ಶ್ರೀಲ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಆಧ್ಯಾತ್ಮಿಕ ಗುರು ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಅವರು ಫೆಬ್ರವರಿ 6, 1874 ರಂದು ಜಗನ್ನಾಥ ಪುರಿಯಲ್ಲಿ ಜನಿಸಿದರು. ಅವರ ತಂದೆ ಶ್ರೀಲ ಭಕ್ತಿವಿನೋದ ಠಾಕುರರು, ದೊಡ್ಡ ಸರ್ಕಾರಿ ಅಧಿಕಾರಿಯಾಗಿದ್ದರು. ಅಂದರೆ ಮ್ಯಾಜಿಸ್ಟ್ರೇಟರಾಗಿದ್ದರು. ಅದು ಗೌರ್ನರ್ ನಂತರದ ಸ್ಥಾನ. ಭಕ್ತಿವಿನೋದ ಠಾಕುರರು ಜಗನ್ನಾಥ ಮಂದಿರದ ನಿರ್ವಹಣೆಯನ್ನೂ ವಹಿಸಿಕೊಂಡಿದ್ದರು. ಆಗ ಅವರ ಹೆಸರು ಕೇದಾರನಾಥ ದತ್ತ, ಕೆ.ಎನ್. ದತ್ತ.

ಭಕ್ತಿವಿನೋದ ಠಾಕುರರಿಗೆ ಅನೇಕ ಗಂಡು ಮಕ್ಕಳಿದ್ದರು ಮತ್ತು ಸರಸ್ವತಿಯವರು ಐದನೆಯವರು. ಅವರು ಅಖಂಡ ಬ್ರಹ್ಮಚಾರಿಯಾಗಿದ್ದರು.. ಈ ಆಂದೋಲನವನ್ನು ಸ್ಥಾಪಿಸಲು ಅವರು ಅನೇಕ ವ್ರತಗಳನ್ನು ಕೈಗೊಂಡಿದ್ದರು. ಅದು ಅವರ ಧ್ಯೇಯವಾಗಿತ್ತು.
ಶ್ರೀ ಚೈತನ್ಯ ಮಹಾಪ್ರಭುಗಳ ಧ್ಯೇಯವನ್ನು, ಧರ್ಮ ಪ್ರಚಾರ ಕಾರ್ಯವನ್ನು ಈ ಪತಿತ ಕಲಿಯುಗದಲ್ಲಿ ಪುನರ್ ಸ್ಥಾಪಿಸಲು ಶ್ರೀಲ ಸರಸ್ವತಿಯವರು ನಿರ್ಭಯದಿಂದ ಬೋಧಿಸಿದ್ದರಿಂದ ಅವರನ್ನು “ಸಿಂಹ ಗುರು” ಎಂದು ಕರೆಯುತ್ತಾರೆ. ಅವರ ಶಿಷ್ಯ ಪರಂಪರೆಯ ಭಕ್ತರು ಅವರನ್ನು ಆಧ್ಯಾತ್ಮಿಕ ಲೋಕದಲ್ಲಿ ಶ್ರೀ ಚೈತನ್ಯರ ಶಾಶ್ವತ ಸಹವರ್ತಿಗಳೆಂದು ಗೌರವಿಸುತ್ತಾರೆ.
ನರೋತ್ತಮ ದಾಸ ಠಾಕುರ, ಶ್ಯಾಮಾನಂದ ಪಂಡಿತ ಮತ್ತು ಶ್ರೀನಿವಾಸ ಆಚಾರ್ಯರಂತಹ ಶ್ರೇಷ್ಠ ವೈಷ್ಣವರು 17ನೆಯ ಶತಮಾನದಲ್ಲಿ ಈ ಲೋಕದಿಂದ ನಿರ್ಗಮಿಸಿದ ಮೇಲೆ, ಅನೇಕ ಅಪಸಂಪ್ರದಾಯಗಳು (ಪದಚ್ಯುತ ವೈಷ್ಣವ ಪಂಥ) ಕಳೆಯಂತೆ ಬೆಳೆದಾಗ, ಗೌಡೀಯ ವೈಷ್ಣವ ಸಿದ್ಧಾಂತವು ಕರಾಳ ಹಂತವನ್ನು ಅನುಭವಿಸಿತು.
ಆ ಪಂಥದ ಸದಸ್ಯರು ವೈಷ್ಣವರಂತೆ ವೇಷ ಹಾಕಿಕೊಂಡು ತಾವು ಶ್ರೀ ಚೈತನ್ಯರ ಬೋಧನೆಯನ್ನು ಅನುಸರಿಸುತ್ತಿರುವುದಾಗಿ ಹೇಳಿಕೊಂಡರು. ಆದರೆ ವಾಸ್ತವವಾಗಿ ಅವರು ಶ್ರೀ ಚೈತನ್ಯರ ಯಾವುದೇ ತತ್ತ್ವವನ್ನು ಪಾಲಿಸಲಿಲ್ಲ. ಅವರಲ್ಲಿ ಸಹಜೀಯರಿದ್ದರು. ಈ ಸಹಜೀಯರು ಅತ್ಯಂತ ಕೀಳಾಗಿ ರಾಧಾ ಮತ್ತು ಕೃಷ್ಣರ ಲೀಲೆಗಳನ್ನು ಅನುಕರಿಸುತ್ತಿದ್ದರು ಮತ್ತು ಅನೈತಿಕ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿರುತ್ತಿದ್ದರು. ಈ ಪದಚ್ಯುತರ ಕಾರಣದಿಂದ ವಿದ್ಯಾವಂತರು ವೈಷ್ಣವ ಸಿದ್ಧಾಂತದಿಂದ ದೂರವಿದ್ದರು.
ಈ ಹಂತವು ಜಾತಿ ಗೋಸ್ವಾಮಿಗಳು ಮತ್ತು ಜಾತಿ ಬ್ರಾಹ್ಮಣರ ಪ್ರಾಬಲ್ಯವನ್ನೂ ಕಂಡಿತು. ತಾವು ಶ್ರೀ ನಿತ್ಯಾನಂದರ ವಂಶದವರು ಅಥವಾ ವೃಂದಾವನದ ಆರು ಗೋಸ್ವಾಮಿಗಳ ಕುಟುಂಬಕ್ಕೆ ಸೇರಿದವರು ಎಂದು ಹೇಳಿಕೊಳ್ಳುತ್ತಿದ್ದರು.
ಅವರ ನಡವಳಿಕೆಯು ತಿರಸ್ಕರಣೀಯವಾಗಿತ್ತು. ಅವರು ಮಾಂಸ ಭಕ್ಷಣೆ, ಜೂಜು, ಮದ್ಯ ಮತ್ತು ಅನೈತಿಕ ಲೈಂಗಿಕ ಕ್ರಿಯೆ ವರ್ಜ್ಯ ಎನ್ನುವ ನಿಯಂತ್ರಕ ತತ್ತ್ವಗಳನ್ನು ಉಲ್ಲಂಘಿಸುತ್ತಿದ್ದರು. ಇಷ್ಟಾದರೂ ಅವರು ತಮಗೆ ತಾವೇ “ಗೋಸ್ವಾಮಿ” ಹೆಸರನ್ನು ಹಾಕಿಕೊಂಡಿದ್ದರು. ಅದು ಅನುವಂಶಿಕವಾಗಿ ಬಂದದ್ದು ಎಂದು ಹೇಳಿಕೊಳ್ಳುತ್ತಿದ್ದರು.

ಅದೇ ರೀತಿ ಜಾತಿ ಬ್ರಾಹ್ಮಣರೂ ಕೂಡ ಗುರುಗಳಾಗಲು, ದೀಕ್ಷೆ ನೀಡಲು ಮತ್ತು ದೇವರ ಪೂಜೆ ಸಲ್ಲಿಸಲು ತಾವೊಬ್ಬರೇ ಅಧಿಕೃತರು ಎಂದು ಪ್ರತಿಪಾದಿಸುತ್ತ, ಭ್ರಷ್ಟಾಚಾರದಲ್ಲಿ ಅತಿ ನಿಪುಣರಾಗಿಬಿಟ್ಟಿದ್ದರು. ಈ ಕಾಲದಲ್ಲಿ ಇಂತಹ ಸವಾಲುಗಳಿದ್ದರೂ ಕೆಲವು ನಿಜವಾದ ವೈಷ್ಣವರು ಶ್ರೀ ಚೈತನ್ಯರ ಮಾರ್ಗದರ್ಶನದಂತೆ ಕೃಷ್ಣಭಕ್ತಿಯನ್ನು ಆಚರಿಸುತ್ತಿದ್ದರು.
ಅಪ ಸಂಪ್ರದಾಯಗಳನ್ನು ಬುಡ ಸಮೇತ ಕಿತ್ತೊಗೆಯಲು, ಸಹಜೀಯರನ್ನು ಬಯಲಿಗೆಳೆಯಲು ಮತ್ತು ಜಾತಿ ಗೋಸ್ವಾಮಿ, ಜಾತಿ ಬ್ರಾಹ್ಮಣರ ಸಿದ್ಧಾಂತವನ್ನು ಪರಾಜಯಗೊಳಿಸಲು ಪ್ರಯತ್ನಿಸುತ್ತಿದ್ದ ಒಬ್ಬ ಶ್ರೇಷ್ಠ ವೈಷ್ಣವರೆಂದರೆ ಶ್ರೀಲ ಭಕ್ತಿವಿನೋದ ಠಾಕುರ (1838-1914). ಈ ಗುರಿ ಸಾಧನೆಯಲ್ಲಿ ಅವರಿಗೆ ನೆರವಾದವರು ಅವರ ಪುತ್ರ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಯವರು.
ಮಂದಿರ ಪ್ರವೇಶ ಶುಲ್ಕ ವಿಧಿಸುವ ಮತ್ತು ಕೀರ್ತನೆ ಅಥವಾ ಭಾಗವತ ವಾಚನಕ್ಕೆ ಹಣ ಪಡೆಯುವ ಆಚರಣೆಯನ್ನು ತೀವ್ರವಾಗಿ ವಿರೋಧಿಸುತ್ತ ಶ್ರೀಲ ಸರಸ್ವತಿಯವರು ಬಹಿರಂಗವಾಗಿಯೇ ಜಾತಿ ಗೋಸ್ವಾಮಿಗಳನ್ನು ಖಂಡಿಸಿದರು. ಶ್ರೀ ಚೈತನ್ಯರ ಪರಿಶುದ್ಧ ಬೋಧನೆಯನ್ನು ಪುನರ್ ಸ್ಥಾಪಿಸುವ ದೃಢ ಸಂಕಲ್ಪದಿಂದ ಅವರು ಜಾತಿಯ ಗೋಸ್ವಾಮಿ ಮತ್ತು ಹುಸಿ ಬ್ರಾಹ್ಮಣರ ವಾಸ ಸ್ಥಳವನ್ನು ದಿಟ್ಟತನದಿಂದ ಪ್ರವೇಶಿಸಿ ಅವರ ಕೃತ್ಯಗಳನ್ನು ಬಯಲಿಗೆಳೆದರು.
ಮೂರು ಶತಮಾನಗಳಿಂದ ಜಾತಿ ಗೋಸ್ವಾಮಿ ಮತ್ತು ಜಾತಿ ಬ್ರಾಹ್ಮಣರು ತಮ್ಮ ದುಷ್ಟ ಅಪಾಯಕಾರಿ ಚಟುವಟಿಕೆಯನ್ನು ಯಾವ ವಿರೋಧವೂ ಇಲ್ಲದಂತೆ ನಡೆಸಿಕೊಂಡು ಹೋಗುತ್ತಿದ್ದರು. ಆದರೆ ಈಗ ಬೆದರಿಕೆ ಉಂಟಾಗಿದೆ ಎಂದು ಭಾವಿಸಿದ ಅವರು ತಮ್ಮ ಸ್ಥಾನಗಳನ್ನು ಪ್ರತಿಪಾದಿಸಲು ಜೊತೆಗೂಡಲು ನಿರ್ಧರಿಸಿದರು.
ಅವರು ಪೂರ್ವಪಕ್ಷ ನಿರಸನ (ವಿರೋಧಿ ವಾದವನ್ನುಖಂಡಿಸುವುದು) ಎನ್ನುವ ಪ್ರಬಂಧವನ್ನು ಬರೆದರು.
ಅದರಲ್ಲಿ ಈ ಅಧಿಕೃತ ಅಂಶಗಳಿದ್ದವು : “ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದ ವೈಷ್ಣವರು ಮಾತ್ರ ದೀಕ್ಷೆಗೆ ಅರ್ಹರು ; ಶಿಷ್ಯರಿಗೆ ದೀಕ್ಷೆ ನೀಡುವ ಮೂಲಕ ನರೋತ್ತಮ ದಾಸ ಠಾಕುರ ಮತ್ತು ಶ್ಯಾಮಾನಂದ ಪ್ರಭು ವೈದಿಕ ಗ್ರಂಥಗಳ ವಿರುದ್ಧ ನಡೆದುಕೊಂಡಿದ್ದಾರೆ; ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದ ವೈಷ್ಣವರು ಮಾತ್ರ ಭಗವಂತನ ಸಾಲಿಗ್ರಾಮ ಶಿಲಾ ರೂಪವನ್ನು ಆರಾಧಿಸಲು ಅರ್ಹರು; ಶ್ರೀಲ ಸನಾತನ ಗೋಸ್ವಾಮಿಯವರ ಹರಿಭಕ್ತಿ ವಿಲಾಸವನ್ನು ವೈಷ್ಣವ ವಿಧಿಗಳು ಮತ್ತು ನಡವಳಿಕೆಗಳ ನಿಯಮಗಳಿಗೆ ಅಧಿಕೃತವೆಂದು ಸ್ವೀಕರಿಸಬಾರದು.”

ಪೂರ್ವ ಪಕ್ಷ ನಿರಸನೆಯು ನಿಜವಾದ ವೈಷ್ಣವರಲ್ಲಿ ಕೋಲಾಹಲ ಉಂಟು ಮಾಡಿತು. ಇದು ಅವರ ಶ್ರದ್ಧೆಯ ಮೇಲೆ ನೇರ ಪ್ರಹಾರ. ಹರಿಭಕ್ತಿ ವಿಲಾಸದ ಅಧಿಕೃತತೆ ಮತ್ತು ನರೋತ್ತಮ ದಾಸ ಠಾಕುರ ಮತ್ತು ಶ್ಯಾಮಾನಂದ ಪ್ರಭುಗಳಂತಹ ಆಚಾರ್ಯರನ್ನು ಪ್ರಶ್ನಿಸಿದ್ದು ವೈಷ್ಣವರನ್ನು ಅಲುಗಾಡಿಸಿತು.
ಅವರ ವಾದಗಳನ್ನು ದೃಢವಾಗಿ ಮತ್ತು ತಾತ್ವಿಕವಾಗಿ ತಿರಸ್ಕರಿಸಿ ಪ್ರತಿಪಾದಿಸುವ ಅಗತ್ಯವಿದೆ ಎಂದು ವೈಷ್ಣವರು ಶ್ರೀಲ ಭಕ್ತಿವಿನೋದ ಠಾಕುರರ ಮೊರೆ ಹೊಕ್ಕರು. ಅವರ ಮಾರ್ಗದರ್ಶನ ಕೋರಿದರು. ಆದರೆ ಆಗ ಅವರಿಗೆ ಅನಾರೋಗ್ಯವಾಗಿತ್ತು. ಹತಾಶೆಯಿಂದ ಅವರು ಕೂಗಿದರು, “ಈ ಹುಸಿ ವಾದಗಳನ್ನು ಪರಾಜಯಗೊಳಿಸಬಲ್ಲವರು ಯಾರೂ ಈ ಸೃಷ್ಟಿಯಲ್ಲಿ ಇಲ್ಲವೇ?”
ಅದಕ್ಕೆ ಪ್ರತಿಕ್ರಿಯೆಯಾಗಿ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರರು ಬ್ರಾಹ್ಮಣ ಒ ವೈಷ್ಣವ ತಾರತಮ್ಯ ವಿಷಯಕ ಸಿದ್ಧಾಂತ (ಬ್ರಾಹ್ಮಣರ ಮತ್ತು ವೈಷ್ಣವರ ಹೋಲಿಕೆಗೆ ಸಂಬಂಧಿಸಿದಂತೆ ನಿರ್ಣಯ, ತೀರ್ಮಾನ.) ಎನ್ನುವ ಪ್ರಬಂಧವನ್ನು ಬರೆದು ಭಕ್ತಿವಿನೋದ ಠಾಕುರರಿಗೆ ತೋರಿಸಿದರು. ಹಾಸಿಗೆಯಲ್ಲಿಯೇ ಮಲಗಿದ್ದ ಶ್ರೀಲ ಭಕ್ತಿವಿನೋದರು ಆನಂದತುಂದಿಲರಾಗಿ ಎದ್ದು ಕುಳಿತರು. ಅಪವಿತ್ರ ಸಿದ್ಧಾಂತವನ್ನು ಸೋಲಿಸುವಲ್ಲಿ ಶ್ರೀಲ ಸರಸ್ವತಿಯವರು ಯಶಸ್ವಿಯಾಗುವರು ಎಂದು ಘೋಷಿಸಿದರು.
ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಯವರು ಪಶ್ಚಿಮ ಬಂಗಾಳದ ಮಿದ್ನಾಪುರದ ಬಲಿಗಾಯ್‌ನಲ್ಲಿ, ಸೆಪ್ಟೆಂಬರ್ 8, 1911 ರಂದು, ಸಮ್ಮೇಳನವೊಂದರಲ್ಲಿ ಪ್ರಬಂಧವನ್ನು ಮಂಡಿಸಿದರು. ಈ ಸಮ್ಮೇಳನದಲ್ಲಿ ನಿಜವಾದ ವೈಷ್ಣವರು ಮತ್ತು ವಿರೋಧಿಸುವವರು ಇಬ್ಬರೂ ಇದ್ದರು.
ವೈಷ್ಣವರು ನಿಜವಾದ ಬ್ರಾಹ್ಮಣರು, ದೀಕ್ಷೆ ನೀಡಲು ಅರ್ಹರು ಮತ್ತು ಸಾಲಗ್ರಾಮ ಶಿಲೆಯನ್ನು ಆರಾಧಿಸಲು ಯೋಗ್ಯರು ಎಂದು ಧರ್ಮಗ್ರಂಥಗಳ ಪುರಾವೆಯ ಮೂಲಕ ಅವರು ತಮ್ಮ ಪ್ರಬಂಧದಲ್ಲಿ ಸಮರ್ಥಿಸಿದರು. ಹುಟ್ಟಿನಿಂದ ಬ್ರಾಹ್ಮಣರು ಎನ್ನುವುದಕ್ಕೆ ಧರ್ಮಗ್ರಂಥಗಳ ಬೆಂಬಲವಿಲ್ಲ ಎಂದು ಅವರು ತಮ್ಮ ನಿರ್ಣಯದಲ್ಲಿ ತಿಳಿಸಿದರು.
ಶ್ರೀಲ ಸರಸ್ವತಿಯವರ ವಾದಗಳಿಂದ ಅನೇಕ ವೈಷ್ಣವರು ಉತ್ತೇಜನಗೊಂಡು ಕೆಲವು ಅಂಶಗಳನ್ನು ಮುಂದಿಟ್ಟರು. ಸ್ವತಃ ಶ್ರೀ ಚೈತನ್ಯರೇ ಜಾತಿ ಕಟ್ಟುಪಾಡಿನಲ್ಲಿ ನಂಬಿಕೆ ಇಟ್ಟುಕೊಂಡಿರಲಿಲ್ಲ ಎಂದು ಈ ವೈಷ್ಣವರು ಪ್ರತಿಪಾದಿಸಿದರು. ಉದಾಹರಣೆಗೆ ಮುಸ್ಲಿಂ ಸಮುದಾಯದಲ್ಲಿ ಜನಿಸಿದ್ದ ಶ್ರೀಲ ಹರಿದಾಸ ಠಾಕುರರನ್ನು ಅವರು ನಾಮಾಚಾರ್ಯ ಎಂದು ಕರೆದರು.

ಪುಸ್ತಕಗಳನ್ನು ಬರೆಯುವ ಮತ್ತು ಮಂದಿರಗಳನ್ನು ನಿರ್ಮಿಸುವ ಮೂಲಕ ವೃಂದಾವನದ ವೈಭವವನ್ನು ಪುನರ್ ಸ್ಥಾಪಿಸಬೇಕೆಂದು ಮಹಾಪ್ರಭುಗಳು ಸನಾತನ ಗೋಸ್ವಾಮಿ ಮತ್ತು ರೂಪ ಗೋಸ್ವಾಮಿ ಅವರಿಗೆ ಸೂಚಿಸಿದರು. ಮುಸ್ಲಿಂ ರಾಜನ ಆಡಳಿತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರಿಬ್ಬರಿಗೆ ಮುಸ್ಲಿಂ ಹೆಸರುಗಳನ್ನು ಅಳವಡಿಸಿಕೊಳ್ಳಲು ಒತ್ತಡ ಹೇರಲಾಗಿತ್ತು.
ಆದುದರಿಂದ ಈ ಸೋದರರನ್ನು ಬ್ರಾಹ್ಮಣರೆಂದು ಕರೆಯಲು ನಿರಾಕರಿಸಲಾಗಿತ್ತು. ಕೆಳ ಜಾತಿಯವರೆಂದು ಪರಿಗಣಿಸಿದ್ದ ರಾಮಾನಂದ ರಾಯರೊಂದಿಗೆ ಶ್ರೀ ಚೈತನ್ಯ ಮಹಾಪ್ರಭುಗಳು ಶ್ರೀ ಕೃಷ್ಣನನ್ನು ಕುರಿತು ವ್ಯಾಪಕವಾಗಿ ಚರ್ಚಿಸುತ್ತಿದ್ದರು.
ವಿರೋಧಿಸುತ್ತಿದ್ದವರಿಗೆ ಮಾತೇ ಹೊರಡಲಿಲ್ಲ. ಸರಿ ಸುಮಾರು ಮೂರು ದಶಕಗಳ ಅನಂತರ ಶ್ರೀ ಚೈತನ್ಯರ ನಿಜವಾದ ಅನುಯಾಯಿಗಳ ಮೊಟ್ಟ ಮೊದಲ ಸಾರ್ವಜನಿಕ ಜಯ ಇದಾಗಿತ್ತು. ಸಭಿಕರು ಆನಂದತುಂದಿಲರಾದರು. ಪ್ರತಿಯೊಬ್ಬರಿಗೂ ಶ್ರೀಲ ಸರಸ್ವತಿಯವರ ಪಾದಧೂಳನ್ನು ಪಡೆಯುವ ಅಪೇಕ್ಷೆ.
ಶ್ರೀ ಚೈತನ್ಯರು ಪರಮಪ್ರಭು ಎನ್ನುವುದಕ್ಕೆ ಧರ್ಮಗ್ರಂಥಗಳಲ್ಲಿ ಯಾವುದೇ ಪುರಾವೆಗಳಿಲ್ಲ ಎಂದು ಹೇಳಲು ಮಿದ್ನಾಪುರದಲ್ಲಿ ಸೋತು ಸೊರಗಿದ ಜಾತಿ ಬ್ರಾಹ್ಮಣರು ಶ್ರೀ ಚೈತನ್ಯರ ಸ್ಥಾನವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರು. ಪುನಃ ಶ್ರೀಲ ಸರಸ್ವತಿ ಅವರೇ ಈ ವಾದಗಳನ್ನು ತಳ್ಳಿ ಹಾಕುವ ಹೊಣೆ ಹೊರಬೇಕಾಯಿತು. ಅವರು ವೇದಗಳು ಮತ್ತು ಉಪನಿಷತ್ತುಗಳನ್ನು ಉಲ್ಲೇಖಿಸಿ ಶ್ರೀ ಚೈತನ್ಯರೇ ಪರಮಪ್ರಭು ಎನ್ನುವುದನ್ನು ಸಮರ್ಥಿಸುವ ಪುರಾವೆಗಳನ್ನು ನೀಡಿದರು.
ಅಷ್ಟಾದರೂ ಜಾತಿ ಬ್ರಾಹ್ಮಣರು ಮತ್ತು ಜಾತಿ ಗೋಸ್ವಾಮಿಗಳು ಸುಮ್ಮನಿರಲಿಲ್ಲ. ನಂತರದ ವರ್ಷಗಳಲ್ಲಿ ಕೂಡ ಅವರುಗಳಿಂದ ಶ್ರೀಲ ಭಕ್ತಿಸಿದ್ದಾಂತ ಸರಸ್ವತಿಯವರು ವಿರೋಧವನ್ನು ಎದುರಿಸಬೇಕಾಯಿತು. ಒಮ್ಮೆ ಅವರು ಅವರ ಕೆಲವು ಶಿಷ್ಯರು ಪರಿಕ್ರಮ ಮಾಡಲು ವೃಂದಾವನಕ್ಕೆ ಬಂದರು. ಅವರು ಬಂದಾಗ ಏಳು ಪ್ರಮುಖ ಮಂದಿರಗಳ ದ್ವಾರಗಳನ್ನು ಮುಚ್ಚಲಾಗಿತ್ತು. ಅಷ್ಟೇ ಅಲ್ಲ ಕೆಲವರು ಈ ಪರಿಕ್ರಮ ತಂಡದ ಮೇಲೆ ಕಲ್ಲು ತೂರಿದರು.
ಸ್ಥಳೀಯ ಪಂಡಿತರು ಮತ್ತು ಸಂಪ್ರದಾಯವಾದಿ ಬ್ರಾಹ್ಮಣರು ಶ್ರೀಲ ಸರಸ್ವತಿಯವರ ಬಗೆಗೆ ಅಸಮಾಧಾಗೊಂಡಿದ್ದರು. ಸರಸ್ವತಿಯವರು ಬ್ರಾಹ್ಮಣರಲ್ಲದವರಿಗೆ ಮಾತ್ರವಲ್ಲ ಕೆಳ ಜಾತಿಯವರಿಗೂ ಪವಿತ್ರ ಬ್ರಾಹ್ಮಣ ದಾರವನ್ನು (ಜನಿವಾರ) ಕೊಟ್ಟು ಅವರಿಗೆ ದೀಕ್ಷೆಯನ್ನೂ ನೀಡಿದ್ದೇ ಸಂಪ್ರದಾವಾದಿಗಳ ಕೋಪಕ್ಕೆ ಕಾರಣವಾಗಿತ್ತು. ಸ್ಥಳೀಯ ಪಂಡಿತರು ಶ್ರೀಲ ಸರಸ್ವತಿಯವರನ್ನು ಭೇಟಿ ಮಾಡಿ ಚರ್ಚಿಸಿದರು.

ಹುಟ್ಟಿನಿಂದ ಜಾತಿ ಎನ್ನುವುದು ನಿಜವಾದ ವೈದಿಕ ಆದೇಶವಲ್ಲ ಎಂದು ವಾದಿಸಿ ಶ್ರೀಲ ಸರಸ್ವತಿಯವರು ಸಂಪ್ರದಾಯವಾದಿಗಳನ್ನು ಪರಾಜಯಗೊಳಿಸಿದರು. ಅವರು ಅನೇಕ ಧರ್ಮಗ್ರಂಥಗಳನ್ನು ಉಲ್ಲೇಖಿಸಿದರು ಮತ್ತು ವ್ಯಕ್ತಿಯನ್ನು ಹುಟ್ಟಿನಿಂದ ಅಲ್ಲ, ಗುಣಗಳಿಂದ ಬ್ರಾಹ್ಮಣನೆಂದು ಪರಿಗಣಿಸಬೇಕೆಂದು ಸಾಬೀತು ಪಡಿಸಿದರು.
ಉದಾಹರಣೆಗೆ ಅವರು ಭಾಗವತವನ್ನು ಉಲ್ಲೇಖಿಸಿದರು (7.11.35), “ಯಾರಾದರೂ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಅಥವಾ ಶೂದ್ರನ ಲಕ್ಷಣಗಳನ್ನು ತೋರಿದರೆ ಅವರು ಭಿನ್ನ ವರ್ಗದಲ್ಲಿ ಜನಿಸಿದ್ದರೂ ಅವರನ್ನು ಅವರು ತೋರುವ ಲಕ್ಷಣದಿಂದಲೇ ಸ್ವೀಕರಿಸಬೇಕು.”
ಆದರೂ ವಿರೋಧ ಮುಂದುವರಿಯಿತು. ಒಮ್ಮೆ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರರು ನವದ್ವೀಪ ಧಾಮ ಪರಿಕ್ರಮದ ನೇತೃತ್ವ ವಹಿಸಿದ್ದರು. ಅವರೊಂದಿಗೆ ಅನೇಕ ಭಕ್ತರಿದ್ದರು. ಜಾತಿ ಗೋಸ್ವಾಮಿಗಳು ಸ್ಥಳೀಯ ಗೂಂಡಾಗಳನ್ನು ಬಾಡಿಗೆಗೆ ಪಡೆದುಕೊಂಡರು. ಇದು ಭಕ್ತರಿಗೆ ಬೆದರಿಕೆ ಒಡ್ಡುವುದಲ್ಲದೆ ಅದಾಗಲೇ ಗೌಡೀಯ ವೈಷ್ಣವರ ನಾಯಕರಾಗಿದ್ದ ಶ್ರಿಲ ಸರಸ್ವತಿಯವರನ್ನು ಕೊಲ್ಲುವುದೂ ಅವರ ಉದ್ದೇಶವಾಗಿತ್ತು. ಆದರೆ ಈ ಪ್ರಯತ್ನದಲ್ಲಿ ಅವರು ವಿಫಲರಾದರು.
ಅನಂತರದಲ್ಲಿ ಈ ವಿರೋಧಿಗಳು ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಯವರನ್ನು ಕೊಲ್ಲಲು ಉದ್ದೇಶಿಸಿ, ಸ್ಥಳೀಯ ಪೊಲೀಸನು ಬದಿಗೆ ನಿಲ್ಲುವಂತೆ ಮಾಡಲು ಲಂಚ ಕೊಡುವ ಪ್ರಯತ್ನ ಮಾಡಿದರು. ಆದರೆ ಸಂತ ಪುರುಷರನ್ನು ಕೊಲ್ಲಲು ತಾನು ಬೆಂಬಲಿಸಲಾರೆ ಎಂದು ಪೊಲೀಸನು ಹೇಳಿಬಿಟ್ಟನು. ಆ ಪೊಲೀಸನು ಈ ದುಷ್ಟ ಯೋಜನೆಯನ್ನು ಶ್ರೀಲ ಸರಸ್ವತಿಯವರಿಗೂ ತಿಳಿಸಿದನು!
ಜೀವಕ್ಕೆ ಬೆದರಿಕೆಗಳಿದ್ದರೂ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಯವರು ವಿಚಲಿತರಾಗದೆ ನಿರ್ಭೀತಿಯಿಂದ ಬೋಧನೆಯನ್ನು ಮುಂದುವರಿಸಿದರು. ಅವರು ಭಾರತದಲ್ಲಿ 68 ಗೌಡೀಯ ಮಠಗಳನ್ನು ಸ್ಥಾಪಿಸಿದರು. ಮತ್ತು ಬರ್ಮಾ, ಇಂಗ್ಲೆಂಡ್ ಮತ್ತು ಜರ್ಮನಿಗಳಲ್ಲಿ ಕೇಂದ್ರಗಳನ್ನು ತೆರೆದರು.

ಭಗವಂತನ ಸೇವೆ ಮತ್ತು ಶ್ರೀ ಚೈತನ್ಯರ ಸಂದೇಶವನ್ನು ಬೋಧಿಸುವುದು ಗೌಡೀಯ ಮಠಗಳ ಪ್ರಮುಖ ಚಟುವಟಿಕೆಗಳಾಗಿದ್ದವು. ವೈಷ್ಣವ ಸಾಹಿತ್ಯದ ಪ್ರಕಟನೆ ಮತ್ತು ವಿತರಣೆಗೆ ಅವರು ಹೆಚ್ಚು ಪ್ರಾಮಖ್ಯ ನೀಡಿದರು. ಜನರಿಗೆ ಜ್ಞಾನೋದಯ ಉಂಟು ಮಾಡಲು ಇದು ಅತ್ಯುತ್ತಮ ಮಾರ್ಗವೆಂದು ಭಾವಿಸಿದರು. ಕೋಲ್ಕತ್ತ, ಮಾಯಾಪುರ, ಕೃಷ್ಣನಗರ ಮತ್ತು ಕಟಕ್‌ಗಳಲ್ಲಿ ಮುದ್ರಣಾಲಯಗಳನ್ನು ಸ್ಥಾಪಿಸಿದರು.
ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರರ ನಿರ್ಭಯ ಬೋಧನೆಯಿಂದಾಗಿ ಲಕ್ಞಾಂತರ ಜನರು ಜಾತಿ, ಮತ ಮತ್ತು ರಾಷ್ಟ್ರೀಯತೆಯ ಭೇದವಿಲ್ಲದೆ ಕೃಷ್ಣಭಕ್ತಿಯನ್ನು ಆಚರಿಸುತ್ತಿದ್ದಾರೆ, ಶ್ರೀ ಚೈತನ್ಯರ ಬೋಧನೆಗಳನ್ನು ಅನುಸರಿಸುತ್ತಿದ್ದಾರೆ ಮತ್ತು ವೃಂದಾವನ, ಮಾಯಾಪುರಗಳಲ್ಲಿನ ಪವಿತ್ರ ಧಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಶ್ರೀ ಚೈತನ್ಯರು ಸ್ವತಃ ಪರಮಪ್ರಭು ಎನ್ನುವುದನ್ನು ಸ್ಥಾಪಿಸಿದ ಈ ಶ್ರೇಷ್ಠ ಆಚಾರ್ಯರಿಗೆ ಮಹಾಪ್ರಭುಗಳ ಭಕ್ತರು ಸದಾ ಋಣಿ.






Leave a Reply