ತಮಿಳುನಾಡು ದೇವಾಲಯಗಳ ರಾಜ್ಯವೆಂದು ಪ್ರಸಿದ್ಧವಾಗಿದೆ. ಇಲ್ಲಿ ಅಸಂಖ್ಯಾತ ದೇವಾಲಯಗಳಿದ್ದು, ಅವು ತಮ್ಮ ವಿಶಿಷ್ಟ ವಾಸ್ತುಶಿಲ್ಪ, ಬೃಹತ್ ರಾಜಗೋಪುರಗಳು, ವಿಶಾಲ ಪ್ರಾಕಾರಗಳು, ಕಲಾತ್ಮಕ ಶಿಲ್ಪಗಳು, ಮನಮುಟ್ಟುವ ಭಕ್ತಿ, ಶ್ರೀಮಂತ ಸಂಸ್ಕೃತಿ, ವೈಭವಯುತ ಹಬ್ಬ, ಉತ್ಸವಗಳಿಂದ ಎಲ್ಲರನ್ನೂ ಬೆರಗುಗೊಳಿಸುತ್ತವೆ! ಅನೇಕ ಪ್ರಸಿದ್ಧ ದೇವಾಲಯಗಳಿಗೆ ಬಹುಜನರು ಯಾತ್ರೆ, ಪ್ರವಾಸಗಳೆಂದು ಹೋಗುತ್ತಿರುತ್ತಾರೆ.
ಇಂಥ ದೇವಾಲಯಗಳಲ್ಲಿ ನವತಿರುಪತಿ ಎಂಬ ಒಂಬತ್ತು ವೈಷ್ಣವ ದೇವಾಲಯಗಳ ಗುಚ್ಛವೂ ಪ್ರಮುಖವಾದುದಾಗಿದೆ. ಅನೇಕ ಜನರಿಗೆ ಇನ್ನೂ ತಿಳಿದಿರದ ಈ ಒಂಬತ್ತು ದೇವಾಲಯಗಳು ತಿರುನೆಲ್ವೇಲಿ-ತಿರುಚೆಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಗ್ರಾಮಗಳಲ್ಲಿವೆ. ಇವು ತೂತ್ತುಕುಡಿ ಹಾಗೂ ತಿರುನೆಲ್ವೇಲಿಗಳಿಗೆ ಹತ್ತಿರವಿದ್ದು ಒಂದು ದಿನದಲ್ಲಿ ನೋಡಬಹುದಾಗಿವೆ. ಈ ದೇಗುಲಗಳಿಗೆ ಹೋಗಲು ಬಸ್ ಸೌಕರ್ಯ ಇದ್ದರೂ, ತೂತ್ತುಕುಡಿ ಇಲ್ಲವೇ ತಿರುನೆಲ್ವೇಲಿಯಲ್ಲಿ ಇಳಿದುಕೊಂಡು ಖಾಸಗಿ ವಾಹನದಲ್ಲಿ ಹೋಗುವುದೊಳ್ಳೆಯದು. ಆದರೂ ಒಂದು ಸಮಸ್ಯೆಯೆಂದರೆ ಎಲ್ಲ ದೇವಾಲಯಗಳೂ ತೆರೆಯುವ ಸಮಯದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿದ್ದು ಮಧ್ಯಾಹ್ನ ಹನ್ನೆರಡಕ್ಕೆ ಮುಚ್ಚಿಬಿಡುತ್ತವೆ. ಪುನಃ ಸಂಜೆ ತೆರೆಯುತ್ತವೆ. ಹೀಗಾಗಿ ಕೆಲವು ದೇಗುಲಗಳಲ್ಲಿ ದರ್ಶನ ದೊರೆತರೆ ಕೆಲವು ದೇಗುಲಗಳಲ್ಲಿ ದರ್ಶನ ದೊರೆಯದಿರಬಹುದು. ಹಾಗಾಗಿ, ಎರಡು ದಿನಗಳ ಪ್ರವಾಸ ಮಾಡಿಕೊಂಡು ಎಲ್ಲ ದೇಗುಲಗಳಲ್ಲೂ ದರ್ಶನ ಪಡೆಯಲು ಪ್ರಯತ್ನಿಸಬಹುದು. ಈ ದೇಗುಲಗಳು ಇರುವುದು ಗ್ರಾಮಗಳಲ್ಲಾದ್ದರಿಂದ ಇಲ್ಲಿ ತಿನ್ನಲು ಏನೂ ದೊರೆಯುವುದಿಲ್ಲ. ಹಾಗಾಗಿ ಏನಾದರೂ ತಿನ್ನಲು ತೆಗೆದುಕೊಂಡು ಹೋಗುವುದು ಒಳ್ಳೆಯದು.
ಈ ವಿಶಿಷ್ಟ ದೇಗುಲಗಳು ಆಳ್ವಾರರ 108 ದಿವ್ಯದೇಶಗಳೆಂಬ ಪವಿತ್ರ ಶ್ರೀವೈಷ್ಣವ ಕ್ಷೇತ್ರಗಳಲ್ಲಿ ಸೇರುತ್ತವೆ. ಪುರಾಣ ಪ್ರಸಿದ್ಧವಾದ ತಾಮ್ರಪರ್ಣಿ ನದಿಯ ದಡದಲ್ಲಿವೆ ಇವು. ಒಂದೊಂದು ದೇವಾಲಯವೂ ವಿಷ್ಣುವಿನ ಒಂದೊಂದು ರೂಪವನ್ನು ಹೊಂದಿದ್ದು ಒಂದೊಂದು ಗ್ರಹವನ್ನು ಪ್ರತಿನಿಧಿಸುತ್ತದೆ. ಒಂದೊಂದು ದೇವಾಲಯದ ವಿಷ್ಣು ವಿಗ್ರಹದಲ್ಲೂ ಒಂದೊಂದು ಗ್ರಹದ ಅಂಶವಿದ್ದು, ಆ ವಿಷ್ಣುರೂಪ, ಆ ಗ್ರಹದ ಅಧಿಪತಿಯಾಗಿದೆ. ಎಲ್ಲ ದೇವತೆಗಳ, ಗ್ರಹಗಳ ಮೂಲ ಶಕ್ತಿ ವಿಷ್ಣುವೇ ಅಲ್ಲವೇ? ಹಾಗಾಗಿಯೇ ಪುರಂದರದಾಸರು `ಸಕಲ ಗ್ರಹಬಲ ನೀನೇ ಸರಸಿಜಾಕ್ಷ’ ಎಂದು ಹಾಡಿದ್ದಾರೆ! ಈ ತತ್ತ್ವವನ್ನು ಈ ನವತಿರುಪತಿ ಎಂಬ ದೇವಾಲಯ ಸಂಗಮ ತೋರಿಸಿಕೊಡುತ್ತದೆ. ಈಗ ಒಂದೊಂದು ದೇವಾಲಯದ ವೈಶಿಷ್ಟ್ಯವನ್ನೂ, ಸ್ಥಳಪುರಾಣವನ್ನೂ ನೋಡೋಣ.
1. ಶ್ರೀ ವೈಕುಂಠಂ
ಒಂಬತ್ತು ಅಂತಸ್ತುಗಳ ಸುಂದರ ರಾಜಗೋಪುರವನ್ನೂ ಹಲವಾರು ಅದ್ಭುತ ಕೆತ್ತನೆಗಳ ಒಂದು ಮಂಟಪವನ್ನೂ ಹೊಂದಿರುವ ಶ್ರೀವೈಕುಂಠಂ ಒಂದು ಭವ್ಯ ದೇವಾಲಯ. ಇಲ್ಲಿನ ಮಹಾವಿಷ್ಣುವಿನ ರೂಪ, ನಿಂತಿರುವಂತಿದ್ದು, ಶ್ರೀವೈಕುಂಠನಾಥನ್ ಎಂದು ಕರೆಯುತ್ತಾರೆ. ಇಲ್ಲಿನ ನವಗ್ರಹ ಅಂಶ, ಸೂರ್ಯನದ್ದಾಗಿದೆ. ಇನ್ನೊಂದು ಗುಡಿಯಲ್ಲಿ ದೇವಿಯರಾದ ವೈಕುಂಠವಲ್ಲಿ, ಭೂದೇವಿಯರಿದ್ದಾರೆ. ಇಲ್ಲಿನ ಉತ್ಸವ ಮೂರ್ತಿಯನ್ನು ಕಳ್ಳಪ್ಪಿರಾನ್ ಎಂದು ಕರೆಯುತ್ತಾರೆ. ದೇವಾಲಯದ ವಿಮಾನ, ಚಂದ್ರವಿಮಾನ. ಇಲ್ಲಿನ ಕಲ್ಯಾಣಿಯ ಹೆಸರು ಭೃಗುತೀರ್ಥ. ಇಲ್ಲಿನ ಸ್ಥಳಪುರಾಣ ಹೀಗಿದೆ-

ಒಮ್ಮೆ ಪ್ರಳಯಕಾಲ ಸನ್ನಿಹಿತವಾದಾಗ, ಸೋಮಕನೆಂಬ ಅಸುರನು ಸೃಷ್ಟಿರಹಸ್ಯವಿದ್ದ ವೇದಗಳನ್ನು ಬ್ರಹ್ಮನಿಂದ ಕದ್ದುಬಿಟ್ಟನು. ಆಗ ಬ್ರಹ್ಮನು ಮಹಾವಿಷ್ಣುವಿನ ಸಹಾಯ ಪಡೆಯಲು ತಪಸ್ಸು ಮಾಡಲೆಂದು ಬ್ರಹ್ಮಾಂಡವನ್ನು ಒಬ್ಬ ತರುಣಿಯಂತೆ ರೂಪಾಂತರಿಸಿ ಭೂಮಿಯ ಮೇಲೆ ತಪಸ್ಸು ಮಾಡಲು ಸೂಕ್ತ ಸ್ಥಳ ಯಾವುದೆಂದು ಕೇಳಿದನು. ಅವಳು ಈ ಸ್ಥಳವನ್ನು ತೋರಿಸಲು ಬ್ರಹ್ಮನು ಇಲ್ಲಿ ಬಂದು ತಪಸ್ಸು ಮಾಡಿದನು. ಮಹಾವಿಷ್ಣುವು ಅವನ ತಪಸ್ಸಿಗೆ ಮೆಚ್ಚಿ ಅಸುರನನ್ನು ಕೊಂದು ವೇದಗಳನ್ನು ಅವನಿಗೆ ತಂದುಕೊಟ್ಟ. ಆಗ ಬ್ರಹ್ಮನು ವಿಷ್ಣುವಿಗೆ ವೈಕುಂಠನಾಥನೆಂಬ ಹೆಸರಿನಲ್ಲಿ ಅಲ್ಲಿಯೇ ನೆಲೆಸಿ ಜನರನ್ನು ಹರಸಲು ಬೇಡಿಕೊಂಡ. ಅಂತೆಯೇ ವಿಷ್ಣುವು ಒಪ್ಪಿ ವಿಗ್ರಹರೂಪಕ್ಕೆ ತಿರುಗಲು ಬ್ರಹ್ಮನು ಆ ವಿಗ್ರಹವನ್ನು ಪ್ರತಿಷ್ಠಾಪಿಸಿದನು.
ಮುಂದೆ, ಈ ಸ್ಥಳದಲ್ಲಿ ಕಾಲದೂಷಣನೆಂಬ ಕಳ್ಳನು ಭಗವಂತನ ಭಕ್ತನಾಗಿರುತ್ತಾ ಕಳ್ಳತನ ಮಾಡಿ ಬಡಬಗ್ಗರಿಗೆ ಸಹಾಯ ಮಾಡುತ್ತಿದ್ದನು. ಈ ಪ್ರದೇಶದ ರಾಜನು ಸರಿಯಾಗಿ ರಾಜ್ಯವಾಳುತ್ತಿರಲಿಲ್ಲವಾದ್ದರಿಂದ ಒಮ್ಮೆ ಈ ಕಳ್ಳನು ಅರಮನೆಯಲ್ಲಿ ಕಳ್ಳತನ ಮಾಡಿದನು. ರಾಜನ ಸೇವಕರು ಅವನನ್ನು ಹಿಡಿಯಲು ಹೋದಾಗ ಅವನು ತಪ್ಪಿಸಿಕೊಂಡು ಶ್ರೀವೈಕುಂಠನಾಥನ ಗುಡಿಯ ಮುಂದೆ ಜ್ಞಾನತಪ್ಪಿ ಬಿದ್ದುಬಿಟ್ಟ! ಆಗ ಶ್ರೀ ವೈಕುಂಠನಾಥನು ಅವನ ಮೇಲೆ ದಯೆತೋರಿ ಅವನ ರೂಪಧರಿಸಿ ರಾಜಭಟರಿಗೆ ಸಿಕ್ಕಿಬಿದ್ದ! ರಾಜನು ಅವನನ್ನು ನೋಡಿದಾಗ ಅವನ ದಿವ್ಯತ್ವದಿಂದ ಭಾವುಕನಾಗಿ, “ಈ ಕಳ್ಳತನವನ್ನು ಬಿಟ್ಟು ಒಳ್ಳೆಯ ಜೀವನ ನಡೆಸಬಾರದೆ?” ಎಂದನು. ಆಗ ಭಗವಂತನು ತನ್ನ ನಿಜರೂಪ ತೋರಿಸಿ ರಾಜನಿಗೆ ಸರಿಯಾಗಿ ರಾಜ್ಯವಾಳಲು ಉಪದೇಶಿಸಿದನು. ರಾಜನು ತನ್ನ ತಪ್ಪಿಗೆ ಪಶ್ಚಾತ್ತಾಪಪಟ್ಟು ಶ್ರೀ ವೈಕುಂಠನಾಥನಿಗೆ ಒಂದು ದೇವಾಲಯ ಕಟ್ಟಿಸಿದನು. ಹೀಗೆ, ತನ್ನ ಭಕ್ತನಿಗಾಗಿ ಕಳ್ಳನಾಗಿದ್ದ ಅವನ ರೂಪ ಧರಿಸಿದ ಭಗವಂತನಿಗೆ ಕಳ್ಳಪೀರನೆಂದು ಹೆಸರಾಯಿತು. ಹಾಗಾಗಿಯೇ ಈಗಲೂ ಇಲ್ಲಿ ಕಳ್ಳಪ್ಪಿರಾನೆಂಬ ಹೆಸರಿನ ಉತ್ಸವಮೂರ್ತಿಯಿದೆ.

ಮುಂದೆ ಈ ದೇವಾಲಯ ಮಣ್ಣಲ್ಲಿ ಮುಚ್ಚಿಹೋಯಿತು. ಆಗ ಪಾಂಡ್ಯ ರಾಜನೊಬ್ಬ, ಮನಪದೈವೀಡು ಎಂಬ ರಾಜಧಾನಿಯ ಮೂಲಕ ರಾಜ್ಯವಾಳುತ್ತಿದ್ದಾಗ, ಅವನ ದನಗಾಹಿಯೊಬ್ಬ ಈ ಪ್ರದೇಶದಲ್ಲಿ ಹಸುಗಳನ್ನು ಮೇಯಿಸುತ್ತಿದ್ದ. ಅವನ ಹಸುಗಳಲ್ಲೊಂದು ಈ ಪ್ರದೇಶದಲ್ಲಿ ಭಗವಂತನ ವಿಗ್ರಹವಿದ್ದ ಕಡೆ ಹಾಲು ಕರೆಯುತ್ತಿತ್ತು! ಇದನ್ನು ದನಗಾಹಿಯ ಮೂಲಕ ತಿಳಿದ ಪಾಂಡ್ಯರಾಜ, ಇಲ್ಲಿ ಅಗೆಸಲು, ಹಳೆಯ ಪುಟ್ಟ ದೇಗುಲ ಗೋಚರಿಸಿತು. ಆಶ್ಚರ್ಯಗೊಂಡ ರಾಜ, ಹೊಸದಾಗಿ ಒಂದು ಅದ್ಭುತ ದೇವಾಲಯವನ್ನು ನಿರ್ಮಿಸಿದ. ಅವನು ಇದನ್ನು ಚೈತ್ರ ಮಾಸದ ಆರನೆಯ ದಿನದಂದು ಸೂರ್ಯಕಿರಣಗಳು ಭಗವಂತನ ಪಾದಪದ್ಮಗಳ ಮೇಲೆ ಬೀಳುವಂತೆ ವಿಶಿಷ್ಟವಾಗಿ ನಿರ್ಮಿಸಿದ್ದಾನೆ.
2. ತಿರುವರಗುಣಮಂಗೈ (ನತ್ತಂ)
ಶ್ರೀವೈಕುಂಠಂನಿಂದ ಮೂರು ಕಿ.ಮೀ. ಪೂರ್ವಕ್ಕೆ ನತ್ತಂ ಎಂಬ ಪುಟ್ಟ ಗ್ರಾಮದಲ್ಲಿ ಈ ದೇವಾಲಯವಿದೆ. ಇಲ್ಲಿ ಮಹಾವಿಷ್ಣು, ವಿಜಯಾಸನಪೆರುಮಾಳ್ ಎಂಬ ಹೆಸರಿನಲ್ಲಿ ಆದಿಶೇಷನ ತಲ್ಪದಲ್ಲಿ ಕುಳಿತಿರುವ ಭಂಗಿಯಲ್ಲಿ ವಿರಾಜಮಾನನಾಗಿದ್ದಾನೆ. ಇಲ್ಲಿನ ನವಗ್ರಹಾಂಶ ಚಂದ್ರನದ್ದಾಗಿದೆ. ದೇವಿಯರ ಹೆಸರು ವರಗುಣವಳ್ಳಿತಾಯಾರ್ ಹಾಗೂ ವರಗುಣಮಂಗೈತಾಯಾರ್.

ಇಲ್ಲಿನ ಸ್ಥಳಪುರಾಣದ ಪ್ರಕಾರ, ಪುಣ್ಯಕೋರಂ ಎಂಬ ಅಗ್ರಹಾರದಲ್ಲಿ ವೇದಾವಿ ಎಂಬ ಬ್ರಾಹ್ಮಣನು ತನ್ನ ಎಲ್ಲಾ ಭೌತಿಕ ಕರ್ತವ್ಯಗಳನ್ನು ಮುಗಿಸಿ ತಪಸ್ಸು ಮಾಡಲು ಹೊರಟ. ಅವನು ಆಸನತೈ ಎಂಬ ಮಂತ್ರ ಪಠಿಸುತ್ತಾ ಭಗವಂತನನ್ನು ಕುರಿತು ತಪಸ್ಸು ಮಾಡಿದ. ಆಗ ಪೆರುಮಾಳ್ (ಭಗವಂತನು), ಒಬ್ಬ ವೃದ್ಧ ಬ್ರಾಹ್ಮಣನ ರೂಪದಲ್ಲಿ ಬಂದು ವರಗುಣಮಂಗೈ ಎಂಬಲ್ಲಿ ತಪಸ್ಸು ಮಾಡಲು ಹೇಳಿದನು. ಅದರಂತೆ ವೇದಾವಿಯು ತಪಸ್ಸು ಮಾಡಿ ಪರಮಪದ ಪಡೆದನು. ವೇದಾವಿಯು ಆಸನಮಂತ್ರ ಪಠಿಸಿದ್ದರಿಂದ ಪೆರುಮಾಳನು ಆದಿಶೇಷನ ಆಸನದಲ್ಲಿ ಕುಳಿತಿರುವಂತೆ ಅವನಿಗೆ ಪ್ರತ್ಯಕ್ಷನಾದನು. ಹಾಗಾಗಿ ಪೆರುಮಾಳ್ ವಿಗ್ರಹ ಇಲ್ಲಿ ಆದಿಶೇಷನ ಮೇಲೆ ಆಸೀನನಾಗಿರುವಂತಿದೆ.
3. ತಿರುಪುಳಿಯಂಗುಡಿ
ತಿರುವರಗುಣಮಂಗೈಯಿಂದ ಅರ್ಧ ಕಿ.ಮೀ. ಪೂರ್ವಕ್ಕೆ ಹೋದರೆ ಈ ದೇವಾಲಯ ಸಿಗುತ್ತದೆ. ಇಲ್ಲಿ ಭಗವಂತನು ಶೇಷಶಾಯಿಯಾಗಿದ್ದು ಭೂಮಿಪಾಲಗರ್ ಎಂದು ಹೆಸರಾಗಿದ್ದಾನೆ. ಕಾಯ್‌ಶಿನವೇಂದನ್ ಎಂದೂ ಹೇಳುತ್ತಾರೆ. ಆದಿಶೇಷನ ಮೇಲೆ ಮಲಗಿರುವ ಭಗವಂತನ ದೊಡ್ಡ ವಿಗ್ರಹ, ಹನ್ನೆರಡು ಅಡಿ ಉದ್ದವಿದ್ದು, ಭಗವಂತನ ನಾಭಿಯಿಂದ ಒಂದು ಕಮಲಪುಷ್ಪ ಹೊರಟಿದೆ ಹಾಗೂ ಅದರಲ್ಲಿ ಬ್ರಹ್ಮನು ಆಸೀನನಾಗಿದ್ದಾನೆ. ದೇವಾಲಯದ ಸುತ್ತ ನಡೆಯುವಾಗ ಭಗವಂತನ ಪಾದದರ್ಶನವನ್ನು ಒಂದು ಕಿಟಕಿಯ ಮೂಲಕ ಮಾಡಬಹುದು. ಶ್ರೀದೇವಿ ಮತ್ತು ಭೂದೇವಿಯರ ವಿಗ್ರಹಗಳೂ ದೊಡ್ಡದಾಗಿದ್ದು ಭಗವಂತನ ಪಾದಗಳ ಬಳಿಯಿವೆ. ಇಲ್ಲಿನ ನವಗ್ರಹಾಂಶ, ಬುಧನದ್ದಾಗಿದೆ.
ಈ ದೇವಾಲಯದ ಸ್ಥಳಪುರಾಣದ ಪ್ರಕಾರ, ಒಮ್ಮೆ ವಿಷ್ಣು ಮತ್ತು ಲಕ್ಷ್ಮೀದೇವಿ ತಾಮ್ರಪರ್ಣಿ ನದಿಯ ದಂಡೆಯ ಮೇಲೆ ವಿಹರಿಸುತ್ತಿದ್ದಾಗ, ಭೂದೇವಿಯು, ಭಗವಂತನು ಭೂಮಿಗೆ ಬಂದರೂ ತನ್ನನ್ನು ನಿರ್ಲಕ್ಷಿಸಿದನೆಂದು ಕೋಪಗೊಂಡು ಭೂಮಿಯೊಳಗೆ ಹೊರಟುಹೋದಳು. ಆಗ ಭೂಮಿಯು ಕಪ್ಪಾಗಿ ಬರಡಾಯಿತು. ಭಗವಂತನು ಭೂಮಿಯೊಳಗೆ ಹೋಗಿ ಭೂದೇವಿಯನ್ನು ಸಮಾಧಾನಪಡಿಸುತ್ತಾ ಅವಳನ್ನು ಲಕ್ಷ್ಮೀದೇವಿಗೆ ಸಮಾನಳೆಂದೇ ಹೊಗಳಿದನು. ಆಗ ಅವಳು ಲಕ್ಷ್ಮಿಯೊಂದಿಗೆ ಸ್ನೇಹಯುಕ್ತಳಾಗಿ ಹೊಂದಿಕೊಂಡಳು. ಭೂದೇವಿಯನ್ನು ಹೀಗೆ ಪಾಲಿಸಿದ್ದರಿಂದ ಭಗವಂತನಿಗೆ ಭೂಪಾಲಗರ್ ಎಂಬ ಹೆಸರು ಬಂದಿದೆ.

ಇನ್ನೊಂದು ಕಥೆಯ ಪ್ರಕಾರ, ಹಿಮಾಲಯದಲ್ಲಿ ಒಬ್ಬ ಋಷಿಯೂ ಅವನ ಪತ್ನಿಯೂ ಜಿಂಕೆಗಳ ರೂಪದಲ್ಲಿ ರತಿಸುಖ ಅನುಭವಿಸುತ್ತಿದ್ದಾಗ, ದೇವೇಂದ್ರನು ತಿಳಿಯದೇ ಅವರನ್ನು ವಜ್ರಾಯುಧದಿಂದ ಕೊಂದು ಬ್ರಹ್ಮಹತ್ಯಾ ದೋಷಕ್ಕೊಳಗಾದನು! ಆಗ ವ್ಯಾಸರ ಸೂಚನೆಯಂತೆ ಅವನು ಇಲ್ಲಿಗೆ ಬಂದು ತಾಮ್ರಪರ್ಣಿ ನದಿಯಲ್ಲಿ ಸ್ನಾನ ಮಾಡಿ ಭೂಮಿಪಾಲಗರ್ ಭಗವಂತನನ್ನು ಪೂಜಿಸಿ ಒಂದು ದೊಡ್ಡ ಯಜ್ಞವನ್ನು ಆಚರಿಸಿದನು. ಇದರಿಂದ ಅವನ ಬ್ರಹ್ಮಹತ್ಯಾದೋಷ ಪರಿಹಾರವಾಯಿತು.
ಮತ್ತೊಂದು ಕಥೆಯ ಪ್ರಕಾರ, ಯಜ್ಞಶರ್ಮನೆಂಬ ಒಬ್ಬ ಬ್ರಾಹ್ಮಣನು ವಸಿಷ್ಠರ ಮಗಳನ್ನು ಕೆಣಕಲು, ಅವರು ಅವನಿಗೆ ರಾಕ್ಷಸನಾಗೆಂದು ಶಾಪ ಕೊಟ್ಟರು. ಅವನು ಈ ಕ್ಷೇತ್ರಕ್ಕೆ ಬರಲು ಶಾಪವಿಮುಕ್ತನಾದನು.
4. ತಿರುಕುಳಂದೈ (ಪೆರುಂಕುಳಮ್)
ತಿರುಪುಳಿಯಂಗುಡಿಗೆ ಐದು ಕಿ.ಮೀ. ಪೂರ್ವದಲ್ಲಿ ಈ ದೇವಾಲಯವಿದೆ. ಇಲ್ಲಿ ಭಗವಂತನ ಶ್ರೀವಿಗ್ರಹ, ವೇಂಗಡವಾನನ್ ಎಂಬ ಹೆಸರಿನಲ್ಲಿ ನಿಂತಿರುವ ಭಂಗಿಯಲ್ಲಿದೆ. ಇಬ್ಬರು ದೇವಿಯರಿದ್ದು, ಅಲಮೇಲುಮಂಗೈ ಮತ್ತು ಕುಳಂದೈವಲ್ಲಿ ಎಂಬ ಹೆಸರುಗಳಲ್ಲಿದ್ದಾರೆ. ಇಲ್ಲಿನ ನವಗ್ರಹಾಂಶ, ಶನಿಯದ್ದಾಗಿದೆ.

ಇಲ್ಲಿನ ಸ್ಥಳಪುರಾಣದ ಪ್ರಕಾರ ವೇದರಸನ್ ಮತ್ತು ಕುಮುದವಲ್ಲಿ ಎಂಬ ದಂಪತಿಗಳಿಗೆ ಕಮಲಾವತಿ ಎಂಬ ಮಗಳಿದ್ದಳು. ಇವಳು ಸಾಕ್ಷಾತ್ ವಿಷ್ಣುವನ್ನೇ ಮದುವೆಯಾಗಬೇಕೆಂದು ನಿರ್ಧರಿಸಿ ಕಠಿಣ ತಪಸ್ಸನ್ನಾಚರಿಸಿದಳು. ಭಗವಂತನು ಅವಳ ತಪಸ್ಸನ್ನು ಮೆಚ್ಚಿ ಪ್ರತ್ಯಕ್ಷನಾಗಿ ಅವಳನ್ನು ಆಲಿಂಗಿಸಿಕೊಂಡು ವಿವಾಹವಾದನು. ಇದರಿಂದಾಗಿ ಈ ಸ್ಥಳಕ್ಕೆ ಬಾಲಿಕಾವನಮ್ ಎಂಬ ಹೆಸರು ಬಂದಿತು. ಈಗಲೂ ಭಗವಂತನ ವಕ್ಷಸ್ಥಳದಲ್ಲಿ ಕಮಲಾವತಿಯ ವಿಗ್ರಹವಿದೆ.
ಮುಂದೆ, ಕಮಲಾವತಿಯ ತಾಯಿಯಾದ ಕುಮುದವಲ್ಲಿಯು ಸ್ನಾನ ಮಾಡುತ್ತಿದ್ದಾಗ ಅಸ್ಮರಣನೆಂಬ ರಾಕ್ಷಸನು ಅವಳನ್ನು ಅಪಹರಿಸಿ ಹಿಮಾಲಯದಲ್ಲಿ ಬಂಧಿಸಿಟ್ಟ. ಆಗ ವೇದರಸನ್ ಭಗವಂತನನ್ನು ಪ್ರಾರ್ಥಿಸಲು ಶ್ರೀಹರಿಯು ಆ ರಾಕ್ಷಸನನ್ನು ಮಾಯಾ ಯುದ್ಧದಲ್ಲಿ ಸಂಹರಿಸಿ ಇಲ್ಲಿ ನರ್ತಿಸಿದ. ಆದ್ದರಿಂದಲೇ ಭಗವಂತನಿಗೆ ಮಾಯಕೂತ್ತನ್ ಎಂದು ಹೆಸರಾಯಿತು.
5. ತಿರುತೊಲೈವಿಲ್ಲಿಮಂಗಲಂ (ದಕ್ಷಿಣ ಎರಟ್ಟೈ ತಿರುಪತಿ)
ಇದು ಪೆರುಂಕುಳಂನಿಂದ ಸುಮಾರು ನಾಲ್ಕು ಕಿ.ಮೀ. ಪಶ್ಚಿಮಕ್ಕಿದೆ. ಇದು ಉತ್ತರ ಹಾಗೂ ದಕ್ಷಿಣ ಎಂಬ ಎರಡು ದೇವಾಲಯಗಳಿಂದ ಕೂಡಿದೆ. ದೇವಿಯ ಹೆಸರು ಅಲಮೇಲುಮಂಗೈ. ಇಲ್ಲಿನ ನವಗ್ರಹಾಂಶವು ರಾಹುವಿನದ್ದಾಗಿದೆ.

ಸ್ಥಳ ಪುರಾಣದ ಪ್ರಕಾರ, ಇಲ್ಲಿ ಆತ್ರೇಯಸುಪ್ರಭಮುನಿ ಎಂಬ ಋಷಿಗಳೊಬ್ಬರು ಯಜ್ಞ ಮಾಡಲು ಕ್ಷೇತ್ರವನ್ನು ಶುಚಿಗೊಳಿಸುತ್ತಿದ್ದಾಗ, ಒಂದು ತಕ್ಕಡಿ ಮತ್ತು ಬಿಲ್ಲನ್ನು ಕಂಡರು. ಅವುಗಳನ್ನು ಅವರು ಸ್ಪರ್ಶಿಸಿದ ಕೂಡಲೇ ಅವು ಸ್ತ್ರೀ ಪುರುಷರಾಗಿಬಿಟ್ಟವು! ವಾಸ್ತವವಾಗಿ ಅವರಿಬ್ಬರೂ ಸ್ವರ್ಗೀಯ ದಂಪತಿಗಳಾಗಿದ್ದು, ಯಾವುದೋ ತಪ್ಪಿಗೆ ಕುಬೇರನಿಂದ ಶಾಪಗ್ರಸ್ತರಾಗಿ ಭೂಮಿಗೆ ದೂಡಲ್ಪಟ್ಟಿದ್ದರು! ಈಗ ಈ ಋಷಿಗಳ ಸ್ಪರ್ಶದಿಂದ ಶಾಪವಿಮುಕ್ತರಾಗಿ ಸ್ವರ್ಗಕ್ಕೆ ಹಿಂದಿರುಗಿದರು. ಆದ್ದರಿಂದ ಈ ಸ್ಥಳಕ್ಕೆ ತೊಲೈವಿಲ್ಲಿಮಂಗಲಂ ಎಂಬ ಹೆಸರಾಯಿತು. ಅನಂತರ ಸುಪ್ರಭಮುನಿಗಳು ಭಕ್ತಿ ಶ್ರದ್ಧೆಗಳಿಂದ ಯಜ್ಞವನ್ನು ಮಾಡಿ ಉತ್ತಮ ಫಲವನ್ನು ಪಡೆದರು. ಅದನ್ನವರು ಯಜ್ಞಾಚರಣೆಗೆ ಸಹಕರಿಸಿದವರಿಗೆಲ್ಲರಿಗೂ ಹಂಚಿದರು. ದೇವತೆಗಳೂ, ಋಷಿಗಳೂ ಹೀಗೆ ಎಲ್ಲರೂ ಭಗವಂತನನ್ನು ಪ್ರಾರ್ಥಿಸಿದರು. ಆಗ ತಿರುಮಲನು ಸ್ವಯಂ ಪ್ರತ್ಯಕ್ಷನಾಗಿ ಎಲ್ಲರನ್ನೂ ಹರಸಿದನು. ಹಾಗಾಗಿ ಈ ದೇವರಿಗೆ ದೇವಪಿರಾನ್ ಎಂದು ಹೆಸರಾಗಿದೆ.
6. ಉತ್ತರದ ಎರಟ್ಟೈ ತಿರುಪತಿ
ದಕ್ಷಿಣ ಎರಟ್ಟೈ ತಿರುಪತಿಯ ಸನಿಹದಲ್ಲೇ ಉತ್ತರದ ಎರಟ್ಟೈ ತಿರುಪತಿ ದೇವಾಲಯವಿದೆ. ಇಲ್ಲಿನ ಭಗವದ್ವಿಗ್ರಹದ ಹೆಸರು ಅರವಿಂದಲೋಚನ ಪೆರುಮಾಳ್. ಇದು ಕುಳಿತ ಭಂಗಿಯಲ್ಲಿದೆ. ದೇವಿಯ ಹೆಸರು ಕರುತಂಡನ್ ಕಣ್ಣಿನಾಚ್ಚಿಯಾರ್. ಇಲ್ಲಿನ ನವಗ್ರಹಾಂಶ ಕೇತುವಿನದ್ದಾಗಿದೆ.

ಸ್ಥಳಪುರಾಣದ ಪ್ರಕಾರ, ಸುಪ್ರಭಮುನಿಗಳು ದೇವಾಲಯದ ಉತ್ತರ ಭಾಗದಿಂದ, ಒಂದು ಕೆರೆಯಿಂದ ಕಮಲಪುಷ್ಪಗಳನ್ನು ತಂದು ಪೆರುಮಾಳ್‌ನನ್ನು ಪೂಜಿಸುತ್ತಿದ್ದರು. ಆ ಕಮಲಪುಷ್ಪಗಳಿಗೆ ಮಾರುಹೋದ ಭಗವಂತನು, ಈ ಋಷಿಗಳು ಎಲ್ಲಿಂದ ಕಮಲಪುಷ್ಪಗಳನ್ನು ತರುತ್ತಿದ್ದರೆಂದು ನೋಡಲು ಅವರನ್ನೇ ಹಿಂಬಾಲಿಸಿದನು. ಇದನ್ನು ಗಮನಿಸಿದ ಸುಪ್ರಭರು ಅತ್ಯಾಶ್ಚರ್ಯಗೊಂಡು ಏಕೆ ಹಿಂಬಾಲಿಸುತ್ತಿರುವೆಯೆಂದು ಭಗವಂತನನ್ನು ಕೇಳಲು ಭಗವಂತನು ಕಾರಣ ಹೇಳಿ, ಉತ್ತರ ಭಾಗದಲ್ಲೂ ತನ್ನನ್ನು ಪೂಜಿಸುವಂತೆ ಕೇಳಿಕೊಂಡನು. ಅಂತೆಯೇ ಸುಪ್ರಭರು ಉತ್ತರ ಭಾಗದಲ್ಲೂ ಭಗವಂತನ ವಿಗ್ರಹವನ್ನು ಪ್ರತಿಷ್ಠಾಪಿಸಿ ಗುಡಿಯನ್ನು ನಿರ್ಮಿಸಿ ಪೂಜಿಸತೊಡಗಿದರು.
7. ತೇನ್‌ತಿರುಪ್ಪೇರೈ
ಇದು ತಾಮ್ರಪರ್ಣಿ ನದಿಯ ದಕ್ಷಿಣದಂಡೆಯ ಮೇಲಿದ್ದು ತಿರುನೆಲ್ವೇಲಿಯಿಂದ 35 ಕಿ.ಮೀ. ದೂರದಲ್ಲಿದೆ. ಇಲ್ಲಿ ಭಗವಂತನ ಶ್ರೀವಿಗ್ರಹಕ್ಕೆ ಮಕರನೆಡುಂಕುಳೈಕಾದನ್ ಎಂದು ಹೆಸರು. ಮಕರಕುಂಡಲಧಾರಯ ಪೆರುಮಾಳ್ ಎಂದೂ ಕರೆಯುತ್ತಾರೆ. ವಿಗ್ರಹವು ಕುಳಿತಿರುವ ಭಂಗಿಯಲ್ಲಿದೆ. ದೇವಿಯ ಹೆಸರು, ಕುಂಡಲಕರ್ಣವಲ್ಲಿ ಅಥವಾ ಕುಳ್ಳೆಕೊಡುವಲ್ಲಿ.

ಇಲ್ಲಿನ ಸ್ಥಳಪುರಾಣದ ಪ್ರಕಾರ, ಲಕ್ಷ್ಮಿಯು ದೂರ್ವಾಸಮುನಿಗಳ ಬಳಿ, ಶ್ರೀಮನ್ನಾರಾಯಣನು ಭೂದೇವಿಯನ್ನು ಹೆಚ್ಚು ಪ್ರೀತಿಸುತ್ತಿದ್ದಾನೆಂದೂ ತಾನು ಪ್ರಾಯಃ ಅಷ್ಟು ಸುಂದರವಾಗಿಲ್ಲದ ಕಾರಣ, ತನ್ನನ್ನು ಉಪೇಕ್ಷಿಸುತ್ತಿದ್ದನೆಂದೂ ಹೇಳಿದಳು. ಆಗ ದೂರ್ವಾಸರು ಭೂದೇವಿಯನ್ನು ನೋಡಲು ಹೋದರು. ಭೂದೇವಿಯು ತಿರುಮಲ ಭಗವಂತನ ತೊಡೆಯ ಮೇಲೆ ಕುಳಿತುಕೊಳ್ಳುತ್ತಾ ಅವರಿಗೆ ಅಗೌರವ ತೋರಿಸಿದಳು. ಇದರಿಂದ ದೂರ್ವಾಸರು ಕುಪಿತರಾಗಿ ಅವಳನ್ನು ಲಕ್ಷ್ಮಿಯ ಹಾಗೆಯೇ ಆಗೆಂದು ಶಪಿಸಿದರು! ಆಗ ಭಗವಂತನು ಅವಳಿಂದ ಕಣ್ಮರೆಯಾಗಿಹೋದನು! ಹಾಗಾಗಿ ಅವಳು ಪುನಃ ಭಗವಂತನನ್ನು ಪಡೆಯಲು ಈ ಸ್ಥಳದಲ್ಲಿ `ಓಂ ನಮೋ ನಾರಾಯಣಾಯ’ ಎಂಬ ಮಂತ್ರ ಪಠಿಸುತ್ತಾ ತಪಸ್ಸು ಮಾಡತೊಡಗಿದಳು. ಫಾಲ್ಗುಣ ಮಾಸದ ಪೌರ್ಣಮಿಯ ದಿನದಂದು ಅವಳು ತಾಮ್ರಪರ್ಣಿ ನದಿಯಲ್ಲಿ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿ ಬೊಗಸೆಗೈಗಳಲ್ಲಿ ಸ್ವಲ್ಪ ನೀರು ತೆಗೆದುಕೊಳ್ಳಲು, ಎರಡು ಮಕರಕುಂಡಲಗಳನ್ನು ನೋಡಿದಳು! ಆ ಕ್ಷಣವೇ ಭಗವಂತನು ಪ್ರತ್ಯಕ್ಷನಾಗಲು, ಅವಳು ಅವನಿಗೆ ಆ ಮಕರಕುಂಡಲಗಳನ್ನು ಅರ್ಪಿಸಿದಳು. ಆಗ ದೇವತೆಗಳು ಪುಷ್ಪವೃಷ್ಟಿಗೈಯಲು ಭೂದೇವಿಯು ತನ್ನ ಮೊದಲ ರೂಪವನ್ನು ಪಡೆದಳು. ಭೂದೇವಿಯು ಇಲ್ಲಿ ಲಕ್ಷ್ಮಿಯ ರೂಪಿನಿಂದ ತಪಸ್ಸು ಮಾಡಿದುದರಿಂದ ಈ ಸ್ಥಳಕ್ಕೆ ಶ್ರೀಪೆರೈ ಎನ್ನುತ್ತಾರೆ. ಇಲ್ಲಿನ ಭಗವದ್ವಿಗ್ರಹವು ಮಕರಕುಂಡಲಗಳನ್ನು ಧರಿಸಿದೆ. ಹಾಗಾಗಿಯೇ ಇಲ್ಲಿ ಭಗವದ್ವಿಗ್ರಹದ ಹೆಸರು, ಮಕರನೆಡುಂಕುಳೈಕಾದನ್.
ಇಲ್ಲಿ ಇನ್ನೂ ಕೆಲವು ಕಥೆಗಳನ್ನು ಹೇಳುತ್ತಾರೆ. ವರುಣನು ರಾಕ್ಷಸರೊಂದಿಗೆ ಯುದ್ಧ ಮಾಡುವಾಗ ತನ್ನ ಪಾಶವನ್ನು ಕಳೆದುಕೊಂಡಿದ್ದು ಇಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಹಿಂಪಡೆದನೆಂದು ಹೇಳುತ್ತಾರೆ. ಹಾಗಾಗಿ ಇಲ್ಲಿ ಮಳೆಗಾಗಿ ಬೇಡಿದರೆ ಮಳೆಯಾಗುತ್ತದೆ ಎಂದು ನಂಬುತ್ತಾರೆ. ಶುಕ್ರನೂ ಇಲ್ಲಿ ಬಂದು ಆಶೀರ್ವಾದ ಪಡೆದನೆಂದು ಹೇಳುತ್ತಾರೆ. ವಿದರ್ಭದ ರಾಜ ಇಲ್ಲಿ ಬಂದು ಪ್ರಾರ್ಥಿಸಲು ಅವನ ರಾಜ್ಯದಲ್ಲಿದ್ದ ಹನ್ನೆರಡು ವರ್ಷಗಳ ಕ್ಷಾಮ ಪರಿಹಾರವಾಗಿ ಮಳೆ ಬಂತೆಂದು ಹೇಳುತ್ತಾರೆ. ಸುಂದರಪಾಂಡ್ಯನೆಂಬ ರಾಜ, ಚೋಳರಾಜ್ಯದಿಂದ 108 ಬ್ರಾಹ್ಮಣರನ್ನು ಪೂಜೆಗಾಗಿ ಕರೆಸಲು, ಒಬ್ಬ ಬ್ರಾಹ್ಮಣನು ದಾರಿಯಲ್ಲಿ ಕಳೆದುಹೋದ, ದ್ವಾರದ ಬಳಿ 107 ಬ್ರಾಹ್ಮಣರು ಮಾತ್ರ ಇದ್ದರು, ಆದರೆ ದೇವಾಲಯ ತಲಪಿದಾಗ 108 ಇದ್ದರು, ಇಲ್ಲಿ ಭಗವಂತನೇ ಒಬ್ಬ ಬ್ರಾಹ್ಮಣನ ರೂಪ ಧರಿಸಿ ಬಂದನೆಂದು ಒಂದು ಕಥೆ ಹೇಳುತ್ತಾರೆ.
ಇಲ್ಲಿ ನಡೆಯುವ ಬ್ರಹ್ಮೋತ್ಸವ ಬಹಳ ಅದ್ಭುತವಾಗಿದ್ದು, ನಾಸ್ತಿಕರಿಗೂ ಮನಮುಟ್ಟುವಂತಿರುತ್ತದೆ ಎಂದು ಹೇಳುತ್ತಾರೆ.
8. ತಿರುಕೋಲೂರ್
ತೇನ್‌ತಿರುಪ್ಪೇರೈನಿಂದ ಆಳ್ವಾರ್ ತಿರುನಗರಿಗೆ ಹೋಗುವ ದಾರಿಯಲ್ಲಿ 3 ಕಿ.ಮೀ. ದೂರ ಹೋಗಿ, 2 ಕಿ.ಮೀ. ದಕ್ಷಿಣಕ್ಕೆ ಹೋದರೆ ಈ ದೇವಾಲಯ ಸಿಗುತ್ತದೆ. ಇದು ಮಧುರಕವಿ ಆಳ್ವಾರರ ಜನ್ಮಸ್ಥಳ. ಇಲ್ಲಿ ಭಗವಂತನ ಹೆಸರು ವೈತ್ತಮನಿ ಪೆರುಮಾಳ್. ದೇವಿಯ ಹೆಸರು ಕುಮುದವಲ್ಲಿ. ಇಲ್ಲಿನ ನವಗ್ರಹಾಂಶ, ಕುಜ.

ಸ್ಥಳಪುರಾಣದ ಪ್ರಕಾರ, ಒಮ್ಮೆ ಕುಬೇರನು ಕೈಲಾಸಕ್ಕೆ ಹೋಗಿದ್ದಾಗ, ಪಾರ್ವತಿಯನ್ನು ಕಾಮದ ಕಣ್ಣಿನಿಂದ ನೋಡಿದನು. ಆಗ ಪಾರ್ವತಿಯು ಅವನನ್ನು ಶಪಿಸಿದಳು. ಇದರಿಂದ ಅವನು ತನ್ನ ನವನಿಧಿಗಳನ್ನು ಕಳೆದುಕೊಂಡು ಕುರುಡನೂ, ಕುರೂಪಿಯೂ ಆದನು. ಅನಂತರ ಅವನು ಪಶ್ಚಾತ್ತಾಪಪಟ್ಟು ಶಿವನನ್ನು ಪ್ರಾರ್ಥಿಸಿದನು. ಶಿವನು ಅವನಿಗೆ ಪಾರ್ವತಿಯನ್ನು ಪ್ರಾರ್ಥಿಸಲು ಹೇಳಿದನು. ಅವನು ಪಾರ್ವತಿಯನ್ನು ಪ್ರಾರ್ಥಿಸಲು, ಅವಳು “ಒಂದು ಕಣ್ಣಲ್ಲಿ ಅಂಧತ್ವ ಉಳಿಯುತ್ತದೆ. ಕುರೂಪತ್ವವು ಹೋಗುವುದಿಲ್ಲ. ನೀನು ಕಳೆದುಕೊಂಡ ನಿಧಿಯೆಲ್ಲವೂ ಪೆರುಮಾಳ್‌ನ ಬಳಿಯಿದೆ. ಪೆರುಮಾಳ್‌ನನ್ನು ಪ್ರಾರ್ಥಿಸಿ ನಿಧಿಯನ್ನು ಹಿಂಪಡೆದುಕೋ!” ಎಂದಳು. ಅಂತೆಯೇ ಅವನು ಪೆರುಮಾಳ್‌ನನ್ನು ಪ್ರಾರ್ಥಿಸಲು, ಪೆರುಮಾಳನು ಅರ್ಧನಿಧಿಯನ್ನು ಕೊಟ್ಟನು. ಈ ಕಾರಣಕ್ಕೆ ಇಲ್ಲಿ ಭಗವಂತನಿಗೆ ವೈತ್ತಮನಿಧಿ ಪೆರುಮಾಳ್ ಎಂದೂ ನಿಕ್ಷೇಪವಿತ್ತನ್ ಪೆರುಮಾಳ್ ಎಂದೂ ಕರೆಯುತ್ತಾರೆ.
ಹತ್ತು ಮಕ್ಕಳ ತಂದೆಯಾದ ಧರ್ಮಗುಪ್ತನೆಂಬುವನು ತನ್ನ ಹಣವನ್ನೆಲ್ಲಾ ಕಳೆದುಕೊಂಡು ಭಾರದ್ವಾಜಮುನಿಗಳ ಸಲಹೆಯಂತೆ ಇಲ್ಲಿ ಬಂದು ಭಗವಂತನನ್ನು ಭಕ್ತಿಯಿಂದ ಸೇವಿಸಲು ಸ್ವಲ್ಪ ಕಾಲದಲ್ಲೇ ಬಹಳ ಶ್ರೀಮಂತನಾಗಿ ದೀರ್ಘಕಾಲ ಸುಖವಾಗಿ ಬಾಳಿದನೆಂದು ಒಂದು ಕಥೆಯಿದೆ. ಬ್ರಹ್ಮಾಂಡ ಪುರಾಣದ ಪ್ರಕಾರ, ಹಣ ಕಳೆದುಕೊಂಡವರು ಇಲ್ಲಿಗೆ ಬಂದು ಪ್ರಾರ್ಥಿಸಿದರೆ ಹಣವನ್ನು ಮರಳಿ ಪಡೆಯುತ್ತಾರೆ.
9. ತಿರುಗುರುಕೂರ್ (ಆಳ್ವಾರ್ ತಿರುನಗರಿ)
ಈ ದೇವಾಲಯ ತೂತ್ತುಕುಡಿಯ ಶ್ರೀವೈಕುಂಠಂನಿಂದ 25 ಕಿ.ಮೀ. ದೂರದಲ್ಲಿ, ತಿರುನೆಲ್ವೇಲಿ-ತಿರುಚೆಂದೂರು ರಸ್ತೆಯಲ್ಲಿದೆ. ಈ ಸ್ಥಳ, ನಮ್ಮಾಳ್ವಾರರ ಜನ್ಮಸ್ಥಳವಾಗಿದೆ. ಈ ದೇವಾಲಯದಲ್ಲಿ ಮೂಲ ವಿಗ್ರಹದ ಹೆಸರು ಆದಿನಾಥ ಪೆರುಮಾಳ್. ವಿಗ್ರಹವು ನಿಂತ ಭಂಗಿಯಲ್ಲಿದೆ. ದೇವಿಯ ಹೆಸರು ಆದಿನಾಥವಲ್ಲಿ. ಇಲ್ಲಿನ ನವಗ್ರಹಾಂಶ, ಗುರುವಿನದ್ದಾಗಿದೆ.
ಸ್ಥಳಪುರಾಣದ ಪ್ರಕಾರ, ಬ್ರಹ್ಮನು ಒಮ್ಮೆ ಪೆರುಮಾಳ್‌ನನ್ನು ತಪಸ್ಸು ಮಾಡಲು ಸೂಕ್ತ ಸ್ಥಳವಾವುದೆಂದು ಕೇಳಿದನು. ಅದಕ್ಕೆ ಪೆರುಮಾಳನು, “ನಿನ್ನನ್ನು ಸೃಷ್ಟಿಸುವ ಮೊದಲೇ ತಾಮ್ರಪರ್ಣಿ ನದಿಯ ದಂಡೆಯ ಮೇಲೆ ಅಂಥ ಒಂದು ಸ್ಥಳವನ್ನು ಸೃಷ್ಟಿಸಿದ್ದೇನೆ. ಅಲ್ಲಿನ ನನ್ನ ವಿಗ್ರಹದ ಹೆಸರು ಆದಿನಾಥ, ಅಂದರೆ ಮೊಟ್ಟಮೊದಲ ನಾಥ ಅಥವಾ ಒಡೆಯ” ಎಂದು ಹೇಳಿ ತೋರಿಸಿದನು. ಹೀಗೆ ಪೆರುಮಾಳನು ಈ ಸ್ಥಳವನ್ನು ಬ್ರಹ್ಮನಿಗೆ ಗುರುವಿನಂತೆ ತೋರಿಸಿದ್ದರಿಂದ ಈ ಸ್ಥಳಕ್ಕೆ ಗುರುಕೂರ್ ಎಂದು ಹೆಸರಾಯಿತು.
ಇನ್ನೊಂದು ಕಥೆಯ ಪ್ರಕಾರ, ಶಂಖವೊಂದು ನದಿಯಲ್ಲಿ ತೇಲಿ ಬಂದು ದಡಕ್ಕೆ ಬಿತ್ತು. ಅದು ಭಗವಂತನನ್ನು ಪ್ರಾರ್ಥಿಸಿ ಮೋಕ್ಷ ಪಡೆಯಿತು. ಶಂಖಕ್ಕೆ ಗುರುಕು ಎಂಬ ಹೆಸರಿರುವುದರಿಂದ ಈ ಸ್ಥಳಕ್ಕೆ ಗುರುಕೂರ್ ಎಂದು ಹೆಸರಾಯಿತು. ನದೀದಂಡೆಗೆ ತಿರುಶಂಕಣ್ಣಿ ತುರೈ ಎಂದು ಹೆಸರಾಯಿತು.

ಈ ಕಥೆಯ ವಿವರ ಹೀಗಿದೆ : ಶಾಲಗ್ರಾಮವೆಂಬ ಸ್ಥಳದಲ್ಲಿ ಮಂದನೆಂಬ ಬ್ರಾಹ್ಮಣ ಹುಡುಗನಿದ್ದನು. ಮಂದಬುದ್ಧಿಯುಳ್ಳ ಇವನು ವೇದಾಧ್ಯಯನದಲ್ಲಿ ಅನಾಸಕ್ತನಾಗಿದ್ದು ಎಲ್ಲರನ್ನೂ ನಿಂದಿಸುತ್ತಿದ್ದನು. ಇದರಿಂದ ಅವನ ಗುರುವಿಗೆ ಕೋಪ ಬಂದು ಅವನನ್ನು ಕೆಳವರ್ಗದಲ್ಲಿ ಹುಟ್ಟುವಂತೆ ಶಪಿಸಿದನು. ಆಗ ಆ ಹುಡುಗನು ಗುರುಕುಲವನ್ನು ಬಿಟ್ಟು ಪೆರುಮಾಳನ ದೇವಾಲಯದಲ್ಲಿ ಕಸಗುಡಿಸುವುದು ಮೊದಲಾದ ಸೇವಾಕಾರ್ಯಗಳನ್ನು ಮಾಡತೊಡಗಿದನು. ಮುಂದೆ ಪುನರ್ಜನ್ಮದಲ್ಲಿ ಅವನು ಶಾಪವಾಕ್ಯದಂತೆ ಕೆಳವರ್ಗದಲ್ಲಿ ತಾಂಡನೆಂಬ ಹೆಸರಿನಲ್ಲಿ ಹುಟ್ಟಿದನು. ಆದರೆ ಅವನು ನೀತಿವಂತನೂ ವಿಧೇಯನೂ ಆಗಿದ್ದನು. ಅವನು ಗುರುಕೂರಿಗೆ ಬಂದು ಶ್ರೀ ಆದಿನಾಥ ಪೆರುಮಾಳನನ್ನು ಸ್ತುತಿಸತೊಡಗಿದನು. ಆದರೆ ಇವನು ಇಲ್ಲಿರುವುದು ಕೆಲವರಿಗೆ ಸಹ್ಯವಾಗಲಿಲ್ಲ. ಹಾಗಾಗಿ ಇವನು ನದಿಯ ಆಚೆದಂಡೆಗೆ ಹೋಗಿ ಅಲ್ಲಿ ಮರಳಿನಲ್ಲಿ ಭಗವಂತನ ಪ್ರತಿಮೆ ಮಾಡಿ ಪೂಜಿಸತೊಡಗಿದ. ಇತ್ತ, ಇವನನ್ನು ಸಹಿಸದಿದ್ದ ಜನ ದೃಷ್ಟಿ ಕಳೆದುಕೊಂಡರು! ಗಾಬರಿಗೊಂಡ ಅವರು ಪೆರುಮಾಳನ ಮೊರೆಹೋಗಲು, ಒಂದು ಅಶರೀರವಾಣಿಯು, ಇದು ಅವರು ತಾಂಡನ್‌ನೊಂದಿಗೆ ನಡೆದುಕೊಂಡ ರೀತಿಗೆ ಶಿಕ್ಷೆಯೆಂದು ಹೇಳಿತು. ಆಗ ಅವರು ತಾಂಡನ್‌ನ ಬಳಿಗೆ ಹೋಗಿ ಕ್ಷಮೆಯಾಚಿಸಿದರು. ತಾಂಡನ್ ಅವರನ್ನು ಹರಸಿದ ಬಳಿಕ ಅವರಿಗೆ ದೃಷ್ಟಿಯು ಮರುಕಳಿಸಿತು. ಪೆರುಮಾಳನು ಆಗ ತಾಯರ್‌ರೊಂದಿಗೆ ಪ್ರತ್ಯಕ್ಷನಾಗಿ ತಾಂಡನ್‌ನನ್ನು ತನ್ನೊಂದಿಗೆ ಕರೆದೊಯ್ದ.
ಮುಂದೆ, ಒಬ್ಬ ಬೇಡ, ತಾಂಡನ್ ವಿಶ್ರಾಂತಿ ಪಡೆದಿದ್ದ ಆಲದ ಮರದ ಕೆಳಗೆ ಸ್ವಲ್ಪ ಕಾಲ ನೆಲೆಸಿದ. ಇದರ ಪುಣ್ಯದಿಂದ ಅವನು ಮರುಜನ್ಮದಲ್ಲಿ ಶಂಖನೆಂಬ ಋಷಿಯಾಗಿ ಜನಿಸಿದ. ಹಾಗೆ ಜನಿಸಿದ ಶಂಖನು ಮೋಕ್ಷಪ್ರಾಪ್ತಿಗಾಗಿ ದುಷ್ಕರ ತಪಸ್ಸು ಮಾಡತೊಡಗಿದ. ಇದನ್ನು ನೋಡಿದ ನಾರದ ಮಹರ್ಷಿಗಳು ಅವನನ್ನು ತಪಸ್ಸು ಮಾಡುತ್ತಿರುವ ಕಾರಣ ಕೇಳಿ ತಿಳಿದುಕೊಂಡು ಗುರುಕೂರಿಗೆ ಹೋಗಿ ಪ್ರಾರ್ಥಿಸುವಂತೆ ಹೇಳಿದರು. ಆಗ ಶಂಖನು ತನ್ನನ್ನು ಒಂದು ಶಂಖವಾಗಿ ಪರಿವರ್ತಿಸಿಕೊಂಡು ಗುರುಕೂರಿಗೆ ಹೋಗಿ ಪ್ರಾರ್ಥಿಸಲು ಪೆರುಮಾಳನು ಪ್ರತ್ಯಕ್ಷನಾಗಿ ಅವನಿಗೆ ಮೋಕ್ಷವನ್ನಿತ್ತನು. ಹಾಗಾಗಿ ಈ ಕ್ಷೇತ್ರಕ್ಕೆ ತಿರುಶಂಖಣ್ಣಿತುರೈ ಎಂಬ ಹೆಸರು ಬಂದಿತು. ಲಕ್ಷ್ಮಣನು ಆದಿಶೇಷನ ರೂಪಕ್ಕೆ ತಿರುಗಿದುದರಿಂದ ಈ ಕ್ಷೇತ್ರಕ್ಕೆ ಶೇಷಕ್ಷೇತ್ರ ಎಂಬ ಹೆಸರೂ ಬಂದಿತೆಂದು ಹೇಳುತ್ತಾರೆ. ಅಂತೆಯೇ ಭಗವಂತನು ಕೆಲವು ಋಷಿಗಳ ಆಸೆಯಂತೆ ತನ್ನ ವರಾಹರೂಪವನ್ನು ತೋರಿಸಿದುದರಿಂದ ಈ ಕ್ಷೇತ್ರಕ್ಕೆ ವರಾಹಕ್ಷೇತ್ರವೆಂಬ ಹೆಸರೂ ಬಂದಿತೆಂದು ಹೇಳುತ್ತಾರೆ. ಇಲ್ಲಿನ ತೀರ್ಥದ ಬಳಿ ಒಂದು ನಾಯಿಯೂ ಮೋಕ್ಷ ಪಡೆದುದರಿಂದ ಈ ಕ್ಷೇತ್ರಕ್ಕೆ ತೀರ್ಥಕ್ಷೇತ್ರ ಹಾಗೂ ಪಂಚಮಹಾಕ್ಷೇತ್ರ ಎಂಬ ಹೆಸರುಗಳೂ ಬಂದವು ಎಂದು ಹೇಳುತ್ತಾರೆ. ಲಕ್ಷ್ಮಿಯೇ ಇಲ್ಲಿ ಹುಣಸೇಮರದ ರೂಪದಲ್ಲಿದ್ದಾಳೆಂದು ಹೇಳುತ್ತಾರೆ. ನಮ್ಮಾಳ್ವಾರರು ಬಾಲ್ಯದಲ್ಲಿ ಈ ಹುಣಸೇಮರದ ಕೆಳಗೆ ಕುಳಿತುಕೊಂಡು ವಿಷ್ಣುವನ್ನು ಧ್ಯಾನಿಸುತ್ತಿದ್ದರೆಂದು ಹೇಳುತ್ತಾರೆ. ಹಾಗಾಗಿ ಈ ಮರದ ಕೆಳಗೆ ನಮ್ಮಾಳ್ವಾರರ ಬಾಲರೂಪದ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ಸ್ಥಳ ನಮ್ಮಾಳ್ವಾರರ ಜನ್ಮಸ್ಥಳವಾಗಿರುವುದರಿಂದ ಇದನ್ನು ಆಳ್ವಾರ್ ತಿರುನಗರಿ ಎಂದು ಕರೆಯುತ್ತಾರೆ. ನಮ್ಮಾಳ್ವಾರರು ತಮ್ಮನ್ನು ಸಂದರ್ಶಿಸಿದ ಮಧುರಕವಿ ಆಳ್ವಾರರಿಗೆ ಇಲ್ಲಿ ತಿರುವಾಯ್‌ಮೊಳಿಯನ್ನು ಉಪದೇಶಿಸಿದರು ಎಂದು ಹೇಳುತ್ತಾರೆ. ಅಂತೆಯೇ ನಾಥಮುನಿಗಳು ನಮ್ಮಾಳ್ವಾರರ ದಯೆಯಿಂದ ನಾಲಾಯಿರ ದಿವ್ಯ ಪ್ರಬಂಧವನ್ನು ರಚಿಸಿದರೆಂದು ಹೇಳುತ್ತಾರೆ. ನಮ್ಮಾಳ್ವಾರರು ನವತಿರುಪತಿಯ ಎಲ್ಲ ದೇವಾಲಯಗಳನ್ನೂ ಸ್ತುತಿಸಿದ್ದಾರೆ.
ಹೀಗೆ, ಆಳ್ವಾರರ 108 ದಿವ್ಯದೇಶಗಳೆಂಬ ಶ್ರೀವೈಷ್ಣವ ಕ್ಷೇತ್ರಗಳಲ್ಲಿ ಸೇರಿರುವ ಈ ನವತಿರುಪತಿ ಎಂಬ ದೇವಾಲಯಗಳ ಸಮುದಾಯ, ನೋಡಲೇಬೇಕಾದುದಾಗಿದೆ.






Leave a Reply