ನೀವೂ ಕೂಡ ನಿಮ್ಮ ಮನೆಗಳನ್ನು ವೈಕುಂಠವಾಗಿ ಪರಿವರ್ತಿಸಬಹುದು.
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯ ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1973ರ ಸೆಪ್ಟೆಂಬರ್ 25 ರಂದು ಮುಂಬಯಿಯಲ್ಲಿ ನೀಡಿದ ಉಪನ್ಯಾಸ.
ಐನೂರು ವರ್ಷಗಳಿಗೂ ಹಿಂದೆ ಶ್ರೀ ಚೈತನ್ಯ ಮಹಾಪ್ರಭುಗಳು ಪಠಣವನ್ನು ಅಥವಾ ಭಗವಂತನ ಪವಿತ್ರ ನಾಮಗಳ ಸಾಮೂಹಿಕ ಸಂಕೀರ್ತನೆಯನ್ನು ಹರಡುವ ಆಂದೋಲನವನ್ನು ಆರಂಭಿಸಿದರು. ಭಕ್ತಿ ವಿನೋದ ಠಾಕುರರು ಸಂಕೀರ್ತನ ಆಂದೋಲನವನ್ನು ಮುನ್ನಡೆಸಿದರು. ಅವರು ಗೃಹಸ್ಥರಾಗಿದ್ದರು ಮತ್ತು ಮ್ಯಾಜಿಸ್ಟ್ರೇಟ್ ಆಗಿ ಸರ್ಕಾರದ ಗುರುತರ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಅವರು ಶ್ರೇಷ್ಠ ಭಕ್ತರಾಗಿದ್ದರು ಮತ್ತು ಚೈತನ್ಯ ಮಹಾಪ್ರಭುಗಳ ಗುರು-ಶಿಷ್ಯ ಪರಂಪರೆಯಲ್ಲಿ ಮಹಾನ್ ಆಚಾರ್ಯರಾಗಿದ್ದರು.

ಭಕ್ತಿ ವಿನೋದ ಠಾಕುರರು ಅನೇಕ ಭಕ್ತಿ ಗೀತೆಗಳನ್ನು ರಚಿಸಿದ್ದಾರೆ. ಒಂದು ಗೀತೆಯಲ್ಲಿ ಅವರು, ಯೇ ದಿನ ಗೃಹೇ ಭಜನ ದೇಖಿ, ಗೃಹೇತೇ ಗೋಲೋಕ ಭಾಯ – “ಒಂದು ದಿನ ಭಕ್ತಿ ಆಚರಣೆ ಮಾಡುತ್ತಿದ್ದಾಗ, ನನ್ನ ಮನೆಯು ಆಧ್ಯಾತ್ಮಿಕ ಲೋಕ ಗೋಲೋಕ ವೃಂದಾವನವಾಗಿ ಪರಿವರ್ತಿತವಾಗಿರುವುದನ್ನು ಕಂಡೆ.”
ಹೇಗೆ ಕೃಷ್ಣನು ಲೌಕಿಕನಲ್ಲವೋ ಅದೇ ರೀತಿ ಅವನ ಧಾಮ ಗೋಲೋಕವೂ ಲೌಕಿಕವಲ್ಲ. ಕೃಷ್ಣನು ತನ್ನ ಗೋಲೋಕದಲ್ಲಿ ವಾಸಿಸಿದರೂ ಅವನು ಎಲ್ಲ ಕಡೆ ಇರಬಲ್ಲ. ಬ್ರಹ್ಮ ಸಂಹಿತೆ ಹೇಳುತ್ತದೆ,
ಏಕೋಪ್ಯಸೌ ರಚಯಿತುಂ ಜಗದಂಡ ಕೋಟಿಂ
ಯತ್ ಶಕ್ತಿರ್ ಅಸ್ತಿ ಜಗದಂಡ ಚಯಾ ಯದ್ ಅಂತಃ ।
ಅಂಡಾಂತರಸ್ಥ ಪರಮಾಣು ಚಯಾಂತರ ಸ್ಥಂ
ಗೋವಿಂದಂ ಆದಿ ಪುರುಷಂ ತಂ ಅಹಂ ಭಜಾಮಿ ॥
ಕೃಷ್ಣ, ಗೋವಿಂದನು ತನ್ನ ಪೂರ್ಣಾಂಶದ ಒಂದು ಭಾಗವಾಗಿ ಎಲ್ಲ ಕಡೆ ಇದ್ದಾನೆ. ಅವನು ಪರಮಾತ್ಮ. ಅವನು ಪ್ರತಿಯೊಂದು ಲೋಕದಲ್ಲಿಯೂ ಪ್ರತಿಯೊಬ್ಬರ ಹೃದಯದಲ್ಲಿಯೂ ಇದ್ದಾನೆ. ಈಶ್ವರಃ ಸರ್ವ ಭೂತಾನಾಂ ಹೃದ್ ದೇಶೇ ಅರ್ಜುನ ತಿಷ್ಠತಿ ಅವನು ಎಲ್ಲರ ಹೃದಯದಲ್ಲಿ ಮಾತ್ರವಲ್ಲ, ಅಣುವಿನಲ್ಲಿಯೂ ಇದ್ದಾನೆ. ಅದು ಕೃಷ್ಣ.

ಅದೇ ರೀತಿ ಕೃಷ್ಣನ ಧಾಮವಾದ ಗೋಲೋಕ ವೃಂದಾವನ ಕೂಡ ಎಲ್ಲೆಡೆ ಹರಡಿದೆ. ಹೇಗೆ? ಕೃಷ್ಣನ ಭಕ್ತರ ಉಪಸ್ಥಿತಿಯಿಂದ. ಕೃಷ್ಣ ಹೇಳುತ್ತಾನೆ,
ನಾಹಂ ತಿಷ್ಠಾಮಿ ವೈಕುಂಠೇ ಯೋಗಿನಾಂ ಹೃದಯೇಶು ವಾ ।
ತತ್ರ ತಿಷ್ಠಾಮಿ ನಾರದ ಯತ್ರ ಗಾಯಂತಿ ಮದ್ ಭಕ್ತಾಃ ॥
“ಆಧ್ಯಾತ್ಮಿಕ ಲೋಕವಾದ ವೈಕುಂಠದಲ್ಲಿ ನಾನು ಇರುವುದಿಲ್ಲ. ಅಥವಾ ಯೋಗಿಗಳ ಹೃದಯದಲ್ಲಿ ನೆಲೆಸುವುದಿಲ್ಲ. ಭಕ್ತರು ನನ್ನ ವೈಭವಗಳನ್ನು ಜಪಿಸುವ ಕಡೆ ನಾನು ಇರುತ್ತೇನೆ.”
ಇದು ಕೃಷ್ಣನ ಪ್ರಭಾವ. ಸರ್ವ ಶಕ್ತ, ಸರ್ವಜ್ಞ ಮತ್ತು ಸರ್ವ ವ್ಯಾಪಿಯಾದ ಭಗವಂತನನ್ನು ಪಾರ್ಥಿಸುತ್ತೇವೆ. ಪ್ರಭುವು ಏಕಕಾಲಕ್ಕೆ ಎಲ್ಲೆಡೆ ಉಪಸ್ಥಿತನಿರಬಹುದು.
ಭಗವಂತ ಮತ್ತು ಅವನ ಧಾಮದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಚೈತನ್ಯ ಮಹಾಪ್ರಭುಗಳು ಶಿಫಾರಸು ಮಾಡುತ್ತಾರೆ, ಆರಾಧ್ಯೋ ಭಗವಾನ್ ವ್ರಜೇಶ ತನಯಸ್ ತದ್ ಧಾಮ ವೃಂದಾವನಂ. ಕೃಷ್ಣನು ಹೇಗೆ ಪೂಜ್ಯನೋ ಹಾಗೆ ಅವನ ಧಾಮವೂ ಪೂಜ್ಯ. ಅದೇ ರೀತಿ, ಅವನು ಹೇಗೆ ಸರ್ವ ವ್ಯಾಪಿಯೋ ಹಾಗೆ ಅವನ ಧಾಮವೂ ಸರ್ವ ವ್ಯಾಪಿ.
ಒಂದು ಸ್ಥಳವನ್ನು ವೈಕುಂಠವಾಗಿ ಪರಿವರ್ತಿಸುವುದು ಹೇಗೆ? ಭಗವಂತನ ಪವಿತ್ರ ನಾಮಗಳನ್ನು ಜಪಿಸುವ ಮೂಲಕ. ಭಕ್ತರು ಎಷ್ಟು ಪ್ರಬಲರೆಂದರೆ, ಭಗವಂತನ ಪವಿತ್ರ ನಾಮವನ್ನು ಜಪಿಸುವುದರಿಂದ ಅವರು ಸರ್ವ ಶಕ್ತ ದೇವೋತ್ತಮನು ಅವತರಿಸುವಂತೆ ಮಾಡುತ್ತಾರೆ. ಆದುದರಿಂದ ಭಕ್ತಿ ವಿನೋದ ಠಾಕುರರು ಹಾಡುತ್ತಾರೆ, “ಒಂದು ದಿನ ಭಕ್ತಿ ಆಚರಣೆ ಮಾಡುತ್ತಿದ್ದಾಗ, ನನ್ನ ಮನೆಯು ಆಧ್ಯಾತ್ಮಿಕ ಲೋಕ ಗೋಲೋಕ ವೃಂದಾವನವಾಗಿ ಪರಿವರ್ತಿತವಾಗಿರುವುದನ್ನು ಕಂಡೆ.”
ನಾವೂ ಕೂಡ ನಮ್ಮ ಮನೆಗಳನ್ನು ವೈಕುಂಠವಾಗಿ ಪರಿವರ್ತಿಸಬಹುದು. ಅದು ಕಷ್ಟವಲ್ಲ. ಕೃಷ್ಣನು ಸರ್ವ ವ್ಯಾಪಿಯಾಗಿರುವುದರಿಂದ, ವೈಕುಂಠವೂ ಸರ್ವ ವ್ಯಾಪಿ. ಅದನ್ನು ನಾವು ಅಧಿಕೃತ ವಿಧಾನಗಳಿಂದ ಗ್ರಹಿಸಿಕೊಳ್ಳಬೇಕು.

ಭಕ್ತಿ ವಿನೋದ ಠಾಕುರರು ಮತ್ತೂ ಹೇಳುತ್ತಾರೆ, ಕೃಷ್ಣೇರ ಸಂಸಾರ ಕರ ಛಾಡಿ ಅನಾಚಾರ: “ಎಲ್ಲ ಪಾಪ ಕರ್ಮಗಳನ್ನು ತ್ಯಜಿಸಿ ಶ್ರೀ ಕೃಷ್ಣನಿಗೆ ಮಾತ್ರ ಸಂಬಂಧಿಸಿದಂತೆ ನಿಮ್ಮ ಪ್ರಾಪಂಚಿಕ ಕರ್ತವ್ಯಗಳನ್ನು ಮಾಡಿ.” ನಿಮ್ಮ ಮನೆಯನ್ನು ವೈಕುಂಠವಾಗಿ ಪರಿವರ್ತಿಸುವುದು ಕಷ್ಟವಲ್ಲ. ನೀವು ಸರಿಯಾದ ವಿಧಾನವನ್ನು ಅಳವಡಿಸಿಕೊಳ್ಳಬೇಕಷ್ಟೆ. ಅನಾಚಾರ ಎಂದರೆ `ಪಾಪ ಕರ್ಮಗಳು’ ಎಂದರ್ಥ. ನೀವು ಪಾಪಿಗಳಾಗಿದ್ದರೆ ಭಗವಂತನ ಸಹವಾಸ ಪಡೆಯಲಾಗದು. ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ, ಯೇಷಾಂ ತ್ವಂತಗತಂ ಪಾಪಂ… ತೇ ದ್ವಂದ್ವ ಮೋಹ ನಿರ್ಮುಕ್ತಾ ಭಜಂತೇ ಮಾಂ ದೃಢ ವ್ರತಾಃ – “ಪಾಪ ಜೀವನದಿಂದ ಯಾರು ಸಂಪೂರ್ಣ ಮುಕ್ತರೋ ಅವರು ನನ್ನನ್ನು ಪೂಜಿಸಬಹುದು.”
ನಮ್ಮ ಕೃಷ್ಣ ಪ್ರಜ್ಞಾ ಆಂದೋಲನದಲ್ಲಿ ನಾವು ನೀವು, ನಿಮ್ಮ ಉದ್ಯೋಗ ಬಿಡಬೇಕು, ನಿಮ್ಮ ಪತ್ನಿ ಮತ್ತು ಮಕ್ಕಳನ್ನು ತ್ಯಜಿಸಬೇಕು ಹಾಗೂ ಸಂನ್ಯಾಸಿಯಾಗಬೇಕು ಎಂದು ಹೇಳುವುದಿಲ್ಲ. ಇಲ್ಲ, ಅದು ನಮ್ಮ ಆಂದೋಲನವಲ್ಲ. ನಮ್ಮೊಡನೆ ಸಂನ್ಯಾಸಿ, ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥರು ಎಲ್ಲರೂ ಇದ್ದಾರೆ. ಪ್ರತಿಯೊಬ್ಬರೂ ಕೃಷ್ಣನನ್ನು ಆರಾಧಿಸಬಹುದು. ಬ್ರಾಹ್ಮಣ ಅಥವಾ ಬ್ರಹ್ಮಚಾರಿ ಅಥವಾ ಸಂನ್ಯಾಸಿ ಹಿಂದೂ ಹೀಗೆ ನಿರ್ದಿಷ್ಟ ವರ್ಗವಷ್ಟೇ ಭಾಗವಹಿಸಬೇಕೆಂಬ ನಿಯಮ ಇಲ್ಲ. ಇಲ್ಲ. ಕೃಷ್ಣನು ಎಲ್ಲರಿಗೂ ಮುಕ್ತ, ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇ ಅಪಿ ಸ್ಯುಃ ಪಾಪ ಯೋನಯಃ. ಕೆಳ ವರ್ಗದ ಕುಟುಂದಲ್ಲಿ ಜನಿಸಿದವರೂ ಕೃಷ್ಣನನ್ನು ಆಶ್ರಯಿಸಬಹುದು. ಅವನ ಬಳಿಗೆ ಸಾಗಲು ಸರಿಯಾದ ಮಾರ್ಗವನ್ನು ಅಳವಡಿಸಿಕೊಳ್ಳಬೇಕಷ್ಟೇ.

ಅನೇಕ ಭಕ್ತಿ ಗೀತೆಗಳು ಇದನ್ನೇ ಬೋಧಿಸುತ್ತವೆ. ನರೋತ್ತಮ ದಾಸ ಠಾಕುರರು ಹಾಡಿದ್ದಾರೆ, ವಿಷಯ ಛಾಡಿಯಾ ಕಬೇ ಶುದ್ಧ ಹ’ಬೇ ಮನ, ಕಬೇ ಹಾಮ ಹೆರಬೋ ಶ್ರೀ ವೃಂದಾವನ; “ಇಂದ್ರಿಯ ಆನಂದದಿಂದ ಮುಕ್ತನಾದಾಗ ಮತ್ತು ನನ್ನ ಮನಸ್ಸು ಶುದ್ಧವಾದಾಗ ವೃಂದಾವನವನ್ನು ಅರ್ಥ ಮಾಡಿಕೊಳ್ಳುವುದು ನನಗೆ ಸಾಧ್ಯವಾಗುತ್ತದೆ.” ವಿಷಯ ಎಂದರೆ ಇಂದ್ರಿಯ ಸುಖ ಪರಿಶುದ್ಧಗೊಳ್ಳಲು ಇಂದ್ರಿಯ ಆನಂದವನ್ನು ತ್ಯಜಿಸಬೇಕು.
ಇಂದ್ರಿಯ ಸುಖವನ್ನು ಬಿಡಬೇಕು ಎಂದರೆ ಉದಾಹರಣೆಗೆ, ನಾವು ತಿನಿಸು ಸೇವಿಸಬಾರದು ಎಂದು ಅರ್ಥವಲ್ಲ. ಭಕ್ಷಿಸಲು ಯಾವ ನಿಷೇಧವೂ ಇಲ್ಲ. ಆದರೆ ಕೃಷ್ಣನು ಮೊದಲು ಸ್ವೀಕರಿಸಿದ್ದನ್ನು ಮಾತ್ರ ನೀವು ಸೇವಿಸಬಹುದು. ಕೃಷ್ಣ ಪ್ರಜ್ಞೆಯಲ್ಲಿ ನಮ್ಮ ಬದುಕೆಂದರೆ, ಯಾವಾಗಲೂ ಕೃಷ್ಣನ ಸೇವಕನಾಗಿರುವುದು. ಮಾಲೀಕನು ಉಳಿಸಿದ್ದನ್ನು ಸೇವಕನು ಸೇವಿಸುವ ಹಾಗೆ, ನಾವು ಕೃಷ್ಣನ ಸೇವಕರಾಗಿ ಕೃಷ್ಣನು ಉಳಿಸಿದ್ದನ್ನು ಸೇವಿಸಬೇಕು. ಆ ಆಹಾರವನ್ನು ಪ್ರಸಾದ ಅಥವಾ ಮಹಾ ಪ್ರಸಾದ ಎನ್ನುತ್ತಾರೆ.
ನಾವು ಅನಾಚಾರ, ನಿಷಿದ್ಧವಾದವುಗಳನ್ನು, ಪಾಪ ಕ್ರಿಯೆಗಳನ್ನು ಬಿಡುವಂತೆ ನಾವು ನಮ್ಮ ಬದುಕನ್ನು ಸರಿಪಡಿಸಿಕೊಳ್ಳಬೇಕು. ದ್ಯೂತಂ ಪಾನಂ ಸ್ತ್ರೀಯಃ ಸೂನಾ ಯತ್ರಾಧರ್ಮಸ್ ಚತುರ್ ವಿಧಃ. ನಾಲ್ಕು ವಿಧದ ಪಾಪ ಕರ್ಮಗಳಿವೆ. ಪಾಪ ಜೀವನದ ಮೂಲ ತತ್ತ್ವಗಳೆಂದರೆ, ಸ್ತ್ರೀ ಸಂಗ (ಅನೈತಿಕ ಸಂಪರ್ಕ), ಸೂನಾ (ಅನಗತ್ಯ ಪ್ರಾಣಿ ವಧೆ), ಪಾನಾ (ಮದ್ಯ ಸೇವನೆ) ಮತ್ತು ದ್ಯೂತಂ (ಜೂಜು). ನಾವು ಈ ನಾಲ್ಕನ್ನು ಬಿಡಬೇಕು. ಆಗ ನಮ್ಮ ಜೀವನ ಪರಿಶುದ್ಧವಾಗುತ್ತದೆ.

ಈ ನಾಲ್ಕು ತತ್ತ್ವಗಳನ್ನು ತೊರೆದು ಹರೇ ಕೃಷ್ಣ ಮಂತ್ರವನ್ನು ಜಪಿಸಿದರೆ ನಾವು ಪರಿಪೂರ್ಣರಾಗುತ್ತೇವೆ. ನೀವು ನಿದರ್ಶನಗಳನ್ನು ನೋಡಬಹುದು. ಕೃಷ್ಣ ಪ್ರಜ್ಞೆಯನ್ನು ಸ್ವೀಕರಿಸಿದ ಯೂರೋಪಿಯನ್ನರು ಮತ್ತು ಅಮೆರಿಕನ್ನರು ಎಲ್ಲ ಪಾಪ ಕ್ರಿಯೆಗಳಿಗೆ ಒಗ್ಗಿಕೊಂಡುಬಿಟ್ಟಿದ್ದರು. ಆದರೆ ಅವರು ಈಗ ಅದನ್ನೆಲ್ಲ ತ್ಯಜಿಸಿಬಿಟ್ಟಿದ್ದಾರೆ. ಈಗ ಅವರೆಷ್ಟು ಪುಣ್ಯಜೀವಿಗಳಾಗಿದ್ದಾರೆ, ನೋಡಿ. ನೀವು ತತ್ತ್ವಗಳನ್ನು ಸ್ವೀಕರಿಸಬೇಕು. ಆಗ ನಿಮ್ಮ ಬದುಕು ಪರಿಪೂರ್ಣವಾಗುತ್ತದೆ.
ನಿಜವಾದ ಪರಿಪೂರ್ಣತೆ
ಪರಿಪೂರ್ಣ ಬದುಕು ಏನೆಂದು ಜನರಿಗೆ ಗೊತ್ತಿಲ್ಲ. ಲೌಕಿಕ ಉನ್ನತಿಯೇ ಪರಿಪೂರ್ಣತೆ ಎಂದು ಅವರು ಭಾವಿಸುತ್ತಾರೆ. ಇಲ್ಲ, ಅದು ಬದುಕಿನ ಸಮಗ್ರತೆಯಲ್ಲ. ಏಕೆಂದರೆ ಲೌಕಿಕ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿಕೊಂಡರೂ ನೀವು ಅದನ್ನು ಆನಂದಿಸಲಾರಿರಿ. ಯಾವುದೇ ಸಮಯದಲ್ಲಿ ನೀವು ಹೊರದೂಡಲ್ಪಡುವಿರಿ. ಆದುದರಿಂದ ಪರಿಪೂರ್ಣತೆ ಎಲ್ಲಿದೆ?
ನಿಮಗೆ ಒಳ್ಳೆಯ ಮನೆ ಇದೆ ಎಂದುಕೊಳ್ಳಿ. ಹಾಗೆಯೇ ಒಳ್ಳೆಯ ಸಂಪತ್ತು, ಒಳ್ಳೆಯ ಹೆಂಡತಿ ಮತ್ತು ಮಕ್ಕಳು. ಎಲ್ಲವೂ ಸರಿಯಾದದ್ದೇ. ಆದರೆ ಅವುಗಳನ್ನು ನೀವು ಸುಖಿಸುವಿರೆಂಬುವುದಕ್ಕೆ ಖಾತರಿ ಇದೆಯೆ? ಯಾವುದೇ ಕ್ಷಣದಲ್ಲಿ ನೀವು ಹೊರದೂಡಲ್ಪಡಬಹುದು. ಅದು ಪರಿಪೂರ್ಣತೆಯಲ್ಲ. “ಐಹಿಕ ಲೋಕದಲ್ಲಿ ನಾನು ಸಿದ್ಧ ಮಾಡಿಕೊಳ್ಳುತ್ತಿರುವ ಸುಖಿ ಜೀವನ ಶಾಶ್ವತ. ನನ್ನನ್ನು ಹೊರದೂಡುವುದಿಲ್ಲ” ಎಂದು ಮೊದಲು ಖಾತರಿ ಮಾಡಿಕೊಳ್ಳಿ. ಅದು ಪರಿಪೂರ್ಣತೆ.
ಆದರೆ ಅಂತಹ ಖಾತರಿ ಏನೂ ಇಲ್ಲ. ಆದುದರಿಂದ ಅದು ಬದುಕಿನ ಪರಿಪೂರ್ಣತೆ ಅಲ್ಲ. ಇನ್ನು ಹುಟ್ಟು ಇಲ್ಲ, ಇನ್ನು ಸಾವು ಇಲ್ಲ, ಇನ್ನು ವೃದ್ಧಾಪ್ಯವಿಲ್ಲ ಮತ್ತು ರೋಗಗಳಿಲ್ಲ ಎಂಬುವುದು ಖಾತರಿಯಾದಾಗ ಬದುಕಿನ ಪರಿಪೂರ್ಣತೆಯನ್ನು ಕಾಣಬಹುದು.

ಅದನ್ನು ಕೃಷ್ಣ ಪ್ರಜ್ಞೆಯಿಂದ ಸಾಧಿಸಬಹುದು, ಯಾವುದೇ ಲೌಕಿಕ ರೀತಿಯಿಂದ ಅಲ್ಲ. ಹರಿಂ ವಿನಾ ನ ಮೃತಿಂ ತರಂತಿ. ಶಾಶ್ವತ ಆನಂದ ಮತ್ತು ಪೂರ್ಣ ಜ್ಞಾನವನ್ನು ಪಡೆಯುವ ಇಚ್ಛೆ ನಮಗಿದ್ದರೆ – ಸತ್ ಚಿತ್ ಆನಂದ ವಿಗ್ರಹಃ – ನಾವು ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಕೊಳ್ಳಬೇಕು. ಅನ್ಯ ಮಾರ್ಗವಿಲ್ಲ.
ಒಂದೇ ಒಂದು ದಾರಿ ಇರುವುದು. ಬದುಕಿನ ಪರಿಪೂರ್ಣತೆ ಬಗೆಗೆ ನೀವು ಗಂಭೀರವಾಗಿದ್ದರೆ, ನೀವು ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಕೊಳ್ಳಿ.
ಶ್ರೀ ಕೃಷ್ಣನು ಹೇಳುತ್ತಾನೆ,
ಮನ್ ಮನಾ ಭವ ಮದ್ ಭಕ್ತೋ
ಮದ್ ಯಾಜಿ ಮಾಂ ನಮಸ್ಕುರು
ಮಾಂ ಏವೈಷ್ಯಸಿ ಯುಕ್ತ್ವೈವಂ
ಆತ್ಮಾನಂ ಮತ್ ಪರಾಯಣಃ (ಗೀತೆ 9.34)
“ಸದಾ ನನ್ನನ್ನು ಚಿಂತಿಸುವುದರಲ್ಲಿ ಮನಸ್ಸನ್ನು ತೊಡಗಿಸು. ನನ್ನ ಭಕ್ತನಾಗು. ನನಗೆ ನಮಸ್ಕಾರ ಮಾಡು ಮತ್ತು ನನ್ನನ್ನು ಪೂಜಿಸು. ನಿಶ್ಚಯವಾಗಿ ನೀನು ನನ್ನಲ್ಲಿಗೆ ಬರುವೆ.” ಕೇವಲ ನಾಲ್ಕು ವಿಷಯಗಳು. ಕೃಷ್ಣನ ಬಗೆಗೆ ಚಿಂತಿಸುವುದು, ಪೂಜಿಸುವುದು, ಅವನ ಭಕ್ತನಾಗುವುದು ಮತ್ತು ಅವನಿಗೆ ನಮಸ್ಕರಿಸುವುದು ಕಷ್ಟವೇ?
ನಾವು ಈ ಸಂಜೆ ಮಾಡುತ್ತಿರುವಂತೆ, ಇದೇ ವಿಧಾನ. ಹರೇ ಕೃಷ್ಣ ಮಹಾ ಮಂತ್ರವನ್ನು ಜಪಿಸುವ ಮೂಲಕ ನಾವು ಕೃಷ್ಣನನ್ನು ಕುರಿತು ಚಿಂತಿಸುತ್ತಿದ್ದೇವೆ. ದೇವರ ವಿಗ್ರಹಕ್ಕೆ ನಾವು ನಮಸ್ಕರಿಸುತ್ತಿದ್ದೇವೆ. ಮತ್ತು ಭಕ್ತರಾಗಲು ಪ್ರಯತ್ನಿಸುತ್ತಿದ್ದೇವೆ.

ಮತ್ತು ನಾವು ಪೂಜಿಸುತ್ತಿದ್ದೇವೆ. ಕೃಷ್ಣನನ್ನು ಪೂಜಿಸುವ ವಿಧಾನವೇನು? ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ. ಇದು ಕಷ್ಟವಲ್ಲ. ಯಾರಾದರೂ ಕೂಡ ಹೂವು, ಹಣ್ಣು ಅಥವಾ ಸ್ವಲ್ಪ ನೀರು ಸಂಗ್ರಹಿಸಿ ಕೃಷ್ಣನಿಗೆ ಅರ್ಪಿಸಬಹುದು. ಆದರೆ ನಾಯಿ ಬುದ್ಧಿ ಕಾರಣ “ನನಗೆ ಅದನ್ನು ಮಾಡಲಾಗದು” ಎಂದು ಜನರು ಹೇಳುತ್ತಾರೆ.
ಇಲ್ಲವಾದರೆ, ಕೃಷ್ಣ ಪ್ರಜ್ಞೆ ತುಂಬ ಸುಲಭ. ನಾವು ಅದನ್ನು ಅಳವಡಿಸಿಕೊಂಡರೆ ನಮ್ಮ ಬದುಕು ಯಶಸ್ವಿಯಾಗುತ್ತದೆ. ಅದೇ ಬದುಕಿನ ಪರಿಪೂರ್ಣತೆ. ಅದನ್ನು ನಾವು ಬೋಧಿಸುತ್ತಿದ್ದೇವೆ.
ಸರಳ ವಿಧಾನ
ವಿಧಾನವು ತುಂಬ ಸರಳ. ಪ್ರತಿಯೊಬ್ಬರೂ, ಪ್ರತಿಯೊಂದು ದೇಶದಲ್ಲಿಯೂ ಇದನ್ನು ಅಳವಡಿಸಿಕೊಳ್ಳಬಹುದು. ಕೃಷ್ಣ ಪ್ರಜ್ಞೆಯನ್ನು ಒಂದು ವರ್ಗ ಅಳವಡಿಸಿಕೊಳ್ಳಬಹುದು, ಮತ್ತೊಂದು ಇಲ್ಲ ಎಂಬ ಭೇದ ಭಾವವಿಲ್ಲ. ಹರೇ ಕೃಷ್ಣ ಮಂತ್ರವನ್ನು ಈಗ ಜಗತ್ತಿನಾದ್ಯಂತ ಜಪಿಸಲಾಗುತ್ತಿದೆ. ಮತ್ತು ಪಠಿಸುತ್ತಿರುವವರು ವೈಷ್ಣವರಾಗುತ್ತಿದ್ದಾರೆ, ಕೃಷ್ಣನ ಭಕ್ತರಾಗುತ್ತಿದ್ದಾರೆ. ಹಾಗಾದರೆ ಕಷ್ಟವೆಲ್ಲಿಯದು?
ನಮ್ಮ ಕಷ್ಟವೆಂದರೆ ನಮ್ಮ ಹಠ. ಹಠಮಾರಿಗಳಾಗಿದ್ದರೆ, ಸ್ವ ಇಚ್ಛೆಯಂತೆ ನಡೆಯಬೇಕೆಂದಿದ್ದರೆ, ಕೃಷ್ಣ ಪ್ರಜ್ಞಾವಂತರಾಗುವುದು ಕಷ್ಟ. ಆದುದರಿಂದ ಕೃಷ್ಣನು ಹೇಳುತ್ತಾನೆ, ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ, ಈ ವರ್ಗದ ಜನರು ಮಾತ್ರ ಕೃಷ್ಣನನ್ನು ಪೂಜಿಸುವುದಿಲ್ಲ – ದುಷ್ಕೃತಿನಃ (ಸದಾ ಪಾಪ ಕರ್ಮದಲ್ಲಿ ತೊಡಗಿರುವವರು), ಮೂಢಾಃ (ಮೂರ್ಖರು) ಮತ್ತು ನರಾಧಮಾಃ (ಅತ್ಯಂತ ಕೆಳಮಟ್ಟದ ಮನುಜರು).
ಕೃಷ್ಣನನ್ನು ಪೂಜಿಸಲೆಂದೇ ಮಾನವ ಜೀವ ಇರುವುದು. ನರೋತ್ತಮ ದಾಸ ಠಾಕುರರು ಹಾಡುತ್ತಾರೆ, ಹರಿ ಹರಿ ವಿಫಲೇ, ಜನಮ ಗೋಣೈನು – “ನನ್ನ ಬದುಕು ಹಾಳಾಗಿದೆ.” ಏಕೆ? ಮನುಷ್ಯ ಜನಮ ಪಾಯ್ಯಾ , ರಾಧಾ ಕೃಷ್ಣ ನ ಭಜಿಯಾ, ಜಾನಿಯಾ ಸುನಿಯಾ ವಿಷ ಖಾಯ್ನು – “ಮಾನವ ಜನ್ಮ ಪಡೆದು ನಾನು ರಾಧಾ, ಕೃಷ್ಣರನ್ನು ಪೂಜಿಸುವಲ್ಲಿ ವಿಫಲನಾದೆ. ಆದುದರಿಂದ ಗೊತ್ತಿದ್ದೂ ವಿಷ ಕುಡಿದೆ.”

ಜನರು ವಿಷ ಕುಡಿಯುವುದನ್ನು ತಪ್ಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಕೃಷ್ಣ ಪ್ರಜ್ಞಾ ಆಂದೋಲನವು ಎಲ್ಲರ ಅನುಕೂಲಕ್ಕಾಗಿ ಇದೆ. ಪ್ರತಿಯೊಬ್ಬರನ್ನೂ ಆನಂದಪಡಿಸಲು, ಪ್ರತಿಯೊಬ್ಬರನ್ನೂ ಅಮರಗೊಳಿಸಲು, ಪ್ರತಿಯೊಬ್ಬರನ್ನೂ ಶಾಂತಯುತಗೊಳಿಸಲು, ಪ್ರತಿಯೊಬ್ಬರನ್ನೂ ವಿವೇಕಿ (ಜ್ಞಾನಿ) ಗಳನ್ನಾಗಿ ಮಾಡಲು ಇರುವ ಅತಿ ಉತ್ಕೃಷ್ಟ ಮಾನವೀಯ ಆಂದೋಲನವಿದು. ವಿವೇಕವಿಲ್ಲದವರು ಕೃಷ್ಣನಿಗೆ ಶರಣಾಗುವುದು ಸಾಧ್ಯವಿಲ್ಲ. ಮೂಢರಿಗೆ ಸಾಧ್ಯವಿಲ್ಲ.
ತನಗೆ ಶರಣಾಗದವರು ನರಾಧಮರು ಎಂದು ಕೃಷ್ಣನು ಹೇಳುತ್ತಾನೆ. “ಓ, ಅವನು ಹೇಗೆ ನರಾಧಮ? ಅವನು ಎಂ.ಎ., ಪಿಎಚ್.ಡಿ., ಡಿಎಚ್.ಸಿ., ಟಿಎಚ್.ಸಿ ಆಗಿದ್ದಾನೆ.”
ಮಾಯಯಾಪಹೃತ ಜ್ಞಾನ. ಅವನಿಗೆ ಕೃಷ್ಣನ ಬಗೆಗೆ ಗೊತ್ತಿಲ್ಲ. ಆದುದರಿಂದ ಅವನ ಜ್ಞಾನಕ್ಕೆ ಯಾವುದೇ ಮೌಲ್ಯವಿಲ್ಲ. ಈ ಎಂ.ಎ. ಮತ್ತು ಪಿಎಚ್.ಡಿಗಳು ನನಗೆ ನೆರವಾಗದು. ಶಂಕರಾಚಾರ್ಯರು ಹೇಳುತ್ತಾರೆ, ನಹಿ ನಹಿ ರಕ್ಷತಿ ಡುಕೃನ್ ಕರಣೇ : “ನಿನ್ನ ಪದಗಳ ವ್ಯಾಕರಣ ಮೋಡಿಯಿಂದ ನೀನು ರಕ್ಷಿಸಲ್ಪಡುವುದಿಲ್ಲ.” ಭಜ ಗೋವಿಂದಂ , ಭಜ ಗೋವಿಂದಂ , ಭಜ ಗೋವಿಂದಂ ಮೂಢಮತೇ – “ಮೂಢರೇ, ಗೋವಿಂದನ ಪ್ರೀತಿಯ ಸೇವೆಯಲ್ಲಿ ತೊಡಗಿ.” ಶಂಕರಾಚಾರ್ಯರು ನಿರಾಕಾರವಾದಿಗಳಾಗಿದ್ದರೂ ಇದು ಅವರ ಸಲಹೆ.
ಕೃಷ್ಣನು ಹೇಳುತ್ತಾನೆ, “ನನ್ನನ್ನು ಪೂಜಿಸದವರಿಗೆ ಜ್ಞಾನವಿಲ್ಲ.” ಏಕೆಂದರೆ, ವ್ಯಕ್ತಿಯು ಮೂಢನಾಗಿಯೇ ಇದ್ದರೆ, ಅವನ ಜ್ಞಾನದ ಮೌಲ್ಯವಾದರೂ ಏನು? ಅಲ್ಲಿ ಜ್ಞಾನವೇ ಇಲ್ಲ. ಆದುದರಿಂದ ಕೃಷ್ಣನು ಹೇಳುತ್ತಾನೆ, ಬಹೂನಾಂ ಜನ್ಮಾನಾಂ ಅಂತೇ ಜ್ಞಾನವಾನ್ ಮಾಂ ಪ್ರಪದ್ಯತೇ – ಅಸ್ತಿತ್ವಕ್ಕಾಗಿ ಅನೇಕ ಬಾರಿ ಹುಟ್ಟಿ ಸಾಯುವ ಹೋರಾಟದ ಅನಂತರ, ವ್ಯಕ್ತಿಯು ವಾಸ್ತವವಾಗಿ ಜ್ಞಾನಿಯಾದರೆ ಅವನು ಕೃಷ್ಣನಿಗೆ ಶರಣಾಗುತ್ತಾನೆ. ಅದು ಬುದ್ಧಿವಂತಿಕೆ.
ಇದು ಬುದ್ಧಿವಂತಿಕೆ – “ಕೃಷ್ಣ, ನಾನು ಇಂದು ಶರಣಾಗುವೆ. ದೀರ್ಘ ಕಾಲ ನಾನು ಮರೆತಿದ್ದೆ. ನಿನಗೆ ಶರಣಾಗುವುದೇ ನನ್ನ ಏಕೈಕ ವ್ಯವಹಾರ ಎಂದು ನನಗೆ ಗೊತ್ತಿರಲಿಲ್ಲ.”
ಶ್ರೀ ಕೃಷ್ಣನ ರಕ್ಞಣೆ
ಶರಣಾದ ಕ್ಷಣದಲ್ಲಿಯೇ ನೀವು ರಕ್ಷಿಸಲ್ಪಡುವಿರಿ. ಶ್ರೀ ಕೃಷ್ಣನು ಹೇಳುತ್ತಾನೆ,
ಸರ್ವ ಧರ್ಮಾನ್ ಪರಿತ್ಯಜ್ಯ ಮಾಂ ಏಕಂ ಶರಣಂ ವ್ರಜ ।
ಅಹಂ ತ್ವಾಂ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ।।
“ಆತಂಕ ಪಡಬೇಡ. ಎಲ್ಲವೂ ಇದೆ.” ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ – “ನನ್ನ ಭಕ್ತ ಎಂದಿಗೂ ನಾಶವಾಗುವುದಿಲ್ಲ.”
ಕೃಷ್ಣ ಪ್ರಜ್ಞಾ ಆಂದೋಲನವು ಮೂರ್ಖರು, ಮೂಢರು ಮತ್ತು ಪಾಪಿಗಳನ್ನು ವಿವೇಕಿಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ವಾಸ್ತವವಾಗಿ ಅದು ನಡೆಯುತ್ತಿದೆ. ಪಾಪಿ ತಾಪಿ ಜತ ಛಿಲ, ಹರಿನಾಮೇ ಉದ್ಧಾರಿಲ, ತಾರ ಸಾಕ್ಷಿ ಜಗಾಯ್ ಮಾಧಾಯ್. ನಿಮಗೆ ಪುರಾವೆ ಬೇಕೆ? ಜಗಾಯ್ ಮಾಧಾಯ್.

ಚೈತನ್ಯ ಮಹಾಪ್ರಭುಗಳು ಪಾಪಿ ಸೋದರರಾದ ಜಗಾಯ್ ಮತ್ತು ಮಾಧಾಯ್ ಅವರನ್ನು ಮುಕ್ತಿಗೊಳಿಸಿದರು. ಈಗ ಚೈತನ್ಯ ಮಹಾಪ್ರಭುಗಳ ಆಂದೋಲನವು ಎಷ್ಟು ಶಕ್ತಿಶಾಲಿಯಾಗಿದೆ, ನೋಡಿ. ಅನೇಕ ಜಗಾಯ್ ಮತ್ತು ಮಾಧಾಯ್‌ಗಳಿಗೆ ವಿಮೋಚನೆ ಸಿಕ್ಕಿದೆ, ಸಿಗುತ್ತಿದೆ. ಚೈತನ್ಯ ಮಹಾಪ್ರಭುಗಳ ಆಂದೋಲನವು ಅವರಿಗಿಂತ ಹೆಚ್ಚು ಶ್ರೇಷ್ಠವಾಗಿದೆ. ಮಹಾಪ್ರಭುಗಳು ಸ್ವತಃ ಜಗಾಯ್ ಮತ್ತು ಮಾದಾಯ್ ಅವರುಗಳನ್ನು ಮುಕ್ತಗೊಳಿಸಿದರು. ಈಗ, ಅವರ ಆಂದೋಲನದಿಂದ ಸಾವಿರಾರು ಜಗಾಯ್ ಮತ್ತು ಮಾದಾಯ್‌ಗಳಿಗೆ ಮುಕ್ತಿ ಸಿಗುತ್ತದೆ. ಇದು ಪ್ರಾಯೋಗಿಕ ಸಾಕ್ಷಿ.
ಶ್ರೀ ಚೈತನ್ಯರ ವಿಧಾನವು ತುಂಬ ಸುಲಭವಾಗಿದೆ. ಅಷ್ಟೇನೂ ಕಷ್ಟವಲ್ಲ. ಯಾರಾದರೂ ಇದನ್ನು ಅಳವಡಿಸಿಕೊಳ್ಳಬಹುದು. ಆದರೆ ನಾವೂ ಗೊತ್ತಿದ್ದೂ ವಿಷ ಸೇವಿಸಿದರೆ ನಮ್ಮನ್ನು ಯಾರು ರಕ್ಷಿಸುವರು?
ಕೃಷ್ಣ ಪ್ರಜ್ಞಾ ಆಂದೋಲನದಲ್ಲಿ ತೊಡಗಿಕೊಂಡು ಹರೇ ಕೃಷ್ಣ ಮಂತ್ರವನ್ನು ಜಪಿಸಲು ನಾವು ಎಲ್ಲರಿಗೂ ಮನವಿ ಮಾಡಿಕೊಳ್ಳುತ್ತೇವೆ. ನಿಮಗೆ ನಿಮ್ಮ ಕೆಟ್ಟ ಚಟ ಮತ್ತು ಪಾಪ ಕರ್ಮಗಳನ್ನು ಬಿಡಲಾಗದಿದ್ದರೂ ಕೂಡ ನೀವು ಹರೇ ಕೃಷ್ಣ ಮಂತ್ರವನ್ನು ಪಠಿಸಿ ಮತ್ತು ನಿಮ್ಮ ಬದುಕು ಭವ್ಯವಾಗುತ್ತದೆ.
ವಂದನೆಗಳು.






Leave a Reply