ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರ ಮಧ್ಯೆ ಮಾರ್ಚ್ 1975ರಲ್ಲಿ, ಡಲ್ಲಾಸ್ನಲ್ಲಿ ನಡೆದ ಸಂವಾದ.
ಶ್ರೀಲ ಪ್ರಭುಪಾದ : ದೈವ ಪ್ರಜ್ಞೆ ಬೆಳಸುವುದೇ ಮಾನವ ಜೀವನದ ಉದ್ದೇಶ. ಆದರೆ ಉನ್ನತ ಎಂದು ಕರೆಸಿಕೊಳ್ಳುವ ಈ ಆಧುನಿಕ ನಾಗರಿಕತೆಯಲ್ಲಿ ಜನರು ದೈವೀ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಬದಲು ನಗ್ನತೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಹೌದಲ್ಲವೆ? ಇರಲಿ, ಪ್ರಕೃತಿಯೇ ಅವರನ್ನು ಶಿಕ್ಷಿಸುತ್ತದೆ, “ಸರಿ, ನಿನಗೆ ನಗ್ನವಾಗಿರಬೇಕೆಂಬ ಇಚ್ಛೆಯೆ? ಹಾಗಾದರೆ, ಮರವಾಗು ಮತ್ತು ಐದು ಸಾವಿರ ವರ್ಷಗಳವರೆಗೆ ನಗ್ನವಾಗಿ ನಿಂತಿರು.” ಕೆಲವು ಮರಗಳು ಐದು ಸಾವಿರ ವರ್ಷ ಜೀವಿಸಿರುತ್ತವೆ. ನಾನು ಸ್ಯಾನ್ ಫ್ರಾನ್ಸಿಸ್ಕೋ ಸಮೀಪದ ಪಾರ್ಕ್ನಲ್ಲಿ ನೋಡಿರುವೆ.

ಭಕ್ತ : ನಾವು ಉಡುಪು ಧರಿಸಬೇಕೆಂದು ಭಗವಂತ ಬಯಸಿದ್ದರೆ ಅವನು ನಮ್ಮನ್ನು ವಸ್ತ್ರ ಸಹಿತ ಹುಟ್ಟಿಸುತ್ತಿದ್ದ ಎಂದು ಅವರು ವಾದಿಸುತ್ತಾರೆ.
ಶ್ರೀಲ ಪ್ರಭುಪಾದ : ಇಲ್ಲಿ, ಐಹಿಕ ಲೋಕದಲ್ಲಿ, ನಿಮಗೆ ಏನು ಬೇಕಾದರೂ ನೀವು ಅದಕ್ಕಾಗಿ ದುಡಿಯಬೇಕು. ವಸ್ತುಗಳು ಲಭ್ಯವಿರಬಹುದು, ಆದರೆ ನೀವು ಅದಕ್ಕಾಗಿ ದುಡಿಯಬೇಕು. ಆಧ್ಯಾತ್ಮಿಕ ಲೋಕದಲ್ಲಿ ನಿಮಗೆ ಶ್ರಮಿಸುವ ಅಗತ್ಯವಿಲ್ಲ. ನಿಮಗೆ ನಿಮ್ಮ ಅಗತ್ಯಗಳೆಲ್ಲ ಸ್ವಯಂ ಲಭ್ಯವಾಗಿಬಿಡುತ್ತದೆ. ಆಧ್ಯಾತ್ಮಿಕ ಮತ್ತು ಐಹಿಕ ಬದುಕಿನ ನಡುವಣ ವ್ಯತ್ಯಾಸಗಳಲ್ಲಿ ಇದೂ ಒಂದು.

ಭಕ್ತ : ಅವರದೇ ತರ್ಕದಲ್ಲಿ ನಾವು ನಗ್ನರ ಜೊತೆ ವಾದಿಸಬಹುದು, ನಾವು ಆಹಾರ ತೆಗೆದುಕೊಳ್ಳಬೇಕೆಂದು ಭಗವಂತ ಬಯಸಿದ್ದರೆ ಅವನು ನಮ್ಮನ್ನು ಆಹಾರದೊಂದಿಗೆ ಸೃಷ್ಟಿಸುತ್ತಿದ್ದ. ನೀವು ನಿಮ್ಮ ಆಹಾರಕ್ಕಾಗಿ ಶ್ರಮಿಸಬೇಕಾಗಿರುವಂತೆ ನಿಮ್ಮ ವಸ್ತ್ರಗಳಿಗೂ ದುಡಿಯಬೇಕಾಗಿದೆ.
ಶ್ರೀಲ ಪ್ರಭುಪಾದ : ನಾವೇಕೆ ದುಡಿಯಬೇಕೆಂದು ವಿಷ್ಣು ಪುರಾಣ ವಿವರಿಸುತ್ತದೆ,
ವಿಷ್ಣು ಶಕ್ತಿಃ ಪರಾ ಪ್ರೋಕ್ತಾ ಕ್ಷೇತ್ರಜ್ಞಾಖ್ಯಾ ತಥಾ ಪರಾ ।
ಅವಿದ್ಯಾ ಕರ್ಮ ಸಂಜ್ಞಾನ್ಯ ತೃತೀಯ ಶಕ್ತಿರ್ ಇಶ್ಯತೇ ॥
ಇದು ಭಗವಂತನ ಶಕ್ತಿಯ ಮೂರು ವಿಭಾಗಗಳ ನಿರೂಪಣೆ. ಒಂದು ಶಕ್ತಿಯು ಆಂತರಿಕ, ಆಧ್ಯಾತ್ಮಿಕ. ಮತ್ತೊಂದು ತಟಸ್ಥ ಶಕ್ತಿ, ಜೀವಿಗಳು. ಅವರು ಕೂಡ ಅಧ್ಯಾತ್ಮರು. ಮೂರನೆಯದು ಬಾಹ್ಯ, ಲೌಕಿಕ ಶಕ್ತಿ. ಇಲ್ಲಿ ಮೌಢ್ಯ ಮತ್ತು ದುಡಿಮೆ ಇದೆ. ಲೌಕಿಕ ಜಗತ್ತಿನಲ್ಲಿ ಎಲ್ಲರೂ ಮೂರ್ಖರು ಮತ್ತು ಅವರು ಕೆಲಸ ಮಾಡಲೇ ಬೇಕು.

ಆದುದರಿಂದ ಆಧುನಿಕ ನಾಗರಿಕತೆಯ ಜನರು ತಮ್ಮ ದುಡಿಮೆಯನ್ನು ಸುಮ್ಮನೆ ಹೆಚ್ಚಿಸಿಕೊಂಡಿದ್ದಾರಷ್ಟೆ. ಅವರು ಇದನ್ನು ನಾಗರಿಕತೆ ಎನ್ನುತ್ತಾರೆ. ವಾಸ್ತವವಾಗಿ ಇದೊಂದು ಸೆರೆಮನೆಯಂತೆ, ಅಲ್ಲಿ ನೀವು ದುಡಿಯಬೇಕು. ಸತತವಾಗಿ ಕೆಲಸ ಮಾಡುವುದೇ ನಾಗರಿಕತೆ ಎಂದು ಅವರು ಯೋಚಿಸುತ್ತಿದ್ದಾರೆ. ಹೀಗಾಗಿ ಅವರು ಹೆಚ್ಚು ಕೆಲಸವನ್ನು ಸೃಷ್ಟಿಸಿಕೊಂಡಿದ್ದಾರೆ. ಬೆಳಗ್ಗೆ 5 ರಿಂದ ರಾತ್ರಿ 10 ಗಂಟೆವರೆಗೆ ಅವರು ಕೆಲಸ ಮಾಡುತ್ತಲೇ ಇರುತ್ತಾರೆ. ಈ ದುಡಿಮೆಯು ಶಿಕ್ಷೆ ಎಂದೇ ಅವರಿಗೆ ತಿಳಿಯದು. ಮೌಢ್ಯದ ಕಾರಣ ದುಡಿಮೆಯೇ ಜೀವನ ಎಂದು ಭಾವಿಸುತ್ತಾರೆ. ಕೆಲಸ ಕಡಮೆ ಮಾಡಿ ಸಾಕ್ಷಾತ್ಕಾರಕ್ಕೆ ಸಮಯ ಉಳಿತಾಯ ಮಾಡುವ ಬದಲು ಅವರು ಕೆಲಸ ಹೆಚ್ಚು ಮಾಡಿಕೊಂಡು ಬದುಕನ್ನು ಜಟಿಲಗೊಳಿಸುತ್ತಾರೆ. ಇದನ್ನು ಅವರು ನಾಗರಿಕತೆಯ ಮುನ್ನಡೆ ಎಂದು ಕರೆಯುತ್ತಾರೆ. ವಾಸ್ತವವಾಗಿ ಅದು ಅವಿದ್ಯಾ, ಮೌಢ್ಯ.
ಕೆಲಸ ಮಾಡಬಾರದು, ಆದರೆ ವಸ್ತುಗಳನ್ನು ಸರಾಗವಾಗಿ ಪಡೆಯಬೇಕು ಎಂಬುವುದೇ ನಮ್ಮ ಪ್ರವೃತ್ತಿ. ಆದುದರಿಂದಲೇ ನಾವು ಕೆಲವು ಬಾರಿ ಈ ಪ್ರಶ್ನೆಯನ್ನು ಕೇಳುತ್ತೇವೆ, “ನಾವು ವಸ್ತ್ರ ತೊಡಬೇಕೆಂದು ಭಗವಂತ ಬಯಸಿದ್ದರೆ, ನಮ್ಮನ್ನೇಕೆ ಉಡುಪು ಸಹಿತ ಸೃಷ್ಟಿಸಲಿಲ್ಲ?” ಈ ಪ್ರಶ್ನೆಯು ನಮಗೆ ಕೆಲಸ ಮಾಡುವುದು ಬೇಕಾಗಿಲ್ಲ ಎಂಬುವುದನ್ನೇ ಹೇಳುತ್ತದೆ ಮತ್ತು ಅದು ಆಧ್ಯಾತ್ಮಿಕ ಪ್ರವೃತ್ತಿ. ಅಂದರೆ ನಮ್ಮೆಲ್ಲ ಅಗತ್ಯಗಳು ಸ್ವಯಂ ಲಭ್ಯವಾಗಬೇಕು. ಆದುದರಿಂದ ವ್ಯಕ್ತಿಯು ಶ್ರೀಮಂತನಾದ ಕೂಡಲೇ ಕೆಲಸ ಮಾಡುವುದನ್ನು ಬಿಟ್ಟುಬಿಡುತ್ತಾನೆ. ತನಗಾಗಿ ಬೇರೆಯವರು ದುಡಿಯುವಂತೆ ಮಾಡುತ್ತಾನೆ. ಆದುದರಿಂದ ಕೆಲಸದಿಂದ ನಿವೃತ್ತನಾಗುವುದೇ ಮಾನವನ ಪ್ರವೃತ್ತಿ.
ಭಕ್ತ : ಅನೇಕ ಮಂದಿ ನಿಮ್ಮ ವಾದವನ್ನು ಒಪ್ಪುವುದಿಲ್ಲ. ನಿರುದ್ಯೋಗವು ಅತ್ಯಂತ ಕೆಟ್ಟದೆಂದು ಅವರು ಭಾವಿಸುತ್ತಾರೆ.
ಶ್ರೀಲ ಪ್ರಭುಪಾದ : ಮಾನವನು ಕತ್ತೆಯಂತೆ ದಿನವಿಡೀ ದುಡಿಯಬೇಕಾಗಿಲ್ಲ. ನಿಜವಾದ ನಾಗರಿಕತೆ ಎಂದರೆ ಕೆಲಸ ಕಡಮೆ, ಸಮಯ ಉಳಿತಾಯ ಮತ್ತು ಆಧ್ಯಾತ್ಮಿಕ ಜೀವನವನ್ನು ಬೆಳೆಸಿಕೊಳ್ಳುವುದು. ಹಂದಿ ಅಥವಾ ನಾಯಿಯಂತೆ ಇಂದ್ರಿಯ ಸುಖಕ್ಕಾಗಿ ಕೆಲಸ ಮಾಡುವುದು ನಾಗರಿಕತೆಯಲ್ಲ. ಅಂತಹ ಬದುಕಿನ ರೀತಿಯನ್ನು ಶ್ರೀಮದ್ ಭಾಗವತದಲ್ಲಿ (5.5.1) ಖಂಡಿಸಲಾಗಿದೆ, ನಾಯಂ ದೇಹೋ ದೇಹ ಭಾಜಾಂ ನೃಲೋಕೇ ಕಷ್ಟಾನ್ ಕಾಮಾನ್ ಅರ್ಹತೇ ವಿಡ್ ಭುಜಾಂ ಯೇ. ನಾಯಿ ಮತ್ತು ಹಂದಿಗಳಂತೆ ಇಂದ್ರಿಯ ತುಷ್ಟಿಗಾಗಿ ಕಷ್ಟಪಡುವುದು ಮಾನವ ಜೀವನದ ಉದ್ದೇಶವಲ್ಲ. ಮಾನವನ ಜೀವನ ಇರುವುದು ತಪಸ್ಸಿಗಾಗಿ. ತಪಸ್ಸೇಕೇ? ನಿಮ್ಮ ಅಸ್ತಿತ್ವ ಶುದ್ಧಿಗಾಗಿ (ಯೇನ ಸತ್ತ್ವಂ ಶುದ್ಯೇದ್). ಆಗ ನಿಮಗೆ ಅನಂತವಾದ ಆನಂದ ಲಭಿಸುತ್ತದೆ (ಯಸ್ಮಾದ್ ಬ್ರಹ್ಮ ಸೌಖ್ಯಂ ತ್ವ ಅನಂತಂ).
ನಾವೆಲ್ಲರೂ ಕೂಡ ಅಂತಹ ಅಸೀಮಿತ ಆನಂದವನ್ನು ಬಯಸುತ್ತೇವೆ. ಆದರೆ ಈ ಲೌಕಿಕ ಜಗತ್ತಿನಲ್ಲಿ ಅದು ಸಾಧ್ಯವಿಲ್ಲ. ದುರ್ದೈವವೆಂದರೆ ಜನರಿಗೆ ಇದು ಗೊತ್ತಿಲ್ಲ. ಆದುದರಿಂದ ಅವರು ಅಲ್ಪ ಸಂತೋಷಕ್ಕಾಗಿ ಕಷ್ಟಪಟ್ಟು ದುಡಿಯುತ್ತಾರೆ. ಹಂದಿಯು ಮಲವನ್ನು ಹುಡುಕುತ್ತಾ ದಿನವಿಡೀ ದುಡಿಯುತ್ತದೆ. ಸ್ವಲ್ಪ ಮಲ ದೊರೆತರೂ ಸಾಕು, ಅದು ಶಕ್ತಿಶಾಲಿಯಾಗಿಬಿಡುತ್ತದೆ. ಅನಂತರ ಹೆಣ್ಣು ಹಂದಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತದೆ. ಅದಕ್ಕೆ ಅದು ತಾಯಿ, ಸೋದರಿ, ಮಗಳು ಎಂಬ ಭೇದವಿಲ್ಲ. ಯಾರಾದರೂ ಸರಿ. ಇದು ಹಂದಿ ಬದುಕು.

ಆದುದರಿಂದ ಮಾನವ ಜೀವನವು ಮಲ ತಿನ್ನುವ ಹಂದಿಯನ್ನು ಅನುಕರಿಸುವುದಲ್ಲ. ಆದರೆ ಆಧುನಿಕ ಸಮಾಜದ ಜನರು ಅವುಗಳನ್ನು ಅನುಕರಣೆ ಮಾಡುತ್ತಾರೆ : “ನಾವು ಕಷ್ಟಪಟ್ಟು ಕೆಲಸ ಮಾಡೋಣ, ನಮಗಿಷ್ಟಬಂದದನ್ನು ತಿನ್ನೋಣ, ಸಾಧ್ಯವಾದಷ್ಟೂ ಲೈಂಗಿಕ ಕ್ರಿಯೆಯಲ್ಲಿ ತೊಡಗೋಣ.” ಅವರಿಗೆ ಆಹಾರದ ವಿಷಯದಲ್ಲಿ ಯಾವುದೇ ಭೇದವಿಲ್ಲ : ಅಯೋಗ್ಯವಾದುದೆಲ್ಲವನ್ನೂ ತಿನ್ನುತ್ತಾರೆ. ಈ ರೀತಿ ಅವರು ಶಕ್ತಿವಂತರಾಗುತ್ತಾರೆ ಮತ್ತು ತಮ್ಮ ಸೋದರಿ ಅಥವಾ ಮಗಳ ಜೊತೆಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ಇದು ಮಾನವ ಜೀವನವಲ್ಲ ಎಂದು ಭಾಗವತವು ಎಚ್ಚರಿಸುತ್ತದೆ. ಆದರೆ ವಾಸ್ತವವಾಗಿ ಇದು ಅನೇಕ ಆಧುನಿಕ `ನಾಗರಿಕ’ ಜನರ ಬದುಕಾಗಿದೆ.
ಭಕ್ತ : ಆದರೆ ಜನರು ಕಷ್ಟಪಟ್ಟು ದುಡಿಯದಿದ್ದರೆ ಹೇಗೆ ಮುಂದುವರಿಯುವುದು? ಆರ್ಥಿಕ ಬಿಕ್ಕಟ್ಟು ಉಂಟಾಗುವುದಿಲ್ಲವೆ?
ಶ್ರೀಲ ಪ್ರಭುಪಾದ : ಆಗುವುದಿಲ್ಲ. ನಾವು ನಮ್ಮ ಬದುಕನ್ನು ಹೇಗೆ ತೃಪ್ತಿಕರವಾಗಿ ರೂಪಿಸಿಕೊಳ್ಳಬಹುದು ಎಂಬುದನ್ನು ಶ್ರೀ ಕೃಷ್ಣನು ವಿವರಿಸಿದ್ದಾನೆ : ಸ್ವಲ್ಪ ಆಹಾರ ಧಾನ್ಯ, ತರಕಾರಿ ಮತ್ತು ಹಣ್ಣುಗಳನ್ನು ಉತ್ಪಾದಿಸಿ, ಹಸುವಿನಿಂದ ಹಾಲು ಪಡೆಯಿರಿ. ನಿಮ್ಮ ಎಲ್ಲ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನೀವು ಧಾನ್ಯ ಅಥವಾ ತರಕಾರಿಯನ್ನು ಉತ್ಪಾದಿಸದಿದ್ದರೂ ಹಾಲು ಹಣ್ಣಿನಿಂದ ಬದುಕಬಹುದು. ಆದರೆ ಆಧುನಿಕ ಮಾನವನು ಹಾಲಿನ ಮೂಲವನ್ನೇ ಕಿತ್ತುಕೊಳ್ಳುತ್ತಾನೆ – ಹಸುವಿನ ಗಂಟಲು ಕೊಯ್ದು ಮಾಂಸವನ್ನು ಭಕ್ಷಿಸುತ್ತಾನೆ. ಇದೇನಾ ನಾಗರಿಕತೆ?

ಅವರೆಲ್ಲ ಬುದ್ಧಿಯನ್ನು ಪಾಪದ ಬದುಕಿಗೆ ಬಳಸಲಾಗುತ್ತಿದೆ. ಅವರಲ್ಲಿ ಒಳ್ಳೆಯ ಬುದ್ಧಿ , ಜಾಣತನವಿದೆ. ಆದರೆ ಅದು ಪಾಪ ಕೃತ್ಯಗಳಿಗೆ ಉಪಯೋಗವಾಗುತ್ತಿದೆ.
ಆದುದರಿಂದ ಅವರು ತೀವ್ರ ಪರಿಣಾಮ ಎದುರಿಸುತ್ತಾರೆ – ಯುದ್ಧ, ಕ್ಷಾಮ, ಭೂ ಕಂಪನ ಇತ್ಯಾದಿ.






Leave a Reply