ಹರಿನಾಮದ ಏಳು ಅದ್ಭುತಗಳು

ಹರೇ ಕೃಷ್ಣ ಮಂತ್ರವನ್ನು ಜಪಿಸುವುದರಿಂದ ಆಗುವ  ಪ್ರಯೋಜನವೇನು?

ಮಹಾ ಮಂತ್ರದಲ್ಲಿನ ಹರೇ, ಕೃಷ್ಣ, ರಾಮ ನಾಮಗಳಲ್ಲಿ ಭಗವಂತನ ಪೂರ್ಣ‌ ಶಕ್ತಿಯನ್ನು ವಿನಿಯೋಗಿಸಲಾಗಿದೆ. ಆದುದರಿಂದ ಭಗವಂತನ ಪವಿತ್ರನಾಮವನ್ನು ಪಠಿಸುವುದು ಭಗವಂತನೊಂದಿಗೆ ನೇರವಾಗಿ ಸಂಪರ್ಕ‌ ಪಡೆದಷ್ಟೇ ಪರಿಣಾಮಕಾರಿ. ಶ್ರೀ ಚೈತನ್ಯ ಮಹಾಪ್ರಭು ಬರೆದಿರುವ ಈ ಸುಂದರ ಶ್ಲೋಕವು ಜಪಿಸುವವರ ಮೇಲೆ ಹರೇ ಕೃಷ್ಣ ಮಂತ್ರದ ಏಳು ಪ್ರಭಾವಗಳನ್ನು ವರ್ಣಿಸುತ್ತದೆ.‌

ಚೇತೋ ದರ್ಪಣ ಮಾರ್ಜನಂ ಭವ ಮಹಾ ದಾವಾಗ್ನಿ ನಿರ್ವಾಪಣಂ‌

ಶ್ರೇಯಃ ಕೈರವ ಚಂದ್ರಿಕಾ ವಿತರಣಂ ವಿದ್ಯಾ ವಧೂ ಜೀವನಂ

ಆನಂದಾಂಬುಧಿ ವರ್ಧನಂ‌ ಪ್ರತಿಪದಂ ಪೂರ್ಣಾಮೃತಾಸ್ವಾದನಂ

ಸರ್ವಾತ್ಮ ಸ್ನಪನಂ ಪರಂ ವಿಜಯತೇ ಶ್ರೀ ಕೃಷ್ಣ ಸಂಕೀರ್ತನಂ

“ಹೃದಯದಲ್ಲಿ ಸಂಗ್ರಹವಾದ ಎಲ್ಲ ಮಾಲಿನ್ಯವನ್ನೂ  ತೊಳೆಯುವ ಮತ್ತು ಲೌಕಿಕ ಬದ್ಧ ಜೀವನದ ಬೆಂಕಿಯನ್ನು ನಂದಿಸುವ ಶ್ರೀ ಕೃಷ್ಣ ಸಂಕೀರ್ತನಕ್ಕೆ ಜಯವಾಗಲಿ. ಈ ಸಂಕೀರ್ತನ‌ ಆಂದೋಲನವು  ಇಡೀ ಮಾನವಕುಲಕ್ಕೆ ಪ್ರಧಾನ ಅನುಗ್ರಹವಾಗಿದೆ. ಏಕೆಂದರೆ  ಇದು  ಚಂದ್ರನ ಬೆಳದಿಂಗಳನ್ನು ಹರಡುತ್ತದೆ.  ಆಧ್ಯಾತ್ಮಿಕ ಜ್ಞಾನದ ಜೀವಾಳವಾಗಿದೆ.  

ಕೃಷ್ಣನ ಪವಿತ್ರ ನಾಮದ ಜಪವು  ಅಲೌಕಿಕ ಆನಂದದ ಸಾಗರವನ್ನು ವರ್ಧಿಸುತ್ತದೆ  ಮತ್ತು ನಾವು ಆಸ್ವಾದಿಸಲು ಸದಾ ಕಾತರರಾಗಿರುವ ಅಮೃತವನ್ನು ಸವಿಯಲು ನಮ್ಮನ್ನು ಸಮರ್ಥರನ್ನಾಗಿ ಮಾಡುತ್ತದೆ.”   (ಶ್ರೀ ಶಿಕ್ಷಾಷ್ಟಕ 1)

ಈ ಶ್ಲೋಕದ ಕುರಿತು ಅನೇಕ ಗ್ರಂಥಗಳನ್ನು ರಚಿಸಲಾಗಿದ್ದರೂ  ಹರೇ ಕೃಷ್ಣ ಮಂತ್ರದ ಜಪದ ಏಳು ಅದ್ಭುತ ಪ್ರಭಾವಗಳನ್ನು ಹೀಗೆ ಸರಳವಾಗಿ ಹೇಳಬಹುದಾಗಿದೆ :

  1. ಕೃಷ್ಣನ ಪವಿತ್ರ ನಾಮದ ಜಪವು ನಮ್ಮ ಹೃದಯಗಳಲ್ಲಿ ತುಂಬಿರುವ ಅಸೂಯೆಯನ್ನು ತೊಲಗಿಸಿ ಸ್ವಚ್ಛ ಮಾಡುವ ಪರಿಶುದ್ಧ, ಪ್ರಭಾವಶಾಲಿ ಶಕ್ತಿ.
  2. ಕೃಷ್ಣನ ನಾಮವು  ಹೃದಯವನ್ನು ಶುದ್ಧಗೊಳಿಸುತ್ತದೆ.
  3. ಜಪವು ಕೃಷ್ಣನಿಗೆ ಸಲ್ಲಿಸುವ ಶುದ್ದಭಕ್ತಿಯನ್ನು ಜಾಗೃತಗೊಳಿಸುತ್ತದೆ.
  4. ಭಕ್ತಿಯನ್ನು ಸ್ವೀಕರಿಸುವುದರಿಂದ ಭಕ್ತರು ಆಧ್ಯಾತ್ಮಿಕ ಜ್ಞಾನದಿಂದ ಪ್ರಕಾಶಿಸುತ್ತಾರೆ.
  5. ಹೃದಯವು ನಮ್ಮ ಅನಗತ್ಯ ಚಟಗಳಿಂದ  ಮುಕ್ತವಾಗುತ್ತಿದಂತೆ ನಾವು ಕೃಷ್ಣನ ಶ್ರದ್ಧಾವಂತ ಭಕ್ತರಾಗುತ್ತೇವೆ.
  6. ತಮ್ಮ ದೇಹ ಮತ್ತು ಮನಗಳಿಂದ ತಮ್ಮನ್ನು ಗುರುತಿಸಿಕೊಳ್ಳುವ ಬದ್ಧಾತ್ಮರನ್ನು ಆ ಮಾಯೆಯಿಂದ ಜಪವು ಮುಕ್ತಗೊಳಿಸುತ್ತದೆ.
  7. ಅಂತಿಮವಾಗಿ ಭಕ್ತರು ಜಪದ ಪರಿಪೂರ್ಣತೆಯನ್ನು ಸಾಧಿಸಿದಾಗ  ಅವರು ಕೃಷ್ಣನನ್ನು ಕುರಿತು ಪ್ರೇಮಭಕ್ತಿಯ ಅಮೃತವನ್ನು ಪೂರ್ಣವಾಗಿ ಸವಿಯುತ್ತಾರೆ.

ಆಧ್ಯಾತ್ಮಿಕ ಶಬ್ದ ಕಂಪನ

ಹರೇ ಕೃಷ್ಣ ಮಂತ್ರವನ್ನು ಜಪಿಸಿದಾಗ ನಾವು ಶ್ರೀ ಕೃಷ್ಣ ಮತ್ತು ಅವನ ಸಹವರ್ತಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಅರ್ಥ.‌ ಅದು ಆಧ್ಯಾತ್ಮಿಕ ಶಬ್ದದ ಸಹಜ ಗುಣ. ಕೇವಲ ಕೇಳುವ ಶಬ್ದಕ್ಕಿಂತ ಅದು ಭಿನ್ನ.  ಅದು ಶಬ್ದ ಬ್ರಹ್ಮ, ಆಧ್ಯಾತ್ಮಿಕ ಶಬ್ದ, ಬಾಯಿಂದ ಕಿವಿಗೆ ತಲುಪಿಸುವುದಷ್ಟಕ್ಕೇ ಅದು ಸೀಮಿತವಾಗಿಲ್ಲ. ಶಬ್ದ ಬ್ರಹ್ಮದಲ್ಲಿ ಆಧ್ಯಾತ್ಮಿಕ ಶಕ್ತಿಯು ಸ್ವತಃ  ವ್ಯಕ್ತಗೊಳ್ಳುತ್ತದೆ. ಅದು ಆಧ್ಯಾತ್ಮಿಕವಾಗಿರುವುದರಿಂದ ನಮ್ಮ ಲೋಕದಲ್ಲಿ ಇರುವಂತೆ ಅದಕ್ಕೆ  ಯಾವುದೇ ನಿರ್ಬಂಧಗಳಿಲ್ಲ.‌

ಸಾಮಾನ್ಯವಾಗಿ ಶಬ್ದವನ್ನು ಕುರಿತು ಮಾತನಾಡುವಾಗ, ಅದು ಕಿವಿಯಿಂದ  ಮಾತ್ರ ಕೇಳುವುದು ಎಂದು ಭಾವಿಸುತ್ತೇವೆ. ಆಧ್ಯಾತ್ಮಿಕ ಶಬ್ದದ ವಿಷಯದಲ್ಲಿಯೂ ಕೂಡ ಅದೇ ಲಕ್ಷಣ ಎನ್ನುವುದು ನಿಜ. ಆದರೆ ಅದು ಅಷ್ಟಕ್ಕೇ ಸೀಮಿತವಾಗಿಲ್ಲ. ಲೌಕಿಕ ಶಬ್ದವು ಮಾಹಿತಿ ಪ್ರಸರಣಕ್ಕೆ ಸಂಬಂಧಿಸಿದ್ದು ಎಂದು ಸಾಮಾನ್ಯವಾಗಿ ಕಲ್ಪಿಸಿಕೊಳ್ಳುತ್ತೇವೆ.

ಆದರೆ ಹರೇ ಕೃಷ್ಣ ಮಂತ್ರವು ಅಲೌಕಿಕ ಶಬ್ದ ಕಂಪನ.  ಬೇರೆ ಇನ್ಯಾವುದೋ ಪದಗಳನ್ನು ಹೇಳಿದಾಗ ಅವು ಲೌಕಿಕ ಶಬ್ದಗಳಾಗುತ್ತವೆ. ಆಧ್ಯಾತ್ಮಿಕ ಶಬ್ದದೊಂದಿಗಿನ ವ್ಯತ್ಯಾಸವೆಂದರೆ ಅದು ಸಂದೇಶ ಪ್ರಸಾರಕ್ಕಿಂತ ಹೆಚ್ಚಿನದನ್ನು ಮಾಡುತ್ತದೆ . ಅದು ಆಧ್ಯಾತ್ಮಿಕ ಶಕ್ತಿಯಿಂದ ಸಬಲಗೊಂಡಿರುತ್ತದೆ. ಅಂದರೆ ಅದು ಆಧ್ಯಾತ್ಮಿಕ ಲೋಕ ಅಥವಾ ಶಕ್ತಿಯನ್ನು ಪ್ರತಿನಿಧಿಸುತ್ತದೆ. ‌

ಚೈತನ್ಯ ಮಹಾಪ್ರಭು ಹೇಳುತ್ತಾರೆ, ನಾಮ್‌ನಾಂ  ಅಕಾರಿ ಬಹುಧಾ ನಿಜ ಸರ್ವ ಶಕ್ತಿಃ  : ಕೃಷ್ಣನ ಪವಿತ್ರ ನಾಮದಲ್ಲಿ ಎಲ್ಲ ಆಧ್ಯಾತ್ಮಿಕ ಶಕ್ತಿ ಇದೆ.  “ಹೇಗಿದ್ದೀರಾ?” ಎಂದು ಕೇಳಿದರೆ, ಆ ವಾಕ್ಯದಲ್ಲಿ ಎಷ್ಟು ಶಕ್ತಿ ಇದೆ? ಆದರೆ ನೀವು “ಹರೇ ಕೃಷ್ಣ”  ಎಂದು ಹೇಳಿದಾಗ ಆಧ್ಯಾತ್ಮಿಕ ಲೋಕದಲ್ಲಿ ಅಸ್ತಿತ್ವದಲ್ಲಿರುವ ಎಲ್ಲವೂ ಅದರಲ್ಲಿ ಉಪಸ್ಥಿತವಾಗಿರುತ್ತದೆ, ಆ ಶಬ್ದ ಕಂಪನದಲ್ಲಿ ಅಡಕವಾಗಿರುತ್ತದೆ.

ಶ್ರೀಲ ಪ್ರಭುಪಾದರ ಭಾವಾರ್ಥಗಳ‌ಲ್ಲಿ ಕೂಡ ಆಧ್ಯಾತ್ಮಿಕ ಲೋಕ ಉಲ್ಲೇಖವಿದೆ. ಶ್ರೀಲ ಪ್ರಭುಪಾದರೂ ಕೂಡ ನಾವು ಬಳಸುವ ಪದಗಳನ್ನೇ ಬಳಸುತ್ತಾರೆ. ಅವರೂ ಕೂಡ “ಹೇಗಿದ್ದೀರಾ?” ಎಂದು ಕೇಳುತ್ತಾರೆ. ಆದರೆ ಅವರು ಆಧ್ಯಾತ್ಮಿಕ ವೇದಿಕೆಯಿಂದ ಮಾತನಾಡುತ್ತಿರುವುದರಿಂದ ಅವರ ಮಾತುಗಳು ಆಧ್ಯಾತ್ಮಿಕ ಶಕ್ತಿಯಿಂದ ಶುದ್ಧವಾಗಿದೆ.

ಶಬ್ದದೊಂದಿಗೆ ಸಂಪರ್ಕ‌

ಶಬ್ದವು ನಮ್ಮನ್ನು ಮುಕ್ತಗೊಳಿಸುತ್ತದೆ ಎಂದು ವೇದಾಂತ ಸೂತ್ರದಲ್ಲಿ ಹೇಳಲಾಗಿದೆ.  ಹರೇ ಕೃಷ್ಣ ಎಂದು ಹೇಳಿದಾಗ, ದೇವೋತ್ತಮ ಪರಮ ಪುರುಷನ ಎಲ್ಲ ಶಕ್ತಿಯೂ ಅದರಲ್ಲಿದೆ ಎಂದು ಅರ್ಥ.‌ ಇದು ಹೇಗೆಂದರೆ, ಭಗವಂತನ ಉಪಸ್ಥಿತಿಯಲ್ಲಿ ಇದ್ದಂತೆ, ಎಲ್ಲ ವೇದಗಳನ್ನೂ ಓದಿದಂತೆ, ಆಧ್ಯಾತ್ಮಿಕ ಲೋಕವನ್ನು ನೋಡಿದಂತೆ, ಕೃಷ್ಣನ ಲೀಲೆಗಳನ್ನು ಕೇಳಿದಂತೆ, ತತ್ತ್ವವನ್ನು ಅರ್ಥಮಾಡಿಕೊಂಡಂತೆ.  ಹೇಗೆ? ಶಬ್ದದೊಂದಿಗೆ ಹೇಗೆ ಸಂಪರ್ಕಿಸಬೇಕೆಂದು ನಿಮಗೆ ತಿಳಿದಿದ್ದರೆ ಅದು ಸಾಧ್ಯ.

ಶಬ್ದದೊಂದಿಗೆ  ಸಂಪರ್ಕಿಸುವುದೇ ದೊಡ್ಡ ಸವಾಲು. ಏಕೆಂದರೆ ಯಾವುದೇ ರೀತಿಯ ಬಾಂಧವ್ಯದಲ್ಲಿ ಪ್ರಸರಣದ ಜೊತೆ  ಸ್ವೀಕಾರವಿರಬೇಕು. ವ್ಯಕ್ತಿಯು ಸ್ವೀಕರಿಸದಿದ್ದರೆ ಬಾಂಧವ್ಯವು ನಿರ್ವಹಣೆಯಾಗುತ್ತಿಲ್ಲ ಎಂದು ಅರ್ಥ.‌ ನಮ್ಮ ಆಧುನಿಕ ಮಾಧ್ಯಮ ಸಂಪರ್ಕಗಳು  ಒಂದು ಕಡೆಯಿಂದ ಮಾಹಿತಿ ನೀಡುವ ಮತ್ತು ಮತ್ತೊಂದು ಕಡೆ ಅದನ್ನು ಸ್ವೀಕರಿಸುವುದರ ಮೇಲೆ ಆಧಾರಿತವಾಗಿವೆ.

ಸ್ವೀಕರಿಸುವವರು ದೋಷಪೂರಿತವಾಗಿದ್ದರೆ ಎಲ್ಲವೂ ವಿಫಲವಾಗುತ್ತದೆ. ಯಾರೋ ಒಬ್ಬರು ನಿಮ್ಮ ಕಂಪ್ಯೂಟರ್‌ಗೆ ಕೀರ್ತನೆಯನ್ನು‌ ಕಳುಹಿಸಿದರೆಂದುಕೊಳ್ಳಿ. ಅದನ್ನು ಸ್ವೀಕರಿಸಲು ಸೂಕ್ತವಾದ ಕಾರ್ಯಕ್ರಮ ನಿಮ್ಮ ಕಂಪ್ಯೂಟರ್‌ನಲ್ಲಿ ಇಲ್ಲದಿದ್ದರೆ ಅದು ನಿಮಗೆ ಅಂಕುಡೊಂಕಾಗಿ ಕಾಣುತ್ತದೆ. ಅದೇ ರೀತಿ ನಾವು ಧ್ವನಿಗೊಡದಿದ್ದರೆ ಆಧ್ಯಾತ್ಮಿಕ ಶಬ್ದದ  ಪರಿಣಾಮಕ್ಕೆ  ತಡೆಯುಂಟಾಗುತ್ತದೆ.

ಕೃಷ್ಣಪ್ರಜ್ಞೆಯ ಸವಾಲೆಂದರೆ ಆಧ್ಯಾತ್ಮಿಕ ಶಬ್ದದ ಸೂಕ್ತ ಸ್ವೀಕಾರವಾಗಿದೆ. ನಮಗೆ ಕಿವಿಗಳಿವೆ ಮತ್ತು ಅವು ಸಾಮಾನ್ಯ ಸಾಧನಗಳು. ಅವುಗಳಷ್ಟೇ ಸಾಲದು. ಏಕೆಂದರೆ ಶಬ್ದಬ್ರಹ್ಮವು ಕೇವಲ ಶಬ್ದವಲ್ಲ. ಶಬ್ದಬ್ರಹ್ಮವು ಪ್ರಜ್ಞೆಯ ಮಟ್ಟದಲ್ಲಿ ಕಾರ್ಯ‌ ನಿರ್ವಹಿಸುತ್ತದೆ. ನಾವು ಆ ಶಬ್ದವನ್ನು ಬಳಸಿದರೂ ಅದು ಕೇವಲ ಶಬ್ದ ಕಂಪನವಲ್ಲ.

ಶಬ್ದ ಕಂಪನದೊಂದಿಗೆ ಸಂಪರ್ಕಹೊಂದಲು ನಿಮಗೆ ಸೂಕ್ತವಾದ ಪ್ರಜ್ಞೆ ಇರಬೇಕು. ಯಾವುದೇ ರೀತಿಯ ಅಡಚಣೆಯಾಗದಂತೆ ಪ್ರಜ್ಞೆಯ ಶುದ್ಧೀಕರಣದ ಅಗತ್ಯವಿದೆ. ಯಾವುದೇ ಅಡೆತಡೆ ಅಥವಾ ಅಪರಾಧವಿಲ್ಲದಂತೆ ನಾವು ಹರೇ ಕೃಷ್ಣ ಮಂತ್ರವನ್ನು ಕೇಳುವುದು ಸಾಧ್ಯವಾದರೆ, ಶ್ರೀಲ ಪ್ರಭುಪಾದರು ಹೇಳುವಂತೆ, ನಾವು ಭಗವಂತನೊಂದಿಗೆ ನೇರ ಸಂಪರ್ಕಕಕ್ಕೆ‌ ಬರುತ್ತೇವೆ.

ಕೆಲವು ಬಾರಿ “ದೇವರನ್ನು ತೋರಿಸಿ” ಎಂದು ಜನರು ಕೇಳುತ್ತಾರೆ. ದೇವರನ್ನು ನೋಡುವುದು ಹೀಗೆ : ಹರೇ ಕೃಷ್ಣ ಮಂತ್ರವನ್ನು ಕೇಳುವ ಮೂಲಕ. ಆದರೆ ನಿಮ್ಮ ಕಿವಿಯಲ್ಲ, ನಿಮ್ಮ ಪ್ರಜ್ಞೆಯು ಗ್ರಹಿಸುವುದರಿಂದ ನೀವು ಅದನ್ನು ನಿಶ್ಚಿತ ರೀತಿಯಲ್ಲಿಯೇ ಕೇಳಬೇಕು.

ನನ್ನ ನಾಲಗೆಯು ಮಾತನಾಡುತ್ತಿದೆ ಮತ್ತು ಶಬ್ದವು ಮೈಕ್ರೊಫೋನ್‌ ಮೂಲಕ ಹೋಗುತ್ತಿದೆ. ಮೈಕ್ರೊಫೋನ್‌ ಏನನ್ನೂ ಕೇಳಿಸಿಕೊಳ್ಳುತ್ತಿಲ್ಲ, ಏಕೆಂದರೆ ಅದಕ್ಕೆ ಪ್ರಜ್ಞೆ ಇಲ್ಲ. ಅದು ಶಬ್ದವನ್ನು ಪ್ರಸರಣ ಮಾಡುತ್ತಿದೆ, ಆದರೆ ಏನನ್ನೂ ಕೇಳುತ್ತಿಲ್ಲ. ಅದೇ ರೀತಿ ನನ್ನ ಕಿವಿ ಒಂದು ಸಾಧನ, ಆದರೆ ನಾನು ಕೇಳುತ್ತಿರುವೆ. ಆತ್ಮವು ಕೇಳುತ್ತಿದೆ. ಆದರೆ ಆತ್ಮವು ಕಲುಷಿತವಾಗಿದ್ದರೆ ಅದು ಹರೇ ಕೃಷ್ಣ ಸಂದೇಶವನ್ನು ಸ್ವೀಕರಿಸಲಾರದು.

ಪ್ರಜ್ಞೆಯ ಶುದ್ಧೀಕರಣ ಅಗತ್ಯ. ಅದು ಹೇಗೆ ಸಾಧ್ಯ? ಹರೇ ಕೃಷ್ಣ ಜಪವನ್ನು ಮಾಡುವ ಮೂಲಕ. ಸಂಪೂರ್ಣವಾಗಿ‌ ಶುದ್ಧವಾಗುವವರೆಗೂ ಜಪ ಮತ್ತು ಶ್ರವಣವು ಪ್ರಜ್ಞೆಯನ್ನು ಶುದ್ಧೀಕರಿಸುತ್ತಾ ಹೋಗುತ್ತದೆ. ಆಗ ಕೃಷ್ಣ ಮತ್ತು ಅವನ ನಾಮದಲ್ಲಿ ವ್ಯತ್ಯಾಸವಿಲ್ಲ ಎನ್ನುವುದನ್ನು ಗುರುತಿಸಬಹುದು.

ಆಗ ಹರೇ ಕೃಷ್ಣ ಎಂದು ಹೇಳಿದರೆ ಇಡೀ ಆಧ್ಯಾತ್ಮಿಕ ಲೋಕವು ತೆರೆದುಕೊಳ್ಳುತ್ತದೆ, ಏಕೆಂದರೆ ನಿಜ ಸರ್ವ‌ ಶಕ್ತಿಃ , ದೇವೋತ್ತಮ ಪರಮ ಪುರುಷನ ಎಲ್ಲ ಶಕ್ತಿಯೂ ಶಬ್ದ ಕಂಪನದಲ್ಲಿ ಪ್ರಸ್ತುತವಾಗಿರುತ್ತದೆ. ಯಾವುದೂ ತಡೆಹಿಡಿಯುವುದಿಲ್ಲ. ಇದೊಂದು ಅದ್ಭುತ ಅನುಭವ.

 ಭಗವಂತನ ಪವಿತ್ರ ನಾಮವನ್ನು ಪರಿಪೂರ್ಣವಾಗಿ‌ ಕೇಳಲು ಮತ್ತು ಜಪಿಸಲು ನಾವು ನಮ್ಮ ಪ್ರಜ್ಞೆಯನ್ನು ಶುದ್ಧೀಕರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಅನಂತರ ಏನಾಗುತ್ತದೆ? ನಾವು ಜಪವನ್ನು ಮುಂದುವರಿಸುತ್ತೇವೆ, ಏಕೆಂದರೆ ಅದಕ್ಕಿಂತ ಆನಂದವಾದುದು ಬೇರೊಂದಿಲ್ಲ.

ಶ್ರೀಲ ರೂಪ ಗೋಸ್ವಾಮಿ ಅವರು ಪರಿಪೂರ್ಣ‌ ಜಪಿಕನ ಮನೋಭಾವವನ್ನು ವರ್ಣಿಸುತ್ತಾರೆ, “ “ಕೃ ಷ್ಣ” ಎನ್ನುವ ಎರಡು ಅಕ್ಷರಗಳು ಅದೆಷ್ಟು ಅಮೃತವನ್ನು ಸೃಷ್ಟಿಸಿರುವುದೋ  ನನಗೆ ಗೊತ್ತಿಲ್ಲ. ಕೃಷ್ಣನ ಪವಿತ್ರ ನಾಮವನ್ನು ಜಪಿಸಿದಾಗ ಅದು ಬಾಯೊಳಗೆ ನರ್ತಿಸುವಂತೆ‌  ತೋರುತ್ತದೆ.

ಆಗ ನಮಗೆ ಅನೇಕ ಬಾಯಿಗಳಿರಬೇಕೆಂದು ಅಪೇಕ್ಷೆಯಾಗುತ್ತದೆ. ಆ ನಾಮವು ಕಿವಿಗಳ ರಂಧ್ರವನ್ನು ಪ್ರವೇಶಿಸಿದಾಗ, ನಾವು ಅಸಂಖ್ಯ ಕಿವಿಗಳನ್ನು ಅಪೇಕ್ಷಿಸುತ್ತೇವೆ. ಪವಿತ್ರ ನಾಮವು ಹೃದಯದ ಅಂಗಳದಲ್ಲಿ ನರ್ತಿಸಿದಾಗ ಅದು ಮನಸ್ಸಿನ ಚಟುವಟಿಕೆಗಳನ್ನು ಜಯಿಸುತ್ತದೆ ಮತ್ತು ಎಲ್ಲ ಇಂದ್ರಿಯಗಳೂ ಸ್ತಬ್ಧವಾಗುತ್ತವೆ.” (ವಿದಗ್ಧ ಮಾಧವ 1.15)

ಇದು ಅಲೌಕಿಕವಾದಿಯ ಅನುಭವ. ನಮಗೆ ನಮ್ಮ ಬದ್ಧ ಸ್ಥಿತಿಯಲ್ಲಿ ಒಂದಷ್ಟು ಸವಿರುಚಿಯು ಲಭಿಸುತ್ತಿದೆ. ಅಲೌಕಿಕವಾದಿಯ ಅನುಭವವು ಸಾವಿರ ಪಾಲು ಹೆಚ್ಚು. ಆ ಅನುಭವದ ಲಕ್ಷಣ ಹೇಗಿರುತ್ತದೆಯೆಂದರೆ, ನಿಮಗೆ ಇನ್ನೂ ಬೇಕೆನ್ನಿಸುತ್ತಲೇ ಇರುತ್ತದೆ.

ನಾವು ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಹರೇ ಕೃಷ್ಣ ಮಂತ್ರದ ದಿವ್ಯ ಲಕ್ಷಣವನ್ನು ಮೆಚ್ಚುತ್ತೇವೆ. ಅದಕ್ಕೆ ನಾವು ಹಣ ನೀಡಬೇಕಾಗಿಲ್ಲ, ಅಥವಾ ಅದನ್ನು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು, ಅಥವಾ ಅದು ರಹಸ್ಯವಲ್ಲ ಎನ್ನುವುದು ವಾಸ್ತವವಾದರೂ ಇವು ಯಾವುದೂ ಅದರ ಪಾವಿತ್ರ್ಯವನ್ನು ಕುಂದಿಸುವುದಿಲ್ಲ. ನಿಜವಾಗಿಯೂ ಹರೇ ಕೃಷ್ಣ ಎಂತಹ ಅದ್ಭುತ!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi