ಪುಟಾಣಿಗಳೇ,
ಉಡುಪಿ ಕೃಷ್ಣನ ಕಥೆ ನಿಮಗೆ ಗೊತ್ತಿದೆಯಲ್ಲವೆ? ಕನಕದಾಸರ ಮೊರೆ ಕೇಳಿ ಕೃಷ್ಣನ ವಿಗ್ರಹ ತಿರುಗಿ, ಅವರಿಗೆ ದರ್ಶನ ನೀಡಿತ್ತಲ್ಲವೆ? ಅದೇ ರೀತಿಯ ಇನ್ನೊಂದು ರೋಚಕ ಕಥೆ ಇಲ್ಲಿದೆ, ಓದಿ.
ಒಂದು ಕಾಲದಲ್ಲಿ, ದಕ್ಷಿಣ ಭಾರತದಲ್ಲಿ ವಿದ್ಯಾನಗರ ಎಂಬ ಊರಿತ್ತು. ಆ ಊರಿನ ಇಬ್ಬರು ಬ್ರಾಹ್ಮಣರು ತೀರ್ಥಯಾತ್ರೆ ಮಾಡಲು ಅಪೇಕ್ಷಿಸಿ, ಎಲ್ಲ ಕ್ಷೇತ್ರಗಳನ್ನು ದರ್ಶನ ಮಾಡುತ್ತಾ ಕೊನೆಗೆ ವೃಂದಾವನಕ್ಕೆ ಬಂದರು. ಅಲ್ಲಿ ಎಲ್ಲ ಸರೋವರಗಳು, ದೇಗುಲಗಳ ದರ್ಶನ ಮಾಡಿ, ಗೋಪಾಲನ ದೇಗುಲಕ್ಕೆ ಬಂದರು. ವೃಂದಾವನವೇ ಅವರ ತೀರ್ಥಯಾತ್ರೆಯ ಕೊನೆಯ ಗುರಿಯಾಗಿತ್ತು. ಆ ಇಬ್ಬರು ಬ್ರಾಹ್ಮಣರಲ್ಲಿ ಒಬ್ಬರು ವಯೋವೃದ್ಧರು. ಮತ್ತೊಬ್ಬನು ತರುಣನು. ತರುಣ ಬ್ರಾಹ್ಮಣನು ಕೃಷ್ಣನಲ್ಲಿ ಬಹಳ ಭಕ್ತಿಯಿಟ್ಟಿದ್ದನು. ಅವನಿಗೆ ಆ ವೃದ್ಧ ಬ್ರಾಹ್ಮಣರ ಕೃಷ್ಣಭಕ್ತಿಯ ಮೇಲೆ ಬಹಳ ಗೌರವವಿತ್ತು. ಆದ್ದರಿಂದ ತೀರ್ಥಯಾತ್ರೆಯಲ್ಲಿ ಅವರ ಸೇವೆ ಮಾಡಿ, ತಾನೂ ಕೃಷ್ಣನ ಒಲವನ್ನು ಗಳಿಸಲು ಬಯಸಿದ್ದನು.
ವೃದ್ಧ ಬ್ರಾಹ್ಮಣನು ತರುಣನ ನಡತೆ, ಕೃಷ್ಣಭಕ್ತಿ, ಆತನ ಸೇವೆಗಳಿಂದ ಆನಂದಿತರಾಗಿ, ತಮ್ಮ ಮಗಳನ್ನು ಅವನಿಗೆ ಮದುವೆ ಮಾಡಿಕೊಡಲು ಇಚ್ಛಿಸಿದರು. ಆತನ ಒಪ್ಪಿಗೆ ಪಡೆದು, ಭಗವಂತನ ಮುಂದೆ ಹೀಗೆ ಹೇಳಿದರು. “ಪ್ರಭು, ನನ್ನ ಮಗಳನ್ನು ಈ ತರುಣನಿಗೆ ದಾನವಾಗಿ ಕೊಟ್ಟಿದ್ದೇನೆ. ಇದಕ್ಕೆ ನೀನೇ ಸಾಕ್ಷಿ.”
ತರುಣನು ಹೇಳಿದನು, “ಇವರ ಮಗಳನ್ನು ಮದುವೆಯಾಗುವ ಉದ್ದೇಶ ನನಗಿರಲಿಲ್ಲ. ಆದರೂ ಇವರ ಮನಸ್ಸಿಗೆ ಆನಂದವಾಗುವುದಾದರೆ ಆಗಲಿ. ಭಗವಂತಾ ನೀನೇ ನನ್ನ ಸಾಕ್ಷಿ. ಮುಂದೆ ಈ ವಿಷಯದಲ್ಲಿ ಏನಾದರೂ ತಕರಾರು ಬಂದರೆ ನಾನು ಸಾಕ್ಷಿಯಾಗಿ ನಿನ್ನನ್ನು ಕರೆಯುತ್ತೇನೆ.”
ಅನಂತರ ತಮ್ಮ ಯಾತ್ರೆ ಸಫಲವಾದ್ದರಿಂದ ಸಂತಸಗೊಂಡು, ಇಬ್ಬರೂ ತಮ್ಮ ಊರಿಗೆ ಮರಳಿದರು. ವೃದ್ಧ ಬ್ರಾಹ್ಮಣನು ತನ್ನ ಕುಟುಂಬ ಪರಿವಾರದವರಿಗೆ, ತಾನು ತರುಣನಿಗೆ ಕೊಟ್ಟಿದ್ದ ಮಾತಿನ ಬಗ್ಗೆ ವಿವರಿಸಿದರು. ಆದರೆ ತರುಣನು ತಮ್ಮ ಕುಲಕ್ಕಿಂತ ಕಡಮೆಯವನೂ, ಬಡವನೂ ಆಗಿದ್ದರಿಂದ ಅವರೆಲ್ಲರೂ ಈ ನಿರ್ಧಾರಕ್ಕಾಗಿ ವೃದ್ಧರನ್ನು ಆಕ್ಷೇಪಿಸಿದರು. ವೃದ್ಧರಿಗೆ ಪೇಚಾಟಕ್ಕಿಟ್ಟುಕೊಂಡಿತು. ಅವರಿಗೆ ತಮ್ಮ ಮಾತನ್ನೂ ಉಳಿಸಿಕೊಂಡು, ಪರಿವಾರದವರನ್ನೂ ಉಳಿಸಿಕೊಳ್ಳಬೇಕಾಗಿತ್ತು. ಕೂಡಲೇ ಅವರು ಮುಕುಂದನಲ್ಲಿ ಮೊರೆಯಿಟ್ಟರು. “ಪ್ರಭು ನೀನೇ ದಾರಿತೋರಿಸಬೇಕು,” ಎಂದು.
ಸ್ವಲ್ಪ ದಿನಗಳ ತರುವಾಯು ತರುಣ ಬ್ರಾಹ್ಮಣನು ಊರಿನವರಿಗೆ ವೃದ್ಧನು ಕೊಟ್ಟಿದ್ದ ಮಾತಿನ ಬಗ್ಗೆ ವಿವರಿಸಿ, ಕನ್ಯಾದಾನ ಬೇಡಲು ಹೋದನು. ಆಗ ವೃದ್ಧನು “ವೃಂದಾವನದ ಗೋಪಾಲನ ಮುಂದೆ ನಾನು ನಿನಗೆ ಮಾತು ಕೊಟ್ಟಿದ್ದು ನಿಜವಾದರೆ, ಆ ದೇವರೇ ಬಂದು ಸಾಕ್ಷಿ ಹೇಳಲಿ. ಆಗ ನಾನು ನಿನಗೆ ನನ್ನ ಮಗಳನ್ನು ಕೊಟ್ಟು ವಿವಾಹ ಮಾಡಿಸುವೆನು,” ಎಂದರು. ತರುಣನು ಒಪ್ಪಿ ಭಗವಂತನನ್ನು ಕರೆತರಲು ವೃಂದಾವನಕ್ಕೆ ಪ್ರಯಾಣ ಬೆಳೆಸಿದನು. ಇತ್ತ ವೃದ್ಧನ ಪರಿವಾರದವರು “ದೇವರು ಸಾಕ್ಷಿ ಹೇಳಲು ಬರುವುದುಂಟೇ? ಖಂಡಿತ ಸಾಧ್ಯವಿಲ್ಲ.” ಎಂದು ನೆಮ್ಮದಿಯಾಗಿದ್ದರು.
ತರುಣನು ವೃಂದಾವನ ತಲಪಿ, ಗೋಪಾಲನ ದೇಗುಲಕ್ಕೆ ತೆರಳಿದನು. ತನಗೆ ಈ ಸಂದರ್ಭದಲ್ಲಿ ಸಾಕ್ಷಿ ಹೇಳಲು ಬರಬೇಕೆಂದು ಭಗವಂತನಲ್ಲಿ ಮೊರೆಯಿಟ್ಟನು. ಆಗ ಗೋಪಾಲನಿಂದ ಆತನಿಗೆ ಉತ್ತರ ಕೇಳಿಸಿತು. “ತರುಣನೇ, ನಿನ್ನ ಭಕ್ತಿಗೆ ನಾನು ವಶನಾಗಿದ್ದೇನೆ. ನೀನು ಊರಿಗೆ ಮರಳು. ಜನರೆಲ್ಲರನ್ನೂ ಕಲೆ ಹಾಕಿ, ವಿಷಯ ಪ್ರಸ್ತಾವಿಸು. ಆ ಸಮಯದಲ್ಲಿ ನಾನು ದರ್ಶನವಿತ್ತು, ಸಾಕ್ಷ್ಯ ನುಡಿಯುತ್ತೇನೆ.”
ತರುಣನು ನುಡಿದನು, “ಪ್ರಭುವೇ, ನೀನು ದಯಮಾಡಿ ಈ ವಿಗ್ರಹರೂಪದಲ್ಲೇ ಬಂದು ಸಾಕ್ಷ್ಯ ನುಡಿದರೆ ಮಾತ್ರ ಆ ಊರಿನ ಜನರು ನಂಬುವರು, ಕೃಪೆತೋರು.” ಭಗವಂತನು ನಸುನಕ್ಕು ನುಡಿದನು. “ತರುಣನೇ, ನಾನು ನಿನ್ನ ಹಿಂದೆ ನಡೆದು ಬರುತ್ತೇನೆ. ಆದರೆ ಒಂದು ಷರತ್ತು. ದಾರಿಯಲ್ಲಿ ನೀನು ತಿರುಗಿ ನನ್ನನ್ನು ನೋಡಲು ಪ್ರಯತ್ನಿಸಬಾರದು. ಹಾಗೆ ನೋಡಿದರೆ ನಾನು ಅಲ್ಲೇ ನೆಲೆನಿಂತುಬಿಡುವೆನು. ನನ್ನ ಗೆಜ್ಜೆಗಳ ಸದ್ದಿನಿಂದ ನಾನು ನಿನ್ನ ಹಿಂದೆ ಬರುತ್ತಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಪ್ರತಿದಿನ ಒಂದು ಸೇರು ಅಕ್ಕಿಯಿಂದ ಅನ್ನವನ್ನು ಮಾಡಿ, ನನಗೆ ಅರ್ಪಿಸು. ನಾನು ನಿನ್ನೊಡನೆ ಬರುವೆನು.”
ತರುಣನ ಸಂಭ್ರಮಕ್ಕೆ ಕೊನೆಯೇ ಇಲ್ಲದಂತಾಯಿತು. ಆತನು ಪುನಃ ಪುನಃ ನಮಸ್ಕರಿಸಿ, ಮೂರನೇ ದಿನವೇ ಹೊರಡಲು ಅಪ್ಪಣೆ ತೆಗೆದುಕೊಂಡನು. ಹೀಗೆ ಭಕ್ತನಿಗಾಗಿ ಭಗವಂತನು ವಿಗ್ರಹರೂಪದಲ್ಲೇ ನಡೆದು ಬರಬೇಕಾಯಿತು. ದಾರಿಯಲ್ಲಿ ಭಗವಂತನ ಗೆಜ್ಜೆಯ ಘಲ್ಘಲ್ ನಾದವು ಮೋಹಕಗೊಳ್ಳುವಂತಿತ್ತು. ಹೀಗೆ ಸತತ ನೂರು ದಿನಗಳ ಕಾಲ ನಡೆದು, ಭಕ್ತ ಭಗವಂತರಿಬ್ಬರೂ ಊರನ್ನು ತಲಪಿದರು. ಕೂಡಲೇ ತರುಣನು ತಿರುಗಿ ನೋಡಿದನು. ಕೃಷ್ಣನು ನಸುನಗುತ್ತಾ ಅಲ್ಲೇ ನಿಂತನು.

ತರುಣನು ಊರಿನ ಜನರನ್ನೆಲ್ಲಾ ಕರೆದು ಭಗವಂತನು ಆಗಮಿಸಿರುವ ವಿಷಯವನ್ನು ತಿಳಿಸಿದನು. ಊರಿನ ಜನರು ಅಚ್ಚರಿ, ಸಂಭ್ರಮಗಳಿಂದ ಭಗವಂತನನ್ನು ನೋಡಲು ಓಡೋಡಿ ಬಂದರು. ವೃದ್ಧ ಬ್ರಾಹ್ಮಣನು ಸಂತೋಷದ ಕಣ್ಣೀರು ಹರಿಸುತ್ತಾ ಭಗವಂತನ ಪಾದಗಳಿಗೆ ಸಾಷ್ಟಾಂಗವೆರಗಿದನು. ಕೃಷ್ಣನು, ವೃದ್ಧನು ತನ್ನ ಮಗಳನ್ನು ತರುಣನಿಗೆ ದಾನವಾಗಿ ಕೊಟ್ಟಿರುವುದನ್ನು ದೃಢಪಡಿಸಿ ಸಾಕ್ಷಿ ನುಡಿದನು.
ಹೀಗೆ ತರುಣನ ವಿವಾಹವು ಆ ವೃದ್ಧರ ಮಗಳೊಂದಿಗೆ ವೈಭವವಾಗಿ ನಡೆಯಿತು. ಇಬ್ಬರು ಭಕ್ತರೂ ಗೋಪಾಲನಿಗೆ ಸಾಷ್ಟಾಂಗವೆರಗಿದರು. ಗೋಪಾಲನು ನುಡಿದನು. “ನೀವಿಬ್ಬರೂ ಜನ್ಮಾಂತರಗಳಿಂದ ನನ್ನ ಶಾಶ್ವತ ಸೇವಕರಾಗಿರುವಿರಿ, ನಿಮ್ಮ ಭಕ್ತಿಸೇವೆಗಳಿಂದ ನಾನು ಸಂತುಷ್ಟನಾಗಿರುವೆನು. ನಿಮಗೇನು ವರಬೇಕೋ ಕೇಳಿಕೊಳ್ಳಿ.”
ಭಕ್ತರು ನುಡಿದರು, “ಭಗವಂತಾ, ನಿನ್ನ ಭಕ್ತರ ಬಗ್ಗೆ ನೀನು ಎಷ್ಟು ಕರುಣಾಮಯನಾಗಿರುವೆ, ಎಂಬುದನ್ನು ಜಗತ್ತೇ ತಿಳಿಯಲು, ನೀನು ಈ ಊರಿನಲ್ಲೇ ನೆಲೆಸಬೇಕು. ಇದೇ ನಾವು ಕೇಳುವ ವರ.”
ಹೀಗೆ ಗೋಪಾಲನು ಅಲ್ಲಿ ನೆಲೆಸಿ `ಸಾಕ್ಷಿಗೋಪಾಲ’ ಎಂದು ಪ್ರಸಿದ್ಧನಾದನು. ಕಾಲಾಂತರದಲ್ಲಿ ವಿದ್ಯಾನಗರವನ್ನು ಗೆದ್ದ ಪುರುಷೋತ್ತಮ ದೇವನು, ಗೋಪಾಲನ ಅಪ್ಪಣೆ ಪಡೆದು, ವಿಗ್ರಹವನ್ನು ಕಟಕ್ಗೆ ತಂದನು. ಸ್ವಲ್ಪ ಕಾಲ ಜಗನ್ನಾಥ ದೇವಾಲಯದಲ್ಲಿ ಈ ವಿಗ್ರಹವಿತ್ತು. ಅನಂತರ ಪುರಿಯಿಂದ ಆರು ಮೈಲಿ ದೂರವಿರುವ ಸತ್ಯವಾದೀ ಎಂಬ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಯಿತು. ಈಗ ಅಲ್ಲಿ ಸಾಕ್ಷಿಗೋಪಾಲ ರೈಲು ನಿಲ್ದಾಣವಿದೆ. ಜನರು ಭಗವಂತನನ್ನು ದರ್ಶಿಸಲು ಸಂಭ್ರಮದಿಂದ ಅಲ್ಲಿಗೆ ಹೋಗುತ್ತಾರೆ.
ನೋಡಿದಿರಾ ಪುಟಾಣಿಗಳೇ, ಕೃಷ್ಣನು ಭಕ್ತರ ಮೇಲಿಟ್ಟಿರುವ ಪ್ರೀತಿಯನ್ನು! ಇಂದಿನಿಂದಲೇ ಹರೇಕೃಷ್ಣ ಮಂತ್ರ ಜಪ ಆರಂಭಿಸಿರಿ.






Leave a Reply