ಕೃಷ್ಣಪಾಕಶಾಲೆ

ದೇವಾಲಯದ ರಾಜ್‌ಭೋಗ್ ತಿನಿಸುಗಳು

ಪಂಚರಾತ್ರ ಆಗಮದ ಪ್ರಕಾರ ದೇವತಾ ವಿಗ್ರಹದ ಅರ್ಚನೆಯಲ್ಲಿ ಅನೇಕ ಕ್ರಮಗಳನ್ನು ಹಾಗೂ ಉಪಚಾರಗಳನ್ನು ನೆರವೇರಿಸಬೇಕಾಗುತ್ತದೆ. ಅದರಲ್ಲಿ ಅರ್ಚಾ ವಿಗ್ರಹಕ್ಕೆ ಅರ್ಪಿಸಬೇಕಾದ ನೈವೇದ್ಯಕ್ಕೆ ವಿಶೇಷ ಸ್ಥಾನವಿದೆ.

ದಿನನಿತ್ಯ ಮುಂಜಾನೆಯಿಂದ ಹಿಡಿದು ರಾತ್ರಿಯವರೆಗೆ ಏಳು ತರಹದ ನೈವೇದ್ಯಗಳನ್ನು ರಾಧಾಕೃಷ್ಣ ದೇವಾಲಯದಲ್ಲಿ ಅರ್ಪಿಸಲಾಗುತ್ತದೆ. ಅದರಲ್ಲಿ ವಿಶೇಷವಾದದ್ದು ಮಧ್ಯಾಹ್ನ 12:00ಕ್ಕೆ ಅರ್ಪಿಸುವ ರಾಜಭೋಗ. ಈ ನೈವೇದ್ಯದಲ್ಲಿ ಹಲವಾರು ವಿಶೇಷ ಭಕ್ಷ್ಯಗಳನ್ನು ಅರ್ಪಿಸುವುದು ವಾಡಿಕೆ.

ಭಗವಂತನಿಗಾಗಿ ನೈವೇದ್ಯವನ್ನು ಸಿದ್ಧಪಡಿಸುವುದರಲ್ಲಿ ಭಕ್ತರ ದೊಡ್ಡ ತಂಡವೇ ಪಾಲ್ಗೊಳ್ಳುತ್ತದೆ. ಶ್ರೀಮತಿ ಲಕ್ಷ್ಮೀ ಪ್ರಿಯ ದೇವಿ ದಾಸಿ ಅವರಲ್ಲಿ ಒಬ್ಬರು. ಭಕ್ತಿವೇದಾಂತ ದರ್ಶನದ ಓದುಗರಿಗಾಗಿ ಭೋಗದ ಸಿದ್ಧತಾ ವಿಧಾನವನ್ನು ಅವರು ನೀಡಿದ್ದಾರೆ. ನಿಮ್ಮ ಮನೆಯಲ್ಲಿ ನೀವೂ ಸಿದ್ಧಪಡಿಸಿ, ರಾಧಾಕೃಷ್ಣರಿಗೆ ಅರ್ಪಿಸಿ ಪ್ರಸಾದ ಸ್ವೀಕರಿಸಿ.

ಪಾಲಕ್‌ ಪಕೋಡ

ಬೇಕಾಗುವ ಪದಾರ್ಥ:

ಕಡಲೆ ಹಿಟ್ಟು – 1 1/2 ಬಟ್ಟಲು

ಹಸಿರು ಮೆಣಸಿನಕಾಯಿ – 1

ಕೊತ್ತಂಬರಿ ಸೊಪ್ಪು – ಸ್ವಲ್ಪ

ಒಣ ಮೆಣಸಿನ ಪುಡಿ – 1/2 ಟೇಬಲ್ ಚಮಚ

ಕಾಳು ಮೆಣಸಿನ ಪುಡಿ – 1 ಟೇಬಲ್ ಚಮಚ

ಉಪ್ಪು – 1 ಟೇಬಲ್ ಚಮಚ

ಇಂಗು – 1 ಚಿಟಿಕೆ

ಶುಂಠಿ – 1/2 ಇಂಚು

ಪಾಲಕ್ ಸೊಪ್ಪು – 1/2 ಕಂತೆ

ಬೇಯಿಸಿ ಹಿಸುಕಿದ ಆಲೂಗೆಡ್ಡೆ – 1 ಕಪ್

ಕರಿಯಲು ಬೇಕಾಗುವಷ್ಟು ಖಾದ್ಯ ತೈಲ

ಮಾಡುವ ವಿಧಾನ : ಪಾಲಕ್‌ ಸೊಪ್ಪನ್ನು ಚೆನ್ನಾಗಿ 2-3 ಬಾರಿ ತೊಳೆದು, ನುಣ್ಣಗೆ ರುಬ್ಬಿಕೊಳ್ಳಿ. ಮೇಲಿನ ಎಲ್ಲ ಪದಾರ್ಥಗಳನ್ನು ಪಾಲಕ್‌ ಮಿಶ್ರಣಕ್ಕೆ ಹಾಕಿ ಬೆರೆಸಿ ಸಣ್ಣ ಸಣ್ಣ ಉಂಡೆ ಮಾಡಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ.

ಕಾಯಿ ಅನ್ನ

ಬೇಕಾಗುವ ಪದಾರ್ಥ:

ಅಕ್ಕಿ – 1 ಬಟ್ಟಲು

ತೆಂಗಿನ ತುರಿ – 1 ಬಟ್ಟಲು

ತುಪ್ಪ – 1 1/2 ಟೇಬಲ್ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಕೊತ್ತಂಬರಿ ಸೊಪ್ಪು – 1 ಟೇಬಲ್ ಚಮಚ

ಕರಿಬೇವು – 2 ಎಸಳು

ಒಗ್ಗರಣೆಗೆ :

ಸಾಸಿವೆ – 1 ಟೀ ಚಮಚ

ಉದ್ದಿನ ಬೇಳೆ –  1 ಟೀ ಚಮಚ

ಕಡಲೇಬೇಳೆ – 1 ಟೀ ಚಮಚ

ಒಣ ಮೆಣಸಿನಕಾಯಿ – 4  ತುಂಡುಗಳು

ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸಿನ ಕಾಯಿ – 1 1/2 ಟೇಬಲ್ ಚಮಚ

ಗೋಡಂಬಿ ಚೂರುಗಳು – 1 ಟೇಬಲ್ ಚಮಚ

ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು 30 ನಿಮಿಷ ನೀರಿನಲ್ಲಿ ನೆನೆಹಾಕಿ. ಅನಂತರ ಅನ್ನವನ್ನು ಮಾಡಿ. ಅನ್ನವನ್ನು ಒಂದು ಅಗಲವಾದ ತಟ್ಟೆಯಲ್ಲಿ ಹಾಕಿ, ಆರಲು ಬಿಡಿ. ಉಪ್ಪು, ತುಪ್ಪ ಸೇರಿಸಿ ಕಲೆಸಿರಿ.

ಒಂದು ಅಗಲವಾದ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಮಾಡಿ, ಅದರಲ್ಲಿ ಮೊದಲು ಒಗ್ಗರಣೆ ಪದಾರ್ಥಗಳನ್ನು ಅನಂತರ ತೆಂಗಿನ ತುರಿಯನ್ನು ಹಾಕಿ, ಹುರಿಯಿರಿ. ಅನ್ನವನ್ನು ಹಾಕಿ, ಚೆನ್ನಾಗಿ ಬೆರೆಸಿ. ಉರಿಯನ್ನು ಕಡಿಮೆಮಾಡಿ, ಅದರಲ್ಲಿ ಕೊತ್ತಂಬರಿ ಸೊಪ್ಪಿನ ಚೂರುಗಳು, ಕರಿಬೇವು ಮೇಲಿನಿಂದ ಹಾಕಿ ಕಲೆಸಿರಿ. ಕಾಯಿ ಅನ್ನ ಸಿದ್ಧ.

ಬೆಲ್ಲದ ದೋಸೆ

ಬೇಕಾಗುವ ಪದಾರ್ಥ :

ಅಕ್ಕಿ ಹಿಟ್ಟು – 1/2 ಬಟ್ಟಲು

ಗೋಧಿ ಹಿಟ್ಟು – 1 ಬಟ್ಟಲು

ಬೆಲ್ಲದ ಪುಡಿ – 1/2 ಕಪ್

ಏಲಕ್ಕಿ ಪುಡಿ – 1/2 ಟೇಬಲ್ ಚಮಚ

ತೆಂಗಿನ ತುರಿ – 2 ಟೇಬಲ್ ಚಮಚ

ದೋಸೆ ತೆಗೆಯಲು 1 ಬಟ್ಟಲು ತುಪ್ಪ

ಮಾಡುವ ವಿಧಾನ : ಮೇಲಿನ ಎಲ್ಲ ಪದಾರ್ಥಗಳು ಸ್ವಲ್ಪ ಬಿಸಿ ನೀರಿನಲ್ಲಿ ದೋಸೆ ಹಿಟ್ಟು ಕಲೆಸಿ 10 ನಿಮಿಷ ತೆಗೆದಿಡಿ. ಅನಂತರ ದೋಸೆ ಕಾವಲಿಯನ್ನು ಬಿಸಿ ಮಾಡಿ ತುಪ್ಪಹಾಕಿ ಎರಡೂ ಕಡೆ ಕಂದು ಬಣ್ಣ ಬರುವವರೆಗೆ ಹುರಿದು ತೆಗೆಯಿರಿ.

ಬೆಂಡೆಕಾಯಿ ಗೊಜ್ಜು

ಬೇಕಾಗುವ ಪದಾರ್ಥ:

ಹಸಿರು ಮೆಣಿಸಿನಕಾಯಿ – 4-6

ಹುಣಸೆಹಣ್ಣಿನ ರಸ – 1 ನಿಂಬೆ ಗಾತ್ರದ್ದು

ಕಾಯಿತುರಿ – 1 ಬಟ್ಟಲು

ಮೆಂತ್ಯ – 2 ಟೇಬಲ್ ಚಮಚ

ಜೀರಿಗೆ – 2 ಟೇಬಲ್ ಚಮಚ

ಸಾಸಿವೆ – 1 ಟೇಬಲ್‌ ಚಮಚ

ಎಳ್ಳು – 2 ಟೇಬಲ್‌ ಚಮಚ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಅರಿಶಿನ ಪುಡಿ – 2 ಚಿಟಿಕೆ

ಅಕ್ಕಿ – 1 ಚಮಚ

ಬೆಲ್ಲ – 1 ಚಮಚ

ಖಾದ್ಯ ತೈಲ – 2 ಟೇಬಲ್‌ ಚಮಚ

ಮಾಡುವ ವಿಧಾನ: ಮೆಂತ್ಯ, ಜೀರಿಗೆ, ಎಳ್ಳನ್ನು 5 ನಿಮಿಷ ಹುರಿದಿಟ್ಟುಕೊಳ್ಳಿ.  ಕಾಯಿತುರಿ, ಹಸಿರು ಮೆಣಸಿನಕಾಯಿ, ಸಾಸಿವೆ, ಕೊತ್ತಂಬರಿ ಸೊಪ್ಪು, ಅರಿಶಿನಪುಡಿಯೊಂದಿಗೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬೆಂಡೆಕಾಯನ್ನು ಒಂದೊಂದಿಂಚಿನಷ್ಟು ಉದ್ದುದ್ದವಾಗಿ ಕತ್ತರಿಸಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಂಡೆಕಾಯನ್ನು ಹುರಿದು ಬೇಯಿಸಿ. ಹುಣಸೆ ರಸ ಬೆರೆಸಿ. ಮೆಂತ್ಯ, ಕಾಯಿತುರಿ, ಜೀರಿಗೆ ಎಳ್ಳನ್ನು ರುಬ್ಬಿಕೊಂಡು ಅದನ್ನು ಹುರಿದ ಬೆಂಡೆಕಾಯಿಗೆ ಬೆರೆಸಿ. ಉಪ್ಪು, ಬೆಲ್ಲ ಹಾಕಿ. ಸಣ್ಣ ಉರಿಯ ಮೇಲೆ ಇಡಿ. ಎಣ್ಣೆ ಬಿಡುವವರೆಗೆ ಬೇಯಿಸಿ. ಒಗ್ಗರಣೆಗೆ ಸಾಸಿವೆ, ಕರಿಬೇವು, ಒಣಮೆಣಸಿನಕಾಯಿ ಹಾಕಿ, ಈಗ ರುಚಿ ರುಚಿ ಗೊಜ್ಜು ತಯಾರಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi