ಶ್ರೀ ಜಗನ್ನಾಥನ ಲೀಲೆಗಳು

ಗೀತಾಪಾಂಡನ ಭಾಗ್ಯ

ಒಂದಾನೊಂದು ಕಾಲದಲ್ಲಿ ಪುರಿಕ್ಷೇತ್ರದಲ್ಲಿ ಅರ್ಜುನಮಿಶ್ರಾ ಎಂಬ ಪೂಜಾರಿ (ಪ೦ಡ) ಯೊಬ್ಬನಿದ್ದ. ಅವನು ಪ್ರತಿನಿತ್ಯ ಭಗವದ್ಗೀತೆಯನ್ನು ಪೂರ್ತಿಯಾಗಿ ಪಾರಾಯಣ ಮಾಡುತ್ತಿದ್ದ. ಈ ಕಾರಣದಿಂದ ಅರ್ಜುನ ಮಿಶ್ರನಿಗೆ “ಗೀತಾಪಾಂಡ” ಎಂದೇ ಎಲ್ಲರೂ ಕರೆಯುತ್ತಿದ್ದರು. ಆತನಿಗೆ ಭಗವದ್ಗೀತೆಯ ಕುರಿತು ಅಪಾರ ಶ್ರದ್ಧಾಭಕ್ತಿಗಳಿದ್ದವು.

ಜಗನ್ನಾಥನ ಪರಮಭಕ್ತನಾಗಿದ್ದ ಗೀತಾಪಾಂಡ, ತನ್ನನ್ನು ಸಂಪೂರ್ಣವಾಗಿ ಭಗವತ್ಸೇವೆಗೆ ಅರ್ಪಿಸಿಕೊಂಡಿದ್ದನು. ಶರಣಾಗತಿ ಭಾವದಿಂದ ಜಗನ್ನಾಥನನ್ನು ಪೂಜಿಸುತ್ತಾ, ಪ್ರತಿಯೊಂದಕ್ಕೂ ಭಗವಂತನ ಮೇಲೆಯೇ ಅವಲಂಬಿತವಾಗಿ ಜೀವಿಸುತ್ತಿದ್ದನು. ತನ್ನ ಜೀವನದಲ್ಲಿ ಏನೇ ಘಟಿಸಿದರೂ ಅದನ್ನು ಭಗವಂತನ ಇಚ್ಛೆಯೆಂದು ತಿಳಿದು ನಿರ್ಲಿಪ್ತತೆಯಿಂದ ಸ್ವೀಕರಿಸುತ್ತಿದ್ದನು.

ಇಂತಹ ಗೀತಾಪಾಂಡನ ಲೌಕಿಕ ಸ್ಥಿತಿಯು ಅತ್ಯಂತ ಬಡತನದಿಂದ ಕೂಡಿತ್ತು. ಅವನು ಭಿಕ್ಷಾಟನೆಯಿಂದ ಜೀವಯಾಪನೆ ಮಾಡುತ್ತಿದ್ದನು. ಅವನ ಸಜ್ಜನಿಕೆ ಹಾಗೂ ಭಕ್ತಿಗಳಿಂದ ಜನರು ಕೂಡ ಅವನಲ್ಲಿ ವಿಶೇಷ ಗೌರವಾದರ ಹೊಂದಿದ್ದರು. ಆದರೆ ಪಾಂಡ ಯಾವತ್ತೂ ಜನರ ಈ ಪ್ರೀತಿಯನ್ನು ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿರಲಿಲ್ಲ.

ಹೀಗಿರುವಾಗ ಪುರಿಯಲ್ಲೊಮ್ಮೆ ಅತಿವೃಷ್ಟಿ ಆರಂಭವಾಗಿ, ಒಂದು ವಾರ ಕಾಲ ಎಡಬಿಡದ ಮಳೆ ಸುರಿಯಿತು. ಇದರಿಂದಾಗಿ ಗೀತಾಪಾ೦ಡನಿಗೆ ಹೊರ ಹೋಗಲು ಅವಕಾಶವಾಗಲಿಲ್ಲ. ಮನೆಯಲ್ಲಿದ್ದ ಅಲ್ಪಸ್ವಲ್ಪ ಸಂಗ್ರಹವೂ ಒಂದೆರಡು ದಿನದಲ್ಲಿ ಮುಗಿದುಹೋಯಿತು. ಚಿಕ್ಕ ಮಕ್ಕಳಿಂದ ಕೂಡಿದ್ದ ಅವನ ಸಂಸಾರ ಆಹಾರವಿಲ್ಲದೆ ಉಪವಾಸ ಇರಬೇಕಾದ ಪರಿಸ್ಥಿತಿ ಬಂದೊದಗಿತು.

ಆದರೆ ಇಂದರಿಂದೇನೂ ಪಾಂಡ ವಿಚಲಿತನಾಗಲಿಲ್ಲ. ಭಗವಂತನಲ್ಲಿ ಇನ್ನೂ ಹೆಚ್ಚಿನ ಭಕ್ತಿಯನ್ನಿರಿಸಿ ಭಗವದ್ಗೀತಾ ಪಠಣದಲ್ಲಿ ತೊಡಗಿಕೊಂಡನು. ಮಳೆಯಿಂದಾಗಿ ಹೊರಹೋಗಲಾರದಂತಹ ಪರಿಸ್ಥಿತಿಯಿಂದ ಅವನಿಗೆ ಸಂತೋಷವೇ ಆಗಿತ್ತು. ಈ ಉಳಿಕೆಯ ಸಮಯದಲ್ಲಿ ಮತ್ತಷ್ಟು ಗಹನವಾಗಿ ಮನಸ್ಸನ್ನು ತೊಡಗಿಸಿ ಗೀತಾ ಪಾರಾಯಣ ಮಾಡಬಹುದೆಂದು ಅವನು ಯೋಚಿಸಿದ.

ಪಾಂಡನ ಇಂತಹ ಪ್ರತಿಕ್ರಿಯೆ ಅವನ ಪತ್ನಿಗೆ ಕೋಪ ತರಿಸಿತು. ಅವಳು ಅವನೊಡನೆ ಜಗಳಕ್ಕೆ ನಿಂತಳು. ಹಸಿದ ಮಕ್ಕಳನ್ನು ನೋಡುತ್ತ ಅವಳ ಮಾತೃಹೃದಯ ಸಂಕಟ ಪಡುತ್ತಿತ್ತು. ಅವಳು ಪಾಂಡನನ್ನು ಕುರಿತು, ”ನೀವು ಹೊರಹೋಗಿ ಭಿಕ್ಷಾಟನೆ ಮಾಡದೆ ಹೋದರೆ ಮನೆ ನಡೆಸುವುದು ಹೇಗೆ? ನೀವು ಹೀಗೆ ಮನೆಯಲ್ಲೇ ಕುಳಿತರೆ ಜೀವನ ನಡೆಯುತ್ತದೆ ಎಂದುಕೊಂಡಿರಾ?

ಈ ನಮ್ಮ ಮೂರು ಮಕ್ಕಳನ್ನು ನೋಡಿ, ನೀವು ಹೊರಗೆ ಹೋಗಿ ಇವುಗಳ ಊಟದ ವ್ಯವಸ್ಥೆ ಮಾಡದೆ ಹೋದರೆ ಅವು ಹಸಿವೆಯಿಂದ ಸತ್ತೇಹೋಗುವವು” ಎಂದು ಬಿರುಸಾಗಿ ನುಡಿದಳು. ಆದರೆ ಗೀತಾ ಪಾಂಡ, ಹೆ೦ಡತಿಯ ಕೋಪದ ಮಾತುಗಳಿಂದಲೂ ವಿಚಲಿತನಾಗಲಿಲ್ಲ. ಆಕೆಯನ್ನು ಪಕ್ಕಕ್ಕೆ ಕರೆದು ಭಗವದ್ಗೀತಾ ಪುಸ್ತಕದಿಂದ ಶ್ಲೋಕವೊಂದನ್ನು ತೋರಿಸಿ ಓದಿ ಹೇಳಿದ:

ಅನನ್ಯಾಶ್ಚಿಂತಯಂತೋ ಮಾಮ್ ಯೇ ಜನಾಃ ಪರ್ಯುಪಾಸತೇ ।

ತೇಷಾಮ್ ನಿತ್ಯಾಭಿಯುಕ್ತಾನಾಮ್ ಯೋಗಕ್ಷೇಮಮ್ ವಹಾಮ್ಯಹಮ್ ||

“ಯಾರು ಸದಾ ಕಾಲ ನನ್ನನ್ನು ಭಕ್ತಿಭಾವದಿಂದ ಪೂಜಿಸುತ್ತಾರೋ, ನನ್ನ ಪಾರಮಾರ್ಥಿಕ ಸ್ವರೂಪವನ್ನು ಧ್ಯಾನಿಸುತ್ತಾರೋ, ಅವರಿಗೆ ಬೇಕಾದುದನೆಲ್ಲ ನಾನು ಒದಗಿಸುತ್ತೇನೆ. ಅವರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ.”

ಪತಿಯ ಇಂತಹ ಮಾತುಗಳು ಮತ್ತು ತಣ್ಣನೆ ಪ್ರತಿಕ್ರಿಯೆಯಿಂದ ಹೆಂಡತಿಯು ರೋಸಿಹೋದಳು. ಅವಳ ಕೋಪ ಮತ್ತೂ ಹೆಚ್ಚಾಯಿತು. ಆದರೆ ಆಕೆಯೆದುರು ಬೇರೆ ಯಾವ ಮಾರ್ಗವೂ ಇರಲಿಲ್ಲ. ಗಂಡನ ಮಾತಿನಂತೆ ಮತ್ತೂ ಎರಡು ದಿನ ಕಾದು ಕುಳಿತಳು. ಮನೆಯಲ್ಲಿ ಮಕ್ಕಳು ಊಟವಿಲ್ಲದೆ ಸೊರಗಿ ಹೋದರು. ಕಳಾಹೀನರಾಗಿ, ಶಕ್ತಿ ಕಳೆದುಕೊಂಡು ಮೂಲೆ ಸೇರಿದರು.

ಆದರೆ ಪಾಂಡ ಮಾತ್ರ ಹೊರಗೆ ಹೋಗಲೂ ಇಲ್ಲ ಭಿಕ್ಷಾಟನೆ ಮಾಡಲೂ ಇಲ್ಲ. ಅವನು ಹೆಂಡತಿಯ ನಿಂದನೆಗೆ ಪ್ರತಿಯಾಗಿ, “ನಾವು ಭಗವಂತನಿಗೆ ಶರಣಾಗತರು, ನಮ್ಮ ಯೋಗಕ್ಷೇಮವನ್ನು ತಾನು ನೋಡಿಕೊಳ್ಳುವುದಾಗಿ ಭಗವಂತನು ನಮಗೆ ಭರವಸೆಯಿತ್ತಿರುವನು” ಎಂದು ಉತ್ತರಿಸುತ್ತಿದ್ದನು.

ಆದರೆ ಅವನ ಹೆಂಡತಿಗೆ ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎನಿಸತೊಡಗಿತ್ತು. ನಮ್ಮ ಹೊಟ್ಟೆ ಹೊರೆಯಲು ನಾವೇ ಏನಾದರೂ ಮಾಡಿಕೊಂಡರೆ ಮಾತ್ರ ಸಾಧ್ಯವೆಂದು ಆಕೆ ತಿಳಿದಿದ್ದಳು. ಇತ್ತ ಮಕ್ಕಳ ಸಂಕಟವೂ ಮುಗಿಲು ಮುಟ್ಟಿತ್ತು. ಅವಳ ಕೋಪವೂ ಕೂಡ. ಬೇರೇನೂ ತೋಚದೆ ಅವಳು ಭಗವದ್ಗೀತೆಯನ್ನು ತೆರೆದು ಅದರಲ್ಲಿ ತನ್ನ ಪತಿ ಯಾವಾಗಲೂ ಹೇಳುತ್ತಿದ್ದ ‘ಅನನ್ಯಾಶ್ಚಿಂತಯೋ…. ಯೋಗಕ್ಷೇಮಮ್‌ ವಹಾಮ್ಯಹಮ್” ಶ್ಲೋಕದ ಮೇಲೆ ಮೂರು ಗೆರೆಗಳನ್ನು ಎಳೆದು ಬಿಟ್ಟಳು.”

ಇದು ತನ್ನ ಅಸಮ್ಮತಿ ಹಾಗೂ ಅಪನಂಬುಗೆಯ ಸರಿಯಾದ ಅಭಿವ್ಯಕ್ತಿಯೆಂದು ಅವಳಿಗೆ ಅನಿಸಿತ್ತು. ಇದರಿಂದಲಾದರೂ ತನ್ನ ಗಂಡನಿಂದ ಬೇರೆ ಬಗೆಯ ಪ್ರತಿಕ್ರಿಯೆ ಹೊರಡಬಹುದೆಂದು ಆಶಿಸಿದ್ದಳು. ಯಥಾಪ್ರಕಾರ ಗೀತಾಪಂಡ ಸುಮ್ಮನುಳಿದನು. ಹೆಂಡತಿ, ಮಕ್ಕಳು ನಿದ್ರೆಗೆ ಜಾರಿದ ಅನಂತರ ತಾನೂ ಮಲಗಿಕೊಂಡನು.

ಸ್ವಲ್ಪ ಸಮಯದ ಅನಂತರ ಯಾರೋ ಬಾಗಿಲು ಬಡಿದ ಸದ್ದು ಬ್ರಾಹ್ಮಣ ಪತ್ನಿಗೆ ಕೇಳಿಸಿತು. ಅವಳು ಚಾಪೆಯಿಂದೆದ್ದು ಕದ ತೆರೆದರೆ, ಅಲ್ಲಿ ಇಬ್ಬರು ಸುಂದರವಾದ ಹುಡುಗರು ನಿಂತಿದ್ದರು. ಅವರ ಕೈಯಲ್ಲಿ ಅಡುಗೆ ಪದಾರ್ಥಗಳ ಬಹುದೊಡ್ಡ ಚೀಲಗಳಿದ್ದವು. ಇದನ್ನು ಕಂಡ ಬ್ರಾಹ್ಮಣಿಗೆ ಅಚ್ಚರಿಯಾಯಿತು.

ಅವರಲ್ಲೊಬ್ಬಹುಡುಗನ ಮೈಬಣ್ಣ ನೀಲಿ ಛಾಯೆಯಿಂದ ಕೂಡಿದ್ದರೆ, ಮತ್ತೊಬ್ಬ ಹಾಲು ಬಿಳುಪಿನ ಬಣ್ಣದವನಾಗಿದ್ದನು. ನೀಲ ವರ್ಣದ ಹುಡುಗನು ಆಕೆಯ ಕೈಗೆ ಆಹಾರ ಸಾಮಗ್ರಿಗಳನ್ನು ಕೊಡುತ್ತಾ “ಇದನ್ನು ಗೀತಾಪಾಂಡನ ಸ್ನೇಹಿತನೊಬ್ಬನು ಕಳುಹಿಸಿರುವನು. ದಯವಿಟ್ಟು ಸ್ವೀಕರಿಸಿ.” ಎಂದು ನುಡಿದನು.

ಅದಾಗಲೇ ಆ ಹುಡುಗರ ಮನೋಹಾರಿಯಾದ ರೂಪಕ್ಕೆ ಬ್ರಾಹ್ಮಣನ ಪತ್ನಿಯು ಮಾರುಹೋಗಿದ್ದಳು. ಇದೀಗ ಆತನ ದನಿಯನ್ನು ಕೇಳಿದ ಮೇಲಂತೂ ಆಕೆಯ ಹೃದಯವು ಸಂತೋಷದಿಂದ ತುಂಬಿಹೋಯಿತು. ಅವಳಿಗೆ ಅವರಿಬ್ಬರ ಕುರಿತು ವಿಶೇಷ ಮಮತೆ ಮೂಡಿತು. ಅವರನ್ನು ಅನುನಯಿಸುತ್ತಾ, “ಕೊಂಚ ಕಾಲ ತಡೆಯಿರಿ, ನಾನು ಆದಷ್ಟು ಬೇಗ ಆಹಾರವನ್ನು ಸಿದ್ಧಪಡಿಸುತ್ತೇನೆ.

ನಮ್ಮೊಂದಿಗೆ ಪ್ರಸಾದ ಸ್ವೀಕರಿಸಿದ ಬಳಿಕ ನೀವು ಹೊರಡಬಹುದು.” ಎಂದು ಕೇಳಿಕೊಂಡಳು. ಅದಕ್ಕುತ್ತರವಾಗಿ ನೀಲವರ್ಣದ ಹುಡುಗನು, “ನಮಗೂ ನಿಮ್ಮೊಂದಿಗೆ, ಉನ್ನತ ಭಕ್ತನಾದ ನಿಮ್ಮ ಪತಿಯೊಂದಿಗೆ ಪ್ರಸಾದ ಸ್ವೀಕರಿಸಬೇಕೆಂಬ ಬಯಕೆಯಿದೆ. ಆದರೇನು ಮಾಡುವುದು? ಇಲ್ಲಿ ನೋಡಿ, ನನ್ನ ನಾಲಗೆಯ ಮೇಲೆ ಹೇಗೆ ಗಾಯವಾಗಿದೆ” ಎಂದು ನುಡಿದು, ಅಲ್ಲಿಂದ ಹೊರಟು ನಡೆದರು.

ಗೀತಾಪಾಂಡನ ಹೆಂಡತಿಯು ಆ ಹುಡುಗರು ತಂದುಕೊಟ್ಟ ಎಲ್ಲ ಪದಾರ್ಥಗಳನ್ನೂ ಕೋಣೆಯಲ್ಲಿರಿಸಿದಳು. ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವಳು ಅಡುಗೆ ಸಿದ್ಧಪಡಿಸುವ ತಯಾರಿಗಳನ್ನು ಮಾಡಿಕೊಂಡು ಈ ಸಂತಸದ ಸುದ್ದಿಯನ್ನು ತಿಳಿಸಲು ಗಂಡನ ಬಳಿಗೋಡಿದಳು.

ಗಾಢ ನಿದ್ರೆಯಲ್ಲಿದ್ದ ಪಾಂಡನನ್ನು ಎಬ್ಬಿಸಿ, ಇಬ್ಬರು ಹುಡುಗರು ಮನೆ ಬಾಗಿಲಿಗೇ ಬಂದು ಆಹಾರ ಸಾಮಗ್ರಿಗಳನ್ನು ಇರಿಸಿಹೋದುದನ್ನು ಹೇಳಿದಳು. ನಿದ್ರೆಯಿಂದೆದ್ದ ಪಾಂಡನಿಗೆ ಹೆಂಡತಿಯ ಮಾತುಗಳು ಅರ್ಥವಾಗಲು ಕೊಂಚ ಕಾಲ ಹಿಡಿಯಿತು. ಅಡುಗೆ ಮನೆ ತುಂಬಿದ್ದ ಸಾಮಾನುಗಳನ್ನು ಕಂಡು ಅವನಿಗೆ ಅಚ್ಚರಿಯಾಯಿತು.

ಅವನು ಪತ್ನಿಯನ್ನು ಕುರಿತು, ಈ ಸಾಮಗ್ರಿಗಳನ್ನು ತಂದುಕೊಟ್ಟ ಹುಡುಗರಿಗೆ ಪ್ರಸಾದ ನೀಡಿರುವಳೋ ಇಲ್ಲವೋ ಎಂದು ವಿಚಾರಿಸಿದನು. ಅದಕ್ಕೆ ಪತ್ನಿಯು, “ನಾನು ಅವರಿಬ್ಬರಿಗೂ ಪ್ರಸಾದ ಸ್ವೀಕರಿಸಿ ಹೋಗಬೇಕೆಂದು ಬಹಳವಾಗಿ ಕೇಳಿಕೊಂಡೆ. ಆದರೆ ಆ ನೀಲವರ್ಣದ ಹುಡುಗನ ನಾಲಗೆಯ ಮೇಲೆ ಮೂರು ಗೀಟುಗಳ ಹಾಗೆ ಗಾಯವಾಗಿಬಿಟ್ಟಿತ್ತು. ಮತ್ತೊಬ್ಬ ಹುಡುಗನು ಹಾಲು ಬಿಳಿಪಿನ ಬಣ್ಣದವನಾಗಿದ್ದನು. ಅವರಿಬ್ಬರೂ ಹಾಗೆಯೇ ಹೊರಟು ಹೋದರು” ಎಂದಳು.

ಪತ್ನಿಯ ಮಾತು ಕೇಳಿದ ಪಂಡನಿಗೆ ಅದು ಭಗವಂತನೇ ಎಂಬುದರ ಅರಿವಾಗಿ ಹೋಯಿತು. ಅವನ ಪತ್ನಿಯು ಕೋಪದಿ೦ದ ಭಗವದ್ಗೀತೆಯ ಶ್ಲೋಕದ ಮೇಲೆ ಗೀರಿದ್ದಳು. ಅದು ಭಗವಂತನ ನಾಲಗೆಯ ಮೇಲೆ ಪಡಿಮೂಡಿತ್ತು. ಭಗವಂತನು ತನ್ನ ಮಾತಿನಂತೆ ಅವರ ಯೋಗಕ್ಷೇಮ ವಹಿಸಿಕೊಂಡು ಆಹಾರ ಒದಗಿಸಿದ್ದನು.

ಅಷ್ಟೇ ಏಕೆ? ಸ್ವತಃ ತಾನೇ ಅದನ್ನು ಹೊತ್ತು ತಂದಿದ್ದನು! ಅದನ್ನರಿತ ಪಾಂಡನ ಆನಂದ ಮಿತಿ ಮೀರಿತು. ಪತಿ ಪತ್ನಿಯರಿಬ್ಬರೂ ಆ ಕೂಡಲೇ ಜಗನ್ನಾಥನ ದೇಗುಲಕ್ಕೆ ತೆರಳಿ ಅವನ ಕ್ಷಮೆ ಕೋರಲು ನಿಶ್ಚಯಿಸಿದರು. ಅವರು ದೇವಾಲಯಕ್ಕೆ ಹೋದಾಗ ಅಲ್ಲಿ ಕೂಡ ಭಗವಂತನ ತುಟಿಯ ಮೇಲೆ ಮೂರು ಕಲೆಗಳಿದ್ದುದು ಅವರಿಗೆ ಕಂಡು ಬಂತು.

ತನ್ನ ನಿಜ ಭಕ್ತರೊಂದಿಗೆ ತಾನು ಹೇಗೆ ಒಡನಾಡುವನೆಂದು ಭಗವಂತನು ಈ ಮೂಲಕ ತೋರಿಸಿಕೊಟ್ಟಿದ್ದನು. ಭಗವದ್ವಾಕ್ಯವು ಎಂದಿಗೂ ಮಿಥ್ಯವಾಗುವುದಿಲ್ಲವೆಂದೂ, ಶರಣಾಗತರನ್ನು ತಾನು ರಕ್ಷಿಸದೆ ಇರುವುದಿಲ್ಲವೆಂದೂ ಮತ್ತೊಮ್ಮೆ ಸಾಬೀತುಪಡಿಸಿದನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi