ಪ್ರಸಾದದ ಮಹಿಮೆ

ಸಂಕೀರ್ತನ ಯಶೋಗಾಥೆಗಳು

– ಆಧಾರ : ಸರ್ವಾತ್ಮದಾಸರ ದಿನಚರಿ

ಪ್ರಸಾದ ಸ್ವೀಕಾರ, ಪೂಜೆಯ ಒಂದು ಮುಖ್ಯ ಅಂಗ. ಭಗವಂತನಿಗೆ ಸಮರ್ಪಿಸಿದ ಆಹಾರವನ್ನು ಸ್ವೀಕರಿಸುವ ಎಲ್ಲರೂ ಪಾಪಮುಕ್ತರಾಗುತ್ತಾರೆ. ಇಚ್ಛಿತ ಫಲಗಳನ್ನು ಪಡೆಯುತ್ತಾರೆ. ಇಸ್ಕಾನ್ ದೇವಾಲಯದಿಂದ ಪ್ರತಿ ಮಧ್ಯಾಹ್ನ ವಿದ್ಯಾರ್ಥಿಗಳಿಗಾಗಿ ನೀಡಲಾಗುತ್ತಿದ್ದ ಪ್ರಸಾದವನ್ನು ಸೇವಿಸಿಯೇ ಯುವಕನೊಬ್ಬ ತನ್ನ ಜೀವನವನ್ನು ಕಟ್ಟಿಕೊಂಡ ಕಥೆ ಇಲ್ಲಿದೆ.

ಒಮ್ಮೆ ಟೆಕ್ಸಾಸ್‌ನ ಭಕ್ತರಿಗೆ ದೇವಾಲಯದ ನಿರ್ವಹಣೆಗೆ ಸಾಲದ ಅಗತ್ಯ ಬಿತ್ತು. ಅದಕ್ಕಾಗಿ ಇಬ್ಬರು ಭಕ್ತರು ಬ್ಯಾಂಕ್‌ ಗೆ ತೆರಳಿ ಮಾತುಕತೆ ನಡೆಸುವುದೆಂದು ನಿಶ್ಚಯವಾಯ್ತು. ಆದರೆ ಮ್ಯಾನೇಜರನನ್ನು ಭೇಟಿಯಾಗಲು ಸಾಮಾನ್ಯರಂತೆ ಹೋಗಬೇಕೋ ಅಥವಾ ತಾವು ಇರುವಂತೆಯೇ, ಅಂದರೆ ಭಕ್ತರ ಉಡುಗೆಯಲ್ಲಿ ಹೋಗಬೇಕೋ ಎಂಬ ಗೊಂದಲ ಮೂಡಿತು. ಕೊನೆಗೆ ಕೃಷ್ಣನ ಮೇಲೆ ಭಾರ ಹಾಕಿ, ಭಕ್ತರ ಉಡುಗೆಯಲ್ಲೇ ಬ್ಯಾಂಕ್ ಗೆ ತೆರಳಿದರು.

ಅಲ್ಲಿ ಅವರು ಸಾಲದ ಅಧಿಕಾರಿಯ ಬಳಿ ಮಾತನಾಡಬೇಕೆಂದು ಹೇಳಿಕೊಂಡಾಗ, “ನಿರ್ದೇಶಕರು” ಎಂದು ನಮೂದಿಸಿದ್ದ ಕೋಣೆಯತ್ತ ಕಳುಹಿಸಿದರು. ನಿರ್ದೇಶಕರು ಇವರನ್ನು ನೋಡುತ್ತಲೇ ಕುಳಿತುಕೊಳ್ಳಲು ಸೂಚಿಸಿ, ಅವರು ಬಂದ ಕಾರಣ ಕೇಳಿದರು.

ಆ ಇಬ್ಬರು ಭಕ್ತರು ತಾವು ಸಾಲ ಪಡೆಯುವ ಸಲುವಾಗಿ ಬಂದಿರುವರೆಂದು ಹೇಳಿ, ಅದರ ಅವಶ್ಯಕತೆಯ ಹಿನ್ನೆಲೆಯನ್ನು ವಿವರಿಸಿದರು. ನಿರ್ದೇಶಕರು ಯಾವ ಪ್ರಶ್ನೆಯನ್ನೂ ಹಾಕದೆ, ” ಹಾಗೆಯೇ ಆಗಲಿ, ಸಾಲ ನೀಡಲು ನಮಗೆ ಯಾವ ಆಭ್ಯಂತರವಿಲ್ಲ’ ಎಂದರು.

ಆದರೆ ಭಕ್ತರಿಗೆ ಅಚ್ಚರಿ. ಅವರು, ”ನಮಗೆ ಐವತ್ತು ಸಾವಿರದಿಂದ ನೂರು ಸಾವಿರ ಡಾಲರ್‌ವರೆಗೂ ಹಣಬೇಕು!?? ಎಂದಾಗಲೂ ಅಷ್ಟೇ ನಿರುದ್ವಿಗ್ನರಾಗಿ, “ತೊಂದರೆಯಿಲ್ಲ, ನಾನು ಮಾಡಿಸಿಕೊಡುವೆ” ಎಂದರು ನಿರ್ದೇಶಕರು.

ಭಕ್ತರು ಕುತೂಹಲ ತಡೆಯದೆ, ” ಯಾವುದೇ ಕರಾರೂ ಇಲ್ಲದೆ ಅದು ಹೇಗೆ ಇಷ್ಟು ಸುಲಭವಾಗಿ ಸಮ್ಮತಿಸುತ್ತಿರುವಿರಿ?” ಎಂದು ವಿಚಾರಿಸಿದರು.

ನಾನೊಬ್ಬ ಬಡ ವಿದ್ಯಾರ್ಥಿಯಾಗಿದ್ದೆ, ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದೆ. ನಿಮ್ಮ ದೇವಾಲಯದವರು ಪ್ರತಿದಿನ ಕಾಲೇಜಿನ ಆವರಣದಲ್ಲಿ ಪ್ರಸಾದ ವಿತರಿಸುತ್ತಿದ್ದರು. ನಾನು ಯಾವಾಗಲೂ ಆ ಪ್ರಸಾದ ಸ್ವೀಕರಿಸುತ್ತಿದ್ದೆ, ಮತ್ತು ಅದು ಮಾತ್ರವೇ ನನ್ನ ಇಡೀ ದಿನದ ಆಹಾರವಾಗಿತ್ತು!

ನಿಮ್ಮಿಂದಾಗಿ ನನ್ನ ಹಸಿವು ನೀಗಿ, ಜೀವ ಉಳಿಯಿತು. ಓದಲೂ ಸಾಧ್ಯವಾಯಿತು. ಈಗ ನಾನು ಈ ಬ್ಯಾಂಕಿನ ಅಧ್ಯಕ್ಷನಾಗಿದ್ದೇನೆ. ನಿಮ್ಮಿಂದ ನಾನು ಪಡೆದದ್ದಕ್ಕೆ ಕೇವಲ ಕೃತಜ್ಞತೆ ಸೂಚಿಸಲಿಕ್ಕಷ್ಟೆ ನಾನು ಈ ಕಾರ್ಯ ಮಾಡುತ್ತಿದ್ದೇನೆ. ನನ್ನನ್ನು ಉಳಿಸಿ ಬೆಳೆಸಿದ ಪ್ರಸಾದಕ್ಕೆ ಎಷ್ಟು ಋಣಿಯಾಗಿದ್ದರೂ ಸಾಲದು!”

ನಿರ್ದೇಶಕರು ವಿನಮ್ರ ದನಿಯಲ್ಲಿ ಹೇಳಿದರು. ಶ್ರೀಕೃಷ್ಣ ಪ್ರಸಾದ, ಒಬ್ಬವ್ಯಕ್ತಿಯ ಜೀವವನ್ನೂ ಜೀವನವನ್ನೂ ಉಳಿಸಿತ್ತು!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi