ಜನರು ಹಂದಿಗಳಂತೆ ಮತ್ತು ನಾಯಿಗಳಂತೆ ಬದುಕುತ್ತಿದ್ದಾರೆ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರೊಡನೆ ಭಕ್ತರ ಸಂವಾದ, ಸ್ಥಳ : ಮುಂಬೈ, 17ನೇ ಏಪ್ರಿಲ್ 1977

ಶ್ರೀಲ ಪ್ರಭುವಾದ : ಈ ದಿನಗಳಲ್ಲಿ ಪ್ರಶಾಂತಚಿತ್ತವುಳ್ಳ ಮನುಷ್ಯರಿರುವುದು ವಿರಳ. ಎಲ್ಲರೂ ಚಪಲಚಿತ್ತವುಳ್ಳ ಹಂದಿ, ನಾಯಿಗಳಂತಾಗಿದ್ದಾರೆ. ಹಂದಿಗಳು ಮತ್ತು ನಾಯಿಗಳಂತೆ ಸದಾ ಚಂಚಲರಾಗಿರುವುದೇ ಇವರ ಕಸುಬಾಗಿದೆ. ಆದರೂ ಹಂದಿಗಳು, ನಾಯಿಗಳಂತೆ ಜೀವಿಸುತ್ತಾ ತಾವು ಬಹಳ ದೊಡ್ಡ ನಾಗರಿಕರು ಎಂದು ಹೇಳಿಕೊಳ್ಳುತ್ತಾರೆ.

ವಿಶ್ಲೇಷಣಾತ್ಮಕವಾಗಿ ನೀವು ಅಧ್ಯಯನ ಮಾಡಿ ನೋಡಿದರೆ ಈ ಹಂದಿ ನಾಯಿಗಳಂತಹ ಪ್ರಾಣಿಜೀವನಕ್ಕೂ, ಆಧುನಿಕ ಮನುಷ್ಯನ ಜೀವನದ ರೂಪುರೇಷೆಗಳಿಗೂ ಏನೊಂದು ವ್ಯತ್ಯಾಸ ಕಾಣಿಸುವುದಿಲ್ಲ. ಈ ನಾಯಿಗಳು ಮತ್ತು ಹಂದಿಗಳು ದಿನವಿಡೀ ವಿಶ್ರಾಂತಿಯೇ ಇಲ್ಲದಂತೆ ಕೆಲಸವನ್ನು ಮಾಡುತ್ತಲೇ ಇರುತ್ತವೆ.

‘ಕಸ್ತಾನ್ ಕಾಮಾನ್ ಅರ್ಹತೆ’ : ಈ ಪ್ರಾಣಿಗಳ ದೇಹದ ಹುಚ್ಚಾಟಿಕೆ ಮತ್ತು ಅವುಗಳ ಕೆಲಸಗಳಿಗೆ ಕೊನೆಯೇ ಇಲ್ಲ. ಈ ಲಂಡನ್, ನ್ಯೂಯಾರ್ಕ್ ನಗರಗಳಲ್ಲಿ ಜನರು ಬೆಳಗಿನ ಜಾವವೇ ಎದ್ದು ಕೆಲಸ ಎಂದು ವಾಹನಗಳನ್ನೇರಿ ಓಡುತ್ತಾರೆ. ಬರೀ ಕೆಲಸಕ್ಕಾಗಿ ಓಡು, ಓಡು, ಓಡು.

ಮನಸ್ಸಿಗೆ ಶಾಂತಿಯಿಲ್ಲದೆ ಅವರಿಗೆ ರಾತ್ರಿಯಿಡಿ ವಿಶ್ರಾಂತಿ ಕೂಡ ದೊರಕುವುದಿಲ್ಲ. ಬರೀ ಆತಂಕದಿಂದಲೇ ಇರುತ್ತಾರೆ. “ನಾನು ಬೆಳಗಿನ ಜಾವ ಸರಿಯಾದ ಸಮಯಕ್ಕೆ ಫ್ಯಾಕ್ಟರಿಗೆ ಹೋಗದಿದ್ದರೆ ನನ್ನ ಸಂಬಳವನ್ನೇ ಕಳೆದುಕೊಳ್ಳಬಹುದು. ನನ್ನ ಪೂರ್ಣ ಆದಾಯಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಅವರು ಸದಾ ಆತ೦ಕಗೊಂಡಿರುತ್ತಾರೆ. ಸದಾ ಸಮುದ್ವಿಗ್ನ ಧೀಯಂ ಇಂದಿನ ದಿನಗಳಲ್ಲಿ ಜನರು ಯಾವಾಗಲೂ ಆತಂಕದಿಂದಲೇ ಕೂಡಿರುತ್ತಾರೆ.

ಏಕೆ ಇಷ್ಟೊಂದು ತರಹದ ಆತಂಕಗಳು? ಆಸದ್ ಗ್ರಹಾತ್ ಅಂದರೆ ಲೌಕಿಕಕ್ಕೆ ಅಂಟಿಕೊಳ್ಳುವುದು, ಐಹಿಕ ದೇಹಕ್ಕೆ ಬಹಳ ಬಲವಾಗಿ ಅಂಟಿಕೊಂಡಿರುವುದು. ನಮ್ಮ ಎಲ್ಲ ಆತಂಕಗಳು ನಮ್ಮ ದೇಹಕ್ಕೆ ಅಂಟಿಕೊಂಡಿರುವುದರಿಂದಲೇ ಆಗಿವೆ.

ಈ ಮಾನವ ಸಮಾಜ ಮತ್ತು ಹಂದಿಗಳ ಸಮಾಜಕ್ಕೂ ಏನಾದರೂ ವ್ಯತ್ಯಾಸವಿದೆಯೇ? ಯೋಚಿಸಿ. ಒಂದು ಹಂದಿಗೆ ಸುಂದರವಾದ ಉಡುಪನ್ನು ಧರಿಸಿ ನೋಡಿದಾಗ ಅದೊಂದು ಮಾನವ ಜೀವಿಯಾಗಿ ಬಿಡುವುದೇ?

ದುರಾದೃಷ್ಟವಶಾತ್, ಇಂದಿನ ದಿನಗಳಲ್ಲಿ ಜನರು ಉಡುಪುಗಳು ಮತ್ತು ಬಾಹ್ಯ ತೋರಿಕೆಯ ಪ್ರದರ್ಶನವನ್ನು ಮಾಡುವುದರಿಂದಲೇ ನಾವು ಮಾನವ ಜೀವಿಗಳು ಎಂದು ತಿಳಿದುಕೊಂಡಂತೆ ಇದೆ. ಈ ಜನರಿಗೆ ನಿಜವಾಗಿಯೂ ನಾಗರಿಕತೆಯೇನೆಂಬುದೇ ತಿಳಿದಿಲ್ಲ. ನಿಜವಾದ ಜೀವನ ಏನೆಂಬುದೇ ತಿಳಿದಿಲ್ಲ.

ನೀವು ಅವರಿಗೆ ಒಂದು ಆಧ್ಯಾತ್ಮಿಕ ಜ್ಞಾನವನ್ನು ಕೊಡಲು ಹೋದರೆ ಅವರು ಹೇಳುತ್ತಾರೆ; “ಓಹ್, ಬಡತನದಿಂದ  ಬಳಲುತ್ತಿರುವ ಭಾರತದಿಂದ ನಾವು ಜ್ಞಾನವನ್ನು ಪಡೆಯಬೇಕೆ?’ ಎಂದು. ಆದರೆ ಅವರಿಗೆ ಗೊತ್ತಿಲ್ಲ ನಾವು ನೀಡುತ್ತಿರುವ ಆಧ್ಯಾತ್ಮಿಕ ಜ್ಞಾನ ಪಾಶ್ಚಿಮಾತ್ಯೀಕರಣ, ಕೈಗಾರಿಕೀಕರಣದಿಂದ ಸೂರೆ ಮಾಡುತ್ತಿರುವ ಇಂಡಿಯಾದಿಂದ ಬಂದಿಲ್ಲ. ಅದು ಪ್ರಾಚೀನವಾದ ಕೃಷ್ಣಪ್ರಜ್ಞೆಯೆಂಬ ಪೂರ್ಣಜ್ಞಾನವು ಹಳ್ಳಿಯಿಂದ ರೂಪುಗೊಂಡು ಸಮೃದ್ಧ ಭಾರತದಿಂದ ಬಂದಿರುವುದು.

ಯಾರು ಈ ಆಧ್ಯಾತ್ಮಿಕ ಜ್ಞಾನವನ್ನು ಬಿಟ್ಟಿರುವರೋ ಅವರು ನಿಜವಾದ ಬಡವರು. ನಾವು ಈ ಆಧ್ಯಾತ್ಮಿಕ ಜ್ಞಾನದ ಕೃಷಿಯನ್ನು ಮಾಡುತ್ತಿರುವವರು, ನಾವು ಬಡವರಲ್ಲ.

ನಮ್ಮ ಪ್ರತಿನಿತ್ಯ ಜೀವನದ ಕೆಲಸ ಕಾರ್ಯಗಳ ದೃಷ್ಟಿಕೋನದಿಂದ ನೋಡಿದಾಗ ಈ ಆಧ್ಯಾತ್ಮಿಕ ಜ್ಞಾನ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಜನರು ಇದನ್ನು ಮೊದಲು ಅರ್ಥಮಾಡಿಕೊಳ್ಳಲಿ. “ನಾನು ಈ ದೇಹವಲ್ಲ”, “ನಾನು ನೈಜೇರಿಯನ್ ಅಲ್ಲ” ಅಥವಾ “ಅಮೆರಿಕನ್ ಅಲ್ಲ” ಅಥವಾ “ಅಲ್ಬೇನಿಯನ್ ಅಲ್ಲ” ಅಥವಾ “ಇರಾನಿಯನ್ ಅಲ್ಲ’ ಅಥವಾ ‘ಅದಲ್ಲ ಇದಲ್ಲ. ನಾನು ಪವಿತ್ರವಾದ ಆತ್ಮ ಸ್ವರೂಪಿ.

ಆ ಪರಮಾತ್ಮನ ಅಂಶವಾಗಿದ್ದೇನೆ.” ನೀವು ಇದನ್ನು ಸಾಧಿಸಿದಾಗ ಮಾತ್ರ ನಿಜವಾಗಿಯೂ ನೀವು ಒಟ್ಟಾಗಿರುವ ಸಂಯುಕ್ತ ರಾಷ್ಟ್ರಗಳು ಎಂದು ಹೇಳಬಹುದು.”

ಇಲ್ಲದಿದ್ದರೆ, ನಿಮ್ಮ ಹತ್ತಿರವಾದರೂ ಏನಿದೆ? ಈ ದೇಹದ ಪ್ರಜ್ಞೆಯಲ್ಲಿಯೇ ಅವಿಶ್ರಾಂತವಾಗಿ ಮುಳುಗಿ ನೀವು ಮೋಸಮಾಡಿಕೊಳ್ಳುತ್ತಿದ್ದೀರಿ – “ನಾನು ಇಂಡಿಯನ್”, ನಾನು ಐರಿಷ್”, “ನಾನು ಲೆಬನೇನಿಯನ್’ ಎಂದು ಈ ಮೂವತ್ತು ವರ್ಷಗಳಿಂದಲೂ ಬೊಗಳುತ್ತಲೇ ಬರುತ್ತಿದ್ದೀರಿ.

ನಿಮ್ಮನ್ನು ನೀವು “ಸಂಯುಕ್ತರು’ ಎಂದು ಹೇಳಿಕೊಳ್ಳುತ್ತಲೇ ಇದ್ದೀರಿ. ಇವರು ನಿಜವಾದ ಸಂಯುಕ್ತತೆಯ ಆಧ್ಯಾತ್ಮಿಕತೆಯ ಗುರುತಿಸುವಿಕೆಯನ್ನೇ ಮರೆತು ಕೇವಲ ಈ ಪದವನ್ನು ಕುರುಡಾಗಿ ಒಪ್ಪಿಕೊಂಡಿದ್ದಾರೆ. ಸರಳ ಮತ್ತು ಶಾಂತಿಯುತ ಜೀವನವನ್ನು ಪಡೆಯುವಲ್ಲಿಯೂ ಇವರು ಅಂಧರಾಗಿದ್ದಾರೆ. ಈ ದೇಹದ ವಿವಿಧ ಮಿಥ್ಯಾ ಕಲ್ಪನೆಗಳನ್ನೇ ಬೊಗಳುತ್ತಾ ಇದ್ದಾರೆ.

ಶಿಷ್ಯ : ಶ್ರೀಲ ಪ್ರಭುಪಾದರೆ, ಈ ಸಂಯುಕ್ತ ರಾಷ್ಟ್ರಗಳಿಗೆ ಸಂಬಂಧಿಸಿದ ಜನರು ಕೇವಲ ಬೊಗಳುವ ನಾಯಿಗಳ ಸಂಘದವರು ಎಂದು ನೀವು ಅನೇಕ ಸಲ ಹೇಳಿದ್ದೀರಿ. ಈಗ ನಿಮ್ಮ ಇಂತಹ ಒಂದು ತೀಕ್ಷ್ಣವಾದ ಹೇಳಿಕೆಗಳನ್ನು ಅವರು ಸದಾ ಆಶ್ಚರ್ಯದಿಂದ ಕೇಳಲು ಸಿದ್ಧರಿರುತ್ತಾರೆ.

ಶ್ರೀಲ ಪ್ರಭುಪಾದ : ಹೌದು, ಇದು ನಿಜವಾಗಿಯೂ ಸತ್ಯ. ಇಂದು ಜನರು ಬೊಗಳುವ ನಾಯಿಗಳಿಗಿಂತ ಭಿನ್ನರಲ್ಲ.

“ನಾನು ಬುಲ್‌ ಡಾಗ್’ ‘ನಾನು ಒಂದು ಟೆರಿಯರ್” “”ನಾನು ಕೊಲ್ಲೀ” (ಸ್ಕಾಟ್‌ಲೆಂಡ್‌ನ ಕುರುಬರ ಬಳಿ ಇರುವ ನಾಯಿ), ”ನಾನು  ಒಬ್ಬ ಗ್ರೀಕ್’, “ನಾನು ಒಬ್ಬ ಫ್ರೆಂಚ್, “ನಾನು ಒಬ್ಬ ಸ್ವೀಡನ್” ಹೀಗೆ ಹೇಳಿಕೊಳ್ಳುತ್ತಾ ತಾವು ನಿಜವಾಗಿಯೂ ಏನೆಂಬುದನ್ನೇ ಅಪಾರ್ಥ ಮಾಡಿಕೊಂಡಿದ್ದಾರೆ. ತಮ್ಮಲ್ಲಿರುವ ಅಪರಿಮಿತವಾದ ಶಕ್ತಿ, ಹಣವನ್ನು ಸಮಯವನ್ನು ಅದು, ಇದು ಎಂದು ಕೇವಲ ಬೊಗಳುವುದಕ್ಕೋಸ್ಕರ ಅಥವಾ ದೇಹಕ್ಕೆ ಸಂಬಂಧಿಸಿದಂತೆ ವ್ಯಯ ಮಾಡುತ್ತಿದ್ದಾರೆ.

ಆದರೆ ಈ ರೀತಿ ಬೊಗಳುವಿಕೆಯಲ್ಲಿ ಪರಿಣಾಮ ಏನೂ ಇಲ್ಲ. ಯಾವುದೇ ಸಂಯುಕ್ತವೂ ಅಲ್ಲಿ ಇಲ್ಲ. ಆದರೆ ಪ್ರತಿದಿವಸವೂ ನಾವು ಅಲ್ಲಿ ಒಂದು ಹೊಸ ರಾಷ್ಟ್ರೀಯ ಧ್ವಜವನ್ನು ಕಾಣುತ್ತಿದ್ದೇವೆ. “ಭರಮ್ ಉದ್ವಾಹತೋ ವಿಮುಧಾನ್” ಈ ಏಕತೆಗೋಸ್ಕರ ಒಂದು ದೊಡ್ಡ ಆಡಂಬರದ ಯೋಜನೆಯನ್ನು ಮಾಡಿಕೊಂಡಿದ್ದಾರೆ. ಆದರೆ ಅದರ ಪರಿಣಾಮ ಏನೂ ಇಲ್ಲ. ಹೀಗೆ ಈ ಮೋಸಗಾರರು (ಮೂಢಾತ್ಮರು) ಸುಮ್ಮನೆ ಬಹಳ ದೊಡ್ಡದೊಡ್ಡ ತಯಾರಿ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಫಲಿತಾಂಶ ಮಾತ್ರ ಏನೂ ಇಲ್ಲ.

ನಿಸ್ಸಂಶಯವಾಗಿ ಇವರು ಸೋಲುತ್ತಲೇ ಇದ್ದರೂ ಅದನ್ನು ಪರಿಗಣಿಸದೇ ಈ ಮೋಸಗಾರರು ತಮ್ಮ ಮೂರ್ಖತನಕ್ಕೆ ಅಂಟಿಕೊಂಡು – “ಓಹ್, ಸಂಯುಕ್ತ ರಾಷ್ಟ್ರಗಳು ಏಕತೆಗಾಗಿ ಎಂತಹ ವೈಭವಯುತ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಹೇಳಿಕೊಳ್ಳುತ್ತಾರೆ. ಇಲ್ಲಿ ಏಕತೆ ಎಂಬುದೇ ಇಲ್ಲ. ಆದರೆ ಈ ಭವನ ಮಾತ್ರ 3 ಲಕ್ಷ ಧ್ವಜಗಳಿಂದ ಅಲಂಕೃತಗೊಂಡಿದೆ.”

ಅಲ್ಲಿನ ಸಮಸ್ಯೆಯೆಂದರೆ ಅವರು ಕೇವಲ ರಾಷ್ಟ್ರಧ್ವಜಕ್ಕೆ ಗೌರವದಿಂದ ನಮಸ್ಕರಿಸುತ್ತಿದ್ದಾರೆಯೇ ಹೊರತು ಭಗವಂತನಿಗಲ್ಲ. ಕೃಷ್ಣನು ಹೇಳುತ್ತಿದ್ದಾನೆ – ಮಾಮ್ ನಮಸ್ಕುರು “ನೀವೆಲ್ಲರೂ ನಿಜವಾಗಿಯೂ ಆಧ್ಯಾತ್ಮಿಕ ಜೀವಿಗಳು. ನೀವು ನನ್ನನ್ನು ಪ್ರಾರ್ಥಿಸಿ ಸದಾ ಸಂತೋಷದಿಂದ ಇರಿ.” ಆದರೆ ಅವರು ಯೋಚಿಸುತ್ತಿದ್ದಾರೆ, ಇಲ್ಲ ನಾವು ‘ಫ್ಲಾಗ್ ನಮಸ್ಕುರು’ ಧ್ವಜಕ್ಕೇ ನಮಸ್ಕಾರ ಮಾಡುತ್ತೇವೆ. ನೋಡಿ, ಇವರೆಂಥ ಮೋಸಗಾರರು, ಬರೀ ಧ್ವಜಕ್ಕೆ ನಮಸ್ಕರಿಸಿ ಅವರು ಏನನ್ನು ಪಡೆಯಬಲ್ಲರು?

ಶಿಷ್ಯ:  ಅವರು ಮುಂದಿನ ಜನ್ಮದಲ್ಲಿ ಆಧ್ಯಾತ್ಮಿಕ ಪ್ರಪಂಚಕ್ಕೆ ಹೋಗುವ ಬದಲು ತಮ್ಮ ರಾಷ್ಟ್ರದಲ್ಲಿಯೇ ಜಿರಳೆಗಳಾಗಿ ಹುಟ್ಟಬಹುದು.

ಶ್ರೀಲ ಪ್ರಭುಪಾದರು:  ಅವರ ರಾಷ್ಟ್ರದ ಜನರೇ ಅವರನ್ನು ಕೊಲ್ಲುತ್ತಾರೆ. “ಅಯ್ಯೋ, ಸ್ನೇಹಿತರೇ ನೀವು ನನ್ನನ್ನು ಕೊಲ್ಲಬೇಡಿ. ನಾನು ನಿಮ್ಮ ರಾಷ್ಟ್ರದವನೆ, ನಾನು ನಿಮ್ಮ ರಾಷ್ಟ್ರದವನೇ, ನಾನು ಕೂಡ ನಿಮಗೆ ಸಂಬಂಧಪಟ್ಟವನೇ.”

“ಈ ಜಿರಳೆ, ನೊಣಗಳ ಬಗ್ಗೆ ಯಾರು ಏಕೆ ಯೋಚಿಸಬೇಕು? ನಾವು ನಿಮ್ಮನ್ನು ಕೊಲ್ಲುತ್ತೇವೆ. ಅಮೆರಿಕಾದ ಜಿರಳೆಗಳೆ ನಿನ್ನ ಬಗ್ಗೆ ನಾವೇಕೆ ಕಾಳಜಿ ವಹಿಸಬೇಕು?

“ಇಲ್ಲ, ನೀವು ನನ್ನನ್ನು ಅರ್ಥಮಾಡಿಕೊಂಡಿಲ್ಲ. ನಾನು ನನ್ನ ಹಿಂದಿನ ಜನ್ಮದಲ್ಲಿ ಒಬ್ಬ ಕಟ್ಟಾ ರಾಷ್ಟ್ರವಾದಿಯಾಗಿದ್ದೆ. ಆಗ ಐಹಿಕ ಮಿಥ್ಯಾಗ್ರಹಿಕೆಗಳಿಂದ ಮತ್ತು ಅತಿಯಾದ ಆಸೆಗಳಿಂದ ನಾನು ಈಗ ಜಿರಳೆಯ ದೇಹವನ್ನು ಪಡೆದಿದ್ದೇನೆ. ದಯವಿಟ್ಟು ನನ್ನನ್ನು ಕೊಲ್ಲಬೇಡಿ.”

ನೀನು ಈಗ ಜಿರಳೆಯಾಗಿದ್ದೀಯಾ ಅದರಲ್ಲೂ ಅಮೇರಿಕಾದ ಜಿರಳೆ. ಹಾಗಂತ ನಿನ್ನ ಬಗ್ಗೆ ಯಾರು ಕಾಳಜಿ ತೆಗೆದುಕೊಳ್ಳುತ್ತಾರೆ? ನಿನಗೋಸ್ಕರ ಯಾರಾದರೂ ವಿಶೇಷವಾದ ಕಾಳಜಿ ತೋರಿಸುವ ಅಗತ್ಯವಾದರೂ ಏನು? ಆದರೆ ದೇಹಾಂತರ ಪ್ರಾಪ್ತಿಃ “ಈ ದೇಹದ ನಂತರ ನೀನು ಇನ್ನೊಂದು ದೇಹಧಾರಣೆ ಮಾಡಲೇಬೇಕು. ಅದನ್ನು ನೀನು ನಿರಾಕರಿಸಲು ಸಾಧ್ಯವೇ ಇಲ್ಲ.

ನಿನ್ನ ರಾಷ್ಟ್ರೀಯ ಪ್ರೇಮ ನಿನಗೋಸ್ಕರ ಏನು ಒಳಿತು ಮಾಡಿದೆ? ಈಗ ನಾನೊಬ್ಬ ದೊಡ್ಡ ರಾಷ್ಟ್ರೀಯವಾದಿಯೆಂದುಕೊಂಡರೂ ನೀನು ಇನ್ನೊಂದು ದೇಹವನ್ನು ಒಪ್ಪಿಕೊಳ್ಳಲೇಬೇಕು. ಈ ಜಿರಳೆ ಆಗದೇ ಇರುವ ಹಾಗೆ ನಿನ್ನನ್ನು ನೀನು ಹೇಗೆ ರಕ್ಷಿಸಿಕೊಳ್ಳ ಬಲ್ಲೆ? ದುರಾದೃಷ್ಟವಶಾತ್‌ ನಿನ್ನ ಮುಂದಿನ ದೇಹ ಪ್ರಾಪ್ತಿ ನಿನ್ನ ಆಯ್ಕೆಯಲ್ಲಿ ಇಲ್ಲ.

ಅದು ಬೇರೊಬ್ಬನ ಕೈಗಳಲ್ಲಿದೆ. ಕರ್ಮಣಾ ದೈವ-ನೇತ್ರೇನ ಈ ದೇಹದಿಂದ ಆಚರಿಸಲ್ಪಡುವ ನಿನ್ನ ಕರ್ಮಗಳೇ ಪ್ರಕೃತಿಯ ಕ್ರಮದಲ್ಲಿ ನಿನಗೆ ಮುಂದೆ ಸೂಕ್ತವಾದ ದೇಹಪ್ರಾಪ್ತಿಯನ್ನು ಪಡೆಯುವಂತೆ ಮಾಡುತ್ತದೆ. ಈ ಪ್ರಕೃತಿಯ ಮೇಲ್ವಿಚಾರಣೆಯಲ್ಲಿ ನೀನು “ಅಮೇರಿಕನ್‌ ಶ್ರೀಮಂತ ಕುಟುಂಬದಲ್ಲಿ ನಾನೊಂದು ಸುಂದವಾದ ದೇಹವನ್ನು ಪಡೆದು ಹುಟ್ಟುವಂತೆ ಮಾಡು” ಎಂದು ಹೇಳಲು ಸಾಧ್ಯವಿಲ್ಲ.

ತಾಯಿ ಪ್ರಕೃತಿ ಹೇಳುತ್ತದೆ – “ಇಲ್ಲ, ಇಲ್ಲ” “ಈಗ ನಿನ್ನಲ್ಲಿ ಅಂತಹದೊಂದು ಅಮೂರ್ತಶಕ್ತಿಯು ಇಲ್ಲ. ಅದು ನಿನ್ನಲ್ಲಿ ಇತ್ತು, ಆಗನ ನಿನಗೊಂದು ಮನುಷ್ಯ ಜನ್ಮವೂ ಇತ್ತು. ಈಗ ನೀನು ನನ್ನ  ಅಮೂರ್ತಶಕ್ತಿಯನ್ನು ಸ್ವೀಕಾರ ಮಾಡಬೇಕು. ನಿನ್ನ ಪ್ರಾರಬ್ಧ ಕರ್ಮಗಳಿಗೆ ಅನುಗುಣವಾಗಿ ನಾನು ನಿನಗೆ ಹೊಸ ದೇಹವನ್ನು ಕೊಡುತ್ತೇನೆ. ನೀನು ಹೇಗೆ ಐಹಿಕ ಗುಣಗಳನ್ನು ಸೋಂಕಿಸಿಕೊಂಡಿದ್ದೀಯೋ ಹಾಗೆಯೇ ನಿನಗೆ ನಾನು ಕರುಣಿಸುತ್ತೇನೆ.”

ಆದುದರಿಂದ ಈ ಆ‍‍ಧ್ಯಾತ್ಮಿಕ ಜ್ಞಾನವೆಂಬುದನ್ನು ಶ್ರೇಷ್ಠತಮ ವಿಜ್ಞಾನವಾಗಿದೆ. ಆದರೆ ದುಃಖಕರ ವಿಷಯವೆಂದರೆ ಬಹಳ ದೊಡ್ಡ ವಿದ್ಯಾವಂತರೂ ಮತ್ತು ನಮ್ಮ ನಾಯಕರು ಅದನ್ನು ತಿಳಿದುಕೊಂಡಿಲ್ಲ. ತಮ್ಮ ಜೀವನ ಮಾರ್ಗವನ್ನೇ ದೋಷಪೂರ್ಣ ಮಾಡಿಕೊಂಡು ಅದನ್ನು ಅರ್ಥಮಾಡಿಕೊಳ್ಳದೇ ದೇವರು, ಆತ್ಮ, ಪುನರ್ಜನ್ಮವೆಂಬುದು ದೋಷಪೂರ್ಣವಾಗಿದೆ ಎಂದು ಹೇಳಿ ವಾದಿಸುತ್ತಾರೆ. ಇದು ಇವರ ದೊಡ್ಡ ಬುದ್ಧಿವಂತಿಕೆ. ಎಂತಹ ಮೂಢರು?

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi