ನರಹರಿ ಸರಕಾರ ಠಾಕುರ

ಶ್ರೀಲ ನರಹರಿ ಸರಕಾರ ಠಾಕುರರ ಬರ್ದ್ವಾನ್‌ ಜಿಲ್ಲೆಯ ನಾಲ್ಕು ಮೈಲಿ ಪಶ್ಚಿಮದಲ್ಲಿ ಕತ್ವಾದಲ್ಲಿ ಜನಿಸಿದರು. ಅವರಿಗೆ ಇಬ್ಬರು ಸಹೋದರರಿದ್ದರು. ಶ್ರೀ ಮುಕುಂದ ದಾಸ ಮತ್ತು ಶ್ರೀ ಮಾಧವ ದಾಸರು.

ಮಹಾಪ್ರಭುಗಳನ್ನು ಭೇಟಿಯಾಗುವ ಮುನ್ನ ನರಹರಿಯವರು ರಾಧ-ಗಿರಿಧಾರಿಯರ ಕುರಿತಾದ ವ್ರಜರಸದ ಬಗ್ಗೆ ಹಲವಾರು ಸಂಸ್ಕೃತ ಮತ್ತು ಬಂಗಾಳಿ ಹಾಡುಗಳನ್ನು ಬರೆದಿದ್ದರು. ಆನಂತರ, ಅವರು ಮತ್ತು ಗದಾಧರ ಪಂಡಿತರು ಶ್ರೀ ಚೈತನ್ಯರ ಬಳಿ ಸದಾ ಇರುತ್ತಿದ್ದರು.

ನರಹರಿಯವರು ನವಿಲುಗರಿಗಳ ಬೀಸಣಿಗೆಯಿಂದ ಚೈತನ್ಯ ಮಹಾಪ್ರಭುಗಳಿಗೆ ಗಾಳಿ ಬೀಸುತ್ತಿದ್ದರು. ಈ ರೀತಿಯಲ್ಲಿ ಅವರು ಪ್ರಭುಗಳನ್ನು ಸಂತುಷ್ಟಗೊಳಿಸುತ್ತಿದ್ದರು. ಠಾಕುರ ಭಕ್ತಿವಿನೋದರ “ಗೌರ-ಅರೋತಿ” ಹಾಡಿನಲ್ಲಿ ಇದನ್ನು ಹಾಡಿ ಹೊಗಳಿದ್ದಾರೆ – ನರಹರಿ ಆದಿಕೋರಿ ಚಾಮಾರ ಧುಲಿಯ.

ನರಹರಿ ಸರಕಾರರ ಕುಟುಂಬವು ವೈಷ್ಣವರ ಹೆಮ್ಮೆಯಾಗಿತ್ತು. ಅವರ ಪ್ರಭಾವದಿಂದ ‍ಶ್ರೀಖಂಡದ ಎಲ್ಲ ಜನರು ವೈಷ್ಣವರಾದರು. ಇಡೀ ಹಳ್ಳಿಯೇ ಭಗವತ್ಪ್ರೇಮದ ವಾಂಛಾತರುವಿನ ಶಾಖೆಯಾಯಿತು. ‍ಶ್ರೀ ಚೈತನ್ಯರ ಕಾಲದಿಂದ ಶ್ರೀಖಂಡವು ಗೌಡೀಯ ವೈಷ್ಣವ ಪಂಥದ ಬೋಧನೆಯ ಕೇಂದ್ರವಾಗಿತ್ತು.

ಒಂದು ದಿನ ಶ್ರೀ ನಿತ್ಯಾನಂದ ಪ್ರಭುಗಳು ಶ್ರೀಖಂಡಕ್ಕೆ ಬಂದು ನರಹರಿಯವರನ್ನು ಕೇಳಿದರು, “ಆಯಿತು, ನಮಗೆ ನೀವು ಯಾರೆಂದು ತಿಳಿದಿದೆ. ಆದ್ದರಿಂದ ಮಧುವೆಲ್ಲಿ?” ಪ್ರಭುವನ್ನು ಪ್ರಸನ್ನಗೊಳಿಸಲು ತಮ್ಮ ಅಲೌಕಿಕ ಶಕ್ತಿಯಿಂದ ನರಹರಿಯವರು ಒಂದು ಮಡಕೆ ನೀರನ್ನು ಅತಿ ಸಿಹಿಯಾದ ಮಧುವನ್ನಾಗಿ ಪರಿವರ್ತಿಸಿದರು.

ನರಹರಿಯವರು ಶ್ರೀಕೃಷ್ಣನ ಲೀಲೆಗಳಲ್ಲಿ ಮಧುಮತಿ ಎಂಬ “ಪ್ರಾಣಸಖಿ” ಯಾಗಿ ಶ್ರೀಕೃಷ್ಣನಿಗೆ ಸೇವೆ ಮಾಡುತ್ತಾರೆ. ರಾಧಾ-ದಾಮೋದರ ಮತ್ತು ಅವರ ಪ್ರಿಯರಿಗೆ ನೀರು ಭರಿಸುವಂತಹ ಮಧುವನ್ನು ಒದಗಿಸುವ ಪ್ರಾಣಸಖಿಯೇ ಮಧುಮತಿ.

“ಶ್ರೀ ನರಹರಿ ಸರಕಾರರು ರಾಧಾ-ಕೃಷ್ಣ ಪ್ರೇಮ ವಿಲಾಸದಲ್ಲಿ ಸಂತೃಪ್ತರಾಗಿರುತ್ತಿದ್ದರು. ರಾಧಾ ಮತ್ತು ಕೃಷ್ಣರ ಕುರಿತಾದ ಅವರ ಭಕ್ತಿಯಲ್ಲಿರುವ ಪರಿಶುದ್ಧ ಪ್ರೇಮವನ್ನು ಯಾರೂ ಅರಿಯಲಾರರು.

“ವೃಂದಾವನದಲ್ಲಿ ರಾಧೆಯ ಪ್ರಾಣಸಖಿಯಾದ ಮಧುಮತಿ (ಮಾಧುರ್ಯದ ಭಂಡಾರ), ಶ್ರೀ ಚೈತನ್ಯರ ಲೀಲೆಗಳಲ್ಲಿ ಅವರು “ನರಹರಿ”, ರಾಧಕೃಷ್ಣ ಪ್ರೇಮ ಭಂಡಾರ” (ಓ ಚೈತನ್ಯ ಮಂಗಳ) ನರಹರಿ ಸರಕಾರರ ಪಾದಕಲ್ಪತರು ಮತ್ತು ಕೃಷ್ಣ ಭಜನಾಮೃತದಲ್ಲಿ ಶ್ರೀ ಚೈತನ್ಯರನ್ನು ಮತ್ತು ಶ್ರೀ ನಿತ್ಯಾನಂದ ಪ್ರಭುಗಳನ್ನು ಪ್ರಶಂಸಿಸುವ ಅದ್ಭುತವಾದ ಅನ್ಯೋನ್ಯ ಕೀರ್ತನೆಗಳಿವೆ. ಅತ್ಯಂತ ಮಧುರ ಭಕ್ತಿಯಿಂದ ಹರಿಯುವ ಹಲವಾರು ಮಧುರ ಹಾಡುಳನ್ನು ನರಹರಿ ರಚಿಸಿದರು.

ಶ್ರೀಕೃಷ್ಣಭಜನಾಮೃತದಲ್ಲಿ ನರಹರಿಯವರು ಹೇಗೆ ‍ಶ್ರೀಕೃಷ್ಣ ಮತ್ತು ಶ್ರೀ ಚೈತನ್ಯ ಮಹಾಪ್ರಭುಗಳನ್ನು ಪೂಜಿಸಬೇಕೆಂದು ಕಲಿಸುತ್ತಾರೆ.

ಶ್ರೀ ಲೋಚನದಾಸ ಠಾಕುರ ಮತ್ತು ಹಲವಾರು ಭಕ್ತರು ನರಹರಿ ಸರಕಾರ ಠಾಕುರರ ಶಿಷ್ಯರಾಗಿದ್ದರು. ಶ್ರೀಲ ನರಹರಿ ಸರಕಾರ ಠಾಕುರರ ಮಾರ್ಗದರ್ಶನ ಮತ್ತು ಕೃಪೆಯಿಂದ ಶ್ರೀಲ ಲೋಚನದಾಸರು ಮಹಾನ್‌ ಚೈತನ್ಯ ಮಂಗಳ ಗ್ರಂಥವನ್ನು ರಚಿಸಿದರು.

ಶ್ರೀಕೃಷ್ಣದಾಸ ಕವಿರಾಜ ಗೋಸ್ವಾಮಿಗಳು ‍ಶ್ರೀಖಂಡದ ಭಕ್ತರನ್ನು ಮಹಾಪ್ರಭುಗಳ ವೃಕ್ಷದ ದೊಡ್ಡ ಶಾಖೆಯೆಂದು ವರ್ಣಿಸಿದರು. ಶ್ರೀ ನರಹರಿ ಠಾಕುರರು ಶ್ರೀ ಚೈತನ್ಯರ ಎಲ್ಲ ಲೀಲೆಗಳಲ್ಲಿ ಭಾಗವಹಿಸಿದರು. ಶ್ರೀ ನರಹರಿ ಚಕ್ರವರ್ತಿ ತಮ್ಮ ಭಕ್ತಿ ರತ್ನಾಕರ (9.513) ದಲ್ಲಿ ನರಹರಿ ಸರಕಾರರನ್ನು ಪ್ರಶಂಸಿಸಿದರು.

ಲೋಚನದಾಸರು ನರಹರಿಯವರ ಶಿಷ್ಯರು. ಅವರು ತಮ್ಮ ಗುರುಗಳ ಬಗ್ಗೆ ಚೈತನ್ಯ ಮಂಗಳದಲ್ಲಿ ಬರೆದಿದ್ದಾರೆ: “ವೈಷ್ಣವ ಸಮುದಾಯದ ಮೇಲೆ ಅಪಾರ ಪ್ರಭಾವ ಬೀರಿದ್ದ ನರಹರಿದಾಸ ಠಾಕುರ, ನನ್ನ ಆ‍ಧ್ಯಾತ್ಮಿಕ ಗುರುಗಳು. ಅವರಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ.

ಅವರು ಸದಾ ಕೃಷ್ಣಪ್ರೇಮದ ಆನಂದದಲ್ಲಿ ತಲ್ಲೀನರಾಗಿರುತ್ತಾರೆ ಮತ್ತು ಪ್ರಭುವಿನ ಮಹಿಮೆಗಳನ್ನು ನಿರಂತರವಾಗಿ ಬೋಧಿಸುತ್ತಾರೆ. ವೃಂದಾವನದ ಶ್ರೀರಾಧೆಯ ಪ್ರಿಯಸಖಿ ಮಧುಮತಿಯು ಕಲಿಯುಗದಲ್ಲಿ ಶ್ರೀ ಚೈತನ್ಯರ ಸಂಗಡಿಗನಾದ ನರಹರಿಯಾಗಿ ಹುಟ್ಟಿದರು”.

ಶ್ರೀ ಭಕ್ತಿವಿನೋದ ಠಾಕುರರ ತಮ್ಮ ಶ್ರೀ ಗೌರಸುಂದರದ ಸಂಕೀರ್ತನ ಲೀಲೆಯ ವರ್ಣನೆಯಲ್ಲಿ ನರಹರಿಯ ಬಗ್ಗೆ ಬರೆದಿದ್ದಾರೆ, “ಸಂಜಯ, ಮುಕುಂದ ವಸುಘೋಷರು ಪ್ರಭುವಿನ ಮಹಿಮೆಯ ಗುಣಗಾನ ಮಾಡುತ್ತಿದ್ದಂತೆ ನರಹರಿಯು ಪ್ರಭುಗಳಿಗೆ ಚಾಮರ ಬೀಸುತ್ತಿದ್ದರು.”

ಶ್ರೀ ನರಹರಿ ಸರಕಾರ ಠಾಕುರರ ಓರ್ವ ಸಂಗೀತಗಾರರು ಹಾಗೂ ಕವಿಗಳಾಗಿದ್ದರು. ಅವರು ‍ಶ್ರೀ ಗೌರಾಂಗ ಮತ್ತು ನಿತ್ಯಾನಂದರ ಕಾರ್ಯಚಟುವಟಿಕೆಗಳ ಕುರಿತು ಹಲವಾರು ಹಾಡುಗಳನ್ನು ರಚಿಸಿದರು. ಅವರು ಶ್ರೀ ಭಜನಾಮೃತವೆಂಬ ಸಂಸ್ಕೃತ ಪುಸ್ತಕವನ್ನು ಬರೆದರು. ಪಾದ ಕಲ್ಪತರು ಮತ್ತು ಇತರ ಪುಸ್ತಕಗಳಲ್ಲಿ ವಿರಹ ವೇದನೆಯ ಕುರಿತಾದ ಹಲವಾರು ಹಾಡುಗಳನ್ನು ನರಹರಿಯವರು ಬರೆದಿದ್ದಾರೆ.

ಶ್ರೀ ಚೈತನ್ಯರ ಲೀಲೆಗಳ ಬಗ್ಗೆ ‍ಶ್ರೀ ನರಹರಿ ಸರಕಾರ ಠಾಕುರರು ಮತ್ತು ಶ್ರೀ ನರಹರಿ ಚಕ್ರವರ್ತಿಯವರು ಬರೆದ ಹಾಡುಗಳಲ್ಲಿ ಬಹಳ ಸಾಮ್ಯಗಳಿವೆ. ಹೀಗಾಗಿ ಯಾರು ಯಾವುದನ್ನು ಬರೆದಿದ್ದಾರೆಂದು ತಿಳಿಯುವುದು ಕಷ್ಟ.

ಶ್ರೀ ಚೈತನ್ಯರ ಹಾಡುಗಳನ್ನು ರಚಿಸುವ ಮುಂಚೆ ನರಹರಿ ಸರಕಾರರು ಪ್ರಭು ಕೃಷ್ಣನ ದೈವಿ ಚಟುವಟಿಕೆಗಳ ಮೇಲೆ ಹಲವಾರು ಹಾಡುಗಳನ್ನು ಬರೆದಿದ್ದಾರೆ.

ಅಗ್ರಹಯನ (ನವೆಂಬರ್‌-ಡಿಸೆಂಬರ್‌) ತಿಂಗಳ ಹನ್ನೊಂದನೆಯ ಕಡು ಪಾಕ್ಷಿಕದಲ್ಲಿ ನರಹರಿ ಸರಕಾರರು ದೇಹತ್ಯಾಗ ಮಾಡಿದರು.

ಅವರ ರಚನೆಗಳು:

  1. ಭಕ್ತಿ ಚಂದ್ರಿಕ ಪಟಲ, 2. ‍‍ಶ್ರೀಕೃಷ್ಣಭಜನಾಮೃತ, 3. ಶ್ರೀ ಚೈತನ್ಯ ಸಹಸ್ರನಾಮ, 4. ಶ್ರೀ ಸಚ್ಚಿದಾನಂದಷ್ಟಕ, 5. ‍‍ಶ್ರೀರಾಧಾಷ್ಟಕ

ಅವರು ರಚಿಸಿದ ಪದಾವಳಿಯು ಅಸಾಮಾನ್ಯವಾಗಿ ಸುಂದರವಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi