ರಾಧಾ ಯಾರು?

ಶ್ರೀಕೃಷ್ಣನ ಅತ್ಯುನ್ನತ ಆರಾಧಕಿಯ ಮಹೋನ್ನತ ಸ್ಥಾನ

ಶ್ರೀಲ ಪ್ರಭುಪಾದರ ಬೋಧನೆಗಳಿಂದ ಸಂಗ್ರಹ : ಪತಿತಪಾವನ ದಾಸ

ದೇವೀ ಕೃಷ್ಣಮಯೀ ಪ್ರೋಕ್ತಾ ರಾಧಿಕಾ ಪರ ದೇವತಾ ।

ಸರ್ವಲಕ್ಷ್ಮೀ ಮಯೀ ಸರ್ವ ಕಾಂತಿಃ ಸಮ್ಮೋಹಿನೀ ಪರಾ ॥

ಎಲ್ಲ ಭಾಗ್ಯದೇವತೆಯರಲ್ಲಿ ಅವಳು ಕೇಂದ್ರ ರೂಪ. ದೇವೋತ್ತಮನ ಸರ್ವಾಕರ್ಷಕ ವ್ಯಕ್ತಿತ್ವವನ್ನು ಆಕರ್ಷಿಸುವ ಎಲ್ಲ ಆಕರ್ಷಣೆಗಳು ಅವಳಲ್ಲಿವೆ. ಅವಳು ಪ್ರಭುವಿನ ಆದಿಮವಾದ ಆಂತರಿಕ ಶಕ್ತಿಯಾಗಿದ್ದಾಳೆ.”

ಪ್ರಭುವು ಪರಮ ಪುರುಷ. ಸಾಮಾನ್ಯ ಪುರುಷನು ಸ್ತ್ರೀಯಿಂದ ಆಕರ್ಷಣೆಗೊಳ್ಳಬೇಕೆಂದು ಬಯಸುವ ಆ ಗುಣವೇ ದೇವೋತ್ತಮ ಪರಮ ಪುರುಷನಲ್ಲಿಯೂ ಅದೇ ರೀತಿಯಲ್ಲಿದೆ. ಅವನು ಕೂಡ ಸ್ತ್ರೀಯ ಸುಂದರವಾದ ರೂಪಲಕ್ಷಣಗಳಿಂದ ಆಕರ್ಷಣೆಗೊಳ್ಳಬೇಕೆಂದು ಬಯಸುತ್ತಾನೆ. ಈಗ ಪ್ರಶ್ನೆ ಏನೆಂದರೆ, ಅಂತಹ ಸ್ತ್ರೀಯ ಆಕರ್ಷಣೆಯಿಂದ ಬಂಧಿತನಾಗಬೇಕೆಂದು ಅವನು ಬಯಸುವಾಗ, ಐಹಿಕ ಸ್ತ್ರೀಯಿಂದ ಅವನು ಆಕರ್ಷಣೆಗೊಂಡಾನೆ? ಅದು ಸಾಧ್ಯವಿಲ್ಲ. ಈ ಐಹಿಕ ಜಗತ್ತಿನಲ್ಲಿರುವ ಪುರುಷರು ಕೂಡ ಪರಬ್ರಹ್ಮನ್‌ನಿಂದ ಆಕರ್ಷಣೆಗೆ ಒಳಪಟ್ಟರೆ ಸ್ತ್ರೀಯರ ಆಕರ್ಷಣೆಯನ್ನು ತೊರೆದುಬಿಡುತ್ತಾರೆ. ಆದ್ದರಿಂದ ಈ ಐಹಿಕ ಆಕರ್ಷಣೆಯು ಖಂಡಿತವಾಗಿಯೂ ಪರಮಪ್ರಭುವನ್ನು ಆಕರ್ಷಿಸಲಾರದು. ಒಬ್ಬಳು ಸ್ತ್ರೀಯಿಂದ ಆಕರ್ಷಣೆಗೊಳ್ಳಬೇಕೆಂದು ಅವನು ಬಯಸಿದರೆ ತನ್ನದೇ ಶಕ್ತಿಯಿಂದ ಅಂತಹ ಒಬ್ಬಳು ಸ್ತ್ರೀಯನ್ನು ಅವನು ಸೃಷ್ಟಿಸಬೇಕಾಗುತ್ತದೆ. ಆ ಸ್ತ್ರೀಯೇ ರಾಧಾರಾಣಿ.

ಶ್ರೀಮತಿ ರಾಧಾರಾಣಿಯು ಕೃಷ್ಣನಂತೆಯೇ ಸಂಪೂರ್ಣವಾಗಿ ಆಧ್ಯಾತ್ಮಿಕಳು. ಅವಳು ಐಹಿಕ ಜಗತ್ತಿಗೆ ಸೇರಿದವಳೆಂದು ಯಾರೂ ಪರಿಗಣಿಸಕೂಡದು. ಸ್ಥೂಲ ಮತ್ತು ಸೂಕ್ಷ್ಮ ದೇಹಗಳನ್ನು ಹೊಂದಿದ, ಐಹಿಕ ಇಂದ್ರಿಯಗಳಿಂದ ಆವೃತರಾದ, ಐಹಿಕ ದೇಹಗಳನ್ನು ಹೊಂದಿರುವ ಬದ್ಧಾತ್ಮರ ಹಾಗೆ ಅವಳು ಖಂಡಿತವಾಗಿಯೂ ಇಲ್ಲ. ಅವಳು ಸರ್ವ ಆಧ್ಯಾತ್ಮಿಕಳು. ಅವಳ ದೇಹ ಮತ್ತು ಮನಸ್ಸು ಎರಡೂ ಒಂದೇ ಆಧ್ಯಾತ್ಮಿಕ ಸಾಕಾರ ರೂಪ. ಅವಳ ದೇಹವು ಆಧ್ಯಾತ್ಮಿಕವಾಗಿರುವುದರಿಂದ ಅವಳ ಇಂದ್ರಿಯಗಳು ಆಧ್ಯಾತ್ಮಿಕವಾಗಿವೆ. ಹೀಗೆ ಅವಳ ದೇಹ, ಆತ್ಮ ಮತ್ತು ಇಂದ್ರಿಯಗಳು ಕೃಷ್ಣಪ್ರೇಮದಲ್ಲಿ ಸಂಪೂರ್ಣವಾಗಿ ಥಳಥಳಿಸುತ್ತಿವೆ. ಅವಳು ಹ್ಲಾದಿನೀ ಶಕ್ತಿಯ ಸಾಕಾರರೂಪ (ಪ್ರಭುವಿನ ಅಂತರಂಗ ಸಾಮರ್ಥ್ಯದ ಸಂತೋಷ ನೀಡುವ ಶಕ್ತಿ). ಆದ್ದರಿಂದ ಅವಳು ಒಬ್ಬಳೇ ಶ್ರೀಕೃಷ್ಣನಿಗೆ ಸಂತೋಷವನ್ನು ನೀಡುವ ಆಕರವಾಗಿದ್ದಾಳೆ.

`ರಾಧಾ’ ಎಂದರೆ ಏನು?

ಕೃಷ್ಣ ವಾಂಛಾ ಪೂರ್ತಿ ರೂಪ ಕರೇ ಆರಾಧನೇ ।

ಅತಏವ `ರಾಧಿಕಾ’ ನಾಮ ಪುರಾಣೇ ವಾಖಾನೇ ॥

ಪ್ರಭು ಕೃಷ್ಣನ ವಾಂಛೆಗಳನ್ನು ಈಡೇರಿಸುವುದೇ ಅವಳು ಮಾಡುವ ಆರಾಧನೆಯಾಗಿದೆ. ಆದ್ದರಿಂದ ಪುರಾಣಗಳು ಅವಳನ್ನು ರಾಧಿಕಾ ಎಂದು ಕರೆಯುತ್ತವೆ.

“ರಾಧಾ” ಎಂಬ ಶಬ್ದವು ಆರಾಧನಾ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ಅದರ ಅರ್ಥ “ಪೂಜೆ”. ಆದ್ದರಿಂದ ಕೃಷ್ಣನ ಪೂಜೆಯಲ್ಲಿ ಎಲ್ಲರನ್ನೂ ಮೀರಿಸುವ ವ್ಯಕ್ತಿತ್ವವನ್ನು ರಾಧಿಕಾ ಎಂದು ಕರೆಯಬಹುದು. ಅವಳೇ ಶ್ರೇಷ್ಠ ದಾಸಿ. ಶ್ರೀಕೃಷ್ಣನಿಗೆ ಸೌಖ್ಯವನ್ನು ಶಾಶ್ವತವಾಗಿ ಒದಗಿಸುವ ಅತ್ಯುನ್ನತಳಾದ ದಾಸಿಯೇ ಶ್ರೀಮತಿ ರಾಧಾರಾಣಿ ಎನ್ನುವುದನ್ನು “ರಾಧಾ” ಎಂಬ ಹೆಸರು ಸೂಚಿಸುತ್ತದೆ. ಹೀಗಿರುತ್ತ ಜೀವಿಗಳ ಸೇವೆಯನ್ನು ಶ್ರೀಕೃಷ್ಣನಿಗೆ ಪ್ರಸಾರ ಮಾಡುವ ಮಾಧ್ಯಮವೇ ಅವಳಾಗಿದ್ದಾಳೆ. ಆದ್ದರಿಂದ ವೃಂದಾವನದಲ್ಲಿನ ಭಕ್ತರು ಶ್ರೀಕೃಷ್ಣನ ಪ್ರೀತಿಪಾತ್ರ ದಾಸರು ತಾವು ಎಂದು ಗುರುತಿಸಿಕೊಳ್ಳುವುದಕ್ಕಾಗಿ ಶ್ರೀಮತಿ ರಾಧಾರಾಣಿಯ ಅನುಗ್ರಹವನ್ನು ಕೋರುತ್ತಾರೆ.

ಶ್ರೀ ರಾಧಿಕಾಳ ಉನ್ನತ ಸ್ಥಾನ

ಶ್ರೀಮತಿ ರಾಧಾರಾಣಿಯು ಕೃಷ್ಣನಿಗಿಂತ ಹದಿನೈದು ದಿನಗಳಷ್ಟು ಚಿಕ್ಕವಳು. ಅವಳು ಸದಾ ತನ್ನ ಕೈಯನ್ನು ತನ್ನ ಗೆಳತಿಯರ ಭುಜಗಳ ಮೇಲೆ ಇರಿಸಿರುತ್ತಾಳೆ, ಮತ್ತು ಅವಳು ಸದಾ ಕೃಷ್ಣನ ಲೀಲೆಗಳನ್ನು ಕುರಿತು ಮಾತನಾಡುತ್ತಿರುತ್ತಾಳೆ ಮತ್ತು ಚಿಂತಿಸುತ್ತಿರುತ್ತಾಳೆ. ಅವಳು ತನ್ನ ಮಧುರವಾದ ಮಾತುಗಳಿಂದ ಸದಾ ಕೃಷ್ಣನಿಗೆ ಒಂದು ಬಗೆಯ ಮಾದಕತೆಯನ್ನು ನೀಡುತ್ತಿರುತ್ತಾಳೆ, ಮತ್ತು ಅವಳು ಸದಾ ಅವನ ಅಭೀಪ್ಸೆಗಳನ್ನು ಈಡೇರಿಸಲು ಸಿದ್ಧಳಾಗಿರುತ್ತಾಳೆ. ಸತ್ಯಭಾಮಳು ಶ್ರೀಮತಿ ರಾಧಾರಾಣಿಗೆ ಇನ್ನೊಬ್ಬಳು ಸ್ಪರ್ಧಿ. ಆದರೆ ಅವಳು ಸದಾ ಶ್ರೀಮತಿ ರಾಧಾರಾಣಿಯ ಮಟ್ಟಕ್ಕೆ ಬರಲು ತವಕಿಸುತ್ತಿರುತ್ತಾಳೆ. ರಾಧಾರಾಣಿಯು ಎಲ್ಲ ಕಾರ್ಯಗಳಲ್ಲಿ ಎಷ್ಟು ನಿಷ್ಣಾತಳೆಂದರೆ ವ್ರಜದ ಎಲ್ಲ ತರುಣಿಯರು ಕಲೆಗಳನ್ನು ಕಲಿಯಲು ಅವಳ ಬಳಿಗೆ ಬರುತ್ತಾರೆ. ಅವಳು ಎಷ್ಟು ಅಸಾಧಾರಣವಾದ ಚೆಲುವೆಯೆಂದರೆ ಭಾಗ್ಯದೇವತೆ ಮತ್ತು ಶಿವನ ಪತ್ನಿ ಪಾರ್ವತಿ ಕೂಡ ಅವಳ ಸೌಂದರ್ಯಕ್ಕೆ ಸಮಾನವಾಗಿ ತಾವೂ ಏರಬೇಕೆಂದು ಬಯಸುತ್ತಾರೆ. ವಿಶ್ವದಲ್ಲಿಯೇ ಅತ್ಯಂತ ಪತಿವ್ರತೆಯಾದ ಸ್ತ್ರೀಯೆಂದು ಪ್ರಸಿದ್ಧಳಾದ ಅರುಂಧತಿ ಕೂಡ ಪಾತಿವ್ರತ್ಯದ ಮಾನಕವನ್ನು ಶ್ರೀಮತಿ ರಾಧಾರಾಣಿಯಿಂದ ಕಲಿಯಲು ಬಯಸುತ್ತಾಳೆ. ರಾಧಾರಾಣಿಯ ಅತ್ಯುನ್ನತವಾದ ದಿವ್ಯಗುಣಗಳನ್ನು ಲೆಕ್ಕಹಾಕಲು ಶ್ರೀಕೃಷ್ಣನಿಗೇ ಸಾಧ್ಯವಾಗದ ಕಾರಣ, ಅವುಗಳನ್ನು ಲೆಕ್ಕಹಾಕಲು ಸಾಧಾರಣ ಮನುಷ್ಯನಿಗಂತೂ ಸಾಧ್ಯವೇ ಇಲ್ಲ.

ಅಂತರಂಗದ ಶಕ್ತಿಗೆ ಮೊದಲ ಪೂಜೆ

ರಾಧಾರಾಣಿಯು ಕೃಷ್ಣನಿಂದ ಬೇರೆಯಾದವಳು ಎಂಬುದಲ್ಲ. ರಾಧಾರಾಣಿಯೂ ಕೂಡ ಕೃಷ್ಣನೇ. ಏಕೆಂದರೆ ಶಕ್ತಿಗೂ, ಶಕ್ತಿವಂತನಿಗೂ ಭೇದವಿಲ್ಲ. ಶಕ್ತಿಯಿಲ್ಲದೆ ಶಕ್ತಿವಂತ ಎನ್ನುವುದಕ್ಕೆ ಅರ್ಥವಿಲ್ಲ. ಹಾಗೆಯೇ ಶಕ್ತಿವಂತನಿಲ್ಲದೆ ಶಕ್ತಿ ಎಂಬುದಿಲ್ಲ. ಅದೇ ರೀತಿಯಲ್ಲಿ ರಾಧೆಯಿಲ್ಲದೆ ಕೃಷ್ಣ ಎನ್ನುವುದಕ್ಕೆ ಅರ್ಥವಿಲ್ಲ ಮತ್ತು ಕೃಷ್ಣನಿಲ್ಲದೆ ರಾಧಾ ಎನ್ನುವುದಕ್ಕೆ ಅರ್ಥವಿಲ್ಲ. ಇದರಿಂದಾಗಿ ವೈಷ್ಣವ ತತ್ತ್ವಜ್ಞಾನವು ಮೊಟ್ಟ ಮೊದಲನೆಯದಾಗಿ ಪರಮ ಪ್ರಭುವಿನ ಅಂತರಂಗದ ಹ್ಲಾದಿನೀ ಶಕ್ತಿಗೆ ಪ್ರಣಾಮಗಳನ್ನು ಸಲ್ಲಿಸುತ್ತದೆ ಮತ್ತು ಆರಾಧಿಸುತ್ತದೆ. ಆದ್ದರಿಂದ ಪ್ರಭು ಮತ್ತು ಅವನ ಶಕ್ತಿಯನ್ನು ಯಾವಾಗಲೂ ರಾಧಾ-ಕೃಷ್ಣ ಎಂದು ಕರೆಯಲಾಗುತ್ತದೆ. ಅದೇ ರೀತಿಯಲ್ಲಿ ನಾರಾಯಣನನ್ನು ಆರಾಧಿಸುವವರು ಮೊದಲು ಲಕ್ಷ್ಮಿಯ ಹೆಸರನ್ನು ಹೇಳುತ್ತಾ ಲಕ್ಷ್ಮೀ-ನಾರಾಯಣ ಎಂದು ನುಡಿಯುತ್ತಾರೆ. ಅದೇ ರೀತಿಯಲ್ಲಿ ಪ್ರಭು ರಾಮನನ್ನು ಆರಾಧಿಸುವವರು ಮೊಟ್ಟ ಮೊದಲನೆಯದಾಗಿ ಸೀತೆಯ ಹೆಸರನ್ನು ಹೇಳುತ್ತಾರೆ. ಯಾವ ಪ್ರಸಂಗದಲ್ಲಿಯೇ ಆಗಲಿ – ಸೀತಾರಾಮ, ರಾಧಾಕೃಷ್ಣ , ಲಕ್ಷ್ಮೀನಾರಾಯಣ – ಶಕ್ತಿಯು ಸದಾ ಮೊದಲು ಬರುತ್ತದೆ.

ರಾಧಾರಾಣಿಯು ಪ್ರಭುವಿನ ದಾಸಿ

ಭಗವಂತನು ಎಂದೂ ಸ್ತ್ರೀ ಅಲ್ಲ. ಅವನು ಯಾವಾಗಲೂ ಪುರುಷನೇ. ಆದ್ದರಿಂದ ಪ್ರಭುವಿನ ರೂಪವನ್ನು ಸ್ತ್ರೀ ಎಂದು ಕಲ್ಪಿಸಿಕೊಳ್ಳುವ ಮಾಯಾವಾದಿಗಳು ತಪ್ಪುದಾರಿಯಲ್ಲಿದ್ದಾರೆ. ಅಗತ್ಯಕಂಡರೆ ಪ್ರಭುವು ಸ್ತ್ರೀ ರೂಪದಲ್ಲಿ ಅವತರಿಸುತ್ತಾನೆ. ಆದರೆ ಅವನ ಶಾಶ್ವತವಾದ ಆಕಾರವು ಪುರುಷನೇ. ಮೂಲತಃ ಅವನು ಪುರುಷ. ಪ್ರಭುವಿನ ಸ್ತ್ರೀ ಲಕ್ಷಣವು ಭಾಗ್ಯದೇವತೆ ಲಕ್ಷ್ಮಿ, ರಾಧಾರಾಣಿ, ಸೀತಾ ಇತ್ಯಾದಿಗಳಲ್ಲಿ ಪ್ರಕಟಗೊಂಡಿದೆ. ಈ ಎಲ್ಲ ಭಾಗ್ಯದೇವತೆಗಳು ಪ್ರಭುವಿನ ದಾಸಿಯರು. ಮಾಯಾವಾದಿಗಳು ಕಲ್ಪಿಸಿಕೊಳ್ಳುವ ಹಾಗೆ ಅವರು ಸರ್ವೋತ್ಕೃಷ್ಟರಲ್ಲ.

ಲಕ್ಷ್ಮಿಯೊಡನೆ ನಾರಾಯಣನನ್ನೂ ಆರಾಧಿಸಿ

ಮೂರ್ಖರಾದ ಐಹಿಕ ವ್ಯಕ್ತಿಗಳು ಧನವನ್ನು ಸಂಗ್ರಹ ಮಾಡುತ್ತಾರೆ ಮತ್ತು ಇತರ ಕಳ್ಳರಿಂದ ಕದಿಯುತ್ತಾರೆ. ಆದರೆ ಅವರು ಅದನ್ನು ಇಟ್ಟುಕೊಳ್ಳಲಾರರು. ಯಾವುದೇ ಸಂದರ್ಭದಲ್ಲಿಯೂ ಅದನ್ನು ಖರ್ಚು ಮಾಡಲೇಬೇಕು. ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ವಂಚಿಸುತ್ತಾನೆ. ಇನ್ನೊಬ್ಬ ವ್ಯಕ್ತಿ ಮತ್ತೊಬ್ಬನನ್ನು ವಂಚಿಸುತ್ತಾನೆ. ಆದ್ದರಿಂದ ಲಕ್ಷ್ಮಿಯನ್ನು ಸ್ವಾಧೀನದಲ್ಲಿಟ್ಟುಕೊಳ್ಳುವ ಅತ್ಯುತ್ತಮ ವಿಧಾನವೆಂದರೆ ಅವಳನ್ನು ನಾರಾಯಣನ ಪಕ್ಕದಲ್ಲಿ ಇರಿಸುವುದು. ಇದೇ ಕೃಷ್ಣಪ್ರಜ್ಞಾ ಆಂದೋಲನ ಪ್ರತಿಪಾದಿಸುತ್ತಿರುವ ಅಂಶ. ನಾವು ಲಕ್ಷ್ಮಿಯನ್ನು (ರಾಧಾರಾಣಿ) ನಾರಾಯಣ (ಕೃಷ್ಣ)ನೊಡನೆ ಆರಾಧಿಸುತ್ತೇವೆ. ನಾವು ನಾನಾ ಮೂಲಗಳಿಂದ ಧನವನ್ನು ಸಂಗ್ರಹಿಸುತ್ತೇವೆ. ಆದರೆ ಆ ಧನವು ರಾಧಾ ಮತ್ತು ಕೃಷ್ಣರಲ್ಲದೆ (ಲಕ್ಷ್ಮೀ-ನಾರಾಯಣ) ಬೇರೆ ಯಾರಿಗೂ ಸೇರಿದ್ದಲ್ಲ. ಲಕ್ಷ್ಮೀ-ನಾರಾಯಣರ ಸೇವೆಯಲ್ಲಿ ಹಣವನ್ನು ಉಪಯೋಗಿಸಿದರೆ ಭಕ್ತನು ತನ್ನಷ್ಟಕ್ಕೆ ತಾನೇ ವೈಭವೋಪೇತವಾದ ಜೀವನವನ್ನು ನಡೆಸುತ್ತಾನೆ. ಆದರೆ ರಾವಣನು ಮಾಡಿದಂತೆ, ಯಾರಾದರೊಬ್ಬನು ಲಕ್ಷ್ಮಿಯನ್ನು ಉಪಭೋಗಿಸಲು ಬಯಸಿದರೆ ಅವನು ಪ್ರಕೃತಿಯ ನಿಯಮಗಳಿಂದ ನಿರ್ನಾಮವಾಗಿ ಹೋಗುತ್ತಾನೆ ಮತ್ತು ಅವನ ಬಳಿ ಅಲ್ಪ ಸ್ವಲ್ಪ ಏನೇನು ಇದೆಯೋ ಅದೆಲ್ಲವನ್ನೂ ಕಿತ್ತುಕೊಳ್ಳಲಾಗುತ್ತದೆ.

ರಾಧಿಕಾಳ ಪಾದಾರವಿಂದಗಳ ಮುದ್ರೆಗಳ ವರ್ಣನೆ

ಶ್ರೀಲ ರೂಪ ಗೋಸ್ವಾಮಿಯವರು ತಮ್ಮ  ಶ್ರೀ ಉಜ್ವಲ ನೀಲಮಣಿ ಎಂಬ ಗ್ರಂಥದಲ್ಲಿ ಕೊಟ್ಟಿರುವ ಶ್ರೀಮತಿ ರಾಧಾರಾಣಿಯ ಪಾದಮುದ್ರೆಗಳ ವಿವರವಾದ ವರ್ಣನೆಯನ್ನು ಶ್ರೀಲ ವಿಶ್ವನಾಥ ಚಕ್ರವರ್ತಿ ಅವರು ಕೆಳಕಂಡಂತೆ ಉದ್ಧರಿಸಿದ್ದಾರೆ.

ಅವಳ ಎಡಪಾದದ ಹೆಬ್ಬೆರಳಿನ ಬುಡದಲ್ಲಿ ಯವೆಯ ಗುರುತು ಇದೆ. ಆ ಗುರುತಿನ ಕೆಳಭಾಗದಲ್ಲಿ ಒಂದು ಚಕ್ರವಿದೆ. ಚಕ್ರದ ಕೆಳಗೆ ಒಂದು ಛತ್ರವಿದೆ. ಛತ್ರದ ಕೆಳಗೆ ಒಂದು ಕಂಕಣವಿದೆ. ಅವಳ ಪಾದದ ಮಧ್ಯಭಾಗದಿಂದ ಹೆಬ್ಬೆರಳು ಮತ್ತು  ಎರಡನೆಯ ಬೆರಳು ಸೇರುವ ಜಾಗದವರೆಗೆ ಒಂದು ಉದ್ದನೆಯ ಗೆರೆ ಹಾದುಹೋಗಿದೆ. ಮಧ್ಯ ಬೆರಳಿನ ಬುಡದಲ್ಲಿ ಒಂದು ಕಮಲ ಪುಷ್ಪವಿದೆ. ಅದರ ಕೆಳಗೆ ಒಂದು ಧ್ವಜವಿದೆ. ಧ್ವಜದ ಕೆಳಗೆ ಒಂದು ಬಳ್ಳಿಯಿದೆ. ಬಳ್ಳಿಯಲ್ಲೊಂದು ಹೂವು ಇದೆ. ಅವಳ ಕಿರು ಬೆರಳ ಬುಡದಲ್ಲಿ ಒಂದು ಆನೆಯ ಅಂಕುಶವಿದೆ. ಅವಳ ಹಿಮ್ಮಡಿಯ ಮೇಲೆ ಒಂದು ಅರ್ಧಚಂದ್ರ ಬಿಂಬವಿದೆ. ಹೀಗೆ ಅವಳ ಎಡ ಪಾದದ ಮೇಲೆ ಹನ್ನೊಂದು ಚಿಹ್ನೆಗಳಿವೆ.

ಅವಳ ಬಲಗಾಲಿನ ಹೆಬ್ಬೆರಳಿನ ಬುಡದಲ್ಲಿ ಒಂದು ಶಂಖವಿದೆ. ಅದರ ಕೆಳಗೆ ಒಂದು ಭಲ್ಲೆ ಇದೆ. ಅವಳ ಬಲ ಪಾದದ ಕಿರುಬೆರಳಿನ ಬುಡದಲ್ಲಿ ಒಂದು ಯಜ್ಞವೇದಿಕೆಯಿದೆ. ಅದರ ಕೆಳಗೆ ಒಂದು ಕರ್ಣಕುಂಡಲವಿದೆ. ಕರ್ಣಕುಂಡಲದ ಕೆಳಗೆ ಒಂದು ಭಲ್ಲೆ ಇದೆ. ಎರಡು, ಮೂರು, ನಾಲ್ಕು ಮತ್ತು ಕಿರುಬೆರಳಿನ ಬುಡಗಳಲ್ಲಿ ಪರ್ವತದ ಚಿಹ್ನೆಯಿದೆ. ಅದರ ಕೆಳಗೆ ಒಂದು ರಥವಿದೆ. ಹಿಮ್ಮಡಿಯಲ್ಲಿ ಒಂದು ಮತ್ಸ್ಯ ಚಿಹ್ನೆಯಿದೆ.

ಹೀಗೆ ಒಟ್ಟಿನಲ್ಲಿ ಶ್ರೀಮತಿ ರಾಧಾರಾಣಿಯ ಪಾದಾರವಿಂದಗಳಲ್ಲಿ ಹತ್ತೊಂಬತ್ತು ವಿಶಿಷ್ಟವಾದ ಚಿಹ್ನೆಗಳಿವೆ.

ರಾಧೆಯು ಕೃಷ್ಣನನ್ನು ಆಕರ್ಷಿಸುತ್ತಾಳೆ

ಭಕ್ತಿಸೇವೆಯು ಕೃಷ್ಣನನ್ನು ಕೂಡ ಆಕರ್ಷಿಸುತ್ತದೆ ಎಂದು ಶ್ರೀಲ ರೂಪ ಗೋಸ್ವಾಮಿಯವರು ಹೇಳಿದ್ದಾರೆ. ಕೃಷ್ಣನು ಪ್ರತಿಯೊಬ್ಬರನ್ನೂ ಆಕರ್ಷಿಸುತ್ತಾನೆ. ಆದರೆ ಭಕ್ತಿ ಸೇವೆಯು ಕೃಷ್ಣನನ್ನೇ ಆಕರ್ಷಿಸುತ್ತದೆ. ಭಕ್ತಿಸೇವೆಯ ಅತ್ಯುನ್ನತ ಶ್ರೇಣಿಯ ಸಂಕೇತವೆಂದರೆ ರಾಧಾರಾಣಿ. ಕೃಷ್ಣನನ್ನು ಮದನ ಮೋಹನ ಎಂದು ಕರೆಯಲಾಗುತ್ತದೆ. ಇದರ ಅರ್ಥವೇನೆಂದರೆ, ಅವನು ಎಷ್ಟು ಆಕರ್ಷಕವಾಗಿದ್ದಾನೆಂದರೆ ಸಾವಿರಾರು ಮನ್ಮಥರ ಆಕರ್ಷಣೆಯನ್ನೇ ಅವನು ಪರಾಜಯಗೊಳಿಸಬಲ್ಲ. ಆದರೆ ರಾಧಾರಾಣಿಯು ಇನ್ನೂ ಹೆಚ್ಚು ಆಕರ್ಷಕವಾಗಿದ್ದಾಳೆ. ಏಕೆಂದರೆ ಅವಳು ಕೃಷ್ಣನನ್ನೇ ಆಕರ್ಷಿಸಬಲ್ಲಳು. ಆದ್ದರಿಂದ ಭಕ್ತರು ಅವಳನ್ನು ಮದನ ಮೋಹನ ಮೋಹಿನೀ ಎಂದು ಕರೆಯುತ್ತಾರೆ. ಅಂದರೆ ಮದನನನ್ನು ಆಕರ್ಷಿಸುವವನನ್ನೇ ಆಕರ್ಷಿಸುವವಳು.

ಭಕ್ತಿಸೇವೆಯನ್ನು ಸಲ್ಲಿಸುವುದೆಂದರೆ ರಾಧಾರಾಣಿಯ ಹೆಜ್ಜೆಗುರುತುಗಳನ್ನು ಅನುಸರಿಸುವುದು. ಆದ್ದರಿಂದ ವೃಂದಾವನದ ಭಕ್ತರು ತಮ್ಮ ಭಕ್ತಿಸೇವೆಯಲ್ಲಿ ಪರಿಪೂರ್ಣತೆಯನ್ನು ಸಾಧಿಸಲು ರಾಧಾರಾಣಿಯ ಸುಪರ್ದಿಗೆ ತಮ್ಮನ್ನು ಒಪ್ಪಿಸಿಕೊಳ್ಳುತ್ತಾರೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಭಕ್ತಿಸೇವೆಯೆನ್ನುವುದು ಐಹಿಕ ಪ್ರಪಂಚದ ಒಂದು ಚಟುವಟಿಕೆಯಲ್ಲ. ಅದು ನೇರವಾಗಿ ರಾಧಾರಾಣಿಯ ನಿಯಂತ್ರಣದ ಅಡಿಯಲ್ಲಿದೆ. ಮಹಾತ್ಮರು ದೈವೀಪ್ರಕೃತಿ, ಎಂದರೆ ಅಂತರಂಗ ಶಕ್ತಿ – ರಾಧಾರಾಣಿಯ ರಕ್ಷಣೆಯಲ್ಲಿದ್ದಾರೆ ಎಂದು ಭಗವದ್ಗೀತೆಯಲ್ಲಿ ದೃಢಪಡಿಸಲಾಗಿದೆ. ಆದ್ದರಿಂದ ನೇರವಾಗಿ ಕೃಷ್ಣನ ಅಂತರಂಗ ಶಕ್ತಿಯ ಅಧೀನದಲ್ಲಿ ಇರುವುದರಿಂದ ಭಕ್ತಿಸೇವೆಯು ಸ್ವತಃ ಕೃಷ್ಣನನ್ನು ಕೂಡ ಆಕರ್ಷಿಸುತ್ತದೆ.

ತಮ್ಮ ಭಕ್ತರನ್ನು ಸಂತುಷ್ಟಗೊಳಿಸಲು ಕಾತರದಿಂದಿರುವ ರಾಧಾಕೃಷ್ಣರು

ರೂಪ ಗೋಸ್ವಾಮಿ ಮತ್ತು ಅವರ ಸೋದರ ಸನಾತನ ಗೋಸ್ವಾಮಿ ವೃಂದಾವನದಲ್ಲಿ ಪ್ರತ್ಯೇಕವಾಗಿ ವಾಸಮಾಡುತ್ತಿದ್ದರು ಮತ್ತು ಭಜನೆ ಹಾಗೂ ಭಕ್ತಿಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು. ರೂಪ ಕಾಡಿನಲ್ಲಿ ವಾಸ ಮಾಡುತ್ತಿದ್ದರು. ಸ್ವಾದಿಷ್ಟವಾದ ಆಹಾರವನ್ನು ಸಿದ್ಧಪಡಿಸಲು ಅಲ್ಲಿ ಅನುಕೂಲವಿರಲಿಲ್ಲ. ರೂಪಗೋಸ್ವಾಮಿ ಕಿರಿಯ ಸೋದರರಾಗಿದ್ದರು. ಅವರು, “ನನಗೆ ಸ್ವಲ್ಪ ಆಹಾರ ಪದಾರ್ಥಗಳು ದೊರೆತರೆ ಸೊಗಸಾದ ಅಡುಗೆಯನ್ನು ಮಾಡಿ ಕೃಷ್ಣನಿಗೆ ಅರ್ಪಿಸಬಹುದು ಮತ್ತು ನನ್ನ ಅಣ್ಣನನ್ನು ಆಹ್ವಾನಿಸಬಹುದು.” ಎಂದು ಯೋಚಿಸಿದರು. ಅದು ಅವರ ಆಸೆಯಾಗಿತ್ತು. ಮುಂದಿನ ಕ್ಷಣದಲ್ಲಿ ಸುಮಾರು ಹನ್ನೆರಡು ವರ್ಷದ ಒಬ್ಬಳು ಲಕ್ಷಣವಾದ ಹುಡುಗಿ ಹಾಲು, ಹಿಟ್ಟು, ತುಪ್ಪ ಮುಂತಾದ ಸಮೃದ್ಧವಾದ ಆಹಾರ ಪದಾರ್ಥಗಳನ್ನು ತಂದುಕೊಟ್ಟಳು. ಇದು ವೈದಿಕ ಪದ್ಧತಿ. ಕೆಲವು ಸಲ ಗೃಹಸ್ಥರು ಸಂನ್ಯಾಸಾಶ್ರಮದಲ್ಲಿರುವ ಯಾಚಕರು ಮತ್ತು ಸಂನ್ಯಾಸಿಗಳಿಗೆ ಆಹಾರ ಪದಾರ್ಥಗಳನ್ನು ಪಡಿಯಾಗಿ ನೀಡುತ್ತಾರೆ. ಕೃಷ್ಣನು ಇಷ್ಟೊಂದು ಪದಾರ್ಥಗಳನ್ನು ಕಳುಹಿಸಿಕೊಟ್ಟಿದ್ದಕ್ಕೆ ರೂಪ ಗೋಸ್ವಾಮಿಯವರಿಗೆ ಬಹಳ ಸಂತೋಷವಾಯಿತು. ಈಗ ಹಬ್ಬದೂಟವನ್ನು ತಯಾರಿಸಬಹುದು ಎಂದು ಯೋಚಿಸಿದರು. ಅವರು ಬಗೆಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿ ತಮ್ಮ ಅಣ್ಣನನ್ನು ಆಹ್ವಾನಿಸಿದರು. ಸನಾತನ ಗೋಸ್ವಾಮಿಯವರು ಬಂದಾಗ ಇದನ್ನೆಲ್ಲ ನೋಡಿ ಅತ್ಯಾಶ್ಚರ್ಯಗೊಂಡರು. “ಇದನ್ನೆಲ್ಲ ಎಲ್ಲಿಂದ ತಂದೆ? ಈ ಕಾಡಿನಲ್ಲಿ ನೀನು ಇಷ್ಟೊಂದು ಸೊಗಸಾದ ಭಕ್ಷ್ಯಗಳನ್ನು ಸಿದ್ಧಪಡಿಸಿದ್ದೀಯೆ. ಇದು ಹೇಗೆ ಸಾಧ್ಯವಾಯಿತು?” ಎಂದು ಕೇಳಿದರು. ಅದಕ್ಕೆ ರೂಪ ಗೋಸ್ವಾಮಿಯವರು ಹೀಗೆ ವಿವರಿಸಿದರು, “ಬೆಳಗ್ಗೆ ನಾನು ಇದಕ್ಕೆ ಅಪೇಕ್ಷೆಪಟ್ಟೆ. ಅದೃಷ್ಟವಶಾತ್‌ ಕೃಷ್ಣನು ಇವುಗಳನ್ನೆಲ್ಲ ನನಗೆ ಕಳುಹಿಸಿಕೊಟ್ಟ. ಒಬ್ಬಳು ಲಕ್ಷಣವಾದ ಹುಡುಗಿ ಬಂದು ಇದನ್ನು ನನಗೆ ಕೊಟ್ಟು ಹೋದಳು.” ಆ ಹುಡುಗಿ ಬಹಳ ಲಕ್ಷಣವಾಗಿದ್ದಳು ಎಂದು ಅವರು ವರ್ಣಿಸಿದರು. ಆಗ ಸನಾತರು ಹೇಳಿದರು, “ಆ ಲಕ್ಷಣವಾದ ಹುಡುಗಿಯೇ ರಾಧಾರಾಣಿ. ನೀನು ಪ್ರಭುವಿನ ಶಾಶ್ವತ ದಾಸಿಯಾದ ರಾಧಾರಾಣಿಯಿಂದ ಸೇವೆಯನ್ನು ಸ್ವೀಕರಿಸಿದ್ದೀಯೆ. ಇದೊಂದು ದೊಡ್ಡ ಪ್ರಮಾದ.” ಅದು ಅವರ ತತ್ತ್ವವಾಗಿತ್ತು. ಅವರು ಪ್ರಭುವಿನಿಂದ ಸೇವೆಯನ್ನು ಸ್ವೀಕರಿಸುತ್ತಿದ್ದಿಲ್ಲ. ಸೇವೆಯನ್ನು ಸಲ್ಲಿಸುವುದಷ್ಟೇ ಅವರಿಗೆ ಬೇಕಾಗಿದ್ದದ್ದು. ಆದರೆ ಕೃಷ್ಣನು ಎಷ್ಟು ಚತುರನೆಂದರೆ ಅವನು ಕೂಡ ತನ್ನ ಭಕ್ತರಿಗೆ ಸೇವೆ ಸಲ್ಲಿಸಲು ಬಯಸುತ್ತಾನೆ. ತನ್ನ ಭಕ್ತನಿಗೆ ಸೇವೆ ಸಲ್ಲಿಸುವ ಒಂದು ಅವಕಾಶಕ್ಕಾಗಿ ಅವನು ಎದುರು ನೋಡುತ್ತಾನೆ. ಇದು ಆಧ್ಯಾತ್ಮಿಕ ಸ್ಪರ್ಧೆ. ಒಬ್ಬ ಪರಿಶುದ್ಧನಾದ ಭಕ್ತನು ಕೃಷ್ಣನಿಂದ ಏನನ್ನೂ ಬಯಸುವುದಿಲ್ಲ. ಅವನು ಕೇವಲ ಕೃಷ್ಣನಿಗೆ ಸೇವೆ ಸಲ್ಲಿಸಲು ಬಯಸುತ್ತಾನೆ. ಕೃಷ್ಣನೂ ಕೂಡ ತನ್ನ ಭಕ್ತರಿಗೆ ಸೇವೆ ಸಲ್ಲಿಸುವ ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ಭಕ್ತನು ಕೃಷ್ಣನನ್ನು ಸಂತುಷ್ಟಗೊಳಿಸಲು ಎಷ್ಟು ಕಾತರನಾಗಿರುತ್ತಾನೆಯೋ ಕೃಷ್ಣನೂ ತನ್ನ ಭಕ್ತನನ್ನು ಸಂತುಷ್ಟಗೊಳಿಸಲು ಯಾವಾಗಲೂ ಅಷ್ಟೇ ಕಾತರನಾಗಿರುತ್ತಾನೆ.

ರಾಧಾರಾಣಿಯನ್ನು ಸಂತುಷ್ಟಗೊಳಿಸಲು ಪ್ರಯತ್ನಿಸಿ

ಕೃಷ್ಣನು ಸದಾ ಪ್ರತಿಯೊಬ್ಬರಿಗೂ ಆಕರ್ಷಕನಾಗಿದ್ದರೆ, ಮತ್ತು ರಾಧಾರಾಣಿಯು ಕೃಷ್ಣನಿಗೆ ಆಕರ್ಷಕವಾಗಿದ್ದರೆ, ಆಗ ಶ್ರೀಮತಿ ರಾಧಾರಾಣಿಯ ಸ್ಥಾನವನ್ನು ನಾವು ಹೇಗೆ ತಾನೆ ಕಲ್ಪಿಸಿಕೊಳ್ಳಬಲ್ಲೆವು? ನಾವು ವಿನೀತರಾಗಿ ಅವಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಮತ್ತು ನಮ್ಮ ಪ್ರಣಾಮಗಳನ್ನು ಅವಳಿಗೆ ಸಲ್ಲಿಸುತ್ತಾ ಹೀಗೆ ಹೇಳಬೇಕು, “ರಾಧಾರಾಣಿ, ನೀನು ಕೃಷ್ಣನಿಗೆ ಪರಮ ಪ್ರಿಯಳು. ನೀನು ವೃಷಭಾನು ಮಹಾರಾಜನ ಮಗಳು. ನೀನು ಕೃಷ್ಣನ ಪ್ರೀತಿಪಾತ್ರಳು. ನಾವು ನಮ್ಮ ಗೌರವಪೂರ್ವಕ ಪ್ರಣಾಮಗಳನ್ನು ನಿನಗೆ ಸಲ್ಲಿಸುತ್ತೇವೆ.” ರಾಧಾರಾಣಿಯು ಕೃಷ್ಣನಿಗೆ ಬಹಳ ಪ್ರಿಯಳಾದವಳು. ರಾಧಾರಾಣಿಯ ಕರುಣೆಯ ಮೂಲಕ ನಾವು ಕೃಷ್ಣನನ್ನು ಸಮೀಪಿಸಿದರೆ, ಬಹಳ ಸುಲಭವಾಗಿ ಅವನನ್ನು ಐದಬಹುದು. ರಾಧಾರಾಣಿಯು ಒಬ್ಬ ಭಕ್ತನನ್ನು ಶಿಫಾರಸ್ಸು ಮಾಡಿದರೆ, ಅವನು ಎಷ್ಟೇ ಮೂರ್ಖನಾಗಿರಲಿ, ಕೃಷ್ಣನು ಕೂಡಲೇ ಅವನನ್ನು ಅಂಗೀಕರಿಸುತ್ತಾನೆ. ತತ್ಪರಿಣಾಮವಾಗಿ ವೃಂದಾವನದಲ್ಲಿ ಭಕ್ತರು ಕೃಷ್ಣನ ಹೆಸರಿಗಿಂತ ಹೆಚ್ಚು ಬಾರಿ ರಾಧೆಯ ಹೆಸರನ್ನೇ ಸಂಕೀರ್ತನೆ ಮಾಡುತ್ತಾರೆ ಎಂಬುದನ್ನು ನೋಡಬಹುದು. ಭಾರತದಲ್ಲಿ ನಾವು ಎಲ್ಲಿಗೇ ಹೋಗಲಿ ಭಕ್ತರು “ಜಯ ರಾಧೇ” ಎಂದು ಮೊರೆಯಿಡುವುದನ್ನು ಕಾಣುತ್ತೇವೆ. ನಾವು ರಾಧಾರಾಣಿಯನ್ನು ಆರಾಧಿಸುವುದರಲ್ಲಿ ಹೆಚ್ಚು ಆಸಕ್ತರಾಗಿರಬೇಕು. ಏಕೆಂದರೆ ನಾವು ಎಷ್ಟೇ ಪತಿತರಾಗಿದ್ದರೂ, ನಾವು ಹೇಗಾದರೂ ಮಾಡಿ ಅವಳನ್ನು ಸಂತುಷ್ಟಗೊಳಿಸಿದರೆ, ನಾವು ಕೃಷ್ಣನನ್ನು ಬಹಳ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ನಾವು ಊಹಾಪೋಹದ ಮೂಲಕ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ಅನೇಕ ಜನ್ಮಗಳ ಕಾಲ ಊಹಾಪೋಹದಲ್ಲಿಯೇ ಕಳೆಯಬೇಕಾಗುತ್ತದೆ. ಆದರೆ ನಾವು ಭಕ್ತಿಸೇವೆಯ ಮಾರ್ಗವನ್ನು ಅನುಸರಿಸಿ, ರಾಧಾರಾಣಿಯನ್ನು ಸಂತುಷ್ಟಗೊಳಿಸಲು ಪ್ರಯತ್ನಿಸಿದರೆ ಸಾಕು, ಆಗ ಕೃಷ್ಣನನ್ನು ಬಹಳ ಸುಲಭವಾಗಿ ಸಾಕ್ಷಾತ್ಕರಿಸಿಕೊಳ್ಳಬಹುದು. ರಾಧಾರಾಣಿಯು ಅಂತಹ ಮಹಾನ್‌ ಭಕ್ತಳಾಗಿದ್ದು, ಅವಳು ಕೃಷ್ಣನನ್ನೇ ನಮಗೆ ದೊರಕಿಸಿಕೊಡಬಲ್ಲಳು.

ಶ್ರೀಲಾಃ ಪ್ರಭುಪಾದಾಃ ಊಚುಃ

ಕೃಷ್ಣನಿಗೆ ಸೇವೆ ಸಲ್ಲಿಸಲು ರಾಧಾರಾಣಿಯ ಮುಂದೆ ಯಾರೇ ಬರಲಿ ಅವಳಿಗೆ ಬಹಳ ಸಂತೋಷವಾಗುತ್ತದೆ. “ಓಹ್‌, ಇಲ್ಲೊಬ್ಬ ಕೃಷ್ಣ ಭಕ್ತನಿದ್ದಾನೆ.” ಕೂಡಲೇ ಅವಳು ಶಿಫಾರಸ್ಸು ಮಾಡುತ್ತಾಳೆ, “ಕೃಷ್ಣಾ, ಇಗೋ ಇಲ್ಲೊಬ್ಬ ಭಕ್ತನಿದ್ದಾನೆ. ಅವನು ನನಗಿಂತ ಉತ್ತಮ.” ಇದು ರಾಧಾರಾಣಿಯ ವೈಶಿಷ್ಟ್ಯ. ನಾನು ಒಬ್ಬ ಭಕ್ತನಾಗಿಲ್ಲದಿರಬಹುದು. ನಾನು ಅತ್ಯಂತ ಪತಿತನಾದ ಧೂರ್ತನಾಗಿರಬಹುದು. ಆದರೆ ರಾಧಾರಾಣಿಯ ಮೂಲಕ ನಾನು ಕೃಷ್ಣನನ್ನು ತಲಪಲು ಪ್ರಯತ್ನಿಸಿದರೆ, ಆಗ ನನ್ನ ಕೆಲಸ ಯಶಸ್ವಿಯಾಗುತ್ತದೆ. ಆದ್ದರಿಂದ ನಾವು ರಾಧಾರಾಣಿಯನ್ನು ಮೊದಲು ಪೂಜಿಸಬೇಕು. ಅದು ನಮ್ಮ ಕರ್ತವ್ಯ. ಕೃಷ್ಣನಿಗೆ ನೇರವಾಗಿ ಒಂದು ಹೂವನ್ನು ಅರ್ಪಿಸುವ ಬದಲು ಅದನ್ನು ರಾಧಾರಾಣಿಯ ಕೈಯಲ್ಲಿಡಿ. “ನನ್ನ ತಾಯಿ ರಾಧಾರಾಣಿ, ಜಗನ್ಮಾತಾ, ದಯವಿಟ್ಟು ಈ ಹೂವನ್ನು ತೆಗೆದುಕೊಂಡು ಕೃಷ್ಣನಿಗೆ ಅರ್ಪಿಸುತ್ತೀಯೊ?” ಆಗ ರಾಧಾರಾಣಿ ಹೇಳುತ್ತಾಳೆ, “ಓಹ್‌ ನೀನೊಂದು ಹೂವನ್ನು ತಂದಿದ್ದೀಯೊ?” ಕೃಷ್ಣನು ಹೇಳಿದ್ದಾನೆ, ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ (ಭಗವದ್ಗೀತೆ 9.26). ಆದರೆ ಕೃಷ್ಣನಿಗೆ ನೇರವಾಗಿ ಕೊಡಲು ಹೋಗಬೇಡಿ. ರಾಧಾರಾಣಿಯ ಮೂಲಕ ಸಮರ್ಪಿಸಿ, ಅಷ್ಟೆ. ಅದನ್ನು ರಾಧಾರಾಣಿಯು ಬಹಳವಾಗಿ ಇಷ್ಟಪಡುತ್ತಾಳೆ.

ಹೀಗಿದೆ ನಮ್ಮ ತತ್ತ್ವಜ್ಞಾನ – ರಾಧಾರಾಣಿಯ ಮೂಲಕ ಕೃಷ್ಣನನ್ನು ಸಂತುಷ್ಟಗೊಳಿಸುವುದು. ಇಂದು ರಾಧಾರಾಣಿಯ ಅವತಾರದ ಮಂಗಳಕರವಾದ ದಿನ. ಆದ್ದರಿಂದ ನಾವು ರಾಧಾರಾಣಿಗೆ ಪುಷ್ಪಾಂಜಲಿಯನ್ನು ಸಲ್ಲಿಸಿ ಪ್ರಾರ್ಥನೆಯನ್ನು ಮಾಡಬೇಕು.

“ರಾಧಾರಾಣಿ, ದಯವಿಟ್ಟು ಕರುಣೆ ತೋರು. ನನ್ನನ್ನು ಕುರಿತು ನಿನ್ನ  ಕೃಷ್ಣನಿಗೆ ಹೇಳು. ನಿನ್ನ ಕೃಷ್ಣನಿಗೆ. ಕೃಷ್ಣನು ನಿನ್ನವನು.” ಕೃಷ್ಣನು ಸ್ವತಂತ್ರನಲ್ಲ. ಕೃಷ್ಣನು ರಾಧೆಯ ಸ್ವತ್ತು. ಆದ್ದರಿಂದ ನೀವು ರಾಧಾರಾಣಿಯ ಮೂಲಕ ಕೃಷ್ಣನನ್ನು ಸಮೀಪಿಸಬೇಕು. ಇಂದು ಮಂಗಳಕರವಾದ ದಿನ. ರಾಧಾರಾಣಿಯನ್ನು ಬಹಳ ಸೊಗಸಾಗಿ ಆರಾಧನೆ ಮಾಡಿ ಮತ್ತು ಸಂತಸದಿಂದಿರಿ.

ಉಪಸಂಹಾರ

ಈ ಐಹಿಕ ಜಗತ್ತಿನಲ್ಲಿ, ಒಬ್ಬ ವ್ಯಕ್ತಿಯು ರಾಧಾ ಮತ್ತು ಕೃಷ್ಣರ ಲೋಕೋತ್ತರವಾದ ಚೆಲುವಿನಿಂದ ಆಕರ್ಷಿತನಾದಾಗ, ಅವನು ಐಹಿಕವಾದ ಸ್ತ್ರೀ ಸೌಂದರ್ಯದಿಂದ ಮತ್ತೆಂದೂ ಆಕರ್ಷಿತನಾಗುವುದಿಲ್ಲ. ಇದೇ ರಾಧಾ-ಕೃಷ್ಣರ ಆರಾಧನೆಯ ವಿಶೇಷ ಮಹತ್ವ. ಇದನ್ನು ಯಾಮುನಾಚಾರ್ಯರು ಸಮರ್ಥಿಸಿದ್ದಾರೆ. ಅವರು ಹೇಳುತ್ತಾರೆ, “ರಾಧಾ ಮತ್ತು ಕೃಷ್ಣರ ಸೌಂದರ್ಯದಿಂದ ನಾನು ಆಕರ್ಷಿತನಾಗಿರುವುದರಿಂದ, ಒಬ್ಬಳು ಸ್ತ್ರೀಯ ಆಕರ್ಷಣೆ ಉಂಟಾದಾಗ ಅಥವಾ ಸ್ತ್ರೀಯೊಬ್ಬಳೊಡನೆ ನಡೆಸಿದ ಲೈಂಗಿಕ ಜೀವನದ ನೆನಪಾದಾಗ, ನಾನು ಕೂಡಲೇ ಅದರ ಮೇಲೆ ಉಗಿಯುತ್ತೇನೆ, ಮತ್ತು ನನ್ನ ಮುಖವು ಹೇವರಿಕೆಯಿಂದ ಅಸಹ್ಯಭಾವ ತಾಳುತ್ತದೆ.” ನಾವು ಮದನ ಮೋಹನನಿಂದ ಆಕರ್ಷಿತರಾದಾಗ, ಕೃಷ್ಣ ಮತ್ತು ಅವನ ಪತ್ನಿಯರ ಸೌಂದರ್ಯದಿಂದ ಆಕರ್ಷಿತರಾದಾಗ, ಬದ್ಧ ಜೀವನದ ಶೃಂಖಲೆಗಳಾದ ಐಹಿಕ ಸ್ತ್ರೀಯ ಸೌಂದರ್ಯವು ನಮ್ಮನ್ನು ಆಕರ್ಷಿಸಲಾರದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi