ಷವನ್ನು ಭೂಮಿಗೆ ತರಲು ಕಾರಣರಾದವರು ನಾರದರು. ಭಕ್ತಿಯ ಬಾರವೇ ದೊಡ್ಡದೆಂದು ತುಲಸೀ ದಳ ಮಾತ್ರದಿಂದ ಕೃಷ್ಣತುಲಾಭಾರ ಮಾಡಿಸಿ ತೋರಿಸಿದವರು ನಾರದರು. ಶ್ರೀ ಕೃಷ್ಣನು ದ್ವಾರಕೆಯಲ್ಲಿ ತನ್ನ 16 ಸಾವಿರ ರಮಣೀಯರೊಂದಿಗೆ ಏಕ ಕಾಲದಲ್ಲಿ ಸಂಸಾರ ಮಾಡುತ್ತಿರುವ ದೃಶ್ಯವನ್ನು ಒಮ್ಮೆಲೇ ಕಂಡವರು ನಾರದರು. ಶೂರಸೇನ ದೇಶದ ಅರಸ ಚಿತ್ರಕೇತು ಪುತ್ರಶೋಕದಿಂದ ಪೀಡಿತನಾಗಿದ್ದಾಗ ತತ್ವೋಪದೇಶ ಮಾಡಿ ಸಾಂತ್ವನ ನೀಡಿದವರು ನಾರದರು.
ಮಹಾ ವಿಷ್ಣುವು ಶ್ರೀನಿವಾಸನಾಗಿ ಪದ್ಮಾವತಿ ಕಲ್ಯಾಣ ನಡೆಯುವ ಸ೦ದರ್ಭದಲ್ಲಿ ಕೊರವ೦ಜಿಯಾಗಿ ವೇಷಧರಿಸಲು ಶ್ರೀನಿವಾಸನಿಗೆ ಸಲಹೆ ನೀಡಿದವರು ನಾರದರು. ಜಗತ್ ಕಲ್ಯಾಣಕ್ಕಾಗಿ ದೇವದೇವನು ತಿರುಮಲೆ ನೆಲೆನಿಲ್ಲುವಂತೆ ಎಲ್ಲ ಘಟನಾವಳಿಗಳು ಜರುಗಲು ಕಾರಣೀಭೂತರಾಗಿದ್ದು ನಾರದರು. (ಭೃಗುವನ್ನು ವೈಕುಂಠಕ್ಕೆ ಕಳುಹಿಸಿ ಲಕ್ಷ್ಮೀದೇವಿಯನ್ನು ಅಗಲಿಸಿ ಭಗವ೦ತನ ಭೂಮಿಗಿಳಿಯುವಂತೆ ಮಾಡಿದವರು ನಾರದರು). ಸ್ಕಂಧ ಪುರಾಣದಲ್ಲಿ ಬರುವ ಬಹುತೇಕ ದೇವತಾ ಪೂಜೆಗಳು, ವ್ರತಾಚರಣೆಗಳು, ನಾರದರು ಲೋಕ ಕಲ್ಯಾಣಕ್ಕಾಗಿ ರೂಪಿಸಿದ ವಿವಿಧ ಪ್ರಸಂಗಗಳೇ ಆಗಿವೆ.
ಗಂಧರ್ವ ವಿದ್ಯೆಯಾಗಿದ್ದ ಗಾನವಿದ್ಯೆಯನ್ನು ಎಲ್ಲಡೆಗೆ ಪ್ರಸರಿಸಿದ್ದು ನಾರದರೆ. ಒಂದೊಮ್ಮೆ ನಾರದರು ವೈಕುಂಠದಲ್ಲಿ ಭಗವಂತನ ದರ್ಶನಕ್ಕೆಂದು ಹೋದಾಗ ಕರ್ಣರಸಾಯನವಾದ ದಿವ್ಯ ಗಾನವನ್ನು ಕೇಳಿ ಹಾಡುಗಾರರನ್ನು ನೋಡುವ ಆಸೆಯನ್ನು ಹತ್ತಿಕ್ಕಲಾರದೆ ಕಾವಲುಗಾರರನ್ನು ಲೆಕ್ಕಿಸದೆ ಮುನ್ನುಗ್ಗುತ್ತಾರೆ. ಆಗ ಲಕ್ಷ್ಮೀದೇವಿಯ ದಾಸಿಯರು ಅವರನ್ನು ತಡೆದು ಹೊರಗಟ್ಟುತ್ತಾರೆ. ನಂತರದಲ್ಲಿ ಮಹಾವಿಷ್ಣುವಿನ ಸೂಚನೆಯಂತೆ ಮಾನಸ ಸರೋವರದ ತಟದಲ್ಲಿ ಗಾನ ಬ೦ಧುವೆ೦ಬ ಉಲೂಕ ರಾಜನ ಶಿಷ್ಯನಾಗಿ ಗಾನ ವಿದ್ಯೆಯನ್ನು ಕಲಿತು ಜ್ಞಾನ ವಿದ್ಯಾ ವಿಶಾರದರೆನಿಸುತ್ತಾರೆ.
ಭುವನೇಶ್ವರನೆಂಬ ವಿಷ್ಣುಭಕ್ತನಾದ ಅರಸು ತನ್ನ ಉಲೂಕ ಜನ್ಮದಲ್ಲಿ ನಾರದರಿಂದ ಸಂಗೀತವಿದ್ಯೆ ಕಲಿತು ಗರುಡ ಜನ್ಮವನ್ನು ಹೊಂದಿ ವಿಷ್ಣು ಸಾಯುಜ್ಯವನ್ನು ಪಡೆದನು.
“ನಾರದರು ನಾರಾಯಣನ ಭಕ್ತಿ ಅಂಶಾವತಾರವೆಂದೇ ವೈಷ್ಣವರ ಅಚಲ ನಂಬಿಕೆ. ನಾರದರು ಭಕ್ತಿಯೇ ಮೈತಾಳಿ ಬಂದವರು. ಎಲ್ಲೂ ಯಾರಲ್ಲೂ ದ್ವೇಷವನ್ನು ಎಣಿಸದ ಅನಸೂಯರು. ಸಂಚಾರ ಕಾಲದಲ್ಲಿ ರಾಕ್ಷಸರ ಮುಖಾಮುಖಿಯಲ್ಲೂ ನಾರದರು ಅವರ ದುರ್ಗಣಗಳನ್ನು ಎತ್ತಿ ಹಾಡದೆ ಜಾಣ್ಮೆಯಿಂದ ಅವರ ಮಾತೇ ಅವರಿಗೆ ತಿರುಗುವಂತೆ ಮಾಡುತ್ತಿದ್ದ ಮಹನೀಯರು.
ನಾರದರು ವೀಣೆಯನ್ನು ನುಡಿಸುತ್ತ ಶ್ರೀ ರಾಧಾಕೃಷ್ಣರ ಮಹಿಮೆಗಳನ್ನು ಹಾಡುವ ಗಾನವನ್ನು ಶೀಲ ಭಕ್ತಿವಿನೋದ ಠಾಕುರರು ರಚಿಸಿದ್ದಾರೆ. ನಾರದರು ತ್ರಿಲೋಕ ಸಂಚಾರಿಗಳಾದ್ದರಿಂದ ಯಾರ ಹಂಗೂ ಇಲ್ಲದೆ ಆಧ್ಯಾತ್ಮಿಕ ಲೋಕ ಮತ್ತು ಇಹಲೋಕದ ಯಾವುದೇ ಗ್ರಹಗಳಿಗೆ ಕ್ಷಣಮಾತ್ರದಲ್ಲಿ ಸೇರಬಲ್ಲರು. ನಾರದರನ್ನು ಮನುಷ್ಯರೆಲ್ಲ ದೇವ ಋಷಿ ಎಂದರು. ರಾಕ್ಷಸರು ಪರಮ ಕರುಣಾಳು, ಅಪದ್ಭಾಂದವ ಎಂದು ಹೊಗಳಿದರು. ದೇವತೆಗಳು ಧರ್ಮದ ರಾಯಭಾರಿ ಎಂದು ಗೌರವಿಸಿದರು. ಭಗವಂತನು ತನ್ನ ನಿಜ ಭಕ್ತನೆಂದು ಸಂಭ್ರಮಿಸಿದನು. ಇಂತಹ ನಾರದರು ಸರ್ವ ಕಾಲಕ್ಕೂ ಸಲ್ಲುವ ಲೋಕ ಗುರುವಲ್ಲವೆ!






Leave a Reply