ಶ್ರೀ ನರಸಿಂಹನು ಪ್ರತ್ಯಕ್ಷನಾದ ಸ್ಥಳ ಅಹೋಬಲ

ಮಕ್ಕಳೇ, ನಿಮಗೆಲ್ಲ ಭಗವಂತನ ನರಸಿಂಹಾವತಾರದ ಕಥೆ  ಗೊತ್ತಿದೆಯಲ್ಲವೇ?

ಹಿರಣ್ಯಕಶಿಪುವನ್ನು ಶಿಕ್ಷಿಸಲು ಪ್ರಹ್ಲಾದನನ್ನು ಹರಸಲು ಭಗವಂತನು ನರಸಿಂಹನಾಗಿ ಬಂದನು. ಈ ಐತಿಹಾಸಿಕ ಘಟನೆ ಭಾರತದ ಯಾವ ಕ್ಷೇತ್ರದಲ್ಲಿ ನಡೆಯಿತು, ನಿಮಗೆ ಗೊತ್ತೇ? ಅದೇ ಅಹೋಬಲಂ ಕ್ಷೇತ್ರ. ಆಂಧ್ರಪ್ರದೇಶದ, ಕರ್ನೂಲ್ ಜಿಲ್ಲೆಯ, ನಂದ್ಯಾಲ ತಾಲ್ಲೂಕಿನಿಂದ 40 ಕಿ.ಮೀ. ದೂರದಲ್ಲಿದೆ ಅಹೋಬಲಂ ಕ್ಷೇತ್ರ. ನಲ್ಲಮಲ ಅರಣ್ಯ ಪ್ರದೇಶ ವ್ಯಾಪ್ತಿಗೆ ಈ ಕ್ಷೇತ್ರ ಸೇರಿದೆ.

ಭಗವಂತನು ಉಗ್ರನಾಗಿ ಕಂಬವನ್ನು ಸೀಳಿ ಹೊರಬಂದಾಗ, ಅವನ ಭಯಂಕರ ರೂಪವನ್ನು ಕಂಡ ದೇವಗಣಗಳು “ಅಹೋಬಲ, ಅಹೋಬಲ” (ಅತ್ಯಂತ ಶಕ್ತಿಶಾಲಿ) ಎಂದು ಕೂಗಿದರಂತೆ.

ಅಂದಿನಿಂದ ಈ ಕ್ಷೇತ್ರಕ್ಕೆ ಈ ಹೆಸರಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು ಒಂಬತ್ತು ನರಸಿಂಹಸ್ವಾಮಿಯ ದೇಗುಲಗಳಿದ್ದು, ಕೆಲವನ್ನು ಸುಲಭವಾಗಿ ದರ್ಶಿಸಬಹುದಾಗಿದೆ ಮತ್ತೆ ಕೆಲವನ್ನು ಅರಣ್ಯದಲ್ಲಿ ಕಾಲ್ನಡಿಗೆಯಲ್ಲಿ ತಲಪಬೇಕಾಗುತ್ತದೆ. ಸುಮಾರು ದೇಗುಲಗಳು ಗುಹೆಗಳಲ್ಲಿವೆ. ಹಾಗೂ ತಮ್ಮದೇ ವೈಶಿಷ್ಟ್ಯಗಳನ್ನು ಹೊಂದಿವೆ.

ಛತ್ರವಟ ನರಸಿಂಹಸ್ವಾಮಿ

ಇಲ್ಲಿನ ನರಸಿಂಹಸ್ವಾಮಿ ವಿಗ್ರಹವು ಸುಂದರ ನಗುಮೊಗವನ್ನು ಹೊಂದಿದೆ. ತಮ್ಮ ಕಂಠವನ್ನು ಕಳೆದುಕೊಂಡಿದ್ದ ಇಬ್ಬರು ಗಂಧರ್ವರು ಇಲ್ಲಿ ನರಸಿಂಹನನ್ನು ಆರಾಧಿಸಿ, ತಮ್ಮ ಕಂಠವನ್ನು ಮರಳಿ ಪಡೆದರೆಂದು ಪ್ರತೀತಿಯಿದೆ. ಹಿಂದೆ, ಒಂದು ಆಲದ ಮರದ ಕೆಳಗೆ ಈ ವಿಗ್ರಹವಿದ್ದುದರಿಂದ ಛತ್ರವಟ ಎಂಬ ಹೆಸರು ಬಂದಿವೆ.

ಯೋಗಾನಂದ ನರಸಿಂಹ

ಈ ಸ್ಥಳದಲ್ಲಿ ಶ್ರೀ ನರಸಿಂಹನು ಪ್ರಹ್ಲಾದನಿಗೆ ಯೋಗದ (ಭಕ್ತಿಯೋಗ) ಅಂತಿಮ ಗುರಿಯನ್ನು ಹೇಳಿಕೊಟ್ಟನೆಂದು ಪ್ರತೀತಿಯಿದೆ. ನವಗ್ರಹರು ತಮ್ಮ ಆಧಿಪತ್ಯವನ್ನು, ನರಸಿಂಹನನ್ನು ಸ್ತುತಿಸಿ ಪಡೆದರು ಎಂಬುದು ಈ ಸ್ಥಳದ ಮಹಿಮೆ.

ಪಾವನ ನರಸಿಂಹ

ಈ ದೇಗುಲವನ್ನು ತಲಪಲು ಸುಮಾರು 500 ಮೆಟ್ಟಿಲುಗಳಲ್ಲಿ ಸಾಗಬೇಕು. ಆದಿ ಶಂಕರರು ಒಬ್ಬ ಕಾಪಾಲಿಕನಿಂದ ತಪ್ಪಿಸಿಕೊಳ್ಳಲು, ಈ ಸ್ಥಳದಲ್ಲಿ ನರಸಿಂಹ ಕರಾವಲ೦ಬನ ಸ್ತೋತ್ರವನ್ನು ರಚಿಸಿದರೆ೦ದು ಹೇಳಲಾಗುತ್ತದೆ. ಇಲ್ಲಿ ನೈವೇದ್ಯಕ್ಕಿಟ್ಟ ಪ್ರಸಾದವು ಅರ್ಧ ಮಾತ್ರ ಉಳಿದಿರುತ್ತಿತ್ತೆಂದು ಇಲ್ಲಿನ ಜನಪ್ರಿಯ ಕಥೆ.

ಜ್ವಾಲಾ ನರಸಿಂಹಸ್ವಾಮಿ ಗುಹೆ

ಈ ಗುಹೆಯಲ್ಲಿ ನರಸಿಂಹನ ಮೂರು ವಿಗ್ರಹಗಳಿವೆ. ಜ್ವಾಲಾನರಸಿಂಹನ ವಿಗ್ರಹವು ಹಿರಣ್ಯಕಶಿಪುವನ್ನು ಸಂಹಾರ ಮಾಡುವ ಭಂಗಿಯಲ್ಲಿದೆ. ಬಲಗಡೆ ಕಂಬದಿಂದ ಹೊರಬರುತ್ತಿರುವ ಭಂಗಿಯಲ್ಲಿರುವ ಸ್ತಂಭ ನರಸಿಂಹ, ಹಾಗೂ ಎಡಗಡೆ ರಕ್ಕಸನೊಡನೆ ಕಾದಾಡುವ ಭಂಗಿಯಲ್ಲಿರುವ ವೀರ ನರಸಿಂಹ ವಿಗ್ರಹಗಳಿವೆ.

ಇಷ್ಟೇ ಅಲ್ಲದೆ ಈ ಕ್ಷೇತ್ರದಲ್ಲಿ ವರಾಹ ನರಸಿಂಹಸ್ವಾಮಿ, ಮಾಲೋಲ ನರಸಿಂಹಸ್ವಾಮಿ, ಕಾರಂಜಿ ನರಸಿಂಹಸ್ವಾಮಿ, ಭಾರ್ಗವ ನರಸಿಂಹಸ್ವಾಮಿ, ಅಹೋಬಲ ನರಸಿಂಹಸ್ವಾಮಿಯ ದೇಗುಲಗಳಿವೆ. ಅಹೋಬಲ ನರಸಿಂಹ ವಿಗ್ರಹರೂಪದಲ್ಲಿದ್ದು, ಸ್ವಯಂಪ್ರಕಟ ವಿಗ್ರಹವಾಗಿದೆ.

ಉಗ್ರಸ್ತಂಭ

ಇದು ಬೃಹತ್ ಶಿಲಾಸ್ತಂಭವಾಗಿದ್ದು, ನರಸಿಂಹನು ಪ್ರತ್ಯಕ್ಷನಾದ ಸ್ತಂಭವಾಗಿದೆ. ಈ ಸ್ತಂಭವು ಎರಡಾಗಿ ಬೇರ್ಪಟ್ಟಿದೆ. ನೂರೈವತ್ತು ವರ್ಷಗಳ ಹಿಂದೆ ಬ್ರಿಟಿಷ್ ಪ್ರವಾಸಿಯೊಬ್ಬ ಹಿಡಿದಿರುವ ಅಹೋಬಲಂನ ಫೋಟೋದಲ್ಲಿ ಈ ಸ್ತಂಭವು ಎರಡಾಗಿ ಬೇರ್ಪಟ್ಟಿರುವುದು ಹಾಗೂ ಅಕ್ಕಪಕ್ಕದಲ್ಲಿ ಕಲ್ಲಿನ ದೊಡ್ಡ ದೊಡ್ಡ ಗೋಡೆಗಳಿರುವುದು ಸ್ಪಷ್ಟವಾಗಿ ಕಾಣುತ್ತದೆ. ಹಾಗೂ ಇದು ಹಿರಣ್ಯಕಶಿಪುವಿನ ಅರಮನೆಯೆನ್ನಲು ಸ್ಪಷ್ಟ ಸಾಕ್ಷಿಯಾಗಿದೆ.

ಬೇರ್ಪಟ್ಟ ಕಂಬಗಳಲ್ಲಿ ಪ್ರಸ್ತುತ ಒಂದು ಭಾಗವು ಕುಸಿದುಹೋಗಿದೆ. ಗೋಡೆಗಳ ಕಲ್ಲುಗಳೂ ಕುಸಿದಿವೆ. ಜೀರ್ಣೋದ್ಧಾರ ಕಾರ್ಯ ಕೈಗೊಳ್ಳದಿದ್ದಲ್ಲಿ ಇರುವ ಇನ್ನೊಂದು ಸ್ತಂಭವೂ ನಿಧಾನವಾಗಿ ಕುಸಿಯುವ ಅಪಾಯವಿದೆ.

ಈ ಕ್ಷೇತ್ರದಲ್ಲಿ ಹಲವಾರು ಜಲಪಾತಗಳು, ಪವಿತ್ರ ಕುಂಡಗಳು ಇವೆ. ಅವುಗಳಲ್ಲಿ 12 ಕು೦ಡಗಳು ಪ್ರಮುಖವಾಗಿವೆ.

ಒಟ್ಟಿನಲ್ಲಿ ದಟ್ಟ ಕಾನನದ ನಡುವೆ, ಮನುಷ್ಯ ಸಂಚಾರಕ್ಕೆ ದುರ್ಗಮವಾಗಿದ್ದ ಈ ದೇಗುಲಗಳು, ಅಲ್ಲಿನ ಅರ್ಚಕರು ಹಾಗೂ ಭಕ್ತರ ಪರಿಶ್ರಮದಿಂದಾಗಿ ದರ್ಶಿಸಲು ಸುಲಭವಾಗಿವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi