ಸಂಕೀರ್ತನ ಯಶೋಗಾಥೆಗಳು

– ಉದಯಾನಂದದಾಸ

ಪುಸ್ತಕಗಳು ಬೃಹತ್ ಮೃದಂಗದಂತೆ, ಗ್ರಂಥವಾಚನ ಸಂಕೀರ್ತನೆಯ ವಿಸ್ತೃತ ರೂಪ. ಹಾಗಾಗಿ ಇಸ್ಕಾನ್‌ನಲ್ಲಿ ಸಂಕೀರ್ತನೆ ಪದದ ವ್ಯಾಪ್ತಿಯು ಪುಸ್ತಕ ವಿತರಣೆವರೆಗೆ ಹಬ್ಬಿದೆ. ಸಂಕೀರ್ತನಾ ತಂಡಗಳು ಶ್ರೀಲಪ್ರಭುಪಾದರ ಲೀಲಾಅವಧಿಯಲ್ಲಿಯೇ ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ಭಾಗಗಳಲ್ಲಿ ಆಧ್ಯಾತ್ಮಿಕ ಪುಸ್ತಕ ವಿತರಣೆಯಲ್ಲಿ ವಿಕ್ರಮ ಸಾಧಿಸಿವೆ.

ಸಂಕೀರ್ತನಾ ತಂಡಗಳ ಅನುಭವ ಬಹುರೋಚಕವಾಗಿದೆ. ಪ್ರತಿಬಾರಿ ನಮ್ಮ ಓದುಗರಿಗಾಗಿ, 2-3 ಇಂತಹ ಪ್ರಸಂಗಗಳನ್ನು ಇಲ್ಲಿ ಕೊಡಲಾಗುತ್ತದೆ. ‘ಭಗವದ್ಗೀತಾ ಯಥಾರೂಪʼದ ಅಧ್ಯಯನದಿಂದ ವಿದೇಶಿ ವೃದ್ಧೆಯೊಬ್ಬರು ಆಧ್ಯಾತ್ಮಿಕ ಅನುಭೂತಿಯನ್ನು ಪಡೆದ ಯಶೋಗಾಥೆ ಇಲ್ಲಿದೆ. ಉದಯಾನಂದ ದಾಸರ ಸ್ವಾನುಭವದ ಈ ಘಟನೆ ‘ಸಂಕೀರ್ತನೆ’ ಯ ಮಹತ್ತನ್ನು ಸಾರುತ್ತದೆ.

ನ್ಯೂಯಾರ್ಕ್ ಷಾಪಿಂಗ್‌ ಮಾಲ್‌ನಲ್ಲಿ ನನ್ನೊಂದು ಕಲಾಕೃತಿಗಳ ಮಾರಾಟ ಮಳಿಗೆ. ಅದೊಂದು ದಿನ ಸರಿ ಸುಮಾರು ಎಪ್ಪತ್ತರ ಆಜುಬಾಜಿನ ವೃದ್ಧೆಯೊಬ್ಬರ ಆಗಮನ. ಅವರ ಮನೆಯ ಅಲಂಕಾರಕ್ಕಾಗಿ ಹಲವು ಕಲಾಕೃತಿಗಳ ಆಯ್ಕೆ. ಅವುಗಳ ಪ್ರೇಮ್ ಕಟ್ಟುವಾಗ, ಲೋಕಾಭಿರಾಮವಾಗಿ ಮಾತನಾಡತೊಡಗಿದೆ. ಹ್ಯಾರಿಯೆಟ್ ಬ್ಯಾರೆಟ್ ಎಂಬುದು ಆಕೆಯ ಹೆಸರೆಂದು ಹೇಳಿಕೊಂಡರು. ಮೂರು ಮಕ್ಕಳ ತಾಯಿ, ಏಳು ಮೊಮ್ಮಕ್ಕಳ ಅಜ್ಜಿಯಾಕೆ. ಮೂವತ್ತಾರು ವರ್ಷಗಳ ದಾಂಪತ್ಯ ಜೀವನದ ಕೊನೆಗೆ, ಪತಿ ತೀರಿಕೊಂಡಿದ್ದರು.

ಹೀಗೆ ಮಾತು ಪುನರ್ ಜನ್ಮದ ಕಡೆಗೆ ಹೊರಳಿತು. “ಪುನರ್ ಜನ್ಮ ನಾನು ನಂಬುವೆ’ ಎಂದಾಕೆ ಹೇಳಿದರು. “ಇದು ಬರೀ ನಂಬಿಕೆಯಲ್ಲ ವಾಸ್ತವ’ ಎಂದು ನಾನು ಪ್ರತಿಪಾದಿಸಿದೆ. ಭಾರತ ಮೂಲದ ವೇದಾಂತ ಹೆಸರಿನ ತತ್ತ್ವಶಾಸ್ತ್ರ ಶಾಖೆಯ ವಿದ್ಯಾರ್ಥಿ ನಾನೆಂದು ಭಗವದ್ಗೀತಾ ಯಥಾರೂಪ ಗ್ರಂಥ ನನ್ನ ಮೆಚ್ಚಿನ ಅಧ್ಯಯನ ವಿಷಯವೆಂದೂ ನಾನು ವಿವರಿಸಿದೆ. ಅವರು ನನ್ನ ಮಾತುಗಳಿಗೆ ಸಕಾರಾತ್ಮಕವಾಗಿ ಉತ್ತರಿಸಿದರು. ಆಕೆಗೆ ಪುನಃ ಬರುವಂತೆ ತಿಳಿಸಿ ಭಗವದ್ಗೀತಾ ಯಥಾರೂಪ ಉಡುಗೊರೆ ನೀಡಿದೆ.

ಪ್ರತಿ ವಾರ ಆಕೆ ನನ್ನ ಬಳಿ ಬಂದು ಶಾಕಾಹಾರ, ಭೌತಿಕ ಮೋಹಬಂಧಗಳು, ಪ್ರಕೃತಿಯ ತ್ರಿಲಕ್ಷಣಗಳು ಇವುಗಳ ಕುರಿತಾಗಿ ಪ್ರಶ್ನಿಸಲಾರಂಭಿಸಿದರು. ಒಂದು ದಿನ ಆಕೆ ನನ್ನನ್ನು ಧ್ಯಾನದ ಬಗ್ಗೆ ಏನಾದರೂ ತಿಳಿದಿದೆಯೇ ಎಂದು ಕೇಳಿದರು.

“ಖಂಡಿತಾ”ನಾನು ಉತ್ತರಿಸಿದೆ, “ನಾನು ಕೆಲವು ವರ್ಷಗಳಿಂದ ಮಂತ್ರಜಪವನ್ನು ಮಾಡುತ್ತ ಬಂದಿದ್ದೇನೆ. ಎಂದಾದರೊಮ್ಮೆ ನಿಮಗೆ ಮಣಿಗಳನ್ನು ಹಿಡಿದು ಜಪ ಮಾಡುವುದನ್ನು ತೋರಿಸಿಕೊಡುತ್ತೇನೆ. ಧ್ಯಾನದ ಉತ್ತಮ ರೂಪವೇ ಜಪ. ಭಗವಂತನ ನಾಮದ ಉಚ್ಚಾರ’ ಎಂದು ತಿಳಿಸಿದೆ.

ಕೆಲವು ವಾರಗಳು ಕಳೆದವು. ಹ್ಯಾರಿಯೆಟ್ ನನ್ನ ಅಂಗಡಿಗೆ ಭೇಟಿ ನೀಡುವುದು ನಡೆದೇ ಇತ್ತು. “ಧ್ಯಾನ ಮಾಡುವುದನ್ನು ನೀವು ನನಗೆಂದು ತೋರಿಸುತ್ತೀರಿ?’ ಆಕೆ ಕೇಳುತ್ತಲೇ ಇದ್ದರು. ಆದರೆ ನನ್ನ ಕೆಲಸಗಳಲ್ಲಿ ವ್ಯಸ್ತನಾಗಿರುತ್ತಿದ್ದರಿಂದ ಆಕೆಗೆ ಹರೇಕೃಷ್ಣ ಮಂತ್ರ ಉಚ್ಚರಿಸುತ್ತ ಮಣಿಗಳೊಂದಿಗೆ ಜಪ ಮಾಡುವುದನ್ನು ತೋರಿಸಲು ಸಮಯಾಕಾಶವೇ ಆಗಿರಲಿಲ್ಲ.

ಒಂದು ದಿನ ಆಕೆ ನನಗೆ ಫೋನ್ ಮಾಡಿದರು. ಆ ವೇಳೆಗೆ ಅವರು ‘ಭಗವದ್ಗೀತಾ ಯಥಾರೂಪ’ದ ಎರಡುನೂರಕ್ಕೂ ಹೆಚ್ಚಿನ ಪುಟಗಳನ್ನು ಓದಿಯಾಗಿತ್ತು.

“ನೀವು “K-R-S-N-A’ ಇದನ್ನು ಹೇಗೆ ಉಚ್ಚರಿಸುತ್ತೀರಿ?” ಕೇಳಿದರು.

“ಓಹ್, ಅದು ಕೃಷ್ಣ! ” ನಾನು ಅದನ್ನು ಆನಂದೋದ್ವೇಗದಿಂದ ಹೇಳಿ ತೋರಿಸಿದೆ.

ಮತ್ತೆ ಮುಂದುವರಿದು ಆಕೆ, “ನೀವು H-A-R-E ಇದನ್ನು ಹೇಗೆ ಹೇಳುತ್ತೀರಿ?’ ಎಂದು ಕೇಳಿದರು.

“ಅದು ‘ಹರೇ!’ ನಾನು ಉಚ್ಚರಿಸಿದೆ.

”ಹಾಗಾದರೆ,” ಅವರು ಕೇಳಿದರು, “ನೀವು ಹರೇಕೃಷ್ಣ ಹರೇಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ| ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ, ಇದೇ ಮಂತ್ರವನ್ನು ನನಗೆ ಹೇಳಿಕೊಡಲು ಬಯಸಿದ್ದೀರೇನು?”

“ನೀವು ಅದನ್ನು ಕಂಡು ಕೊಂಡಿರಿ! ನಾನು ಉದ್ಗರಿಸಿದೆ!

”ಅದೊಂದು ‘ಮಹಾಮಂತ್ರ’. ಧ್ಯಾನದಲ್ಲಿ ಮಾಡಬಹುದಾದ ಅತ್ಯುನ್ನತ ಸಾಧನೆ ಎಂದರೆ ಅದನ್ನು ಜಪಿಸುವುದೇ ಆಗಿದೆ. ನೀವು ಅದನ್ನು ನಿರಂತರವಾಗಿ ಜಪಿಸಿದ್ದೇ ಆದರೆ ಎಲ್ಲ ಭೌತಿಕ ವ್ಯಾಮೋಹಗಳಿಂದಲೂ ಮುಕ್ತರಾಗುವಿರಿ. ನಿಮ್ಮ ಪೂರ್ವ ಕರ್ಮಗಳು ಕಳೆಯುವವು, ಮತ್ತು ನೀವು ಸಂಪೂರ್ಣ ಪರಿಶುದ್ಧರಾಗುವಿರಿ. ಜನನ-ಮರಣಗಳ ನಿರಂತರ ಚಕ್ರದ ಬಂಧನದಿಂದ ಕಳಚಿಕೊಂಡು ನಿಜನೆಲೆಗೆ – ಭಗವಂತನೆಡೆಗೆ ಮರಳುವಿರಿ” ಎಂದು ವಿವರಿಸಿದೆ.

ಹ್ಯಾರಿಯೆಟ್ ಹರೇಕೃಷ್ಣ ಮಹಾಮಂತ್ರವನ್ನು ನಿತ್ಯವೂ ಜಪಿಸಲು ಆರಂಭಿಸಿದರು. ಮೊದಲು ಅವರಿಗೆ ದಿನಕ್ಕೆ ಹದಿನೈದು ನಿಮಿಷಗಳಷ್ಟು ಕಾಲಮಾತ್ರ ಜಪ ಮಾಡಲು ಸಾಧ್ಯವಾಗುತ್ತಿತ್ತು. ಕ್ರಮೇಣ ಅದು ಹೆಚ್ಚಿತು. ಒಂದು ದಿನ ಅವರು ನನಗೆ ಕರೆ ಮಾಡಿ, ತಾವು ಮಧ್ಯೆ ಕೊಂಚವೂ ತಡೆಯದೆ ಎರಡು ಗಂಟೆಗಳ ಕಾಲ ಜಪ ಮಾಡಿದ್ದಾಗಿ ಹೇಳಿದರು. ಅವರ ಧ್ವನಿಯಲ್ಲಿ ಆನಂದಾತಿರೇಕ ಎದ್ದು ತೋರುತ್ತಿತ್ತು.

ಹ್ಯಾರಿಯೆಟ್‌ರ ಪ್ರಗತಿ ನನಗೆ ವಿಪರೀತ ಸಂತೋಷ ನೀಡಿತ್ತು. ಮತ್ತಷ್ಟು ಕಲಿಯುವ ಅವರ ಉತ್ಸಾಹ ನನ್ನನ್ನು ಶ್ರೀಲಪ್ರಭುಪಾದರೆಡೆಗೆ ಮತ್ತಷ್ಟು ಧನ್ಯತಾಭಾವ ತಳೆಯುವಂತೆ ಪ್ರೇರೇಪಿಸಿತು. ಅವರು ಜಗತ್ತಿಗೆ ನೀಡಿದ ಅತ್ಯಮೂಲ್ಯ ಕೊಡುಗೆಗಳಾದ ‘ಭಗವದ್ಗೀತಾ ಯಥಾರೂಪ’ ಮತ್ತು ‘ಶ್ರೀಮದ್ಭಾಗವತಮ್’, ಪವಿತ್ರನಾಮದ ನಿಜಜ್ಞಾನವನ್ನು ಸರಳವಾಗಿ ನಿರೂಪಿಸಿದ್ದವು.

ಜಗತ್ತಿನ ಕೋಟ್ಯಂತರ ಜನರು ವಯಸ್ಸು ಎಪ್ಪತ್ತು ಕಳೆದರೂ ಜೀವನದ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಪಡೆಯಲು ಅವಕಾಶ ವಂಚಿತರಾಗಿರುತ್ತಾರೆ ಎಂಬ ಸತ್ಯ ನನಗೆ ಹೊಳೆಯಿತು.

ಹ್ಯಾರಿಯೆಟ್ ಬ್ಯಾರೆಟ್ ಸಮೃದ್ಧ ಜೀವನವನ್ನು ಅನುಭವಿಸುತ್ತಿದ್ದರು. ಆದರೂ ಏನೋ ಒಂದು ಕೊರತೆಯನ್ನು ಅನುಭವಿಸುತ್ತಿದ್ದರು. ಆ ಕೊರತೆ ಇದೀಗ ನೀಗಿತು. ‘ಹರೇ ಕೃಷ್ಣ’ ಮಹಾಮಂತ್ರವು ತಾವು ಗಳಿಸಿದ ಅತ್ಯಮೂಲ್ಯ ಆಸ್ತಿ ಎಂದೇ ಅವರು ಭಾವಿಸತೊಡಗಿದರು. “ಈ ಎಪ್ಪತ್ತೊಂದು ವರ್ಷಗಳಲ್ಲಿ ಈ ಪರಿಯ ಆನ೦ದದ ಪ್ರವಾಹವನ್ನು, ಶಾಂತಿ-ಸಮಾಧಾನಗಳನ್ನು ಒಮ್ಮೆಯೂ ಅನುಭವಿಸಿರಲಿಲ್ಲ.

ನನಗೆ ಈ ವಯಸ್ಸಿನಲ್ಲಿ ಪರಿಶುದ್ಧಳಾಗಲು ಮತ್ತು ಭಗವಂತನನ್ನು ಅರಿಯಲು ಅವಕಾಶ ಮಾಡಿಕೊಟ್ಟ ದೇವೋತ್ತಮನ ಕರುಣೆಗೆ ಆಭಾರಿಯಾಗಿದ್ದೇನೆ” – ವೃದ್ಧೆಯ ಅಂತಃಕರಣ ಕೃಷ್ಣಪ್ರಜ್ಞೆಯಿಂದ ವಿಕಸಿತವಾಗಿತ್ತು.

ಶ್ರೀಲ ಪ್ರಭುಪಾದರ ಕರುಣೆಯಿಂದ ಮೂಡಿಬಂದ ‘ಭಗವದ್ಗೀತಾ ಯಥಾರೂಪ’ದ ಪಾರಾಯಣದಿಂದ ಮುಪ್ಪಿನ ವಯಸ್ಸಿನಲ್ಲೂ ಹ್ಯಾರಿಯೆಟ್‌ಗೆ ಆಧ್ಯಾತ್ಮಿಕ ಅನುಭೂತಿ, ನೆಮ್ಮದಿಯ ಸುಧೆಯಾಗಿ ಹರಿದುಬಂದಿತ್ತು.

ಸಂಕೀರ್ತನೆಯ ಮಹಿಮೆ ಅಪಾರವಾದದ್ದು!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi