ರಂಗಸ್ಥಳ

ರಂಗಸ್ಥಳವು ಚಿಕ್ಕಬಳ್ಳಾಪುರದಿಂದ ಸುಮಾರು 6 ಕಿ.ಮೀ. ದೂರದಲ್ಲಿ ಗೌರಿಬಿದನೂರಿಗೆ ಹೋಗುವ ರಸ್ತೆಯಲ್ಲಿ ಸಿಗುತ್ತದೆ. ಇಲ್ಲಿನ ಮುಖ್ಯ ಆಕರ್ಷಣೆಯೆಂದರೆ ಶ್ರೀ ರಂಗನಾಥನ ಸುಂದರ ದೇವಸ್ಥಾನ. ಇಲ್ಲಿ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲಾದ ಭೂನೀಳಾ ಸಮೇತ ಶ್ರೀ ರಂಗನಾಥಸ್ವಾಮಿ ವಿಗ್ರಹವಿದೆ. ಈ ಮೂರ್ತಿಯು ಸಪ್ತ ಋಷಿಗಳಿಂದ ಸ್ಥಾಪಿತವಾಗಿದೆ ಎಂದು ಪ್ರತೀತಿ. ತ್ರೇತಾಯುಗದಲ್ಲಿ ರಾಮನ ಪಟ್ಟಾಭಿಷೇಕವಾಗುವ ವೇಳೆಯಲ್ಲಿ ವಿಭೀಷಣನು ಅಯೋಧ್ಯೆಗೆ ಬಂದಿರುತ್ತಾನೆ. ವಿಭೀಷಣನಿಗೆ ಶ್ರೀರಾಮನು ತನ್ನ ಕುಲದೈವವಾದ  ರಂಗನಾಥ ಸ್ವಾಮಿಯನ್ನು ಬಿದಿರಿನ ಬುಟ್ಟಿಯಲ್ಲಿ ನೀಡುತ್ತಾನೆ. ವಿಭೀಷಣನು ತಮಿಳುನಾಡಿನ ಶ್ರೀರಂಗ ಎಂಬ ಕ್ಷೇತ್ರದಲ್ಲಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾನೆ. ಆಗ ರಂಗಸ್ಥಳದಲ್ಲಿ ಅದರ ಜ್ಞಾಪಕಾರ್ಥವಾಗಿ ಸಪ್ತ ಋಷಿಗಳಿಂದ ರಂಗನಾಥನ ಪ್ರತಿಷ್ಠಾಪನೆ ನಡೆಯುತ್ತದೆ. ಇಲ್ಲಿ ಗರ್ಭಗೃಹವು ಬಿದಿರು ಬುಟ್ಟಿಯ ಆಕಾರದಲ್ಲಿರುತ್ತದೆ. ಸ್ವಾಮಿಯನ್ನು ಗರುಡ ಎತ್ತಿಕೊಂಡಿರುತ್ತಾನೆ ಮತ್ತು ಆದಿಶೇಷನ ಮೇಲೆ ಸ್ವಾಮಿ ಪವಡಿಸಿರುತ್ತಾನೆ. ದೇವರ ಸುತ್ತಲೂ ಬ್ರಹ್ಮ, ಮಹೇಶ್ವರ, ಅಷ್ಟದಿಕ್ಪಾಲಕರು, ಕಲ್ಪವೃಕ್ಷ, ಕಾಮಧೇನು, ಶಂಖ, ಚಕ್ರ, ಧನುಸ್ಸು, ಗದೆ ಮತ್ತು ಸಪ್ತ ಋಷಿಗಳನ್ನು ಕೆತ್ತಲಾಗಿದೆ. ಅಂದರೆ ಸ್ವಾಮಿಯು ವೈಕುಂಠದಲ್ಲಿ ಮಲಗಿರುವ ಹಾಗೆ, ಸುತ್ತಲೂ ಎಲ್ಲರೂ  ಕೂತು ಭಜಿಸುವ ಭಾವನೆ ಮೂಡುತ್ತದೆ. ದೇವರ ಪಾದದ ಬಳಿ ಒಂದು ಕಿಂಡಿ ಇರುತ್ತದೆ. ಮಕರ ಸಂಕ್ರಾಂತಿಯ ದಿನ ಸೂರ್ಯೋದಯವಾಗುವ ವೇಳೆಯಲ್ಲಿ ಸೂರ್ಯನ ಕಿರಣಗಳು ಆ ಕಿಂಡಿಯ ಮುಖಾಂತರ ಸ್ವಾಮಿಯ ಪಾದ ಕಮಲಗಳಿಗೆ ಬೀಳುತ್ತವೆ.

ಈ ದೇವಸ್ಥಾನವನ್ನು ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಯಿತು. ದೇವಸ್ಥಾನದ ಮುಂದಿರುವ ಎರಡು ಕಂಬಗಳಲ್ಲಿ  ಒಂದರ ಮೇಲೆ ಅರಿಷಡ್‌ ವರ್ಗ ಜಯಿಸಿದರೆ ಮೋಕ್ಷ ಸಿಗುವುದು ಎಂದು ತೋರಿಸಲಾಗಿದೆ. ಇನ್ನೊಂದು ಕಂಬದ ಮೇಲೆ ಅರಿಷಡ್‌ ವರ್ಗ ಜಯಿಸದ ವ್ಯಕ್ತಿಯನ್ನು ಹುಲಿಯ ರೂಪದಲ್ಲಿ ಮಹಾಮಾಯೆ ಕಿತ್ತು ತಿನ್ನುತ್ತಿರುವುದನ್ನು ತೋರಿಸಲಾಗಿದೆ. ದೇವಸ್ಥಾನದ ಸುತ್ತಲೂ ಇರುವ ಬೆಟ್ಟಗಳನ್ನು `ಸ್ಕಂದಗಿರಿ ತಪ್ಪಲು’ ಎಂದು ಕರೆಯುತ್ತಾರೆ. ಏಕೆಂದರೆ ಇದೇ ಸ್ಥಳದಲ್ಲಿ ಸ್ಕಂದ ಪುರಾಣದ ಶ್ಲೋಕಗಳನ್ನು ಶುಕಮುನಿಗಳು ಇತರ ಋಷಿಗಳಿಗೆ ಉಪದೇಶ ಮಾಡಿದ್ದರು ಎಂದು ಪ್ರತೀತಿ. ಆಶ್ವಯುಜ ಶುದ್ಧ ಏಕಾದಶಿಯಿಂದ ಪೂರ್ಣಿಮೆಯವರೆಗೆ ಪವಿತ್ರೋತ್ಸವ ನಡೆಯುತ್ತದೆ. ಮಾರ್ಗಶಿರ ಏಕಾದಶಿಯಿಂದ ಸಪ್ತದಿನ ಸಂಕಲ್ಪಿತವಾಗಿ ಬ್ರಹ್ಮರಥೋತ್ಸವ ನಡೆಯುತ್ತದೆ. ಮುಕ್ಕೋಟಿ ಏಕಾದಶೀ (ಮೋಕ್ಷದಾ ಏಕಾದಶೀ) ಮತ್ತು ದ್ವಾದಶಿಯಂದು ವಿಶೇಷ ಪೂಜೆ ನಡೆಸಲಾಗುತ್ತದೆ. ಅಂದು ಉತ್ತರ ದ್ವಾರದಲ್ಲಿ ಸ್ವಾಮಿಯ ದರ್ಶನ ಪಡೆಯಬಹುದಾಗಿದೆ. ಮಕರ ಸಂಕ್ರಾಂತಿ – ರೋಹಿಣಿ ನಕ್ಷತ್ರ ಕೂಡಿದ ದಿನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತೆಂದು ಪ್ರತೀತಿ.

ದೇವಸ್ಥಾನದ ಹೊರಗಿನ ಪ್ರಾಕಾರ ಮತ್ತು ಗೋಪುರಗಳನ್ನು ವಿಜಯನಗರದ ಅರಸರುಗಳು ಕಟ್ಟಿಸಿರುತ್ತಾರೆ. ಗರ್ಭಗೃಹದ ಸುತ್ತಲೂ ಪ್ರಾಕಾರವಿದೆ. ರಂಗನಾಥನು ಯೋಗನಿದ್ರೆಯಲ್ಲಿದ್ದು  ಶೇಷನು ಕೊಡೆಯ ಹಾಗೆ ತನ್ನ ಐದೂ ಹೆಡೆಗಳನ್ನು ಹರಡಿದ್ದಾನೆ.  ದೇವಸ್ಥಾನದಲ್ಲಿ ಶ್ರೀ ಚಕ್ರತ್‌ ಆಳ್ವಾರ್‌, ಶ್ರೀ ರಾಮಾನುಜ ಮತ್ತು ನಮ್ಮಾಳ್ವಾರ್‌ ವಿಗ್ರಹಗಳನ್ನೂ ಕಾಣಬಹುದು. ದೇವಸ್ಥಾನದ ಹತ್ತಿರ ಶಂಖತೀರ್ಥ ಮತ್ತು ಚಕ್ರತೀರ್ಥ ಎಂಬ ಎರಡು ಕಲ್ಯಾಣಿಗಳಿವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

One response to “ರಂಗಸ್ಥಳ”

  1. 188v con Avatar

    Tại 188v con , người chơi có cơ hội trải nghiệm một thế giới cá cược thể thao phong phú với nhiều môn thể thao hấp dẫn như bóng đá, bóng rổ, tennis và đua xe. Hệ thống cá cược thể thao của nhà cái này không chỉ đơn thuần cung cấp các lựa chọn cá cược mà còn mang đến cho người chơi những loại kèo cược đa dạng, từ kèo châu Á, kèo châu Âu cho đến các kèo cược theo hiệp, giúp người chơi có nhiều sự lựa chọn phù hợp với sở thích và chiến lược cá cược của mình. TONY04-24

UPI ID : bvdsstseva@sbi