ರಥ ಸಪ್ತಮಿ

ದಶಂ

ರಥಸಪ್ತಮಿಯಿಂದ ಆರಂಭಿಸಿ ಎಲ್ಲೆಡೆ ರಥೋತ್ಸವಗಳು ಆರಂಭವಾಗುತ್ತವೆ. ರಥೋತ್ಸವಗಳಲ್ಲಿ ಎರಡು ಬಗೆ

1. ದೇವಾಲಯಗಳ ಸ್ಥಾಪನೆಯ ಚಿರಸ್ಮರಣೆಯ ಬ್ರಹ್ಮೋತ್ಸವದ ಅಂಗವಾಗಿ ನಡೆಯುವ ಬ್ರಹ್ಮರಥೋತ್ಸವ.

2. ದೇವರ ವಿವಿಧ ಉತ್ಸವಗಳ ರೀತಿ ರಥಾರೂಢನಾದ ಭಗವಂತನನ್ನು ಪ್ರಮುಖ ಬೀದಿಯಲ್ಲಿ ಮೆರವಣಿಗೆಯ ಮುಖಾಂತರ ನಡೆಯುವ ಉತ್ಸವ, ರಥೋತ್ಸವವು ಆಗಮಿಕ ಕಟ್ಟಲೆಯಾಗಿರುವಂತೆ ರಥ ನಿರ್ಮಾಣ ಸಹ ಶಿಲ್ಪಶಾಸ್ತ್ರದ ಪ್ರೋಗತವಾಗಿದೆ.

ರಥೋತ್ಸವದ ಪ್ರಮುಖ ಆಕರ್ಷಣೆ ಭಗವಂತನು ಸಾಗಿರುವ ವಾಹನ ರಥವೇ ಆಗಿದೆ. ಹಾಗಾಗಿ ರಥಶಿಲ್ಪ ಆಗದು ಶಾಸ್ತ್ರವಾಗಿ, ಕಲಾಪ್ರಕಾರವಾಗಿ ಶಿಲಾದಿ, ಅಭಿವ್ಯಕ್ತ ಮಾಧ್ಯಮಗಳ ಯಾತ್ರೆಗಳಾಗಿ, ಯುಗ ಯುಗಗಳಿಂದ ವಿಕಸಿತವಾಗಿದೆ. ಪುರಿಯ ಜಗನ್ನಾಥಸ್ವಾಮಿಯ ರಥಯಾತ್ರೆಯು ಭಾರತದ ಜನ ಮಾನಸದಲ್ಲಿ ಒಂದು ಸಂಕೇತವಾಗಿ ಉಳಿದುಬಂದಿದೆ.

ಇಸ್ಕಾನ್ ದೇವಾಲಯಗಳು ಸಂಘಟಿಸುವ ರಥಯಾತ್ರೆಗಳು ಪುರಿಯ ಜಗನ್ನಾಥಸ್ವಾಮಿಯ ಚಿರಸ್ಮರಣಿಯ ಉತ್ಸವವೇ ಆದರೂ ಪುರಿಯಲ್ಲಿ ನಡೆಯುವಾಗಲೇ ಎಲ್ಲ ಕಡೆ ನಡೆಯುತ್ತವೆ ಎಂದು ಹೇಳಲಾಗುವುದಿಲ್ಲ. ಇಸ್ಕಾನ್ ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಂಗಳೂರು ರಥಯಾತ್ರೆಗಳು ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಯುತ್ತವೆ. ರಥಯಾತ್ರೆಯ ಸಂಸ್ಕೃತಿಯ ಪೌರಾಣಿಕ, ಧಾರ್ಮಿಕ, ಸಾಮಾಜಿಕ ಮಹತ್ವಗಳನ್ನು ಒಂದಷ್ಟು ವಿಶ್ಲೇಷಿಸೋಣ.

‘ರಥ’ ಎಂಬ ಶಬ್ದ ವಾಹನ ಎಂದು ಕರೆಯಬಹುದಾದ ಪದದ ಸಮಾನ ಅರ್ಥದ ಪದವಾದರೂ ಅದು ಬರಿ ವಾಹನವಲ್ಲ ರಥದ ಉಲ್ಲೇಖನವು ಋಗ್ವದದಿಂದ ಆರಂಭಿಸಿ 20ನೇ ಶತಮಾನದ ಸಾಹಿತ್ಯದವರೆಗೂ ವರ್ಣಿತವಾಗಿದೆ. ಪಾಣಿನಿಯು ತನ್ನ ಅಷ್ಟಾಧ್ಯಾಯಿನಿಯಲ್ಲಿ ರಥವನ್ನು ಉಲ್ಲೇಖಿಸಿದ್ದಾರೆ.

ರಥಸ್ತ, ರಥಾಂಗ, ರಥಿಕ, ರಥಘನಕ, ರಥಪತಿಕ, ಹೀಗೆ ಪಾಣಿನಿಯು ರಥ ಸಂಬಂಧಿ ಪದಗಳನ್ನು ವಿವರಿಸುತ್ತಾರೆ. “ರಥ’ ಎಂಬುವುದು ಸಾಮಾನ್ಯರ ವಾಹನವಾಗಿರದೆ ಗಣ್ಯರ ವಾಹನವಾಗಿತ್ತೆಂದು ರಾಮಾಯಣ ವಿವರಿಸುತ್ತದೆ. “ರಥ’ ವೆಂಬ ಅರ್ಥಕ್ಕೆ Car ಎಂಬ ಇಂಗ್ಲಿಷ್ ಪರ್ಯಾಯ ಪದ ಜೋಡಿಸಿದರು. ರಥವೆಂಬುವುದು ಪ್ರಾಚೀನ ಕಾಲದಿಂದ ಬಂದಿರುವ ಗಣ್ಯರ ಓಡಾಟದ ವಾಹನ. Car ಸಹ ಗಣ್ಯರ ಓಡಾಟದ ವಾಹನವಾಗಿ ಉಳಿದಿದೆ.

ಆಟೋಟಗಳಿಗೆ ಬಳಸುತ್ತಿದ್ದ ರಥಗಳನ್ನು ಪುಷ್ಪ ಎಂದು, ದೇವತೆಗಳ ರಥವನ್ನು ಮಾರುತವೆಂದು ರಾಮಾಯಣ ವಿವರಿಸುತ್ತದೆ. ಭೂಮಿಯಿಂದ ಆಕಾಶದಲ್ಲಿ ಹಾರಾಡುತ್ತಿದ್ದ ಎರಡು, ಮೂರು ಅಂತಸ್ತುಗಳಿಂದ ಕೂಡಿದ ರಥಗಳನ್ನು ವಿಮಾನಗಳೆಂದು ಕರೆಯಲಾಗುತ್ತಿತ್ತೆಂದು ಯಾಸ್ಕರು ತಮ್ಮ ನಿರುಕ್ತದಲ್ಲಿ (ವೇದ ಅರ್ಥಶಬ್ದಕೋಶ) ವಿವರಿಸಿದ್ದಾರೆ.

ರಥಗಳಲ್ಲಿ ನಾಲ್ಕು ಪ್ರಕಾರಗಳಿವೆ. (1) ಕಾಷ್ಠರಥ (2) ರಜತ ರಥ (3) ಸುವರ್ಣರಥ (4) ದಂತ ರಥ – ಈ ಎಲ್ಲ ಪ್ರಕಾರಗಳು ಕಾವ್ಯದಲ್ಲಿ ನಿರ್ಮಾಣಗೊಂಡು ಅದರ ಮೇಲೆ ಆಯಾ ಲೋಹದ ತಗಡುಗಳನ್ನು ಹೊದಿಸಲಾಗುತ್ತದೆ. ಸಂಪೂರ್ಣ ಲೋಹದಿಂದಲೇ ಎರಕ ಹೊಯ್ದ ರಥಗಳು ರಥೋತ್ಸವಗಳಲ್ಲಿ ಬಳಕೆಯಾಗುವುದಿಲ್ಲ.

ಜೈಪುರದಲ್ಲಿ ಬೆಳ್ಳಿಯಿಂದ ಎರಕಹೊಯ್ದ ಪಂಚಲೋಹದ ರಥವಿದೆ. ಸಿಕ್ಕಿಮ್‌ನಲ್ಲಿ ಕಂಚಿನ ಒಂದು ಲೋಹದ ರಥವಿದೆ. ಕ್ಯಾಂಡಿಯಾ ಬುದ್ಧ ದೇವಾಲಯದಲ್ಲಿ ಎರಕ ಹೊಯ್ದ ಒಂದು ಬೆಳ್ಳಿ ರಥವಿದೆ. ಪಡಿಯಾಲದ ಮಹಾರಾಜರ ಖಾಸಗಿ ಸಂಗ್ರಹದಲ್ಲಿ 3 1/4 ಅಡಿ ಎತ್ತರ ಹಾಗೂ 168 ಕೆ.ಜಿ. ತೂಕದ ಸುವರ್ಣ ರಥವಿದೆ.

ಒಳಗೆ ಅಂಬಾಭವಾನಿ ಸುವರ್ಣ ಪುತ್ಥಳಿಯಿದೆ. ನೇರವಾಗಿ ರಥ ಶಿಲ್ಪವಲ್ಲದಿದ್ದರು ಅಂಬಾರಿಗಳು ಕೆಲವೊಮ್ಮೆ ದೇವರ ಉತ್ಸವಕ್ಕೆ ಉಪಯೋಗಿಸಲ್ಪಡುತ್ತವೆ. ಮೈಸೂರು ಅರಸರ ಸುವರ್ಣ ಅಂಬಾರಿ ಖಾತೇವಾಡ ಮಹಾರಾಜರ ಶ್ರೀಗಂಧದ ಅಂಬಾರಿ, ಉದಯಪುರದ ಅರಸರ ಬಳಿಯಿದ್ದ ದಂತದ ಅಂಬಾರಿ ದೇವರ ರಥ ಪರ್ಯಾಯಗಳಾಗಿದ್ದವು.

ಬೆಳ್ಳಿ ಚಿನ್ನದ ಕವಚಗಳನ್ನು ಧರಿಸಿದ ರಥಗಳಿವೆ. ತಿರುಪತಿ ವೆಂಕಟರಮಣನ ಬೆಳ್ಳಿ ಚಿನ್ನದ ರಥಗಳು ಸೊಗಸಾದ ಕಲಾಕೃತಿಗಳು. ಉಡುಪಿ ಕೃಷ್ಣನ ಬೆಳ್ಳಿ – ಚಿನ್ನದ ರಥಗಳು ನಮ್ಮ ರಾಜ್ಯದ ಹೆಮ್ಮೆಯ ಕಲಾಕೃತಿಗಳಾಗಿವೆ. ಮಂತ್ರಾಲಯ, ಧರ್ಮಸ್ಥಳ, ಶೃಂಗೇರಿ, ಮುಂತಾದ ತೀರ್ಥ ಕ್ಷೇತ್ರಗಳಲ್ಲದೆ ಮಲ್ಲೇಶ್ವರಂ ನರಸಿಂಹ ದೇವರಿಗೆ, ಸಜ್ಜನರಾವ್ ವೃತ್ತದ ಸುಬ್ರಹ್ಮಣ್ಣನಿಗೆ, ಕಾಡುಮಲೆಯ ಮಹದೇಶ್ವರರಿಗೆ ಹೀಗೆ ಹಲವಾರು ಬೆಳ್ಳಿ ರಥಗಳಿವೆ.

ಕಾಷ್ಟ ರಥಗಳಲ್ಲಿ ನಂಜನಗೂಡಿನ ಪಂಚರಥ ಉಡುಪಿಯ ದೊಡ್ಡ ಮತ್ತು ಸಣ್ಣ ರಥಗಳು, ಹುಬ್ಬಳ್ಳಿ ಸಿದ್ದಾರೂಢರ ರಥ, ಚಾಮರಾಜರಥ, ಬಾದಾಮಿಯ ಬನಶಂಕರಿ ರಥ ಮೊದಲಾದವುಗಳು ಕರ್ನಾಟಕದ ಬೃಹತ್ ರಥಗಳೆಂದು ಹೆಸರಾಗಿದೆ. ರಥಗಳ ಪ್ರಾಚೀನತೆಯಂತೆ ಅವುಗಳ ಸಾಂಸ್ಕೃತಿಕ ಮಹತ್ವವು ಅಪಾರವಾಗಿದೆ.

ಜಗನ್ನಾಥಸ್ವಾಮಿಯ ರಥಯಾತ್ರೆಯ ಉಲ್ಲೇಖ ಬ್ರಹ್ಮಪುರಾಣದಲ್ಲಿದೆ. ಪದ್ಮ ಹಾಗೂ ಸ್ಕಾಂದ ಪುರಾಣಗಳಲ್ಲಿಯೂ ಸಹ ಜಗನ್ನಾಥಸ್ವಾಮಿಯ ರಥಯಾತ್ರೆಯ ವಿಷಯ ವಂದನೆಗಳ ಪ್ರಸ್ತಾಪವಿದೆ.

ಉಲ್ಲೇಖ : ಎಪಿಗ್ರಾಫಿಯಾ ಇಂಡಿಕಾ, ವಾಲ್ಯೂಮ್ 35, ಪಿಪಿ 71, 77, 1963, 64 85 ಎಡಿಶನ್‌

ಜಗನ್ನಾಥಸ್ವಾಮಿಯ ರಥಯಾತ್ರೆ ಸಂಸ್ಕೃತ ಮತ್ತು ದೇಶಿಯ ಭಾಷೆಯ ಎಲ್ಲ ಪ್ರಕಾರಗಳ ಮೇಲೆ ಪ್ರಭಾವ ಬೀರಿದೆ. ವಿಶೇಷವಾಗಿ ಒರಿಯಾ ಭಾಷೆಯ ಮೇಲೆ ಪ್ರಭಾವ ಹೆಚ್ಚು. ಕಪಿಲ ಮುನಿಯ ಕಪಿಲ ಸಂಹಿತ, ಹಾಲದರ ಮಿಶ್ರಣ, ವಸಂತೋತ್ಸವ ಕಾವ್ಯ, ಚಕ್ರಪಾಣಿಯ ಗುಂಡೆಚಾಪು, ಪಟ್ನಾಯಕ ಪಂಡಿತನ ಚಂಪೂಭಾಗವತ, ಮುಂತಾದ ಒರಿಯಾ ಸಾಹಿತ್ಯದಲ್ಲಿ ಜಗನ್ನಾಥಸ್ವಾಮಿಯ ರಥದ ವರ್ಣನೆಗಳಿವೆ.

ಶ್ರೀರಂಗ, ಮೇಲುಕೋಟೆ, ದ್ವಾರಕ, ಆಹೋಬಲ, ಪಂಡರಿಪುರ, ಕಾಂಜೀವರಂ, ಶ್ರೀಪೆರಂಬೂರು, ಉಡುಪಿ ಮುಂತಾದ ಎಲ್ಲ ಪ್ರಸಿದ್ಧ ಕ್ಷೇತ್ರಗಳಲ್ಲಿ ಜರಗುವ ರಥಗಳಲ್ಲಿ ಅಲ್ಲಿಯ ಪ್ರಧಾನ ದೇವತೆಗಳಲ್ಲಿ ಒಂದು ರಥ ಮಾತ್ರ ಇರುತ್ತದೆ. ಆದರೆ ಜಗನ್ನಾಥಸ್ವಾಮಿಯ ಮೂರು ರಥಗಳು ಇರುತ್ತವೆ. ಚಕ್ರದಿಂದ ಕಳಶದವರೆಗಿನ ಸಮಗ್ರ ಸುರನ್ನಡೆಯನ್ನು ಪರಿಗಣಿಸಿ ಇನ್ನಿಷ್ಟು ಮರದ ಹಲಗೆಗಳಿಂದ (ಜಗನ್ನಾಥ ಸ್ವಾಮಿ 242, ಬಲಭದ್ರಸ್ವಾಮಿ 231 ಹಾಗೂ ಸುಭದ್ರದೇವಿ 711 ಹಲಗೆಗಳು) ತುಂಡುಗಳಿಂದ ನಿರ್ಮಾಣ.

ಭಗವಂತನನ್ನು ನಿತ್ಯದರ್ಶನ ಮಾಡಲಾಗದವರು ಯಾವುದೋ ಕಾರಣಕ್ಕೆ ಗುಡಿಯ ಒಳಕ್ಕೂ ಹೋಗಿ ದರ್ಶನ ಮಾಡದವರು ಪರಿತಪಿಸಬೇಕಾಗಲೂ, ಭಗವಂತೆ ತನ್ನ ಭಕ್ತರ ಬಳಿ ತನ್ನ ಬಿಜಯಂಗಿಸುವ ಪ್ರಕ್ರಿಯೆ ಬೇರೆಲ್ಲೂ ಕಾಣಸಿಗುವುದಿಲ್ಲ. ಭಗವಂತನೆ ನಮ್ಮ ಬಳಿ ಸಾರಿ ಬರುತ್ತಾನೆ. ಎಂದು ಸಂಭ್ರಮಿಸದಿರುವವರು ಯಾರು?

ಹಾಗಾಗಿ ರಥದ ಸುತ್ತ ಸಂಗೀತಾದಿ ವಿವಿಧ ಸೇವೆಗಳು, ಜಾತ್ರೆ, ಮಹೋತ್ಸವಗಳು ಮತ್ತು ಉಯ್ಯಾಲೆಗಳು, ತೆಪ್ಪೋತ್ಸವ, ವಸಂತೋತ್ಸವ ಮುಂತಾದ ಸೇವೆಗಳು ನಡೆಯುತ್ತವೆ. ಇಸ್ಕಾನ್ ಮೊದಲ ರಥಯಾತ್ರೆಯು 1967 ಜುಲೈ 9 ರಂದು ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನಡೆಯಿತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi