ಕೃಷ್ಣ ಪಾಕಶಾಲೆ
– ಎಸ್.ವಿ.ಗಾಯತ್ರಿ ಶೆಣೈ
ಅವಲಕ್ಕಿ ಪಾಯಸ

ಬೇಕಾಗುವ ಪದಾರ್ಥ:
ಗಟ್ಟಿ ಅವಲಕ್ಕಿ – 500 ಗ್ರಾಂ
ಅಕ್ಕಿ – 150 ಗ್ರಾಂ
ಸಕ್ಕರೆ / ಬೆಲ್ಲ – 500 ಗ್ರಾಂ (ಅಥವಾ ರುಚಿಗೆ ತಕ್ಕಷ್ಟು)
ತುಪ – 3 ದೊಡ್ಡ ಚಮಚ
ಏಲಕ್ಕಿ ಪುಡಿ – 11/2 ಚಿಕ್ಕ ಚಮಚ
ದ್ರಾಕ್ಷಿ – 25 ಗ್ರಾಂ
ಗೋಡಂಬಿ – 25 ಗ್ರಾಂ
ಮಾಡುವ ವಿಧಾನ : ಮೊದಲು ಅಕ್ಕಿಯನ್ನು ತೊಳೆದು ನೀರಿನಲ್ಲಿ ಸುಮಾರು 1 ಗಂಟೆ ನೆನೆಸಿಡಿ. ಅವಲಕ್ಕಿಯನ್ನು ಆರಿಸಿ, 2 ದೊಡ್ಡ ಚಮಚ ಬಿಸಿ ತುಪ್ಪ ಕಾಯಿಸಿ ಅದರಲ್ಲಿ ಹದವಾಗಿ ಹುರಿದು ತೆಗೆದಿಡಿ. ಅನಂತರ ದಪ್ಪತಳದ ಪಾತ್ರೆಯಲ್ಲಿ ಸುಮಾರು 1 1/2 ಲೀಟರ್ನಷ್ಟು ನೀರು ಕಾಯಿಸಿ.
ಕಾದ ನೀರಿಗೆ ಸಕ್ಕರೆ ಬೆಲ್ಲ ಪುಡಿ ಮಾಡಿ ಹಾಕಿ. ಬೆಲ್ಲ ಕುದಿಬರುತ್ತಿರುವಾಗ ಅವಲಕ್ಕಿಯನ್ನು ಅದಕ್ಕೆ ಬೆರೆಸಿ ಸಣ್ಣ ಉರಿಯಲ್ಲಿ ಬೇಯಿಸಿ. ಅವಲಕ್ಕಿ-ಬೆಲ್ಲ ಬೇಯುವುದರೊಳಗೆ ತೆ೦ಗಿನಕಾಯಿ ತುರಿಯನ್ನು ರುಬ್ಬಿಕೊಳ್ಳಿ, ಮಿಕ್ಸಿ/ಒರಳಿನಿಂದ ತೆಂಗಿನಹಾಲು ತೆಗೆಯುವ ಮೊದಲು ನೆನೆಸಿದ ಅಕ್ಕಿಯನ್ನು ಇದರೊಂದಿಗೆ ಹಾಕಿ ಸಣ್ಣ ರವೆಯ ಹದಕ್ಕೆ ರುಬ್ಬಿ.
ಈ ಮಿಶ್ರಣವನ್ನು ಬೇಯುತ್ತಿರುವ ಅವಲಕ್ಕಿಯೊಂದಿಗೆ ಸೇರಿಸಿ ತಳಹತ್ತದಂತೆ ನೋಡಿಕೊಳ್ಳಿ. ಪದಾರ್ಥಗಳೆಲ್ಲವೂ ಚೆನ್ನಾಗಿ ಬೆಂದ ಅನಂತರ ಏಲಕ್ಕಿ ಪುಡಿಯನ್ನು ಬೆರೆಸಿ. ಕೊನೆಯಲ್ಲಿ ಉಳಿದ ತುಪ್ಪ ಬಿಸಿಮಾಡಿ ಅದರಲ್ಲಿ ದಾಕ್ಷಿ, ಗೋಡಂಬಿ ಮತ್ತು ಬಾದಾಮಿ ಚೂರುಗಳನ್ನು ಹುರಿದು ಪಾಯಸಕ್ಕೆ ಸೇರಿಸಿ ಅವಲಕ್ಕಿ ಪಾಯಸವನ್ನು ಸುಧಾಮಸಖನಿಗೆ ಅರ್ಪಿಸಿ ಸೇವಿಸುವುದನ್ನು ಮರೆಯದಿರಿ.
ಹೆಸರು ಬೇಳೆ ಪಾಯಸ

ಬೇಕಾಗುವ ಪದಾರ್ಥ :
ಹೆಸರುಬೇಳೆ – 250 ಗ್ರಾಂ
ಸಕ್ಕರೆ – 350 ಗ್ರಾಂ ( ಅಥವಾ ರುಚಿಗೆ ತಕ್ಕಷ್ಟು)
ತೆಂಗಿನಕಾಯಿ – 1 (ಒಂದು)
ಗಟ್ಟಿ ಹಾಲು (ಕಂಡೆನ್ಸ್ಡ್ ಮಿಲ್ಕ್) – 1/4 ಲೀಟರ್
ಏಲಕ್ಕಿ ಪುಡಿ – 1 ಚಿಕ್ಕ ಚಮಚ
ಕೇಸರಿ ದಳ – 1/2 ಚಿಕ್ಕ ಚಮಚ
ತುಪ್ಪ – 2 ದೊಡ್ಡ ಚಮಚ
ಗೋಡಂಬಿ – 50 ಗ್ರಾಂ
ಮಾಡುವ ವಿಧಾನ : ಮೊದಲು ಹೆಸರುಬೇಳೆಯನ್ನು ದಪ್ಪತಳದ ಬಾಣಲೆಯಲ್ಲಿ 1 ಚಮಚ ತುಪ್ಪದಲ್ಲಿ ನಸುಗಂಪು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಸುಮಾರು 1-1 1/4 ಲೀಟರ್ನಷ್ಟು ನೀರನ್ನು ದಪ್ಪತಳದ ಪಾತ್ರೆಯಲ್ಲಿ ಕಾಯಿಸಿ, ಕುದಿ ಬರುವಾಗ ಹೆಸರು ಬೇಳೆಯನ್ನು ಹಾಕಿ ಬೇಯಿಸಿ.
ಹೆಸರು ಬೇಳೆ ಬೇಯುತ್ತಾ ಬರುವಾಗ ಸಕ್ಕರೆ ಸೇರಿಸಿ ಸಣ್ಣ ಉರಿಯಲ್ಲಿಡಿ. ಅನಂತರ ತೆಂಗಿನಕಾಯಿ ತುರಿಯನ್ನು ರುಬ್ಬಿಕೊಂಡು ಬೆಂದ ಹೆಸರು ಬೇಳೆಗೆ ಸೇರಿಸಿ. ಇದಕ್ಕೆ 10 ನಿಮಿಷ ಕುದಿ ಬಂದ ನಂತರ ಗಟ್ಟಿ ಹಾಲು ಮತ್ತು ಏಲಕ್ಕಿ ಪುಡಿ ಬೆರೆಸಿ ಮತ್ತೆ 3-4 ನಿಮಿಷ ಕುದಿಸಿ ಪಾಯಸ ತಳಹತ್ತದಂತೆ ನೋಡಿಕೊಳ್ಳಿ.
ಕೊನೆಯಲ್ಲಿ ಒಗ್ಗರಣೆ ಪಾತ್ರೆಯಲ್ಲಿ ಉಳಿದ ತುಪ್ಪ ಬಿಸಿ ಮಾಡಿ ಅದರಲ್ಲಿ ಗೋಡಂಬಿ ಚೂರುಗಳನ್ನು ಹುರಿದು ಪಾಯಸಕ್ಕೆ ಸೇರಿಸಿ, ಮೇಲಿನಿಂದ ಕೇಸರಿ ದಳವನ್ನು ಉದುರಿಸಿ, ಪರಿಮಳಯುಕ್ತವಾದ ಹೆಸರು ಬೇಳೆ ಪಾಯಸವನ್ನು ಹದವಾಗಿ ಬಿಸಿಯಿರುವಾಗಲೇ ಪನ್ನಗಶಯನನಿಗರ್ಪಿಸಿ, ನೀವೂ ಸ್ವೀಕರಿಸಿ.
ಗೋಧಿ ಪಾಯಸ

ಬೇಕಾಗುವ ಪದಾರ್ಥ :
ದಪ್ಪಗೋಧಿ ತರಿ (ಬ್ರೋಕನ್ ವೀಟ್) – 250 ಗ್ರಾಂ
ತೆಂಗಿನಕಾಯಿ – 1 (ಒಂದು)
ಬೆಲ್ಲ – 400 ಗ್ರಾಂ
ಏಲಕ್ಕಿ ಪುಡಿ – 2 ಚಿಕ್ಕ ಚಮಚ
ತುಪ್ಪ – 2 ದೊಡ್ಡ ಚಮಚ
ದ್ರಾಕ್ಷಿ – 25 ಗ್ರಾಂ
ಗೋಡಂಬಿ – 25 ಗ್ರಾಂ
ಮಾಡುವ ವಿಧಾನ : ಗೋಧಿಯನ್ನು ದಪ್ಪತಳದ ಬಾಣಲೆಯಲ್ಲಿ ಹುರಿದಿಟ್ಟುಕೊಳ್ಳಿ. ತೆ೦ಗಿನ ತುರಿಯನ್ನು ರುಬ್ಬಿಟ್ಟುಕೊಳ್ಳಿ. ಅನಂತರ ದಪ್ಪತಳದ ಪಾತ್ರೆಯಲ್ಲಿ ಸುಮಾರು 1 – 1 1/2 ಲೀಟರ್ ನಷ್ಟು ನೀರನ್ನು ಕುದಿಸಿ ಬೆಲ್ಲ ಪುಡಿ ಮಾಡಿ ಹಾಕಿ. ಬೆಲ್ಲ ಕರಗಿದನಂತರ ಹುರಿದ ಗೋಧಿ ತರಿಯನ್ನು ಸೇರಿಸಿ.
ಗೋಧಿ ತರಿಯು ಚೆನ್ನಾಗಿ ಬೆಂದ ಅನಂತರ ತೆಂಗಿನ ಹಾಲು ಮತ್ತು ಏಲಕ್ಕಿ ಪುಡಿ ಸೇರಿಸಿ ಕುದಿಸಿ. ಕೊನೆಗೆ ಒಗ್ಗರಣೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ ಚೂರುಗಳನ್ನು ಹುರಿದು ಪಾಯಸಕ್ಕೆ ಸೇರಿಸಿ. ಬೇಕಾದರೆ ಪಾಯಸ ಸ್ವಲ್ಪ ಗಟ್ಟಿಯಾಗಿ ಬರಲು ಸ್ವಲ್ಪ ಅಕ್ಕಿತರಿಯನ್ನು ಸೇರಿಸಬಹುದು. ಈಗ ಗೋಧಿ ಪಾಯಸ ಸಿದ್ಧ. ಗೋಧಿ ಪಾಯಸವನ್ನು ಗೋಪಾಲನಿಗರ್ಪಿಸಿ ಸೇವಿಸಿ.






Leave a Reply