ಶ್ರೀಕೃಷ್ಣ ನರಕಾಸುರನನ್ನು ಕೊಂದದ್ದು

ಕೃಷ್ಣ ಇದ್ದ ಕಾಲದಲ್ಲೇ ನರಕಾಸುರ ಅನ್ನೋ ರಾಕ್ಷಸ ಒಬ್ಬ ಇದ್ದ. ಅವನ ಉಪಟಳ ಮಿತಿ ಮೀರಿತ್ತು. ಅವನು ಒಂದು ಸಾರ್ತಿ ಇಂದ್ರ ಲೋಕಕ್ಕೆ ಹೋಗಿ ಅವನ ಛತ್ರಿ ಅಪಹರಿಸಿ ತಂದ್ರೆ, ಮತ್ತೊಂದು ಸಾರ್ತಿ ಅವನಮ್ಮ ಅದಿತಿದೇವಿಯ ಕಿವಿಯೋಲೆಗಳನ್ನೇ ಕಿತ್ಕೊಂಡು ಬಂದಿದ್ದ! ಒಂದು ಸಾರ್ತಿಯಂತೂ, ಮೇರು ಪರ್ವತದಲ್ಲಿ ದೇವತೆಗಳ ಸ್ಥಾನವಾಗಿದ್ದ ಮಣಿಪರ್ವತದ ಭಾಗವನ್ನೇ ಹೊತ್ಕೊಂಡು ಬಂದು ಬಿಟ್ಟಿದ್ದ!! ಅದಕ್ಕಿಂತ ಹೆಚ್ಚಾಗಿ ಆ ದುಷ್ಟ, 16 ಸಾವಿರ ಸುಂದರ ರಾಜ ಕುಮಾರಿಯರನ್ನೂ ಬಂಧಿಸಿಟ್ಟು ಕೊಂಡಿದ್ದ!

ಇಂಥಾ ನರಕಾಸುರನನ್ನ ಮಟ್ಟ ಹಾಕೋಕೆ ಬೇರೆ ಯಾರಿಂದ ತಾನೆ ಸಾಧ್ಯವಿತ್ತು? ಕೃಷ್ಣನಿಗೆ ಈತನ ವಿಷಯ ತಿಳಿದಿದ್ದರೂ ಕಾಲ ಕೂಡಿ ಬರಲಿ ಎಂದು ಕಾಯುತ್ತಿದ್ದ. ನರಕಾಸುರನ ರಾಜ್ಯ ನಾಲ್ಕು ಪರ್ವತಗಳು ಮತ್ತು ಭದ್ರಕೋಟೆಗಳಿಂದ ಸುತ್ತುವರಿದಿತ್ತು. ಅಲ್ಲಿ `ಮುರ’ ಎಂಬುವ ರಾಕ್ಷಸ ಯಾವಾಗಲೂ ಕಾವಲು ಕಾಯ್ತಾ ಇರ್ತಿದ್ದ. ಅವನಿಗೆ ಐದು ತಲೆ. ಭಯಂಕರವಾಗಿದ್ದ.

ಶ್ರೀಕೃಷ್ಣ ಗರುಡವೇರಿ ಸತ್ಯಭಾಮೆಯೊಡನೆ ಅಲ್ಲಿಗೆ ಬಂದ. ತನ್ನ ಕೌಮೋದಕಿ (ಗದೆ) ಯಿಂದ ನಾಲ್ಕೂ ಪರ್ವತಗಳನ್ನು ಪುಡಿ ಮಾಡಿಬಿಟ್ಟ! ಆ ಹೊತ್ತಿಗೆ ಮುರಾಸುರ ಗಡದ್ದಾದ ನಿದ್ದೆಯಲ್ಲಿದ್ದ. ಅವನಿಗೆ ಹೊರಗೇನಾಗ್ತಿದೆ ಅನ್ನುವ ಪರಿವೇನೇ ಇರ್ಲಿಲ್ಲ. ಕೊನೆಗೂ ಕೃಷ್ಣ ತನ್ನ ಪಾಂಚಜನ್ಯ (ಶಂಖ) ಊದಿ ಅವನನ್ನೆಬ್ಬಿಸಬೇಕಾಯ್ತು!

ಮುರಾಸುರ ನಿದ್ದೆಯಿಂದ ಎದ್ದವನೇ ಭಯಂಕರವಾಗಿ ಕೂಗಿದ. ಕೃಷ್ಣ ಮಾತ್ರ ನಗುನಗುತ್ತ ಅವನ ಮೇಲೆರಗಿ ಬಂದ. ದುಷ್ಟ ರಾಕ್ಷಸ ತನ್ನ ಆಯುಧಗಳನ್ನೆಲ್ಲ ಪ್ರಯೋಗಿಸಿ ಕೃಷ್ಣನನ್ನು ಕೆಡವಲಿಕ್ಕೆ ಪ್ರಯತ್ನಿಸ್ದ. ಆದರೇನು? ಕೃಷ್ಣ ತನ್ನ ದಿವ್ಯಾಸ್ತ್ರಗಳಿಂದ ಅವೆಲ್ಲವನ್ನೂ ತಡೆದು ತುಂಡರಿಸಿ ಹಾಕಿಬಿಟ್ಟ. ಕೊನೆಗೆ ತನ್ನ ಚಕ್ರದಿಂದ ಮುರನ ಐದೂ ತಲೆಗಳನ್ನು ಒಟ್ಟಿಗೆ ಕತ್ತರಿಸಿ ಬೀಳಿಸಿದ. ಹೀಗೆ ಮುರನನ್ನ ಕೊಂದ ಮೇಲೆ ಕೃಷ್ಣನಿಗೆ `ಮುರಾರಿ’ ಎನ್ನುವ ಹೆಸರು ಬಂತು.

ಮುರಾಸುರನಿಗೆ ಏಳು ಜನ ಮಕ್ಕಳು. ಅವ್ರೆಲ್ರಿಗೂ ತಮ್ಮ ತಂದೆಯನ್ನು ಕೊಂದ ಕೃಷ್ಣನ ಮೇಲೆ ವಿಪರೀತ ಕೋಪ ಬಂತು. ಅವರು ಅವನ ಮೇಲೇರಿ ಹೋದರು. ಆದ್ರೆ ಕೃಷ್ಣ, ಎಲೆ ಕೊಚ್ಚಿ ಹಾಕಿದ ಹಾಗೆ ಅವರನ್ನ ಕೊಚ್ಚಿ ಹಾಕಿದ.

ಈ ಎಲ್ಲ ಸುದ್ದಿ ನರಕಾಸುರನಿಗೆ ತಿಳೀತು. ಅವನಿಗೆ ಒಂದು ಕಡೆ ಸೋಲಿನ ಕೋಪ, ಮತ್ತೊಂದು ಕಡೆ ಸಾವಿನ ಭಯ! ಅವನ ಪಾಪದ ಕೊಡವಂತೂ ತುಂಬಿಹೋಗಿತ್ತು. ಅದರಿಂದ ಅವನಿಗೆ ತಾನು ಕೃಷ್ಣನ ಮುಂದೆ ಎಷ್ಟು ದುರ್ಬಲ ಅನ್ನೋದು ಗೊತ್ತೇ ಆಗಲಿಲ್ಲ. `ಒಂದೇ ಏಟಿಗೆ ಅವನನ್ನ ತುಂಡರಿಸಿ ಹಾಕ್ತೇನೆ’ ಅಂತ ತನಗೆ ತಾನೇ ಯೋಚಿಸ್ಕೊಂಡು, ಆತ ಕೃಷ್ಣನ ಕಡೆ ಹೊರಟ. ಹೋಗುವಾಗ ರಥದ ತುಂಬ ಚಿತ್ರ ವಿಚಿತ್ರ ಆಯುಧಗಳನ್ನ ತುಂಬಿಕೊಂಡ. ಅವನಿಗೆ ರಾಕ್ಷಸರ ಮಾಯಾವಿದ್ಯೆ ಬರ್ತಿತ್ತು. ಅವನು ಇದ್ದಕ್ಕಿದ್ದ ಹಾಗೇ ಮಾಯವಾಗಿ ಬಿಡ್ತಿದ್ದ. ರೂಪ ಬದಲಿಸ್ಕೊಂಡು ಮೋಸ ಮಾಡ್ತಿದ್ದ! ಇಂಥಾ ನರಕಾಸುರ ತನ್ನ ಜೊತೆ ಸಾವಿರಾರು ರಾಕ್ಷಸ ಸೈನಿಕರನ್ನ ಕರ್ಕೊಂಡು ಹೊರಟ. ಆದರೇನು? ಕೃಷ್ಣ ಒಂದೇ ಏಟಿಗೆ ಅವನ ಸೈನಿಕರೆಲ್ಲರನ್ನೂ ಬಡಿದು ಹಾಕಿದ. ನೋಡನೋಡ್ತಿದ್ದ ಹಾಗೇ ನರಕಾಸುರನ ಸೇನೆ ನಿರ್ನಾಮವಾಗಿ ಹೋಯ್ತು. ಅವನಿಗೀಗ ಗಾಬರಿಯಾಯ್ತು. ಇನ್ನು ತನ್ನ ಸಾವು ನಿಶ್ಚಿತ ಅಂದ್ಕೊಂಡ. `ಬಿದ್ರೂ ಮೀಸೆ ಮಣ್ಣಾಗಿಲ್ಲ’ ಅನ್ನೋ ಹಾಗೆ, ಆತ ಗರ್ವದಿಂದ ತ್ರಿಶೂಲ ಹಿಡಿದುಕೊಂಡು ಕೃಷ್ಣನ ಮೇಲೆ ಎರಗಿದ. ಆದರೆ, ಕೃಷ್ಣನ ಚಕ್ರ `ಸುದರ್ಶನ’ ನರಕಾಸುರನ ತಲೆಯನ್ನ ಕತ್ತರಿಸಿ ಹಾಕಿತು. ದೊಡ್ಡ ದನಿ ತೆಗೆದು ಕೂಗುತ್ತಾ ನರಕಾಸುರ ಸತ್ತು ಬಿದ್ದ. ಅಂತೂ ಕೃಷ್ಣ ಮುರ ಮತ್ತು ನರಕ – ಈ ಇಬ್ಬರು ದುಷ್ಟ ರಾಕ್ಷಸರನ್ನು ಕೊಂದು ಭೂಭಾರ ಕಡಮೆ ಮಾಡಿದ.

ನರಕಾಸುರ ಹದಿನಾರು ಸಾವಿರ ರಾಜಪುತ್ರಿಯರನ್ನು ಬಂಧಿಸಿಟ್ಟಿದ್ದನಲ್ಲ? ಆ ಹೆಣ್ಣುಗಳೆಲ್ಲಾ ಮೊದಲ ನೋಟದಲ್ಲೇ ಕೃಷ್ಣನಿಗೆ ತಮ್ಮನ್ನು ತಾವು ಅರ್ಪಿಸಿಕೊಂಡು ಬಿಟ್ಟಿದ್ದರು. ಅವರು, ತಮ್ಮನ್ನು ಮದುವೆಯಾಗಿ ಪಾವನಗೊಳಿಸುವಂತೆ ಕೃಷ್ಣನನ್ನು ಕೇಳಿಕೊಂಡರು.

ರಾಜಪುತ್ರಿಯರ ಭಕ್ತಿಗೆ, ವಿನಯಕ್ಕೆ ಮೆಚ್ಚಿದ ಕೃಷ್ಣನು ಅವರೆಲ್ಲರನ್ನೂ ಮದುವೆಯಾಗಿ ದ್ವಾರಕೆಗೆ ಕರೆದುಕೊಂಡು ಹೋದ. ಹೀಗೆ ನರಕಾಸುರನ ಅಧ್ಯಾಯ ಕೊನೆಗೊಂಡಿತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi