ಮೂರ್ಖ‌ ಸಂಸ್ಕೃತಿಯಲ್ಲಿ ಉನ್ನತ ಆನಂದ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅವರ  ಕೆಲವು ಶಿಷ್ಯರ ನಡುವೆ  ದಕ್ಷಿಣ ಆಫ್ರಿಕಾದ ಜೊಹಾನಸ್‌ಬರ್ಗ್‌ ನಲ್ಲಿ, ಅಕ್ಟೋಬರ್‌ 18,  1975ರಲ್ಲಿ ನಡೆದ ಸಂವಾದ.

ಶಿಷ್ಯ : ಶ್ರೀಲ ಪ್ರಭುಪಾದ, ಜನರು ಕೆಲವು ಬಾರಿ ಟೀಕಿಸುತ್ತಾ ಹೇಳುತ್ತಾರೆ, “ನಿಮ್ಮ ವೈದಿಕ ಸಂಸ್ಕೃತಿಯು ಭಾರತದಲ್ಲಿ ಅತ್ಯಂತ ದೃಢವಾಗಿ ಸ್ಥಾಪಿತವಾಗಿತ್ತು. ಆದರೆ ಭಾರತವನ್ನು ಈಗ ಬಡ ಮತ್ತು ದುರದೃಷ್ಟವೆಂದು ಪರಿಗಣಿಸುತ್ತಾರೆ. ಆದುದರಿಂದ ನಾವು ಏಕೆ ವೈದಿಕ ಸಂಸ್ಕೃತಿಯನ್ನು ಗೌರವಿಸಬೇಕು? “

ಶ್ರೀಲ ಪ್ರಭುಪಾದ : ವಿಷಯ ಏನೆಂದರೆ, ನೀವು ಪಾಶ್ಚಿಮಾತ್ಯರು ಭಾರತಕ್ಕೆ ಹೋದಾಗ, ನೀವು ಮೂಲ ವೈದಿಕ ಸಂಸ್ಕೃತಿಯನ್ನು ನಿರ್ಬಂಧಿಸಿದಿರಿ.‌ ಭಾರತದ ಜನರಿಗೆ ನಿಮ್ಮ ಮೂರ್ಖ‌ ಸಂಸ್ಕೃತಿಯನ್ನು ತೆಗೆದುಕೊಳ್ಳಲಾಗಲಿಲ್ಲ ಮತ್ತು ನಿಮ್ಮ ಕೃಪೆಯಿಂದ ಅವರು ತಮ್ಮದೇ ಸಂಸ್ಕೃತಿಯನ್ನು ಕಳೆದುಕೊಂಡರು. ಇದು ಭಾರತದ ದುರದೃಷ್ಟ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಹೇಗೆ ಸ್ವೀಕರಿಸಬೇಕೆಂದು ಬ್ರಿಟಿಷರು ಬೋಧಿಸಲಿಲ್ಲ. ಆದರೆ ಅವರು ಪೂರ್ವ‌ ಸಂಸ್ಕೃತಿಯನ್ನು ನಾಶ ಪಡಿಸಿದರು. ಅರ್ಥವಾಯ್ತೆ?

ಶಿಷ್ಯ : ಹೌದು.

ಶ್ರೀಲ ಪ್ರಭುಪಾದ :  ಭಾರತಕ್ಕೆ ಸ್ಥಾನವಿಲ್ಲವಾಗಿದೆ. ಅದು ಸಂಪೂರ್ಣವಾಗಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಸ್ವೀಕರಿಸಲಾರದು ಮತ್ತು ಅದು ತನ್ನದೇ ಸಂಸ್ಕೃತಿಯನ್ನು ಕಳೆದುಕೊಂಡಿದೆ. ಇದು ಭಾರತದ ದುರದೃಷ್ಟ. ವಾಸ್ತವವಾಗಿ ಹೇಗೆ ಪಾಶ್ಚಿಮಾತ್ಯಗೊಳ್ಳಬೇಕು ಎನ್ನುವುದನ್ನು ಬ್ರಿಟಿಷರು ಎಂದಿಗೂ ಭಾರತೀಯರಿಗೆ  ಹೇಳಿಕೊಡಲಿಲ್ಲ. ಅವರು ಭಾರತೀಯರಿಗೆ ಸಾಕಷ್ಟು ಶಿಕ್ಷಣ ನೀಡಲಿಲ್ಲ. ವಿಶೇಷವಾಗಿ, ಭಾರತೀಯರಿಗೆ ಉನ್ನತ ಶಿಕ್ಷಣ ನೀಡಲು ಬ್ರಿಟಿಷರು ಆರಂಭದಲ್ಲಿ ವಿರೋಧವಾಗಿದ್ದರು.

ಅವರಿಗೆ ತಮ್ಮ ವ್ಯವಹಾರವನ್ನು ನಡೆಸಲು ಕೆಲವು ಗುಮಾಸ್ತರು ಬೇಕಾಗಿದ್ದರು. ಅವರ ವ್ಯಾಪಾರ ಮತ್ತು ಸರ್ಕಾರಿ ಕಚೇರಿಗಳಲ್ಲಿ ಕೆಲ ಮೊರನೆಯ, ನಾಲ್ಕನೆಯ ದರ್ಜೆಯ ಜನರ ಅಗತ್ಯವಿತ್ತು. “ಶಿಕ್ಷಿತರು” ಎಂದರೆ ಎಬಿಸಿಡಿ. ಅಷ್ಟೆ. “ಭಾರತೀಯರು ಎಬಿಸಿಡಿ ಕಲಿತುಕೊಳ್ಳಲಿ. ಅನಂತರ 50, 60 ರೂಪಾಯಿ ಸಂಬಳ  ತೆಗೆದುಕೊಳ್ಳಲಿ, ಅನಂತರ ನಗರದ ಆಚೆಗಿನ ಸಣ್ಣಪುಟ್ಟ ನೆರೆಹೊರೆಯಲ್ಲಿನ ತಮ್ಮ ಮನೆಗಳಿಗೆ ಹೋಗಲಿ. ಮರುದಿನ ರೈಲಿನಲ್ಲಿ (ಕೆಲಸಕ್ಕೆ) ಬರಲಿ.

ಅವರು ನಮ್ಮ ನಗರಗಳಲ್ಲಿ ಕಷ್ಟಪಟ್ಟು ಕೆಲಸ ಮಾಡಲಿ ಮತ್ತು ತಮ್ಮ ಜೀವನೋಪಾಯಕ್ಕೆ ಒಂದಷ್ಟು ಸಂಬಳ ಪಡೆಯಲಿ.” ಇಷ್ಟಲ್ಲದೆ ಬೇರೆ ಏನೂ ಅಲ್ಲ.  ಹಣ ಇಲ್ಲ, ಶಿಕ್ಷಣ ಇಲ್ಲ, ಉದ್ದಿಮೆಯ ನಿಜವಾದ ಜ್ಞಾನವಿಲ್ಲ. ಭಾರತೀಯರಿಗೆ ಸರಿಯಾಗಿ ಕಲಿಸಲಿಲ್ಲ. ಉದಾಹರಣೆಗೆ,  ಅಮೆರಿಕದಲ್ಲಿ ನಾನು ಕಾರ್ಖಾನೆಗಳನ್ನು ನೋಡಿದ್ದೇನೆ. ಅಲ್ಲಿ ವ್ಯವಸ್ಥೆ ಅದೆಷ್ಟು ಚೆನ್ನಾಗಿದೆ. ಆದರೆ ಭಾರತದ ಕಾರ್ಖಾನೆಗಳಿಗೆ ಹೋಗಿ.

ಅದು ನರಕ. ಬರೀ ನರಕ. ಬ್ರಿಟಿಷರು ಭಾರತೀಯರನ್ನು ಶೋಷಿಸಿದರು. ಮತ್ತು ಭಾರತದ ವ್ಯಾಪಾರಿ ವರ್ಗವು ಹೇಗೆ ಶೋಷಿಸಬೇಕೆನ್ನುವುದನ್ನು ಅವರಿಂದ ಕಲಿತಿದೆ.

ಶಿಷ್ಯ : ತಮ್ಮದೇ ಜನರ ಶೋಷಣೆ.

ಶ್ರೀಲ ಪ್ರಭುಪಾದ :  ಅಷ್ಟೆ. ಮೊದಲು, ಮ್ಯಾನ್ಚೆಸ್ಟರ್ ವ್ಯಾಪಾರಿ ವರ್ಗವು ಭಾರತೀಯರನ್ನು ಶೋಷಿಸುತ್ತಿತ್ತು.  ಈಗ ಅಹಮದಾಬಾದಿನ ಜನರು ಶೋಷಿಸುವುದು ಹೇಗೆ ಎನ್ನುವುದನ್ನು  ಕಲಿತಿದ್ದಾರೆ.  ಶೋಷಣೆ ಮಾಡುವವರು ತೆರಿಗೆ ನೀಡುವುದರಿಂದ ಸರ್ಕಾರಕ್ಕಂತೂ ತೃಪ್ತಿಯಾಗಿದೆ, “ಏನೂ ಯೋಚಿಸಬೇಡಿ. ಕಾರ್ಮಿಕರು ಕಷ್ಟ ಅನುಭವಿಸುತ್ತಿರಲಿ.” ಇದು ನಡೆಯುತ್ತಿದೆ. ಭಾರತೀಯರು ತಮ್ಮ ಸಂಸ್ಕೃತಿಯನ್ನು ಕಳೆದುಕೊಂಡಿದ್ದಾರೆ.  ಅವರಿಗೆ ಮದ್ಯ ಮತ್ತು ಮಾಂಸ ಸೇವನೆಯನ್ನು ಕಲಿಸಲಾಗಿದೆ.

ಅದೂ ಅಲ್ಲದೆ, ಭಾರತೀಯರು ಪಾಶ್ಚಿಮಾತ್ಯರಷ್ಟು ಕಠಿಣ ಶ್ರಮ ಮಾಡಲಾರರು. ಇಲ್ಲಿನ ಬಿಸಿ ಹವಾಮಾನ ಅದಕ್ಕೆ ಅವಕಾಶ ನೀಡುವುದಿಲ್ಲ. ಭಾರತದ ಹವಾಮಾನವು ಶಾಂತಯುತ ಬದುಕಿಗೆ ಅನುಕೂಲವಾದೆ, ಕಠಿಣ ಶ್ರಮಕ್ಕೆ ಅಲ್ಲ. ಬದಲಿಗೆ ಮಿದುಳನ್ನು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಅದು ಭಾರತದ ಕೊಡುಗೆ. ಭಾರತೀಯರು ಕಠಿಣ ಶ್ರಮಕ್ಕೆ ಮಾಡಿಸಿದವರಲ್ಲ.

ವಾಸ್ತವವಾಗಿ, ಯಾರಿಗೂ ಕೂಡ ಕಠಿಣ ದುಡಿಮೆ ಅಗತ್ಯವಿಲ್ಲ. ಸುಮ್ಮನೆ ಕಷ್ಟಪಟ್ಟು ದುಡಿಯುವುದು ಪ್ರಾಣಿ ಸಂಸ್ಕೃತಿ. ಮಾನವನು ಪ್ರಾಣಿಯಂತೆ ಕಠಿಣ ಶ್ರಮ ಮಾಡತೊಡಗಿದರೆ, ಮಾನವ ಮತ್ತು ಪ್ರಾಣಿಗಳ ನಡುವಿನ ವ್ಯತ್ಯಾಸವೇನು? ಇಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಹವಾಮಾನವು ಬೃಹತ್‌ ಕೈಗಾರಿಕೆಗಳಗೆ ಹೆಚ್ಚು ಸೂಕ್ತವಾಗಿದೆ, ಪ್ರಾಣಿಗಳಂತೆ ಜನರೂ ಕಷ್ಟಪಟ್ಟು ದುಡಿಯಬೇಕೆಂದು ಬೋಧಿಸಲಾಗಿರುತ್ತದೆ ಮತ್ತು ಅವರು ಹಾಗೆಯೇ ಮಾಡುತ್ತಾರೆ. ಆದುದರಿಂದ, ಐಹಿಕವಾಗಿ ಅವರು ಮುನ್ನಡೆದವರು ಎನ್ನಿಸಿಕೊಳ್ಳುತ್ತಾರೆ. ಒಂದು ಹಂತದಲ್ಲಿ ಅವರು ಆಧ್ಯಾತ್ಮಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೌದಲ್ಲವೆ?

ಶಿಷ್ಯ : ಇದು ನಿಜ.

 ಶ್ರೀಲ ಪ್ರಭುಪಾದ : ಭೌತಿಕವಾಗಿ ಪ್ರಗತಿ ಮತ್ತು ಆಧ್ಯಾತ್ಮಿಕವಾಗಿ ಆತ್ಮಹತ್ಯೆ. ನಾನು ಹೇಳುವುದು ಸರಿಯೋ ತಪ್ಪೋ?

ಶಿಷ್ಯ : ಸರಿ.  ಶ್ರೀಲ ಪ್ರಭುಪಾದ, ಮತ್ತೊಂದು ಆಯಾಮ ಕೂಡ ನನ್ನ ಮನಸ್ಸಿಗೆ ಬರುತ್ತಿದೆ. ಜನರು ಭೌತಿಕವಾಗಿ ಪ್ರಗತಿಯನ್ನು ಹೆಚ್ಚಿಸಿಕೊಳ್ಳಬೇಕೆಂದರೆ ಅವರು ತಮ್ಮ ಲೈಂಗಿಕ ಬದುಕನ್ನೂ ಹೆಚ್ಚಿಸಿಕೊಳ್ಳಬೇಕೆಂದು ನೀವು ಭಾಗವತ ಕುರಿತ ನಿಮ್ಮ ವ್ಯಾಖ್ಯಾನದಲ್ಲಿ ಬರೆದಿರುವಿರಿ.

ಶ್ರೀಲ ಪ್ರಭುಪಾದ :  ಹೌದು.  ಲೈಂಗಿಕ ಜೀವನವಿಲ್ಲದೆ ಐಹಿಕವಾಗಿ ಉತ್ಸಾಹಿತರಾಗಿರುವುದು ಸಾಧ್ಯವಿಲ್ಲ.  ಲೈಂಗಿಕತೆಯನ್ನು ನಿಲ್ಲಿಸಿದರೆ ನೀವು ಆಧ್ಯಾತ್ಮಿಕವಾಗಿ ಮುನ್ನಡೆಯುವಿರಿ. ಇದೇ ರಹಸ್ಯ.  

ನೀವು ಲೈಂಗಿಕತೆಯನ್ನು ನಿಲ್ಲಿಸಿದರೆ, ಆಧ್ಯಾತ್ಮಿಕವಾಗಿ ಮುನ್ನಡೆಯುವಿರಿ. ಲೈಂಗಿಕತೆಯಲ್ಲಿ ತೊಡಗಿದರೆ ಭೌತಿಕವಾಗಿ ಉತ್ಸಾಹಿತರಾಗುವಿರಿ, ಉತ್ತೇಜಿತರಾಗುವಿರಿ.  ಪಾಶ್ಚಿಮಾತ್ಯ ಮತ್ತು ಪೌರಸ್ತ್ಯ (ಪೂರ್ವ) ಸಂಸ್ಕೃತಿ ನಡುವಣ ವ್ಯತ್ಯಾಸ ಅದೇ.  ಇಡೀ ಪೂರ್ವ‌ ಸಂಸ್ಕೃತಿಯು ಲೈಂಗಿಕತೆಯನ್ನು ಸ್ಥಗಿತಗೊಳಿಸುವುದರ ಮೇಲೆ ಆಧಾರಿತವಾಗಿದೆ.  ಮತ್ತು ಇಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೇಗೆ ಲೈಂಗಿಕತೆಯನ್ನು ಹೆಚ್ಚಿಸುವುದು ಎನ್ನುವುದರ ಮೇಲೆ. ಇಲ್ಲಿ ಜನರು ಮಾಂಸ, ಮೊಟ್ಟೆ ಮತ್ತು ಮದ್ಯ ಸೇವಿಸುತ್ತಾರೆ.

ಇವು ಲೈಂಗಿಕ ಅಪೇಕ್ಷೆಯನ್ನು ಪ್ರಚೋದಿಸುತ್ತವೆ.  ಲೈಂಗಿಕ ಬದುಕು ತೃಪ್ತಿಕರವಾದ ಕೂಡಲೇ ಕಠಿಣ ಶ್ರಮಕ್ಕೆ ನೀವು ಉತ್ಸಾಹಿತರಾಗುವಿರಿ.  ಆದುದರಿಂದ ಕರ್ಮಿಗಳು ಅಥವಾ ಐಹಿಕ ಪ್ರಗತಿಯನ್ನು ಅರಸುವವರಿಗೆ ವಿವಾಹ ಅಗತ್ಯ. ಏಕೆಂದರೆ ಲೈಂಗಿಕತೆ ಇಲ್ಲದೆ ಅವರಿಗೆ ದುಡಿಮೆ ಸಾಧ್ಯವಿಲ್ಲ. ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಅನ್ವೇಷಿಸುವವರಿಗೆ ಲೈಂಗಿಕ ಕ್ರಿಯೆ ನಿಶಿದ್ಧ.

ವಾಸ್ತವವಾಗಿ, ಈ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಜನರಿಗೆ ಜೀವನದ ವಿಜ್ಞಾನವೆಂದರೆ ಏನೆಂದು ತಿಳಿಯದು. ಅವರಿಗೆ ಜೀವ, ಬದುಕು ಎಂದರೆ ಶರೀರ. ಅವರ ಬದುಕು ಈ ದೇಹ. ಅಂದರೆ ಅವರಿಗೆ ಬದುಕು ಏನೆಂದು ಗೊತ್ತಿಲ್ಲ ಎಂದು ಅರ್ಥ.‌ ಒಬ್ಬ ಜೀವಂತ ವ್ಯಕ್ತಿಯು ಹೊರಟು ಹೋದಾಗ  ಅವನ ದೇಹವು ಅಲ್ಲಿಯೇ ಮಲಗಿರುತ್ತದೆ.

ತಮ್ಮ ವೈಜ್ಞಾನಿಕ ಮುನ್ನಡೆ ಬಗೆಗೆ ಅವರಿಗೆ ತುಂಬಾ ಹೆಮ್ಮೆ, ಆದರೆ ವಾಸ್ತವವಾಗಿ ಅವರಿಗೆ ಆ ವ್ಯಕ್ತಿ ಯಾರೆಂದು ಗೊತ್ತೆ? ಅವರಿಗೆ ವಿವರಿಸುವುದು ಸಾಧ್ಯವಿಲ್ಲ. ಇದು ಅವರ ಅಜ್ಞಾನ. ಆದರೂ ಅವರಿಗೆ ತಮ್ಮ ಪ್ರಗತಿಯ ಬಗೆಗೆ ತುಂಬಾ ಹೆಮ್ಮೆ.

ಆದರೆ ಒಮ್ಮೆ ಆ ವ್ಯಕ್ತಿಯ ಜೀವಿತಾವಧಿ ಅಂತ್ಯಗೊಂಡ ಮೇಲೆ ಅವರು ಅವನನ್ನು ಪುನಃ ಜೀವಿಸುವಂತೆ ಮಾಡುವರೇ? ಅವರಿಗೆ ಅದು ಸಾಧ್ಯವಿಲ್ಲ. ಅಂದರೆ ಅವರ ಸಂಸ್ಕೃತಿಯ ಮೂಲ-ತತ್ತ್ವವೇ ಅಜ್ಞಾನ ಎಂದು ಅರ್ಥ.‌  

 ಮೂಢೋ ಅಯಂ ನಾಭಿಜಾನಾತಿ : ಕೃಷ್ಣನು ಹೇಳುತ್ತಾನೆ, “ಮೂಢರಿಗೆ ಬುದ್ಧಿಹೀನರಿಗೆ ಎಂದಿಗೂ ಆತ್ಮ ಅಥವಾ ಪರಮಾತ್ಮ  ಅರ್ಥವಾಗುವುದಿಲ್ಲ.”‌ ಮತ್ತು ಮೋಘಾಶಾ ಮೋಘಕರ್ಮಾಣೋ‌ ಮೋಘಜ್ಞಾನಾ ವಿಚೇತಸಃ : “ಅವರ ಜ್ಞಾನ ಎನ್ನಿಸಿಕೊಳ್ಳುವ ಐಹಿಕ ಜಾಣತನವು ಅವರನ್ನು ಆಧ್ಯಾತ್ಮಿಕವಾಗಿ ದಿಗ್ಭ್ರಮೆಗೊಳಿಸುತ್ತದೆ.” ಏಕೆ?  ರಾಕ್ಷಸೀಂ ಆಸುರಿಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ : “ನನ್ನ ದಿವ್ಯ ಪ್ರಕೃತಿಯಲ್ಲಿ ಅಲ್ಲ,  ಐಹಿಕ ಪ್ರಕೃತಿಯಲ್ಲಿ ಯಾರು ಆಶ್ರಯ ಪಡೆಯುವರೋ ಅವರು ಎಷ್ಟು ದಿಗ್ಭ್ರಮೆಗೊಳ್ಳುವರೆಂದರೆ ಅವರಿಗೆ ಬದುಕಿನ ನಿಜವಾದ ಗುರಿ, ಉದ್ದೇಶ ಏನೆಂದು ತಿಳಿದಿರುವುದಿಲ್ಲ.

ಅವರು ಪೂರ್ಣವಾಗಿ ದಿಗ್ಭ್ರಮೆಗೊಳ್ಳುತ್ತಾರೆ.” ಆದುದರಿಂದ, ಮೋಘಕರ್ಮಾಣೋಃ : “ಅವರು ಏನೇ ಮಾಡುತ್ತಿರಲಿ, ಅದು ಅನುಪಯುಕ್ತ.” ಮತ್ತು ಮೋಘ ಜ್ಞಾನ : ಹೀಗೆ ಹೇಳಿಕೊಳ್ಳುವ ಮುನ್ನಡೆಯ ಸಂಸ್ಕೃತಿ, ಅಲ್ಲಿ ಆಧ್ಯಾತ್ಮಿಕ ಜ್ಞಾನವಿಲ್ಲ. ಅಂದರೆ, ವಾಸ್ತವವಾಗಿ ಜ್ಞಾನವೇ ಇಲ್ಲ.

ಶಿಷ್ಯ : ಆದುದರಿಂದ  ತಮ್ಮ ಜ್ಞಾನದ ಪ್ರಗತಿಯಿಂದ ಅವರು ತಮ್ಮ ಲೈಂಗಿಕ ಬದುಕನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ನಿಜವಾಗಿಯೂ ಜ್ಞಾನದಲ್ಲಿ ಪ್ರಗತಿಹೊಂದಿದ್ದರೆ ಅವರು ತಮ್ಮ ಲೈಂಗಿಕ ಜೀವನವನ್ನು ಕಡಮೆ ಮಾಡಿಕೊಳ್ಳಬೇಕು.

ಶ್ರೀಲ ಪ್ರಭುಪಾದ :  ಹೌದು. ಅವರಿಗೆ ಜ್ಞಾನ ಏನೆಂದೇ ಗೊತ್ತಿಲ್ಲ. ಈ ಮೂರ್ಖರು ಮತ್ತು ಅಜ್ಞಾನಿಗಳಿಗೆ ಜ್ಞಾನ ಎಂದರೆ ಲೈಂಗಿಕ. ಅದು ಅವರ ಜ್ಞಾನ.  ಅವರಿಗೆ ಜ್ಞಾನದ ಮುನ್ನಡೆ ಎಂದರೆ ಹೇಗೆ ಲೈಂಗಿಕ ಜೀವನದಲ್ಲಿ ತೃಪ್ತಿ ಪಡೆಯುವುದು. ಗರ್ಭಪಾತದಲ್ಲಿ ಹೇಗೆ ಆಶ್ರಯ ಪಡೆಯುವುದು, ಶಿಶು ಹತ್ಯೆ. 

ಗರ್ಭನಿರೋಧಕ ವಿಧಾನಗಳನ್ನು ಪರಿಪಕ್ವಗೊಳಿಸುವುದು. ಎಲ್ಲವೂ ಲೈಂಗಿಕ ಪ್ರಕ್ರಿಯೆ ಆಧಾರಿತ. ಅಷ್ಟೆ. ಈ ವಿಷಯಗಳನ್ನು ಬಿಟ್ಟರೆ ಅವರಿಗೆ ಬೇರೆ ಏನೂ ತಿಳಿಯದು. ಲೈಂಗಿಕ ಪ್ರಕ್ರಿಯೆ ನಂತರ ತೊಂದರೆಗಳಿವೆ ಎನ್ನುವುದು ಅವರಿಗೆ ಗೊತ್ತು. ಇಷ್ಟಾದರೂ ಅವರು ಲೈಂಗಿಕ ಆಸಕ್ತಿಯನ್ನು ತೊರೆಯುವುದಿಲ್ಲ. ಆದುದರಿಂದ ಅವರು ಗರ್ಭನಿರೋಧಕ ವಿಧಾನ ಅಥವಾ ಶಿಶುಹತ್ಯೆಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳುತ್ತಾರೆ.

ಅಂದರೆ ನಾಗರಿಕತೆ ಎನ್ನಿಸಿಕೊಳ್ಳುವ ಅವರ ಇಡೀ ಸಂಸ್ಕೃತಿಯು ಲೈಂಗಿಕ ಆಧಾರಿತ. ಅಷ್ಟೆ. ಆದರೆ ಯನ್‌ ಮೈಥುನಾದಿ ಗೃಹಮೇಧಿಸುಖಂ ಹಿ ತುಚ್ಛಂ , ಕಣ್ಡೂಯನೇನ ಕರಯೋರಿವ ದುಃಖದುಃಖಂ (ಭಾಗವತಂ 7.9.45) : “ಲೈಂಗಿಕ ಜೀವನವನ್ನು ತುರಿಕೆಯನ್ನು ನಿವಾರಿಸಲು ಎರಡು ಕೈಗಳನ್ನು ಉಜ್ಜುವುದಕ್ಕೆ ಹೋಲಿಸಲಾಗುತ್ತದೆ. ಆಧ್ಯಾತ್ಮಿಕ ಜ್ಞಾನವಿಲ್ಲದ ಗೃಹಸ್ಥರು ಎಂದು ಕರೆಯಲ್ಪಡುವ ಗೃಹಮೇಧಿಗಳು ಈ ತುರಿಕೆಯೇ  ಶ್ರೇಷ್ಠ ಸಂತೋಷ ಎಂದು ಭಾವಿಸುತ್ತಾರೆ, ವಾಸ್ತವವಾಗಿ ಇದು ದುಃಖದ ಮೂಲವಾಗಿದೆ.  ಅದು ಅಸಹನೀಯವಾದುದು.“

ಇದು ಸಂತೋಷವೇ?  ಈ ಮುನ್ನಡೆದಿದ್ದಾರೆ ಎಂದು ಹೇಳುವ  ಮುರ್ಖರು ಇದನ್ನು ಆನಂದವೆಂದು ಭಾವಿಸುತ್ತಾರೆ. ಈ ಮೂರನೆಯ,  ನಾಲ್ಕನೆಯ ದರ್ಜೆಯ ಸಂತೋಷವನ್ನು ನಾವು ಆನಂದವೆಂದು ನಂಬಬೇಕು! ಯನ್‌ ಮೈಥುನಾದಿ ಗೃಹಮೇಧಿಸುಖಂ ಹಿ ತುಚ್ಛಂ  ಅಸಹನೀಯವಾದುದು, ತುಚ್ಛವಾದುದು. ವೈದಿಕ ಸಾಹಿತ್ಯವು ಹೇಳುತ್ತದೆ, “ಲೈಂಗಿಕತೆಯು ಅತ್ಯಂತ ಅಸಹ್ಯಕರ. ಆದರೂ ಮೂರ್ಖರು ಇದನ್ನು ಅತ್ಯುನ್ನತ ಗುರಿ ಎಂದು ಭಾವಿಸುತ್ತಾರೆ ಮತ್ತು ಈ ಅಸಹ್ಯಕರ ಆನಂದಕ್ಕೆ ಅವರು ವ್ಯಾಪಕ ವ್ಯವಸ್ಥೆ ಮಾಡಿಕೊಳ್ಳುತ್ತಾರೆ.”

ನಾಯಿಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ, ಅವುಗಳ “ಆನಂದವು” ಅಸಹ್ಯಕರ ಮತ್ತು ಅಗಣ್ಯ . ಆದುದರಿಂದ ರಸ್ತೆಯಲ್ಲಿ ಮಾಡಲು ಅವುಗಳಿಗೆ ಅವಕಾಶವಿರುತ್ತದೆ. ಜನರು ಅದನ್ನು ನೋಡಬಹುದು.  ಅದೇನು ಒಳ್ಳೆಯ ದೃಶ್ಯವೇ? ಇದೇ ಅಸಹ್ಯಕರ ಮತ್ತು ಅಗಣ್ಯವನ್ನು ಮಾನವ ಜೀವಿಗಳು ಮಾಡಿದರೆ, ಅವರು ಅದನ್ನು “ಉತ್ಕೃಷ್ಟ” ಎಂದು ಭಾವಿಸುತ್ತಾರೆ. ಇದು ಅವರ ಸುಖ ಸಂತೋಷದ ಮೂಲ ತತ್ತ್ವ. ಅಷ್ಟೆ. ಮೋಹಿನಿಂ – ವಿರುದ್ಧ ಲಿಂಗದಿಂದ ವಶ.

ಅದು ನಿಜವಾದ ವಶ. ಉದಾಹರಣೆಗೆ, ಪ್ರಕೃತಿಯು ಮಹಿಳೆಯ ಮುಖ, ಅಂಗಾಂಗಗಳನ್ನು ಸುಂದರವಾಗಿ ಮಾಡಿದೆ. ಅವರ ಗಾಯನ, ಮಾತು, ನಡಿಗೆ ಎಲ್ಲವೂ ಆಕರ್ಷಕ. ಮತ್ತು ಈಗ, ಈ ಮೂರ್ಖ‌ ಸಂಸ್ಕೃತಿಯ ಕೃಪೆಯಿಂದ ಮಹಿಳೆಯರು ನಗ್ನರಾಗಿ ಓಡಾಡುತ್ತಿದ್ದಾರೆ. ಇದು ನಡೆಯುತ್ತಲೇ ಇದೆ. ಎಲ್ಲವೂ ಲೈಂಗಿಕ ಆಧಾರಿತ ಮತ್ತು ಅದು ತುಚ್ಛ, ಅಸಹ್ಯಕರ.  ಪ್ರಕೃತಿಂ ಮೋಹಿನೀಂ ಶ್ರಿತಾಃ : ದಿಗ್ಭ್ರಮೆಗೊಳ್ಳಲು ಲೌಕಿಕ ಪ್ರಕೃತಿಯ ಶಕ್ತಿಯ ಆಶ್ರಯ ಪಡೆಯಲು ಜನರಿಗೆ ಬೋಧಿಸಲಾಗುತ್ತಿದೆ.

ವಾಸ್ತವವಾಗಿ ಲೈಂಗಿಕ ಸುಖವು ಅಸಹ್ಯ, ಜುಗುಪ್ಸೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಅವರಿಗೆ 300 ಜನ್ಮಗಳು ಬೇಕಾಗುತ್ತವೆ. ಆದುದರಿಂದ ಕೃಷ್ಣನು ಹೇಳುತ್ತಾನೆ, (ಭಗವದ್ಗೀತೆ ), ಬಹೂನಾಂ ಜನ್ಮಾನಾಂ ಅಂತೇ : “ಒಬ್ಬ ಮೂರ್ಖನು ಅನೇಕ ಜನ್ಮಗಳ ಅನಂತರ ನನಗೆ ಶರಣಾಗತನಾಗುವ ಜ್ಞಾನವನ್ನು ಪಡೆಯುತ್ತಾನೆ.”  ಅದು ತತ್‌ಕ್ಷಣವಲ್ಲ. ನಮ್ಮ ಗೀತೆಯನ್ನು ಕುರಿತ ಉಪನ್ಯಾಸವನ್ನು ಕೇಳಿದ ಮೇಲೆ ತತ್‌ಕ್ಷಣ ಜನರು ಈ ಅಸಹ್ಯಕರ ಆನಂದವನ್ನು ಬಿಟ್ಟುಬಿಡುತ್ತಾರೆ ಎಂದಲ್ಲ. ಅರ್ಥ‌ ಮಾಡಿಕೊಳ್ಳಲು ಅನೇಕ ಜನ್ಮಗಳೇ ಬೇಕು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi