ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತಸ್ವಾಮಿ ಪ್ರಭುಪಾದರು 1974 ಮೇ 5 ರಂದು ಮುಂಬೈನಲ್ಲಿ ಮಾಡಿದ ಉಪನ್ಯಾಸ
ಶ್ರೀ ಕೃಷ್ಣನ ಅರ್ಧ ಮಾನವ-ಅರ್ಧ ಸಿಂಹ ರೂಪವೇ ನೃಸಿಂಹ ಅವತಾರ. ತನ್ನ ಪರಮ ಭಕ್ತ ಪ್ರಹ್ಲಾದನನ್ನು ಅವನ ರಾಕ್ಷಸ ತಂದೆ ಹಿರಣ್ಯಕಶಿಪುವಿನಿಂದ ರಕ್ಷಿಸಲು ಶ್ರೀ ನೃಸಿಂಹ ಆವಿರ್ಭವಿಸಿದ. ನೃಸಿಂಹ ಅವತಾರ ಕುರಿತ ನಾಟಕವೊಂದನ್ನು ವೀಕ್ಷಿಸಿದ ಮೇಲೆ, ಶ್ರೀಲ ಪ್ರಭುಪಾದರು ಈ ಉಪನ್ಯಾಸ ನೀಡಿದರು.
ಇದು ಆಸ್ತಿಕರು ಮತ್ತು ನಾಸ್ತಿಕರ ನಡುವಣ ಹೋರಾಟದ ಚರಿತ್ರೆ. ಪ್ರಹ್ಲಾದ ಮಹಾರಾಜನ ಕತೆಯು ಶಾಶ್ವತ ಸತ್ಯ. ಆಸ್ತಿಕರು ಮತ್ತು ನಾಸ್ತಿಕರ ನಡುವಣ `ಸಮರ’ ನಿರಂತರ. ಒಬ್ಬ ವ್ಯಕ್ತಿ ದೈವೀ ಪ್ರಜ್ಞೆ, ಕೃಷ್ಣ ಪ್ರಜ್ಞೆ ಹೊಂದಿದರೆ ಅವನು ಶತ್ರುಗಳನ್ನೂ ಹೊಂದಿರುತ್ತಾನೆ. ಏಕೆಂದರೆ ಈ ಜಗತ್ತಿನ ತುಂಬ ದಾನವರೇ ಇದ್ದಾರೆ.
ಪರಮಾತ್ಮನ ಭಕ್ತರ ವಿಷಯವಿರಲಿ, ಶ್ರೀ ಕೃಷ್ಣನೇ ಸ್ವತಃ ಇಲ್ಲಿಗೆ ಬಂದಾಗ, ಅನೇಕ ರಾಕ್ಷಸರನ್ನು ಅವನು ಕೊಲ್ಲಬೇಕಾಯಿತು. ಅವನ ಮಾವ ಕಂಸನಿಗೆ ಶ್ರೀಕೃಷ್ಣನನ್ನು ಕೊಲ್ಲಬೇಕೆಂದಿತ್ತು. ಕೃಷ್ಣನ ತಾಯಿ ದೇವಕಿಗೆ ಮಕ್ಕಳು ಹುಟ್ಟುತ್ತಲೇ ಕಂಸ ಅವುಗಳನ್ನು ಕೊಲ್ಲುತ್ತ ಬಂದ. ದೇವಕಿಯ ಎಂಟನೇ ಮಗನು ಕಂಸನನ್ನು ಕೊಲ್ಲುತ್ತಾನೆಂದು ಅಶರೀರವಾಣಿ ನುಡಿದಿತ್ತು. ಆದುದರಿಂದ ಕಂಸ ಅವಳ ಮಕ್ಕಳನ್ನು ಕೊಲ್ಲತೊಡಗಿದ. ಕೊನೆಗೆ ಕೃಷ್ಣ ಬಂದ. ಆದರೆ ಕಂಸನಿಗೆ ಕೃಷ್ಣನನ್ನು ಕೊಲ್ಲಲಾಗಲಿಲ್ಲ. ಕೃಷ್ಣನು ಕಂಸನನ್ನು ಸಂಹರಿಸಿದ.

ಭಗವಂತನನ್ನು ಯಾರೂ ಕೊಲ್ಲುವುದು ಸಾಧ್ಯವಿಲ್ಲ. ರಾಕ್ಷಸರು, ದೇವರಿಲ್ಲದ ಸಮಾಜ ಇವರಿಗೆಲ್ಲ ಪ್ರಭುವನ್ನು ಕೊಲ್ಲುವುದು ಬೇಕಾಗಿದೆ. ಆದರೆ, ವಾಸ್ತವವಾಗಿ ದೇವರನ್ನು ಎಂದಿಗೂ ಕೊಲ್ಲಲಾಗದು. ಆದರೆ, ದಾನವರು ದೇವೋತ್ತಮ ಪರಮ ಪುರುಷನಿಂದ ಹತ್ಯೆಗೀಡಾಗುತ್ತಾರೆ. ಅದು ಪ್ರಕೃತಿ ನಿಯಮ. ಪ್ರಹ್ಲಾದ ಮಹಾರಾಜನ ಬದುಕಿನ ಪಾಠವಿದು. ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, ಮೃತ್ಯುಃ ಸರ್ವಹರಶ್ಚಾಹಂ: “ನಾನು ಸಾವು, ನೀನು ಹೊಂದಿರುವುದನ್ನೆಲ್ಲ ಕೊಂಡೊಯ್ಯುವ ರೂಪದಲ್ಲಿ.”
ಲೌಕಿಕರು ಮತ್ತು ವಿಜ್ಞಾನಿಗಳಂತೆ ಹಿರಣ್ಯಕಶಿಪು ಕೂಡ ಮಹಾ ಜಾಣ. ಈ ಜಾಣತನದಿಂದ ಅವರು ಅನೇಕ ವಸ್ತುಗಳನ್ನು ಸಂಶೋಧಿಸುತ್ತಾರೆ. ಏನದರ ಉದ್ದೇಶ? “ನಾವು ಸದಾ ಬದುಕಿರೋಣ ಮತ್ತು ಹೆಚ್ಚು ಹೆಚ್ಚು ಇಂದ್ರಿಯ ಸುಖ ಅನುಭವಿಸೋಣ” ಎಂಬುವುದೇ ಅವರ ಉದ್ದೇಶ. ಇದನ್ನು ನಾಗರಿಕತೆಯ ನಾಸ್ತಿಕವಾದದ ಮುಂದುವರಿಕೆ ಎಂದು ಕರೆಯುತ್ತಾರೆ.
ಹಿರಣ್ಯಕಶಿಪು ಪಕ್ಕಾ ಲೌಕಿಕವಾದಿ. ಹಿರಣ್ಯ ಎಂದರೆ `ಚಿನ್ನ’ ಮತ್ತು ಕಶಿಪು ಎಂದರೆ `ಮೃದುವಾದ ಪಲ್ಲಂಗ’ ಎಂದು ಅರ್ಥ. ಲೌಕಿಕ ವ್ಯಕ್ತಿಗಳಿಗೆ ಚಿನ್ನ ಮತ್ತು ಲೈಂಗಿಕ ಕ್ರಿಯೆ ಎಂದರೆ ಬಲು ಇಷ್ಟ. ಅದು ಅವರ ವ್ಯವಹಾರ.
ಪ್ರಹ್ಲಾದ ಮಹಾರಾಜನ ಹೆಸರು `ಆಹ್ಲಾದ’ ದಿಂದ ಬಂದಿದೆ. ಅದರ ಅರ್ಥ `ಅಲೌಕಿಕ ಆನಂದ.’ ಜೀವಿಯ ವಾಸ್ತವ ಗುರುತು ಪ್ರಹ್ಲಾದ, ಪರಮಾನಂದ. ಆದರೆ ಲೌಕಿಕ ಸಂಪರ್ಕ ಅಥವಾ ಸಾಂಗತ್ಯದಿಂದ ನಾವು ಸಂಕಷ್ಟದ ಬದುಕು ಅನುಭವಿಸುತ್ತಿದ್ದೇವೆ.
ಅಮರತ್ವದ ಆಸೆ
ಹಿರಣ್ಯಕಶಿಪುವಿಗೆ ಅಮರತ್ವ ಪಡೆಯುವ ಮಹದಾಸೆ ಇತ್ತು. ಆದುದರಿಂದ ಅವನು ಅನೇಕ ತಪಸ್ಸುಗಳನ್ನು ಕೈಗೊಂಡ. ಅವನ ತೀವ್ರ ತಪಸ್ಸಿನಿಂದ ಜಗತ್ತೇ ನಡುಗಿತು. ಅವನನ್ನು ಸಮಾಧಾನ ಪಡಿಸಲು ಬ್ರಹ್ಮ ಬರಬೇಕಾಯಿತು. ಅವನು ಹಿರಣ್ಯಕಶಿಪುಗೆ ಏನು ಬೇಕೆಂದು ಕೇಳಿದ.

ಹಿರಣ್ಯಕಶಿಪು ಉತ್ತರಿಸಿದ : `ನಾನು ಅಮರನಾಗಬೇಕು!’
ಬ್ರಹ್ಮನೆಂದ : “ನನಗೆ ಸುದೀರ್ಘ ಕಾಲದ ಆಯಸ್ಸು ಇದ್ದರೂ ನಾನೂ ಅಮರನಲ್ಲ. ಆದುದರಿಂದ ನಿನಗೆ ಅಮರತ್ವ ನೀಡಲಾರೆ.”
ಬ್ರಹ್ಮನ ಆಯಸ್ಸಿನ ಬಗ್ಗೆ ಭಗವದ್ಗೀತೆಯಲ್ಲಿ ಹೇಳಲಾಗಿದೆ : ಸಹಸ್ರ ಯುಗ ಪರ್ಯಂತಂ ಅಹರ್ಯದ್ ಬ್ರಹ್ಮಣೋ ವಿದುಃ. ಇದರರ್ಥ ಬ್ರಹ್ಮನ ದಿನವು ಸಹಸ್ರ ಯುಗ. ಸಹಸ್ರ ಯುಗ ಎಂದರೆ ನಾಲ್ಕು ಯುಗಗಳ – ಸತ್ಯ, ತ್ರೇತ, ದ್ವಾಪರ ಮತ್ತು ಕಲಿ – ಅವಧಿಯ ಒಂದು ಸಾವಿರ ಪಟ್ಟು ಅಥವಾ 4.3 ಮಿಲಿಯನ್ ವರ್ಷಗಳ ಒಂದು ಸಾವಿರ ಪಟ್ಟು ಇದು 4.3 ಬಿಲಿಯನ್ ವರ್ಷಗಳಿಗೆ ಬರುತ್ತದೆ, ಇದು ಬ್ರಹ್ಮನಿಗೆ 12 ತಾಸು. ಮತ್ತು ಅವನು ಅಂತಹ ದಿನಗಳ ನೂರು ವರ್ಷ ಬದುಕಿರುತ್ತಾನೆ.
ಕೋಟ್ಯಂತರ ವರ್ಷಗಳು ಬದುಕಿದ್ದರೂ ಬ್ರಹ್ಮನೂ ಸಾಯಲೇ ಬೇಕು. ಬ್ರಹ್ಮ ಲೋಕ ಅಥವಾ ಪಾತಾಳ ಲೋಕ ಅಥವಾ ಈ ಲೌಕಿಕ ಜಗತ್ತಿನಲ್ಲಿ ಎಲ್ಲೇ ಹೋಗಿ, ನಿಮಗೆ ಸಾವು ಕಟ್ಟಿಟ್ಟ ಬುತ್ತಿ. ಅದೇ ಸಮಸ್ಯೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ : “ನಿಜವಾದ ಸಮಸ್ಯೆ ಎಂದರೆ ಜನ್ಮ-ಮೃತ್ಯು-ಜರಾ-ವ್ಯಾಧಿ : ಹುಟ್ಟು, ಸಾವು, ವೃದ್ಧಾಪ್ಯ ಮತ್ತು ರೋಗ.”

ಈ ಸಮಸ್ಯೆಗಳನ್ನು ಪ್ರಾಪಂಚಿಕ ರೀತಿಯಲ್ಲಿ ಪರಿಹರಿಸಲು ಹಿರಣ್ಯಕಶಿಪು ಬಯಸಿದ. ಆದರೆ ಅದು ಸಾಧ್ಯವಿಲ್ಲ. ಅಮರತ್ವ ಸಾಧ್ಯವೇ ಇಲ್ಲವೆಂದು ಬ್ರಹ್ಮ ಖಚಿತವಾಗಿ ಹೇಳಿದ ಮೇಲೆ, ಅಮರನಾಗಲು ಹಿರಣ್ಯಕಶಿಪು ತಂತ್ರ ಹೂಡಲು ಪ್ರಯತ್ನಿಸಿದ. ಈ ಯಾವುದೇ ರೀತಿಯಿಂದ ತನಗೆ ಸಾವು ಬರಬಾರದು, ಹಾಗೆಂದು ವರ ಕೊಡಲು ಹಿರಣ್ಯಕಶಿಪು ಬ್ರಹ್ಮನಲ್ಲಿ ಕೇಳಿದ : ಯಾವುದೇ ಅಸ್ತ್ರ, ಹಗಲು ಅಥವಾ ರಾತ್ರಿ, ಭೂಮಿ ಮೇಲೆ, ನೀರಿನಲ್ಲಿ, ಆಕಾಶದಲ್ಲಿ, ಒಳಗೆ ಅಥವಾ ಹೊರಗೆ, ಮಾನವ ಅಥವಾ ಪ್ರಾಣಿ.
ಹೀಗಾಗಿ, ತಾನು ಅಮರನೆಂದು ಹಿರಣ್ಯಕಶಿಪು ಭಾವಿಸಿದ. ಆದರೆ ತನ್ನ ಪರಮ ಭಕ್ತ ಪ್ರಹ್ಲಾದ ಮಹಾರಾಜನನ್ನು ರಕ್ಷಿಸಲು, ಬ್ರಹ್ಮ ಕೊಟ್ಟಿದ್ದ ವರಗಳಿಗೆ ಕಿಂಚಿತ್ತೂ ಧಕ್ಕೆ ಬಾರದಂತೆ, ಶ್ರೀ ನೃಸಿಂಹನು ಹಿರಣ್ಯಕಶಿಪುವನ್ನು ಸಂಹರಿಸಿದ. ನೃಸಿಂಹ ಇತ್ತ ಮಾನವ ರೂಪಿಯೂ ಅಲ್ಲ, ಅತ್ತ ಮೃಗವೂ ಅಲ್ಲ. ಆದರೆ ಅರ್ಧ ಮಾನವ, ಅರ್ಧ ಸಿಂಹ. ತನ್ನ ತೊಡೆಯ ಮೇಲೆ ಹಿರಣ್ಯಕಶಿಪುವನ್ನು ಮಲಗಿಸಿಕೊಂಡು, ಪರಮಾತ್ಮನು ತನ್ನ ಉಗುರುಗಳಿಂದ, ಆ ದಾನವನ ಅರಮನೆಯ ಹೊಸ್ತಿಲಿನ ಮೇಲೆ, ಮುಸ್ಸಂಜೆಯಲ್ಲಿ ಸಂಹರಿಸಿದ.

ಪ್ರಹ್ಲಾದನದು ಹಿರಣ್ಯಕಶಿಪುವಿಗೆ ತದ್ವಿರುದ್ಧವಾದ ಗುಣ. ಅವನು ವಿಷ್ಣುವಿನ ಭಕ್ತ. ಯಾವುದೇ ಸಂದರ್ಭದಲ್ಲಿಯೂ ಭಕ್ತನು ಕೃಷ್ಣನ ವಿನಮ್ರ ಸೇವಕನಾಗೇ ಇರುತ್ತಾನೆ. ಆದುದರಿಂದ ಅವನಿಗೇನೂ ಅಪಾಯವಿಲ್ಲ. ಅಪಾಯವಿದ್ದರೂ ಅವನು ರಕ್ಷಿಸಲ್ಪಡುತ್ತಾನೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ : ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ : “ಅರ್ಜುನ, ನನ್ನ ಪಾದಕಮಲದ ಮೇಲೆ ಆಶ್ರಯ ಪಡೆದ, ನನ್ನ ಭಕ್ತರಾದವರು ಎಂದೂ ನಾಶವಾಗುವುದಿಲ್ಲವೆಂದು ನೀನು ಧೈರ್ಯವಾಗಿ ಇಡೀ ಜಗತ್ತಿಗೆ ಘೋಷಿಸು.” ಮತ್ತೂ ಕೃಷ್ಣ ಹೇಳುತ್ತಾನೆ :
ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ।
ಅಹಂ ತ್ವಾಂ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ॥
“ಎಲ್ಲ ಧರ್ಮಗಳನ್ನು ಪರಿತ್ಯಜಿಸಿ ನನಗೆ ಶರಣಾಗತನಾಗು. ನಾನು ನಿನ್ನನ್ನು ಎಲ್ಲ ಪಾಪಗಳಿಂದ ಮುಕ್ತನನ್ನಾಗಿ ಮಾಡುತ್ತೇನೆ. ಹೆದರಿಕೊಳ್ಳಬೇಡ.”
ಇವೆಲ್ಲ ಆಶ್ವಾಸನೆಗಳು. ಆದರೆ ಹಿರಣ್ಯಕಶಿಪು ಅವರಂತಹ ನಾಸ್ತಿಕರಿಗೆ ಇದು ಅರ್ಥವಾಗುವುದಿಲ್ಲ. ಅದು ಅವರ ದೋಷ. ಅವರು ಯಾವಾಗಲೂ ಭಗವಂತನಿಗೆ ಸವಾಲು ಹಾಕುತ್ತಾರೆ. ತಂದೆ (ಹಿರಣ್ಯಕಶಿಪು) ಮತ್ತು ಮಗ (ಪ್ರಹ್ಲಾದ) ನ ನಡುವೆ ಇದ್ದ ಭಿನ್ನಾಭಿಪ್ರಾಯವೆಂದರೆ ಮಗನಿಗೆ ಪ್ರಭು ಕೃಷ್ಣನಲ್ಲಿ ನಂಬಿಕೆ, ಆದರೆ ತಂದೆಗೆ ಇಲ್ಲ. ಕೊನೆಗೆ ತಂದೆಯು ಭಗವಂತನನ್ನು ಸಾವಿನ ರೂಪದಲ್ಲಿ ನೋಡುತ್ತಾನೆ. ಆ ಸಂದರ್ಭದಲ್ಲಿ ಅವನಿಗೆ ಅವನನ್ನು ರಕ್ಷಿಸಿಕೊಳ್ಳಲಾಗಲಿಲ್ಲ.
ಇದೇ ಆಸ್ತಿಕ ನಾಸ್ತಿಕರ ನಡುವಣ ವ್ಯತ್ಯಾಸ. ನಾಸ್ತಿಕರು ಯಾವಾಗಲೂ “ದೇವರೆಲ್ಲಿದ್ದಾನೆ, ನೀವು ತೋರಿಸುವಿರಾ?” ಎಂದು ಸವಾಲು ಹಾಕುತ್ತಾರೆ.
“ನೀವು ಅವನನ್ನು ನೋಡಬಹುದು. ಈಗಲ್ಲ. ನಿಮ್ಮ ಪಾಪದ ಕೊಡ ತುಂಬಿದ ಮೇಲೆ – ಸಾವು ಬಂದಾಗ ನೀವು ಅವನನ್ನು ನೋಡಬಹುದು.”
ಗುರು ಪರಂಪರೆ
ನಮ್ಮ ಗುರುಗಳಲ್ಲಿ ಪ್ರಹ್ಲಾದ ಮಹಾರಾಜ ಕೂಡ ಒಬ್ಬರು. ಮಹಾಜನರೆಂದು ಕರೆಯುವ 12 ಗುರುಗಳಿದ್ದಾರೆ :
ಸ್ವಯಂಭುರ್ ನಾರದಃ ಶಂಭುಃ ಕುಮಾರಃ ಕಪಿಲೋ ಮನುಃ ।
ಪ್ರಹ್ಲಾದೋ ಜನಕೋ ಭೀಷ್ಮೋ ಬಲಿರ್ ವೈಯಾಸಕಿರ್ ವಯಮ್ ॥
ಬ್ರಹ್ಮ, ನಾರದ, ಶಿವ, ನಾಲ್ವರು ಕುಮಾರರು, ಕಪಿಲ, ಸ್ವಾಯಂಭುವ ಮನು, ಪ್ರಹ್ಲಾದ ಮಹಾರಾಜ, ಜನಕ ಮಹಾರಾಜ, ಭೀಷ್ಮ, ಬಲಿ ಮಹಾರಾಜ, ಸುಖದೇವ ಗೋಸ್ವಾಮಿ ಮತ್ತು ನಾನು (ಯಮರಾಜ).
ಆಧ್ಯಾತ್ಮಿಕ ಬದುಕಿನಲ್ಲಿ ಪ್ರಗತಿ ಸಾಧಿಸಬೇಕೆಂದರೆ, ಮಹಾಜನರನ್ನು, ಶ್ರೇಷ್ಠರನ್ನು ಅನುಸರಿಸಬೇಕು. ಧರ್ಮ ಗ್ರಂಥಗಳಲ್ಲಿ ಅವರ ಬಗೆಗೆ ಹೇಳಲಾಗಿದೆ.
ಗುರು ಪರಂಪರೆಯಲ್ಲಿ ಪ್ರಹ್ಲಾದ ಮಹಾರಾಜ ನಮ್ಮ ಗುರು. ಮಹಾಭಾರತ ಹೇಳುತ್ತದೆ : (ವನ ಪರ್ವ 313.117)
ತರ್ಕೋ ಅಪ್ರತಿಷ್ಠಃ ಶ್ರುತಯೋ ವಿಭಿನ್ನಾ
ನಾಸಾವ್ ಋಷಿರ್ ಯಸ್ಯ ಮತಂ ನ ಭಿನ್ನಂ ।
ಧರ್ಮಸ್ಯ ತತ್ತ್ವಂ ನಿಹಿತಂ ಗುಹಾಯಾಂ
ಮಹಾಜನೋ ಯೇನ ಗತಃ ಸ ಪಂಥಾ ॥
“ಒಣ ಚರ್ಚೆಯು ಅಪೂರ್ಣ. ಇತರರೊಂದಿಗೆ ಅಭಿಪ್ರಾಯ ಭೇದವಿಲ್ಲದ ಗಣ್ಯ ವ್ಯಕ್ತಿಗಳನ್ನು ಶ್ರೇಷ್ಠ ಋಷಿ ಎಂದು ಪರಿಗಣಿಸಲಾಗದು. ವೇದಗಳನ್ನು ಓದುವುದರಿಂದ ಮಾತ್ರ ಧಾರ್ಮಿಕ ತತ್ತ್ವಗಳನ್ನು ಗ್ರಹಿಸಿಕೊಳ್ಳುವ ಸರಿ ಮಾರ್ಗಕ್ಕೆ ಬರುವುದು ಸಾಧ್ಯವಿಲ್ಲ. ಧಾರ್ಮಿಕ ತತ್ತ್ವಗಳ ಗಟ್ಟಿ ಸತ್ಯವು ಪರಿಶುದ್ಧವಾದ, ಸ್ವಯಂ ಸಾಕ್ಷಾತ್ಕಾರದ ವ್ಯಕ್ತಿಯ ಹೃದಯದಲ್ಲಿ ಅಡಗಿರುತ್ತದೆ. ಪರಿಣಾಮವಾಗಿ, ಧರ್ಮ ಗ್ರಂಥಗಳು ಸ್ಪಷ್ಟಪಡಿಸಿರುವಂತೆ, ಮಹಾಜನರು ಸೂಚಿಸುವ ಪ್ರಗತಿದಾಯಕ ಮಾರ್ಗವನ್ನು ಒಪ್ಪಿಕೊಳ್ಳ ಬೇಕು.”
ಧರ್ಮದ ಮಾರ್ಗವನ್ನು ನಮಗೆ ರೂಪಿಸಲಾಗದು. ಅನೇಕ ಧರ್ಮ ಗ್ರಂಥಗಳು, ತತ್ತ್ವಜ್ಞಾನಿಗಳು ಇರುವುದರಿಂದ ಅದನ್ನು ಕಂಡುಕೊಳ್ಳುವುದು ಕಷ್ಟ. ಪ್ರತಿಯೊಬ್ಬ ತತ್ತ್ವಜ್ಞಾನಿಯೂ ಭಿನ್ನ ಅಭಿಪ್ರಾಯ ವ್ಯಕ್ತ ಪಡಿಸುತ್ತಾನೆ. ಆದುದರಿಂದ ಧರ್ಮದ ಸತ್ಯ ಮಾರ್ಗ ಹೇಗೆ ಪಡೆಯುವುದು? ನೀವು ಶ್ರೇಷ್ಠ ವ್ಯಕ್ತಿಗಳ ಹೆಜ್ಜೆಯನ್ನು ಅನುಸರಿಸಬೇಕು. ಮತ್ತು ಪ್ರಹ್ಲಾದ ಮಹಾರಾಜ ಅವರಲ್ಲಿ ಒಬ್ಬರು.
ಪ್ರಹ್ಲಾದ ಮಹಾರಾಜ ಹುಟ್ಟಿದ್ದು ರಾಕ್ಷಸ ವಂಶದಲ್ಲಿ. ಅವನ ತಂದೆ ದಾನವ. ಪ್ರಹ್ಲಾದ ಮಹಾರಾಜ ತನ್ನ ತಂದೆಯನ್ನು ಅಸುರವರ್ಯ – ರಾಕ್ಷಸರಲ್ಲಿ ಅತ್ಯುತ್ತಮ ಎಂದೇ ಕರೆಯುತ್ತಿದ್ದುದು. ಹಿರಣ್ಯಕಶಿಪು ತನ್ನ ಮಗನ ಬೆನ್ನು ಸವರಿ, “ಪ್ರೀತಿಯ ಮಗನೇ, ಹೀಗೆ ಮಾಡು, ಹಾಗೆ ಮಾಡು. ನೀನು ಕಲಿತ ಉತ್ತಮವಾದುದನ್ನು ಹೇಳು” ಎನ್ನುತ್ತಿದ್ದ.
ಪ್ರಹ್ಲಾದ ಮಹಾರಾಜ ಉತ್ತರಿಸುತ್ತಿದ್ದ : ತತ್ ಸಾಧು ಮನ್ಯೇ ಅಸುರವರ್ಯ ದೇಹಿನಾಂ. ಅವನು `ಪ್ರೀತಿಯ ತಂದೆ’ ಎಂದು ಸಂಬೋಧಿಸುತ್ತಿರಲಿಲ್ಲ. `ನನ್ನ ಪ್ರೀತಿಯ ಅಸುರೋತ್ತಮನೇ’ ಎಂದು ಕರೆಯುತ್ತಿದ್ದ. ತತ್ ಸಾಧು ಮನ್ಯೇ. `ಇದು ಚೆನ್ನ ಎಂದು ಭಾವಿಸುವೆ.’ ಏನದು? ಹಿತ್ವಾತ್ಮ ಪಾತಂ ಗೃಹಂ ಅಂಧ ಕೂಪಂ ವನಂ ಗತೋ ಯದ್ ಹರಿಂ ಆಶ್ರಯೇತ : “ಈ ಪ್ರಾಪಂಚಿಕ ಬದುಕು-ಲೌಕಿಕ ಜೀವನ-ಪಾಳು ಬಾವಿಯಂತೆ ಸ್ವಯಂ ಹತ್ಯೆಗೀಡು ಮಾಡುತ್ತದೆ. ಆದುದರಿಂದ ಇದನ್ನು ಬಿಟ್ಟು ಅರಣ್ಯಕ್ಕೆ ಹೋಗಿ ಕೃಷ್ಣನ ಆಶ್ರಯ ಪಡೆಯಬೇಕು. ಅದು ಅತ್ಯುತ್ತಮ ಜೀವನ ಮಾರ್ಗ.”

ಅವನ ತಂದೆಗೆ ಇದನ್ನು ಕೇಳಿ ವಿಪರೀತ ಕೋಪ. ಆಸ್ತಿಕರು, ನಾಸ್ತಿಕರು ಎಂದೂ ಪರಸ್ಪರ ಒಪ್ಪುವುದಿಲ್ಲ. ಅದು ಸಿದ್ಧಾಂತ. ಪ್ರಹ್ಲಾದ ಮಹಾರಾಜ ತನ್ನ ತಂದೆಯಿಂದಲೇ ದೌರ್ಜನ್ಯಕ್ಕೆ ಒಳಗಾದ. ಆದರೆ ಅವನೆಂದೂ ಓಂ ನಮೋ ಭಗವತೇ ವಾಸುದೇವಾಯ ಎಂದು ಪಠಿಸುವುದನ್ನು ನಿಲ್ಲಿಸಲಿಲ್ಲ.
ಇದರಿಂದ ನಾವು ಕಲಿಯಬೇಕಾಗಿರುವುದೇನೆಂದರೆ, ಎಂತಹುದೇ ಅಪಾಯ ಸ್ಥಿತಿಯಲ್ಲಿದ್ದರೂ ಕೃಷ್ಣನನ್ನು ಮರೆಯಬಾರದು ಎಂಬುದೇ ಆಗಿದೆ. ಕೃಷ್ಣ ನಮ್ಮನ್ನು ಕಾಪಾಡುತ್ತಾನೆ.
ಭಗವದ್ಗೀತೆಯಲ್ಲಿ ಹೇಳಲಾಗಿದೆ :
ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ ।
ಯಸ್ಮಿನ್ ಸ್ಥಿತೋ ನ ದುಃಖೇನ ಗುರೂಣಾಪಿ ವಿಚಾಲ್ಯತೇ ॥
“ಇಂತಹ ಸ್ಥಾನ ( ಕೃಷ್ಣ ಪ್ರಜ್ಞೆ ) ದಲ್ಲಿ ನಿಂತವನು ಸತ್ಯವನ್ನು ಬಿಡುವುದೇ ಇಲ್ಲ. ಇದನ್ನು ಪಡೆದ ಅನಂತರ ಇದಕ್ಕಿಂತ ಹೆಚ್ಚಿನ ಗಳಿಕೆ ಯಾವುದೂ ಇಲ್ಲ ಎಂದು ಯೋಚಿಸುತ್ತಾನೆ. ಅತ್ಯಂತ ತೀವ್ರವಾದ ಕಷ್ಟಗಳಲ್ಲಿಯೂ ವಿಚಲಿತನಾಗುವುದಿಲ್ಲ.” (6.22)
ಇನ್ನೇನು ಬೇಕು?
ಕೃಷ್ಣ ಪ್ರಜ್ಞೆಯು ಎಷ್ಟು ಒಳ್ಳೆಯದೆಂದರೆ ಯಾರಿಗಾದರೂ ಕೃಷ್ಣಪ್ರಜ್ಞೆ ಲಭ್ಯವಾಗಿಬಿಟ್ಟರೆ, ಅವರು ಇನ್ನಾವುದೇ ಲಾಭ ಅಥವಾ ಗಳಿಕೆ ಕುರಿತು ಯೋಚಿಸುವುದೇ ಇಲ್ಲ. ನಾವು ಇದು ಬೇಕು ಅದು ಬೇಕು, ಎಂದು ಹಂಬಲಿಸುತ್ತಿರುತ್ತೇವೆ. ಆದರೆ ಕೃಷ್ಣ ಪ್ರಜ್ಞೆ ದೊರೆತ ಮೇಲೆ, ನಿಮಗೆ ತೃಪ್ತಿಯಾಗಿಬಿಡುತ್ತದೆ, ಪ್ರಹ್ಲಾದ ಮಹಾರಾಜನಂತೆ. ಅವನಿಗೆ ಎಲ್ಲ ರೀತಿಯ ದೈವಾನುಗ್ರಹವಿತ್ತು. ಶ್ರೀ ನೃಸಿಂಹ ಹೇಳಿದ : “ನನ್ನ ಪ್ರೀತಿಯ ಪ್ರಹ್ಲಾದ, ನಿನಗೇನು ಬೇಕೋ ಅದನ್ನು ಕೇಳು.” ಆದರೆ ಪ್ರಹ್ಲಾದ ಎಂದೂ ಏನೂ ಕೇಳಲಿಲ್ಲ. ಅವನು ಒಂದು ಕುಟುಂಬದ ವೈಷ್ಣವ ಸುಪುತ್ರನಿಗೆ ಒಳ್ಳೆಯ ಉದಾಹರಣೆ. ತಂದೆಯಿಂದ ಸಾಕಷ್ಟು ಸಂಕಷ್ಟ ಅನುಭವಿಸಿದ್ದರೂ ಅವನು ನೃಸಿಂಹನಲ್ಲಿ ಬೇಡಿದ್ದು ತಂದೆಗಾಗಿಯೇ : “ದೇವರೇ, ನನ್ನ ತಂದೆ ಅನೇಕ ಅಪರಾಧಗಳನ್ನು ಮಾಡಿದ್ದಾನೆ. ಅವನಿಗೆ ಮುಕ್ತಿ ಕೊಡು” ಪ್ರಹ್ಲಾದ ತನಗಾಗಿ ಏನೂ ಕೇಳಲಿಲ್ಲ. ಅವನು ಅಷ್ಟು ದಯಾಳು.

ಆಗ, ನರಹರಿ, ನೃಸಿಂಹ ಹೇಳಿದ : “ನೀನು ನಿನ್ನ ತಂದೆಯ ಬಗ್ಗೆ ಏಕೆ ಮಾತನಾಡುತ್ತಿರುವೆ? ನಿನ್ನ ತಂದೆಯ ತಂದೆ, ಅವನ ತಂದೆ – 14 ಪೀಳಿಗೆ – ಎಲ್ಲರಿಗೂ ಮುಕ್ತಿ ದೊರೆಯುತ್ತದೆ. ಏಕೆಂದರೆ, ನಿನ್ನಂತಹ ಮಗ ಕುಟುಂಬದಲ್ಲಿ ಇರುವನು.”
ಲೌಕಿಕವಾಗಿ ನಾವು ನಮ್ಮ ಕುಟುಂಬ ಅಥವಾ ರಾಷ್ಟ್ರಕ್ಕೆ ಏನು ಸೇವೆ ನೀಡಬಹುದು? ಆದರೆ ನಾವು ಭಕ್ತರಾದರೆ, ನಮ್ಮ ದೇಶ, ನಮ್ಮ ಕುಟುಂಬ, ಮಾನವ ಕುಲಕ್ಕೆ ಅತ್ಯುತ್ತಮ ಸೇವೆ ನೀಡಬಹುದಾಗಿದೆ. ಇದೇ ಕೃಷ್ಣ ಪ್ರಜ್ಞೆಯ ತತ್ತ್ವ.
ನಮ್ಮ ಕ್ರಷ್ಣ ಪ್ರಜ್ಞೆ ಆಂದೋಲನವು ಈ ತತ್ತ್ವಜ್ಞಾನವನ್ನು ಬೋಧಿಸುತ್ತದೆ : “ನೀವು ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಕೊಳ್ಳಿ. ನಿಮ್ಮ ಬದುಕು ಪರಿಪೂರ್ಣವಾಗುತ್ತದೆ.” ಮತ್ತು ಇದರ ವಿಧಾನ ತುಂಬ ಸರಳ. ಯಾವುದೇ ರಹಸ್ಯವಿಲ್ಲ. ಈ ಸಂಜೆ ನಾನು ಬಾಲಕನೊಬ್ಬನ ಬಳಿ ಮಾತನಾಡುತ್ತಿದ್ದೆ. ಅವನಿಗೆ ಮಂತ್ರವೊಂದನ್ನು ತಿಳಿಸಿಕೊಡಲಾಗಿದೆ. ಅವನು ಅದನ್ನು ರಹಸ್ಯವಾಗಿಡಬೇಕಾಗಿತ್ತು. ಆದರೆ ನಮ್ಮ ಬಳಿ ರಹಸ್ಯ ಮಂತ್ರಗಳಿಲ್ಲ. ನಮ್ಮ ಮಂತ್ರ, ಹರೇ ಕೃಷ್ಣ, ಎಲ್ಲರಿಗೂ ತೆರೆದಿದೆ. ಅದ್ಯಾಕೆ ರಹಸ್ಯವಾಗಿರಬೇಕು? ಹರೇ ಕೃಷ್ಣ ಮಂತ್ರವನ್ನು ಪಠಿಸುತ್ತ ನಾವು ದೇವೋತ್ತಮ ಪರಮ ಪುರುಷನನ್ನು ಮುಟ್ಟುವುದಾದರೆ, ಅದು ಯಾಕೆ ರಹಸ್ಯವಾಗಿರಬೇಕು? ಎಲ್ಲರೂ ಪ್ರಭುವಿನಲ್ಲಿಗೆ ಹಿಂತಿರುಗುವಂತೆ ಅದನ್ನು ಎಲ್ಲರಿಗೂ ಹಂಚಬೇಕು. ಆದುದರಿಂದ ಏನೂ ರಹಸ್ಯವಿಲ್ಲ. ನಾವು ಯಾವುದೇ ರಹಸ್ಯ ಮಂತ್ರಕ್ಕೆ ಅನುಮೋದನೆ ನೀಡುವುದೂ ಇಲ್ಲ. ಅದು ಮುಕ್ತವಾಗಿರಬೇಕು. ಮಂತ್ರವು ರಹಸ್ಯವಾಗಿರಬೇಕೆಂದು ಶಾಸ್ತ್ರ ಹೇಳುವುದಿಲ್ಲ.

ಈ ಕಲಿ ಯುಗದಲ್ಲಿ ತತ್ತ್ವಜ್ಞಾನ ಮತ್ತು ಇತರೆ ವಿಧಾನಗಳಿಂದ ಸರಿಯಾದ ನಿರ್ಣಯಕ್ಕೆ ಬರುವುದು ಕಷ್ಟ. ಕಲಿಯು ಜಗಳದ, ತಪ್ಪು ಗ್ರಹಿಕೆಯ, ಮತ್ತು ಪರಸ್ಪರ ಒಪ್ಪಿಗೆ ಇಲ್ಲದ ಕಾಲವಾದುದರಿಂದ ಧರ್ಮಗ್ರಂಥಗಳಲ್ಲಿ ಇದನ್ನು ಬಹಿರಂಗವಾಗಿಯೇ ಹೇಳಿದ್ದಾರೆ :
ಹರೇರ್ ನಾಮ ಹರೇರ್ ನಾಮ ಹರೇರ್ ನಾಮೈವ ಕೇವಲಂ ।
ಕಲೌ ನಾಸ್ತಿ ಏವ ನಾಸ್ತಿ ಏವ ನಾಸ್ತಿ ಏವ ಗತಿರ್ ಅನ್ಯಥಾ ॥
“ಈ ಕಲಿಯುಗದಲ್ಲಿ, ಆಧ್ಯಾತ್ಮಿಕ ಪ್ರಗತಿಗೆ ಭಗವಂತನ ಪವಿತ್ರ ನಾಮ, ಪವಿತ್ರ ನಾಮ, ಪವಿತ್ರ ನಾಮ ಬಿಟ್ಟರೆ ಪರ್ಯಾಯ ಇಲ್ಲ, ಪರ್ಯಾಯ ಇಲ್ಲ, ಪರ್ಯಾಯ ಇಲ್ಲ.”
ಧ್ಯಾನ, ಯಜ್ಞ, ದೇವಸ್ಥಾನದಲ್ಲಿ ವ್ಯಾಪಕ ಪೂಜೆ – ಈ ಕಾಲದಲ್ಲಿ ಇವೆಲ್ಲದರ ನಿರ್ವಹಣೆ ಅಸಾಧ್ಯ. ಆದರೆ ಹರೇ ಕೃಷ್ಣ ಮಂತ್ರವನ್ನು ಒಂದು ಮಗು ಕೂಡ ಪಠಿಸಬಲ್ಲದು. ನಮ್ಮ ಅನುಭವದಿಂದ ಇದು ಸಾಬೀತಾಗಿದೆ. ಹರೇ ಕೃಷ್ಣ ಮಹಾ ಮಂತ್ರ ಎಲ್ಲೆಲ್ಲಿ ಪಠಣವಾಗುವುದೋ ಅಲ್ಲಲ್ಲಿ ಆಬಾಲವೃದ್ಧರಾದಿಯಾಗಿ ಎಲ್ಲರೂ ಪಾಲ್ಗೊಳ್ಳಬಹುದು.

ಆದುದರಿಂದ ಭಗವಂತನನ್ನು ಅರಿತುಕೊಳ್ಳಲು ಇದೊಂದೇ ವಿಧಾನ. ಇದರಲ್ಲಿ ಖರ್ಚು ಇಲ್ಲ, ಆದರೆ ಗಳಿಸುವುದು ಮಾತ್ರ ಅಪಾರ. ಅದು ಪ್ರಹ್ಲಾದ ಮಹಾರಾಜನ ಬೋಧನೆ, ಮತ್ತು ನಾವು ಅವನ ಹೆಜ್ಜೆಯನ್ನು ಅನುಸರಿಸುತ್ತಿದ್ದೇವೆ. ನಾವು ಅವನ ತತ್ತ್ವ, ಸಿದ್ಧಾಂತಕ್ಕೆ ಅಂಟಿಕೊಂಡಿರೋಣ. ಮತ್ತು ಕೃಷ್ಣ ಪ್ರಜ್ಞೆಯಲ್ಲಿ ಹೆಚ್ಚು ಪ್ರಗತಿ ಸಾಧಿಸೋಣ.
ನಿಮಗೆಲ್ಲ ತುಂಬ ವಂದನೆಗಳು.






Leave a Reply