ಪಾಯಸ ವಿಶೇಷಗಳು
– ಎಸ್.ವಿ.ಗಾಯತ್ರಿ ಶೆಣೈ
ಸಿಹಿಗೆಣಸಿನ ಪಾಯಸ

ಬೇಕಾಗುವ ಪದಾರ್ಥಗಳು:
ಹಾಲು – 1 ಲೀಟರ್
ಸಿಹಿಗೆಣಸು – 1 (ಹದಗಾತ್ರದ್ದು)
ಸಕ್ಕರೆ – 1/3 ಬಟ್ಟಲು
ಏಲಕ್ಕಿಪುಡಿ – ¼ ದೊಡ್ಡ ಚಮಚ
ತುಪ್ಪ – 1 ದೊಡ್ಡ ಚಮಚ
ಒಣದ್ರಾಕ್ಷಿ – 1 ದೊಡ್ಡ ಚಮಚ
ಬಾದಾಮಿ ಚೂರು – 1 ದೊಡ್ಡ ಚಮಚ
ಪಿಸ್ತಾ ಚೂರು – 1 ದೊಡ್ಡ ಚಮಚ
ಶಾವಿಗೆ (ವರ್ಮಿಸೆಲಿ) – 1 ದೊಡ್ಡ ಚಮಚ
ಮಾಡುವ ವಿಧಾನ: ಸಿಹಿಗೆಣಸನ್ನು ತೊಳೆದು ಕುಕ್ಕರಿನಲ್ಲಿ ಅದು ಮುಳುಗುವಷ್ಟು ನೀರು ಬೆರೆಸಿ ಬೇಯಿಸಿ. (2-3 ವಿಷಲ್ ಬಂದರೆ ಸಾಕು) ಬೆಂದ ಸಿಹಿಗೆಣಸಿನ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಕಾಯಿಸಿ ಅದರಲ್ಲಿ ಶಾವಿಗೆ ಹಾಕಿ.
ತುಸು ಕೆಂಪಗೆ ಹುರಿಯಿರಿ. ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಕಾಯಿಸಿ, ಶಾವಿಗೆಗೆ ಬೆರೆಸಿ. ಗಂಟು ಬಾರದಂತೆ ಕೈಯಾಡಿಸುತ್ತಿರಿ. 7-8 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ತಣ್ಣಗಾದ ಸಿಹಿಗೆಣಸಿನ ತುಂಡು, ಏಲಕ್ಕಿಪುಡಿ ಮತ್ತು ಸಕ್ಕರೆಯನ್ನು ಬೆರೆಸಿ.
ಸಕ್ಕರೆ ಎಲ್ಲಾ ಕರಗಿದ ಅನಂತರ ಸಣ್ಣ ಉರಿಯಲ್ಲಿ 2-3 ನಿಮಿಷ ಕುದಿಸಿ. ಸ್ವಲ್ಪ ತುಪ್ಪ ಕಾಯಿಸಿ ಬಾದಾಮಿ, ಪಿಸ್ತಾ, ದ್ರಾಕ್ಷಿ ಚೂರುಗಳನ್ನು ಹುರಿದು ಹಾಕಿ. ಸಿದ್ಧವಾದ ಸಿಹಿಗೆಣಸಿನ ಪಾಯಸವನ್ನು ಕೃಷ್ಣನಿಗೆ ಸಮರ್ಪಿಸಿ ಸ್ವೀಕರಿಸಿ ಇತರರಿಗೂ ಹಂಚಿ.
ಕಡಲೆಬೇಳೆ – ಗೋಡಂಬಿ ಪಾಯಸ

ಬೇಕಾಗುವ ಪದಾರ್ಥಗಳು:
ಕಡಲೆಬೇಳೆ – 1 ಬಟ್ಟಲು
ಗೋಡಂಬಿ – ½ ಬಟ್ಟಲು
ಕೊಬ್ಬರಿತುರಿ – ½ ಬಟ್ಟಲು
ತುಪ್ಪ – ½ ದೊಡ್ಡ ಚಮಚ
ಬೆಲ್ಲ – 1 ಬಟ್ಟಲು
ಏಲಕ್ಕಿಪುಡಿ – ½ ಚಿಕ್ಕ ಚಮಚ
ಒಣದ್ರಾಕ್ಷಿ – 1 ದೊಡ್ಡ ಚಮಚ
ಬಾದಾಮಿ ಚೂರು – 1 ದೊಡ್ಡ ಚಮಚ
ಮಾಡುವ ವಿಧಾನ: ಕಡಲೆಬೇಳೆಯನ್ನು ಚೆನ್ನಾಗಿ ಹುರಿಯಿರಿ. ಕಡಲೆಬೇಳೆ ಹಾಗೂ ಗೋಡಂಬಿಯನ್ನು ಕುಕ್ಕರ್ ಪಾತ್ರೆಯಲ್ಲಿ ಹಾಕಿ, ಅದಕ್ಕೆ ಬೇಕಾಗುವಷ್ಟು ನೀರು ಸೇರಿಸಿ ಬೇಯಿಸಿ. (2-3 ವಿಷಲ್ ಬಂದರೆ ಸಾಕು).
ಬೆಲ್ಲ ಕುಟ್ಟಿ ಪುಡಿಮಾಡಿ ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಸುಮಾರು 1 ಲೀಟರ್ ನೀರಿನೊಂದಿಗೆ ತೆಳುಪಾಕ ಮಾಡಿಕೊಳ್ಳಿ. ಬೆಂದು ತಣ್ಣಗಾದ ಕಡಲೆಬೇಳೆ ಹಾಗೂ ಗೋಡಂಬಿಯನ್ನು ಒಟ್ಟಿಗೆ ರುಬ್ಬಿ ಬೆಲ್ಲದ ಪಾಕಕ್ಕೆ ಬೆರೆಸಿ.
ಕಡಲೆಬೇಳೆ ಹೂರಣ ಪಾಕದಲ್ಲಿ ಗಂಟು ಕಟ್ಟದಂತೆ ಆಗಾಗ ಕೈಯಾಡಿಸಿ. ಪಾಯಸ ಸುಮಾರು 7-8 ನಿಮಿಷ ಕುದಿದ ಅನಂತರ ಅದಕ್ಕೆ ಏಲಕ್ಕಿಪುಡಿ, ಕೊಬ್ಬರಿತುರಿ ಸೇರಿಸಿ.
ಪಾಯಸ ಒಲೆಯಿಂದ ಇಳಿಸುವ ಮೊದಲು ಅದಕ್ಕೆ ದ್ರಾಕ್ಷಿ ಬಾದಾಮಿ ಚೂರುಗಳನ್ನು ತುಪ್ಪದಲ್ಲಿ ಹುರಿದು ಹಾಕಿ. ಘಮಘಮಿಸುವ ಕಡಲೆ-ಗೋಡಂಬಿ ಪಾಯಸವನ್ನು ಘನಮಹಿಮನಿರ್ಗಪಿಸಿ ಸ್ವೀಕರಿಸಿ.
ಅವಲಕ್ಕಿ ಪಾಯಸ

ಬೇಕಾಗುವ ಪದಾರ್ಥಗಳು:
ಗಟ್ಟಿ ಅವಲಕ್ಕಿ – 1 ಬಟ್ಟಲು
ಬೆಲ್ಲದ ಪುಡಿ – 2 ಬಟ್ಟಲು
ತೆಂಗಿನಕಾಯಿ – 1
ಅಕ್ಕಿ (ನೆನೆಸಿದ್ದು) – 2 ದೊಡ್ಡ ಚಮಚ
ಏಲಕ್ಕಿಪುಡಿ – ½ ಚಿಕ್ಕ ಚಮಚ
ತುಪ್ಪ – ½ ದೊಡ್ಡ ಚಮಚ
ಗೋಡಂಬಿ ಚೂರು – 1 ದೊಡ್ಡ ಚಮಚ
ಮಾಡುವ ವಿಧಾನ: ಅವಲಕ್ಕಿಯನ್ನು ಆರಿಸಿ ಬಾಣಲೆಯಲ್ಲಿ ಹಾಕಿ ಹುರಿದುಕೊಳ್ಳಿ. ತೆಂಗಿನಕಾಯಿ ತುರಿದು ಅದರೊಂದಿಗೆ ಅರ್ಧ ತಾಸು ನೆನೆಸಿದ ಅಕ್ಕಿಯನ್ನು ಬೆರೆಸಿ ರುಬ್ಬಿ. ಒಂದು ದಪ್ಪತಳದ ಪಾತ್ರೆಯಲ್ಲಿ ಸುಮಾರು ಒಂದೂವರೆ ಲೀಟರ್ನಷ್ಟು ನೀರಿಟ್ಟು ಕುದಿಸಿ, ಬೆಲ್ಲದ ಪುಡಿ ಹಾಕಿ.
ಬೆಲ್ಲ ಕರಗಿದ ಅನಂತರ ಅದರಲ್ಲಿ ಹುರಿದ ಅವಲಕ್ಕಿ ಹಾಕಿ ಬೇಯಿಸಿ. ಅವಲಕ್ಕಿ ಬೆಂದ ಅನಂತರ ರುಬ್ಬಿದ ತೆಂಗಿನ ರಸವನ್ನು ಹಾಕಿ. ರುಬ್ಬಿದ ಅಕ್ಕಿ ಬೆರೆಸಿರುವುದರಿಂದ ಬೇಗ ಗಂಟು ಕಟ್ಟುತ್ತದೆ ಹಾಗಾಗಿ ತಳ ಹತ್ತದಂತೆ ಕೈಯಾಡಿಸಿ.
ತುಪ್ಪ ಕಾಯಿಸಿ ಗೋಡಂಬಿ ಚೂರುಗಳನ್ನು ಹುರಿದು ಪಾಯಸಕ್ಕೆ ಸೇರಿಸಿ. 2-3 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಕೊನೆಯಲ್ಲಿ ಏಲಕ್ಕಿಪುಡಿ ಸೇರಿಸಿ. ಈಗ ಅವಲಕ್ಕಿ ಪಾಯಸ ಸಿದ್ಧ. ಸುಧಾಮ ಪ್ರಿಯನಿಗೆ ಸಮರ್ಪಿಸಿ ನೀವೂ ಸ್ವೀಕರಿಸಿ.






Leave a Reply