ಶ್ರೀ ನರಹರಿ ತೀರ್ಥರು

ಶುದ್ಧ ಭಕ್ತನಲ್ಲಿ 26 ಗುಣಗಳು ಅವಶ್ಯವಾಗಿರಬೇಕು ಎಂದು ಸನಾತನ ಗೋಸ್ವಾಮಿ ಅವರಿಗೆ ನೀಡಿದ ಬೋಧನೆಯಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಹೇಳಿದ್ದಾರೆ. ಈ ಪೈಕಿ ಒಂದು ಗುಣ ದಕ್ಷತೆ. ಅಂದರೆ ಶುದ್ಧ ಭಕ್ತನಾದವನು ದಕ್ಷನಾಗಿರಬೇಕು. ಏಕ ಕಾಲಕ್ಕೆ ಹಲವಾರು ಕ್ಷೇತ್ರಗಳಲ್ಲಿ ಸಾಮರ್ಥ್ಯ ಮೆರೆಯುವ ದಕ್ಷತೆ ಆತನಿಗಿರಬೇಕು.

ಗುರು ಪರಂಪರೆಯಲ್ಲಿ ಪದ್ಮನಾಭ ತೀರ್ಥರ ನಂತರ ಬರುವ ಶ್ರೀ ನರಹರಿ ತೀರ್ಥರು, ಚೈತನ್ಯರು ತಿಳಿಸಿದ ಎಲ್ಲಾ ಸದ್ಗುಣಗಳನ್ನು ಹೊ೦ದಿದ್ದ ಶುದ್ಧ ಭಕ್ತರು. ರಾಜ್ಯಾಡಳಿತದಿ೦ದ ರಣರ೦ಗದಲ್ಲಿ ಹೋರಾಡುವವರೆಗೆ, ಮಹಾನ್‌ ಗ್ರಂಥಗಳ ರಚನೆಯಿಂದ ಮಾಧ್ವ ಸಿದ್ಧಾಂತ ಬೋಧನೆವರೆಗೆ ನರಹರಿ ತೀರ್ಥರು ಎಲ್ಲದರಲ್ಲೂ ಎತ್ತಿದ ಕೈ. ಸಂನ್ಯಾಸ ಸ್ವೀಕರಿಸಿದ ಬಳಿಕವೂ 12 ವರ್ಷ ಕಾಲ ರಾಜ್ಯವೊ೦ದರ ಆಡಳಿತವನ್ನು ಸಮರ್ಥವಾಗಿ ಸಂಬಾಳಿಸಿದರೆಂದರೆ ನರಹರಿ ತೀರ್ಥರ ಸಾಮರ್ಥ್ಯ ಎಂಥದ್ದೆಂಬುದು ಅರ್ಥವಾದೀತು!

ನರಹರಿ ತೀರ್ಥರ ಮೂಲ ಹೆಸರು ಶ್ಯಾಮಾ ಶಾಸ್ತ್ರಿ. ಕೆಲವರು ಪ್ರೀತಿಯಿ೦ದ ಸ್ವಾಮಿ ಶಾಸ್ತ್ರಿ ಎ೦ದೂ ಕರೆಯುತ್ತಿದ್ದರು. ಕಳಿಂಗ ರಾಜ್ಯದ (ಈಗಿನ ಒರಿಸ್ಸಾ) ಗಂಜಾಂ ಜಿಲ್ಲೆ ಚಿಕ್ಕಕೊಳುಗಾ ಎಂಬ ಹಳ್ಳಿಯಲ್ಲಿ ಇವರ ಜನನ. ಇವರ ತಂದೆ ನರಸಿಂಹ ಭಟ್ಟರು ಕಳಿಂಗದ ದೊರೆ ಆನ೦ಗ ಬ್ರಹ್ಮನ ಆಸ್ಥಾನದಲ್ಲಿ ಸಚಿವರಾಗಿದ್ದರು. ತಮ್ಮ ಏಕೈಕ ಪುತ್ರ ಶ್ಯಾಮಾ ಶಾಸ್ತ್ರಿಯನ್ನು ನರಸಿಂಹ ಭಟ್ಟರು ಬಹಳ ಅಕ್ಕರೆಯಿಂದ, ಆಸೆಯಿಂದ ಬೆಳೆಸಿದರು. ಶ್ಯಾಮನಿಗೆ ಬಾಲ್ಯದಲ್ಲೇ ಸಕಲ ವಿದ್ಯೆಗಳನ್ನು ಧಾರೆ ಎರೆಸಿದರು.

ಯುದ್ಧ ಕಲೆ, ಆಡಳಿತ, ವೇದ ವಿದ್ಯೆ ಸೇರಿದಂತೆ ಶ್ಯಾಮಾ ಶಾಸ್ತ್ರಿ ಸಕಲ ಕಲಾ ಪಾರಂಗತನಾಗಿ ಬೆಳೆದ. ವೇದ ವಿದ್ಯೆಯಲ್ಲಂತೂ ಶ್ಯಾಮಾ ಶಾಸ್ತ್ರಿ ಕಳಿಂಗ ರಾಜ್ಯದಲ್ಲಿ ಅದ್ವಿತೀಯನೆನಿಸಿದ.

ಇದೇವೇಳೆ ಆನಂಗ ಬ್ರಹ್ಮನ ನಂತರ ಅವನ ಪುತ್ರ ನರಸಿಂಹ ದೇವ ಕಳಿಂಗದ ಸಿಂಹಾಸನ ಅಲ೦ಕರಿಸಿದ.

ಸಹಜವಾಗಿಯೇ ಶ್ಯಾಮಾ ಶಾಸ್ತ್ರಿ, ನರಸಿಂಹ ದೇವನ ಪ್ರಧಾನ ಮಂತ್ರಿಯಾಗಿ ನೇಮಕಗೊಂಡ. ಸ್ವಲ್ಪಕಾಲದಲ್ಲೇ ತನ್ನ ದಕ್ಷ ಆಡಳಿತ ಮತ್ತು ಜನ ಕಲ್ಯಾಣ ಕ್ರಮಗಳ ಮೂಲಕ ಶ್ಯಾಮಾ ಶಾಸ್ತ್ರಿ ಕಳಿಂಗದೆಲ್ಲಡೆ ಜನಪ್ರಿಯನಾದ. ದೊರೆಯ ಪ್ರೀತಿ ಜತೆಗೆ ಜನಾದರಕ್ಕೂ ಪಾತ್ರನಾದ.

ಒಮ್ಮೆ ನೆರೆಯ ರಾಜಮಹೇಂಡ್ರಿಯಲ್ಲಿ, ಗೋದಾವರಿ ತೀರದಲ್ಲಿ ಅಲ್ಲಿನ ಪ್ರಧಾನ ಮಂತ್ರಿ ಶೋಭನ ಭಟ್ಟರು ಒಂದು ಬೃಹತ್ ಧಾರ್ಮಿಕ- ಆಧ್ಯಾತ್ಮಿಕ ಚರ್ಚಾ ಗೋಷ್ಠಿ ಏರ್ಪಡಿಸಿದರು. ಅಲ್ಲಿಗೆ ಶ್ಯಾಮಾ ಶಾಸ್ತ್ರಿಗೂ ಆಹ್ವಾನವಿತ್ತು. ಆ ಚರ್ಚಾ ಗೋಷ್ಠಿಯಲ್ಲಿ ಶ್ಯಾಮಾ ಶಾಸ್ತ್ರಿ ಮತ್ತು ಶೋಭನ ಭಟ್ಟ ಇಬ್ಬರೂ ಮಧ್ವಾಚಾರ್ಯರ ಪಾ೦ಡಿತ್ಯಕ್ಕೆ ಮರುಳಾದರು. ಮಧ್ವಾಚಾರ್ಯರು ಇಬ್ಬರ ಮನದಲ್ಲೂ ಕೃಷ್ಣ ಸೇವೆಯ ಬೀಜ ಬಿತ್ತಿದ್ದರು.

ಐಹಿಕ ಸುಖ ತೊರೆದು ಭಗವ೦ತನ ಸೇವೆಗೆ ತಮ್ಮನ್ನು ಸ೦ಪೂರ್ಣ ತೊಡಗಿಸಿಕೊಳ್ಳಬೇಕೆಂಬ ತುಡಿತ ದಿನೇ ದಿನೇ ಇಬ್ಬರಲ್ಲೂ ಹೆಚ್ಚತೊಡಗಿತು. ಕೆಲ ಸಮಯದ ಬಳಿಕ ಇಬ್ಬರೂ ಮಧ್ವಾಚಾರ್ಯರನ್ನು ಹುಡುಕಿಕೊಂಡು ಉಡುಪಿಗೆ ಬಂದರು. ತಮಗಿರುವ ರಾಜತಾಂತ್ರಿಕ ಸ್ಥಾನ ಮಾನ ತೊರೆದು, ಐಹಿಕ ಬಂಧನದಿಂದ ಮುಕ್ತರಾಗಿ ಸಂನ್ಯಾಸ ಸ್ವೀಕರಿಸುವ ಉತ್ಕಟೇಚ್ಛೆಯನ್ನು ಇಬ್ಬರೂ ಮಧ್ವಾಚಾರ್ಯರ ಮು೦ದೆ ತೊಡಿಕೊಂಡರು.

ಶೋಭನ ಭಟ್ಟರಿಗೆ ಸಂನ್ಯಾಸ ದೀಕ್ಷೆ ನೀಡಿದ ಮಧ್ವಾಚಾರ್ಯರು, ಅವರಿಗೆ ಪದ್ಮನಾಭ ತೀರ್ಥ ಎ೦ದು ನಾಮಕರಣ ಮಾಡಿದರು.

ಆದರೆ ಶ್ಯಾಮಾ ಶಾಸ್ತ್ರಿಗೆ ಮಾತ್ರ ತಕ್ಷಣ ಸಂನ್ಯಾಸ ನೀಡಲು ಮಧ್ವಾಚಾರ್ಯರು ನಿರಾಕರಿಸಿದರು. ಸದ್ಯೋಭವಿಷ್ಯದಲ್ಲಿ ನಿನಗೆ ರಾಜನಾಗುವ ಯೋಗವಿದೆ. ಆದ್ದರಿಂದ ಈಗಲೇ ಸಂನ್ಯಾಸ ಸ್ವೀಕಾರ ಬೇಡ ಎಂದು ಮಧ್ವಾಚಾರ್ಯರು ಸಲಹೆ ನೀಡಿದರು. ಆದರೆ, ‘ರಾಜನಾಗುವುದಕ್ಕಿಂತ ಶ್ರೀ ಹರಿಯ ಸೇವಕನಾಗುವುದೇ ಬಹುದೊಡ್ಡ ಭಾಗ್ಯ ಎಂಬುದು ನನ್ನ ಭಾವನೆ. ನನಗೆ ಸಿಂಹಾಸನ ಬೇಡ, ಸಂನ್ಯಾಸ ಬೇಕು’  ಎಂದು ಶ್ಯಾಮಾಶಾಸ್ತ್ರಿ ಪಟ್ಟು ಹಿಡಿದಾಗ ಮಧ್ವಾಚಾರ್ಯರು ಒಪ್ಪಿಕೊಳ್ಳಲೇಬೇಕಾಯಿತು.

ಹೀಗೆ ಮಧ್ವರಿಂದ ಸಂನ್ಯಾಸ ದೀಕ್ಷೆ ಪಡೆದ ಶ್ಯಾಮಾಶಾಸ್ತ್ರಿ, ನರಹರಿ ತೀರ್ಥ ಎಂಬ ಹೆಸರಿನೊಂದಿಗೆ ಭಗವಂತನ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡರು.

ಹೀಗೆ ಮಾಜಿ ಮಂತ್ರಿಗಳಾದ ಪದ್ಮನಾಭ ತೀರ್ಥ ಮತ್ತು ನರಹರಿ ತೀರ್ಥ ಈಗ ಮಧ್ವಾಚಾರ್ಯರ ಮಾರ್ಗದರ್ಶನದಲ್ಲಿ ಭಗವಂತನ ಸೇವೆಯಲ್ಲಿ ನಿರತರಾದರು. ಮಧ್ವರ ಬಳಿ ವೈದಿಕ ಗ್ರಂಥಗಳ ನೈಜ ಅರ್ಥ ತಿಳಿದುಕೊಂಡ ಆಚಾರ್ಯದ್ವಯರು, ಸ್ವಲ್ಪ ಕಾಲದಲ್ಲೇ ತಮ್ಮ ಬೋಧನೆಗಳ ಮೂಲಕ ನಾಡಿನಾದ್ಯಂತ ಜನಪ್ರಿಯರಾದರು.

ಇತ್ತ ನರಹರಿ ತೀರ್ಥರು ಮಧ್ವಾಚಾರ್ಯರ ಮಾರ್ಗದರ್ಶನದಲ್ಲಿ ಭಗವತ್ಕಾರ್ಯದಲ್ಲಿ ಮಗ್ನರಾಗಿರುವಾಗ, ಆತ್ಮಕಳಿಂಗ ಅರಾಜಕತೆಯಿಂದಾಗಿ ವಿನಾಶದತ್ತ ಸಾಗಿತು. ನರಹರಿ ತೀರ್ಥರು ಶ್ಯಾಮಾ ಶಾಸ್ತ್ರಿಯಾಗಿದ್ದಾಗ ರಾಜ ನರಸಿಂಹ ದೇವ ಮತ್ತು ಅವನ ಮಗ ಭಾನುದೇವನ ಕಾಲದಲ್ಲಿ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ದಕ್ಷ ಮತ್ತು ಜನಪರ ಆಡಳಿತದ ಮೂಲಕ ಪ್ರಜೆ ಮತ್ತು ಪ್ರಭು ಇಬ್ಬರ ಮನಸ್ಸನ್ನೂ ಗೆದ್ದಿದ್ದರು. ಅದಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದರು.

ಅರಮನೆಯಲ್ಲೂ ಅಷ್ಟೆ ಮಂತ್ರಿಯಿಂದ ಹಿಡಿದು ಸೇವಕರ ತನಕ ಪ್ರತಿಯೊಬ್ಬರೂ ಶಿಸ್ತು ಮತ್ತು ವಿಧೇಯತೆಯಿಂದ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಂಡಿದ್ದರು.

ಆದರೆ ಯಾವಾಗ ನರಹರಿ ತೀರ್ಥರು (ಶ್ಯಾಮಾ ಶಾಸ್ತ್ರಿ) ಉಡುಪಿಗೆ ತೆರಳಿದರೋ ಅಲ್ಲಿಗೆ ಕಳಿಂಗದ ಕಷ್ಟ ಕಾಲ ಆರಂಭವಾಯಿತು. ಅಧಿಕಾರಕ್ಕಾಗಿ ಅರಮನೆಯೊಳಗೇ ಕಚ್ಚಾಟ ಆರಂಭವಾಯಿತು. ಅ೦ತಃ ಕಲಹ ದಿನೇ ದಿನೇ ಉಲ್ಬಣಗೊಳ್ಳುತ್ತಾ ಸಾಗಿತು. ಕೊನೆಗೊಂದು ದಿನ ಅರಮನೆಯೊಳಗಿನ ಜಗಳ ಬೀದಿಗೆ ಬ೦ದಿತು. ಅ೦ತಿಮವಾಗಿ ಇದು ದೊರೆ ಭಾನುದೇವನ ಸಾವಿಗೂ ಕಾರಣವಾಯಿತು.

ಭಾನುದೇವ ಸಾವನ್ನಪ್ಪಿದಾಗ ಅವನ ಮಡದಿ ರಾಣಿ ಶ್ಯಾಮಲಾ ದೇವಿಗಿನ್ನೂ ಚಿಕ್ಕ ಪ್ರಾಯ. ಮಗ, ರಾಜಕುಮಾರ ಎರಡನೇ ನರಸಿಂಹನಿಗೆ ಆಗಿನ್ನೂ 6 ವರ್ಷ. ಈ ಪರಿಸ್ಥಿತಿಯ ಲಾಭ ಪಡೆದು ಹಲವಾರು ಮಂದಿ ಸಿಂಹಾಸನಕ್ಕಾಗಿ ಹೋರಾಟ ಆರಂಭಿಸಿದರು. ಕಳಿಂಗ ಸಂಪೂರ್ಣ ಗೊಂದಲದಲ್ಲಿ ಮುಳುಗಿತು. ಆದರೆ ರಾಣಿ ಶ್ಯಾಮಲಾದೇವಿ ಇಂಥ ವಿಷಮ ಪರಿಸ್ಥಿತಿಯಲ್ಲೂ ಧೃತಿಗೆಡಲಿಲ್ಲ.

ಕಳಿಂಗವನ್ನು ಕಾಪಾಡಲು ಶಾಸ್ತ್ರಿಯಿಂದ ಮಾತ್ರ (ನರಹರಿ ತೀರ್ಥ) ಸಾಧ್ಯ ಎಂಬುದನ್ನು ಅರಿತ ಆಕೆ, ರಾಜ್ಯಕ್ಕೆ ಮರಳಿ ಬರುವಂತೆ ಅವರಿಗೆ ಸಂದೇಶ ಕಳಿಸಿದಳು. ಆದರೆ ದೂತರು ಬರಿಗೈಲಿ ವಾಪಸಾದರು. ಈಗ ನರಹರಿ ತೀರ್ಥ ಎಂಬ ಹೆಸರಿನಲ್ಲಿ ಸಂನ್ಯಾಸಿಯಾಗಿರುವ ಶ್ಯಾಮಾ ಶಾಸ್ತ್ರಿಗಳು, ಉಡುಪಿಯಲ್ಲಿ ಮಧ್ವಾಚಾರ್ಯರ ಜತೆ ಭಗವಂತನ ಸೇವೆಯಲ್ಲಿ ನಿರತರಾಗಿದ್ದಾರೆ ಎಂಬ ಮಾಹಿತಿಯನ್ನು ದೂತರಿಂದ ತಿಳಿದು ರಾಣಿ ಖಿನ್ನಳಾದಳು.

ಇದೇವೇಳೆ, ಶ್ರೀ ರಾಮ, ಹನುಮ ಮತ್ತು ಭೀಮಸೇನ ಪೂಜಿಸುತ್ತಿದ್ದ ಮೂಲ ಸೀತಾರಾಮ ವಿಗ್ರಹವನ್ನು ಪಡೆಯುವುದು ಹೇಗೆ ಎಂಬ ಬಗ್ಗೆ ಮಧ್ವಾಚಾರ್ಯರು ಉಡುಪಿಯಲ್ಲಿ ಚಿಂತನೆ ನಡೆಸಿದ್ದರು. (ಈ ವಿಗ್ರಹಗಳ ಕುರಿತಾದ ಕುತೂಹಲಕಾರಿ ಕತೆಯನ್ನು ಶ್ರೀಲ ಪ್ರಭುಪಾದರು ಚೈತನ್ಯ ಚರಿತಾಮೃತದಲ್ಲಿ ಹೇಳಿದ್ದಾರೆ.) ಈ ವಿಗ್ರಹಗಳು ಈಗ ಕಳಿಂಗದ ಖಜಾನೆಯಲ್ಲಿ ಪೂಜೆ ಇಲ್ಲದೇ ಅನಾಥವಾಗಿ ಬಿದ್ದಿರುವುದು ಮಧ್ವಾಚಾರ್ಯರ ದಿವ್ಯದೃಷ್ಟಿಗೆ ತಿಳಿದಿತ್ತು.

ಈ ಹಂತದಲ್ಲಿ ತಮ್ಮ ನೆಚ್ಚಿನ ಶಿಷ್ಯ ನರಹರಿತೀರ್ಥರನ್ನು ಕರೆದ ಮಧ್ವಾಚಾರ್ಯರು, ಹೇಗಾದರೂ ಮಾಡಿ ಈ ವಿಗ್ರಹಗಳನ್ನು ತಮಗೆ ತಂದುಕೊಡುವಂತೆ ಸೂಚಿಸಿದರು. ಎಷ್ಟಾದರೂ ಗುರುವಿನ ಕೋರಿಕೆ ಈಡೇರಿಸುವುದು ಶಿಷ್ಟೋತ್ತಮನ ಆದ್ಯ ಕರ್ತವ್ಯವಲ್ಲವೇ? ನರಹರಿ ತೀರ್ಥರು ಮೂಲ ಸೀತಾರಾಮ ವಿಗ್ರಹಗಳನ್ನು ಪಡೆಯುವ ಉದ್ದೇಶದಿಂದ ಕಳಿಂಗದತ್ತ ಹೊರಟರು. ವಿಚಿತ್ರವೆಂದರೆ ಅದೇ ಸಮಯಕ್ಕೆ ಕಳಿಂಗವೂ ಅವರಿಗಾಗಿ ಕಾಯುತ್ತಾ ಕುಳಿತಿತ್ತು!

ಇತ್ತ ಕಳಿಂಗದಲ್ಲಿ ಅರಾಜಕತೆ ದಿನೇ ದಿನೇ ಉಲ್ಬಣಗೊಳ್ಳಲು, ಪುರಿ ಜಗನ್ನಾಥನಿಗೆ ಮೊರೆ ಹೋಗಲು ಅಲ್ಲಿನ ಮಂತ್ರಿಗಳು ಮತ್ತು ಜನತೆ ನಿರ್ಧರಿಸಿದರು. ಪುರಿ ಜಗನ್ನಾಥ ದೇವರ ಪ್ರಸಾದದ ಹೂಮಾಲೆಯನ್ನು ಅರಮನೆಯ ಪಟ್ಟದ ಆನೆಗೆ ನೀಡುವುದು. ಆನೆ ಯಾರ ಕೊರಳಿಗೆ ಹೂಮಾಲೆಯನ್ನು ತೊಡಿಸುವುದೋ, ಅವರನ್ನು ದೊರೆಯನ್ನಾಗಿ ಆಯ್ಕೆಮಾಡುವುದು.

ರಾಜಕುಮಾರ ಎರಡನೇ ನರಸಿಂಹ ಪ್ರಾಪ್ತವಯಸ್ಕನಾಗುವ ತನಕ ಅವರೇ ಕಳಿಂಗದ ರಾಜ್ಯಭಾರ ಮಾಡುವುದು ಎಂದು ಎಲ್ಲರೂ ಕೂಡಿ ನಿರ್ಧರಿಸಿದರು.

ಅದರಂತೆ ಪುರಿ ರಥಯಾತ್ರೆ ದಿನ ಜಗನ್ನಾಥ ದೇವರಿಗೆ ಮುಡಿಸಿದ್ದ ಹೂಮಾಲೆಯನ್ನು ಕಳಿಂಗದ ಪಟ್ಟದಾನೆಗೆ ನೀಡಲಾಯಿತು. ರಾಜ್ಯಕ್ಕೊಬ್ಬ ಸಮರ್ಥ ದೊರೆಯನ್ನು ಸೂಚಿಸುವಂತೆ ಎಲ್ಲರೂ ಜಗನ್ನಾಥನಲ್ಲಿ ಪ್ರಾರ್ಥಿಸಿದರು. ಹೂಮಾಲೆಯನ್ನು ಸೊಂಡಿಲಿನಲ್ಲಿ ಎತ್ತಿ ಹಿಡಿದ ಪಟ್ಟದಾನೆ ಒಮ್ಮೆ ಜೋರಾಗಿ ಘೀಳಿಟ್ಟಿತು. ನಂತರ ಹೂಮಾಲೆಯೊ೦ದಿಗೆ ರಾಜಧಾನಿಯ ಜನನಿಬಿಡ ರಸ್ತೆಗಳಲ್ಲಿ ಸಾಗಿತು. ಸಿಂಹಾಸನಕ್ಕೆ ಆಸೆ ಪಟ್ಟಿದ್ದ ಹಲವರು ಆನೆಗೆ ಕಾಣಿಸಿಕೊಳ್ಳುವಂತೆ ಬಂದು ನಿಂತರು.

ಆದರೆ ಆನೆ ಅವರತ್ತ ಕಣ್ಣೆತ್ತಿಯೂ ನೋಡದೆ ತನ್ನ ಪಾಡಿಗೆ ಯಾರನ್ನೋ ಹುಡುಕುತ್ತಾ ಮುಂದೆ ಸಾಗಿತು. ಹಾಗೆಯೇ ಮುಂದೆ ಸಾಗಿದ ಆನೆ ನಗರದ ಹೊರಭಾಗದಲ್ಲಿದ್ದ ವಿಷ್ಣು ದೇವಾಲಯದ ಮುಂದೆ ಬಂದು ನಿಂತಿತು. ಎಲ್ಲಾ ಮಂತ್ರಿಗಳು, ಸಾವಿರಾರು ಜನ ಆನೆ ಯನ್ನು ಹಿಂಬಾಲಿಸಿದರು. ಆ ದೇವಾಲಯದ ಪಕ್ಕದಲ್ಲಿ ಒಂದು ಪುಟ್ಟ ಗುಹೆ ಇತ್ತು. ಆನೆ ಆ ಗುಹೆಯ ಹೊರಗೆ ಯಾರಿಗಾಗಿಯೋ ಕಾಯಲಾರ೦ಭಿಸಿತು. ಕೊನೆಗೆ ಯಾರನ್ನೋ ಕೂಗಿ ಕರೆಯುವಂತೆ ಮತ್ತೊಮ್ಮೆ ಜೋರಾಗಿ ಘೀಳಿಟ್ಟಿತು.

ಆನೆಯ ಕರೆಗೆ ಪ್ರತಿಕ್ರಿಯೆ ಎಂಬಂತೆ ತೇಜಸ್ವಿಯಾದ ತಪಸ್ವಿಯೊಬ್ಬರು ನಿಧಾನವಾಗಿ ಗುಹೆಯಿಂದ ಹೊರಬಂದರು. ಒಮ್ಮೆ ಆನೆಯತ್ತ ಮತ್ತೊಮ್ಮೆ ಅಲ್ಲಿ ನೆರೆದಿದ್ದ ಜನಸ್ತೋಮದತ್ತ ಕಣ್ಣು ಹಾಯಿಸಿದರು. ಆಗ ಆನೆ, ಅವರ ನಿರೀಕ್ಷೆಯಲ್ಲೇ ಇತ್ತೇನೋ ಎಂಬಂತೆ ತನ್ನ ಸೊಂಡಿಲಿನಲ್ಲಿ ಹಿಡಿದಿದ್ದ ಹೂಮಾಲೆಯನ್ನು ಆ ತಪಸ್ವಿಯ ಕೊರಳಿಗೆ ಹಾಕಿತು! ಮುಂಗಾಲುಗಳನ್ನು ಮಡಿಚಿ, ಸೊಂಡಿಲೆತ್ತಿ ಆ ತಪಸ್ವಿಗೆ ನಮಿಸಿತು. ಅಲ್ಲಿದ್ದವರೆಲ್ಲರೂ ಒಂದು ಕ್ಷಣ ದಿಗ್ಮೂಢರಾದರು.

ಹಾಗಾದರೆ ಆನೆ ಹೂಮಾಲೆ ತೊಡಿಸಿದ ಆ ತಪಸ್ವಿ ಯಾರು? ಕಳಿಂಗವನ್ನು ಆಳಲು ಜಗನ್ನಾಥ ದೇವ ಕಳಿಸಿದ ಆ ದೇವ ದೂತ ಯಾರು? ಎಲ್ಲರೂ ಮತ್ತೆ ಮತ್ತೆ ಪರೀಕ್ಷಿಸಿ ನೋಡಿದರು. ಅರೆ, ಏನಾಶ್ಚರ್ಯ?! ಇದು ನಮ್ಮ ಸ್ವಾಮಿ ಶಾಸ್ತ್ರಿ! ಕಳಿಂಗವನ್ನುಳಿಸಲು, ಉದ್ದರಿಸಲು ಮರಳಿ ಬಂದಿದ್ದಾರೆ. ‘ಸ್ವಾಮಿ ಶಾಸ್ತ್ರಿಗಳಿಗೆ ಜಯವಾಗಲಿ…’ ಅಲ್ಲಿದ್ದ ಜನಸ್ತೋಮ ಆನಂದ ಉದ್ವೇಗದಿಂದ ಘೋಷಣೆ ಮೊಳಗಿತು. ಕಳಿಂಗದ ಮಂತ್ರಿ ಮಹೋದಯರು ಮಾಲಾಧಾರಿ ನರಹರಿತೀರ್ಥರಿಗೆ ತಲೆ ಬಾಗಿ ವ೦ದಿಸಿದರು.

ಸನ್ನಿವೇಶ ಸ್ವಲ್ಪ ತಹಬಂದಿಗೆ ಬರುತ್ತಿದ್ದಂತೆ, ಮಂತ್ರಿಯೊಬ್ಬರು ರಾಜ್ಯದ ದುಃಸ್ಥಿತಿ ಕುರಿತು ನರಹರಿತೀರ್ಥರಿಗೆ ವಿವರಿಸಿದರು. ಕಳಿಂಗದ ಜನರ ಮೊರೆ ಕೇಳಿ ಆ ಜಗನ್ನಾಥನೇ ನಿಮ್ಮನ್ನು ಇಲ್ಲಿಗೆ ಕಳುಹಿಸಿದ್ದಾನೆ ಎಂದು ಎಲ್ಲರೂ ಹೇಳಿದರು.

ನರಹರಿ ತೀರ್ಥರಿಗೆ ಚಿಂತೆ ಆರಂಭವಾಯಿತು. ಅನಿರೀಕ್ಷಿತವಾಗಿ ಬಂದೊದಗಿದ ಈ ಅವಕಾಶದ ಕುರಿತು ಅವರ ಮನದಲ್ಲಿ ಮಥನ ಆರಂಭವಾಯಿತು. ನಾನೀಗ ಸರ್ವಸಂಗ ಪರಿತ್ಯಾಗಿಯಾಗಿದ್ದೇನೆ. ಸಂನ್ಯಾಸ ಸ್ವೀಕರಿಸಿ, ಭಗವತ್ಕಾರ್ಯಕ್ಕೆ ಸಮರ್ಪಿಸಿಕೊಂಡಿದ್ದೇನೆ. ಒಬ್ಬ ಸಂನ್ಯಾಸಿಯಾಗಿ ರಾಜ್ಯಭಾರ ವಹಿಸಿಕೊಳ್ಳುವುದು ಸರಿಯೇ? ಮತ್ತೆ ಐಹಿಕ ವ್ಯವಹಾರಕ್ಕೆ ಮರಳುವುದು ತಪ್ಪಲ್ಲವೇ? ಎಂಬೆಲ್ಲಾ  ಪ್ರಶ್ನೆಗಳಿಗೆ ಅವರು ಉತ್ತರ ಕಂಡುಕೊಳ್ಳಲು ಯತ್ನಿಸಿದರು.

ತಟ್ಟನೆ ಅವರಿಗೆ ಮಧ್ವಾಚಾರ್ಯರು ಹೇಳಿದ್ದ ಮಾತು ನೆನಪಾಯಿತು. ನಿನಗೆ ರಾಜಯೋಗವಿದೆ ಎಂದು ಮಧ್ವಾಚಾರ್ಯರು ಹೇಳಿದ್ದ ಭವಿಷ್ಯ ಈಗ ನಿಜವಾಗುತ್ತಿದೆ ಎಂದು ಅವರು ಭಾವಿಸಿದರು. ಅದಕ್ಕಿಂತ ಮಿಗಿಲಾಗಿ ಅವರಿಗೆ ಕಳಿ೦ಗದಲ್ಲಿದ್ದ ಮೂಲ ಸೀತಾರಾಮ ವಿಗ್ರಹಗಳನ್ನು ಪಡೆಯುವುದು ಮುಖ್ಯವಾಗಿತ್ತು. ಹೀಗೆ ಎಲ್ಲಾ ಅಂಶಗಳನ್ನು ಪರಾಂಬರಿಸಿದ ನರಹರಿ ತೀರ್ಥರು, ಎರಡನೇ ನರಸಿಂಹ ಪ್ರಾಪ್ತವಯಸ್ಕನಾಗುವ ತನಕ ಕಳಿಂಗದ ರಾಜ್ಯಭಾರ ವಹಿಸಿಕೊಳಲು ಒಪ್ಪಿದರು.

ಹಿ೦ದೊಮ್ಮೆ ಕಳಿ೦ಗಕ್ಕೆ ಮಾರ್ಗದರ್ಶನ ನೀಡಿದ್ದ ಶ್ಯಾಮಾಶಾಸ್ತ್ರಿಗಳೇ ಮತ್ತೆ ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಒಪ್ಪಿದ್ದು ರಾಣಿ ಶ್ಯಾಮಲಾ ದೇವಿಗಂತೂ ಬಹಳ ಸ೦ತಸ ನೀಡಿತು. ನರಹರಿ ತೀರ್ಥರನ್ನು ಕಂಡು ಆಶೀರ್ವಾದ ಪಡೆದ ಶ್ಯಾಮಲಾ ದೇವಿ ರಾಜ್ಯಾಡಳಿತವನ್ನು ವಿಧ್ಯುಕ್ತವಾಗಿ ಅವರಿಗೆ ಹಸ್ತಾಂತರಿಸಿದಳು.

ನರಹರಿ ತೀರ್ಥರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಅರಮನೆಯೊಳಗಿದ್ದ ಬಂಡುಕೋರರ ಹುಟ್ಟಡಗಿಸಿದರು. ಎಷ್ಟಾದರೂ ನರಹರಿ ತೀರ್ಥರು ಶಸ್ತ್ರ ಮತ್ತು ಶಾಸ್ತ್ರ ಎರಡರಲ್ಲೂ ಪರಿಣತರಲ್ಲವೇ? ಶಸ್ತ್ರದ ಮೂಲಕ ಬಂಡುಕೋರರನ್ನು, ಪಾತಕಿಗಳನ್ನು ಸೆದೆಬಡಿದ ನರಹರಿ ತೀರ್ಥರು, ಕಳಿಂಗದಲ್ಲಿ ಕಾನೂನು – ಸುವ್ಯವಸ್ಥೆಯನ್ನು ಮರಳಿ ಸ್ಥಾಪಿಸಿದರು.

ಶಾಸ್ತ್ರ, ಅರ್ಥಾತ್ ವೈದಿಕ ಗ್ರಂಥಗಳ ಬೋಧನೆ ಮೂಲಕ ಎಲ್ಲೆಡೆ ಕೃಷ್ಣ ನಾಮ ಪ್ರಚಾರ ಮಾಡಿದರು. ಪ್ರತಿಯೊಬ್ಬರ ಹೃದಯದಲ್ಲೂ ಕೃಷ್ಣ ಭಕ್ತಿ ಮೊಳೆಯುವಂತೆ ಮಾಡಿದರು. ಆಧ್ಯಾತ್ಮಿಕತೆಯ ಕಿಡಿ ಹೊತ್ತಿಸಿದರು.

ಒಮ್ಮೆ ರಾಜ್ಯಾಡಳಿತ ಸುಸೂತ್ರವಾಗುತ್ತಿದ್ದಂತೆ ನರಹರಿ ತೀರ್ಥರು ಕೃಷ್ಣ ಪ್ರಜ್ಞೆ ಪ್ರಚಾರ ತೀವ್ರಗೊಳಿಸಿದರು. ಒರಿಸ್ಸಾ, ಆಂಧ್ರ ಪ್ರದೇಶ, ಮಧ್ಯ ಮತ್ತು ಉತ್ತರ ಭಾರತದ ಹಲವು ಭಾಗಗಳಲ್ಲಿ ನರಹರಿ ತೀರ್ಥರು ಯಶಸ್ವಿ ಪ್ರಚಾರ ಕಾರ್ಯ ಕೈಗೊಂಡರು. ದೇಶ ಪರ್ಯಟನೆ ವೇಳೆ ಅವರು ಹಲವು ಅನುಯಾಯಿಗಳಿಗೆ ದೀಕ್ಷೆ ನೀಡಿದರು. ಹಾಗೆ ದೀಕ್ಷೆ ಪಡೆದವರು ದೇಶದ ವಿವಿಧ ಭಾಗಗಳಿಗೆ ತೆರಳಿ ಬೋಧನೆ ಕೈಗೊಂಡರು.

ವೊಡ್ಡಪಡಿ ಮತ್ಸ್ಯರಾಜ ಜಯಂತ, ಗಂಗರಾಜ, ಅರ್ಜುನದೇವ, ನರಸಿಂಹದೇವ ಮತ್ತು ಭವದೇವ ಸೇರಿದಂತೆ ಅನೇಕ ರಾಜರೂ ನರಹರಿತೀರ್ಥರ ಬೋಧನೆಗೆ ಮರುಳಾಗಿ ಅವರಿ೦ದ ದೀಕ್ಷೆಪಡೆದರು. ಅಲ್ಲದೇ ತಂತಮ್ಮ ರಾಜ್ಯಗಳಲ್ಲಿ ಜನರನ್ನು ಕೃಷ್ಣ ಮಾರ್ಗದಲ್ಲಿ ಸಾಗುವಂತೆ ಪ್ರೇರೇಪಿಸಿದರು.

ತಮ್ಮ ಆಡಳಿತಾವಧಿಯಲ್ಲಿ ನರಹರಿ ತೀರ್ಥರು ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಜತೆಗೆ ಶಿಥಿಲಾವಸ್ಥೆಯಲ್ಲಿದ್ದ ಅನೇಕ ಪ್ರಸಿದ್ಧ ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದರು. ಸಿಂಹಾಚಲಂ ಮತ್ತು ಕೂರ್ಮ ಕ್ಷೇತ್ರ (ವಿಶಾಖಪಟ್ಟಣದ ಸಮೀಪ) ದೇವಾಲಯಗಳ ಬಗ್ಗೆ ಅವರು ವಿಶೇಷ ಆಸಕ್ತಿ ತೋರಿದರು. ಅವರು ಕೂರ್ಮ ಕ್ಷೇತ್ರದ ಕೂರ್ಮ ದೇವಾಲಯದ ಎದುರು ಒಂದು ಭವ್ಯ ಯೋಗ ನರಸಿಂಹ ದೇವಾಲಯವನ್ನು ನಿರ್ಮಿಸಿದರು.

ಈ ಪ್ರದೇಶದ ಹಲವಾರು ದೇವಾಲಯಗಳಲ್ಲಿ ಕಂಡುಬರುವ ಶಿಲಾ ಶಾಸನಗಳು, ದೇವಾಲಯ ನಿರ್ಮಾಣ ಮತ್ತು ಅಭಿವೃದ್ಧಿಯ ಬಗ್ಗೆ ನರಹರಿ ತೀರ್ಥರಿಗೆ ಇದ್ದ ಆಸಕ್ತಿಯ ಬಗ್ಗೆ ಹೇಳುತ್ತವೆ. ಹೀಗೆ ನರಹರಿ ತೀರ್ಥರು ಹನ್ನೆರಡೂವರೆ ವರ್ಷ ಕಾಲ ಕಳಿಂಗವನ್ನು ಆಳಿದರು. ಈ ಅವಧಿ ಕಳಿಂಗದ ಪಾಲಿಗೆ ಅತ್ಯಂತ ಸುಭಿಕ್ಷದ ಕಾಲವಾಗಿತ್ತು.  

ಸುವರ್ಣ ಯುಗವಾಗಿತ್ತು. ಅವನತಿಯತ್ತ ಸಾಗಿದ್ದ ರಾಜ್ಯವನ್ನು ಮತ್ತೆ ಕಟ್ಟಿ ಬೆಳೆಸಿ, ಕೆಚ್ಚದೆಯಿ೦ದ ರಾಜ್ಯಭಾರ ಮಾಡಿ ಜನಾದರಣೆ ಗಳಿಸಿದ ವೀರ ಸಂನ್ಯಾಸಿಯೊಬ್ಬರ ಸಾಹಸಕ್ಕೆ ಕಳಿಂಗ ಸಾಕ್ಷಿಯಾಗಿತ್ತು.

ಈ ವೇಳೆಗೆ ರಾಜ ಕುಮಾರ ಎರಡನೇ ನರಸಿಂಹ ಪ್ರಾಪ್ತ ವಯಸ್ಕನಾಗಿದ್ದ ರಾಜ್ಯಭಾರ ವಹಿಸಿಕೊಳ್ಳಲು ಅಗತ್ಯವಾದ ಪ್ರಾಯ ತಲುಪಿದ್ದ. ಅರ್ಹತೆಯನ್ನೂ ಸಂಪಾದಿಸಿದ್ದ. ಮೊದಲೇ ನಿರ್ಧರಿಸಿದ್ದಂತೆ ಎರಡನೇ ನರಸಿಂಹನಿಗೆ ದೊರೆ ಪಟ್ಟ ಕಟ್ಟಿ ಉಡುಪಿಗೆ ಹಿಂತಿರುಗಲು, ನರಹರಿ ತೀರ್ಥರು ಅನುವಾದರು. ಸರಿಯಾದ ಮುಹೂರ್ತ ನೋಡಿ ರಾಜಕುಮಾರನಿಗೆ ಪಟ್ಟಾಭಿಷೇಕ ಮಾಡಿ, ರಾಜ್ಯಾಡಳಿತ ಹಸ್ತಾಂತರಿಸಿದರು. ಇದರೊಂದಿಗೆ ಕಳಿ೦ಗ ಇತಿಹಾಸದ ಭವ್ಯ ಅಧ್ಯಾಯವೊಂದು ಕೊನೆಗೊಂಡಿತ್ತು.

ರಾಣಿ ಶ್ಯಾಮಲಾದೇವಿ, ರಾಜ ಎರಡನೇ ನರಸಿಂಹ, ರಾಜ್ಯದ ಎಲ್ಲಾ ಮಂತ್ರಿಗಳು, ಸಮಸ್ತ ಜನತೆ, ಹೀಗೆ ಪ್ರತಿಯೊಬ್ಬರೂ ನರಹರಿತೀರ್ಥರಿಗೆ ಕೃತಜ್ಞರಾಗಿದ್ದರು. ಉಡುಪಿಗೆ ಹೊರಟು ನಿಂತ ತಮ್ಮ ನೆಚ್ಚಿನ ಗುರುವನ್ನು ಎಲ್ಲರೂ ಭಾರವಾದ ಹೃದಯದಿಂದ ಬೀಳ್ಕೋಟ್ಟರು. ನಿಮಗೇನು ಬೇಕೋ ಅದನ್ನು ಕೇಳಿ. ಇಡೀ ರಾಜ್ಯ ನಿಮ್ಮದು. ಏನು ಬೇಕಾದರೂ ನೀಡಲು ನಾವು ಸಿದ್ಧ ಎಂದು ಅವರು ನರಹರಿ ತೀರ್ಥರನ್ನು ಕೇಳಿಕೊಂಡರು.

ನನಗೇನೂ ಬೇಡ, ಖಜಾನೆಯಲ್ಲಿ ಪೂಜೆ ಇಲ್ಲದೇ ವ್ಯರ್ಥವಾಗಿ ಬಿದ್ದಿರುವ ಮೂಲ ಸೀತಾರಾಮ ವಿಗ್ರಹವನ್ನು ನೀಡಿದರೆ ಸಂತೋಷದಿಂದ ಕೊಂಡೊಯ್ಯುತ್ತೇನೆ ಎಂದು ನರಹರಿ ತೀರ್ಥರು ಕೇಳಿಕೊಂಡರು. ಆ ವಿಗ್ರಹಗಳನ್ನು ಸಂತೋಷದಿಂದ ನೀಡಿದ ರಾಣಿ ಶ್ಯಾಮಲಾದೇವಿ ಮತ್ತು ರಾಜ ಎರಡನೇ ನರಸಿಂಹ ಗುರುಗಳಿಗೆ ಮತ್ತೊಮ್ಮೆ ವಂದಿಸಿ ಬೀಳ್ಕೊಟ್ಟರು.

ಹೀಗೆ ತಮ್ಮ ಹೆಗ್ಗುರಿ ಈಡೇರಿದ ತೃಪ್ತಿಯೊಂದಿಗೆ ಉಡುಪಿಯತ್ತ ಹೊರಟ ನರಹರಿ ತೀರ್ಥರು ಮಾರ್ಗ ಮಧ್ಯೆ ಕೂರ್ಮ ಕ್ಷೇತ್ರ ಮತ್ತು ಸಿಂಹಾಚಲಂಗಳನ್ನು ಸಂದರ್ಶಿಸಿದರು. ಉಡುಪಿ ತಲುಪುತ್ತಿದ್ದಂತೆ ಮೂಲ ವಿಗ್ರಹಗಳನ್ನು ಮಧ್ವಾಚಾರ್ಯರಿಗೆ

ಅರ್ಪಿಸಿದರು. ವಿಗ್ರಹಗಳನ್ನು ಕಂಡು ಅತ್ಯಂತ ಸಂತೃಪ್ತ ಭಾವ ಹೊಂದಿದ ಮಧ್ವರು, ತಮ್ಮ ಮೆಚ್ಚಿನ ಶಿಷ್ಯನನ್ನು ಮನಸಾರೆ ಹರಸಿದರು. ಪ್ರಸ್ತುತ ಈ ವಿಗ್ರಹಗಳು ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿವೆ.

ಮಧ್ವಾಚಾರ್ಯರು ಭಗವದ್ಧಾಮ ಸೇರುವ ಮುನ್ನ ಪದ್ಮನಾಭ ತೀರ್ಥರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿದರು. ಪದ್ಮನಾಭ ತೀರ್ಥರು ದೇಶ ಪರ್ಯಟನೆ ಕೈಗೊಂಡು ಮಾಧ್ವ ಸಿದ್ಧಾಂತ ಪ್ರಚಾರ ಕೈಗೊಂಡರೆ, ನರಹರಿ ತೀರ್ಥರು ಉಡುಪಿಯಲ್ಲೇ ನೆಲೆಸಿ ಆಧ್ಯಾತ್ಮಿಕ ಕೃತಿಗಳ ರಚನೆಯಲ್ಲಿ ತೊಡಗಿದರು. ಕನ್ನಡದಲ್ಲಿ ಜನಸಾಮಾನ್ಯರಿಗೂ ಅರ್ಥವಾಗುವಂತೆ ಸರಳ ಪದ್ಯಗಳ ಮೂಲಕ ವೈದಿಕ ಜ್ಞಾನ ಪ್ರಚಾರ ಮಾಡಿದ ಹೆಗ್ಗಳಿಕೆ ಇವರದು.

ಕೆಲವು ವಿದ್ವಾಂಸರ ಪ್ರಕಾರ ಕನ್ನಡದಲ್ಲಿ ದಾಸ ಸಾಹಿತ್ಯ ಆರಂಭಿಸಿದವರೇ ನರಹರಿ ತೀರ್ಥರು. ಇವರು ಕನ್ನಡದಲ್ಲಿ ಬಹಳಷ್ಟು ಕೀರ್ತನೆಗಳನ್ನು ರಚಿಸಿದ್ದಾರೆ. ಆದರೆ ಈಗ ಲಭ್ಯವಿರುವುದು ಮೂರು ಮಾತ್ರ. ಇದಲ್ಲದೇ ಇವರು 15 ಗ್ರಂಥಗಳನ್ನೂ ರಚಿಸಿದ್ದಾರೆ. ಇದರಲ್ಲಿ ಎರಡು ಗ್ರಂಥಗಳು ಮಾತ್ರ ಈಗ ಲಭ್ಯ.

  • ಗೀತಾ ಭಾಷ್ಯ ಟೀಕಾ
  • ಯಮಕ ಭಾರತ ಟೀಕಾ
  • ಹತ್ತು ಪ್ರಕರಣಗಳ ಮೇಲೆ ವ್ಯಾಖ್ಯಾನ
  • ಹರಿಯೇ ಇದು ಸರಿಯೇ
  • ಎ೦ತು ಮರುಳಾದೆ ನಾನೆಂತು
  • ತಿಳಕೋ ನಿನ್ನೊಳಗೆ ನೀನೇ

ಒಮ್ಮೆ ನರಹರಿ ತೀರ್ಥರು ಪದ್ಮನಾಭ ತೀರ್ಥರನ್ನು ಭೇಟಿ ಮಾಡಲು ಹ೦ಪಿ ಸಮೀಪದ ಆನೆಗೊಂದಿಗೆ ತೆರಳಿದರು.

ಮಾರ್ಗಮಧ್ಯೆ ಅವರು ಗೊಲ್ಲರಹಳ್ಳಿ ಎಂಬ ಹಳ್ಳಿಯಲ್ಲಿ ತಂಗಿದ್ದರು. ಆಗ ಅವರಿಗೆ ಲಕ್ಷ್ಮಿ ನಾರಾಯಣರು ಕನಸಿನಲ್ಲಿ ಕಾಣಿಸಿಕೊಂಡರು. ಹಳ್ಳಿಯಲ್ಲಿ ಸಣ್ಣ ಕೆರೆಯ ಬಳಿ ದೊಡ್ಡ ಕಲ್ಲಿನ ತಳದಲ್ಲಿ ತಮ್ಮ ವಿಗ್ರಹಗಳಿದ್ದು, ಅದನ್ನು ಅಲ್ಲಿಂದ ಸ್ಥಳಾಂತರಿಸಿ ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪಿಸುವಂತೆ ಸೂಚಿಸಿದರು. ಅದರಂತೆ ಅನಾಥವಾಗಿ ಬಿದ್ದಿದ್ದ ಸುಂದರ ಲಕ್ಷ್ಮಿ ನಾರಾಯಣ ವಿಗ್ರಹಗಳನ್ನು ನರಹರಿತೀರ್ಥರು ಶೋಧಿಸಿದರು. ಗೊಲ್ಲರಹಳ್ಳಿಯಲ್ಲೇ ಒಂದು ಭವ್ಯ ದೇವಾಲಯ ನಿರ್ಮಿಸಿ, ವಿಗ್ರಹಗಳನ್ನು ಅಲ್ಲಿ ಪ್ರತಿಷ್ಠಾಪಿಸಿದರು.

ಅಲ್ಲಿದ್ದ ಚಿಕ್ಕ ಕೆರೆಯನ್ನು ದೊಡ್ಡ ಸರೋವರವಾಗಿ ಪರಿವರ್ತಿಸಿದರು. ನಂತರ ಆನೆಗೊಂದಿ ತಲುಪಿದ ನರಹರಿ ತೀರ್ಥರು ಅಲ್ಲಿ ಪದ್ಮನಾಭ ತೀರ್ಥರ ಜತೆ ಕೆಲಕಾಲ ಕಳೆದರು.

ಪದ್ಮನಾಭತೀರ್ಥರು 1324ರಲ್ಲಿ ಕೃಷ್ಣಪಾದ ಸೇರಿದರು. ಸಹಜವಾಗಿಯೇ ನರಹರಿ ತೀರ್ಥರು ಅವರ ಉತ್ತರಾಧಿ ಕಾರಿಯಾದರು. ಮುಂದೆ 9 ವರ್ಷ ಕಾಲ ಅವರು ಪೀಠಾಧಿಪತಿಯಾಗಿದ್ದರು. 1333ರ ಪುಷ್ಯ ಮಾಸದ ಕೃಷ್ಣ ಪಕ್ಷದ ಸಪ್ತಮಿಯಂದು ನರಹರಿ ತೀರ್ಥರು ಕೃಷ್ಣ ಪಾದ ಸೇರಿದರು. ಬಳ್ಳಾರಿ ಜಿಲ್ಲೆ ಹಂಪಿ ಬಳಿ ಚಕ್ರತೀರ್ಥ ಮತ್ತು ಕಿಷ್ಕಿಂಧಾ ಬೆಟ್ಟಗಳ ತಪ್ಪಲಿನಲ್ಲಿ ತುಂಗಭದ್ರಾ ನದಿ ತೀರದಲ್ಲಿ ನರಹರಿ ತೀರ್ಥರ ವೃಂದಾವನವಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi