ನವದ್ವೀಪ ಪರಿಕ್ರಮ

ಶ್ರೀ ಗೋದ್ರುಮ ದ್ವೀಪ

– ಡಾ.ಬಿ.ಆರ್‌.ಸುಹಾಸ್‌

ಭಕ್ತಿವಿನೋದಠಾಕೂರರಿಗೆ ನವದ್ವೀಪಧಾಮದಲ್ಲಿ ವಾಸಿಸಬೇಕೆಂಬ ಆಸೆ ಎಷ್ಟು ಬಲವಾಗಿತ್ತೆಂದರೆ, ಬ್ರಿಟಿಷ್ ಸರಕಾರ ಅವರನ್ನು ಅದಕ್ಕಾಗಿ ಕೃಷ್ಣಗಡಕ್ಕೆ ವರ್ಗ ಮಾಡಲು ನಿರಾಕರಿಸಿದಾಗ, ಅವರು ರಾಜೀನಾಮೆಯಿತ್ತರು. ಆಗ ಬ್ರಿಟಿಷ್ ಸರಕಾರ ಅವರ ಅಹವಾಲಿಗೆ ಒಪ್ಪಿತು. ಹೀಗೆ ಅವರು ಕೃಷ್ಣಗಡಕ್ಕೆ ಮ್ಯಾಜಿಸ್ಟ್ರೇಟರಾಗಿ ಗೋದ್ರುಮದ್ವೀಪಕ್ಕೆ ಬಂದರು.

ಒಂದು ದಿನ, ಅವರು ತಮ್ಮ ಮನೆಯ ಅಂಗಣದಲ್ಲಿ ಕುಳಿತು ಜಪಿಸುತ್ತಿದ್ದಾಗ, ಅವರ ಮನೆಯ ಮುಂದೆ ಹರಿಯುತ್ತಿದ್ದ ಜಾಲಂಗಿ ನದಿಯ ಆಚೆ ದಡದ ಮೇಲೆ ಹೊನ್ನಿನ ಪ್ರಭೆಯೊಂದು ಹೊರಡುತ್ತಿದ್ದುದನ್ನು ಕ೦ಡರು. ಮರುರಾತ್ರಿಯೂ ಕಾಣಿಸಿತಾದರೂ ಈ ಬಾರಿ ಅವರು ಚೈತನ್ಯ ಮತ್ತು ನಿತ್ಯಾನಂದರು ಕೀರ್ತನೆ ಮಾಡುತ್ತಾ ನರ್ತಿಸುತ್ತಿದ್ದುದನ್ನೂ ಕಂಡರು.

ಮರುದಿನ ಅವರು ಆ ಬೆಳಕು ಬಂದ ದಿಕ್ಕಿನತ್ತ ಹುಡುಕಿಕೊಂಡು ಹೋದರು. ಆಗ ಅವರು ತುಳಸೀ ಗಿಡಗಳಿಂದ ಆವೃತವಾಗಿದ್ದ ಮೀಯಪುರ್ ಎಂಬ ಮುಸ್ಲಿಂ ಹಳ್ಳಿಯ ಪ್ರದೇಶವೊಂದಕ್ಕೆ ಬಂದರು; ಆಳವಾದ ಸಂಶೋಧನೆ ನಡೆಸಿ, ಜಗನ್ನಾಥ ದಾಸ ಬಾಬಾಜಿ ಮಹಾರಾಜರ ನಿರ್ಣಯದೊಂದಿಗೆ, ಭಕ್ತಿವಿನೋದರು ಅದೇ ಶ್ರೀ ಚೈತನ್ಯರು ಅವತರಿಸಿದ ದಿವ್ಯಸ್ಥಳವೆಂದು ನಿರ್ಧರಿಸಿದರು.

ಭಕ್ತಿವಿನೋದರು ಚೈತನ್ಯ ಮಹಾಪ್ರಭುಗಳ ಸಂಕೀರ್ತನಾ ಪದ್ಧತಿಯನ್ನು ಪ್ರಚುರಪಡಿಸಲು ಅನೇಕ ವರ್ಷಗಳ ಕಾಲ ಅವಿರತ ಪ್ರವಚನ ಮತ್ತು ಬರವಣಿಗೆಯಲ್ಲಿ ತೊಡಗಿದರು. ಅವರು ಗೃಹಸ್ಥಾಶ್ರಮವನ್ನೂ ತ್ಯಜಿಸಿ ಗೌರಕಿಶೋರದಾಸ ಬಾಬಾಜಿ ಮಹಾರಾಜರಲ್ಲಿ ಬಾಬಾಜಿ ದೀಕ್ಷೆಯನ್ನು ಪಡೆದರು.

ಅವರು ತಮ್ಮ ಮುಂದಿನ ಜೀವನವನ್ನು ವೃಂದಾವನದಲ್ಲಿ ಕಳೆಯಲು ಯೋಚಿಸಿದರು. ಆದರೆ ಅವರು ಹೊರಡಬೇಕಿದ್ದ ಹಿಂದಿನ ರಾತ್ರಿ, ಶ್ರೀಕೃಷ್ಣನೇ ಅವರ ಕನಸಿನಲ್ಲಿ ಬಂದು ಅವರು ಇನ್ನೂ ನವದ್ವೀಪದಲ್ಲಿ ತನ್ನ ಲೀಲೆಗಳು ನಡೆದ ಸ್ಥಳಗಳನ್ನು ಶೋಧಿಸುವ ಕಾರ್ಯವನ್ನು ಪೂರೈಸಿಲ್ಲವೆಂದು ಹೇಳಿದನು.

ಆಗ ಅವರು ವೃಂದಾವನಕ್ಕೆ ಹೋಗದೇ, ನವದ್ವೀಪದಲ್ಲೇ ಉಳಿದು ವಿಸ್ತೃತ ಸಂಶೋಧನೆಯಲ್ಲಿ ತೊಡಗಿ ಚೈತನ್ಯರ ವಿವಿಧ ಲೀಲಾಸ್ಥಳಗಳನ್ನು ಕಂಡುಹಿಡಿದರು. ಈ ಸಂಶೋಧನೆಯ ಫಲವಾಗಿ, ಶ್ರೀ ನವದ್ವೀಪ ಮಹಾತ್ಮ್ಯೆಯೂ ಸೇರಿದಂತೆ ಹಲವಾರು ಪುಸ್ತಕಗಳು ಅವರ ಲೇಖನಿಯಿಂದ ಮೂಡಿ ಬಂದವು.

ಶ್ರೀ ಭಕ್ತಿವಿನೋದ ಠಾಕೂರರು ತಮ್ಮ ಮನೆಗೆ ಸ್ವಾನಂದ ಸುಖದಕುಂಜ ಎಂದು ಹೆಸರಿಟ್ಟರು. ವೃಂದಾವನದ ರಾಧಾಕುಂಡದ ದಡದ ಮೇಲಿರುವ ಸಖಿ ಲಲಿತೆಯ ಲತಾಗೃಹದ ಹೆಸರು ಅದು. ಶ್ರೀ ಠಾಕೂರರು, ತಮ್ಮ ಪುಟ್ಟ ಕುಟೀರವು ಆ ಲತಾಗೃಹಕ್ಕಿಂತ ಬೇರೆಯಲ್ಲವೆಂದು ಭಾವಿಸಿ ಅಲ್ಲಿ ಸಂತೋಷದಿಂದಿದ್ದರು.

ಶ್ರೀ ಭಕ್ತಿವಿನೋದರೂ, ಶ್ರೀಜಗನ್ನಾಥದಾಸ ಬಾಬಾಜಿ ಮಹಾರಾಜರೂ, ಗೌರಕಿಶೋರದಾಸ ಬಾಬಾಜಿ ಮಹಾರಾಜರ, ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಠಾಕೂರರೂ ಆಗಾಗ ಇಲ್ಲಿ ಕುಳಿತು ಗೌರಹರಿಯ ಲೀಲೆಗಳನ್ನು ಕುರಿತು ಚರ್ಚಿಸುತ್ತಿದ್ದರೆಂದು ಹೇಳುತ್ತಾರೆ.

ಮುಖ್ಯ ಮನೆಯ ಮೇಲೆ ಭಕ್ತಿ ವಿನೋದರ ಮಲಗುವ ಕೋಣೆಯಿದೆ. ಮನೆಯ ಸನಿಹದಲ್ಲೇ ಒಂದು ದೇವಾಲಯವಿದ್ದು, ಭಕ್ತಿವಿನೋದರು ಪೂಜಿಸುತ್ತಿದ್ದ ಗೌರಗದಾಧರ ವಿಗ್ರಹಗಳಿವೆ.

ಈ ಮನೆಗೆ ಹೋಗಲು, ಮೊದಲು ಹೂಲರ್ ಘಾಟ್ ಗೆ ಹೋಗಿ, ಅಲ್ಲಿಂದ ಜಾಲಂಗಿ ನದಿಯನ್ನು ದೋಣಿಯ ಮೂಲಕ ದಾಟಿ, ಸ್ವರೂಪಗಂಜ್ ತಲಪಬೇಕು. ಭಕ್ತಿವಿನೋದ ಠಾಕೂರರ ಮನೆ, ಈ ಪ್ರದೇಶದಲ್ಲಿದೆ.

ಭಕ್ತಿವಿನೋದಠಾಕೂರರು, ಮಹಾಭಕ್ತನೊಬ್ಬನು ಜನಿಸಿ, ಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಹರಡುವನೆಂದು ಭವಿಷ್ಯ ನುಡಿದಿದ್ದರು. ಅದು ಶ್ರೀಲ ಪ್ರಭುಪಾದರ ಮೂಲಕ ಇಸ್ಕಾನ್ ರೂಪದಲ್ಲಿ ಪವಾಡಸದೃಶವಾಗಿ ನಡೆದದ್ದು ಇತ್ತೀಚಿನ ಇತಿಹಾಸ.

ಸುವರ್ಣ ಬಿಹಾರ (ವಿಹಾರ)

ಇದನ್ನು ಮಹಾವಾರಣಾಸಿ ಎಂದೂ ಕರೆಯುತ್ತಾರೆ. ಇದು, ಸುವರ್ಣಸೇನನೆಂಬ ಮಹಾರಾಜನು ಆಳುತ್ತಿದ್ದ ಸ್ಥಳ; ಬಹಳ ಶ್ರೀಮಂತನಾಗಿದ್ದ ಈತ, ಸತ್ಯಯುಗದಲ್ಲಿ ಆಳುತ್ತಿದ್ದ ಎನ್ನುತ್ತಾರೆ. ಸುದೀರ್ಘ ಕಾಲ ಆಳಿದ ಇವನು, ವೃದ್ಧನಾದ ಬಳಿಕವೂ ತನ್ನ ಧನವನ್ನು ಹೆಚ್ಚಿಸಲು ಕಷ್ಟಪಟ್ಟು ಕೆಲಸ ಮಾಡುತ್ತಿದ್ದ.

ಆಗ ಒಂದು ದಿನ, ನಾರದ ಮುನಿಗಳು ಬಂದು ಅವನಿಗೆ ಬೋಧಿಸಿದರು, “ಹೇ ರಾಜಾ, ನೀನು ನಿನ್ನ ದೇಹ ಮತ್ತು ಕುಟುಂಬದಲ್ಲೇ ಮುಳುಗಿಹೋಗಿರುವೆ. ಈ ಧನಕ್ಕೆ ನಿಜವಾಗಿ ಏನೂ ಬೆಲೆಯಿಲ್ಲ. ಆದರೆ ಒಂದು ಅದೃಷ್ಟವೆಂದರೆ ನೀನು ನವದ್ವೀಪದಲ್ಲಿ ನೆಲೆಸಿರುವೆ. ನೀನು ಗೌರಾಂಗ ಪ್ರಭುವಿನ ನಾಮಸಂಕೀರ್ತನೆ ಮಾಡಿದರೆ ನಿನಗೆ ಪರಿಪಕ್ವತೆಯುಂಟಾಗುತ್ತದೆ.”

ಅಂದು ರಾತ್ರಿ ಸುವರ್ಣಸೇನನಿಗೆ ಒಂದು ಕನಸಾಯಿತು. ಆ ಕನಸಿನಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ಸಂಗಡಿಗರೊಂದಿಗೆ ಸಂಕೀರ್ತನೆ ಮಾಡುತ್ತಿರುವುದನ್ನು ಅವನು ಕಂಡನು. ಆಗ ಆಕಾಶದಿ೦ದ ಅಶರೀರವಾಣಿಯಾಗಿ, ಅವನು ಮು೦ದೆ ನವದ್ವೀಪದಲ್ಲೇ ಹುಟ್ಟಿ ಚೈತನ್ಯರ ಲೀಲೆಗಳಲ್ಲಿ ಭಾಗಿಯಾಗುವನೆಂದು ನುಡಿಯಿತು.

ಚೈತನ್ಯರು ಅವತರಿಸಿದಾಗ ಸುವರ್ಣಸೇನನು ಇಲ್ಲಿ ಬುದ್ಧಿವಂತ ಖಾನನಾಗಿ ಹುಟ್ಟಿದನು. ಅವನು ಚೈತನ್ಯರ ಮತ್ತು ವಿಷ್ಣುಪ್ರಿಯೆಯ ವಿವಾಹಕ್ಕೆ ಧನ ಸಹಾಯ ಮಾಡಿದನು. ಒಮ್ಮೆ ಚೈತನ್ಯರೂ ಅವರ ಸಂಗಡಿಗರೂ ಸೇರಿ ಚಂದ್ರಶೇಖರರ ಭವನದಲ್ಲಿ ನಾಟಕವೊಂದನ್ನು ಅಭಿನಯಿಸುವಾಗ, ಅವರ ವಸ್ತ್ರಗಳಿಗಾಗಿ ಧನ ಸಹಾಯ ಮಾಡಿದನು. ಚೈತನ್ಯರೂ ಅವರ ಸಂಗಡಿಗರೂ ಪುರಿಗೆ ಪಯಣಿಸುವಾಗಲೂ ಅವನು ಅವರಿಗೆ ಸಹಾಯ ಮಾಡಿದನು.

ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಗಳು ಇಲ್ಲಿ ಸುವರ್ಣ ಬಿಹಾರಿ ಗೌಡೀಯ ಮಠ ದೇವಾಲಯವನ್ನು ಸ್ಥಾಪಿಸಿದರು. ಇಲ್ಲಿ ಭಗವಾನ್ ಚೈತನ್ಯರ ಮತ್ತು ರಾಧಾಕೃಷ್ಣರ ಬೃಹತ್ ವಿಗ್ರಹಗಳನ್ನು ನೋಡಬಹುದು. ದೇವಾಲಯದ ಸನಿಹವಿರುವ ಮಾವಿನತೋಪಿನಲ್ಲಿ ಸುವರ್ಣಸೇನರಾಜನ ಅರಮನೆಯ ಅವಶೇಷಗಳನ್ನು ಕಾಣಬಹುದು. ಭಕ್ತರನ್ನು ಕೇಳಿದರೆ ಅದನ್ನು ತೋರಿಸುತ್ತಾರೆ.

ಜಾಲಂಗಿ ನದಿಯನ್ನು ದಾಟಿ ಭಕಿವಿನೋದ ಠಾಕೂರರ ಮನೆಗೆ ಬಂದ ಬಳಿಕ, ಅಲ್ಲಿಂದ ಸುಮಾರು 3ಕಿ.ಮೀ. ದೂರದಲ್ಲಿ ಆಮಘಟ ಗ್ರಾಮದ ಬಳಿಯ ನರಸಿಂಹ ಪಲ್ಲಿಯ ಕಡೆ ಸಾಗಿದರೆ, ಸುವರ್ಣ ಬಿಹಾರ ಸಿಗುತ್ತದೆ. ಸ್ವರೂಪಗಂಜ್‌ನಿಂದ ಬಸ್‌ ಅಥವಾ ಬೈಕ್‌, ರಿಕ್ಷಾದಲ್ಲಿ, ಇಲ್ಲವೇ ಮಾಯಾಪುರಿಯಿಂದ ಟ್ಯಾಕ್ಸಿಯಲ್ಲಿ ಹೋಗಬಹುದು. ಇಲ್ಲಿನ ದರ್ಶನದ ಅವಧಿ, ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನ ಹನ್ನೆರಡು ಗಂಟೆ ಹಾಗೂ ಅಪರಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗಿರುತ್ತದೆ.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi