ಹೆಸರು ಕೇಳಿದೊಡನೆ ಬಾಯಲ್ಲಿ ನೀರೂರಿಸುವ ಪಾಯಸವನ್ನು ಮೆಚ್ಚದವರಿಲ್ಲ. ಯಾವುದಾದರೂ ಹಬ್ಬ ಹಾಗೂ ಸಂತೋಷದ ದಿನ ಬಂದರೆ ಪಾಯಸವನ್ನು ಮಾಡುತ್ತಾರೆ. ಒಬ್ಬೊಬ್ಬರು ಒಂದೊಂದು ರೀತಿ ಪಾಯಸವನ್ನು ಮಾಡುತ್ತಾರೆ. ಅದರಲ್ಲಿ ಶ್ಯಾವಿಗೆ ಪಾಯಸ, ಹೆಸರುಬೇಳೆ, ರವೆ, ಗೋಧಿ, ಸಬ್ಬಕ್ಕಿ ಹೀಗೆ ಅನೇಕ ಬಗೆಯ ಪಾಯಸಗಳನ್ನು ಮಾಡಬಹುದು. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಡ್ರೈ ಫ್ರೂಟ್ಸ್ ಪಾಯಸ

ಬೇಕಾಗುವ ಪದಾರ್ಥಗಳು :
ಒಣ ಖರ್ಜೂರ – 10
ಬಾದಾಮಿ – 10
ಪಿಸ್ತಾ – 10
ಗೋಡಂಬಿ – 15
ಒಣದ್ರಾಕ್ಷಿ – 1 ಚಮಚ
ಅಂಜೂರ – 5
ಸಕ್ಕರೆ ಬಾದಾಮಿ – 8
ಹಾಲು – 3 ಕಪ್
ಕೊಬ್ಬರಿ ತುರಿ – 1/2 ಕಪ್
ಸಕ್ಕರೆ – 1 ಕಪ್
ಏಲಕ್ಕಿ ಪುಡಿ – 1/2 ಚಮಚ
ಮಾಡುವ ವಿಧಾನ: ಮೊದಲು ಬಾದಾಮಿ ಮತ್ತು ಅಂಜೂರವನ್ನು ಒಂದು ಗಂಟೆಯ ಕಾಲ ನೀರಿನಲ್ಲಿ ನೆನೆಸಿ, ಬಾದಾಮಿಯ ಸಿಪ್ಪೆ ಬಿಡಿಸಿಕೊಳ್ಳಿ. ಅನಂತರ ಗೋಡಂಬಿ, ಬಾದಾಮಿ, ಪಿಸ್ತಾ, ಅಂಜೂರ, ಕೊಬ್ಬರಿತುರಿ ಎಲ್ಲವನ್ನು ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡಿರುವ ಮಿಶ್ರಣವನ್ನು ಹಾಲಿನಲ್ಲಿ ಬೆರೆಸಿ ಸಕ್ಕರೆ ಹಾಕಿ ಕುದಿಯಲು ಇಡಿ. ಅನಂತರ ಇದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿದರೆ ರುಚಿಯಾದ ಡ್ರೈ ಫ್ರೂಟ್ಸ್ ಪಾಯಸ ಸವಿಯಲು ಸಿದ್ಧ. ಪುಟ್ಟ ಮಕ್ಕಳು ಇಷ್ಟ ಪಟ್ಟು ಈ ಪಾಯಸವನ್ನು ಕುಡಿಯುತ್ತಾರೆ.
ರಂಗು ರಂಗಿನ ಖೀರ್

ಬೇಕಾಗುವ ಪದಾರ್ಥಗಳು :
ಹಾಲು – 4 ಕಪ್
ಹಸಿ ತೆಂಗಿನ ತುರಿ – 1/2 ಕಪ್
ಸಣ್ಣ ರವೆ – 1/2 ಕಪ್
ಖೋವಾ – 1/2 ಕಪ್
ಮೈದಾ – 2 ಚಮಚ
ಕಾರ್ನ್‌ಫ್ಲೋರ್ – 1 ಚಮಚ
ಸಕ್ಕರೆ – 1 ಕಪ್
ಇನ್‌ಸ್ಟೆಂಟ್ ಬಾದಾಮಿ ಪುಡಿ – 1/4 ಕಪ್
ತುಪ್ಪ – 2 ಚಮಚ
ಫುಡ್ ಕಲರ್ಸ್ – ಕೇಸರಿ, ಹಸಿರು ಬಣ್ಣ
ಮಾಡುವ ವಿಧಾನ : ಒಂದು ಬಾಣಲೆಗೆ ಎರಡು ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ರವೆ ಮತ್ತು ಮೈದಾವನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿಯಬೇಕು. ಅನಂತರ ಇದನ್ನು ಕೆಳಗಿಳಿಸಿ ಬಿಸಿಯಿರುವಾಗಲೇ 3/4 ಕಪ್ ಸಕ್ಕರೆ, ಸಣ್ಣಗೆ ಗ್ರೈಂಡ್ ಮಾಡಿದ ತೆಂಗಿನತುರಿ, ಖೋವಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅನಂತರ ಇದನ್ನು ಒಲೆಯ ಮೇಲೆ ಇರಿಸಿ ಗಟ್ಟಿಯಾಗುವವರೆಗೂ ಕೈಯಾಡಿಸುತ್ತಿರಬೇಕು. ಅನಂತರ ಇದನ್ನು ಕೆಳಗಿಳಿಸಿ ಆರಲುಬಿಡಿ.
ಆರಿದ ಬಳಿಕ ಇದನ್ನು ಮೂರು ಭಾಗಗಳಾಗಿ ಮಾಡಿಕೊಳ್ಳಿ. ಒಂದು ಭಾಗಕ್ಕೆ ಕೇಸರಿ ಬಣ್ಣ, ಮತ್ತೊಂದು ಭಾಗಕ್ಕೆ ಹಸಿರು ಬಣ್ಣ ಹಾಕಿ ಬೇರೆ ಬೇರೆಯಾಗಿ ಬೆರೆಸಿ. ಮೂರನೆಯದನ್ನು ಹಾಗೆ ಬಿಡಿ. ಇದನ್ನು ಕೈಗೆ ತುಪ್ಪ ಸವರಿಕೊಂಡು ಚಿಕ್ಕ ಚಿಕ್ಕ ಗೋಲಿಗಾತ್ರದ ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ. ಉಂಡೆಗಳು ಗಟ್ಟಿಯಾಗಿದ್ದರೆ ಚೆನ್ನ.
ನಾಲ್ಕು ಕಪ್ ಹಾಲನ್ನು ತೆಗೆದುಕೊಂಡು ಕಾಯಲು ಇಡಿ. ಇದು ಮೂರು ಕಪ್ ಆಗುವಂತೆ ಕಾಯಿಸಿ. ಇದಕ್ಕೆ ಕಾರ್ನ್‌ಫ್ಲೋರ್‌ನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಹಾಕಿ. ಆಗ ಹಾಲು ಗಟ್ಟಿಯಾಗುತ್ತದೆ. ಅನಂತರ ಇದಕ್ಕೆ ಉಳಿದ ಸಕ್ಕರೆ, ಬಾದಾಮಿ ಪುಡಿ ಹಾಕಿ. ಇದರ ಮೇಲೆ ಬಣ್ಣ ಬಣ್ಣದ ಉಂಡೆಗಳನ್ನು ಹಾಕಿ ಕುದಿಸಿ. ಒಂದು ಕುದಿ ಬಂದ ಅನಂತರ ಕೆಳಗಿಳಿಸಿ ಆರಿದ ಅನಂತರ ಈ ಖೀರನ್ನು ಗಾಜಿನ ಲೋಟಗಳಲ್ಲಿ ಹಾಕಿಕೊಡಿ. ಖೀರಿನಲ್ಲಿ ಉಂಡೆಗಳು ಆಕರ್ಷಕವಾಗಿ ಕಾಣುವುದರಿಂದ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ.
ಹೆಸರು ಬೇಳೆ ಪಾಯಸ

ಬೇಕಾಗುವ ಪದಾರ್ಥಗಳು :
ಹೆಸರು ಬೇಳೆ – 1 ಕಪ್
ಹಸಿ ತೆಂಗಿನ ತುರಿ – 3/4 ಕಪ್
ಗಸಗಸೆ – 2 ಚಮಚ
ಪುಡಿ ಬೆಲ್ಲ – 1 ಕಪ್
ಗೋಡಂಬಿ ಚೂರು – 1 ಚಮಚ
ಒಣದ್ರಾಕ್ಷಿ – 1/2 ಚಮಚ
ಏಲಕ್ಕಿಪುಡಿ – 1/2 ಚಮಚ
ತುಪ್ಪ – 2 ಚಮಚ
ಮಾಡುವ ವಿಧಾನ : ಮೊದಲು ಹೆಸರು ಬೇಳೆಯನ್ನು ತುಪ್ಪದಲ್ಲಿ ಪರಿಮಳ ಬರುವವರೆಗೂ ಕೆಂಪಗೆ ಹುರಿಯಿರಿ. ಇದಕ್ಕೆ ಬೇಕಾಗುವಷ್ಟು ನೀರು ಹಾಕಿ ಬೇಯಿಸಿ. ತೆಂಗಿನ ತುರಿ, ಗಸಗಸೆ, ಏಲಕ್ಕಿ ಪುಡಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಬೆಂದ ಹೆಸರು ಬೇಳೆಗೆ ಸೇರಿಸಿ. ಬೆಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ ಕುದಿಯಲು ಇಡಿ. ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿಯನ್ನು ಹುರಿದು ಹೆಸರು ಬೇಳೆಗೆ ಹಾಕಿ ಕುದಿಸಿದರೆ ಹೆಸರು ಬೇಳೆ ಪಾಯಸ ಸವಿಯಲು ಸಿದ್ಧ.
ಶ್ಯಾವಿಗೆ ಪಾಯಸ

ಬೇಕಾಗುವ ಪದಾರ್ಥಗಳು :
ಶ್ಯಾವಿಗೆ – 1 ಕಪ್
ಹಾಲು – 3 ಕಪ್
ಸಕ್ಕರೆ – 1/2 ಕಪ್
ಇನ್‌ಸ್ಟೆಂಟ್ ಬಾದಾಮಿ ಪುಡಿ – 1/4 ಕಪ್
ಗೋಡಂಬಿ ಚೂರು – 1 ಚಮಚ
ಒಣದ್ರಾಕ್ಷಿ – 1 ಚಮಚ
ಕೇಸರಿದಳ – 10
ತುಪ್ಪ – 5 ಚಮಚ
ಮಾಡುವ ವಿಧಾನ : ಎರಡು ಚಮಚ ತುಪ್ಪವನ್ನು ಬಿಸಿಮಾಡಿ ಅದರಲ್ಲಿ ಶ್ಯಾವಿಗೆಯನ್ನು ಹಾಕಿ ನಸು ಕೆಂಪಗಾಗುವವರೆಗೂ ಹುರಿಯಿರಿ. ದ್ರಾಕ್ಷಿ, ಗೋಡಂಬಿಯನ್ನು ಹುರಿದು ತೆಗೆದಿಟ್ಟುಕೊಳ್ಳಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಕಾಯಲು ಇಡಿ. ಕಾದ ಹಾಲಿಗೆ ತುಪ್ಪದಲ್ಲಿ ಹುರಿದ ಶ್ಯಾವಿಗೆ ಹಾಕಿ ಬೇಯಿಸಿ, ಅನಂತರ ಇದಕ್ಕೆ ಸಕ್ಕರೆ, ಬಿಸಿ ಹಾಲಿನಲ್ಲಿ ನೆನೆಸಿದ ಕೇಸರಿ ದಳ, ದ್ರಾಕ್ಷಿ, ಗೋಡಂಬಿ, ಬಾದಾಮಿ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಕೊನೆಯದಾಗಿ ಉಳಿದ ತುಪ್ಪವನ್ನು ಹಾಕಿ ಕೆಳಗಿಳಿಸಿದರೆ ಶ್ಯಾವಿಗೆ ಪಾಯಸ ತಿನ್ನಲು ಸಿದ್ಧ. ಪಾಯಸ ತುಂಬ ಗಟ್ಟಿಯಾಗಿದ್ದರೆ ಸ್ವಲ್ಪ ಹಾಲನ್ನು ಸೇರಿಸಿ ಸವಿಯಲು ಕೊಡಿ.
ಈ ಉಪಾಯ ನಿಮಗೆ ತಿಳಿದಿರಲಿ
1. ಪಾಯಸ ಮಾಡುವಾಗ ಬೆಲ್ಲವನ್ನು ಪುಡಿಮಾಡಿ ನೀರಿನಲ್ಲಿ ಕರಗಿಸಿ ಅನಂತರ ಶೋಧಿಸಿ ಉಪಯೋಗಿಸಿ.
2. ಮೆತ್ತಗಾದ ಟೊಮೆಟೊವನ್ನು ಗಟ್ಟಿಗೊಳಿಸಬೇಕೆಂದರೆ ಅದನ್ನು ತಣ್ಣೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ರಾತ್ರಿ ಹಾಗೆ ಇಟ್ಟು ಬೆಳಗ್ಗೆ ಬಳಸಿ.
3. ನಿಂಬೆ ಹಣ್ಣಿನಲ್ಲಿ ಹೆಚ್ಚು ರಸ ಸಿಗಬೇಕೆಂದರೆ ಬಳಸುವ ಮುನ್ನ ಅದನ್ನು ಬಿಸಿ ನೀರಿನಲ್ಲಿ 15 ನಿಮಿಷ ಇಟ್ಟು ಅನಂತರ ಉಪಯೋಗಿಸಿ.
4. ಪ್ರೆಷರ್ ಕುಕ್ಕರ್‌ನಲ್ಲಿ ಆಲೂಗಡ್ಡೆ ಬೇಯಿಸುವಾಗ ಅರ್ಧ ಚಮಚ ಉಪ್ಪನ್ನು ಹಾಕಿ ಬೇಯಿಸಿದರೆ ಆಲೂಗಡ್ಡೆ ಸೀಳುವುದಿಲ್ಲ.






Leave a Reply