ಮೂರ್ಖರಿಗೆ ನೊಬೆಲ್‌ ಪ್ರಶಸ್ತಿ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರ ನಡುವೆ ಜಿನೀವಾದಲ್ಲಿ, ಜೂನ್‌, 1974ರಲ್ಲಿ, ಬೆಳಗಿನ ವಾಯು ಸಂಚಾರದ ಸಂದರ್ಭದಲ್ಲಿ ನಡೆದ ಸಂವಾದ.

ಶ್ರೀಲ ಪ್ರಭುಪಾದ : ತಾವು ಸ್ವತಂತ್ರರು ಎಂದು  ಜಗತ್ತಿನ ಎಲ್ಲ ದೊಡ್ಡ ನಾಯಕರು ಮೂರ್ಖತನದಿಂದ ಯೋಚಿಸುತ್ತಿದ್ದಾರೆ. ಅವರು ತನ್ನ ಮಾಲೀಕನ ನಿಯಂತ್ರಣಕ್ಕೆ ಒಳಪಟ್ಟಿದ್ದೇನೆ ಎಂಬುವುದನ್ನು ಮರೆಯುವ ನಾಯಿಗಳಂತೆ. ತಾನು ನಿಯಂತ್ರಣದಲ್ಲಿದ್ದೇನೆ ಎಂದು ನಾಯಿಗೆ ತಿಳಿಯದು. `ನಾನೀಗ ಮುಕ್ತ, ಬೌ  ಬೌ  ಬೌ…’ ಎಂದು ಅದು ಯೋಚಿಸಬಹುದು. ಆದರೆ ಸರಪಳಿಯನ್ನು ಸ್ವಲ್ಪ ಎಳೆದರೆ ಸಾಕು, ಮಾಲೀಕ ಅದರ ಎಲ್ಲ ಮೂರ್ಖತನವನ್ನೂ ಸ್ಥಗಿತಗೊಳಿಸುತ್ತಾನೆ.

ಭಕ್ತ : ಶ್ರೀಲ ಪ್ರಭುಪಾದರೆ, ಮುಖ್ಯವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜನರಿಗೆ ತಾವು ನಿಯಂತ್ರಣದಲ್ಲಿದ್ದೇವೆ ಎಂದು ಯೋಚಿಸುವುದೇ ಇಷ್ಟವಿಲ್ಲ.

ಶ್ರೀಲ ಪ್ರಭುಪಾದ : ಆದುದರಿಂದ ಅವರು ಮೂರ್ಖರು. ಕೃಷ್ಣನು ನೇರವಾಗಿಯೇ ಹೇಳುತ್ತಾನೆ, ಅಹಂಕಾರ ವಿಮೂಢಾತ್ಮಾ ಕರ್ತಾಹಂ ಇತಿ ಮನ್ಯತೇ : “ಮೂರ್ಖರು `ನಾನೇ ಎಲ್ಲವನ್ನೂ ಮಾಡುತ್ತಿದ್ದೇನೆ’ ಎಂದು ಯೋಚಿಸುತ್ತಾರೆ.” ಪ್ರತಿಯೊಂದು ಹೆಜ್ಜೆಯಲ್ಲಿಯೂ ವ್ಯಕ್ತಿ ನಿಯಂತ್ರಣದಲ್ಲಿರುತ್ತಾನೆ. ಆದರೂ `ನಾನೇ ಎಲ್ಲವನ್ನೂ ಮಾಡುತ್ತಿರುವೆ’ ಎಂದು ಭಾವಿಸುತ್ತಾನೆ. ಆದುದರಿಂದಲೇ ಅವನು ಮೂರ್ಖ. ದೊಡ್ಡ ಮನೆ, ಒಳ್ಳೆಯ ರಸ್ತೆ, ಕಾರು ಎಲ್ಲ ಇದ್ದರೂ ಅವನು ಮೂರ್ಖ. ತಾನು ಸ್ವತಂತ್ರ, ತಾನು ಸಾಯುವುದಿಲ್ಲ ಎಂದು ಅವನು ಯೋಚಿಸುತ್ತಾನೆ. ಆದರೆ ಮಾಯೆಯು (ಲೌಕಿಕ ಶಕ್ತಿ) ಅವನ ಮುಖಕ್ಕೆ ಹೊಡೆದ ಕೂಡಲೇ ಅವನು ಸಾಯಲೇ ಬೇಕು. ಅವನು ಪ್ರತಿಭಟಿಸಬಹುದು, “ನನಗೆ ಇನ್ನೂ ವ್ಯವಹಾರ ಮಾಡುವುದಿದೆ” ಎಂದು. ಆದರೆ ಮಾಯಾ ಉತ್ತರ, “ಸ್ವಾಮಿ, ಇಲ್ಲ ಇಲ್ಲ, ನೀವು ತತ್‌ಕ್ಷಣ ಸಾಯಬೇಕು.” ಆದರೂ ತಾನು ನಿಯಂತ್ರಣದಲ್ಲಿ ಇಲ್ಲ ಎಂದು ಅವನು ಯೋಚಿಸುತ್ತಾನೆ. ಇದೆಂತಹ ಅವಿವೇಕತನ?

ಆದುದರಿಂದ, ನಾಗರಿಕತೆಯ ಪ್ರಗತಿ ಎಂದು ಹೇಳಿಕೊಂಡರೂ, `ನಾನು ನಿಯಂತ್ರಣಕ್ಕೆ ಒಳಪಟ್ಟಿದ್ದೇನೆ’ ಎಂಬುವುದನ್ನು ಅರ್ಥಮಾಡಿಕೊಳ್ಳುವುದೇ ನಿಜವಾದ ಅರಿವು. ಅದು ಜ್ಞಾನದ ಆರಂಭ. ಅನಂತರ, ಈ ನಿಯಂತ್ರಣದಿಂದ ಪಾರಾಗುವುದು ಹೇಗೆ ಎಂದು ನಾವು ಯೋಚಿಸಬೇಕು. ಆದರೆ, `ನಾನು ನಿಯಂತ್ರಣಕ್ಕೆ ಒಳಪಟ್ಟಿಲ್ಲ’ ಎಂದು ಯೋಚಿಸಿದರೆ, ನಾವು ಬೆಕ್ಕು ಮತ್ತು ನಾಯಿಗಳಿಗಿಂತ ಉತ್ತಮರಲ್ಲ. ಅದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ. ಪ್ರಕೃತೇಃ ಕ್ರಿಯಮಾಣಾನಿ – ಲೌಕಿಕ ಪ್ರಕೃತಿಯಿಂದ, ಕಿವಿಯನ್ನು ಎಳೆಯಲಾಗುತ್ತದೆ – “ಇಲ್ಲಿ ಬಾ!”

“ಆಗಲಿ, ಸ್ವಾಮಿ.”

“ಬಾ ಇಲ್ಲಿ!”

“ಆಗಲಿ, ಸ್ವಾಮಿ.”

ನೀವು ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ಊಟ ಮಾಡಿದಾಗ, ಮಾಯಾ ನುಡಿಯುತ್ತಾಳೆ, “ನೀವು ಮೂರು ದಿನ ಉಪವಾಸವಿರಬೇಕು.” ಅಂದರೆ ನೀವು ನಿಯಂತ್ರಣದಲ್ಲಿ ಇಲ್ಲವೇ? ಈ ಜನರೆಷ್ಟು ಮೂರ್ಖರು ನೋಡಿ. ಅವರಿಗೆ ನೊಬೆಲ್‌ ಬಹುಮಾನ ಸಿಗುತ್ತಿದೆ.

ಭಕ್ತ : “ಹೌದು, ನಾವೆಲ್ಲ ನಿಯಂತ್ರಣದಲ್ಲಿದ್ದೇವೆ” ಎಂದು ಹೇಳುವುದಕ್ಕೆ ಯಾರಿಗೂ ನೊಬೆಲ್‌ ಬಹುಮಾನ ದೊರೆತಿಲ್ಲ.

ಶ್ರೀಲ ಪ್ರಭುಪಾದ : ಇದು ಏಕೆಂದರೆ, ನೊಬೆಲ್‌ ಬಹುಮಾನ ನೀಡುತ್ತಿರುವವರೂ ಮೂರ್ಖರು. ಇದು ಮೂರ್ಖರ ಮತ್ತು ಅವಿವೇಕಿಗಳ ಸಮಾಜ. ಆದುದರಿಂದ ಇದು `ವಂಚಕರ ಮತ್ತು ವಂಚಿತರ ಸಮಾಜ’ ಎಂದು ನನ್ನ ಗುರು ಮಹಾರಾಜ್‌ ಹೇಳುತ್ತಿದ್ದರು.

ಭಕ್ತ : ಮನೋವಿಜ್ಞಾನಿಗಳ ಬಳಿ ಒಂದು ವಾದ ಅಥವಾ ಸಿದ್ಧಾಂತವಿದೆ – ಜನರು ತಮ್ಮ ಪರಿಸರ, ತಾವು ಬೆಳೆದ ರೀತಿ, ತಮ್ಮ ಪೋಷಕರು ಮತ್ತು ಶಿಕ್ಷಕರು – ಇವುಗಳಿಂದ ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ. ಈ ನಿರ್ಬಂಧದಿಂದಾಗಿ ಅವರು ಒಂದು ನಿರ್ದಿಷ್ಟ ರೀತಿಯಲ್ಲಿ ಯೋಚಿಸುತ್ತಾರೆ ಮತ್ತು ವರ್ತಿಸುತ್ತಾರೆ. ಆದುದರಿಂದ ಕೃಷ್ಣ ಪ್ರಜ್ಞೆಯು ಮತ್ತೊಂದು ರೀತಿಯ ನಿಯಂತ್ರಣ ಎಂದು ಮನೋವಿಜ್ಞಾನಿಗಳು ವಾದಿಸುತ್ತಾರೆ. ಹರೇ ಕೃಷ್ಣ ಮಂದಿರಕ್ಕೆ ಹೋದಾಗ ನೀವು ಒಂದು ವಿಧದ ನಿಯಂತ್ರಣವನ್ನು ಹೊರಗೆ ಬಿಟ್ಟು ಬಿಡುತ್ತೀರಿ, ಆದರೆ ಮತ್ತೊಂದು ರೀತಿಯ ನಿಯಂತ್ರಣವನ್ನು ಪ್ರವೇಶಿಸುತ್ತೀರಿ ಎಂದು ಅವರು ವಾದಿಸುತ್ತಾರೆ.

ಶ್ರೀಲ ಪ್ರಭುಪಾದ : ಹೌದು, ಕೃಷ್ಣ ಪ್ರಜ್ಞೆಯು ನಿಯಂತ್ರಣ ಉಳ್ಳದ್ದು ಎಂಬುವುದನ್ನು ನಾವು ಒಪ್ಪುತ್ತೇವೆ. ನಿಮ್ಮ ಸ್ಥಾನ ಹೇಗೆಂದರೆ ನೀವು ನಿರ್ಬಂಧಕ್ಕೊಳಪಡಲೇ ಬೇಕು. ನೀವು ಭಗವಂತನ ನಿಯಂತ್ರಣಕ್ಕೆ ಒಳಪಟ್ಟರೆ ಅದು ನಿಮ್ಮ ಪರಿಪೂರ್ಣತೆ. ನೀವು ಮಾಯೆಯ ಹಿಡಿತಕ್ಕೆ ಒಳಪಟ್ಟರೆ, ಅದು ನಿಮ್ಮ ಸಂಕಷ್ಟ. ಆದರೆ ಎರಡೂ ಪ್ರಸಂಗಗಳಲ್ಲಿಯೂ ನೀವು ನಿರ್ಬಂಧಕ್ಕೆ ಒಳಗಾಗಿರುತ್ತೀರಿ. ನೀವು ಸ್ವತಂತ್ರರಾಗಿರುವುದು ಸಾಧ್ಯವಿಲ್ಲ.

ದುರದೃಷ್ಟದ ಸಂಗತಿಯೆಂದರೆ ನೀವು ಸ್ವತಂತ್ರರೆಂದು ಯೋಚಿಸುವುದು. ಅದು ನಿಮ್ಮ ಮೂರ್ಖತನ. “ನಾನು ನಿಯಂತ್ರಿಸಲ್ಪಡಬೇಕು. ಅದೇ ನನ್ನ  ಸ್ವರೂಪ ಸ್ಥಿತಿ” ಎಂದು ನೀವು ಸದಾ ಯೋಚಿಸಬೇಕು.  ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ  – “ಶ್ರೇಷ್ಠ ಆತ್ಮಗಳಾದ ಮಹಾತ್ಮರು ನನ್ನ ಆಧ್ಯಾತ್ಮಿಕ ಪ್ರಕೃತಿಯ ರಕ್ಷಣೆಯಲ್ಲಿ ಇರುತ್ತಾರೆ.” ಆದುದರಿಂದ, ಭಕ್ತರು ನಿಯಂತ್ರಣದಲ್ಲಿದ್ದಾರೆ – ಅವರು ಕೃಷ್ಣನ ಆಧ್ಯಾತ್ಮಿಕ ಪ್ರಕೃತಿಯ ರಕ್ಷಣೆಯಲ್ಲಿ ಇದ್ದಾರೆ.

ನಮ್ಮ ಸ್ವಾಭಾವಿಕ ಸ್ಥಾನವು ನಿರ್ಬಂಧಕ್ಕೆ ಒಳಪಟ್ಟಿರಬೇಕೆಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು.

ಹಾಗಾದರೆ, ನಾವು ಯಾರಿಂದ ನಿಯಂತ್ರಣಕ್ಕೆ ಒಳಪಡಬೇಕು?

ಕೃಷ್ಣ ಹೇಳುತ್ತಾನೆ, ಸರ್ವ ಧರ್ಮಾನ್‌ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ  : “ನನ್ನ ನಿಯಂತ್ರಣಕ್ಕೆ ಒಳಗಾಗು. ನನಗೆ ಶರಣಾಗು. ಆಗ ನೀನು ಸುಖದಿಂದಿರುವೆ.”  `ನಾವು ನಿಯಂತ್ರಣದಲ್ಲಿರಬಾರದು’ ಎಂದು ಯಾರು ಯೋಚಿಸುತ್ತಿದ್ದಾರೋ ಅವರು ಮಾಯೆಯಲ್ಲಿ (ಭ್ರಮೆ) ಇರುತ್ತಾರೆ.  ವೇದಗಳು ಹೇಳುತ್ತವೆ, ನಿತ್ಯೋ ನಿತ್ಯಾನಾಂ ಚೇತನಶ್ಚೇತನಾನಾಂ ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್‌ “ಎಲ್ಲ ಶಾಶ್ವತ ಜೀವಿಗಳಲ್ಲಿ ಒಬ್ಬ ಮಾತ್ರ ಉಳಿದೆಲ್ಲರ ಅಗತ್ಯಗಳನ್ನು ಪೂರೈಸುತ್ತಿದ್ದಾನೆ.” ಅಂದರೆ, ಭಗವಂತನು ನಮ್ಮೆಲ್ಲ ಅಗತ್ಯಗಳನ್ನು ಪೂರೈಸುತ್ತಿದ್ದಾನೆ. ಆದುದರಿಂದ ನಾವು ಅವನ ಹತೋಟಿಯಲ್ಲಿದ್ದೇವೆ ಮತ್ತು ಅವನಿಗೆ ಸೇವೆ ಸಲ್ಲಿಸಬೇಕೆಂಬುದನ್ನು ನಾವು ಒಪ್ಪಿಕೊಳ್ಳಬೇಕು. ನೀನು ನನ್ನ ಬದುಕಿನ ಎಲ್ಲ ಅಗತ್ಯಗಳನ್ನು ನೀಡುತ್ತಿರುವೆ ಎಂದು ಭಾವಿಸಿಕೊಳ್ಳೋಣ. ಅದಕ್ಕೆ ಪ್ರತಿಯಾಗಿ ನಾನು ನಿನಗೆ ಸೇವೆ ಸಲ್ಲಿಸಬೇಕಲ್ಲವೇ?

ಯಾರೂ ಕೂಡ ಸ್ವತಂತ್ರರಲ್ಲ. ಅದು ಸಾಧ್ಯವಿಲ್ಲ. ಈ ಮೂರ್ಖರು `ಸಂಪೂರ್ಣ ಸ್ವಾತಂತ್ರ್ಯ’ ಎಂಬ ತಪ್ಪು ಸಿದ್ಧಾಂತವನ್ನು ಮುಂದಿಡುತ್ತಿದ್ದಾರೆ. ವಾಸ್ತವವಾಗಿ ಅವರು ಹೆಚ್ಚು ಹೆಚ್ಚಾಗಿ ಕೃಷ್ಣನ ಬಾಹ್ಯ, ಲೌಕಿಕ ಶಕ್ತಿಯ ಹಿಡಿತಕ್ಕೆ ಒಳಗಾಗುತ್ತಿದ್ದಾರೆ.

ಭಕ್ತ : ಬಾಲ್ಯದಲ್ಲಿ ಅಳವಡಿಸಿದ ತಪ್ಪು ರೀತಿಯ ನಿರ್ಬಂಧಗಳಿಂದ ನಮ್ಮ ಸಮಸ್ಯೆಗಳು ಉದ್ಭವಿಸಿವೆ. ಆದುದರಿಂದ ನಮಗೆ ಬಾಲ್ಯದಲ್ಲಿ ಒಳ್ಳೆಯ ಕುಟುಂಬ, ಒಳ್ಳೆಯ ಶಿಕ್ಷಣ ಮುಂತಾದುವುಗಳ ಅವಕಾಶ ನೀಡಬೇಕು ಎಂಬುವುದು ಅವರ ಅಭಿಪ್ರಾಯ. ಇದರಿಂದ ಮುಂದಿನ ಬದುಕಿನಲ್ಲಿ ಯಾವುದೇ ಕೆಟ್ಟ ಪರಿಣಾಮಗಳಿರುವುದಿಲ್ಲ ಎಂದು ಅವರು ವಾದಿಸುತ್ತಾರೆ.

ಶ್ರೀಲ ಪ್ರಭುಪಾದ : ಅಂದರೆ ಮಗುವಿಗೆ ಉತ್ತಮ ನಿಯಂತ್ರಣದ ಅವಕಾಶ ನೀಡಬೇಕು. ಆದರೆ ಈ ನಿರ್ಬಂಧ ಮುಂದುವರಿಯಲೇ ಬೇಕು, `ಮಗುವಿಗೆ ಸ್ವಾತಂತ್ರ್ಯ ನೀಡಬೇಕು!’ ಎಂದು ಅವರು ಹೇಳಿದರೆ ಅವರು ಮೂರ್ಖರು.

ಭಕ್ತ : ಒಳ್ಳೆಯ ನಿರ್ಬಂಧಗಳಿದ್ದರೆ ಮಗುವಿಗೆ ಸ್ವಾತಂತ್ರ್ಯ ಇರಬಹುದೆಂದು ಅವರು ಹೇಳುತ್ತಾರೆ.

ಶ್ರೀಲ ಪ್ರಭುಪಾದ : ಕೆಟ್ಟ ಅಥವಾ ಒಳ್ಳೆಯ ನಿರ್ಬಂಧ. ಅಂದರೆ ಸ್ವಾತಂತ್ರ್ಯವೆಲ್ಲಿದೆ? ಕೆಟ್ಟ ನಿಯಂತ್ರಣದ ಬದಲು ಅವರು ಒಳ್ಳೆಯ ಹಿಡಿತವನ್ನು ಸೂಚಿಸುತ್ತಿದ್ದಾರೆ. ಆದರೆ ಅದು ಸ್ವಾತಂತ್ರ್ಯವಲ್ಲ. ನೀವು ಸೆರೆಮನೆಯಲ್ಲಿ ಇರುತ್ತೀರೆಂದುಕೊಳ್ಳಿ. ನೀವು ತೀವ್ರ ನಿರ್ಬಂಧದಲ್ಲಿ ಇರುತ್ತೀರಿ. ನಿಮ್ಮನ್ನು ಬಿಡುಗಡೆ ಮಾಡಿದಾಗ ನೀವು ಸ್ವತಂತ್ರರಾದರೂ ನೀವು ಸರ್ಕಾರದ ಕಾನೂನಿನ ನಿಯಂತ್ರಣಕ್ಕೆ ಒಳಪಟ್ಟಿರುತ್ತೀರಿ. ನೀವು ಸ್ವತಂತ್ರರಲ್ಲ. ನೀವು ಕೆಟ್ಟ ನಿಯಂತ್ರಣದಿಂದ ಒಳ್ಳೆಯ ನಿಯಂತ್ರಣಕ್ಕೆ ಹೋಗಿರುತ್ತೀರಿ, ಅಷ್ಟೇ. ನೀವು ಕಾನೂನನ್ನು ಗೌರವಿಸಿದರೆ ನೀವು ಒಳ್ಳೆಯ ನಾಗರಿಕ, ಮತ್ತು ಶಾಂತಿಯುತವಾಗಿ ಬದುಕಬಹುದು. ಆದರೂ ನೀವು ನಿಯಂತ್ರಣದಲ್ಲೇ ಇರುತ್ತೀರಿ. ನೀವು ಸ್ವತಂತ್ರರೆಂದು ಹೇಗೆ ಭಾವಿಸುತ್ತೀರಾ? ಅದು ಮೂರ್ಖತನ.

ಭಕ್ತ : ಅಂದರೆ ಜನರಿಗೆ ಒಳ್ಳೆಯ ನಿರ್ಬಂಧ ನೀಡಬೇಕೆಂಬುದು ನಿಮ್ಮ ಅಭಿಪ್ರಾಯ?

ಶ್ರೀಲ ಪ್ರಭುಪಾದ : ಇಲ್ಲ, ಒಳ್ಳೆಯ ನಿಯಂತ್ರಣವಲ್ಲ, ಅತ್ಯುತ್ತಮ ನಿರ್ಬಂಧ. ಅತ್ಯುತ್ತಮ ನಿಯಂತ್ರಣವೆಂದರೆ ಕೃಷ್ಣನ ನಿರ್ಬಂಧದಲ್ಲಿ ರಕ್ಷಣೆ ಪಡೆಯುವುದು. ಅದು ಅತ್ಯುತ್ತಮ ಬದುಕಿನ ರೀತಿ. ಲೌಕಿಕ ಶಕ್ತಿಯ ಹಿಡಿತದಿಂದ ಮುಕ್ತರಾಗಲು ಅದೊಂದೇ ಮಾರ್ಗ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi